ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪ್ರಧಾನಿ ಕಚೇರಿಯನ್ನು ಪ್ರಧಾನವಾಗಿಸಲಿದ್ದಾರಾ ಮೋದಿ?

ಪ್ರಧಾನಿ ಕಚೇರಿಯನ್ನು ಪ್ರಧಾನವಾಗಿಸಲಿದ್ದಾರಾ ನರೇಂದ್ರ ಮೋದಿ?

Rashmi Kasaragodu
Updated On : 7 Jun 2014, 9:45 am

ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಕಚೇರಿಯನ್ನು ಬಲಿಷ್ಠಗೊಳಿಸಲಿರುವ ವಿಷಯವಾಗಿ ಕಳೆದೊಂದು ವಾರದಿಂದ ಬಹಳ ಚರ್ಚೆ ನಡೆಯುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿಯೇ ಅಸ್ತಿತ್ವದಲ್ಲಿರುವ ಕೇಂದ್ರ ಸಚಿವರ ಸಮಿತಿ ಮತ್ತು ಸಚಿವರ ಉನ್ನತಾಧಿಕಾರ ಸಮಿತಿಗಳನ್ನು ವಿಸರ್ಜಿಸುವ ನಿರ್ಧಾರಕ್ಕೆ ಬರಲಾಗಿದೆ. ತಮ್ಮ 'ಶಬ್ದಕೋಶ ಸ್ನೇಹಿ' ಗುಣದಿಂದ ಗುರುತಿಸಿಕೊಳ್ಳುವ ಕಾಂಗ್ರೆಸ್ನ ವಕ್ತಾರರು, ಈ ಹೆಜ್ಜೆಯನ್ನು "ನಿರಂಕುಶ ವ್ಯವಸ್ಥೆಯ ರೋಗಲಕ್ಷಣಗಳು" ಎಂದು ಕರೆದಿದ್ದಾರೆ. "ಎಲ್ಲವನ್ನೂ ಮೋದಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ" ಎಂದು ಕಾಂಗ್ರೆಸ್ಸಿಗರು ದೂರುತ್ತಿದ್ದಾರೆ.
ಹಾಗಿದ್ದರೆ ಅವರ ಮಾತು ಸತ್ಯವೇ? ಮೋದಿ ಸರ್ವಾಧಿಕಾರದ ಕಚೇರಿಯನ್ನು ದೇಶದ ಮೇಲೆ ಹೇರುತ್ತಿದ್ದಾರೆಯೇ ಅಥವಾ ಉತ್ತರದಾಯಿತ್ವ ಮತ್ತು ಸಮತೋಲನವನ್ನು ಮರುಸ್ಥಾಪಿಸಲು ಅವರು ಪ್ರಯತ್ನಿಸುತ್ತಿದ್ದಾರೆಯೇ? ತಮ್ಮ ಹೆಸರೇ ಜನಾಭಿಪ್ರಾಯವನ್ನು ಗಳಿಸಿತು ಎನ್ನುವ ಕಾರಣಕ್ಕಾಗಿ ಎಲ್ಲಾ ಅಧಿಕಾರವೂ ತಮ್ಮ ಮತ್ತು ತಮ್ಮ ಕಚೇರಿಯ ಹಿಡಿತದಲ್ಲೇ ಇರಬೇಕು ಎಂದವರು ಬಯಸುತ್ತಿದ್ದಾರೆಯೇ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಕೇಂದ್ರ ಸಚಿವ ಸಮಿತಿಯ ಇತಿಹಾಸವನ್ನು ಕೆದಕಬೇಕಾಗುತ್ತದೆ.
 ಅಷ್ಟಕ್ಕೂ ಕೇಂದ್ರ ಸಚಿವರ ಸಮಿತಿಯನ್ನು ರಚಿಸಿದ್ದಾದರೂ ಏಕೆ? ಅದು 1990ರ ದಶಕ. ಭಾರತದ ಆರ್ಥಿಕತೆಯ ಬಾಗಿಲುಗಳು ತೆರೆದುಕೊಳ್ಳತೊಡಗಿದ್ದವು. ಪ್ರಮುಖ ನೀತಿಗಳಲ್ಲಿನ ಬದಲಾವಣೆ ಮತ್ತು ಹೊಸ ಕಲ್ಪನೆಗಳಿಗೆ ಕೆಲವೊಮ್ಮೆ ನಾನಾ ಸಚಿವಾಲಯಗಳು ಮತ್ತು ಹಿಸ್ಸೇದಾರರಿಂದ ಮಂಜೂರಾತಿ ಪಡೆಯಬೇಕಾಗುತ್ತಿತ್ತು. ಉದಾಹರಣೆಗೆ, ಖಾಸಗಿ ಟೆಲಿಕಾಂ ವಲಯವೊಂದು ಅಸ್ತಿತ್ವಕ್ಕೆ ಬರಬೇಕಾದರೆ, ಟೆಲಿಕಾಂ ಸಚಿವಾಲಯ ಸ್ಪೆಕ್ಟ್ರಂ ಅನ್ನು ಬಿಟ್ಟುಕೊಡಲು ರಕ್ಷಣಾ ಸಚಿವಾಲಯವನ್ನು ಕೇಳಿಕೊಂಡು ಅದರ ಜೊತೆಗೆ ಕೆಲಸ ಮಾಡಬೇಕಾಗುತ್ತಿತ್ತು. ಇನ್ನು ಈ ಪ್ರಕ್ರಿಯೆಯಲ್ಲಿ ಆದಾಯದ ತೊಡಕುಗಳು ಉದ್ಭವವಾಗುತ್ತಿದ್ದುದರಿಂದ, ವಿತ್ತ ಸಚಿವಾಲಯವೂ ಈ ಕೆಲಸದಲ್ಲಿ ಭಾಗವಹಿಸಬೇಕಾಗುತ್ತಿತ್ತು.
 1991ರಿಂದ 1996ರ ವರೆಗೆ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾಯರು, ಕಾರ್ಯದರ್ಶಿಗಳ ಸಮಿತಿಗೆ ಹೆಚ್ಚು ಪ್ರೋತ್ಸಾಹ ಕೊಟ್ಟರು. ಸಂಬಂಧಪಟ್ಟ ಸಚಿವಾಲಯಗಳ ಆಡಳಿತಾತ್ಮಕ ಮುಖ್ಯಸ್ಥರೂ ಆದ ಕಾರ್ಯದರ್ಶಿಗಳು, ಆಲೋಚಿಸಿ ಮತ್ತು ಚರ್ಚಿಸಿ ಕೊನೆಗೆ ತಮ್ಮ ಶಿಫಾರಸನ್ನು ಕ್ಯಾಬಿನೆಟ್ನ ಎದುರು ಇಡತೊಡಗಿದರು. ಇನ್ನು ಅಟಲ್ ಬಿಹಾರಿ ವಾಜಪೇಯಿಯವರ ಒಕ್ಕೂಟ ಸರ್ಕಾರದಲ್ಲಿ ಭಿನ್ನ ಭಿನ್ನ ಪಕ್ಷಗಳ ನಾಯಕರು ಮುನ್ನಡೆಸುತ್ತಿದ್ದ ಸಚಿವಾಲಯಗಳಿಂದ ಹೆಚ್ಚುವರಿ ಸವಾಲುಗಳು ಎದುರಾದವು. ಇದನ್ನು ಸರಿಪಡಿಸಲು ವಾಜಪೇಯಿಯವರ ಸರ್ಕಾರದಲ್ಲಿ ಸಚಿವರ ಸಮಿತಿಯ(ಜಿಒಎಮ್) ಪರಿಕಲ್ಪನೆ ಹುಟ್ಟಿಕೊಂಡಿತು. ಜಿಒಎಮ್ ಸಿದ್ಧಪಡಿಸಿದ ಅಭಿಪ್ರಾಯ ಪುಟಗಳು ಪರಿಶೀಲನೆ ಮತ್ತು ಮಂಜೂರಾತಿಗಾಗಿ ಕ್ಯಾಬಿನೆಟ್ ಮತ್ತು ಪ್ರಧಾನಿಗಳ ಬಳಿ ತೆರಳತೊಡಗಿದವು.
ಸಚಿವರ ಸಮಿತಿಗೆ ನೀತಿ ನಿರೂಪಣೆಗೆ ಸಲಹಾಕಾರನಾಗಿ ಮತ್ತು ಪ್ರಾಥಮಿಕ ಹಂತವಾಗಿ ಹಾಗೂ ಅಂತರ್ ಸಚಿವಾಲಯ ಮತ್ತು ರಾಜಕೀಯ ಸಂಧಾನಕ್ಕೆ ವೇದಿಕೆಯಾಗಿ ತನ್ನದೇ ಆದ ಲಕ್ಷಣಗಳಿದ್ದವು. ಮೋದಿ ತಮ್ಮ ಅವಧಿಯಲ್ಲಿ ಕೆಲವು ಸಚಿವ ಸಮಿತಿಗಳನ್ನು ನೇಮಿಸಬಹುದಾದ ಸಾಧ್ಯತೆ ಇದ್ದೇ ಇದೆ. ಆದರೆ ಅಂಥ ಸಮಿತಿಗಳ ಗುಂಪನ್ನು ಗುಡ್ಡೆ ಹಾಕಲಾರರು ಮತ್ತು ತಮ್ಮ ಕೆಲಸಗಳನ್ನು ಅವುಗಳಿಗೆ ಗುತ್ತಿಗೆ ಕೊಡಲಾರರು ಎನ್ನುವುದು ನಿಶ್ಚಿತ. ಮನಮೋಹನ್ ಸಿಂಗ್ ಮಾಡಿದ ದೊಡ್ಡ ತಪ್ಪೆಂದರೆ, ಅವರು ಹಿಂದೆ ಮುಂದೆ ನೋಡದೆ ದಂಡಿಯಾಗಿ ಕೇಂದ್ರ ಸಚಿವ ಸಮಿತಿಗಳನ್ನು ಅಸ್ತಿತ್ವಕ್ಕೆ ತಂದಿದ್ದು. ಅವರ ಅವಧಿಯಲ್ಲಿ ಏಕಕಾಲದಲ್ಲಿ ಸುಮಾರು 100 ಜಿಒಎಮ್ಗಳು ಕೆಲಸ ನಿರ್ವಹಿಸುತ್ತಿದ್ದವು!
ಸಿಂಗ್ರ ಈ ಸಮಿತಿಗಳು ಪರಿಹರಿಸಲಾಗದ ಸಮಸ್ಯೆಗಳನ್ನು, ಕಷ್ಟಗಳನ್ನು ತಂದೊಡ್ಡಿಬಿಟ್ಟವು. ಯಾವ ಕೆಲಸಗಳು ಸುಲಭವಾಗಿ ಆಗಬಹುದಿತ್ತೋ, ಆಗಬೇಕಿತ್ತೋ ಅವನ್ನೂ ಕೂಡ ಕ್ಲಿಷ್ಟಗೊಳಿಸಿಬಿಟ್ಟವು. 'ಹಜ್'ಗೊಂದು ಸಚಿವರ ಸಮಿತಿ ಅಥವಾ ಪ್ರಸಾರ ಭಾರತಿಯ ಪುನಃಶ್ಚೇತನಕ್ಕಾಗಿ ಪ್ರತ್ಯೇಕ ಸಚಿವ ಸಮಿತಿಗಳನ್ನು ನೇಮಿಸುವ ಅಗತ್ಯ ಯುಪಿಎ ಸರ್ಕಾರಕ್ಕಿತ್ತೇ? ಅದಿರಲಿ, ಶಿಫಾರಸುಗಳನ್ನು ಮಾಡಬೇಕಿದ್ದ ಕೇಂದ್ರ ಸಚಿವರ ಉನ್ನತಾಧಿಕಾರದ ಸಮಿತಿಗೆ ಕೊನೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ(ಪ್ರಧಾನಿಗಳು ಮತ್ತು ಕ್ಯಾಬಿನೆಟ್ ಅನ್ನು ಕಡೆಗಣಿಸಿ) ಅಧಿಕಾರವನ್ನು ಅಕ್ಷರಶಃ ಕೊಟ್ಟುಬಿಟ್ಟಿತು ಯುಪಿಎ ಸರ್ಕಾರ. ಇದರ ಪರಿಣಾಮವಾಗಿ, ಸಚಿವರ ಉನ್ನತಾಧಿಕಾರ ಸಮಿತಿ ಮಿನಿ ಕ್ಯಾಬಿನೆಟ್ ಆಗಿ ಬದಲಾಯಿತು ಮತ್ತು ಆ ಸಮಿತಿಗಳ ಮುಖ್ಯಸ್ಥರು ತಮ್ಮ ಸೀಮಿತ ವ್ಯಾಪ್ತಿಯಲ್ಲಿ ಪ್ರಧಾನಿಗಳಾಗಿಬಿಟ್ಟರು! ಹಾಗಾಗೇ ಸಚಿವರ ಸಮಿತಿ ಮತ್ತು ಉನ್ನತಾಧಿಕಾರದ ಸಮಿತಿಗಳಿಗೆ ಮೋದಿ ಎಳ್ಳುನೀರುಬಿಟ್ಟಿದ್ದಾರೆ.
ತಮ್ಮ ಅಧಿಕಾರವನ್ನು ಸ್ಥಾಪಿಸುವುದಕ್ಕೆ ಮೋದಿ ಇಷ್ಟು ಮಾಡಿದರೆ ಸಾಲದು. ಚುರುಕು ಮತಿಯ ನಾಯಕರು(ಪ್ರಧಾನಿಗಳು) ಪ್ರಮುಖ ಸಚಿವಾಲಯಗಳ ಮೇಲ್ವಿಚಾರಣೆಯನ್ನು, ಸಚಿವರು ಅಥವಾ ಕಾರ್ಯದರ್ಶಿಗಳು ಅಥವಾ ಸಚಿವರ ಖಾಸಗಿ ಕಾರ್ಯದರ್ಶಿಗಳ ಮೂಲಕ ನಡೆಸುತ್ತಾರೆ. ಆ ವ್ಯಕ್ತಿ ನಂಬಿಕಸ್ಥನಾಗಿರಬೇಕು ಮತ್ತು ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿ ಪ್ರಧಾನಿಗಳಿಗೆ ಕಳುಹಿಸುವವನಾಗಿರಬೇಕು. ಇಂದಿರಾ ಗಾಂಧಿಯವರಿಂದ ಹಿಡಿದು ವಾಜಪೇಯಿಯವರವರೆಗಿನ ಪ್ರಧಾನಿಗಳು ತಮ್ಮ ಸರ್ಕಾರದ ಮೇಲೆ ಕಣ್ಣಿಟ್ಟದ್ದು ಹೀಗೆಯೇ. ಒಂದು ವೇಳೆ ಸಚಿವನೊಬ್ಬ ಭಿನ್ನಮತೀಯ ಅಥವಾ ಭ್ರಷ್ಟ ಗುಣಗಳನ್ನು ತೋರಿಸತೊಡಗಿದನೆಂದರೆ ಆತನ ಕಾರ್ಯದರ್ಶಿ ಅಥವಾ ಖಾಸಗಿ ಕಾರ್ಯದರ್ಶಿ ಆ ಸುದ್ದಿಯನ್ನು ಪ್ರಧಾನಿ ಅಥವಾ ಪ್ರಧಾನಮಂತ್ರಿ ಕಚೇರಿಗೆ ತಲುಪಿಸುತ್ತಿದ್ದ.
 ಮನಮೋಹನ್ ಸಿಂಗ್ ಅವರ ಅವಧಿಯಲ್ಲಂತೂ ಈ ವ್ಯವಸ್ಥೆ ಅಸ್ತವ್ಯಸ್ಥವಾಗಿತ್ತು. ಸಚಿವರನ್ನು ಒಂದೋ ಮೈತ್ರಿಕೂಟದ ಪಕ್ಷಗಳು ಆಯ್ಕೆ ಮಾಡಿರುತ್ತಿದ್ದವು ಅಥವಾ ಆ ಸಚಿವರು ಪ್ರಧಾನಿಯ ಬದಲು ಕಾಂಗ್ರೆಸ್ ಅಧ್ಯಕ್ಷೆಗೆ ಉತ್ತರದಾಯಿಯಾಗಿರುತ್ತಿದ್ದ. ಇನ್ನು ಮಂತ್ರಿಗಳಾದರೋ ತಮ್ಮ ಕಾರ್ಯದರ್ಶಿ ಮತ್ತು ಖಾಸಗಿ ಕಾರ್ಯದರ್ಶಿಯನ್ನು ತಾವೇ ಆಯ್ಕೆ ಮಾಡಿ, ತಮ್ಮ ಆಯ್ಕೆಗೆ ಕ್ಯಾಬಿನೆಟ್ನ ನೇಮಕಾತಿ ಸಮಿತಿಯ ಒಪ್ಪಿಗೆ ಸಿಗುವಂತೆ ಮಾಡುತ್ತಿದ್ದರು. ಒಂದು ವೇಳೆ ಕಾರ್ಯದರ್ಶಿಯೊಬ್ಬ ಮಂತ್ರಿಯ ಮೇಲೆ ದೂರು ನೀಡಲು ಪ್ರಧಾನಿಗಳ ಬಳಿಗೆ ಹೋದರೆ(ಕಲ್ಲಿದ್ದಲು ಸಚಿವಾಲಯದ ಕಾಯದರ್ಶಿಯೊಬ್ಬರಿಗೆ ಹೀಗೇ ಆಯಿತು) ಅವರಿಗೆ ಬೆಂಬಲವೇ ಸಿಗುತ್ತಿರಲಿಲ್ಲ. ಈ ಕಾರಣದಿಂದಾಗೇ ಯುಪಿಎ ಅವಧಿಯಲ್ಲಿ ಪ್ರಧಾನಿ ಕಚೇರಿ ತನ್ನ ಶಕ್ತಿ ಕಳೆದುಕೊಂಡಿತು.
ಒಂದು ವೇಳೆ ಮೋದಿ ಭಾರತ ಸರ್ಕಾರದ ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಲು ಬಯಸುತ್ತಿದ್ದಾರೆಂದರೆ, ಅವರು ಪ್ರಧಾನಮಂತ್ರಿ ಕಚೇರಿಯನ್ನು ಬಲಿಷ್ಠಗೊಳಿಸಬೇಕು. ಅದರ ಚಹರೆಯನ್ನು     ಅಧಿಕಾರಯುತ (ಛ್ಡಝ್ಟ್ಠ್ಝಿಡಿಛಡ್ಝಿಢಜ) ಆಗಿ ಮಾಡಬೇಕು ಆದರೆ (ಛ್ಡಝ್ಟ್ಠ್ಝಿಡಿಛ್ಠ್ಝಛಟಿ) ಸರ್ವಾಧಿಕಾರಯುಕ್ತ ಆಗಿ ಅಲ್ಲ.
ಈ ಹಾದಿಯಲ್ಲಿ ಮೋದಿ ಹೇಗೆ ಹೆಜ್ಜೆಯಿಡಲಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು, ಅವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗ ನಡೆದ ಒಂದು ಘಟನೆಯನ್ನು ನೋಡಿದರೆ ಸಾಕೆನಿಸುತ್ತದೆ. ಇದು ನಿಜವಾದ ಘಟನೆಯಾಗಿದ್ದು, ಸಂಬಂಧಪಟ್ಟ ವ್ಯಕ್ತಿಯಿಂದಲೇ ನನಗೆ ಈ ಬಗ್ಗೆ ತಿಳಿಯಿತು: ಗಾಂಧಿನಗರದಲ್ಲಿದ್ದ ಮೋದಿಯವರಿಗೆ ಒಂದು ದಿನ ಮಂತ್ರಿಯೊಬ್ಬರು ಫೋನ್ ಮಾಡಿ ತಮ್ಮ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಕಾರ್ಯದರ್ಶಿಯನ್ನು ಕಿತ್ತೆಸೆಯಬೇಕೆಂದು ಹೇಳಿದರು. ಆ ಮಂತ್ರಿಯ ಉದ್ದೇಶ ಸಂಪೂರ್ಣವಾಗಿ ಪ್ರಾಮಾಣಿಕವಾಗಿಲ್ಲ ಎನ್ನುವುದು ಮೋದಿಯವರಿಗೆ ಅರಿವಾಯಿತು. ಆದರೂ ಬಲಿಷ್ಠ ರಾಜಕಾರಣಿಯನ್ನು ಧಿಕ್ಕರಿಸಲು ಅವರಿಗೆ ಇಷ್ಟವಿರಲಿಲ್ಲ. ತುಸು ಯೋಚಿಸಿ ಮೋದಿ ಹೇಳಿದರು "ಸರಿ. ನಿಮಗೆ ಯಾವ ಪ್ರಶ್ನೆಯನ್ನೂ ಕೇಳಿದೆಯೇ ನೀವು ಹೇಳಿದಂತೆ ಆ ಕಾರ್ಯದರ್ಶಿನ್ನು ತೆಗೆಯುತ್ತೇನೆ. ಆದರೆ ನನ್ನದೊಂದು ಷರತ್ತಿದೆ. ಆತನ ಜಾಗದಲ್ಲಿ ಯಾರನ್ನು ನೇಮಿಸಬೇಕೆಂದು ನನಗೆ ಹೇಳಲು ಬರಬೇಡಿ!".
ಆ ಮಂತ್ರಿಗಳು ತಬ್ಬಿಬ್ಬಾದರು. ಆಗ ಮೋದಿ "ಇನ್ನೊಮ್ಮೆ ಯೋಚಿಸಿ ಕರೆ ಮಾಡಿ" ಎಂದು ಮಂತ್ರಿಗಳಿಗೆ ಹೇಳಿದರು. ಮರುದಿನ ಬೆಳಗ್ಗೆ ಮೋದಿ ಕಚೇರಿಗೆ ಹಾಜರಾದ ಆ ಮಂತ್ರಿಗಳು, ತಮ್ಮ ನಿರ್ಧಾರವನ್ನು ಬದಲಿಸಿರುವುದಾಗಿ, ಆ ಕಾರ್ಯದರ್ಶಿಯನ್ನು ತೆಗೆದುಹಾಕುವ ಅವಶ್ಯಕತೆ ಇಲ್ಲವೆಂದು ಹೇಳಿದರು.
ಯೋಚಿಸಿ ಹೆಜ್ಜೆಯಿಡಬೇಕು ಎನ್ನುವ ಪಾಠವನ್ನು ಗುಜರಾತ್ನ ಮಂತ್ರಿಗಳು ಮೋದಿಯವರಿಂದ ಬೇಗನೇ ಕಲಿತರು. ಈಗ ದೆಹಲಿಯೂ ಕೂಡ ಕಲಿಯಲಿದೆ!

- ಅಶೋಕ್ ಮಲಿಕ್
ಅಂಕಣಕಾರರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement