ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಧರ್ಮದ ಮರ್ಮ ಹಾಗೂ ಬುದ್ಧಿಜೀವಿಗಳ ಕರ್ಮ

ಧರ್ಮದ ಮರ್ಮ ಹಾಗೂ ಬುದ್ಧಿಜೀವಿಗಳ ಕರ್ಮ..

Srinivasa Murthy VN
Updated On : 14 Jun 2014, 12:10 pm

ಒಬ್ಬ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆಯಬೇಕೆಂದರೆ ತಾನು ಎಷ್ಟು ತಳಮಟ್ಟದಲ್ಲಿ 'ಸಂಶೋಧನೆ'ಗಳನ್ನು ನಡೆಸಿ ಸತ್ಯಾನ್ವೇಷಣೆ ಮಾಡಿ ಸತ್ಯ ಕಂಡುಕೊಂಡಿರಬೇಕೆಂಬುದು ಯು.ಆರ್. ಅನಂತಮೂರ್ತಿಯವರ ಮೂತ್ರ ವಿಸರ್ಜನಾ ಕ್ರಿಯೆಯಿಂದ ಸ್ಪಷ್ಟವಾಗುತ್ತದೆ. ದೇವರಿದ್ದಾನೆಂದು ಎಲ್ಲರೂ ಭಾವಿಸುವ ಶಿಲೆಯಲ್ಲಿ ನಿಜವಾಗಲೂ ದೇವರಿದ್ದಾನೋ, ಇಲ್ಲವೋ ಎಂದು ತಿಳಿದುಕೊಳ್ಳಲು ಇಂಥಾ ಒಂದು ಸರಳ ಪ್ರಯೋಗ ತೋರಿಸಿಕೊಟ್ಟ ಅನಂತಮೂರ್ತಿಯವರು ನಿಜಕ್ಕೂ ಅಭಿನಂದನಾರ್ಹರು.
ಈ ದೇಶ ನಿಜಕ್ಕೂ ಮೂಢನಂಬಿಕೆಗಳಿಂದ ಹಾಳಾಗುತ್ತಿದೆ ಎನ್ನುವುದೇ ಆದರೆ, ಅದನ್ನು ನಿವಾರಿಸಲು ಅನಂತ ಮೂರ್ತಿ, ಎಮ್.ಎಮ್. ಕಲ್ಬುರ್ಗಿಯಂಥ ಬುದ್ದಿಜೀವಿಗಳು 'ಮೂಢನಂಬಿಕೆ ನಿಷೇಧ ಕಾಯಿದೆ'ಯನ್ನು ಜಾರಿಗೆ ತರುವಂತೆ ಸಿದ್ದರಾಮಯ್ಯನವರ ಮೇಲೆ ಒತ್ತಡ ತಂದರೆ ಸಾಲದು. ಅವರೇ ಸಂಶೋಧಿಸಿ ಕಂಡುಕೊಂಡಿರುವ ಇಂಥಾ ಸತ್ಯಗಳನ್ನಿಟ್ಟುಕೊಂಡು ಕಾರ್ಯಪ್ರವೃತ್ತರಾಗಬೇಕು. ಅನಂತ ಮೂರ್ತಿಯವರೂ, ಕಲ್ಬುರ್ಗಿಯವರೂ ದಿನಬೆಳಗಾದರೆ ಒಂದೊಂದು ಕಲ್ಲು ಮೂರ್ತಿಗಳ ಮೇಲೆ ಉಚ್ಚೆ ಹುಯ್ಯುತ್ತಾ, 'ನೋಡಿ ನೀವು ಯಾವ ಶಿಲೆಯಲ್ಲಿ ದೇವರಿದ್ದಾನೆಂದು ನಂಬಿ ಅದಕ್ಕೆ ಹೆದರುತ್ತೀರೋ ಅದರ ಮೇಲೆ ನಾವು ಮೂತ್ರವಿಸರ್ಜನೆ ಮಾಡಿದ್ದೇವೆ, ಆದರೂ ನಮಗೇನೂ ಕೆಡುಕಾಗಲಿಲ್ಲ, ಹಾಗಾಗಿ ಈ ಶಿಲೆಯಲ್ಲಿ ದೇವರಿಲ್ಲ' ಎಂದು ಪ್ರಚಾರ ಮಾಡುತ್ತಾ ಹೋದರೆ ಜನ ತಮ್ಮಷ್ಟಕ್ಕೆ ತಾವೇ ಅವುಗಳಿಂದ ದೂರವಾಗಿಬಿಡುತ್ತಾರೆ. ಸರ್ಕಾರ ಯಾವ ಮೂಢನಂಬಿಕೆ ನಿಷೇಧ ಕಾಯಿದೆಯನ್ನೂ ಜಾರಿಗೆ ತರಬೇಕಾಗಿ ಬರುವುದಿಲ್ಲ. ಆದರೆ ಅನಂತ ಮೂರ್ತಿಯವರು, ಕಲ್ಬುರ್ಗಿಯವರು ಒಂದು ವಿಷಯದ ಬಗ್ಗೆ ಮಾತ್ರ ಬಹಳ ಎಚ್ಚರಿಕೆಯಿಂದಿರಬೇಕು. ಅಪ್ಪಿತಪ್ಪಿ ಅನ್ಯಕೋಮಿನ ಶ್ರದ್ಧಾಕೇಂದ್ರದ ಮೇಲೆ ತಮ್ಮ ಪ್ರಯೋಗ ಮಾಡಲು ಹೋಗಬಾರದು. ಹೋದದ್ದೇ ಆದರೆ ಪ್ರಯೋಗ ಮಾಡಿದ ಆರೆಕ್ಷಣದಲ್ಲೇ, ಅವರ ದೇವರು ಮತ್ತು ದೆವ್ವ ಎಲ್ಲವನ್ನೂ ಪರಿಚಯ ಮಾಡಿಸಿಬಿಡುತ್ತಾರೆ.
 ಹಿಂದು ದೇವರುಗಳಾದರೆ ಹಾಗೆಲ್ಲಾ ಏಕ್‌ದಂ ಮೇಲೆರಗುವವರಲ್ಲ, ನಿಧಾನ ಸ್ವಭಾವದವರು. ಶ್ರೀರಾಮಚಂದ್ರನನ್ನೇ ನೋಡಿ. ಅವನ ಹೆಂಡತಿಯನ್ನು ಎತ್ತಿಕೊಂಡು ಹೋದವನಿಗೇ ಶಿಕ್ಷೆ ಕೊಡಲು ಎಷ್ಟು ಕಾಲ ತೆಗೆದುಕೊಂಡ. ಶ್ರೀಹರಿ ತನ್ನ ವೈರಿ ಹಿರಣ್ಯಕಶ್ಯಪುವನ್ನು ಶಿಕ್ಷಿಸಿ ತನ್ನ ಭಕ್ತನಾದ ಪ್ರಹ್ಲಾದನನ್ನು ರಕ್ಷಿಸಲು ಅದೆಷ್ಟು ಸಮಯ ತೆಗೆದುಕೊಂಡ. ಶ್ರೀಕೃಷ್ಣನಂತೂ ಕಂಸನನ್ನು ಸಂಹರಿಸಲು ಎಂಟನೇ ಗರ್ಭದಲ್ಲೇ ಏಕೆ ಬರಬೇಕಿತ್ತು? ಮೊದಲನೇ ಗರ್ಭದಲ್ಲೇ ಬಂದು ಅತ್ಲಾಗೆ ಢಮಾರ್ ಅನಿಸಿದ್ದರೆ ಆಗ್ತಿತ್ತು ಅಲ್ಲವೇ? ಶಿಶುಪಾಲ ಅವನನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದರೂ ನೂರಾ ಒಂದು ತಪ್ಪುಗಳಾಗಲೆಂದು ಬೈಸಿಕೊಂಡು ತೆಪ್ಪಗೆ ಕೂತಿದ್ದ. ಹೀಗೆ ಅಂಥಾ ರಾಕ್ಷಸರುಗಳಿಗೇ ತಪ್ಪು ಮಾಡಿದ ತಕ್ಷಣ ಶಿಕ್ಷಿಸದೆ, ಪಾಪದ ಕೊಡ ತುಂಬಲೆಂದು ಕಾಯುವ ನಮ್ಮ ದೇವರುಗಳು, ಅನಂತ ಮೂರ್ತಿಗಳಂಥಾ ಸಜ್ಜನರು ಏನೋ ಕುತೂಹಲಕ್ಕಾಗಿ ತಾನದರಲ್ಲಿದ್ದೇನೆಂದು ಭಾವಿಸಿ ಭಕ್ತರು ಪೂಜಿಸುವ ಕಲ್ಲಿನ ಮೇಲೆ ಒಮ್ಮೆ ಮೂತ್ರವಿಸರ್ಜನೆ ಮಾಡಿಬಿಟ್ಟರೆ ಒಮ್ಮೆಲೇ ಸಿಟ್ಟಾಗಿಬಿಡುತ್ತಾನೆಯೇ? ಶಿಕ್ಷಿಸಿಬಿಡುತ್ತಾನೆಯೇ? ಖಂಡಿತಾ ಇಲ್ಲ. ಪಾಪದ ಕೊಡ ತುಂಬಲೆಂದು ಕಾದೇ ಕಾಯುತ್ತಾನೆ.
ಅನಂತ ಮೂರ್ತಿಯವರ ಸಧ್ಯದ ಪರಿಸ್ಥಿತಿಯನ್ನು ನೋಡಿದರೆ ಅವರ ಪಾಪದಕೊಡ ಈಗ ತುಂಬಿಬರುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಏಕೆಂದರೆ ಹಿಂದೆ ಅವರಾಡುತ್ತಿದ್ದ ಒಂದೊಂದು ಮಾತುಗಳು ಅವರಿಗೆ ಅವಾರ್ಡು ರಿವಾರ್ಡುಗಳನ್ನು ತಂದುಕೊಡುತ್ತಿತ್ತು. ಆದರೆ ಇಂದು ಅವರಾಡುವ ಒಂದೊಂದು ಮಾತು ವಿವಾದಗಳಾಗಿ ಈ ಮಾತು ನಾನ್ಯಾಕೆ ಆಡಿದೆನೋ ಎಂದು ಪರಿತಪಿಸುವಂಥ ಸಂದರ್ಭಗಳೇ ಸೃಷ್ಟಿಯಾಗುತ್ತಿವೆ. ಭಾರತೀಯ ಜನತಾ ಪಕ್ಷ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಂಥ, ನರೇಂದ್ರಮೋದಿಯವರು ನಿರಾತಂಕವಾಗಿ ಪ್ರಧಾನಿಯಾಗುವಂಥ ಸನ್ನಿವೇಶವನ್ನು ಸ್ವಯಂ ಭಾರತೀಯ ಜನತಾ ಪಕ್ಷದವರೇ ಊಹಿಸಿರಲಿಲ್ಲವಾದ್ದರಿಂದ ಅನಂತಮೂರ್ತಿಯವರು ಬಹಳ ವೀರಾವೇಶದಿಂದಲೇ ನರೇಂದ್ರಮೋದಿ ಪ್ರಧಾನಿಯಾದ ದೇಶದಲ್ಲಿ ತಾನಿರಲು ಬಯಸುವುದಿಲ್ಲ ಎಂದೆಲ್ಲಾ ಹೇಳಿಕೆಗಳನ್ನು ಕೊಟ್ಟರು. ಅವರ ಟೈಮ್ ಮೊದಲಿನಂತೆ ಇದ್ದಿದ್ದರೆ ಚುನಾವಣೆಯಲ್ಲಿ ಯುಪಿಎ ನೇ ಗೆದ್ದು ರಾಹುಲ್ ಗಾಂಧಿ ಪ್ರಧಾನಿಯಾಗಿ ಅನಂತ ಮೂರ್ತಿಯವರು ಭಾರತರತ್ನ ಬಿರುದಿಗೆ ಆಯ್ಕೆಯಾಗಿಬಿಡುತ್ತಿದ್ದರೋ? ಆದರೆ ಬ್ಯಾಡ್ ಟೈಮ್, ನರೇಂದ್ರಮೋದಿಯವರು ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡಿ ಎಂದು ಕರೆ ಕೊಟ್ಟೊಡನೆಯೇ ಜನ ಕಾಂಗ್ರೆಸನ್ನು ಆಡಳಿತ ಪಕ್ಷವಿರಲಿ ವಿರೋಧ ಪಕ್ಷ ಸ್ಥಾನದಿಂದಲೂ ಕಿತ್ತಾಕಿಬಿಟ್ಟರು. ಅನಂತಮೂರ್ತಿಯವರ ಬುಡಕ್ಕೇ ಬೆಂಕಿ ಬಿದ್ದಹಾಗಾಯಿತು. ನರೇಂದ್ರಮೋದಿಯವರ ಅಭಿಮಾನಿಗಳು ಪಾಕಿಸ್ತಾನಕ್ಕೆ ಹೋಗುವ ಏರ್ ಟಿಕೆಟ್‌ಗಳನ್ನು ಅನಂತಮೂರ್ತಿಯವರ ಮನೆಗೇ ಕಳುಹಿಸಿಕೊಟ್ಟಿದ್ದಾರಂತೆ. ಅಷ್ಟೇ ಅಲ್ಲದೆ ದೇಶ ಬಿಟ್ಟು ತೊಲಗಿ ಮಾತು ಉಳಿಸಿಕೊಳ್ಳಿ ಎಂಬ ಪೋಸ್ಟರ್‌ಗಳು, ಸಾಮಾಜಿಕ ತಾಣಗಳಲ್ಲಿ ಹರಿದಾಡಿ ಅವರನ್ನು ಕಂಗೆಡಿಸಿವೆ. ಆದರೂ ಧೃತಿಗೆಡದೆ ಮೀಡಿಯಾಗಳ ಮುಂದೆ ಬಂದು ಇಂಗು ತಿಂದ ಮಂಗನ ಮುಖಭಾವದಲ್ಲೇ ಸಮಜಾಯಿಷಿ ಕೊಡುವ ಪ್ರಯತ್ನವನ್ನೇನೊ ಮಾಡಿದರು. ಆದರೆ ಅದನ್ನು ಒಪ್ಪುವವರು ಬೇಕಲ್ಲಾ?
ಎಲ್ಲಾ ಹೇಗೋ ತಿಪ್ಪೆ ಸಾರಿಸಿ ಆಯ್ತು, ಶಾಂತವಾಯ್ತು ಎಂದು ಅಂದುಕೊಳ್ಳುವ ಹೊತ್ತಿಗೆ ಮಾನ್ಯ ಕಲಬುರ್ಗಿಯವರ ಕೃಪೆಯಿಂದಾಗಿ ಎಂದೋ ದೇವರಕಲ್ಲಿನ ಮೇಲೆ ಉಚ್ಚೆ ಹೊಯ್ದ ಪ್ರಸಂಗ ಇಷ್ಟೊಂದು ಸದ್ದು ಮಾಡಿ ಪತ್ರಿಕೆಗಳಲ್ಲಿ ಪರೋಕ್ಷವಾಗಿ, ಟಿ.ವಿ ಶೋಗಳಲ್ಲಿ ಪ್ರತ್ಯಕ್ಷವಾಗಿ ಉಗಿಸಿಕೊಳ್ಳುವ ಪ್ರಮೇಯ ಒದಗಿಬರಬೇಕೇ? ಅದಕ್ಕೆ ಶನಿ ಯಾವ ರೂಪದಲ್ಲಿ ಬಂದು ಹೆಗಲೇರುತ್ತಾನೋ ಗೊತ್ತಾಗುವುದಿಲ್ಲ ಎಂದು ಹೇಳುವುದು. ನಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಕಲಿಯುಗದಲ್ಲಿ ದೇವರು ಮತ್ತು ಶನೈಶ್ಚರ ನೇರವಾಗಿ ಬಂದು ಏನನ್ನೂ ಮಾಡುವುದಿಲ್ಲ. ನಮ್ಮ ಸುತ್ತಲೂ ಇರುವ ಮನುಷ್ಯರ ಮೂಲಕ, ನಡೆವ ಘಟನಾವಳಿಗಳ ಮೂಲಕ ತಮ್ಮ ಇರುವಿಕೆಯನ್ನು ಪ್ರಸ್ತುತ ಪಡಿಸುತ್ತಿರುತ್ತಾರೆ. ಧರ್ಮಸೂಕ್ಷ್ಮ ವ್ಯಾಖ್ಯಾನಗಳಿಂದಷ್ಟೇ ಅವುಗಳು ಸಾಮಾನ್ಯ ಜನಗಳಿಗೆ ತಿಳಿಯುತ್ತವೆ. ಅನಂತಮೂರ್ತಿಯವರು ದೇವತಾ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು, ಅದರಿಂದ ಅವರಿಗೆ ಏನೂ ಕೇಡಾಗದಿದ್ದುದು, ಅದನ್ನು ಅವರು ಪುಸ್ತಕದಲ್ಲಿ ದಾಖಲಿಸಿದ್ದು,  ಅದನ್ನು ಓದಿದವರಿಗೆ ಅವರೊಬ್ಬ ಧೀಮಂತ ವಿಚಾರವಾದಿ ಎಂಬ ಗೌರವ ಮೂಡಿದ್ದು, ಅದರಿಂದ ಅವರಿಗೆ ಅನೇಕ ಬಿರುದುಬಾವಲಿಗಳು ದೊರಕಿದ್ದು ಇದೆಲ್ಲಾ ಒಂದು ತೆರನಾದ ಸತ್ಯವಾದರೆ... ಅನಂತಮೂರ್ತಿಯವರು ಈಗ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವುದು ಇನ್ನೊಂದು ರೀತಿಯ ಸತ್ಯ. ಹಾಗೆಂದು ಅವರು ದೇವತಾ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರಿಂದಲೇ ಅವರಿಗೆ ಮೂತ್ರಪಿಂಡ ಸಮಸ್ಯೆಯುಂಟಾಯಿತು ಎಂಬುದು ಎಲ್ಲರೂ ಒಪ್ಪುವಂಥ ಸತ್ಯವಲ್ಲದಿದ್ದರೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಮತ್ತು ದೇವತಾ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಎರಡೂ ವಿಚಾರಗಳು ಒಟ್ಟಿಗೆ ಬೆಳಕಿಗೆ ಬಂದು ಜನರು ಆ ರೀತಿ ವ್ಯಾಖ್ಯಾನಿಸುವಂತಾದದ್ದು ಮಾತ್ರ ಎಲ್ಲರೂ ಒಪ್ಪಲೇಬೇಕಾದ ಪಾರಮಾರ್ಥಿಕ ಸತ್ಯ. ಆ ದೇವರು ತನ್ನ ಇರುವಿಕೆಯನ್ನು ಪ್ರಕಟಗೊಳಿಸುವುದಕ್ಕೋಸ್ಕರ ಘಟನೆಗಳನ್ನು ಈ ರೀತಿ ಪೋಣಿಸುತ್ತಿರುತ್ತಾನೆಂಬುವುದೇ ಧರ್ಮಸೂಕ್ಷ್ಮ ವ್ಯಾಖ್ಯಾನ. ಇಂಥ ವ್ಯಾಖ್ಯಾನ ಮಾಡುವಾಗ ಎಷ್ಟೋ ಜನ ಸಚ್ಚ್ಯಾರಿತ್ರರೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಾರಲ್ಲ, ಅವರೆಲ್ಲಾ ಅನಂತಮೂರ್ತಿಯವರಂತೆಯೇ ಮಾಡಿದ್ದಾರಾ ಎಂಬ ಪ್ರಶ್ನೆ ಸಹಜವಾಗಿ ಮೂಡಬಹುದು. ಅದಕ್ಕೆ ಧರ್ಮಸೂಕ್ಷ್ಮ ಉತ್ತರ ಇಷ್ಟೇ: ಲೌಕಿಕದಲ್ಲಿ ಜೈಲುಶಿಕ್ಷೆ ಅನುಭವಿಸುವವರೆಲ್ಲಾ ಒಂದೇ ರೀತಿಯ ಅಪರಾಧ ಮಾಡಬೇಕೆಂದೇನೂ ಇಲ್ಲ. ಹಾಗೆಯೇ ಜೀವನದಲ್ಲಿ ಒಂದೇ ರೀತಿಯ ಕಷ್ಟಗಳನ್ನನುಭವಿಸುತ್ತಿರುವವರೆಲ್ಲಾ ಒಂದೇ ರೀತಿಯ ಪಾಪಕೃತ್ಯವನ್ನೇ ಮಾಡಿರಬೇಕೆಂದೇನೂ ಇಲ್ಲ. ಇನ್ನು ಸಚ್ಚ್ಯಾರಿತ್ರರೂ ಸಮಸ್ಯೆಗಳನ್ನೆದುರಿಸುತ್ತಿದ್ದಾರೆಲ್ಲಾ ಎಂಬ ಪ್ರಶ್ನೆಯೂ ಮೂಡುತ್ತದೆ. ಅದಕ್ಕೆ ಧರ್ಮಸೂಕ್ಷ್ಮ ನಮ್ಮ ದೃಷ್ಟಿಯಲ್ಲಿ ಸಚ್ಚ್ಯಾರಿತ್ರರಂತೆ ಗೋಚರಿಸುವವರೆಲ್ಲ ದೈವದ ದೃಷ್ಟಿಯಲ್ಲಿ ಸಚ್ಚ್ಯಾರಿತ್ರರಾಗಿರಬೇಕಿಲ್ಲ. ಅದೇರೀತಿ ನಮ್ಮ ದೃಷ್ಟಿಯಲ್ಲಿ ದುಷ್ಟಚರಿತರಾದವರೆಲ್ಲಾ ದೈವದ ದೃಷ್ಟಿಯಲ್ಲಿ ದುಷ್ಟಚರಿತರಾಗಿರಬೇಕೆಂದೇನೂ ಇಲ್ಲ ಎಂದು ಹೇಳುತ್ತದೆ. ಎಲ್ಲೆಲ್ಲೋ ಚದುರಿಹೋದ ಮೋಡಗಳು ಒಂದು ಕಾಲಕ್ಕೆ ಒಂದೆಡೆ ಕ್ರೋಢೀಕರಣಗೊಂಡು ಮಳೆ ಸುರಿಸುವಂತೆ, ಎಲ್ಲೋ ಯಾವಾಗ್ಯಾವಾಗಲೋ ಮಾಡಿದ ಪಾಪಪುಣ್ಯ ಫಲಗಳು ಕ್ರೋಢೀಕರಣಗೊಂಡು ಇನ್ಯಾವಾಗಲೋ ಫಲನೀಡುತ್ತವೆ. ಇದೇ ಕರ್ಮಸಿದ್ಧಾಂತ. ಇದೇ ಅನಂತಮೂರ್ತಿಯವರ ವಿಷಯದಲ್ಲೂ ಆಗಿರುವುದು. ಎಂದೋ ಮಾಡಿದ ಒಂದು ಕೃತ್ಯ, ಎಂದೋ ಬರೆದ ಪುಸ್ತಕದಲ್ಲಿ ದಾಖಲಾದ ಒಂದು ಘಟನೆ ಅವರಿಗೆ ಕಾಯಿಲೆ ಬಂದಾಗ ಮೂರನೇ ವ್ಯಕ್ತಿಯಿಂದ ಪ್ರಸ್ತಾಪವಾಗಿ ಆ ತಪ್ಪು ಮಾಡಿದ್ದರಿಂದಲೇ ಅವರಿಗೆ ಈ ಶಿಕ್ಷೆಯಾಯಿತು ಎಂದು ಜನ ವ್ಯಾಖ್ಯಾನಿಸುವಂತಾಗಿದ್ದು. ಇದನ್ನು ನಾವು ತಪ್ಪು ಎನ್ನಲಾಗುವುದಿಲ್ಲ. ಏಕೆಂದರೆ ಕರ್ಮಸಿದ್ಧಾಂತವನ್ನು ನಂಬುವ ಜನ ಒಬ್ಬ ವ್ಯಕ್ತಿಗೆ ಒಳ್ಳೆಯದಾದಾಗ ಅವನೇನಪ್ಪಾ ಒಳ್ಳೇ ಪುಣ್ಯ ಮಾಡಿದಾನೆ ಅಂತಾನೂ ಅಂತಾರೆ. ಅದೇ ಕೇಡುಂಟಾದಾಗ ಏನ್ ಪಾಪ ಮಾಡಿದ್ನೋ ಪಾಪಿ ಅಂತಾನೂ ಅಂತಾರೆ. ಅನಂತಮೂರ್ತಿಯಂಥವರು ಎಮ್. ಎಮ್. ಕಲಬುರ್ಗಿಯಂಥವರು ಇನ್ನು ಸಾವಿರ ಜನ್ಮ ಎತ್ತಿಬಂದರೂ ಇಂಥ ನಂಬಿಕೆಗಳನ್ನು ಭಾರತೀಯರಿಂದ ಕಳೆಯಲು ಸಾಧ್ಯವಿಲ್ಲ. ಇಂಥಾ ಸಮೀಕರಣಗಳಿಂದ ಸಮಾಜಕ್ಕೆ ಒಳ್ಳೆಯದೇ ಆಗುತ್ತಿದೆ. ಯಾವುದೋ ಒಂದು ಕಲ್ಲಿನಲ್ಲಿ ದೇವರಿದ್ದಾನೆಂದು ನಂಬಿ ಅದಕ್ಕೆ ಭಕ್ತಿಶ್ರದ್ಧೆಯಿಂದ ನಡೆದುಕೊಂಡು ಅವನು ಎಲ್ಲವನ್ನೂ ನೋಡುತ್ತಿರುತ್ತಾನೆ, ನಾವು ಒಳ್ಳೆಯದು ಮಾಡಿದರೆ ನಮಗೆ ಒಳ್ಳೆಯದು ಮಾಡುತ್ತಾನೆ, ಕೆಟ್ಟದ್ದು ಮಾಡಿದರೆ ಕೆಟ್ಟದ್ದು ಮಾಡುತ್ತಾನೆಂದು ನಂಬಿ ಸ್ವನಿಯಂತ್ರಣವನ್ನು ಮಾಡಿಕೊಳ್ಳುವ ಒಂದು ಉತ್ತಮ ವ್ಯವಸ್ಥೆಗೆ ಕೊಳ್ಳಿ ಇಡುವುದರಿಂದ ಇಂಥಾ ಸ್ವಯಂಘೋಷಿತ ಬುದ್ದಿಜೀವಿಗಳಿಗೆ ಅದೇನು ಲಾಭವಿದೆಯೋ?  ಆ ದೇವರೇ ಬಲ್ಲ!

-ಫಣಿರಾಮಚಂದ್ರ
paniramachandra.hs@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement