ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪ್ರಕೃತಿಯ ಮಡಿಲಲ್ಲಿ ಸೋಜಿಗ ಹುಟ್ಟಿಸುವ ಸಸ್ಯ ಸಂಪತ್ತು

Mainashree
Updated On : 22 Jun 2014, 9:34 am

ಕಳೆದ ಎರಡು ವಾರಗಳಿಂದ ಅದ್ಭುತ ಸಸ್ಯ ಸಂಪತ್ತಿನ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ. ಓದುಗರು ಈ ಬಗ್ಗೆ ತಿಳಿದುಕೊಂಡು ಹೆಚ್ಚಿನ ಸಸ್ಯಗಳನ್ನು ಬಳಸಲಿ ಎಂಬುದು ನನ್ನ ಆಸೆ. ಮಾತ್ರವಲ್ಲ ಆಸಕ್ತಿಯುಳ್ಳ ರೈತರು ಬಂಜರು ಭೂಮಿಯಲ್ಲಿ ಇವುಗಳನ್ನು ಬೆಳೆಸಿ, ಅವುಗಳಿಂದ ಜನಸಾಮಾನ್ಯರಿಗೆ ಉಪಯುಕ್ತವಾಗುವಂತಹ ವಸ್ತುಗಳನ್ನು ಉತ್ಪಾದಿಸಲು ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಬಹುದಾಗಿದೆ.
ಅಂಟುವಾಳ: ಇದರ ಕಟ್ಟಿಗೆಯನ್ನು ಗಾಡಿ, ಕೊಡಲಿಕಾವು, ಬಾಚಣಿಗೆ ಇತ್ಯಾದಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.  ಆದರೆ ಇದರ ಕಾಯಿ ದಾರುವಿನಿಂದ ಹೆಚ್ಚು ಉಪಯೋಗ.  
ನಾಡು ಬಾದಾಮಿ: ಬೀಜದಿಂದ ಬರುವ ಎಣ್ಣೆಯೂ ಉಪಯೋಗಿಸಲ್ಪಡುತ್ತದೆ. ಬೀಜದ ಹಿಂಡಿಯನ್ನು ಹಂದಿಗಳಿಗೆ ಆಹಾರವಾಗಿ ಬಳಸುವುದುಂಟು, ತೊಗಟೆ ಹಾಗೂ ಎಲೆಗಳಿಂದ ಬರುವ ಕರಿಯ ಬಣ್ಣವನ್ನು ಹಿಂದೆ ಕೆಲವೆಡೆ ದಂತಗಳಿಗೆ ಬಣ್ಣ ಕೊಡಲು ಉಪಯೋಗಿಸುತ್ತಿದ್ದರು. ಈ ಬಣ್ಣವನ್ನು ಶಾಯಿ ತಯಾರಿಕೆಗೂ ಬಳಸಲಾಗುತ್ತದೆ.  
ಹಾಲೆ (ಬೆಪ್ಪಾಲೆ): ಇದನ್ನು ಆಟದ ಸಾಮಾನುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ ಹಾಗೂ ದೇವಾಲಯಗಳಲ್ಲಿ ಮರದ ವಿಗ್ರಹಗಳನ್ನು ಮಾಡಲು ಬಳಸುತ್ತಾರೆ. ತೊಗಟೆ ಮತ್ತು ಬೀಜಗಳು ಔಷಧಿಗಾಗಿಯೂ ಉಪಯೋಗಿಸಲ್ಪಡುತ್ತವೆ.  
ಎಲಚಿ ಬೋರೆ: ಇದರ ದಾರುವು ಗಡುಸಾಗಿದ್ದು, ಬಾಳಿಕೆಯುತವಾಗಿದ್ದು, ಕಿರುದಿಮ್ಮಿ, ಕೃಷಿ ಉಪಕರಣಗಳು ಹಾಗೂ ಸೌದೆ, ಇದ್ದಿಲುಗಳಿಗೆ ಉಪಯುಕ್ತ. ಮುಳ್ಳುಗಳು ಬೇಲಿಗೆ ಅನುಕೂಲ, ಎಲೆಗಳನ್ನು ದನಗಳ ಮೇವಿಗೆ ಬಳಸುವುದುಂಟು, ತೊಗಟೆಯು ಬಂಧಕ ಪ್ರವೃತ್ತಿಯನ್ನು ಹೊಂದಿರುತ್ತದೆ.
ಈ ಕೆಳಕಂಡ ಸಸ್ಯಗಳಿಂದ ಟ್ಯಾನಿನ್ ಉತ್ಪಾದಿಸುತ್ತಾರೆ:
ವ್ಯಾಟಲ್ (ಆಸ್ಟ್ರೇಲಿಯಾ ಜಾಲಿ): ಇದರ ತೊಗಟೆಗಳಿಂದ ಟ್ಯಾನಿನ್ ತೆಗೆಯಬಹುದಾಗಿದೆ.  
ತಂಗಡಿ: ತೊಗಟೆಯಿಂದ ಉತ್ತಮ ಟ್ಯಾನಿನ್ ದೊರಕುತ್ತದೆ. ತೊಗಟೆ ಹಾಗೂ ಬೀಜ ಔಷಧಿಗಾಗಿ ಬಳಸಲ್ಪಡುವುದುಂಟು, ಅರಣ್ಯ ಲಘು ಫಸಲುಗಳಲ್ಲಿ ಇದು ಮುಖ್ಯ ಸ್ಥಾನ ಪಡೆದಿದೆ.
ಮರಗೆಲಸದಲ್ಲಿ ಬಳಸಲ್ಪಡುವ ಮರಗಳು
ಕಗ್ಗಲಿ ಕಾಚು: ಇದರ ಕಟ್ಟಿಗೆ ಮನೆ ಕಂಬಗಳು, ಗಾಡಿ ಚಕ್ರಗಳು, ಕೃಷಿ ಉಪಕರಣಗಳು, ಕಾವುಗಳು ಇನ್ನಿತರ ಸಾಮಗ್ರಿಗಳಿಗೆ ಉಪಯುಕ್ತವಾಗಿದ್ದು, ಇದರಿಂದ ಒಳ್ಳೆಯ ಸೌದೆ ಹಾಗೂ ಇದ್ದಿಲೂ ದೊರಕುತ್ತದೆ.
ಹೊಡೆ ಜಾಲಿ: ಇದರ ಕಟ್ಟಿಗೆಯನ್ನು ಸೌದೆಗಾಗಿ ಉಪಯೋಗಿಸುತ್ತಾರೆ.
ಬಬೂಲ್: ಕಟ್ಟಿಗೆ ಮತ್ತು ಎಲೆಗಳ ದಾರುವು ಗೃಹ ನಿರ್ಮಾಣಕ್ಕೆ, ಗಾಡಿ ಚಕ್ರಗಳಿಗೆ, ದೋಣಿ ಕಟ್ಟಲು, ಕೃಷಿ ಉಪಕರಣಗಳಿಗೆ, ಒನಕೆ ಗಾಣಗಳ ತಯಾರಿಕೆಗೆ ಬಳಕೆಯಾಗುತ್ತದೆ. ತೊಗಟೆ ಹಾಗೂ ಕಾಯಿಯಿಂದ ಟ್ಯಾನಿನ್ ದೊರಕುತ್ತದೆ. ಎಲೆಗಳು ಮೇವಿಗೆ ಬರುತ್ತವೆ. ಮುಳ್ಳುಗಳಿರುವ ಕೊಂಬೆ ರೆಂಬೆಗಳು ಬೇಲಿಗೆ ಬರುತ್ತವೆ. ತೊಗಟೆಯಿಂದ ಬರುವ ಅಂಟು ಔಷಧಿಗಳ ತಯಾರಿಕೆಗೆ ಮತ್ತು ಕ್ಯಾಲಿಕೊ ಮುದ್ರಣದಲ್ಲಿಯೂ ಉಪಯುಕ್ತ.  
ಹೆಮ್ಮರ: ಇದರ ದಾರುವು ಬಿಳಿ-ಹಳದಿ ಛಾಯೆ ಹೊಂದಿದ್ದು, ಒತ್ತು ಕಣ ರಚನೆಯಿಂದ ಹಗುರವಾಗಿದ್ದು ಬೆಂಕಿ ಕಡ್ಡಿಗಳ ತಯಾರಿಕೆಯಲ್ಲಿ, ಪ್ಯಾಕಿಂಗ್, ಹಲಗೆ, ಆಟದ ಸಾಮಾನುಗಳಿಗೆ ಬಳಸಲಾಗುತ್ತದೆ. ಕುಟ್ಟೆ ಹುಳುವಿನ ಬಾಧೆಗೆ ಈಡಾಗುವುದು.
ಬಾಗೆ: ಈ ಮರವು ಚೇಗು ಕರಿ ಕಂದು ಬಣ್ಣದ್ದಾಗಿದ್ದು, ಅಲ್ಲಲ್ಲಿ ಕರಿ, ಬಿಳಿ ಗೆರೆಗಳನ್ನು ಹಾಳಿತಗಳು ಅಲಂಕಾರಯುತವಾಗಿದ್ದು ಗೃಹ ನಿರ್ಮಾಣ, ಪಿಠೋಪಕರಣಗಳು, ರೈಲ್ವೆ ಸ್ಲೀಪರ್ ಇತ್ಯಾದಿಗಳಿಗೆ ಬಳಸಲ್ಪಡುತ್ತದೆ.
ಬೆಳ್ಳಟ್ಟೆ ಸಾಲುಬಾಗೆ: ಇದರ ಚಾರುವು ಹೆಚ್ಚು ಪ್ರಮಾಣದ ಬಿಳಿ ಮರಹೊಂದಿದ್ದು, ಚೇಗು ಕಂದು ಬಣ್ಣದ್ದಾಗಿ ಕರಿಗೆರೆಗಳನ್ನು ಹೊಂದಿರುತ್ತದೆ. ಗೃಹ ನಿರ್ಮಾಣದಲ್ಲಿ, ಕಂಬಗಳಿಗೆ, ಕೃಷಿ ಉಪಕರಣಗಳಿಗೆ, ಹಲಗೆ ತಯಾರಿಕೆಗೆ ಉಪಯುಕ್ತ.  
ಗೋಡಂಬಿ, ಕಾಜು: ಇದರ ದಾರುವು ಕಂದುಬಣ್ಣ ಹೊಂದಿದ್ದು ಕೆಲವೊಮ್ಮೆ ದೋಣಿಗಳ ಭಾಗಗಳಿಗೆ ಉಪಯೋಗಿಸಲ್ಪಡುತ್ತದೆ. ನೇರಕಾಂಡವಿಲ್ಲದಿರುವುದರಿಂದ ಹೆಚ್ಚು ಉಪಯೋಗವಿಲ್ಲ. ಒಣಗಿದ ಮರಗಳನ್ನು ಸೌದೆಗಾಗಿ ಬಳಸುತ್ತಾರೆ.  
ದಿಂಡಿಗ, ಬೆಜ್ಜಲು: ಇದರ ದಾರುವು ಗಡಸು, ಬಲಯುತ ಹಾಗೂ ನಾರುಗಟ್ಟಿ ಆಗಿದ್ದು, ಗಾಡಿ ಕಂಬಗಳಿಗೆ, ಕೊಡಲಿ ಕಾವುಗಳಿಗೆ, ಕೃಷಿ ಉಪಕರಣಗಳಿಗೆ, ದೋಣಿ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತದೆ. ಇದರಿಂದ ಉತೃಷ್ಟ ಸೌದೆ ಹಾಗೂ ಇದ್ದಿಲು ದೊರಕುವುದು. ಇದರ ಕಾಂಡದಿಂದ ಬರುವ ಅಂಟು ಕ್ಯಾಲಿಕೊ ಮುದ್ರಣದಲ್ಲಿ ಬಳಸಲ್ಪಡುತ್ತದೆ.  
ಬಸವನ ಪಾದ: ಕಟ್ಟಿಗೆಯು ಕೃಷಿ ಉಪಕರಣಗಳಿಗೆ ಹಾಗೂ ಸೌದೆಗಾಗಿ ಬಳಸಲ್ಪಡುವುದು ಹಾಗೂ ಇದರ ಎಲೆಗಳನ್ನು ಜಾನುವಾರುಗಳ ಮೇವಿಗೆ ಬಳಸುತ್ತಾರೆ.  
ಉಳಿಪೆ: ಇದರ ತೊಗಟೆ, ಎಲೆ, ಹೂವುಗಳ ದಾರುವನ್ನು ಕೃಷಿ ಉಪಕರಣಗಳಿಗೆ ಹಾಗೂ ಸೌದೆಗೆ ಬಳಸಲಾಗುವುದು. ತೊಗಟೆಯಿಂದ ಟ್ಯಾನಿನ್ ದೊರಕುವುದು, ಈ ಮರದ ಒಂದಲ್ಲ ಒಂದು ಭಾಗ ಔಷಧಿಗಳಿಗಾಗಿ ಉಪಯೋಗಿಸಲಾಗುತ್ತದೆ. ಇದರ ತೊಗಟೆ, ಹೂವು, ಬೇರುಗಳನ್ನು ಚೆನ್ನಾಗಿ ಅರೆದು ಅದನ್ನು ಅನ್ನದ ಗಂಜಿಗೆ ಬೆರೆಸಿ ಪೇಸ್ಟಿನಂತೆ ಬಳಸಲಾಗುವುದು. ಇದರ ಬೇರಿನ ಕಷಾಯವನ್ನು ಅಜೀರ್ಣ ವ್ಯಾಧಿಗೂ, ಹೂವನ್ನು ಸಕ್ಕರೆ ಬೆರೆಸಿಕೊಂಡು ವಿರೇಚಕವಾಗಿಯೂ, ತೊಗಟೆಯನ್ನು ಬಲವರ್ಧಕ ಹಾಗೂ ಜಂತು ನಾಶಕವನ್ನಾಗಿಯೂ ಬಳಸಲಾಗುತ್ತದೆ. ಇದರ ಎಲೆಯನ್ನು ಬೀಡಿ ಕಟ್ಟುವುದಕ್ಕೆ ಉಪಯೋಗಿಸುತ್ತಾರೆ.  
ಹುರುಗಲು ಬಿಟ್ಟಲು: ಈ ಮರವನ್ನು ಅನೇಕ ಅಲಂಕಾರಯುತ ವಸ್ತುಗಳಿಗೆ ಉಪಯೋಗಿಸುತ್ತಾರೆ. ದಾರುವು ಗಡುಸಾಗಿದ್ದು, ಹಳದಿ ಚುಕ್ಕೆಗಳು ಕಂದುಗೆರೆಗಳಿಂದ ಕೂಡಿದ್ದು ನಯ ಹೊಳಪಿನಿಂದ ಕೂಡಿ ಅಲಮಾರು, ಕಡತದ ಕೆಲಸ, ಪದರ ಹಲಗೆ ಇನ್ನಿತರ ಬಳಕೆಗಳಿಗೆ ಉಪಯೋಗಿಸುತ್ತಾರೆ ಹಾಗೂ ಸೌದೆಗಾಗಿ ಕೂಡಾ ಉಪಯೋಗಿಸುತ್ತಾರೆ.  
ಬೀಟೆ: ಕಟ್ಟಿಗೆಯಿಂದ ಪೀಠೋಪಕರಣ, ಭಿತ್ತಿ ಫಲಕಗಳು, ಆಲಂಕಾರಿಕ ಫಲಕಗಳು, ಕೆತ್ತನೆ ಕೆಲಸಗಳು, ಅಲಮಾರು, ಉತ್ತಮ ದರ್ಜೆಯ ತೆಳು ಹೊದಿಕೆಗಳು, ಪದರ ಹಲಗೆಗಳು, ಕೃಷಿ ಉಪಕರಣಗಳು, ರೈಲ್ವೆ ಸ್ಲೀಪರುಗಳಿಗೂ ಬಳಸಲಾಗುತ್ತದೆ.  
ಕಿರು ಬಿದಿರು: ಇದು ಗುಡಿಸಲಿಗೆ, ಗೃಹ ನಿರ್ಮಾಣಕ್ಕೆ, ಪೀಠೋಪಕರಣಗಳಿಗೆ, ಭಲ್ಲೆ, ಲಟ್ಟ, ಕೈಬೆತ್ತ, ಚಾಪೆ, ಬುಟ್ಟಿ, ರೈತಾಪಿ ಕೆಲಸಗಳಿಗೆ, ರೇಷ್ಮೆ ಬೆಳೆಗೆ ಬೇಕಾದ ತಟ್ಟೆ, ಚಂದ್ರಿಕೆ, ನಿಲ್ಲೆಡೆಗಳು, ಕುಶಲಕೆಲಸಗಳ ಧಾರಕ, ದೀಪದ ಮರೆ ಹಾಗೂ ಕೈಗಾರಿಕೆಯಲ್ಲಿ ಕಾಗದ ತಯಾರಿಕೆಗೆ ಉಪಯುಕ್ತ ಹಾಗೂ ಆನೆಗಳಿಗೆ ಇದರ ಸೊಪ್ಪು ಬಲು ಇಷ್ಟ.
ಅತ್ತಿ ಕಟ್ಟಿಗೆ: ಇದರ ದಾರುವು ಬಾಳಿಕೆಯುತವಲ್ಲದಿದ್ದರೂ, ಗಾಡಿ ಭಾಗಗಳು, ಬಾವಿಯ ಅಚ್ಚು, ಬಾಗಿಲು ನಿರ್ಮಾಣಕ್ಕೆ ಉಪಯೋಗಿಸಲ್ಪಡುತ್ತದೆ.  
ಚನ್ನಂಗಿ: ಇದರಿಂದ ಗೃಹ, ಗಾಡಿ, ದೋಣಿಗಳ ನಿರ್ಮಾಣ, ಮೂಕಿ, ಕೊಡಲಿ ಕಾವು, ಕೃಷಿ ಉಪಕರಣಗಳು ತಯಾರು ಮಾಡುತ್ತಾರೆ. ತೊಗಟೆಯಿಂದ ನಾರು, ಅಂಟು ಮತ್ತು ಟ್ಯಾನಿನ್ ದೊರಕುತ್ತದೆ.
ಕಮರ: ಈ ಮರದಿಂದ ಹೆಚ್ಚು ಬಾಳಿಕೆಯುತ ಸೇತುವೆ ನಿರ್ಮಾಣ, ಗೃಹ ನಿರ್ಮಾಣ, ಗಾಡಿ ಚಕ್ರಗಳು, ಕೃಷಿ ಉಪಕರಣಗಳನ್ನು ಮಾಡಬಹುದು. ತೊಗಟೆಯಿಂದ ಹಗ್ಗ ತಯಾರಿಸಲು ನಾರು ದೊರಕುತ್ತದೆ. ಎಲೆಗಳನ್ನು ಜಾನುವಾರುಗಳ ಮೇವಿಗೆ ಹಾಗೂ ಗೊಬ್ಬರಕ್ಕಾಗಿ ಬಳಸುತ್ತಾರೆ.
ಮುಂದಿನವಾರ ದೇವ ದೇವ ವನದ ಸಸ್ಯ ಸಂಪತ್ತಿನ ಪೂರ್ಣ ಅನಾವರಣವಾಗಿ ಸೋಜಿಗದ ಜಗತ್ತು ನಿಮ್ಮೆದುರು ತೆರೆದುಕೊಳ್ಳಲಿದೆ ಎನ್ನುವುದು ನನ್ನ ನಂಬಿಕೆ.

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement