ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಶಾಲೆಯೋ, ವ್ಯಾಪಾರ ಕೇಂದ್ರವೋ?

Mainashree
Updated On : 24 Jun 2014, 9:29 am

ಇಂದು ಶಾಲೆ ಕೇವಲ ಶಾಲೆಯಾಗಿ ಉಳಿಯದೆ ವ್ಯಾಪಾರ ಕೇಂದ್ರವಾಗುತ್ತಿದೆ. ಮೊನ್ನೆ ತಾನೆ ಎಲ್ಲಾ ಶಾಲಾ ಕಾಲೇಜುಗಳು ಪ್ರಾರಂಭವಾಗಿ ಮಧ್ಯಮ ವರ್ಗದ ಪೋಷಕರು ತಮ್ಮ ಕೈಲಿರುವ ಹಣ ಖಾಲಿ ಮಾಡಿ ಮನಸ್ಸಿನಲ್ಲಿ ಅನೇಕರನ್ನು ಶಪಿಸುತ್ತಿದ್ದಾರೆ. ಏಕೆಂದರೆ, ಪ್ರವೇಶ ಶುಲ್ಕಗಳ ಕತೆ ಹಾಗಿರಲಿ, ವಿದ್ಯಾಸಂಸ್ಥೆಯವರ ನಿರ್ದೇಶನದಂತೆ ಶಾಲಾ ಸಾಮಾಗ್ರಿಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸಬೇಕಾದ ಪರಿಸ್ಥಿತಿ ಹೆಚ್ಚಿನವರ ಉಸಿರುಗಟ್ಟಿಸುತ್ತಿದೆ.
ಶಾಲಾ ಸಾಮಗ್ರಿಗಳು ಏನೆಲ್ಲ ಬೇಕು ಎಂದಷ್ಟೇ ಪಟ್ಟಿ ಕೊಟ್ಟಿದ್ದರೂ ಸಹಿಸಬಹುದಿತ್ತೇನೋ. ಆದರೆ ಅವನ್ನು ಎಲ್ಲಿಂದ ಖರೀದಿಸಬೇಕು ಎಂಬುದನ್ನೂ ವಿದ್ಯಾಸಂಸ್ಥೆಗಳೇ ನಿರ್ಧರಿಸುತ್ತಿದ್ದಾರೆ. ಇದರಿಂದ ಪೋಷಕರಿಗೆ ಹೊರೆಯಾಗುವುದಷ್ಟೇ ಅಲ್ಲದೇ ಮಾರುಕಟ್ಟೆಯಲ್ಲೂ ಸ್ಪರ್ಧಾತ್ಮಕತೆಯನ್ನು ಕೊಲ್ಲುತ್ತಿದ್ದಾರೆ. ಸಣ್ಣ ಸಣ್ಣ ಉದ್ಯಮದಾರರಿಗೆ ಈ ನಡೆ ಭಾರೀ ಪ್ರಹಾರವೇ. ಕಾರಣ, ವರ್ಷಕ್ಕೆ ಒಂದೇ ಬಾರಿ ಬರುವ ಸಿಜನ್ನಿಗೆಂದು ಸಾಲ- ಸೋಲ ಮಾಡಿ ಬಂಡವಾಳ ಹಾಕಿ, ಅಂಗಡಿಯ ಬಾಡಿಗೆ, ವಿದ್ಯುತ್ ಬಿಲ್, ನಗರಸಭೆಯ ಕಂದಾಯ, ತೆರಿಗೆ ಇಲಾಖೆ ಕಂದಾಯ ಇನ್ನೂ ಇತರೆ ಎಲ್ಲಾ ಖರ್ಚುಗಳನ್ನು ತೂಗಿಸಿ ಸ್ಪರ್ಧಾತ್ಮಕ ಬೆಲೆಯಲ್ಲಿ ಇವರು ಶಾಲಾ ಸಾಮಗ್ರಿಗಳನ್ನು ಮಾರುತ್ತಿದ್ದರು. ಆದರೆ ಹೆಚ್ಚಿನ ವಿದ್ಯಾಸಂಸ್ಥೆಗಳು ಅನುಸರಿಸುತ್ತಿರುವ ಧೋರಣೆಯಿಂದ ಪೋಷಕರಿಗೆ ತಮಗೆ ಬೇಕಾದವರ ಬಳಿ ಬಂದು ಶಾಲಾ ಸಾಮಗ್ರಿಗಳನ್ನು ಖರೀದಿಸುವ ಆಯ್ಕೆ ಇಲ್ಲವಾಗಿದೆ. ಒಪ್ಪಂದ ಮಾಡಿಕೊಂಡ ಕೆಲವರು ಮಾತ್ರವೇ ಸ್ಪರ್ಧೆಯನ್ನೇ ಕೊಂದು ತಮಗೆ ಬೇಕಾದ ಬೆಲೆಯಲ್ಲಿ ಮಾರುವಂತಾಗಿದೆ. ಇದನ್ನೆಲ್ಲ ನೋಡಿ ಶಿಕ್ಷಣ ಇಲಾಖೆ, ವಾಣಿಜ್ಯ ಇಲಾಖೆ, ನಗರಸಭೆ ಇಲಾಖೆ, ಆದಾಯ ತೆರಿಗೆ ಇಲಾಖೆ ಇನ್ನು ಅನೇಕ ಇಲಾಖೆಯವರು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ. ಕೆಲವು ಶಾಲೆಯವರು ಒಂದೇ ವಾರದಲ್ಲಿ ಲಕ್ಷಾಂತರ ರು. ವ್ಯಾಪಾರ ಮಾಡುತ್ತಾರೆ. ಆದರೆ ಈ ವಲಯದ ಹೊರಗೆ ಒಂದು ಚಿಕ್ಕ ಅಂಗಡಿ ಪ್ರಾರಂಭವಾದರೆ ಸಾಕು, ಅದು ಯಾವುದೇ ಮೂಲೆಯಲ್ಲಿರಲಿ ಎಲ್ಲಾ ಇಲಾಖೆಯವರು ಓಡೋಡಿ ಬರುತ್ತಾರೆ. ನಿಯಮ ಉಲ್ಲಂಘನೆ ಪುರಾಣಗಳು ಆರಂಭವಾಗುತ್ತವೆ. ನೇರವಾಗಿ ಬರಬೇಕಾದ ಮಾಮೂಲಿಯ ಪ್ರಸ್ತಾಪ ಆಗುವುದಿದೆ.   ದಿನಕ್ಕೆ ಕನಿಷ್ಠ 500 ರು. ವ್ಯಾಪಾರ ಮಾಡುವಂತಹ ಅಂಗಡಿಯಲ್ಲಿ ತೆರಿಗೆ ಕಟ್ಟದಿದ್ದರೆ ನಷ್ಟವಾಗುತ್ತದೆ ಎಂದು ಹೇಳುವ ಅಧಿಕಾರಿಗಳಿಗೆ ಲಕ್ಷಾಂತರ ವ್ಯಾಪಾರ ಮಾಡುವ ಶಾಲೆಗಳು ಕಣ್ಣಿಗೆ ಬೀಳಲಿಲ್ಲವೇ? ಸಂಬಂಧಿಸಿದ ಇಲಾಖೆಗಳೆಲ್ಲ ಏಕೆ ಇದನ್ನು ಸಹಿಸಿಕೊಂಡಿವೆ?
ನೋಟ್ ಪುಸ್ತಕದ ಮೇಲೆ ಅವರ ಶಾಲಾ ಕಾಲೇಜುಗಳ ಹೆಸರನ್ನು ಮುದ್ರಿಸಿ ಅದನ್ನೇ ಖರೀದಿಸಬೇಕು ಎಂಬ ಆದೇಶ. ಆ ಪುಸ್ತಕ ಕ್ವಾಲಿಟಿ, ಈ ಪೇಪರ್ ಎಷ್ಟು ಜಿಎಸ್‌ಎಂ ಎಷ್ಟು ಪುಟ ಎಂದು ಲೆಕ್ಕ ಹಾಕಿದಾಗ ಕಡಿಮೆ ಎಂದರೂ ಮಾರುಕಟ್ಟೆಗಿಂತ ಬೆಲೆಯಲ್ಲಿ ಶೇ.20 ಹೆಚ್ಚಾಗಿರುತ್ತದೆ. ಕೇವಲ 5 ರಿಂದ 10 ಪರ್ಸೆಂಟ್ ಲಾಭ ಸಿಕ್ಕರೆ ಸಾಕು ನಾವು ಜೀವನ ಸಾಗಿಸುತ್ತೇವೆ ಎನ್ನುವ ಸಾವಿರಾರು ಕುಟುಂಬಗಳ ಜತೆ ಇದನ್ನು ಹೋಲಿಸಿ ನೋಡಿ. ಶಾಲಾ ಡೋನೇಷನ್ ಇತರೆ ಮೂಲಗಳಿಂದ ಬರುವ ಆದಾಯಕ್ಕೆ ಇದು ತೃಣ ಸಮಾನ. ಸಾವಿರ ಇರುವೆಯ ಆಹಾರ ಆನೆಯ ಒಂದು ತುತ್ತಿಗೆ ಸಮ ಎಂಬಂತೆ. ಇವೆಲ್ಲದವರ ನಡುವೆ ಕೆಲವು ಶಾಲೆಯವರು ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಅಂಥವರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿ.

= ಎಸ್.ಟಿ. ವಿಜೇಂದ್ರ, ರಾಜ್ಯಾಧ್ಯಕ್ಷರು
ಕ.ಆ.ವೈ.ಯುವಜನ ಮಹಾಸಭಾ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement