ತನಿಖೆ ಮುಗಿದರೂ ಈ 35 ಮಂದಿಗೇಕೆ ಜಾಮೀನು ಸಿಗುತ್ತಿಲ್ಲ?
ಸರ್ಕಾರ ಬದಲಾಗಿದೆ. ಹೊಸ ಭರವಸೆಗಳ ಹೊಸ ಹುಮ್ಮಸ್ಸಿನೊಂದಿಗೆ ನಮ್ಮ ಪೀಳಿಗೆ ಕಂಡ ಅತ್ಯಂತ ಜನಪ್ರಿಯ ನಾಯಕ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಒಳ್ಳೆಯ ದಿನಗಳು ಬರಲಿವೆ ಎಂಬ ಅವರ ಕಂಚಿನ ಕಂಠದ ಭರವಸೆಗೆ ಪ್ರಭಾವಿತನಾದ ಮತದಾರ ವಿರೋಧ ಪಕ್ಷವೂ ಇಲ್ಲದಂತೆ ಅವರನ್ನಾರಿಸಿ 'ಧನ್ಯೋಸ್ಮಿ' ಎಂದಿದ್ದಾನೆ. ಈ ಹಿನ್ನಲೆಯಲ್ಲಿ ನಾವು ಮರೆತೇ ಹೋದ ಒಂದು ವರ್ಗ ಮಾತ್ರ ಒಳ್ಳೆಯ ದಿನದ ನಿರೀಕ್ಷೆಯನ್ನೂ ಕೈಬಿಟ್ಟು ಹತಾಶರಾಗಿ ದಾರಿ ಕಾಣದಂತಾಗಿದ್ದಾರೆ. ಗಣಿ ಅಕ್ರಮದ ಹೆಸರಿನಲ್ಲಿ ನಡೆದುಹೋದ ಉದ್ಯಮಿಗಳ, ರಫ್ತುದಾರರ, ಅಧಿಕಾರಿಗಳ ಬಂಧನ, ತಿಂಗಳುಗಳು ಕಳೆದು ವರ್ಷವಾದರೂ ಜಾಮೀನೇ ಸಿಗದಂಥ ಪರಿಸ್ಥಿತಿ ಇವರನ್ನು ಕಂಗಾಲಾಗಿಸಿದೆ.
ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ಪೂರ್ಣಗೊಂಡಿದೆ. ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿಯಾಗಿದೆ. ಪದೇ ಪದೆ ವಿಚಾರಣೆಗೆ ಮುನ್ನವೇ 'ಗಣಿ ಕಳ್ಳರು' ಎಂದು ಬೊಬ್ಬಿರಿದ ಮಾಧ್ಯಮಗಳಿಗೂ ಈಗ ಇದರಲ್ಲಿ ಯಾವ ಆಸಕ್ತಿಯೂ ಉಳಿದಿಲ್ಲ. ನಿಧಾನವಾಗಿ ಜನರ ಮನಸ್ಸಿನಿಂದ ಈ ಪ್ರಕರಣದ ನೆನಪು ಮಾಸಿಹೋಗಿದೆ. ಹಾಗೇ ವರ್ಷಗಟ್ಟಲೇ ಜೈಲಿನಲ್ಲಿ ಕೊಳೆಯುತ್ತಿರುವವರ ನೆನಪೂ ಸಹ... ಈ ಹಗರಣದಲ್ಲಿ ಈವರೆಗೆ ಸರಿಸುಮಾರು 35 ಮಂದಿ ನ್ಯಾಯಾಂಗ ಬಂಧನದಲ್ಲಿದಾರೆ. ತನಿಖೆ ಮುಗಿದಿದೆ. ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ವಿಚಾರಣೆ ಆರಂಭವಾಗುವುದು ಸಧ್ಯದ ಮಟ್ಟಿಗಂತೂ ಅಸಾಧ್ಯ. ಹಾಗಿದ್ದರೂ ತನಿಖೆಯೆಲ್ಲಾ ಮುಗಿದ ಮೇಲೂ ಜಾಮೀನಿಲ್ಲದೇ ನ್ಯಾಯಾಂಗ ಬಂಧನದಲ್ಲಿರಿಸಿರುವುದು ಯಾವ ಪುರುಷಾರ್ಥಕ್ಕಾಗಿ? ಎಂದು ಖ್ಯಾತ ವಕೀಲರುಗಳೂ ಪ್ರಶ್ನಿಸುತ್ತಿದ್ದಾರೆ. ಸ್ವಾತಂತ್ಯ ಪ್ರತೀ ಮನುಷ್ಯನ ಜನ್ಮಸಿದ್ಧ ಹಕ್ಕು. ಇದನ್ನು ಪರಿಗಣಿಸಿಯೇ ನ್ಯಾಯಾಲಯಗಳು ಪ್ರತಿ ಪ್ರಕರಣವನ್ನು ಇತ್ಯರ್ಥ ಮಾಡಲು ವರ್ಷಗಟ್ಟಲೇ ಸಮಯವನ್ನು ವ್ಯಯಿಸುತ್ತವೆ. ಸುಧೀರ್ಘವಾಗಿ ವಿಚಾರಣೆ ನಡೆಸಿದ ಮೇಲಷ್ಟೇ ಆರೋಪಿಯನ್ನು ಅಪರಾಧಿಯೋ, ಅಲ್ಲವೋ ಎಂದು ತೀರ್ಮಾನಿಸುತ್ತವೆ.
ಈ 35 ಬಂಧಿತರಲ್ಲಿ ಎಲ್ಲರೂ ಗಣಿ ಮಾಲಕರಲ್ಲ. ರಫ್ತುದಾರರು, ಉದ್ಯಮಿಗಳು, ಅಧಿಕಾರಿಗಳು ಮತ್ತು ಇವರ್ಯಾರೂ ಅಲ್ಲದ ಕೆಲವು ಬಡಪಾಯಿಗಳೂ ಇದ್ದಾರೆ. ಸಿಬಿಐ ತನ್ನ ಆರೋಪ ಪಟ್ಟಿಯಲ್ಲೇ ಉಲ್ಲೇಖಿಸಿರುವಂತೆ ಇವರಲ್ಲಿ ಎಲ್ಲರೂ ಫಲಾನುಭವಿಗಳಲ್ಲ. ಹಾಗಾದರೆ ಮಾಜಿ ಮಂತ್ರಿಗಳಿಂದ ಹಿಡಿದು ಈ ಸರಪಣಿಯ ಕೊನೆಯ ಕೊಂಡಿಯಾಗಿರುವ ರಫ್ತುದಾರರವರೆಗೆ ಒಬ್ಬರೂ ಜಾಮೀನಿಗೆ ಅರ್ಹರಲ್ಲವೇ? ಅದರಲ್ಲೂ ರಫ್ತುದಾರನ ಪಾತ್ರ ಬಹಳ ಸೀಮಿತವಾದ್ದು. ಆತ ಗಣಿ ಮಾಲಕನೂ ಅಲ್ಲ, ಅಕ್ರಮದ ಫಲಾನುಭವಿಯಂತೂ ಖಂಡಿತ ಅಲ್ಲ. ಅಕ್ರಮ ಗಣಿಗಾರಿಕೆ ಎಂಬುದು ಗಣಿ ಅಗೆದವರಿಗೆ ಅನ್ವಯಿಸುತ್ತದೆಯೇ ಹೊರತು ಮಾರುಕಟ್ಟೆಯಲ್ಲಿ ಹಣಕೊಟ್ಟು ಖರೀದಿಸಿ, ಖರೀದಿಸಿದ ಅದಿರಿಗೆ ನಾನಾ ರೀತಿಯ ತೆರಿಗೆಯನ್ನೂ ಕಟ್ಟಿ ರಫ್ತು ಮಾಡಿದವ ಅಪರಾಧಿಯೇ? ರಫ್ತಿಗೆ ಅದರದ್ದೇ ಆದ ನಿಯಮಗಳಿವೆ. ಸರಿಯಾದ ದಾಖಲೆಗಳಿಲ್ಲದೇ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅದಿರನ್ನು ರಫ್ತು ಮಾಡಲು ಸಾಧ್ಯವಿಲ್ಲ. ಇವರು ಆರೋಪಿಗಳಾದರೆ, ಇವರಿಂದ ಖರೀದಿಸಿದ ಕಂಪೆನಿಗಳೂ ಆರೋಪಿಗಳಲ್ಲವೇ? ಈ ಪ್ರಕರಣವೇ ವಿಚಿತ್ರವಾಗಿದೆ. ಈಗಾಗಲೇ ಸುಪ್ರೀಂಕೋರ್ಟ್, ವ್ಯಾಪಕ ಅಕ್ರಮಗಳಲ್ಲಿ ತೊಡಗಿವೆ ಎಂದು ಸಾಬೀತಾದ ಹಲವು ಗಣಿಗಳನ್ನು 'ಸಿ' ಕೆಟಗರಿ ಎಂದು ಗುರುತಿಸಿ, ಆಯಾ ಗಣಿ ಮಾಲಕರ ಪರವಾನಗಿ ರದ್ದುಪಡಿಸಿ, ದಂಡ ವಿಧಿಸಿದೆ. ಆದರೆ ಈ ಅದಿರನ್ನು ಮಾರುಕಟ್ಟೆಯಲ್ಲಿ ಖರೀದಿಸಿದ ಉದ್ಯಮಿಗಳು ವರ್ಷಗಟ್ಟಲೇ ಜೈಲಿನಲ್ಲಿ ಉಳಿದುಹೋಗುತ್ತಾರೆ.
"ಈ ಹಗರಣಕ್ಕೆ ಸಂಬಂಧಿಸಿದಂತೆ ಇವರನ್ನೆಲ್ಲರನ್ನೂ ಬಂಧಿಸುವ ಅಗತ್ಯವಿತ್ತೇ? ಹಾಗೂ ತನಿಖೆ ಮುಗಿದ ಮೇಲೂ ಇವರಿಗೆ ಜಾಮೀನು ಕೊಡದೇ ಒಳಗಿರಿಸುವ ಅನಿವಾರ್ಯತೆಯಾದರೂ ಏನಿದೆ?" ಅನ್ನುವಂಥಾ ಪ್ರಶ್ನೆ ಇವರ ಪರವಾಗಿ ವಾದಿಸುತ್ತಿರುವ ವಕೀಲರ ಸಮೂಹದಿಂದಲೇ ಕೇಳಿಬರುತ್ತಿದೆ. ಇದು ರಾಜಕೀಯ ಪ್ರೇರಿತವೇ? ಇದರ ಹಿಂದೆ ಯಾವುದಾದರೂ ಕಾಣದ ಕೈ ಕೆಲಸ ಮಾಡುತ್ತಿದೆಯೇ? ಇದು ಸಂವಿಧಾನದ ಅಣಕವಲ್ಲದೇ ಮತ್ತೇನು? ಎಂದು ಪ್ರತಿಷ್ಠಿತ ವಕೀಲರೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬಂಧಿತರಲ್ಲಿ ಬಹುತೇಕರು 40 ವರ್ಷದ ಒಳಗಿನವರು. ಇವರಿಗೆ ಚಿಕ್ಕಚಿಕ್ಕ ಮಕ್ಕಳಿದ್ದಾರೆ, ಇವರ ಬಂಧನದ ಪರಿಣಾಮ ಇವರ ಸಂಸಾರಗಳ ಮೇಲಾಗಿದೆ. ಮಕ್ಕಳು ಅಂತರ್ಮುಖಿಗಳಾಗುತ್ತಿದ್ದಾರೆ, ಕೆಲವರಂತೂ ಮಾನಸಿಕ ತಜ್ಞರ ಬಳಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ವಿಚಾರಣೆಯೂ ಇಲ್ಲ, ತನಿಖೆಯೂ ಮುಗಿದಿದೆ, ಇನ್ನೂ ನ್ಯಾಯಾಂಗ ಬಂಧನದಲ್ಲಿರಿಸಿ ಯಾರಿಗ್ಯಾವ ಲಾಭವಿದೆ? ಇದು ಮಾನವ ಹಕ್ಕು ಉಲ್ಲಂಘನೆಯಲ್ಲವೇ?
ದೊಡ್ಡ ಮರ ಧರೆಗುರುಳಿದಾಗ ಅದರಡಿಗೆ ಸಿಕ್ಕ ತರಗೆಲೆಗಳೆಲ್ಲಾ ನೆಲಕಚ್ಚುವಂತೆ, ದೊಡ್ಡ ಹಗರಣದ ಹಣೆಪಟ್ಟಿ ಹೊತ್ತ ಈ ಪ್ರಕರಣ ತನ್ನಡಿಯಲ್ಲಿ ಬಂದ ಸಾಮಾನ್ಯ ಉದ್ಯಮಿಗಳ, ರಫ್ತುದಾರರ ಬದುಕನ್ನು ನಿರ್ದಯವಾಗಿ ಹೊಸಕಿ ಹಾಕಿಬಿಟ್ಟಿದೆ. ಒಂದು ಜಾಮೀನಿಗಾಗಿ ವರ್ಷಾನುಗಟ್ಟಲೇ ಅಲೆದೂ ಅಲೆದೂ ಇವರ ಕುಟುಂಬವರ್ಗದವರಲ್ಲಿ ಹತಾಶೆ ಮಡುಗಟ್ಟಿದೆ. ದೂರದ ಪಾಕಿಸ್ತಾನದಲ್ಲೋ, ಶ್ರೀಲಂಕಾದಲ್ಲೋ ಇರುವ ಖೈದಿಗಳ ಬಗ್ಗೆ ನಮಗೆಲ್ಲಾ ಕನಿಕರದೆ, ಆದರೆ ಆರ್ಥಿಕ ಅಪರಾಧದಡಿಯಲ್ಲಿ ಬರುವ ಚಿಕ್ಕ ಪುಟ್ಟ ಆಪಾದಿತರನ್ನೂ ವರ್ಷಗಟ್ಟಲೇ ಜೈಲೆಂಬ ಕತ್ತಲ ಕೂಪಕ್ಕೆ ದೂಡಿ, ವಿಚಾರಣೆಗೆ ಮುನ್ನವೇ ಅಪರಾಧಿಗಳ ಪಟ್ಟಕಟ್ಟಿ, ನಮ್ಮದೇ ದೇಶದಲ್ಲಿ, ನಮ್ಮದೇ ನೆಲದಲ್ಲಿ, ನಮ್ಮವರ ಹಕ್ಕು ಕಸಿದು, ಅವರನ್ನು ಅನಾಥರನ್ನಾಗಿಸುತ್ತಿದ್ದೇವೆ. ಇದು ಸರಿಯೇ? ದೇಶದಲ್ಲೆಲ್ಲೂ ಯಾವ ಆರ್ಥಿಕ ಅಪರಾಧಕ್ಕೂ ಆರೋಪಿಗಳಿಗೆ ಇಷ್ಟು ದೀರ್ಘ ಕಾಲ ತನಿಖೆ ಮುಗಿದ ಮೇಲೂ ಜೈಲಿನಲ್ಲಿರಿಸಿರುವ ನಿದರ್ಶನಗಳಿಲ್ಲ. ಇವರ್ಯಾರೂ ಆತಂಕವಾದಿಗಳಲ್ಲ, ಸಮಾಜಘಾತುಕರಲ್ಲ. ಇವರ ಕಛೇರಿಗಳ ಮೇಲೆ ದಾಳಿ ನಡೆಸಿ ಲಭ್ಯವಿರುವ ಎಲ್ಲಾ ದಾಖಲೆಗಳನ್ನೂ ವಶಪಡಿಸಿಕೊಂಡಿರುವ ತನಿಖಾ ಸಂಸ್ಥೆ, ತನಿಖೆಯನ್ನೂ ಮುಗಿಸಿದೆ. ಹೀಗಿದ್ದರೂ, ಈ ಜಾಮೀನು ನಿರಾಕರಣೆ ಯಾಕೆ? ಮಾಧ್ಯಮದ ಅತೀ ರಂಜಿತ ಪ್ರಸಾರದಿಂದ ಪ್ರಭಾವಿತರಾಗಿ, ಈ ಪ್ರಕರಣವನ್ನು ಕೇವಲ ಪೂರ್ವಗ್ರಹದಿಂದಲೇ ನೋಡಲಾಗುತ್ತಿದೆಯೇ?
ನಮ್ಮ ದೇಶದಲ್ಲಿ ಇಂಥ ಹಲವಾರು, ಇದಕ್ಕಿಂತ ಎಷ್ಟೋ ದೊಡ್ಡ ಹಗರಣಗಳು ನಡೆದುಹೋಗಿವೆ. ಹಿಂದಿನ ಯುಪಿಎ ಸರ್ಕಾರಕ್ಕೆ ಅತ್ಯಂತ ಮುಜುಗರವನ್ನುಂಟುಮಾಡಿದ ಪ್ರಕರಣದಲ್ಲಿ ಕಲ್ಲಿದ್ದಲು ಹಗರಣ ಪ್ರಮುಖವಾದದ್ದು. ರಾತ್ರೋರಾತ್ರಿ ಪ್ರಧಾನಿ ಕಛೇರಿಯಿಂದ ಕಡತಗಳೇ ಮಾಯವಾಗಿಹೋದವು. ಪ್ರತಿಪಕ್ಷಗಳು ಸದನದ ಒಳಗೂ, ಹೊರಗೂ ಬೊಬ್ಬಿರಿದವು. ಮಾಧ್ಯಮಗಳು ಮುಗಿಬೀಳುತ್ತಿದ್ದಂತೆಯೇ ಒತ್ತಡ ತಾಳಲಾರದೇ ಕೇಂದ್ರ ಸರ್ಕಾರ ಕೂಡ ತಪ್ಪಾಗಿದ್ದು ನಿಜ ಎಂದು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ನೋಡನೋಡುತ್ತಿದ್ದಂತೆಯೇ ನಿರ್ಮಾಣವಾಗಿಬಿಟ್ಟಿತು. ಆದರೂ ಸಹ ಇಡೀ ಪ್ರಕರಣದಲ್ಲಿ ಸಿಬಿಐ ಒಂದೇ ಒಂದು ಬಂಧನವನ್ನೂ ಮಾಡದಿದ್ದದ್ದು ಮಾತ್ರ ವಿಶೇಷ.
ಕುಮಾರಮಂಗಲಂ ಬಿರ್ಲಾರಿಂದ ಹಿಡಿದು ಪ್ರಧಾನಿ ಕಚೇರಿಯ ಕಾರ್ಯದರ್ಶಿಯವರೆಗೆ ಎಲ್ಲರನ್ನೂ ಹೆಸರಿಸಿ, ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಿದರೂ ಒಂದು ಬಂಧನವೂ ನಡೆಯಲಿಲ್ಲ. ಏಕೆಂದರೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದವರ್ಯಾರೂ 'ಆಮ್ಆದ್ಮಿ' ಎಂದರೆ ಸಾಮಾನ್ಯ ಜನರಲ್ಲ! ಇದರರ್ಥ ಇಷ್ಟೇ, ಬಂಧನವೆಂಬುದು ಅನಿವಾರ್ಯವೇನಲ್ಲ, ತನಿಖಾ ಸಂಸ್ಥೆಗಳ ಆಯ್ಕೆ! ಇದರಂತೆಯೇ ಆದರ್ಶ ಹೌಸಿಂಗ್, 2ಜಿ, ಈ ಎಲ್ಲಾ ಹಗರಣದಲ್ಲೂ, ಪ್ರಕರಣಗಳು ನ್ಯಾಯಾಲಯದಲ್ಲಿದ್ದರೂ ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ಮಾತ್ರ ಆರೋಪಿಗಳು, ಕನಿಷ್ಠ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲೂ ಅವಕಾಶವಿಲ್ಲದೆ ವರ್ಷಾನುಗಟ್ಟಲೆ ಜೈಲಿನ ಮುಚ್ಚಿದ ಬಾಗಿಲುಗಳ ಹಿಂದೆ ಕಾಲ ಕಳೆಯುತ್ತಿದ್ದಾರೆ. ಇವರ ಬಾಳಿನಲ್ಲೂ ಇವರಿಂದ ದೂರಾಗಿ ನಾನಾ ರೀತಿಯಿಂದ ಸಮಸ್ಯೆ, ದುಃಖ ಎದುರಿಸುತ್ತಿರುವ ಇವರ ಕುಟುಂಬ ವರ್ಗದವರಿಗೂ, ನ್ಯಾಯ ಸಿಗುವುದೇ? ಇವರಿಗೂ ಒಳ್ಳೆಯ ದಿನಗಳು ಇನ್ನಾದರೂ ಬರಬಹುದೇ?
= ಆರ್.ಪ್ರಸನ್ನಕುಮಾರ್