ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಐಎಎಸ್ ಫಲಿತಾಂಶ: ತಾಯ್ನುಡಿಯಲ್ಲಿ ಕಲಿಕೆಯ ಒಳಿತಿಗೆ ಸಾಕ್ಷಿ

Mainashree
Updated On : 19 Jun 2014, 9:16 am

ಈ ವರ್ಷ ದೇಶದಾದ್ಯಂತ ಸುಮಾರು ಮೂರುವರೆ ಲಕ್ಷ ಮಂದಿ ಬರೆದ ಐಎಎಸ್ ಪರೀಕ್ಷೆಯಲ್ಲಿ ಕರ್ನಾಟಕದ ಗುರುದತ್ತ ನಾರಾಯಣ ಹೆಗಡೆ ಅವರು 25ನೇ ಸ್ಥಾನ ಗಳಿಸುವುದರೊಂದಿಗೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಇವರಿಗೆ ತುಂಬು ಹೃದಯದ ಅಭಿನಂದನೆಗಳು. ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೇನೆಂದರೆ, ಗುರುದತ್ತ ಅವರು ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದವರು. ಪಿಯುಸಿಯಲ್ಲಿ ಶೇಕಡ 98 ಅಂಕ ಪಡೆದಿದ್ದ ಇವರು ಬೆಂಗಳೂರಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಆರ್‌ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿಕಳೆದೆರಡು ಬಾರಿ ಇಂಗ್ಲಿಷಿನಲ್ಲೆ ಐಎಎಸ್ ಪರೀಕ್ಷೆ ಬರೆದರೂ ಯಶಸ್ಸು ಕಾಣಲಿಲ್ಲ. ಈ ಬಾರಿ ಐಎಎಸ್ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದರು, ರಾಜ್ಯಕ್ಕೆ ಮೊದಲಿಗರಾದರು. ತಮ್ಮ ಸಾಧನೆಯ ಬಗ್ಗೆ ಮಾತನಾಡಿರುವ ಇವರು 'ಮಾತೃಭಾಷೆಯಲ್ಲಿ ನನ್ನ ಪ್ರತಿಭೆಯನ್ನು ಅಭಿವ್ಯಕ್ತ ಮಾಡಿದಂತೆ ಇಂಗ್ಲಿಷಿನಲ್ಲಿ ಆಗಲಿಲ್ಲ' ಅನ್ನುವ ಮಾತನ್ನು ಆಡುತ್ತಾ ತಾಯ್ನುಡಿಯಲ್ಲಿ ಕಲಿಯುವುದು ಸಾಧನೆಗೆ ಪೂರಕ ಎಂಬುದನ್ನೂ ತೋರಿಸಿದ್ದಾರೆ. ಭಾರತರತ್ನ ಡಾ. ಸಿ ಎನ್ ಆರ್ ರಾವ್, ಇನ್ಫೋಸಿಸ್ ಸಂಸ್ಥೆ ಕಟ್ಟಿ ಬೆಳೆಸಿದ ನಾರಾಯಣ ಮೂರ್ತಿಯವರುಗಳು ಸೇರಿದಂತೆ ಕಳೆದ ತಲೆಮಾರಿನಲ್ಲಿ ತಾಯ್ನುಡಿಯಲ್ಲಿ ಕಲಿತು ಸಾಧನೆಯ ಶಿಖರವೇರಿದ ಅನೇಕ ಮಹನೀಯರನ್ನು ನಾವು ಕಂಡಿದ್ದೇವೆ. ಹೀಗೆ ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಸ್ಥಾನಕ್ಕೇರಿದ ಸಾಧಕರ ಪಟ್ಟಿಗೆ ಇಂದು ಗುರುದತ್ತ ಅವರ ಹೆಸರು ಸೇರಿದೆ.
ಅಂತೆಯೇ ಈ ವರ್ಷ ದೇಶಕ್ಕೆ 45ನೇ ಸ್ಥಾನ ಗಳಿಸಿ ತಮಿಳುನಾಡಿನಲ್ಲಿ ಮೊದಲ ಸ್ಥಾನಗಳಿಸಿದ ಜಯಶೀಲನ್ ಅವರು ತಮಿಳು ಮಾಧ್ಯಮದಲ್ಲೇ ಓದಿ ತಮಿಳು ಭಾಷೆಯಲ್ಲೇ ಐಎಎಸ್ ಪರೀಕ್ಷೆ ಬರೆದವರಾಗಿದ್ದಾರೆ. ತಮ್ಮ ಸಾಧನೆಯ ಬಗ್ಗೆ ಹೇಳುತ್ತಾ 'ಮಾತೃಭಾಷೆಯಲ್ಲಿ ಕಲಿಯುವುದೇ ಉತ್ತಮ' ಎಂದೂ ಹೇಳಿದ್ದಾರೆ.
ಇಂದು ನಮ್ಮ ಕನ್ನಡ ಸಮಾಜದಲ್ಲಿ  ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತರೆ ಸಾಧನೆ ಮಾಡಲಾಗದು, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದೇ ಒಳ್ಳೆಯದು ಎನ್ನುವ ತಪ್ಪು ನಂಬಿಕೆಯಿದೆ. ಆದರೆ ತಾಯ್ನುಡಿಯಲ್ಲಿ ಕಲಿಯುವುದೇ ಉತ್ತಮ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆಯಲ್ಲದೆ ಇಂದಿಗೂ ನಮ್ಮ ಸುತ್ತ ಸಾಕ್ಷಿ ಸಿಗುತ್ತಿದೆ. ನಮ್ಮ ನಾಡಿನ ಪೋಷಕರಿಗೆ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಓದಿಸಲು ಗುರುದತ್ತ ಅವರಈ ಸಾಧನೆಯೇ ಸ್ಫೂರ್ತಿಯಾಗಲಿ.
ಇಲ್ಲಿ ನಾವು ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ 2013ರ ಮಾರ್ಚ್‌ನಲ್ಲಿ ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೊಸ ನೀತಿಯೊಂದನ್ನು ರೂಪಿಸಲು ಅಂದಿನ ಸರ್ಕಾರ ಮುಂದಾಗಿತ್ತು. ಅದರ ಅಂಗವಾಗಿ ಹಿಂದಿ-ಇಂಗ್ಲಿಷ್ ಹೊರತು ಪಡಿಸಿ ಬೇರೆ ಯಾವುದೇ ನುಡಿಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಾದರೆ, ಅದೇ ನುಡಿಯ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವವರು ಕೊನೆಯ ಪಕ್ಷ 25 ಮಂದಿ ಇರಬೇಕಿತ್ತು. ಉದಾಹರಣೆಗೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವವರು ಒಂದು ವೇಳೆ 25 ಮಂದಿ ಇಲ್ಲದಿದ್ದಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಸಿಗದೇ ಆ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷಿನಲ್ಲೇ ಪರೀಕ್ಷೆ ಬರೆಯಬೇಕಿತ್ತು. ಈ ತಾರತಮ್ಯದ ನೀತಿಯನ್ನು ದೇಶದಾದ್ಯಂತ ಅನೇಕ ರಾಜಕೀಯ ನಾಯಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಲಿಲ್ಲ. ಕೇಂದ್ರ ಸರ್ಕಾರ ರೂಪಿಸಿದ್ದ ಹೊಸ ನೀತಿ ಜಾರಿಗೆ ಬಂದಿದ್ದರೆ ಗುರುದತ್ತರಂತಹ ಉಜ್ವಲ ಪ್ರತಿಭೆ ಸರ್ಕಾರದ ಸೇವೆಗೆ ಲಭ್ಯವಾಗುತ್ತಿರಲಿಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅವಕಾಶವಿರುವ ಕಾರಣ ಇಂಥ ಪ್ರತಿಭೆಗಳನ್ನು ಸಾರ್ವಜನಿಕ ಸೇವಾ ವಲಯದತ್ತ ಸೆಳೆಯಲು ನೆರವಾಗುತ್ತದೆ. ಗುರುದತ್ತರಂತಹ ಅನೇಕ ಪ್ರತಿಭೆಗಳು ದೇಶದ ಎಷ್ಟೋ ಹಳ್ಳಿಗಳಲ್ಲಿ ಇದ್ದಾರೆ. ಇವರಿಗೆಲ್ಲ ಸಮಾನ ಅವಕಾಶ ರೂಪಿಸುವಂಥ ನೀತಿ ಜಾರಿಯಾಗಬೇಕು. ಸಮಾನ ಅವಕಾಶಗಳಿಂದಲೇ ಹೆಚ್ಚಿನ ಪ್ರತಿಭೆಗಳನ್ನು ದೇಶಸೇವೆಗೆ ಒಳಗೂಡಿಸಲು ಸಾಧ್ಯ.

= ವಲ್ಲೀಶಕುಮಾರ ಎಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement