ಶಿಕ್ಷಣ ವ್ಯವಸ್ಥೆಯ ಬದಲಾವಣೆಗೆ ನೀಲನಕ್ಷೆ ಹೇಗಿರಬೇಕು?
ಕೇಂದ್ರ ಮಾನವ ಸಂಪನ್ಮೂಲ ಸಚಿವರೇ...
ಕೇಂದ್ರ ಮಾನವ ಸಂಪನ್ಮೂಲ ಸಚಿವರೇ, ಜಾಗತೀಕರಣದ ಪರಿಣಾಮ ಎಲ್ಲ ಕ್ಷೇತ್ರಗಳಲ್ಲೂ ಮಾಂತ್ರಿಕ ಬದಲಾವಣೆಗಳಾಗುತ್ತಿವೆ. ಅದರಲ್ಲೂ ದೂರಸಂಪರ್ಕ, ಕೃಷಿ, ಸಾರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಂತೂ ನಿರೀಕ್ಷೆ ಮೀರಿದ ಪ್ರಗತಿಯಾಗುತ್ತಿದೆ. ಇಷ್ಟಾದರೂ ಜಗತ್ತಿನ ವೇಗಕ್ಕೆ ಸರಿಸಾಟಿಯಾಗಿ ಓಡಲು ನಮಗೆ ಸಾಧ್ಯವಾಗುತ್ತಿಲ್ಲ. ಜಗತ್ತಿನ ಪ್ರಗತಿಗೆ ಬೇಕಾದಷ್ಟು ಸಂಪನ್ಮೂಲಗಳನ್ನು ಕ್ರೋಢೀಕರಿಸಲು ನಾವು ಹೆಣಗಾಡುತ್ತಿದ್ದೇವೆ. ಅದರಲ್ಲೂ ಮಾನವ ಸಂಪನ್ಮೂಲ ಕೊರತೆ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆದ್ದರಿಂದಲೇ ಭಾರತದ ಪ್ರಗತಿಯ ವೇಗ ಕುಂಠಿತಗೊಳ್ಳುತ್ತಿದೆ.
ನಿಜ, ಪ್ರತಿವರ್ಷ ದೇಶದ ನೂರಾರು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಂದ ಲಕ್ಷಾಂತರ ಪದವೀಧರರು ಹೊರಬರುತ್ತಿದ್ದಾರೆ. ಆದರೆ ಅವರ ಜ್ಞಾನದ ಗುಣಮಟ್ಟವನ್ನು ನೋಡಿದರೆ ನಿರಾಸೆಯಾಗುತ್ತಿರುವುದಂತೂ ಸುಳ್ಳಲ್ಲ. ಅಷ್ಟೇ ಏಕೆ ಬಹುತೇಕ ಪದವೀಧರರಿಗೆ ಸಂವಹನ ಕೌಶಲದ ಕೊರತೆಯಿಂದ ಸುತ್ತ-ಮುತ್ತಲಿನವರೊಂದಿಗೆ ಸರಿಯಾದ ರೀತಿಯಲ್ಲಿ ವ್ಯವಹರಿಸಲೂ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ದೇಶದ ಪ್ರಗತಿ ಮರೀಚಿಕೆಯಾಗದೆ ಮತ್ತೇನಾದೀತು?
ಇಂದು ಶಿಕ್ಷಣ ಕ್ಷೇತ್ರದಲ್ಲಿ ಸಾಲು ಸಾಲು ಸಮಸ್ಯೆಗಳು ಮತ್ತು ಸವಾಲುಗಳು ಮುಂದಿವೆ. ದೇಶದಲ್ಲಿ ಇಂದು ಆರು ನೂರು ಮಿಲಿಯನ್ನಷ್ಟು ಯುವಜನರಿದ್ದಾರೆ. ಅವರಲ್ಲಿ ಶೇ.8ರಷ್ಟು ಮಂದಿಗೆ ಮಾತ್ರ ಉನ್ನತ ಶಿಕ್ಷಣ ಪಡೆದುಕೊಳ್ಳುವ ಅವಕಾಶ ದೊರೆಯುತ್ತಿದೆ. ಶಿಕ್ಷಣ ವ್ಯವಸ್ಥೆ ವ್ಯಾಪಾರವಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ಉಳಿದವರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಉಳ್ಳವರಿಗೆ ಮಾತ್ರ ಉನ್ನತ ಶಿಕ್ಷಣ ಎನ್ನುವಂತಾಗಿದೆ. ಜತೆಗೆ ರಾಜಕಾರಣಿಗಳು ಕುಲಪತಿಗಳನ್ನು ಆಯ್ಕೆಮಾಡುವುದರಿಂದ ಹಿಡಿದು ವಿಶ್ವವಿದ್ಯಾನಿಲಯದ ಎಲ್ಲ ವ್ಯವಹಾರಗಳಲ್ಲೂ ಮೂಗುತೂರಿಸುತ್ತಿದ್ದಾರೆ. ಅನೇಕ ಕುಲಪತಿಗಳು ರಾಜಕಾರಣಿಗಳ ಅನುಯಾಯಿಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗೇ ಮೊದಲಿಗೆ ಶಿಕ್ಷಣ ಕ್ಷೇತ್ರವನ್ನು ರಾಜಕೀಯದಿಂದ ಮುಕ್ತಗೊಳಿಸಿ.
ಇನ್ನು ನಮ್ಮ ಅನೇಕ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ. ಅವು ವಿದ್ಯಾರ್ಥಿಗಳಿಗೆ ಹೊಸ ಹೊಸ ಕಲಿಕೆಯ ವಿಧಾನಗಳನ್ನು ಪರಿಚಯಿಸುತ್ತಲೇ ಇಲ್ಲ. ಸರ್ಕಾರಿ ಮತ್ತು ಖಾಸಗಿ ಸಂಘ-ಸಂಸ್ಥೆಗಳೊಂದಿಗೆ ಬೆರೆತು ಕೆಲಸಮಾಡುವ ಗೋಜಿಗೆ ಹೋಗುತ್ತಿಲ್ಲ. ಹೊಸ ಪ್ರಯೋಗ, ಪ್ರಯತ್ನ ಮತ್ತು ಚಿಂತನೆಗಳಿಗೆ ತೆರೆದುಕೊಳ್ಳುತ್ತಲೇ ಇಲ್ಲ. ಅಷ್ಟೇ ಏಕೆ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ನುರಿತ ಶಿಕ್ಷಕರೇ ಇಲ್ಲ. ಹೀಗಾಗಿ, ಉತ್ತಮ ಕೌಶಲವಿಲ್ಲದೆ ವಿದ್ಯಾರ್ಥಿಗಳು ಕಾಲೇಜುಗಳಿಂದ ಹೊರಬರುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಿ, ವಿಶ್ವವಿದ್ಯಾನಿಲಯಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಭೀಮಬಲ ತುಂಬಿ.
ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಸಾಗಬೇಕು ಎನ್ನುವುದಕ್ಕೆ ಒಂದಷ್ಟು ಸಲಹೆಗಳು: ಬದಲಾವಣೆ ಎನ್ನುವುದು ಕಲಿಕೆಯ ಪ್ರಾಥಮಿಕ ಹಂತದಲ್ಲಿ ಆರಂಭಗೊಳ್ಳಲಿ. ಅಂದರೆ ಮೊದಲಿಗೆ ನಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿ. ನಂತರದ ಸರದಿ ದೂರ ಶಿಕ್ಷಣ ಮತ್ತು ಉನ್ನತ ಶಿಕ್ಷಣದ್ದು. ಯಾವುದೋ ಕಾಲದ ಪಠ್ಯವನ್ನು ಇಟ್ಟುಕೊಂಡು ಅದನ್ನು ವಿದ್ಯಾರ್ಥಿಗಳ ತಲೆಗೆ ತುಂಬುವುದಕ್ಕಿಂತ ಇಂದಿನ ವೇಗದ ಜಗತ್ತಿಗೆ ಯಾವುದು ಅಗತ್ಯವೋ ಅನಿವಾರ್ಯವೋ ಅಂತಹ ವಿಚಾರಗಳನ್ನು ಅವರಿಗೆ ಕಲಿಸುವುದು ಸೂಕ್ತ. ಇಂದು ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರಗಳ ನಡುವೆ ಭಾರಿ ಕಂದಕವೊಂದು ನಿರ್ಮಾಣಗೊಂಡಿದೆ. ಅದನ್ನು ಮುಚ್ಚುವ ಕೆಲಸ ನಿಮ್ಮ ಸಚಿವಾಲಯದ ಮೂಲಕ ತುರ್ತಾಗಿ ಆಗಬೇಕಿದೆ.
ಎರಡನೆಯದಾಗಿ ಪ್ರತಿಯೊಂದು ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾನಿಲಯವೂ ಅತ್ಯಾಧುನಿಕ ಗ್ರಂಥಾಲಯವನ್ನು ಹೊಂದುವುದು ಅವಶ್ಯಕ. ಅಂತರ್ಜಾಲದ ಮೂಲಕ ಜಗತ್ತಿನ ಎಲ್ಲ ವಿಶ್ವವಿದ್ಯಾನಿಲಯಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುವ ಕೆಲಸ ಆಗಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಜ್ಞಾನದ ಪರಿಧಿ ವಿಸ್ತಾರಗೊಳ್ಳುತ್ತದೆ. ಕರ್ನಾಟಕದ ಗಡಿಭಾಗದಲ್ಲಿರುವ ಶಾಲೆಯೊಂದರಲ್ಲಿ ಕುಳಿತ ವಿದ್ಯಾರ್ಥಿಯೊಬ್ಬ ಲಂಡನ್ನ ಬ್ರಿಟಿಷ್ ಲೈಬ್ರರಿಯಲ್ಲಿರುವ ಇ-ಬುಕ್ ಒಂದನ್ನು ಹೆಕ್ಕಿ ತೆಗೆದು ಓದುವಂತಾದರೆ ಆತ ಅದೆಷ್ಟು ಸಂತೋಷಗೊಳ್ಳುತ್ತಾನೆ. ಅಂತಹ ಅವಕಾಶವೊಂದನ್ನು ನಾವು ಆತನಿಗೆ ಕಲ್ಪಿಸಿಕೊಡಬೇಕು ಅಷ್ಟೇ. ಇದು ನಿಜವಾದ ಜ್ಞಾನದ ಹರಿವು. ಇದಕ್ಕೆ ಬೇಕಾದ ಅನುದಾನ ವಿದ್ಯಾಸಂಸ್ಥೆಗಳಿಗೆ ಧಾರಾಳವಾಗಿ ಹರಿದು ಬರುವಂತೆ ಕ್ರಮಕೈಗೊಳ್ಳಿ.
ಮೂರನೆಯದು ವಿದ್ಯಾಸಂಸ್ಥೆಗಳು ಕೇವಲ ಪಾಠ-ಪ್ರವಚನಗಳ ಕೇಂದ್ರಗಳಾದರೆ ಸಾಲದು. ಸಂಶೋಧನಾ ಕೇಂದ್ರಗಳಾಗಿ ರೂಪುಗೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಓದಿನ ಜತೆಜತೆಗೆ ಹೊಸ ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಆ ಸಂಶೋಧನೆ ಆಧುನಿಕ ಜಗತ್ತಿನ ಪ್ರಗತಿಗೆ ಪೂರಕವಾಗಿಯೂ ಇರಬೇಕು. ಪದವಿ ಪಡೆದು ಹೊರಬರುವ ವೇಳೆಗೆ ಆತನ ಹೆಸರಿನಲ್ಲೊಂದು ಪೇಟೆಂಟ್ ಇದ್ದರೆ ಆತನಿಗೆ ದೊರೆಯುವ ಗೌರವವೇ ಬೇರೆ. ಇದಲ್ಲದೆ ವಿಶ್ವವಿದ್ಯಾನಿಲಯಗಳು ಹೆಚ್ಚು ಹೆಚ್ಚು ಪೇಟೆಂಟ್ ಮತ್ತು ಕೃತಿಸ್ವಾಮ್ಯ ಪಡೆದುಕೊಳ್ಳುವತ್ತ ಗಮನಹರಿಸಬೇಕು. ಆಗ ಸಂಸ್ಥೆಯ ಜತೆಗೆ ವಿದ್ಯಾರ್ಥಿಗಳ ಮೌಲ್ಯವೂ ಹೆಚ್ಚುತ್ತದೆ. ತಮ್ಮ ಸಚಿವಾಲಯದ ವತಿಯಿಂದ ಇದಕ್ಕೆ ಪೂರಕವಾದ ಅಂಗವೊಂದು ಪ್ರತಿ ವಿಶ್ವವಿದ್ಯಾನಿಲಯದಲ್ಲೂ ಸ್ಥಾಪಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಕೆಲಸವಾಗಲಿ. ದುರಂತವೆಂದರೆ ಇಂದಿನ ವಿದ್ಯಾರ್ಥಿಗಳು ಕೇವಲ ತಾತ್ತ್ವಿಕ ಸಿದ್ಧಾಂತಿಗಳಾಗುತ್ತಿದ್ದಾರೆ. ಆದರಿಂದ ವಿದ್ಯಾರ್ಥಿಗಳು ಪಡೆದುಕೊಳ್ಳುವ ಜ್ಞಾನವನ್ನು ಕೃಷಿ, ಆರೋಗ್ಯ, ಸಾರಿಗೆ, ದೂರಸಂಪರ್ಕ, ರಕ್ಷಣೆ, ಸಣ್ಣ ಮತ್ತು ಬೃಹತ್ ಕೈಗಾರಿಕೆ, ಇ-ಆಡಳಿತ ಹೀಗೆ ಹತ್ತುಹಲವು ಕ್ಷೇತ್ರಗಳಲ್ಲಿ ಬಳಸಿಕೊಳ್ಳಲು ಶಿಕ್ಷಣ ತಜ್ಞರ ಸಲಹೆ ಪಡೆದು ವಿಶೇಷ ಯೋಜನೆಯನ್ನು ರೂಪಿಸಿ.
ಇಂದು ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಕಾಡುತ್ತಿರುವ ಬಹು ಮುಖ್ಯ ಪ್ರಶ್ನೆಯೆಂದರೆ ಶಿಕ್ಷಣ ಪಡೆದು ಹೊರಬರುವ ತಾನು ಯಾವ ನೈಪುಣ್ಯವನ್ನು ಪಡೆದುಕೊಂಡಿರಬೇಕು ಎನ್ನುವುದು. ಅದರಂತೆ ವಿದ್ಯಾರ್ಥಿಗಳಿಗೆ ಬೇಕಾಗಿರುವುದು ವೇಗವಾಗಿ ಬದಲಾಗುವ ತಂತ್ರಜ್ಞಾನಕ್ಕೆ ಹೊಂದಿಕೊಂಡು ಅದನ್ನು ಕಲಿಯುವ ಕಲೆ. ತನ್ನ ಶಕ್ತಿ, ಸಾಮರ್ಥ್ಯದ ಮೇಲೆ ಭರವಸೆ, ಸೃಜನಾನ್ಮಕ ಚಿಂತನೆ, ಸಮಯಕ್ಕೆ ತಕ್ಕಂತಹ ವಿವೇಚನೆ, ನೈಜ ಸಮಸ್ಯೆಯ ಆಳ, ಅಗಲವನ್ನು ಅರಿಯುವ ಕೌಶಲ್ಯ ಮತ್ತು ನಾಯಕತ್ವದ ಗುಣ. ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಬದ್ಧತೆ, ವೃತ್ತಿಪರತೆ. ಜತೆ ಜತೆಗೆ ಮತ್ತೊಬ್ಬರ ಮಾತುಗಳನ್ನು ಸೌಜನ್ಯದಿಂದ ಕೇಳುವ, ಅರಳು ಹುರಿದಂತೆ ನಿರರ್ಗಳವಾಗಿ ಮಾತನಾಡುವ ಮತ್ತು ಅದ್ಭುತವಾಗಿ ಬರೆಯುವ ಸಂವಹನ ಕೌಶಲ. ಆದರೆ ನಮ್ಮ ಶಿಕ್ಷಣ ಸಂಸ್ಥೆ ಗಮನವೆಲ್ಲ ಪಠ್ಯದಲ್ಲಿರುವ ವಿಚಾರವನ್ನು ವಿದ್ಯಾರ್ಥಿಗಳ ತಲೆಗೆ ತುಂಬುವುದರ ಕಡೆಗೇ ಕೇಂದ್ರೀಕೃತವಾಗಿದೆ. ಉಳಿದೆಲ್ಲವೂ ಗೌಣವಾಗಿಬಿಟ್ಟಿದೆ. ಆದ್ದರಿಂದ ಇವೆಲ್ಲವನ್ನೂ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕಲಿಸಲು ಬೇಕಾದ ಕಾನೂನನ್ನು ರೂಪಿಸಿ ಜಾರಿಗೆ ತನ್ನಿ.
ನಿಜ ಭಾರತ ಸರ್ಕಾರ ಇದಕ್ಕೆಂದೇ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಜ್ಞಾನ ಆಯೋಗವನ್ನು ರಚಿಸಿದೆ. ಪ್ರತಿವರ್ಷ ಸಾಕಷ್ಟು ಹಣವನ್ನು ವ್ಯಯಮಾಡುತ್ತಿದೆ. ಆದರೆ ಆಗಬೇಕಾಗಿರುವ ಕೆಲಸ ಬೆಟ್ಟದಷ್ಟಿದೆ. ಆಗಿರುವುದು ಆನೆಯ ಬಾಯಿಗೆ ಅರೆಕಾಸಿನ ಮಜ್ಜಿಗೆಯಷ್ಟು ಮಾತ್ರ. ಅಂದರೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶ ಪೂರ್ಣಪ್ರಮಾಣದಲ್ಲಿ ಈಡೇರಿಲ್ಲ. ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಉದಾಹರಣೆಗೆ: ಪ್ರತಿವರ್ಷ ಐಐಟಿ ಪ್ರವೇಶ ಪರೀಕ್ಷೆಗೆ ಮೂರು ಲಕ್ಷ ಜನ ಹಾಜರಾಗುತ್ತಾರೆ. ಆದರೆ ಬೆರಳೆಣಿಕೆಯಷ್ಟು ಜನ ಮಾತ್ರ ಆಯ್ಕೆಯಾಗುತ್ತಾರೆ. ಹಾಗಾದರೆ ಉಳಿದವರು ಬುದ್ದಿವಂತರಲ್ಲವೇ? ಅವರಿಗೆ ಐಐಟಿಗೆ ಪ್ರವೇಶ ಪಡೆಯಲು ಅರ್ಹತೆ, ಯೋಗ್ಯತೆ ಇಲ್ಲವೆ? ಖಂಡಿತ ಇದೆ. ಆದರೆ ನಮ್ಮಲ್ಲಿರುವುದು ಕೆಲವೇ ಕೆಲವು ಐಐಟಿಗಳು. ಈಗ ನೀವು ಮಾನವ ಸಂಪನ್ಮೂಲ ಸಚಿವಾಲಯದ ಚುಕ್ಕಾಣಿ ಹಿಡಿದಿದ್ದೀರಿ. ಹಾಗಾಗಿ ನಿಮ್ಮದೇ ನೇತೃತ್ವದಲ್ಲಿ ದೇಶದಲ್ಲಿ ನೂರಾರು ಐಐಟಿಗಳು, ಐಐಎಂಗಳು, ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾಗಲಿ. ಇದು ಕೇವಲ ಸಂಖ್ಯೆಯ ದೃಷ್ಟಿಯಿಂದಲ್ಲ. ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ. ಅಲ್ಲಿಗೆ ತರಬೇತಿ ಪಡೆದ ಸಾವಿರಾರು ನುರಿತ ಶಿಕ್ಷಕರು ನೇಮಕವಾಗಲಿ. ನಮ್ಮ ಶಿಕ್ಷಕರು ಗುಣಮಟ್ಟದ ಜ್ಞಾನ ಮತ್ತು ಅನುಭವವನ್ನು ಪಡೆದು ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಶಿಕ್ಷಕರಿಗೆ ಸಡ್ಡುಹೊಡೆಯುವಂತಾಗಲಿ. ಇದರ ಸಾಕ್ಷಾತ್ಕಾರಕ್ಕೆ ಬೇಕಾಗಿರುವುದು ದೂರದೃಷ್ಟಿ, ಇಚ್ಛಾಶಕ್ತಿ, ಬದ್ಧತೆ ಮತ್ತು ಸಂಘಟಿತ ಪ್ರಯತ್ನ. ಇವೆಲ್ಲವೂ ನಿಮ್ಮಲ್ಲಿದೆ. ಈಗ ನಮಗೆ ಹೆಚ್ಚು ಸಮಯವಿಲ್ಲ. ಹಾಗಾಗಿ ಈ ಕೂಡಲೆ ನೀಲನಕ್ಷೆಯೊಂದನ್ನು ಸಿದ್ಧಪಡಿಸಿ. (ಇದನ್ನು ಆಂಗ್ಲಭಾಷೆಯಲ್ಲಿ ಸಚಿವಾಲಯಕ್ಕೆ ಅದಾಗಲೇ ತಲುಪಿಸಿದ್ದೇನೆ.)
-ಎಸ್.ಉಮೇಶ್
umesh.dhatri@gmail.com