ವೀಸಾ ನಿರಾಕರಣೆಯೆಂಬ ಗಾಯಕ್ಕೆ ಮೋದಿ ಮದ್ದೇನು?
ಮೋದಿಯವರಿಗೆ ವೀಸಾ ನಿರಾಕರಿಸಿದ್ದರ..
ನರೇಂದ್ರ ಮೋದಿಯವರಿಗೆ ವೀಸಾ ನಿರಾಕರಿಸಿದ್ದರ ಹಿಂದೆ ಯಾವ ರೀತಿಯ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿದವು ಮತ್ತು ವಿದೇಶಗಳಿಂದ ದೇಣಿಗೆ ಪಡೆಯುವ ಭಾರತದ ಎನ್ಜಿಒಗಳು ಹೇಗೆ ಭಾರತದಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ, ಭಾರತ ವಿರೋಧಿ ಕುಕೃತ್ಯದಲ್ಲಿ ತೊಡಗಿವೆ ಎನ್ನುವುದನ್ನು ಅನಾವರಣಗೊಳಿಸುವ ಲೇಖನ ಇಲ್ಲಿದೆ...
ನರೇಂದ್ರ ಮೋದಿಯವರ ಚುನಾವಣಾ ವಿಜಯ ಮತ್ತು ಪ್ರಧಾನಿ ಹುದ್ದೆಗೆ ಅವರ ಆರೋಹಣ ಪ್ರಪಂಚದಾದ್ಯಂತ ಎಲ್ಲಾ ರೀತಿಯ ಪ್ರತಿಕ್ರಿಯೆಗಳನ್ನೂ ಹುಟ್ಟುಹಾಕಿದೆ. "ಇದು ಹೇಗೆ ಸಾಧ್ಯವಾಯಿತು?" ಎನ್ನುವುದರಿಂದ ಹಿಡಿದು "ಯಾರು ಈ ವ್ಯಕ್ತಿ" ಎನ್ನುವವರೆಗೂ ಈ ಪ್ರತಿಕ್ರಿಯೆಗಳು ಹರಡಿಕೊಂಡಿವೆ. ಆದರೆ ಅಮೆರಿಕ ಪ್ರಪಂಚದ ಏಕೈಕ 'ಸೂಪರ್ಪವರ್' ಎನ್ನುವ ಸರ್ವೋತ್ಕೃಷ್ಟ ಸ್ಥಾನ ಹೊಂದಿರುವುದರಿಂದ ಅದರ ಪ್ರತಿಕ್ರಿಯೆಗಳು ಆಳವಾದ ವಿಶ್ಲೇಷಣೆಗೆ ಒಳಪಡಲೇಬೇಕಿದೆ. ಭಾರತ ಆ ದೇಶದೊಂದಿಗೆ ಗಾಢ ಒಡನಾಟ ಇಟ್ಟುಕೊಂಡಿದೆ ಎನ್ನುವುದಕಷ್ಟೇ ಅಲ್ಲ, ಬದಲಾಗಿ ಪ್ರಧಾನಿ ಮೋದಿಯವರ ಅವಧಿಯಲ್ಲಿ ಈ ಒಡನಾಟ ಮುಂದೆ ಯಾವ ದಿಕ್ಕು ಪಡೆಯಲಿದೆ ಎನ್ನುವುದನ್ನೂ ನಿರ್ಧರಿಸಲಿಕ್ಕಾಗಿ.
ಮೋದಿಯವರ ಕುರಿತ ಅಮೆರಿಕದ ಆಲೋಚನೆಗಳನ್ನು ತಿಳಿದುಕೊಳ್ಳಲು ನಾವು ಕೆಲ ದಿನಗಳಿಂದ ಮಾಧ್ಯಮ ವರದಿಗಳನ್ನೇ ಅವಲಂಬಿಸಿದ್ದೇವೆ. ಆದಾಗ್ಯೂ ಮಾಧ್ಯಮಗಳು 'ಅಧಿಕೃತ ಮೂಲಗಳಿಂದ' ಎಂದು ಹೇಳುತ್ತವಾದರೂ, ಸುದ್ದಿಗಳಲ್ಲಿನ ಒಂದು ಸಂಗತಿಯಂತೂ ಒಂದೇ ರೀತಿಯಲ್ಲೇ ಗೋಚರಿಸುತ್ತಿದೆ: "ಅಮೆರಿಕ ಅಭೂತಪೂರ್ವ ರೀತಿಯಲ್ಲಿ ಮೋದಿಯವರೆಡೆಗೆ ಕೈ ಚಾಚಿದೆ". ಭಾರತಕ್ಕೆ "ವಿಶೇಷ ಸ್ಥಾನವನ್ನು" ಕೊಡಲಿದೆ, "ಭಾರತದ ರಕ್ಷಣಾ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಉತ್ಸುಕವಾಗಿದೆ", ಎಲ್ಲದಕ್ಕಿಂತ ಹೆಚ್ಚಾಗಿ "ಶಿಷ್ಟಾಚಾರವನ್ನು ಮುರಿದು ಸೆಪ್ಟೆಂಬರ್ನಲ್ಲಿ ಅವರೊಂದಿಗೆ ಮಾತುಕತೆಯಾಡಲಿದೆ" ಇತ್ಯಾದಿ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಮೋದಿ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ಕೊಡಬಹುದು. ಆದರೂ ಇದೆಲ್ಲವೂ ಮಾಧ್ಯಮಗಳ ಊಹಾಪೋಹಗಳಷ್ಟೆ.
ಇದರಿಂದಾಗಿ ಸಹಜವಾಗಿಯೇ ಪ್ರಶ್ನೆಗಳು ಉದ್ಭವವಾಗುತ್ತವೆ. 2005ರಲ್ಲಿ ಮೋದಿಯವರಿಗೆ ವೀಸಾ ನಿರಾಕರಿಸಿದಕ್ಕಾಗಿ ಅಮೆರಿಕ ಈಗ ತೇಪೆ ಹಚ್ಚುವ ಪರೋಕ್ಷ ಪ್ರಯತ್ನ ಮಾಡುತ್ತಿದೆಯೇ? ಮೋದಿ ನಾಯಕತ್ವದಲ್ಲಿ ಬಲಿಷ್ಟ(ಅಮೆರಿಕ ಅಧಿಪತ್ಯಕ್ಕೆ ಅವಿಧೇಯ ಎಂದು ಓದಿಕೊಳ್ಳಿ) ಏಷ್ಯಾ ರಾಷ್ಟ್ರಗಳು ಹೊರಹೊಮ್ಮಿದರೆ ಹೇಗೆಂಬ ಭಯವೇ? ಇನ್ಮುಂದೆ ಭಾರತವನ್ನು ತಾನು ಲಘುವಾಗಿ ಪರಿಗಣಿಸುವುದಿಲ್ಲ ಎನ್ನುವ ಸೂಚನೆಯೇ? ವಾಸ್ತವವಾಗಿ, ಮೇ 15ರ ವರೆಗೂ ಅಮೆರಿಕ 'ಮೋದಿ ಪ್ರಧಾನಿಯಾದ ಕೂಡಲೇ ವೀಸಾ ಕೊಡುವುದಿಲ್ಲ' ಎಂದು ಹೇಳಿತ್ತು.
ಬಹುಶಃ ಅಮೆರಿಕದ ಈ ಹೆಜ್ಜೆಗೆ ಮೇಲಿನ ಯಾವುದಾದರೊಂದು ಅಥವಾ ಎಲ್ಲಾ ಅಂಶಗಳೂ ಕಾರಣವಿರಬಹುದು. ಇನ್ನು ಭಾರತದ ಅಧಿಕೃತ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಈ ಸುದ್ದಿಗಳನ್ನು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಲಾಗಿದೆ ಎನ್ನುವ ಅನುಮಾನಗಳೂ ಇವೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಅದರ ಗುರಿ 'ಪ್ರಸ್ತಾಪಿತ ಪ್ರವಾಸ'ದ ಬಗ್ಗೆ ಸಾರ್ವಜನಿಕ ಭಾವನೆಯನ್ನು ತಿಳಿದುಕೊಳ್ಳುವುದೇ ಆಗಿರಬಹುದು.
ಹೀಗಾಗಿ, 'ಹೂಂ' ಅನ್ನುವುದಕ್ಕಿಂದ ಮುನ್ನ 'ವೀಸಾ ನಿರಾಕರಣೆಯ' ಬಗ್ಗೆ ಮೋದಿ ಮತ್ತು ಅಮೆರಿಕ ಮಾತನಾಡಲೇಬೇಕಿದೆ.
ಇದೆಲ್ಲ ಶುರುವಾದದ್ದು ಹೀಗೆ: ನಿಜಕ್ಕೂ ಈ ಅಧ್ಯಾಯದ ಶುರುವಾತು ಆದದ್ದು 1994ರಲ್ಲಿ, ಅಂದರೆ ಯಾವಾಗ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಮೇಲಿನ ಬಹುಪಾಲು ಹಿಡಿತ ರಿಪಬ್ಲಿಕನ್ನರಿಗೆ ಸಿಕ್ಕಿತೋ ಆಗ. ಅದಾದ ಎರಡು ವರ್ಷದ ನಂತರ 'ನ್ಯಾಶನಲ್ ಅಸೋಷಿಯೇಷನ್ ಆಫ್ ಇವ್ಯಾಂಜಲಿಕಲ್ಸ್' ಎನ್ನುವ ಸುಮಾರು 42,000 ಇವ್ಯಾಂಜೆಲಿಕಲ್ ಚರ್ಚ್ಗಳ ಕೂಟ ಸಮ್ಮೇಳನವೊಂದನ್ನು ಆಯೋಜಿಸಿತು. ಈ ಸಮ್ಮೇಳನದ ವ್ಯವಸ್ಥೆಯನ್ನು ನೋಡಿಕೊಂಡದ್ದು ವಾಶಿಂಗ್ಟನ್ನ ಸಂಪ್ರದಾಯವಾದಿ ಥಿಂಕ್ ಟ್ಯಾಂಕ್ ಆದ ಹಡ್ಸನ್ ಇನ್ಸ್ಟಿಟ್ಯೂಟ್ನ 'ಸೆಂಟರ್ ಫಾರ್ ರಿಲೀಜಿಯಸ್ ಫ್ರೀಡಂ' ವಿಭಾಗದ ನಿರ್ದೇಶಕಿ ನೀನಾ ಶಿಯ. ಆ ಸಮ್ಮೇಳನದ ಒಟ್ಟಾರೆ ಫಲಿತಾಂಶವನ್ನು ಅದರಲ್ಲಿ ಪಾಲ್ಗೊಂಡವರ ಮಾತಲ್ಲೇ ಹೇಳಬೇಕೆಂದರೆ, "ಸಹ ಆಸ್ತಿಕರಿಗೆ ಮತ್ತು ಅನ್ಯ ಮತದವರಿಗೆ ಧರ್ಮದ ಹೆಸರಲ್ಲಿ ಅಸಹನೀಯ ಕಿರುಕುಳ ಕೊಡುತ್ತಿರುವವರನ್ನು ಹತ್ತಿಕ್ಕಲು ಕ್ರಮಕೈಗೊಳ್ಳಬೇಕೆಂದು ಅಮೆರಿಕ ಸರ್ಕಾರವನ್ನು ಒತ್ತಾಯಿಸುವುದು"
ಎರಡು ವರ್ಷಗಳ ನಂತರ, ಅಂದರೆ 27 ಜನವರಿ 1998ರಂದು ಇಂಟರ್ನ್ಯಾಷನಲ್ ರಿಲೀಜಿಯಸ್ ಫ್ರೀಡಂ ಆ್ಯಕ್ಟ್(ಐಆರ್ಎಫ್ಎ) ಜಾರಿಗೊಂಡಿತು. ಇದನ್ನು ಮೊದಲು ಪರಿಚಯಿಸಿದ್ದು ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಫ್ರಾಂಕ್ ವೂಲ್ಫ್. ಈ ಕಾನೂನಿನಿಂದಾಗಿ, ಸರ್ಕಾರಿ ಪ್ರಾಯೋಜಿತ ಏಜೆನ್ಸಿಯಾದ United States Commission on International Religious Freedom (ಯುಎಸ್ಸಿಐಆರ್ಎಫ್) ಹುಟ್ಟಿಕೊಂಡಿತು. ಮೋದಿ ಅವರಿಗೆ ವೀಸಾ ನಿರಾಕರಿಸಿದ್ದರ ಹಿಂದೆ ಯುಎಸ್ಸಿಐಆರ್ಎಫ್ನ ಕುಂತಂತ್ರವೇ ಕೆಲಸ ಮಾಡಿತು.
ಒಂದಂತೂ ಸತ್ಯ, ಅಮೆರಿಕದಲ್ಲಿ ಚರ್ಚ್ ಲಾಬಿಗಳಿಗೆ ಮಾತ್ರ ಎಂದಿಗೂ ಹಣದ ವಿಷಯದಲ್ಲಿ ಕೊರತೆ ಎದುರಾಗುವುದಿಲ್ಲ. 42,000 ಚರ್ಚಗಳು ಒಂದೇ ವೇದಿಕೆಗೆ ಬಂದವೆಂದರೆ, ಸಹಜವಾಗಿಯೇ ಅವು ತಮಗೆ ಬೇಕಿರುವ ಫಲಿತಾಂಶವನ್ನೇ ಪಡೆಯುತ್ತವೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಈ ಚರ್ಚ್ ಲಾಬಿಗೆ ರಾಜಕಾರಣಿಗಳಿಂದ 'ಸರ್ಕಾರಿ' ಸ್ಥಾನಮಾನ ದೊರೆತುಬಿಟ್ಟಿತು! ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಐಆರ್ಎಫ್ಎ ಮತ್ತು ಯುಎಸ್ಸಿಐಆರ್ಎಫ್ತೋರಿಸುತ್ತಿದ್ದ ಕಾಳಜಿಯೆಲ್ಲ ಅವುಗಳ ಮುಖವಾಡವಾಗಿತ್ತಷ್ಟೆ. ಪ್ರಪಂಚದಾದ್ಯಂತ ಕ್ರಿಶ್ಚಿಯನೇತರರನ್ನು ಮತಾಂತರ ಮಾಡುವ ಸಂಗತಿ ಮಾತ್ರ ಅವುಗಳಿಂದ ಹೊರಬರಲೇ ಇಲ್ಲ. ಇದರಿಂದಾಗಿ ಅಮೆರಿಕದ ವಿದೇಶಾಂಗ ನೀತಿಗಳಲ್ಲಿ 'ಕ್ರೈಸ್ತ ಧರ್ಮ ವಿಸ್ತರಣೆ' ಅಧಿಕೃತ ಅಸ್ತ್ರವಾಗಿ ಸ್ಥಾನ ಪಡೆದುಬಿಟ್ಟಿತು.
ಇಲ್ಲಿ ಇನ್ನೊಂದು ರೀತಿಯ ಇಬ್ಬಗೆತನವಿದೆ. ಐಆರ್ಎಫ್ಎ ಬಗ್ಗೆ ಫ್ರಾಂಕ್ ವೂಲ್ಫ್ನ ಪರಿಕಲ್ಪನೆ- ಯಾವ ರಾಷ್ಟ್ರಗಳಲ್ಲಿ "ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿದೆಯೋ"(ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಕ್ರಿಶ್ಚಿಯನ್ ಮತಾಂತರವನ್ನು ವಿರೋಧಿಸಲಾಗುತ್ತದೋ) ಅವಕ್ಕೆ ಸ್ಯಾಂಕ್ಷನ್ ಒದಗಿಸುವುದಾಗಿತ್ತು. ಆದರೆ, ಸರ್ವಾಧಿಕಾರಿ ರಾಷ್ಟ್ರಗಳಲ್ಲೂ ವಿಸ್ತಾರವಾದ ಉದ್ಯಮ ಹೊಂದಿದ್ದ ಬಲಿಷ್ಠ ಕಾರ್ಪೊರೆಟ್ ಶಕ್ತಿಗಳ ವಿರೋಧದ ಮುಂದೆ ಅದರ ಆಟ ನಡೆಯಲಿಲ್ಲ. ಇಂಥ ವಿಷಯಗಳಲ್ಲಿ 'ವ್ಯಾಪಾರವೇ' ಮೇಲುಗೈ ಸಾಧಿಸುತ್ತದೆ. ಹಾಗಾಗಿ, 42000 ಇವ್ಯಾಂಜೆಲಿಕಲ್ ಚರ್ಚ್ಗಳು ಕಾರ್ಪೊರೆಟ್ ಲಾಬಿಯ ಮುಂದೆ ಶಕ್ತಿಹೀನವಾದವು. ಆದರೆ ಅಂಥ ಸೌಭಾಗ್ಯ ಭಾರತಕ್ಕಿರಲಿಲ್ಲ. ಬೆನ್ನುಲುಬಿಲ್ಲದ ಮನಮೋಹನ್ ಸಿಂಗ್ ಅವರಿಂದಾಗಿ ಯುಎಸ್ಸಿಐಆರ್ಎಫ್ ನಿರಾತಂಕವಾಗಿ ಭಾರತದಲ್ಲಿ ಆಟವಾಡತೊಡಗಿತು.
ಇಲ್ಲಿ ಫೆಲಿಸ್ ಡಿ. ಗೇರ್ ಎಂಬ ವ್ಯಕ್ತಿಯ ಆಗಮನವಾಗುತ್ತದೆ. 'ವೀಸಾ ನಿರಾಕರಣೆ' ವ್ಯವಹಾರದಲ್ಲಿ ಮುಂಚೂಣಿಯಲ್ಲಿದ್ದ ಜಾಹಿರ್ ಜನ್ಮೊಹಮದ್ ಅವರ ಮಾತಲ್ಲೇ ಫೆಲಿಸ್ ಬಗ್ಗೆ ಕೇಳೋಣ: "ಅಮೆರಿಕದ ಯಹೂದ್ಯ ಸಮಿತಿಯ ಮಾನವ ಹಕ್ಕು ಕಾರ್ಯಕ್ರಮದ ನಿರ್ದೇಶಕಿಯಾಗಿದ್ದ ಫೆಲಿಸ್, 2001ರಲ್ಲಿ ಯುಎಸ್ಸಿಐಆರ್ಎಫ್ನ ಕಮೀಷನರ್ ಆಗಿ ಆಯ್ಕೆ ಆದರು. ನಂತರದ ದಿನಗಳಲ್ಲಿ ಅನ್ಯ ಧರ್ಮಗಳಿಗೂ ತಮ್ಮ ತಂಡಗಳನ್ನು ವಿಸ್ತರಿಸುವ ಬಗ್ಗೆ ಆಕೆ ನಿರ್ಧರಿಸಿದರು. "ನಮ್ಮ ದೃಷ್ಟಿಯನ್ನು ವಿಸ್ತರಿಸಲು ಬೇರೆಡೆಯೂ ಗಮನಹರಿಸಬೇಕು" ಎಂದು ಸಂದರ್ಶನವೊಂದರಲ್ಲಿ ಫೆಲಿಸ್ ಹೇಳಿದ್ದರು. ಫೆ. 2002ರಂದು ಗುಜರಾತ್ ಗಲಭೆಯ ಬಗ್ಗೆ ತಿಳಿದಾಗ ಆಕೆಗೆ ತನ್ನ ಮನೋಭೀಷ್ಟವನ್ನು ಈಡೇರಿಸಿಕೊಳ್ಳುವ ಅವಕಾಶ ಒದಗಿಬಂತು. ಗುಜರಾತ್ ಗಲಭೆಯಿಂದಾದ ನಷ್ಟವನ್ನು ಲೆಕ್ಕಹಾಕಲು ಅಧಿಕೃತ ಪ್ರವಾಸವನ್ನು ಆಯೋಜಿಸುವುದಕ್ಕೆ ಫೆಲಿಸ್ ಪ್ರಯತ್ನಿಸಿದಳಾದರೂ, ಭಾರತವನ್ನು ಪ್ರವೇಶಿಸುವುದಕ್ಕೆ ಆಕೆಯ ಗುಂಪಿಗೆ ಅನುಮತಿ ದೊರಕಲಿಲ್ಲ. ಅನುಮತಿ ಸಿಗದಿದ್ದಾಗ ಆಕೆ ಮಾಡಿದ್ದೇನು ಗೊತ್ತೆ? 10 ಜೂನ್ 2002ರಂದು ಆಯೋಜನೆಗೊಂಡ ವಿಚಾರಣೆಗೆ 'ಸಾಕ್ಷಿ' ಹೇಳಲು ಕೆಲವು ಭಾರತೀಯರನ್ನೇ ಅಮೆರಿಕಕ್ಕೆ ಕರೆಸಿಕೊಂಡಳು! ಆ ಭಾರತೀಯರು ಈಗ ತಮ್ಮ ಕುಖ್ಯಾತಿಯಿಂದಾಗಿ ನಮಗೆ ಪರಿಚಿತರು: ತೀಸ್ತಾ ಸೇತಲ್ವಾಡ್, ಫಾದರ್ ಸೆಡ್ರಿಕ್ ಪ್ರಕಾಶ್, ನಾಜಿದ್ ಹುಸೇನ್( ಗಲಭೆಯಲ್ಲಿ ಮೃತಪಟ್ಟ ಗುಜರಾತ್ ಸಂಸದ ಎಹಸಾನ್ ಜಾಫ್ರಿಯ ಅಳಿಯ), ಕಮಲ್ ಮಿತ್ರ(ಜೆಎನ್ಯುನ ಮಾಜಿ ಪ್ರಾಧ್ಯಾಪಕ, ಈಗ 'ಆಪ್' ಸದಸ್ಯ) ಮತ್ತು ಸುಮಿತ್ ಗಂಗೂಲಿ.
ಆ ವಿಚಾರಣೆಯ ಲಿಪ್ಯಂತರವನ್ನು ಓದಿದರೆ ಅನೇಕ ವಿಷಯಗಳು ಸ್ಪಷ್ಟವಾಗುತ್ತವೆ:
ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದ್ದ ಗುಜರಾತ್ ಗಲಭೆ ಯುಎಸ್ಸಿಐಆರ್ಎಫ್ನ ವ್ಯಾಪ್ತಿಯಲ್ಲಿ ಬರುತ್ತಿರಲಿಲ್ಲ.
ಅದು ವಿಚಾರಣೆಯಾಗಿರದೆ, ಕೇವಲ ನರೇಂದ್ರ ಮೋದಿ ಮತ್ತು ಅನೇಕ ಹಿಂದು ಸಂಘಟನೆಗಳಿಗೆ ರಾಕ್ಷಸ ರೂಪ ಕೊಡುವ ಪೂರ್ವನಿರ್ಧರಿತ ಸಂಚಾಗಿತ್ತು.
ತಮ್ಮ ಕಥೆಯನ್ನು ಹೇಳಲು ಭಾರತ/ ಗುಜರಾತ್ ಸರ್ಕಾರ ಅಥವಾ ಯಾವುದೇ ಹಿಂದು ಸಂಘಟನೆಗಳನ್ನು ಆಹ್ವಾನಿಸಲಾಗಿರಲಿಲ್ಲ.
ಗುಜರಾತ್ ಭೇಟಿಗೆ ಯುಎಸ್ಸಿಐಆರ್ಎಫ್ಗೆ ಭಾರತ ಅನುಮತಿ ನೀಡಿರಲಿಲ್ಲವಾದ್ದರಿಂದ ಆ ವಿಚಾರಣೆಯ ನಂತರ ಹೊರಬಂದ ಶಿಫಾರಸುಗಳೆಲ್ಲವೂ ಭಾರತದ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಹೇಳಿಕೆಯಿಂದ ರೂಪಗೊಂಡಿದ್ದವು.
ಗುಜರಾತ್ ಗಲಭೆಯ ಮೇಲೆ ಸರ್ಕಾರಿ ತನಿಖೆ ಶುರುವಾಗಿದ್ದವೋ ಇಲ್ಲವೋ ಅಷ್ಟರಲ್ಲೇ ಯುಎಸ್ಸಿಐಆರ್ಎಫ್ ಮೋದಿಯವರನ್ನು 'ಅಪರಾಧಿ' ಎಂದು ಘೋಷಿಸಿಬಿಟ್ಟಿತು.
2005ರಲ್ಲಿ ಮೋದಿಗೆ ವೀಸಾ ನಿರಾಕರಿಸುವ ಅಧ್ಯಾಯಕ್ಕೆ ಯುಎಸ್ಸಿಐಆರ್ಎಫ್ ಮುನ್ನುಡಿ ಬರೆಯಿತು.
ಮುಂದೆ ಗುಜರಾತ್ ಗಲಭೆಯ ಪುಟಗಳು ಪಡೆದ ರೂಪದ ಮೇಲೆ ಈ ವಿಚಾರಣೆ ಗಾಢ ಪರಿಣಾಮ ಬೀರಿತು. "ಸಾವಿರಾರು ಮುಸಲ್ಮಾನರ ಕೊಲೆಯಾಯಿತು", "ಸಾಮೂಹಿಕ ಹತ್ಯಾಕಾಂಡ", "ನಾಜಿ", "ಹಿಟ್ಲರ್" ಮತ್ತು "ಜನಾಂಗೀಯ ಹತ್ಯೆ" ಎನ್ನುವ ಪದಪುಂಜಗಳನ್ನೆಲ್ಲ ವಿಚಾರಣೆಯ ವೇಳೆ ತೀಸ್ತಾ ಸೇತಲ್ವಾಡ್ ಮತ್ತು ತಂಡ ಅತ್ಯಂತ ಸಹಜವೆನ್ನುವಂತೆ ಹರಿಬಿಟ್ಟಿತು. ಗುಜರಾತ್ ಗಲಭೆಯ ಬುನಾದಿಯ ಮೇಲೆ ದೊಡ್ಡ ಉದ್ಯಮವೇ ಬೆಳೆದುನಿಂತಿತು. ನಾಟಕಗಳಾದವು, ಡಾಕ್ಯುಮೆಂಟರಿ ಚಿತ್ರಗಳು ಸಿದ್ಧವಾದವು, ಪುಸ್ತಕಗಳು, ಪದ್ಯಗಳು ಮತ್ತು ಲೇಖನಗಳು-ಅಕಾಡೆಮಿಕ್ ಪ್ರಬಂಧಗಳು ಯಥೇಚ್ಚವಾಗಿ ಹರಿದುಬಂದವು. ಇವೆಲ್ಲವೂ ಈ 'ವಿಚಾರಣೆಯ' ಸೂಕ್ಷ್ಮ, ಆಲಂಕರಿತ ಆವೃತ್ತಿಯಂತೆಯೇ ಇದ್ದವು.
ನಮ್ಮ ಭಾರತೀಯ ಸಾಕ್ಷಿಗಳು ಆ ವಿಚಾರಣೆಯ ವೇಳೆ ಯಾವ ಶಿಫಾರಸುಗಳನ್ನು ಮಾಡಿದರು ಎನ್ನುವುದನ್ನು ನೋಡಬೇಕು:
ಫಾದರ್ ಪ್ರಕಾಶ್ "ಅಮೆರಿಕ ಸರ್ಕಾರಕ್ಕೆ ಮತ್ತು ಪ್ರಪಂಚದ ಇತರ ರಾಷ್ಟ್ರಗಳಿಗೆ ಪ್ರಬಲ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಬೇಕೆಂದು" ಯುಎಸ್ಸಿಐಆರ್ಎಫ್ಗೆ ಕೇಳಿಕೊಂಡರು.
"ಭಾರತದ ಮೇಲೆ ಕಠಿಣ ಪದಪ್ರಯೋಗ ಮಾಡಬೇಕು ಮತ್ತು ಭಾರತದಲ್ಲಿರುವ ಧಾರ್ಮಿಕ ಹಕ್ಕನ್ನು ಬದಲಿಸಲು ಭಾರತದಲ್ಲಿರುವ ಅನೇಕ ಸರ್ಕಾರೇತರ ಸಂಸ್ಥೆಗಳನ್ನು(ಎನ್ಜಿಒ) ಬಳಸಿಕೊಳ್ಳಬೇಕು" ಎಂದು ಅಮೆರಿಕಕ್ಕೆ ಡಾ. ಸುಮಿತ್ ಗಂಗೂಲಿ ಮೊರೆಯಿಟ್ಟರು. ಇಷ್ಟೇ ಅಲ್ಲ, ಬಿಜೆಪಿಯನ್ನು ರಾಜಕೀಯವಾಗಿ ಏಕಾಂಗಿಯಾಗಿಸಲು ರಾಜಕೀಯ ವಿರೋಧಿಗಳೊಂದಿಗೆ ಲಾಬಿ ಮಾಡಬೇಕು ಎನ್ನುವ ಸಲಹೆಯನ್ನೂ ಕೊಟ್ಟರು!
ಇವೆಲ್ಲದರಿಂದಾಗಿ ಯುಎಸ್ಸಿಐಆರ್ಎಫ್ ಶಿಫಾರಸುಗಳು ಹುಟ್ಟಿಕೊಂಡವು. ಅವುಗಳಲ್ಲಿ ಎಲ್ಲಕ್ಕಿಂತಲೂ ಮುಖ್ಯವಾದ ಶಿಫಾರಸೆಂದರೆ, "ಅಮೆರಿಕ ಮತ್ತು ಖಾಸಗಿ ವ್ಯಕ್ತಿಗಳು ಒಟ್ಟುಗೂಡಿ ಭಾರತದಲ್ಲಿ ಕೋಮು ಸೌಹಾರ್ದ್ಯವನ್ನು ಪಸರಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳನ್ನು ಬಲಪಡಿಸಬೇಕು" ಎಂಬುದಾಗಿತ್ತು. ಬಹುಶಃ ಈ ಕಾರಣಕ್ಕೋ ಏನೋ ತೀಸ್ತಾ ಸೇತಲ್ವಾಡ್ಗೆ 2004ರಲ್ಲಿ ಫೋರ್ಡ್ ಫೌಂಡೇಷನ್ನಿಂದ 90,000 ಮತ್ತು 2009ರಲ್ಲಿ 2,50,000 ಅಮೆರಿಕನ್ ಡಾಲರ್ ಆರ್ಥಿಕ ಸಹಾಯ ಸಿಕ್ಕಿತು! ಇನ್ನು ಗುಜರಾತ್ ವಿಷಯವನ್ನು ಜೀವಂತವಾಗಿಡಲು ಆಕೆಗೆ ಸಿಕ್ಕ ಭಾರೀ ಹಣದ ವಿಷಯ ಬೇರೆ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಅದನ್ನೇ ಎನ್ನುವಂತೆ ಯುಎಸ್ಸಿಐಆರ್ಎಫ್ನ ವಿಚಾರಣೆಯ ಫಲಿತಾಂಶ, ಭಾರತ ದ್ವೇಷಿಗಳಿಗೆ ಮತ್ತು ಹಿಂದೂ ದೂಷಕರಿಗೆ ಹೇಳಿ ಮಾಡಿಸಿದಂತಿತ್ತು. ಅಮೆರಿಕದಲ್ಲಿ ಬಲಿಷ್ಠ ಗುಂಪೊಂದು ಹುಟ್ಟಿಕೊಂಡು ಅದರ ಬೇರುಗಳು ಸರ್ಕಾರದ ಮಟ್ಟದಲ್ಲಿ ಹರಡಿ ಭಾರತಕ್ಕೂ ವ್ಯಾಪಿಸಿದವು. ಈ ಲಾಬಿಯನ್ನು ಮುನ್ನಡೆಸಿದವರು ಭಾರತದ ಇವ್ಯಾಂಜಲಿಸ್ಟ್ ಜಾನ್ ಪ್ರಭುದಾಸ್ ಮತ್ತು ರಾಜು ರಾಜಗೋಪಾಲ್(ನಿವೃತ್ತ ವೈದ್ಯ). ಇವರಿಬ್ಬರೂ ಸೇರಿಕೊಂಡು 2002ರ ಚಳಿಗಾಲದಲ್ಲಿ ಗುಜರಾತ್ಗೆ ಭೇಟಿ ನೀಡಲು ರಿಪಬ್ಲಿಕನ್ ಪ್ರತಿನಿಧಿಗಳಾದ ಜೋಯಿ ಪಿಟ್ಸ್ ಮತ್ತು ಫ್ರಾಂಕ್ ವೂಲ್ಫ್ರ ಮನವೊಲಿಸಿದರು. ಆ ನಡೆ ಎಲ್ಲ ರೀತಿಯಿಂದಲೂ ಯಶಸ್ವಿಯಾಗಿತ್ತು, ಏಕೆಂದರೆ ಈ ಗುಂಪು ಕೆಲವೇ ಅವಧಿಯಲ್ಲಿ ಅತ್ಯಂತ ಪ್ರಭಾವಿಯಾಗಿ ಬೆಳೆದುನಿಂತಿತು.
ಇದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬೇಕೆಂದರೆ ಕೆಲವು ರಿಪಬ್ಲಿಕನ್ ಪ್ರತಿನಿಧಿಗಳು ನಿರ್ವಹಿಸಿದ ಪಾತ್ರಗಳನ್ನು ವಿಶ್ಲೇಷಿಸಬೇಕಾಗುತ್ತದೆ.
ಫ್ರಾಂಕ್ ವೂಲ್ಫ್(ಮುಂದೆ ಕಾನೂನಾಗಿ ಬದಲಾದ 'ಐಆರ್ಎಫ್ಎ' ಮಸೂದೆಯನ್ನು ಪರಿಚಯಿಸಿದ ವ್ಯಕ್ತಿ), ಜೋಯಿ ಪಿಟ್ಸ್, ಟ್ರೆಂಟ್ ಫ್ರಾಂಕ್ಸ್ ಮತ್ತು ಡ್ಯಾನ್ ಬರ್ಟನ್. ರಾಜಕಾರಣದ ಹೊರತಾಗಿ ಇವರೆಲ್ಲರಲ್ಲಿ ಪ್ರಮುಖ ಸಾಮ್ಯತೆಯೊಂದಿದೆ. ಇವರೆಲ್ಲರೂ ಕ್ರೈಸ್ತ ಮತ ಪ್ರಚಾರದ ಪ್ರಬಲ ಬೆಂಬಲಿಗರು. ಇವರು ಪ್ರಮುಖವಾಗಿ ಮಾಡಿದ ಕೆಲಸಗಳೆಂದರೆ ಕ್ರೈಸ್ತ ಮತಕ್ಕೆ ಅನುಕೂಲವಾದ ಕಾನೂನು ರಚನೆಗೆ ಸಹಾಯ ಮಾಡಿದ್ದು, ಧರ್ಮ ಪ್ರಚಾರಕ ಕ್ರೈಸ್ತ ಸಂಘಟನೆಗಳಿಗೆ ಆರ್ಥಿಕ ಸಹಾಯ ದೊರಕಿಸಿಕೊಟ್ಟದ್ದು ಮತ್ತು ಧರ್ಮ ಪ್ರಚಾರಕ್ಕೆ ಅಡ್ಡಿಯಾಗುವ ತೊಂದರೆಗಳನ್ನು ನಿವಾರಿಸಿದ್ದು.
ಜೋ ಪಿಟ್ಸ್ ಮತ್ತು ಫ್ರಾಂಕ್ ವೂಲ್ಫ್ ಅತ್ಯಂತ ಬಲಿಷ್ಠ ಕ್ರಿಶ್ಚಿಯನ್ ಮೂಲಭೂತವಾದಿ ಸಂಸ್ಥೆಯಾದ 'ದಿ ಫೆಲೋಶಿಪ್'ನ ಸಕ್ರಿಯ ಸದಸ್ಯರೂ ಹೌದು. 2002ರಲ್ಲಿ ಪಿಟ್ಸ್ ಮತ್ತು ವೂಲ್ಫ್ಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ಈ ಸಂಸ್ಥೆ ಹಣ ಒದಗಿಸಿತ್ತು. ಮುಷರಫ್ರನ್ನು ಭೇಟಿ ಮಾಡಿದ ಈ ಜೋಡಿ ಅವರಿಗೆ ಹೇಳಿದ್ದೇನು ಗೊತ್ತೆ? "ನಾವೆಲ್ಲ ಒಂದೇ ಪ್ರಾರ್ಥನಾ ಗುಂಪಿನ ಸದಸ್ಯರು...ನಾವು ಆಪ್ತಮಿತ್ರರು.'!
ಡ್ಯಾನ್ ಬರ್ಟನ್ ತಮ್ಮ ಪ್ರಚಾರಕ್ಕೆ ಅಕ್ರಮ ಫಂಡ್ ಪಡೆದಿದ್ದಕ್ಕಾಗಿ 2011ರಲ್ಲಿ ಎಫ್ಬಿಐನ ಬಲೆಗೆ ಸಿಕ್ಕಿಬಿದ್ದವರು. ಇಲ್ಲಿ ಒಂದು ವಿಚಾರ ಗಮನಾರ್ಹ. ಐಆರ್ಎಫ್ಸಿ ಅಥವಾ ಇನ್ನಿತರ ಪ್ರತಿನಿಧಿಗಳು ಎಂದಿಗೂ ಕೂಡ ಕಾಶ್ಮೀರ, ಪಾಕಿಸ್ತಾನ, ಬಾಂಗ್ಲಾ, ಭಾರತದ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ ಮತ್ತು ಫಿಜಿಗಳಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸಿದವರಲ್ಲ. ಭಾರತದ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರ ಬಗ್ಗೆ ಅತಿ ಕಾಳಜಿ ವಹಿಸುವ ಯುಎಸ್ಸಿಐಆರ್ಎಫ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಿಂದುಗಳ ಜನಾಂಗೀಯ ನಿರ್ನಾಮ ನಡೆಯುತ್ತಿದ್ದರೂ ತುಟಿಬಿಚ್ಚುತ್ತಿಲ್ಲವೇಕೆ?
ಇಂಥ ಪ್ರಭಾವಿ ಗುಂಪುಗಳು ಮತ್ತು ರಾಜಕಾರಣಿಗಳ ಲಾಭವನ್ನು ರಾಜು ರಾಜಗೋಪಾಲ್ ಮತ್ತು ಪ್ರಭುದಾಸ್ ಚೆನ್ನಾಗಿ ಬಳಸಿಕೊಂಡರು. ಪರಿಣಾಮವಾಗಿ ಇವರೆಲ್ಲರೂ ಸೇರಿ ಡಿಕ್ ಚೆನೆ ಮೇಲೆ ಪ್ರಭಾವ ಬೀರಿದರು. ಆ ವ್ಯಕ್ತಿ ನರೇಂದ್ರ ಮೋದಿಯವರಿಗೆ ವೀಸಾ ನಿರಾಕರಿಸಿ ಸಹಿ ಹಾಕಿಬಿಟ್ಟ! ಜಾನ್ ಪ್ರಭುದಾಸ್ ಹೇಗೆ ವೀಸಾ ನಿರಾಕರಣೆಯ ಸಂಯೋಜನೆಯನ್ನು ಬಣ್ಣಿಸಿದರು ಎನ್ನುವುದನ್ನು ದಿ. ಬಿ. ರಾಮನ್ ಹೀಗೆ ಬರೆದಿದ್ದರು: ರಾಜು ರಾಜಗೋಪಾಲ್ ಮೋದಿ ಭೇಟಿಯ ಸುದ್ದಿ ತಿಳಿದು ಹೇಳಿದರಂತೆ, "ಈ ಸಮಯಕ್ಕಾಗಿ ನಾವು ಕಾಯುತ್ತಿದ್ದೆವು....ಇದು ಅತ್ಯದ್ಭುತ ಗೆಲುವು"!
ಆದರೆ ಇದು ನಿಜಕ್ಕೂ ತನ್ನ ಘನತೆಯನ್ನು ಕಾಪಾಡಿಕೊಳ್ಳದ ಭಾರತದ ಅತಿದೊಡ್ಡ ಸೋಲಾಗಿತ್ತು. ಒಂದು ವೇಳೆ ನಮ್ಮ ಆಂತರಿಕ ವಿಷಯದಲ್ಲಿ ಮೂಗು ತೂರಿಸಲು ಅಹಮದಾಬಾದ್ಗೆ ಬಂದಿಳಿದ ಜೋಯಿ ಪಿಟ್ಸ್ ಮತ್ತು ಫ್ರಾಂಕ್ ವೂಲ್ಫ್ಗೆ ಭಾರತ ವೀಸಾ ನಿರಾಕರಿಸಿತ್ತೆಂದರೆ ಅಮೆರಿಕದ ಪ್ರತಿಕ್ರಿಯೆ ಹೇಗಿರುತ್ತಿತ್ತು ಎನ್ನುವುದನ್ನು ಯಾರಾದರೂ ಲೆಕ್ಕಹಾಕಬಹುದು. ಆದರೆ ವೀಸಾ ನಿರಾಕರಣೆಯ ಘಟನೆಗೆ ಭಾರತ ಬೆನ್ನೆಲುಬಿಲ್ಲದಂತೆ ವರ್ತಿಸಿ ಒಂದು ಉದಾಹರಣೆಯನ್ನು ಸ್ಥಾಪಿಸಿಬಿಟ್ಟಿತು. ಸತ್ಯವೇನೆಂದರೆ, ಈ ಘಟನೆಯಿಂದಾಗಿ ಆಡಳಿತ ಕಾಂಗ್ರೆಸ್ ಪಕ್ಷ ಮತ್ತು ಢೋಂಗಿ ಸೆಕ್ಯುಲರ್ಗಳು ಸಂತೋಷದ ಅಲೆಯಲ್ಲಿ ತೇಲಾಡಿದವು.
ಭಾರತದ ಮೇಲೆ ನಿರ್ಭಯವಾಗಿ ಪುಂಡಾಟಿಕೆ ಮಾಡಬಹುದೆಂದು ಅಮೆರಿಕಕ್ಕೆ ಸ್ಪಷ್ಟವಾಗಿ ಅರಿವಾದದ್ದೇ ಆವಾಗ.
'ಸಂಡೇ ಗಾರ್ಡಿಯನ್' ಪತ್ರಿಕೆ ಏಪ್ರಿಲ್ನಲ್ಲಿ ಹೊರಹಾಕಿದ ಸುದ್ದಿಯೊಂದರ ಪ್ರಕಾರ, ಅಮೆರಿಕ ಸರ್ಕಾರದ ಮಾಜಿ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಒಬಾಮಾ ಆಡಳಿತದಲ್ಲಿ "get Narendra Modi" ಎನ್ನುವ ವಿಶೇಷ ನೀತಿಯನ್ನೇ ಹುಟ್ಟುಹಾಕಿಬಿಟ್ಟಿದ್ದರು. ಅಷ್ಟೇ ಅಲ್ಲ, ನಂತರದ ವರ್ಷಗಳಲ್ಲಿ ಭಾರತದಲ್ಲಿ ವಿಧ್ವಂಸಕ ಆಟಗಳನ್ನಾಡಲು ವಿಶ್ವದಾದ್ಯಂತ ಎನ್ಜಿಒ ಜಾಲಗಳನ್ನು ತಯಾರು ಮಾಡಿದ್ದರು. ಮೋದಿಗೆ ವೀಸಾ ನೀಡಬಾರದು ಎಂದು ಒಬಾಮಾಗೆ ಮನವಿ ಮಾಡಿದ್ದ ನಮ್ಮ 65 ಸಂಸದರ(ಇವರನ್ನು ಸಾಮಾಜಿಕ ಮಾಧ್ಯಮದಲ್ಲಿ 65 ದೇಶದ್ರೋಹಿಗಳು ಎನ್ನಲಾಗುತ್ತದೆ) ದ್ವೇಷಪೂರಿತ ವ್ಯವಹಾರಗಳಿಗೂ ಇದು ಕನ್ನಡಿ ಹಿಡಿಯುತ್ತದೆ. ಇನ್ನು ಭಾರತವೂ ಕೂಡ ರಾಷ್ಟ್ರೀಯ ಸಲಹಾ ಸಮಿತಿ(ಎನ್ಎಸಿ)ಯೆಂಬ ಯಾರಿಗೂ ಉತ್ತರದಾಯಿಯಲ್ಲದ ರಾಷ್ಟ್ರದೋಹಿ ಗುಂಪಿನ ಹಿಡಿತಕ್ಕೆ ಸಿಲುಕಿದ್ದರಿಂದ ಮೋದಿ ವಿರೋಧಿ ಜಾಲಕ್ಕೆ ಇನ್ನಷ್ಟು ಅನುಕೂಲವಾಯಿತು.
ಕಿಚ್ಚಿಡುವ ಕಮ್ಯುನಿಸ್ಟ್ ತತ್ವಗಳಿಗೆ ಅಂಟಿಕೊಂಡ ಎನ್ಜಿಒಗಳ ಮಾಲೀಕರ ಅಖಾಡವಾಗಿತ್ತು ಎನ್ಎಸ್ಸಿ. ಅಲ್ಲದೆ ಕ್ರೈಸ್ತ ಮತ ಪ್ರಚಾರದಂಥ ವಿನಾಶಕಾರಿ ಚಟುವಟಿಕೆಗಳಿಗೆ ಬಹಿರಂಗವಾಗಿ ಮತ್ತು ನಿಗೂಢವಾಗಿ ಬೆಂಬಲ ನೀಡುತ್ತಿತ್ತು. ಈ ಗುಂಪಿನಲ್ಲಿ ತೀಸ್ತಾ ಸೇತಲ್ವಾಡ್ ಕೂಡ ಸದಸ್ಯೆಯಾಗಿದ್ದಳು. ಕೂಡಂಕುಲಂ ಅಣು ಸ್ಥಾವರ ನಿರ್ಮಾಣದ ವಿರುದ್ಧ ನಡೆದಿದ್ದ ಪ್ರತಿಭಟನೆಗಳನ್ನು ಸರ್ಕಾರ ತನಿಖೆ ಮಾಡಿದಾಗ, ಯುರೋಪ್ನ ಅನೇಕ ಕ್ರಿಶ್ಚಿಯನ್ ಸಂಸ್ಥೆಗಳಿಂದ ಪ್ರತಿಭಟನಾಕಾರರಿಗೆ ಹಣ ಹರಿದು ಬರುತ್ತಿರುವುದು ಬಹಿರಂಗವಾಯಿತು. ಇನ್ನು ಅನೇಕ ಪ್ರತಿಭಟನಾಕಾರರಿಗೆ ಸ್ಥಳೀಯ ಚರ್ಚಗಳೊಂದಿಗೆ ಸಂಬಂಧವಿತ್ತು ಎನ್ನುವುದು ರಹಸ್ಯವಾಗೇನೂ ಉಳಿದಿಲ್ಲ.
ಅಮೆರಿಕ ಕ್ಷಮೆಯಾಚಿಸಲೇಬೇಕು: ಭಾರತದೊಂದಿಗಿನ ತನ್ನ ಒಡನಾಟಕ್ಕೆ ಮರುರೂಪ ಕೊಡುವ ಮುನ್ನ ಅಮೆರಿಕ ಒಂದು ಪ್ರಮುಖ ಅಡ್ಡಿಯನ್ನು ದಾಟಲೇಬೇಕು. ಸರಳವಾಗಿ ಹೇಳಬೇಕೆಂದರೆ, ವೀಸಾ ನಿರಾಕರಿಸಿದ್ದಕ್ಕಾಗಿ ಮೋದಿಯವರಿಗೆ ಅದು ಕ್ಷಮೆಯಾಚಿಸಬೇಕು. ನನ್ನ ಸ್ನೇಹಿತ ಮತ್ತು ಆರ್ಥಿಕ ತಜ್ಞ ಡಾ. ಅತನು ಡೇ ಅವರ ಮಾತಿನಲ್ಲೇ ಹೇಳಬೇಕೆಂದರೆ, "ತಮ್ಮನ್ನು ಅನ್ಯಾಯವಾಗಿ ಕ್ರಿಮಿನಲ್ ಎಂದು ದೂಷಿಸಿದ ಅಮೆರಿಕ ಕ್ಷಮೆಯಾಚಿಸುವವರೆಗೂ ಮೋದಿ ಆ ದೇಶಕ್ಕೆ ಹೋಗಬಾರದು. ಆ ಸಮಸ್ಯೆ ಬಗೆಹರಿಯದೇ ಮೋದಿ ಅಲ್ಲಿಗೆ ತೆರಳಿದರೆಂದರೆ ತಾವು ಕ್ರಿಮಿನಲ್ ಎಂದು ಅವರು ಒಪ್ಪಿಕೊಂಡಂತಾಗುತ್ತದೆ". ಮನಮೋಹನ್ ಸಿಂಗ್ ಒತ್ತೆಯಿಟ್ಟಿದ್ದ 'ಭಾರತದ ಸ್ವಾಭಿಮಾನ'ವನ್ನು ಪುನಃ ಪ್ರತಿಷ್ಠಾಪಿಸುವ ವಿಷಯವೆತ್ತಿ ನರೇಂದ್ರ ಮೋದಿಯವರಂತೂ ತಮ್ಮ ಕಡೆಯಿಂದ ಅತ್ಯುತ್ತಮ ಹೆಜ್ಜೆಯನ್ನೇ ಇಟ್ಟಿದ್ದಾರೆ. ಮೇ 16ರಂದು ಮೋದಿ ಸಾಮಾಜಿಕ ಮಾಧ್ಯಮವೊಂದರಲ್ಲಿ ಜಪಾನ್, ಇಸ್ರೇಲ್ ಮತ್ತು ಇತರ ದೇಶದ ನಾಯಕಕರೆಲ್ಲರಿಗೆ ಧನ್ಯವಾದ ಅರ್ಪಿಸಿ ಕೊನೆಯ ಸ್ಥಾನವನ್ನು ಅಮೆರಿಕಕ್ಕೆ ಕೊಟ್ಟರು. ಮೋದಿಯೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ಗೊಂದಲದಲ್ಲೀಗ ಅಮೆರಿಕ ಸಿಲುಕಿದೆ. ರಿಪಬ್ಲಿಕನ್ನರ ಅವಧಿಯಲ್ಲಿ ಮೋದಿಯವರಿಗೆ ಅಮೆರಿಕ ವೀಸಾ ನಿರಾಕರಿಸಿತ್ತು, ಆದರೆ ಆನಂತರ ಬಂದ ಡೆಮೊಕ್ರಾಟ್ಗಳು(ಮುಖ್ಯವಾಗಿ ಹಿಲರಿ ಕ್ಲಿಂಟನ್) 'ಮೋದಿ ವಿರೋಧಿ ದ್ವೇಷವನ್ನು' ಅತಿರೇಕಕ್ಕೊಯ್ದರು. ಭಾರತೀಯ ಸರ್ಕಾರಗಳೆಲ್ಲವನ್ನೂ ಬಲಿಪಶುವಾಗಿಸಿದ ಅಮೆರಿಕದ ಸಮಯಸಾಧಕತನ ಮತ್ತು ಸ್ವಹಿತಾಸಕ್ತಿ ಮತ್ತೊಮ್ಮೆ ಅನಾವರಣವಾಗಿದೆ. ಅಮೆರಿಕದ ನಿಯಮಗಳಿಗೆ ತಕ್ಕಂತೆ ಆಟವಾಡಿದ್ದರಿಂದಲೇ ದೇಶದ ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ಮತಾತಂತರ ಮತ್ತು ಆರ್ಥಿಕತೆಯನ್ನು ಹತ್ತಿಕುವ ಕೂಡಂಕುಲಂನಂಥ ಪ್ರತಿಭಟನೆಗಳನ್ನು ತಡೆಯಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಭಾರತದೆಡೆಗಿನ ಅಮೆರಿಕದ ನೀತಿಗಳು ಯಾವ ಪ್ರಮಾಣದಲ್ಲಿ ದೇಶಕ್ಕೆ ಹಾನಿ ಮಾಡಿವೆ ಎನ್ನುವುದನ್ನು ಇತ್ತೀಚೆಗೆ ಐಬಿ(ಇಂಟೆಲಿಜನ್ಸ್ ಬ್ಯೂರೋ) ಪ್ರಧಾನಿಗಳಿಗೆ ವರದಿ ಸಲ್ಲಿಸಿದೆ. ವಿದೇಶಿ ದೇಣಿಗೆ ಪಡೆದು ಭಾರತದ ಆರ್ಥಿಕ ಪ್ರಗತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಎನ್ಜಿಒಗಳ ದಾಖಲೆಗಳನ್ನು ಐಬಿ ಮೋದಿಯವರಿಗೆ ಸಲ್ಲಿಸಿದೆ.
ಗಮನಾರ್ಹ ಸಂಖ್ಯೆಯ ಭಾರತದ ಎನ್ಜಿಒಗಳು(ಯುಎಸ್, ಯುಕೆ, ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳಿಂದ ದೇಣಿಗೆ ಪಡೆಯುತ್ತಿರುವ ಸಂಸ್ಥೆಗಳು) ಜನ ಕೇಂದ್ರಿತ ಸಮಸ್ಯೆಗಳನ್ನು ಬಳಸಿಕೊಂಡು ಅಭಿವೃದ್ಧಿ ಯೋಜನೆಗಳನ್ನು ತಡೆಗಟ್ಟುತ್ತಿರುವುದು ಕಂಡುಬಂದಿದೆ.
ಪ್ರಧಾನಿ ನರೇಂದ್ರ ಮೋದಿ, ತಮ್ಮ ಭೇಟಿಯ ವಿಷಯವನ್ನು ಈ ಕೆಳಕಂಡ ಅಂಶಗಳ ಮೇಲೆ ನಿರ್ಧರಿಸಬೇಕಿದೆ:
ವೀಸಾ ನಿರಾಕರಿಸಿದ್ದಕ್ಕಾಗಿ ಬೇಷರತ್ ಕ್ಷಮೆ
ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವ ಯುಎಸ್ಸಿಐಆರ್ಎಫ್ನಂಥ ಶಕ್ತಿಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು.
ಅಮೆರಿಕ ಪಾಕಿಸ್ತಾನದೊಂದಿಗೆ ಅಡ್ಡ ವ್ಯವಹಾರಗಳನ್ನು ನಿಲ್ಲಿಸಬೇಕು ಮತ್ತು ಪಾಕಿಸ್ತಾನದೊಂದಿಗೆ ಭಾರತ ಹೇಗೆ ವರ್ತಿಸುತ್ತದೆ ಎನ್ನುವ ವಿಷಯದಲ್ಲಿ ತಲೆಹಾಕಬಾರದು.
ಭಾರತದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುವ ಎನ್ಜಿಒಗಳನ್ನು(ತಾನು ಬೆಂಬಲಿಸಿದ/ ಸಹಾಯ ಮಾಡಿದ) ಬೇರು ಸಹಿತ ಕಿತ್ತೆಸೆಯಬೇಕು.
ತಾನು ಅತ್ಯಂತ ವಿಭಿನ್ನ ಪ್ರಧಾನಿಯೊಂದಿಗೆ ವ್ಯವಹರಿಸುತ್ತಿದ್ದೇನೆ ಎನ್ನುವುದು ಅಮೆರಿಕಕ್ಕೆ ಮನವರಿಕೆಯಾಗಿರುವುದಂತೂ ಸ್ಪಷ್ಟ. "ಭಾರತವನ್ನು ತಲುಪುವ", "ಹೊಂದಿಕೊಳ್ಳುವ" ಅದರ ಸಂದೇಶಗಳು ಈ ಸೂಚನೆಯನ್ನು ಕೊಡುತ್ತಿವೆಯಾದರೂ ಭಾರತ ಮಾತ್ರ ಎಚ್ಚರಿಕೆಯಿಂದ ಇರಬೇಕು. ಜಹೀರ್ ಜನ್ಮೊಹಮದ್ ಲೇಖನವೊಂದರಲ್ಲಿ ಒಬಾಮಾ ಆಡಳಿತದ ಹಿರಿಯ ಅಧಿಕಾರಿ ಹೇಳಿದ ಮಾತು ಹೀಗೆ ಉಲ್ಲೇಖವಾಗಿದೆ: ಆ ಅಧಿಕಾರಿ ಮಾತನಾಡುತ್ತಾ ಹೇಳಿದರಂತೆ, "ಇದು ಕ್ಲೀಷೆ ಇರಬಹುದು, ಆದರೆ ನಾವು ಇದುವರೆಗೂ ಭಾರತ ಮತ್ತು ಅಮೆರಿಕ ಏಕರೀತಿಯ ಮೌಲ್ಯಗಳನ್ನು ಹೊಂದಿರುವ ಪ್ರಜಾಪ್ರಭುತ್ವಗಳು ಎನ್ನುತ್ತಲೇ ಆ ದೇಶದೊಂದಿಗೆ(ಭಾರತ) ವ್ಯವಹರಿಸುತ್ತಿದ್ದೆವು. ಆದರೆ ಈ ಮಾತನ್ನು ಮೋದಿ ಅವರಿಗೆ ಅನ್ವಯಿಸುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಅವರು ಪ್ರಧಾನಿಯಾದರೆ, ನಾವು ಏನಾದರೂ ಹೊಸತನ್ನು ಹೇಳಲು ತಡಕಾಡಬೇಕಾದೀತು."
ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಅಮೆರಿಕ "ಏನಾದರೂ ಹೊಸತನ್ನು ಹೇಳಲು" ತಡಕಾಡತೊಡಗಿದೆ!
-ಸಂದೀಪ್ ಬಾಲಕೃಷ್ಣ
deepu.sandeep@gmail.com