ಅಂಕಣಗಳು

ಹೆಚ್ಚಿದ ಸಿದ್ದರಾಮಯ್ಯ ಪ್ರತಿಷ್ಠೆ: ಇದು ಶಾಶ್ವತವೇ?

ಕರ್ನಾಟಕದಲ್ಲಿ ಪ್ರಬಲವಾಗಿದ್ದ ಬಿಜೆಪಿ ಸರ್ಕಾರದ ಆಂತರಿಕ ತಿಸ್ರಗಳ ಪರಿಣಾಮವಾಗಿ, ಆ ಪಕ್ಷದ ರಾಜಕೀಯ ಶಕ್ತಿ ಕುಗ್ಗಿದ್ದಾಗ, ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ದೊಡ್ಡ ರೀತಿಯಲ್ಲೇ ಜಯಗಳಿಸಿದ್ದು, ರಾಜ್ಯದ ರಾಜಕೀಯಕ್ಕೇ ಒಂದು ಹೊಸ ತಿರುವನ್ನು ತಂದು ಕೊಟ್ಟಿದ್ದು ನಿಜ.
ಆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, ಸಿದ್ದರಾಮಯ್ಯ ಅವರಿಲ್ಲದೇ ಬೇರೆ ಯಾರೂ ಮುಖ್ಯಮಂತ್ರಿಯಾಗುವುದು ಅಸಾಧ್ಯವೆನ್ನುವ ವಾತಾವರಣ ನಿರ್ಮಾಣವಾಗಿತ್ತು. ಹಾಗೆಂದ ಮಾತ್ರಕ್ಕೇ ಅವರಿಗೆ ಪ್ರತಿಸ್ಪರ್ಧಿಯೇ ಇರಲಿಲ್ಲ ಎಂದೇನೂ ಅಲ್ಲ. ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ ಅವರಿಬ್ಬರೂ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಗಳೇ. ಆದರೆ ಪರಮೇಶ್ವರ ಚುನಾವಣೆಯಲ್ಲಿ ಸೋತುಬಿಟ್ಟರು ಅಥವಾ ಅವರನ್ನು ಅವರ ವಿರೋಧಿ ಆಸಕ್ತ ಹಿತಗಳು ಸೋಲಿಸಿಬಿಟ್ಟವು. ಖರ್ಗೆ ಅವರಿಗೆ ಅಖಿಲ ಭಾರತ ಮಟ್ಟದಲ್ಲಿ ದಲಿತ ಸಮುದಾಯದ ನಾಯಕ ಪಟ್ಟವನ್ನು ಕಟ್ಟಲು ಕಾಂಗ್ರೆಸ್ ವರಿಷ್ಠರು ತೀರ್ಮಾನಿಸಿದ್ದರು. ಅವರು ದೆಹಲಿಯಲ್ಲೇ ಉಳಿಯಬೇಕಾಯಿತು. ಆ ಸ್ಥಿತಿಯಲ್ಲಿ ಇಲ್ಲಿ ಮುಖ್ಯಮಂತ್ರಿಯಾಗಬಲ್ಲ ಸಾಮರ್ಥ್ಯ- ಜನಪ್ರಿಯತೆ ಬೇರೆ ಯಾರಿಗಿತ್ತು? ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರಲ್ಲದೇ ಇದ್ದರೂ ಕಳೆದ ಆರೇಳು ವರ್ಷಗಳಲ್ಲಿ ಕಾಂಗ್ರೆಸ್ ಸಂಸ್ಕೃತಿಯನ್ನು ತಮ್ಮ ಜೀವನದ ಒಂದು ಭಾಗವಾಗಿ ಅಳವಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ಸಿನ ಜನಪ್ರಿಯತೆಯ ಬುನಾದಿ (ಅಹಿಂದ- ಅಲ್ಪಸಂಖ್ಯಾತ ಹಿಂದುಳಿದ ದಲಿತ ಸಮುದಾಯ) ಸ್ವರೂಪದ ನಾಯಕತ್ವದ ಗುಣವನ್ನೂ ಮೈಗೂಡಿಸಿಕೊಂಡಿದ್ದಾರೆ. ಆದ್ದರಿಂದಲೇ ಮುಖ್ಯಮಂತ್ರಿಯಾಗಿದ್ದಾರೆ.
ಅವರ ಆಡಳಿತದ ಒಂದು ವರ್ಷದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ರಾಜ್ಯಮಟ್ಟದಲ್ಲಿ ತೀವ್ರವಾದ ರಾಜಕೀಯ ಸ್ವರೂಪದ ಸವಾಲುಗಳನ್ನೇನೂ ಎದುರಿಸಲಿಲ್ಲ. ಆಡಳಿತದಲ್ಲಿ ಅಲ್ಲಿ-ಇಲ್ಲಿ ಎಡವಿದರೂ ಮುಗ್ಗರಿಸಿ ಬೀಳಲಿಲ್ಲ.
ಆದರೆ ಈ ಅವಧಿಯಲ್ಲಿ ಅವರಿಗೆ ಶಕ್ತಿ ತುಂಬಿದ್ದು ಸ್ಥಳೀಯವಾಗಿ ಅಹಿಂದ ಸಮುದಾಯ, ದೆಹಲಿಯ ಮಟ್ಟದಲ್ಲಿ ದಿಗ್ವಿಜಯಸಿಂಗ್ ಅವರ ಬೆಂಬಲ. ಸ್ಥಳೀಯವಾಗಿ ಸಿದ್ದರಾಮಯ್ಯ ಜನರ ಅವಹೇಳನಕ್ಕೆ ತುತ್ತಾಗುವಂತಹದ್ದೇನೂ ಮಾಡಿಲ್ಲ. ಅವರ ಸಚಿವ ಸಂಪುಟದ ಸಂಗಾತಿಗಳು ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿ, ಲೇವಡಿಗೆ ಗುರಿಯಾಗಿರಬಹುದು.  
ರಾಜಕೀಯವಾಗಿ ಮಂತ್ರಿಗಳ ನೇಮಕ, ಲೋಕಸಭೆ ಚುನಾವಣೆ, ವಿಧಾನ ಪರಿಷತ್ತಿನ ಚುನಾವಣೆ, ನಾಮಕರಣಗಳಂತಹ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಹೇಳಿದ ಹೆಸರುಗಳನ್ನೇ ಬಹುಮಟ್ಟಿಗೆ ವರಿಷ್ಠರು ಒಪ್ಪಿದ್ದಾರೆ. ಈ ಬೆಳವಣಿಗೆಯನ್ನು ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಸದ್ಯದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ, ಅಖಿಲ ಭಾರತದಲ್ಲಿ ಕಂಡುಬಂದಿದ್ದ ವಿಶಿಷ್ಟ ವಾತಾವರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ ಎನ್ನುವಂತಿಲ್ಲ. ದೊಡ್ಡ ರೀತಿಯಲ್ಲಿ ಗೆದ್ದಿಲ್ಲ ಎನ್ನುವುದೂ ನಿಜ.
ಒಂದು ವರ್ಷದ ಆಡಳಿತ ಹೇಗಿತ್ತು?
ಯಥಾಪ್ರಕಾರ ಅಷ್ಟೇ. ಕೊಡುಗೆ- ಉಡುಗೊರೆಗಳ ಪ್ರಕಟಣೆಯನ್ನೇ ಆಧಾರವಾಗಿಟ್ಟುಕೊಂಡರೆ, ಸಿದ್ದರಾಮಯ್ಯ ಯಾರಿಗೇನೂ ಕಡಿಮೆ ಇಲ್ಲ. ಆದರೆ ಆಡಳಿತದ ದಕ್ಷತೆ (ವರ್ಗಾವಣೆಯ ಅನಂತರ), ಶಿಕ್ಷಣ ವಲಯದ ಗೊಂದಲ, ಹಣಕಾಸು ವ್ಯವಸ್ಥೆಯ ನಿರ್ವಹಣೆ ಅಭ್ಯುದಯಕ್ಕೆ ಬುನಾದಿಯಂತಹ ವಿಷಯಗಳಲ್ಲಿ ಮಾಡಿದ್ದಕ್ಕಿಂತ, ಮಾಡದೇ ಇದ್ದಿದ್ದೇ ಹೆಚ್ಚು. ಅದು ಮೊದಲ ವರ್ಷ.
ಇನ್ನೊಂದು ಪರೀಕ್ಷೆ: ಈಗ ಸಿದ್ದರಾಮಯ್ಯ- ಕಾಂಗ್ರೆಸ್, ರಾಜ್ಯದಲ್ಲಿ ಎರಡು ಪ್ರಮುಖ ಹಾಗೂ ಭಿನ್ನ ಸ್ವರೂಪದ ಚುನಾವಣೆಗಳನ್ನು ಎದುರಿಸುತ್ತಿದೆ. ಮೊದಲನೆಯದು ವಿಧಾನ ಪರಿಷತ್ತಿನ ಅಧ್ಯಾಪಕರು, ಪದವಿಧರರ ಕ್ಷೇತ್ರಗಳ ಚುವಾವಣೆ. ಎರಡನೆಯದು ಪಂಚಾಯಿತಿ  ರಾಜ್ಯ ಸಂಸ್ಥೆಗಳ ಬೇರುಮಟ್ಟದ ಚುನಾವಣೆ.
ವಿಧಾನ ಪರಿಷತ್ತಿನ, ಪ್ರತಿಷ್ಠಿತ- ಸುಶಿಕ್ಷಿತ ಮತದಾರ ಸಮುದಾಯದ ನಡುವೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ, ಅದು ಸಿದ್ದರಾಮಯ್ಯ ಅವರ ಪ್ರತಿಷ್ಠೆಗೇ ಪೆಟ್ಟು ಬಿದ್ದಂತೆ. ಪಂಚಾಯಿತಿ ರಾಜ್ಯ ಸಂಸ್ಥೆಗಳ ಚುನಾವಣೆಯಲ್ಲಿ ಸಾಮಾನ್ಯವಾಗಿ ಆಳುವ ಪಕ್ಷವೇ ಗೆಲ್ಲುವುದು. ಆದರೆ ಈ ಬಾರಿ ಸಿದ್ದರಾಮಯ್ಯ ಅಹಿಂದ ಗುರಾಣಿಯನ್ನೇ ಹಿಡಿದು ಚುನಾವಣೆ ರಣರಂಗವನ್ನು ಪ್ರವೇಶಿಸಿದರೆ, ಬೇರು ಮಟ್ಟದಲ್ಲಿ ಏಕಾಂಗಿಯಾಗಿ ಸಾಮಾಜಿಕ ಆಸಕ್ತ ಹಿತಗಳನ್ನು ಎದುರಿಸುವುದು ಕಷ್ಟ.
ಯಾವುದೇ ಸರ್ಕಾರವಾಗಿರಲಿ ಯಾರೇ ಮುಖ್ಯಮಂತ್ರಿಯಾಗಿರಲಿ, ಅವರ ಜನಪ್ರಿಯತೆ ಹಿಗ್ಗುವುದು, ಕುಗ್ಗುವುದು ಅವರ ಸಾಧನೆಯ ಆಧಾರದ ಮೇಲಷ್ಟೇ ಅಲ್ಲ. ಜನರ ಅನಿಸಿಕೆಯ ಮಾನದಂಡವೇ ಬೇರೆ. ಅಧಿಕಾರಿಗಳನ್ನು ಸಾರ್ವಜನಿಕರ ಮುಂದೆ ಬಹಿರಂಗವಾಗಿ ನಡೆಸಿಕೊಳ್ಳುವ ರೀತಿ-ನೀತಿಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ. ಈಚೆಗೆ ಸಿದ್ದರಾಮಯ್ಯ ಬಹಿರಂಗವಾಗಿ ಅಧಿಕಾರಿಗಳನ್ನು ತೆಗಳುವುದು ಹೆಚ್ಚಾಗಿದೆ. ಅವರಲ್ಲಿ ಒಳ್ಳೆಯ ಕೆಲಸ ಮಾಡುವ- ಮಾಡಿರುವ ಅಧಿಕಾರಿಗಳೂ ಇರುತ್ತಾರೆ. ಸೀಮಿತ ಜನವರ್ಗಗಳಲ್ಲಿ ಆ ಅಧಿಕಾರಿಗಳನ್ನು ಗೌರವಿಸುವ ಜನರೂ ಇರತ್ತಾರೆ. ಅಂತಹವರನ್ನು ಬಹಿರಂಗ ವಾಗ್ದಂಡನೆಗೆ ಗುರಿ ಮಾಡಿದರೆ, ಕೆಲವು ಜನ ವರ್ಗಗಳ ವಿರೋಧವನ್ನು ಕಟ್ಟಿಕೊಳ್ಳುವುದು ಸಹಜ.
ಶಾಸಕಾಂಗ ಕಾಂಗ್ರೆಸ್ ಪಕ್ಷವನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಪರಮೇಶ್ವರ್ ಅವರು ಪ್ರವೇಶಿಸಿದ್ದಾರೆ. ಈಗಿನ ಪರಿಸ್ಥಿತಿಯೇ ಮುಂದುವರಿದರೆ ಕಾಂಗ್ರೆಸ್ಸಿನ ಎರಡು ಪ್ರಬಲ ಜನಾಂಗೀಯ ಶಕ್ತಿಗಳನ್ನು ಪ್ರತಿನಿಧಿಸುವ ಎರಡು ಕೇಂದ್ರಗಳು ಜನ್ಮತಾಳುವುದರಲ್ಲಿ ಅನುಮಾನವೇ ಇಲ್ಲ.
ಸರ್ಕಾರವನ್ನು ನಡೆಸುತ್ತಿರುವುದೇ ಮೈಸೂರು- ಚಾಮರಾಜನಗರ ಸೀಮೆಯ ಮೂವರು ನಾಯಕರು ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಆ ಭಾವನೆಯನ್ನು ಬೆಳೆಯಲು ಬಿಟ್ಟರೆ, ಮುಂದಿನ ಅನಾಹುತಕ್ಕೆ ಆಹ್ವಾನ ನೀಡಿದಂತೆಯೇ ಆದೀತು. ಈ ತ್ರಿಮೂರ್ತಿ ಕೂಟ, ಮೇಲ್ಜಾತಿ- ಮೇಲ್ವರ್ಗಗಳ ವಿರೋಧಿ ಎನ್ನುವ ಪ್ರಚಾರ ಅಥವಾ ಅಪಪ್ರಚಾರ ಆರಂಭವಾಗಿದೆ.
ಸಿದ್ದರಾಮಯ್ಯ ಹಾಗೂ ಅವರ ಜತೆ ರಾಜಕೀಯ ಅಧಿಕಾರದ ಶಕ್ತಿಯನ್ನು ಹಂಚಿಕೊಂಡಿರುವವರು ಅಹಿಂದ ಸಮುದಾಯದಲ್ಲೂ ಶ್ರೀಮಂತರಿಗೇ ಮಣೆ ಹಾಕುತ್ತಿದ್ದಾರೆನ್ನುವ ದೂರೂ ಕೇಳಿ ಬಂದಿದೆ. ಸಿದ್ದರಾಮಯ್ಯ ಗೆಳೆಯರು, ಕಾಂಗ್ರೆಸ್ಸಿನ ಪರವಾಗಿ ರಾಜ್ಯಸಭೆ - ವಿಧಾನ ಪರಿಷತ್ತಿಗೆ ಆರಿಸಿರುವ ಅಭ್ಯರ್ಥಿಗಳಲ್ಲಿ, ವಿಧಾನ ಪರಿಷತ್ತಿಗೆ ನಾಮಕರಣ ಮಾಡುತ್ತಿದ್ದಾರೆನ್ನುವ ವದಂತಿಗಳಲ್ಲಿ ಕಂಡು ಬಂದಿರುವ ಹೆಸರುಗಳಲ್ಲಿ, ಮೊಳಕಾಲ್ಮೂರು ಸೀಮೆಯ ಕಾಡಗೊಲ್ಲತಿ ಜಯಮ್ಮ ಅವರನ್ನು ಬಿಟ್ಟರೆ ಉಳಿದವರೆಲ್ಲ ಕೋಟ್ಯಧಿಪತಿ, ಶತ ಕೋಟ್ಯಧಿಪತಿಗಳೇ.
ಇದನ್ನು ಜನ ಗಮನಿಸುವುದಿಲ್ಲ ಎಂದು ಭಾವಿಸಬಾರದು. ಸಿದ್ದರಾಮಯ್ಯ ಅವರೇ ಗುರುಸ್ಥಾನದಲ್ಲಿಟ್ಟಿರುವ ದೇವರಾಜ ಅರಸು ಅವರು ಒಮ್ಮೆ ಖಾಸಗಿ ಮಾತುಕತೆಯಲ್ಲಿ ಆಡಿದ ಮಾತು: ವರ್ಣ ಸಂಘರ್ಷದ ಮೂಲಕ ವರ್ಗ ಸಂಘರ್ಷವನ್ನು ಅಳಿಸಿ ಹಾಕುವ ಪ್ರಯತ್ನಕ್ಕೆ ಸಿಗುವ (ಸಿಕ್ಕರೆ) ಯಶಸ್ಸು ಕ್ಷಣಿಕ - ಕಾಲಕ್ರಮದಲ್ಲಿ ಅದು ಶೋಷಿತ ಸಮಾಜಗಳ ಶೋಷಣೆಯ ಸ್ಥಾನವಾಗುತ್ತದೆ ಅಷ್ಟೇ.
ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿರುವಂತಿಲ್ಲ. ಈಗಿನ ರಾಜಕೀಯ ಅಧಿಕಾರದ ಹಂಚಿಕೆಯ ವ್ಯವಸ್ಥೆಯಲ್ಲಿ ಪ್ರಾದೇಶಿಕವಾಗಿ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡ ಘಟ್ಟದ ನಾಡಿಗೆ ಸೂಕ್ತ ರೀತಿಯ ಪ್ರಾತಿನಿಧ್ಯ ಸಿಕ್ಕಿಲ್ಲ. ಜನಾಂಗೀಯ ಪ್ರಾತಿನಿಧ್ಯದ ದೃಷ್ಟಿಯಿಂದ ನೋಡಿದರೆ, ರಾಜ್ಯದ ಅತಿ ಪ್ರಬಲ ಶ್ರೀಮಂತ, ಸುಶಿಕ್ಷಿತ ವೀರಶೈವ ಸಮಾಜವನ್ನು ಕಡೆಗಾಣಿಸಿರುವುದು ಮೇಲ್ನೋಟಕ್ಕೇ ಗೋಚರವಾಗುತ್ತದೆ. ದಕ್ಷಿಣ ಕರ್ನಾಟಕದ ಒಕ್ಕಲಿಗರೂ ಈಗ ಆಳುವ ಕೂಟದ ಅವಕೃಪೆಗೆ ಪಾತ್ರವಾಗಿರುವಂತಿದೆ. ಭಾಷಾವಾರು ಅಲ್ಪ ಸಂಖ್ಯಾತ ಸಮಾಜವಂತೂ ಯಾರ ಕಣ್ಣಿಗೂ ಬೀಳುವಂತಿಲ್ಲ. ಎಲ್ಲಿಂದಲೋ ಬಂದವರು ಅವರು. ಎಲ್ಲೋ ಇದ್ದಾರೆ. ಅಲ್ಲೇ ಇರ್ತಾರೆ, ಇದು ಆ ಸಮುದಾಯಗಳಿಗೇ ಅನ್ವಯವಾಗುವ ಮಾತು. ಅದರಲ್ಲಿನ ಶ್ರೀಮಂತರಿಗಲ್ಲ.
ಈಗಾಗಲೇ ಸಿದ್ದರಾಮಯ್ಯ ಕೇಂದ್ರದ ಜತೆ ಸಂಘರ್ಷದ ಮನೋಧರ್ಮವನ್ನು ಪ್ರದರ್ಶಿಸಿದ್ದಾರೆ. ಮುಂದೆ ಕೇಂದ್ರ - ರಾಜ್ಯಗಳ ನಡುವಣ ಸಂಬಂಧದ ತೆರಿಗೆ (ಜಿಎಸ್‌ಟಿ) ವಿವಾದವಾಗಲಿ, ಆಹಾರ ಧಾನ್ಯಗಳ ಸಂಗ್ರಹ ಕುರಿತ ಭಿನ್ನಾಭಿಪ್ರಾಯವಾಗಲಿ ಒಂದು ಸಂಘರ್ಷದ ರೂಪದಲ್ಲಿ ಪ್ರಕಟವಾದರೆ, ಕರ್ನಾಟಕ ಕೇಂದ್ರದ ವಿರುದ್ಧ ನಿಲ್ಲುವ ರಾಜ್ಯಗಳಲ್ಲಿ ಒಂದು. ಅದರಿಂದ ಇಲ್ಲಿನ ಕಾಂಗ್ರೆಸ್ ನಾಯಕರಿಗೆ ಹೋರಾಟಗಾರರ ಕಿರೀಟ ಧಾರಣೆಯಾಗಬಹುದು. ಆದರೆ ಸಂಘರ್ಷದ ಸಂಕಟವನ್ನು ಅನುಭವಿಸಬೇಕಾದವರು ರಾಜ್ಯದ ಬಡವರೇ. ಲೋಕಸಭೆ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ಸಿನ ಘೋಷಣೆಗಳಲ್ಲಿ ಪ್ರಧಾನವಾಗಿ ಪ್ರಸ್ತಾಪವಾಗಿದ್ದು "ನಾವು ಸರ್ವ ಜನಾಂಗವನ್ನೂ ಒಳಗೊಳ್ಳುವ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಆ ಭಾವನೆಯನ್ನು ಇನ್ನಷ್ಟು ಗಟ್ಟಿಯಾಗಿ ಮಾಡುತ್ತೇವೆ" ಎನ್ನುವ ಘೋಷಣೆ.
ಆ ಘೋಷಣೆಗೆ ಕರ್ನಾಟಕ ಕಾಂಗ್ರೆಸ್‌ನ ಸಂಪೂರ್ಣವಾದ ಸಹಮತ ಇದ್ದಂತೆ ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ. ಈಗೇನೋ ಸಿದ್ದರಾಮಯ್ಯ ಅವರ ಪ್ರತಿಷ್ಠೆ ಹೆಚ್ಚಿದೆ. ಆದ್ದರಿಂದ ಸ್ವಜನ, ಸ್ವಂತದವರ ಪಕ್ಷಪಾತದ ಆರೋಪ ಅಂಟಿ ಕೊಳ್ಳದೇ ಇರಬಹುದು. ಆದರೆ ಕಾಲ ಯಾವಾಗಲೂ ಹೀಗೇ ಇರುವುದಿಲ್ಲ. ಕಾಲ ಚಕ್ರ ನಿರಂತರವಾಗಿ ಉರುಳಲೇ ಬೇಕು. ಅದನ್ನು ಸಿದ್ದರಾಮಯ್ಯ ಮತ್ತು ಅವರ ಗೆಳೆಯರು ಮರೆತರೆ ಅದಕ್ಕೆ ತೆರಬೇಕಾಗುವ ಬೆಲೆ ಬಲು ದೊಡ್ಡದು.
ಕಿಡಿಗೇಡಿತನ : ತುರ್ತು ಪರಿಸ್ಥಿತಿಯ ಕಾಲದ ಜನತಾ ಹೋರಾಟಗಾರ, ಅದಕ್ಕೂ ಮುಂಚೆ ಭದ್ರಾವತಿಯ ಕನ್ನಡ ಚಳವಳಿಗಾರ, ಅನಂತರ ರಾಜ್ಯದಲ್ಲಿ ಗುಂಡೂರಾವ್ ಕಾಲದಲ್ಲಿ ಆಹಾರ ಮಂತ್ರಿ, ಮುಂದೆ ದೇವೇಗೌಡರ ಕಾಲದಲ್ಲಿ ಕರ್ನಾಟಕ ಪ್ರದೇಶ ಜನತಾದಳದ ಅಧ್ಯಕ್ಷ, ಗೌಡರು ಪ್ರಧಾನಿಯಾದಾಗ ನಾಗರಿಕ ವಿಮಾನಯಾನ ಮಂತ್ರಾಲಯದ ಅಧಿಪತಿ, ಸಿ.ಎಂ. ಇಬ್ರಾಹಿಂ ಅವರು ಅದ್ಯಾವಾಗ ಸಿದ್ದರಾಮಯ್ಯ ಅವರ ಪರಮಾಪ್ತ ಮಿತ್ರರಾದರೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಕರ್ನಾಟಕ ಸರ್ಕಾರ ಅವರನ್ನು ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ (ರಾಜ್ಯಗಳಲ್ಲಿ ಆಯೋಗ ಇರುವುದಿಲ್ಲ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆ ಮಂಡಳಿಗೆ ಹಿಂದೆ ಅಧ್ಯಕ್ಷರಾಗಿದ್ದವರು ಯಾರು ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!