ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಚುನಾವಣೆಯ ನಂತರ ನಮ್ಮ ಜವಾಬ್ದಾರಿಯೇನು?

Srinivasa Murthy VN
Updated On : 14 Jun 2014, 11:23 am

ಜಗತ್ತಿನಲ್ಲಿ ಭಾರತದ ಸಂವಿಧಾನ ಅತ್ಯಂತ ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಗೆ ಅವಕಾಶ ಕಲ್ಪಿಸಿದೆ. ಆದ್ದರಿಂದ ಪ್ರಜಾಪ್ರಭುತ್ವದ "ಮಹಾಯುದ್ಧ" ಚುನಾವಣೆಗೆ ಸಿಬ್ಬಂದಿಯನ್ನು ಸರ್ವಸನ್ನದ್ಧರಾಗಿಸಲು ಪರಿಪೂರ್ಣ ತರಬೇತಿಯನ್ನು 2 ಅಥವಾ 3 ಹಂತಗಳಲ್ಲಿ ನೀಡುತ್ತದೆ.

ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಜಾತಂತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ 125 ಕೋಟಿ ಭಾರತೀಯರು 16ನೇ ಲೋಕಸಭಾ ರಚನೆಯಲ್ಲಿ ಜವಾಬ್ದಾರಿಯುತ ಮತ ಚಲಾಯಿಸಿ ಸ್ಪಷ್ಟ ಜನಾದೇಶ ನೀಡಿದ್ದಾರೆ. ಚುನಾವಣಾ ಆಯೋಗವು ಸಹ ಸುಮಾರು 9 ಹಂತಗಳಲ್ಲಿ ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಿ ಜಗತ್ತಿನಲ್ಲೇ ಅಭಿನಂದನೆಗೆ ಭಾಜನವಾಗಿದೆ. ಅತ್ಯಂತ ಸುರಕ್ಷತೆ, ಕಟ್ಟುನಿಟ್ಟಿನ ನಿಯಮಪಾಲನೆ, ಮತದಾರರಲ್ಲಿ ಜಾಗೃತಿಯನ್ನು ಮೂಡಿಸುವುದು ಸೇರಿದಂತೆ ಸಿಬ್ಬಂದಿಗೆ ಸೂಕ್ತ ತರಬೇತಿ, ಊಟೋಪಚಾರ ಮತ್ತು ಹಲವು ಹಂತಗಳಲ್ಲಿ ಚುನಾವಣಾ ಪ್ರಕ್ರಿಯೆಯ ಕಣ್ಗಾವಲು ಮತ್ತು ಅವಲೋಕನ ಮೆಚ್ಚುವಂಥದ್ದು.
ಈ ದೇಶದ ಪ್ರತಿ ಚುನಾವಣೆಯಲ್ಲೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟು ಹೋಗಿರುವುದು, ತಪ್ಪಾಗಿರುವುದು ಅಥವಾ ಬೇರೆ ವಾರ್ಡ್‌ಗಳಿಗೆ ಶಿಫ್ಟ್ ಆಗಿರುವುದು ಇನ್ನು ಮುಂತಾದ ದೂರು ಅಥವಾ ಅಸಮಧಾನ ಸರ್ವೇ ಸಾಮಾನ್ಯ. ಆದರೆ ಈ ಅಸಮಾಧಾನ ಮತ್ತು ದೂರನ್ನು ಚುನಾವಣೆ ದಿನದಂದು ಮತಗಟ್ಟೆ ಅಧಿಕಾರಿಯ ಎದುರಿಗೆ ವ್ಯಕ್ತಪಡಿಸುವುದು ವಿಷಾದಕರ. ಚುನಾವಣೆಗೆ ಮೊದಲು ಈ ದೇಶದ ಮತದಾರ ತನ್ನ ಹೆಸರು ನಿರ್ದಿಷ್ಟ ಮತಗಟ್ಟೆಯಲ್ಲಿ ಇದೆಯೋ ಅಥವಾ ಇಲ್ಲವೋ ಎಂದು ದೃಢೀಕರಿಸಿಕೊಳ್ಳಬೇಕು. ಇದು ಮತದಾರನ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ.
ಇನ್ನು ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಜವಾಬ್ದಾರಿಯ ಕುರಿತು ಒಂದಿಷ್ಟು ಅಂಶಗಳನ್ನು ಗಮನಿಸೋಣ. ಜಗತ್ತಿನಲ್ಲಿ ಭಾರತದ ಸಂವಿಧಾನ ಅತ್ಯಂತ ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಗೆ ಅವಕಾಶ ಕಲ್ಪಿಸಿದೆ. ಆದ್ದರಿಂದ ಪ್ರಜಾಪ್ರಭುತ್ವದ "ಮಹಾಯುದ್ಧ" ಚುನಾವಣೆಗೆ ಸಿಬ್ಬಂದಿಯನ್ನು ಸರ್ವಸನ್ನದ್ಧರಾಗಿಸಲು ಪರಿಪೂರ್ಣ ತರಬೇತಿಯನ್ನು 2 ಅಥವಾ 3 ಹಂತಗಳಲ್ಲಿ ನೀಡುತ್ತದೆ. ಅಲ್ಲದೇ ಉನ್ನತ ಸ್ಥಾನದ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು, ವಿಭಾಗಾಧಿಕಾರಿಗಳು, ತಹಸೀಲ್ದಾರರು ಮತ್ತು ಸೆಕ್ಟರ್ ಅಧಿಕಾರಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗೆ ಚುನಾವಣೆ ಪ್ರಕ್ರಿಯೆಯ ಆರಂಭದಿಂದ ಮುಗಿಯುವವರೆಗೂ ದಿನವೂ ತರಬೇತಿ ಪಡೆದಷ್ಟೇ ಅನುಭವ ಮತ್ತು ಕರ್ತವ್ಯ ನಿರ್ವಹಣೆಯಾಗಿರುತ್ತದೆ.
ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸಂಪನ್ಮೂಲ ವ್ಯಕ್ತಿಗಳು ಮತದಾನ ಪ್ರಕ್ರಿಯೆಯ ಬಗ್ಗೆ ಸೂಕ್ತ ತರಬೇತಿಯನ್ನು ಜೊತೆಗೆ ಪ್ರಾತ್ಯಕ್ಷಿಕೆ (ಕಿಕಿಖಿ, ಆ್ಡಜ್ಝ್ಟ ಗ್ಝಡ್ಡಛಟ)ಮುಂತಾದ ಅತ್ಯಾಧುನಿಕ ತಾಂತ್ರಿಕ ವಿಧಾನಗಳಿಂದ ತರಬೇತಿಯನ್ನು ನೀಡಲಾಗುತ್ತದೆ ಹಾಗೂ ಚುನಾವಣೆ ಮಾಹಿತಿಯುಳ್ಳ ಚುನಾವಣಾ ಕೈಪಿಡಿಯನ್ನು ಕೂಡ ಒದಗಿಸಲಾಗುತ್ತದೆ. ಆದರೆ ದುರದೃಷ್ಟವೆಂದರೆ ಕೆಲವು ಸಿಬ್ಬಂದಿ ತರಬೇತಿಯನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದು, ತರಬೇತಿಗೆ ವಿಳಂಬವಾಗಿ ಬರುವುದು, ತರಬೇತಿ ಮುಗಿಯುವ ಮುನ್ನವೇ ನಿರ್ಗಮಿಸುವುದು ಮತ್ತು ತರಬೇತಿಯನ್ನು ಕೇಂದ್ರೀಕರಿಸದೇ ಒಣಹರಟೆ, ಅಪ್ರಸ್ತುತ ಚರ್ಚೆ ಮುಂತಾದವುಗಳಿಂದ ಗೊಂದಲ ಮೂಡಿಸಿ ಅಪೂರ್ಣ ಮಾಹಿತಿಯೊಂದಿಗೆ ತೆರಳುತ್ತಾರೆ. ಚುನಾವಣಾ ಕಾರ್ಯಕ್ಕೆ ಮತ ಕೇಂದ್ರಗಳಿಗೆ ಹೋದಾಗ ಸಣ್ಣಪುಟ್ಟ ಸಮಸ್ಯೆಗಳು ಎದುರಾದರೆ ಅವುಗಳನ್ನು ಸಮರ್ಥವಾಗಿ ನಿಭಾಯಿಸದೇ ಮತದಾರರ ಎದುರಿಗೆ ಮುಜುಗರಕ್ಕೆ ಒಳಗಾಗಿ ಆ ಕ್ಷಣದಲ್ಲಿ ಮೇಲಾಧಿಕಾರಿಗಳಿಗೆ ಫೋನ್ ಮಾಡುತ್ತಾರೆ.
ಚುನಾವಣಾ ಕಾರ್ಯಕ್ಕೆ ತೆರಳುವ ಮುನ್ನ ಸಂಪೂರ್ಣ ಮಾಹಿತಿಯನ್ನು ಪಡೆದು ಸರಿಯಾಗಿ ಕಾರ್ಯನಿರ್ವಹಿಸುವುದು ಸಿಬ್ಬಂದಿಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಚುನಾವಣಾ ಸಿಬ್ಬಂದಿ ಮತದಾನದ ದಿನದಂದು ಚುನಾವಣಾ ಸಾಮಗ್ರಿ, ಮತಯಂತ್ರ (ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್ ಯುನಿಟ್) ಮತ್ತಿತರೆ ಕಾಗದ ಪತ್ರ ಲಕೋಟೆಗಳು ಮತ್ತು ಅನುಬಂಧಗಳನ್ನು ಪಡೆಯುವಾಗ ಸ್ಥಳೀಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ನಡೆದುಕೊಂಡು ಚುನಾವಣಾ ಪ್ರಕ್ರಿಯೆಗೆ ಸಹಕರಿಸುವುದು ಸಿಬ್ಬಂದಿಯ ದೊಡ್ಡ ಜವಾಬ್ದಾರಿಯಾಗಿರುತ್ತದೆ. ಆದರೆ ವಾಸ್ತವವೇ ಬೇರೆ. ಈ ಸಂದರ್ಭದಲ್ಲಿ ನೂಕು ನುಗ್ಗಲು. ಸರಿಯಾಗಿ ಪರಿಶೀಲಿಸದೆ ಸಾಮಗ್ರಿಗಳು ಇಲ್ಲವೆಂದು ದೂರುವುದು ಸರ್ವೇಸಾಮಾನ್ಯ. ಆದ್ದರಿಂದ ಸರಿಯಾಗಿ ತರಬೇತಿ ಪಡೆದು ಮಾಹಿತಿ ಕೈಪಿಡಿಯನ್ನು ಅಧ್ಯಯನ ಮಾಡಿದರೆ ಚುನಾವಣಾ ಸಾಮಗ್ರಿಯ ಪರಿಶೀಲನೆ ಅತ್ಯಂತ ಸುಲಭ ಹಾಗೂ ಸರಳ.
ಇನ್ನು ಚುನಾವಣೆ ಮುಗಿದು ಚುನಾವಣೆ ಸಾಮಗ್ರಿಗಳನ್ನು ತಾಲೂಕು ಆಡಳಿತಕ್ಕೆ ಒಪ್ಪಿಸಲು ಬರುವ ಸಿಬ್ಬಂದಿ ಮಾನವ ಸಹಜ ತಾಳ್ಮೆಯನ್ನು ವಹಿಸಬೇಕು. ಒಮ್ಮೆಲೆ ನುಗ್ಗುವುದು, ಅಪೂರ್ಣ ಮಾಹಿತಿಯ ಕಾಗದ ಪತ್ರ, ಅನಾವಶ್ಯಕ ವಾದವಿವಾದ, ಟೀಮ್‌ನಲ್ಲಿ ಹೊಂದಾಣಿಕೆಯ ಕೊರತೆ ಇನ್ನೂ ಮುಂತಾವುಗಳು ಮತ್ತಷ್ಟು ವಿಳಂಬಕ್ಕೆ ಕಾರಣವಾಗುತ್ತದೆ.
ಆಡಳಿತ ವ್ಯವಸ್ಥೆ ಇದಕ್ಕೆ ಸರಿಯಾಗಿ ವ್ಯವಸ್ಥೆ ಮಾಡಿಕೊಂಡಿರುತ್ತದೆ. ಚುನಾವಣಾ ಸಿಬ್ಬಂದಿ ಇದಕ್ಕೆ ಜವಾಬ್ದಾರಿಯುತವಾಗಿ ಸಹಕರಿಸಬೇಕು. ಇತ್ತೀಚಿಗೆ ಚುನಾವಣಾ ಆಯೋಗ ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಹಾಗೂ ಇತರೆ ಲಕೋಟೆಗಳು ಎಂದು ಸರಳೀಕರಿಸಿ ಕಾಗದಪತ್ರ, ಲಕೋಟೆ ಮತ್ತು ಅನುಬಂಧಗಳನ್ನು ಒಪ್ಪಿಸಲು ಚುನಾವಣಾ ಸಿಬ್ಬಂದಿಗೆ ಅನುಕೂಲ ಮಾಡಿಕೊಟ್ಟಿದೆ.
ಇನ್ನು ವಾರ್ಡ್‌ಗಳಲ್ಲಿ ಬಿ.ಎಲ್.ಓ.ಗಳು ಚುನಾವಣಾ ಆಯೋಗ ಮತದಾರರಿಗೆ ನೀಡುವ ಮತದಾರರ ಚೀಟಿಯನ್ನು ಪ್ರತಿ ಮತದಾರರಿಗೆ ವ್ಯವಸ್ಥಿತವಾಗಿ ತಲುಪಿಸುವುದು ಅವರ ದೊಡ್ಡ ಜವಾಬ್ದಾರಿಯಾಗಿರುತ್ತದೆ. ಇದರಿಂದ ಪಿ.ಆರ್.ಓ.ಗಳಿಗೆ ಅರ್ಧದಷ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೆಯೇ ಬಿ.ಎಲ್.ಓ.ಗಳಿಗೆ ಸೂಕ್ತ ತರಬೇತಿ, ಉದ್ಯೋಗ ಭದ್ರತೆ ಮತ್ತು ಭತ್ಯೆಗಳನ್ನು ಸಕಾಲಕ್ಕೆ ನೀಡುವುದು ವ್ಯವಸ್ಥೆಯ ಜವಾಬ್ದಾರಿಯಾಗಿದೆ.
ಚುನಾವಣಾ ಕಾರ್ಯಕ್ಕೆ ಆಯೋಗ ನೇಮಕ ಮಾಡುವ ಸಿಬ್ಬಂದಿ ವರ್ಗದವರು ಚುನಾವಣಾ ಕಾರ್ಯವನ್ನು ಕಡ್ಡಾಯವಾಗಿ ನಿರ್ವಹಿಸುವುದು ನೌಕರರ ಪ್ರಮುಖ ಜವಾಬ್ದಾರಿಯಾಗಿರುತ್ತದೆ. (ಅನಾರೋಗ್ಯ, ವಿಕಲಚೇತನ ಮತ್ತಿತರೆ ಸಕಾರಣ ಹೊರತುಪಡಿಸಿ) ಸರ್ಕಾರ ನೀಡುವ ಎಲ್ಲಾ ಸೌಲಭ್ಯವನ್ನು ಅಪೇಕ್ಷಿಸುವ ನೌಕರರು ಚುನಾವಣಾ ಸಮಯದಲ್ಲಿ ಚುನಾವಣಾ ಕೆಲಸದಿಂದ ತಪ್ಪಿಸಿಕೊಳ್ಳಲು (ಕೆಲವರು) ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಇದರಲ್ಲಿ ಕೆಲವು ಪ್ರಭಾವಿಗಳು ಯಶಸ್ವಿಯಾಗುತ್ತಾರೆ. ಇದು ನೌಕರರ ಜವಾಬ್ದಾರಿಯಲ್ಲ, ನಮ್ಮನ್ನು ನಾವು ಆತ್ಮವಂಚನೆ ಮಾಡಿಕೊಂಡಂತೆ.
ಜನತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಕೂಡ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದರೆ ಚುನಾವಣೆ ಯಶಸ್ವಿಯಾದಂತೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳಿಗೆ ತಮ್ಮ ಹಕ್ಕು ಮತ್ತು ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರಗಳನ್ನು ಪರಿಣಾಮಕಾರಿಯಾಗಿ ಏರ್ಪಡಿಸಬೇಕು. ಕಾರ್ಯಕರ್ತರನ್ನು ನಿಯಂತ್ರಿಸಿ ಚುನಾವಣಾ ನಿಯಮಗಳನ್ನು ಗೌರವಿಸುವಂತೆ ಮಾಡಬೇಕಾದದ್ದು ರಾಜಕೀಯ ಪಕ್ಷ ಮತ್ತು ನೇತಾರರ ಪ್ರಮುಖ ಜವಾಬ್ದಾರಿಯಾಗಿದೆ. ಪೊಲೀಸ್ ಮತ್ತು ರಕ್ಷಣಾ ಇಲಾಖೆ ದೇಶದ ಮತದಾರರಲ್ಲಿ ಭಯಮುಕ್ತ ವಾತಾವರಣವನ್ನು ನಿರ್ಮಿಸಬೇಕು.
ಕೊನೆಯದಾಗಿ ಸಮೂಹ ಮಾಧ್ಯಮಗಳು ಅನಾವಶ್ಯಕವಾಗಿ ಯಾವುದೇ ವಿಷಯ, ವ್ಯಕ್ತಿ ಘಟನೆ ಮುಂತಾದವುಗಳನ್ನು ವಾಸ್ತವತೆಗೆ ದೂರವಾಗಿ ವೈಭವೀಕರಿಸಬಾರದು. ಪ್ರಜಾಪ್ರಭುತ್ವದ ಯಶಸ್ವಿ ಅಂಶಗಳಲ್ಲಿ ಸಮೂಹ ಮಾಧ್ಯಮ ಅತ್ಯಂತ ಮಹತ್ವ ಮತ್ತು ಪರಿಣಾಮಕಾರಿಯಾದದ್ದು. ಆದ್ದರಿಂದ ಮತದಾರ ಯಾವುದೇ ಆಸೆ ಆಕಾಂಕ್ಷೆಗಳಿಗೆ ಒಳಗಾಗಿ ಮತದಾನ ಮಾಡದಂತೆ ಜಾಗೃತಿ ಮೂಡಿಸಬೇಕು. ಇದು ಆಧುನಿಕ ಮಾಧ್ಯಮ ಕ್ಷೇತ್ರದ ಬಹುದೊಡ್ಡ ಜವಾಬ್ದಾರಿಯಾಗಿರುತ್ತದೆ. ಸಾರ್ವಜನಿಕ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

-ಡಾ. ಬಿ.ಜಿ. ಧನಂಜಯ
ಸಹಾಯಕ ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭದ್ರಾವತಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement