370ನೇ ವಿಧಿ ತೆಗೆದು ಹಾಕಲಾಗದ ಪ್ರತ್ಯೇಕ ಸಂವಿಧಾನವಲ್ಲ
ಜಮ್ಮು ಕಾಶ್ಮೀರ ಸಮಸ್ಯೆ, ಅಂತಾರಾಷ್ಟ್ರೀಯ ಮಟ್ಟದಲ್ಲಿದ್ದು, ರಾಷ್ಟ್ರೀಯ ಗಡಿ ದಾಟಿದ ಸೂಕ್ಷ್ಮ ಸಮಸ್ಯೆಯಾಗಿದೆ. ಅದರ...
ಜಮ್ಮು ಕಾಶ್ಮೀರ ಸಮಸ್ಯೆ, ಅಂತಾರಾಷ್ಟ್ರೀಯ ಮಟ್ಟದಲ್ಲಿದ್ದು, ರಾಷ್ಟ್ರೀಯ ಗಡಿ ದಾಟಿದ ಸೂಕ್ಷ್ಮ ಸಮಸ್ಯೆಯಾಗಿದೆ. ಅದರ ಬಗ್ಗೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಹತ್ತಾರು ಬಾರಿ ಚರ್ಚೆಗೊಳಪಡಲೇಬೇಕು. ಸಮಯ, ಜನರ ಭಾವನೆ, ರಾಷ್ಟ್ರೀಯ ಹಿತಾಸಕ್ತಿ, ಪರಮಾಧಿಕಾರದ ಸ್ಥಿರತೆ, ಆಂತರಿಕ ಹಿಡಿತ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಏಕಾಏಕಿ ನಿರ್ಧಾರ ದೇಶದ ಆಡಳಿತ ಸದೃಢತೆಯನ್ನು ಶಿಥಿಲಗೊಳಿಸುವ ಅಪಾಯವಿರುತ್ತದೆ.
ಜಗತ್ತಿನ ಬಹು ನಿರೀಕ್ಷಿತ ಭಾರತದ 16ನೇ ಲೋಕಸಭಾ ಚುನಾವಣಾ ಫಲಿತಾಂಶ ಮೇ 16 ರಂದು ಅನಾವರಣಗೊಂಡಿದೆ. ಎಲ್ಲಾ ಸಮೀಕ್ಷೆಗಳನ್ನು ಮೀರಿ ಮೋದಿ ಭರತ ಖಂಡದ ನಾಯಕತ್ವದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ತಮ್ಮ ಪಟ್ಟಾಭಿಷೇಕಕ್ಕೆ ಸಾರ್ಕ್ ರಾಷ್ಟ್ರಗಳನ್ನು ಅದರಲ್ಲಿಯೂ 3 ಮುಸಲ್ಮಾನ ರಾಷ್ಟ್ರಗಳನ್ನು ಆಹ್ವಾನಿಸಿ, ಮುಸ್ಲಿಂರ ಆತಂಕವನ್ನು ದೂರ ಸರಿಸಲಾಗಿದೆ. ದೇಶದ ಜನತೆ ಬಹುದೊಡ್ಡ ಬದಲಾವಣೆಯ ಕನಸುಗಳೊಟ್ಟಿಗೆ, ಮೋದಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಕೊಟ್ಟ ಮಾತಿನಂತೆ ಪುಟ್ಟ ಸಂಪುಟ, ವಿಸ್ತೃತ ಆಡಳಿತ ಎಂಬ ಧ್ಯೇಯವನ್ನು ವಾಸ್ತವೀಕರಿಸಿದ್ದಾರೆ. ಕಪ್ಪು ಹಣ ವಾಪಸಾತಿಗೆ ಆಯೋಗ ರಚನೆಯಾಗಿದೆ. ಸಂಬಂಧಿಕರನ್ನು ಆಯಕಟ್ಟಿನ ಮತ್ತು ಆಪ್ತ ಹುದ್ದೆಗಳಿಗೆ ತರದಂತೆ ಸುತ್ತೋಲೆಯೂ ಜಾರಿಯಾಗಿದೆ.
ಎಲ್ಲಾ ಸಚಿವಾಲಯಗಳು ಪ್ರಧಾನಿ ಸಚಿವಾಲಯದ ಅನುಮೋದನೆಯೊಟ್ಟಿಗೆ ಕಾರ್ಯ ನಿರ್ವಹಿಸಬೇಕೆಂದು ಏಕೀಕೃತ ಆಡಳಿತದ ಸುಳಿವು ದೊರೆತಿದೆ. ಗಂಗಾ ಕಾವೇರಿಯಂತಹ ಮಹತ್ವದ ಯೋಜನೆಗೆ ಚಾಲನೆ ದೊರೆಯುವ ಭರವಸೆ ಇದೆ. ಮಹಿಳೆಯರಿಗೆ ಪ್ರಾತಿನಿಧ್ಯ ದೊರೆತಿದ್ದು ಒಳ್ಳೆಯ ನಡಾವಳಿ. ಮನವಿ ಇಲ್ಲದೆ ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಭಾರತೀಯ ಮೀನುಗಾರರು ಬಿಡುಗಡೆ ಹೊಂದಿದ್ದು, ಅಮೆರಿಕದ ಅಧಿಕೃತ ಆಹ್ವಾನ, ಅನಗತ್ಯ ಮಂಡಳಿಗಳ ರದ್ಧತಿ, ಅನಾವಶ್ಯಕ ಇಲಾಖೆಗಳ ಸಮೀಕರಣ, ರಾಜಕೀಯ ಪ್ರೇರಿತ ಮುಸ್ಲಿಂರ ಒಳಮೀಸಲಾತಿಯ ರದ್ಧತಿಯ ಸೂಚನೆ, ಹೀಗೆ ಹಲವು ವಿದ್ಯಮಾನಗಳು ಕೆಲವೇ ದಿವಸಗಳಲ್ಲಿ ಘಟಿಸಿರುವುದು ಒಳ್ಳೆ ಬೆಳವಣಿಗೆಯೇ ಸರಿ. ಇಷ್ಟೆಲ್ಲದರ ನಡುವೆ ನಮ್ಮನ್ನು ತಾರ್ಕಿಕ ನೆಲೆಗಟ್ಟಿನಲ್ಲಿ ನಿಲ್ಲಿಸಿರುವ ಅಂಶ, 370ನೇ ವಿಧಿಯ ಪರಿಷ್ಕರಣೆ ಅಥವಾ ರದ್ಧತಿಯ ಆಯಾಮ.
ಹೌದು ದೇಶದ ಹಲವು ಮೂಲಭೂತ ಸಮಸ್ಯೆಗಳ ಬುಡ ಕೀಳುವ ಶಕ್ತಿ ಮೋದಿಯವರಲ್ಲಿದೆ ಎಂಬ ಕಾರಣಕ್ಕಾಗಿಯೇ, ಪ್ರಜೆಗಳು ಊಹಿಸಲಾಗದ ಬಹುಮತ ನೀಡಿರುವುದು. ಮೋದಿಯ ನಾಗಾಲೋಟದ ಹೆಜ್ಜೆಗಳನ್ನು ಯಾರು ಪ್ರಶ್ನೆ ಮಾಡಲು ಸಿದ್ಧರಿಲ್ಲ. ಆದರೆ ಜಿತೇಂದ್ರಸಿಂಗ್ ಅಭಿಮತದಂತೆ 370ರ ಕಾರ್ಯಾಚರಣೆ ಸುಲಭಸಿಂಧುವಲ್ಲ. ಜಮ್ಮು ಕಾಶ್ಮೀರ ಸಮಸ್ಯೆ, ಅಂತಾರಾಷ್ಟ್ರೀಯ ಮಟ್ಟದಲ್ಲಿದ್ದು, ರಾಷ್ಟ್ರೀಯ ಗಡಿ ದಾಟಿದ ಸೂಕ್ಷ್ಮ ಸಮಸ್ಯೆಯಾಗಿದೆ. ಅದರ ಬಗ್ಗೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಹತ್ತಾರು ಬಾರಿ ಚರ್ಚೆಗೊಳಪಡಲೇಬೇಕು. ಸಮಯ, ಜನರ ಭಾವನೆ, ರಾಷ್ಟ್ರೀಯ ಹಿತಾಸಕ್ತಿ, ಪರಮಾಧಿಕಾರದ ಸ್ಥಿರತೆ, ಆಂತರಿಕ ಹಿಡಿತ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಏಕಾಏಕಿ ನಿರ್ಧಾರ ದೇಶದ ಆಡಳಿತ ಸದೃಢತೆಯನ್ನು ಶಿಥಿಲಗೊಳಿಸುವ ಅಪಾಯವಿರುತ್ತದೆ.
ಅಮೆರಿಕದಂತಹ ನಾಟಕ ನಾಯಕ, ರಾಷ್ಟ್ರದ ಆಂತರಿಕ ಹಸ್ತಕ್ಷೇಪ ನಿರೀಕ್ಷಣೀಯವಾದುದು. ಈ ಹಿನ್ನೆಲೆಯಲ್ಲಿ ಮೋದಿಯವರು ವಿಶೇಷ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದ ಮಾತ್ರಕ್ಕೆ ಒಮರ್ ಅಬ್ದುಲ್ಲಾ ಹೇಳಿದಂತೆ 370ರ ರದ್ಧತಿ ಅಥವಾ ಪರಿಷ್ಕರಣೆ ಸಾಧ್ಯವೇ ಇಲ್ಲ ಎಂಬುದು ಅಸಿಂಧು. ಸಾಕಷ್ಟು ಸಂದರ್ಭಗಳಲ್ಲಿ ಫಾರೂಖ್ ಮತ್ತು ಒಮರ್ ಅಬ್ದುಲ್ಲಾರಂತಹ ಕಾಶ್ಮೀರಿ ನಾಯಕರು ನೀಡಿರುವ ಹೇಳಿಕೆಗಳು, ಭಾರತೀಯ ಸಂವಿಧಾನ ಹಾಗೂ ನ್ಯಾಯಾಂಗದ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ. ಉದಾಹರಣೆಗೆ ಅಂತಾರಾಷ್ಟ್ರೀಯ ಭಯೋತ್ಪಾದಕ ಕಸಬ್ನ ನೇಣಿಗೇರಿಸುವ ಸಂಬಂಧ ಕಾಶ್ಮೀರದಲ್ಲಿ ರಕ್ತಪಾತವಾಗುತ್ತದೆ ಎಂಬ ಹೇಳಿಕೆ ಹಾಗೂ ಮೋದಿಯವರು ಪ್ರಧಾನಿಯಾದರೆ ಅದು ಜಮ್ಮು ಕಾಶ್ಮೀರವನ್ನು ಹೊರತುಪಡಿಸಿದ ದೇಶಕ್ಕೆ ಎಂಬ ಹೇಳಿಕೆಗಳು ರಾಜದ್ರೋಹದ ಪ್ರಮಾದಗಳೇ ಆಗಿವೆ. ಈ ಸಂಬಂಧ ಅವರನ್ನು ಜೈಲಿಗೆ ನೂಕುವ ಅವಕಾಶವಿತ್ತು. ಆದರೆ ಹಿಂದಿನ ಸರ್ಕಾರ ಅವರ ದುರ್ನಡೆಗಳನ್ನು ಸಹಿಸುತ್ತಾ ಬಂದಿದ್ದು ವಿಷಾದನೀಯ ಸಂಗತಿ. ದೇಶದ ಪರಮಾಧಿಕಾರಕ್ಕೆ ಅಪಾಯ ತರುವವರು ಯಾವುದೇ ಜಾತಿ, ಧರ್ಮದವರಾಗಿದ್ದರೂ ಅವರನ್ನು ಮನ್ನಿಸುವ ಪ್ರಶ್ನೆಯೇ ಇಲ್ಲ.
370ನೇ ವಿಧಿ ಪ್ರತ್ಯೇಕ ಸಂವಿಧಾನವೇ?
ಖಂಡಿತ ಇಲ್ಲ. ಭಾರತಕ್ಕಿರುವುದು ಒಂದೇ ಸಂವಿಧಾನ. 370 ಎಂಬುದು ಸಂವಿಧಾನದ ಒಂದು ವಿಧಿಯಷ್ಟೆ. ಮೂಲ ಸಂವಿಧಾನದ 395 ವಿಧಿಗಳ ಮತ್ತು ಪ್ರಸ್ತುತ ಉಪವಿಧಿಗಳ ಸೇರ್ಪಡೆಯಿಂದಾಗಿ 450 ಕ್ಕೇರಿರುವ ವಿಧಿಗಳಲ್ಲಿ 370 ಕೂಡ ಒಂದು ವಿಧಿ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸವಲತ್ತು ಅಥವಾ ವಿನಾಯಿತಿಗಳನ್ನು ನೀಡಿದೆ. ಸಂವಿಧಾನ 371, 371ಎ, 371ಬಿ, 371ಸಿ, 371ಡಿ, 371ಇ, 371ಎಫ್, 371ಜಿ, 371ಕೆ ಹೀಗೆ ಇನ್ನು ಹಲವು ರಾಜ್ಯಗಳಿಗೆ ವಿಶೇಷ ವಿನಾಯಿತಿಗಳನ್ನು ನೀಡಿದೆ. ಅವುಗಳಲ್ಲಿ 370 ಮಾತ್ರ ಸ್ವಲ್ಪ ವಿಭಿನ್ನ ವಿನಾಯಿತಿಗಳನ್ನು ಪಡೆದಿದೆ. ಸಂವಿಧಾನದ ಯಾವುದೇ ಭಾಗದಲ್ಲೂ 370ನ್ನು ಪ್ರತ್ಯೇಕ ಸಂವಿಧಾನ ಎಂದು ನಮೂದಿಸಿಲ್ಲ.
370ರ ವಿನಾಯಿತಿಗಳು: 1) ರಕ್ಷಣೆ, ವಿದೇಶಾಂಗ, ಆಂತರಿಕ ಭದ್ರತೆ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳ ಮೇಲೆ ಕೇಂದ್ರಕ್ಕೆ ನೇರವಾಗಿ ಕಾನೂನುಗಳನ್ನು ಜಮ್ಮು ಕಾಶ್ಮೀರದ ಮೇಲೆ ಹೇರಲಾಗುವುದಿಲ್ಲ.
2)238ನೇ ವಿಧಿಯ ಕೇಂದ್ರ ಮತ್ತು ರಾಜ್ಯಗಳ ಆಡಳಿತಾತ್ಮಕ ಸಂಬಂಧಗಳು ಜಮ್ಮು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ.
3)1ನೇ ಅನುಸೂಚಿಯ ಕಾರ್ಯಾಂಗ ಮತ್ತು ಶಾಸಕಾಂಗ ನಿಯಮಗಳು ಆ, ಇ , ಈ, ಉ ನಿಯಮಗಳು ಜಮ್ಮು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ.
4)ಬಾಹ್ಯ ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಉಳಿದ ತುರ್ತು ಪರಿಸ್ಥಿತಿಗಳನ್ನು ಹೇರಲು ಅಲ್ಲಿನ ಮಂತ್ರಿಮಂಡಲದ ಸಹಮತಿ ಬೇಕು
5)ರಾಜ್ಯ ಮತ್ತು ಸಮವರ್ತಿ ಪಟ್ಟಿಗಳಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ರಚಿಸಲು ಅಲ್ಲಿನ ಮಂತ್ರಿ ಮಂಡಲದ ಸಹಮತಿ ಅಗತ್ಯ.
6)ಅಲ್ಲಿನ ಆಸ್ತಿಯನ್ನು ಬೇರೆಯವರು ಖರೀದಿಸುವಂತಿಲ್ಲ.
7) ರಾಷ್ಟ್ರದ ಕೆಲವು ಸಾಮಾನ್ಯ ಕಾನೂನುಗಳು ಅವರಿಗೆ ಅನ್ವಯಿಸುವುದಿಲ್ಲ.
8) 365ನೇ ವಿಧಿಯು ಕೇಂದ್ರದ ಶಕ್ತಿಯುತ ಅಧಿಕಾರ, ನಿರ್ದೇಶನ ಮತ್ತು ಅದನ್ನು ಉಲ್ಲಂಘಿಸಿದರೆ ರಾಜ್ಯಗಳ ಮೇಲೆ ತುರ್ತು ಪರಿಸ್ಥಿತಿ ಹೇರುವ ಅಧಿಕಾರ ಜಮ್ಮು ಕಾಶ್ಮೀರಕ್ಕೆ ಹೊರತುಪಡಿಸಿದ್ದಾಗಿದೆ.
9) 370ಇ)(1)ರ ಅನ್ವಯ ಆ ರಾಜ್ಯಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳನ್ನು ಅಲ್ಲಿನ ಮಂತ್ರಿಮಂಡಲದ ಸಹಮತಿಯಿಲ್ಲದೆ ಹೊರಡಿಸುವಂತಿಲ್ಲ.
370ನೇ ವಿಧಿಗೆ ತಿದ್ದುಪಡಿ ಮಾಡಲು ಖಂಡಿತ ಸಾಧ್ಯ ಇದೆ
1) 368(1) ರ ತಿದ್ದುಪಡಿಯ ನಿಯಮದನುಸಾರ ಸಂವಿಧಾನದಲ್ಲಿ ಏನೇ ಇದ್ದಾಗಿಯೂ ಯಾವುದೇ ಉಪಬಂಧವನ್ನು ವಿಸ್ತರಿಸುವ ಹಾಗೂ ನಿರಸನಗೊಳಿಸುವ ಅಧಿಕಾರ ಸಂಸತ್ತಿಗಿದೆ.
2)ಸಂವಿಧಾನದ 1ನೇ ಅನುಸೂಚಿಯ ಅನ್ವಯ ಜಮ್ಮು ಕಾಶ್ಮೀರ ಭಾರತದ 15ನೇ ರಾಜ್ಯವಾಗಿದ್ದು ಸಾಂವಿಧಾನಿಕ ನಿಯಮಗಳಡಿಯಲ್ಲಿಯೇ ಬರುತ್ತದೆ.
3)1976ರ 42 ಸಂವಿಧಾನ ತಿದ್ದುಪಡಿಯ ನಂತರ 368(4)ನೇ ವಿಧಿಯನ್ವಯ ಮಾಡಿದ ಯಾವುದೇ ತಿದ್ದುಪಡಿಯ ವಿರುದ್ಧ (ಮೂಲಭೂತ ಹಕ್ಕುಗಳನ್ನು ಒಳಗೊಂಡಂತೆ) ನ್ಯಾಯಾಲಯದ ಮೊರೆ ಹೋಗುವಂತಿಲ್ಲ.
4)368(5) ಇದರ ಅನ್ವಯ ಸಂಸತ್ತು ತಿದ್ದುಪಡಿ ಮಾಡುವ ಅಧಿಕಾರ ಯಾವುದೇ ಪರಿಮಿತಿಗೆ ಒಳಪಡುವುದಿಲ್ಲ ಎಂಬ ನಿಯಮವಿದೆ.
5)ಸಂವಿಧಾನದ 1ನೇ ವಿಧಿಯನ್ವಯ ಭಾರತ ಒಂದು ಒಕ್ಕೂಟಗಳ ರಾಜ್ಯ, ಸಂಸತ್ತು ಯಾವುದೇ ರಾಜ್ಯದ ಪ್ರದೇಶಗಳನ್ನು ಹೆಚ್ಚಿಸಬಹುದು. ಅಥವಾ ಕಡಿತಗೊಳಿಸುವ ಅಧಿಕಾರ ಅದಕ್ಕಿದೆ. ಅದರಂತೆ 370(ಅ) ಪ್ರಕಾರ 1ನೇ ವಿಧಿಯು ಜಮ್ಮು ಕಾಶ್ಮೀರಕ್ಕೆ ಅನ್ವಯಿಸುತ್ತದೆ ಎಂಬ ನಿಯಮ ತಿಳಿಸುತ್ತದೆ.
6)370(ಇ)ನೇ ಅನ್ವಯ ಸಂಸತ್ತು ಈ ರಾಜ್ಯಕ್ಕೆ ಸಂಬಂಧಿಸಿದಂತೆ ಕಾನೂನು ಮಾಡಬಹುದೆಂದು ತಿಳಿಸಿದೆ.
7)ಬಹಳ ಮುಖ್ಯವಾಗಿ 370(3)ರಂತೆ ಈ ಅನುಬಂಧದಲ್ಲಿ ಹಿಂದೆ ಹೇಳಿದ ಉಪಬಂಧಗಳಲ್ಲಿ ಏನೇ ಇದ್ದಾಗಿಯೂ, ರಾಷ್ಟ್ರಪತಿಯವರು ಸಾರ್ವಜನಿಕ ಅಧಿಸೂಚನೆಯ ಮೂಲಕ ತಾನು ನಿರ್ದಿಷ್ಟಪಡಿಸಬಹುದಾದ ದಿನಾಂಕದಿಂದ ಈ ಅನುಬಂಧವು ಜಾರಿಯಲ್ಲಿರುವುದು ನಿಂತುಹೋಗತಕ್ಕದ್ದೆಂದು ಘೋಷಿಸಬಹುದು. ಆದರೆ 370(2) ಅನ್ವಯ ಇದಕ್ಕೆ ಸಂವಿಧಾನ ರಚನಾ ಸಭೆಯ ಶಿಫಾರಸು ಅಗತ್ಯ ಎಂಬ ಉಲ್ಲೇಖವಿದೆ. 1950 ಜನವರಿ 26 ರಂದು ಸಂವಿಧಾನ ಜಾರಿಗೆ ಬಂದ ಮೇಲೆ ಸಂವಿಧಾನ ರಚನಾ ಸಭೆಯ ಅಸ್ತಿತ್ವ ಇರುವುದಿಲ್ಲ. ಆದ್ದರಿಂದ ರಾಷ್ಟ್ರಪತಿಗಳು 74(2) ವಿಧಿಯನ್ವಯ ಕೇಂದ್ರ ಮಂತ್ರಿಮಂಡಲದ ಶಿಫಾರಸಿನ ಮೇರೆಗೆ ಸಂಸತ್ತಿನ ಸಹಮತದೊಂದಿಗೆ ಮೇಲಿನ ಘೋಷಣೆಯನ್ನು ಹೊರಡಿಸಬಹುದು.
8) ಸಂವಿಧಾನ, ಕೇಂದ್ರ ಮತ್ತು ರಾಜ್ಯಗಳ ನಡುವೆ ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಹಾಗೂ ಸಮವರ್ತಿ ಪಟ್ಟಿಗಳಲ್ಲಿ ಅಧಿಕಾರ ವಿಭಜನೆ ಮಾಡಿದ್ದರೂ, ಇವುಗಳನ್ನು ಹೊರತುಪಡಿಸಿದ ಉಳಿಕೆ ಅಧಿಕಾರ ಅಥವಾ ರೆಸಿಡರಿ ಪವರನ್ನು ಕೇಂದ್ರಕ್ಕೆ ನೀಡಿರುವುದರಿಂದ ಸಂಸತ್ತು ಶ್ರೇಷ್ಟ ಅಧಿಕಾರವನ್ನು ಹೊಂದಿದ್ದು, ಅದಕ್ಕೆ ಯಾವುದೇ ವಿಧಿಯನ್ನು ತಿದ್ದುಪಡಿ ಮಾಡುವ ಅಧಿಕಾರವಿರುತ್ತದೆ.
ಒಟ್ಟಿನಲ್ಲಿ ಸಂವಿಧಾನವನ್ನು ಧಿಕ್ಕರಿಸಿ ಜಮ್ಮು ಕಾಶ್ಮೀರ ವರ್ತಿಸಲು ಸಾಧ್ಯವೇ ಇಲ್ಲ. ಕುತೂಹಲಕಾರಿ ವಿಷಯವೇನೆಂದರೆ, 370ನೇ ವಿಧಿಗೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂಬ ವಾದ ಮಂಡಿಸುವವರಿಗೆ 370ನೇ ವಿಧಿಯ ತಿದ್ದುಪಡಿ ಸಾಮಾನ್ಯ ತಿದ್ದುಪಡಿ ನಿಯಮದಡಿ ಬರುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲ. ಸಾಮಾನ್ಯ ತಿದ್ದುಪಡಿ ಎಂದರೆ ಸಂಸತ್ತಿನ ಉಭಯ ಸದನಗಳ 3/2 ಬಹುಮತವಿದ್ದರೆ ಅಂತಹ ವಿಷಯಗಳನ್ನು ತಿದ್ದುಪಡಿ ಮಾಡಬಹುದು. ಅದೇ ವಿಶೇಷ ತಿದ್ದುಪಡಿ ಎಂದರೆ ಉಭಯ ಸದನಗಳ 3/2 ರಷ್ಟು ಬಹುಮತದ ಜೊತೆಗೆ 1/2 ರಷ್ಟು ರಾಜ್ಯಗಳ ಅನುಮತಿಯೂ ಅಗತ್ಯವಾಗಿರುತ್ತದೆ. ಆದ್ದರಿಂದ 370ನೇ ವಿಧಿಯ ತಿದ್ದುಪಡಿ ಸಾಧ್ಯ ಎಂಬ ಸತ್ಯವನ್ನು ಅರ್ಥೈಸಿಕೊಳ್ಳಬೇಕಿದೆ. ಜಮ್ಮು ಕಾಶ್ಮೀರದ ಅಭಿವೃದ್ಧಿ ಹಿನ್ನೆಲೆಯಲ್ಲಿ, ಅಲ್ಲಿನ ರಕ್ತಪಾತದ ತಡೆಯುವಿಕೆಯ ದೃಷ್ಟಿಕೋನದಿಂದ ಈ ವಿಧಿಯ ಪರಿಷ್ಕರಣೆ ಅಗತ್ಯ. ಆದರೂ ಈ ಕೈಂಕರ್ಯದಲ್ಲಿ ಸಂಯಮ ಅನಿವಾರ್ಯ.
- ಸುಧಾಕರ ಹೊಸಳ್ಳಿ
ಪ್ರಾದೇಶಿಕ ನಿರ್ದೇಶಕರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು