ಡಾ. ಹರ್ಷವರ್ಧನ್ ಅವರ ಏಡ್ಸ್ ಹೇಳಿಕೆ ಮತ್ತು ನೈತಿಕತೆ
ಇತ್ತೀಚಿನ ದಿನಗಳಲ್ಲಿ ಎರಡು ವಿದ್ಯಮಾನ...
ಇತ್ತೀಚಿನ ದಿನಗಳಲ್ಲಿ ಎರಡು ವಿದ್ಯಮಾನಗಳು ತುಸು ಹೆಚ್ಚಾಗಿಯೇ ಸುದ್ದಿಯಲ್ಲಿದ್ದವು. ಮೊದಲನೆಯದು ಕಾಂಡೋಮ್ ಬಳಕೆಯ ಪ್ರೋತ್ಸಾಹಕ್ಕಿಂತ ಹೆಚ್ಚಾಗಿ ನೈತಿಕತೆಯ ಅರಿವು ಮೂಡಿಸುವ ಅಗತ್ಯವಿದೆ ಎಂಬುದು. ಎರಡನೆಯದು ಶಾಲೆಗಳಲ್ಲಿ ಲೈಂಗಿಕತೆಯ ಶಿಕ್ಷಣದ ಹೆಸರಲ್ಲಿ ಅಶ್ಲೀಲತೆಯ ಪ್ರದರ್ಶನ ಸಲ್ಲದು ಎಂಬ ಸುದ್ದಿ. ಇವೆರಡನ್ನೂ ಹೇಳಿದ್ದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು. ತೀರಾ ಸರಳ ಮತ್ತು ಶುದ್ಧ ರಾಜಕಾರಣಿ ಎಂದೇ ಹೆಸರಾಗಿರುವ ಇವರು ದೇಶದಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ ವಹಿಸಿದವರು. ಜೊತೆಗೆ ಡಾಕ್ಟರ್ ಬೇರೆ. ಹೀಗಾಗಿ ಇವರು ಏನೋ ಹೇಳಿದ್ದಾರೆ ಎಂದರೆ ಅದರಲ್ಲಿ ಒಂದಷ್ಟು ಗಂಭೀರತೆಯೂ ಇರುತ್ತದೆ ಎಂಬ ಕಲ್ಪನೆ ಸುದ್ದಿ ಮಾಡಿದವರಿಗೆ ಇರಬೇಕಿತ್ತು.
ದೇಶದ ರಾಜಕೀಯ ದೆಸೆ ಮತ್ತು ಸಾಮಾಜಿಕ ನಡೆಯಲ್ಲಿ ಬಹು ದೊಡ್ಡ ಪಾತ್ರ ವಹಿಸುತ್ತಿರುವ ಮಾಧ್ಯಮಗಳು ಕೆಲಮೊಮ್ಮೆ ದಿಕ್ಕುತಪ್ಪಿಸುತ್ತವೆ ಎಂಬುದು ಈ ಪ್ರಕರಣದಲ್ಲಿ ಕಣ್ಣಿಗೆ ರಾಚುತ್ತದೆ. ಈ ಸುದ್ದಿಯಲ್ಲಿದ್ದ ಎರಡೂ ವಿಚಾರಗಳು ವಿವಾದಕ್ಕೆ ಆಸ್ಪದ ಕೊಡುವಂತಹವು ಅಲ್ಲವೇ ಅಲ್ಲ. ಪತಿ ಮತ್ತು ಪತ್ನಿ ಜೊತೆಗೆ ಅವಳು/ಅವನು ಎಂಬ ವಿಚಾರದಲ್ಲಿ, ಈ ದಂಪತಿಯ ಸಂಬಂಧದಲ್ಲಿ ಮಧ್ಯಪ್ರವೇಶಿಸಿರುವ ಅವನು ಅಥವಾ ಅವಳು ಅಕ್ರಮ ಎಂಬುದಾದರೆ, ಡಾ. ಹರ್ಷವರ್ಧನ್ ಹೇಳಿರುವುದರಲ್ಲಿ ತಪ್ಪೇನಿಲ್ಲ.
ಮೋರಾಲಿಟಿ ಅಥವಾ ನೈತಿಕತೆ ನಮ್ಮ ಜೀವನದ ಅವಿಭಾಜ್ಯ ಅಂಗ. ಹಿರಿಯರನ್ನು ಗೌರವಿಸಬೇಕು ಎಂಬುದರಿಂದ ಹಿಡಿದು, ಗುರುಗಳು ಮತ್ತು ತಾಯಿ ದೇವರಿಗೆ ಸಮ ಎಂದು ಹೇಳುವುದು ಈ ನೈತಿಕತೆಯೇ. ಇದನ್ನು ಯಾರಿಗೂ ಕೈ ಹಿಡಿದು ಕಲಿಸಬೇಕಿಲ್ಲ. ಇದು ಬೆಳೆಯುತ್ತಾ ಇದ್ದ ಹಾಗೆ ತನ್ನಿಂತಾನೇ ನಮ್ಮ ಮನಸ್ಸಿನಲ್ಲಿ ವೃದ್ಧಿಯಾಗುತ್ತಿರುತ್ತದೆ. ಹೀಗಾಗಿ ನೈತಿಕತೆ ಎಂದು ಯಾರೋ ಹೇಳಿದರೆ ಅದು ಕೇಸರಿ ರಾಜಕಾರಣವೋ ಅಥವಾ ಇನ್ಯಾವುದೋ ಸಿದ್ಧಾಂತವೋ ಎಂದು ಆಡಿಕೊಳ್ಳಬೇಕಿಲ್ಲ.
ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಿಷ್ಟು "ಭಾರತೀಯ ಸಂಸ್ಕೃತಿ ಎಂದರೆ ಒಂದೇ ಪತಿ ಅಥವಾ ಪತ್ನಿಯನ್ನು ಹೊಂದುವುದು. ಇಲ್ಲಿ ಅಕ್ರಮ ಸಂಬಂಧಗಳಿಗೆ ಅಥವಾ ಮದುವೆಯಾಚೆಗಿನ ಸಂಬಂಧಗಳಿಗೆ ಬೆಲೆಯಿಲ್ಲ. ಇವು ಎಂದಿದ್ದರೂ ಅಕ್ರಮವೇ. ಹೀಗಾಗಿ ನಾವು ಒಂದೇ ಸಂಬಂಧಕ್ಕೆ ಗಟ್ಟಿಯಾಗಿರೋಣ. ಇಂಥ ಸಂದರ್ಭಗಳಲ್ಲಿ ನಾವು ಏಡ್ಸ್ ನಿರ್ಮೂಲನೆ ಮಾಡಲು ಕಾಂಡೋಮ್ ಧರಿಸಬೇಕಿಲ್ಲ. ಬದಲಾಗಿ ಪತ್ನಿಗೆ ಅಥವಾ ಪತಿಗೆ ಭಾಧ್ಯಸ್ಥನಾಗಿರುತ್ತೇನೆ ಎಂಬ ದೃಢ ಸಂಕಲ್ಪವೊಂದಿದ್ದರೆ ಸಾಕು".
ತಮ್ಮ ಮಾತಿನಲ್ಲಿ ಹರ್ಷವರ್ಧನ್ ಕಾಂಡೋಮ್ ಧರಿಸಲೇಬಾರದು ಅಥವಾ ಕಾಂಡೋಮ್ಗಳನ್ನೇ ನಿಷೇಧಿಸಿಬಿಡುತ್ತೇವೆ ಎಂದ ಹೇಳಲಿಲ್ಲ.
ಬದಲಾಗಿ ಅವರು ಹೇಳಿದ್ದು ಏಡ್ಸ್ ನಿಯಂತ್ರಣಕ್ಕೆ ನೈತಿಕತೆಯೇ ಪ್ರಮುಖ ಅಸ್ತ್ರ ಎಂದು. ಅಂದರೆ ಒಬ್ಬರಿಗೇ ಬಾಧ್ಯಸ್ಥನಾಗಿರುತ್ತೇನೆ ಎಂಬುದೇ ಪ್ರಮುಖವಾಗಬೇಕು. ಈ ಬಗ್ಗೆ ನಾವು ಹೆಚ್ಚಾಗಿ ಅರಿವು ಮೂಡಿಸಬೇಕು. ಇದು ಕಾಂಡೋಮ್ಗಳ ಪ್ರೋತ್ಸಾಹಕ್ಕಿಂತ ಹೆಚ್ಚಾಗಿ ಆಗಬೇಕಿರುವ ಕೆಲಸ ಎಂದಿದ್ದರು. ಹರ್ಷವರ್ಧನ್ ಹೇಳಿಕೆಯಲ್ಲಿ ಯಾವ ತಪ್ಪಿದೆ? ನಿಜವಾದ ನೈತಿಕ ಮೌಲ್ಯ ಇಟ್ಟುಕೊಂಡಿರುವಾತ ಮಾತ್ರ ಈ ಪ್ರಶ್ನೆಯಲ್ಲಿ ತಪ್ಪಿದೆ ಎಂದು ಹೇಳುವುದಿಲ್ಲ.
ಇನ್ನು ಈ ಹೇಳಿಕೆಯ ಸುತ್ತ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಬೇಕು. ಅದರಲ್ಲೂ ಆಂಗ್ಲ ಮಾಧ್ಯಮಗಳ ಚರ್ಚಾ ಕೊಠಡಿಗಳು ಮತ್ತು ಟ್ವಿಟರಾರ್ಥಿಗಳು ಬಲು ಜೋರಾಗಿಯೇ ಹರ್ಷವರ್ಧನ್ ಅವರ ಹೇಳಿಕೆಯನ್ನು ಖಂಡಿಸಿದರು. ಅದರಲ್ಲೂ ಚೇತನ್ ಭಗತ್ರಂಥ ಸಕ್ರಿಯ ಟ್ವಿಟರಾರ್ಥಿಗಳು ಬಲು ತೀಕ್ಷ್ಣವಾಗಿಯೇ ಪ್ರಹಾರ ನಡೆಸಿದರು. "ದೇಶದ ಯುವ ಜನತೆ ತಮ್ಮನ್ನು ಬಿಜೆಪಿ ಮುಂದೆ ತೆಗೆದುಕೊಂಡು ಹೋಗುತ್ತದೆ ಎಂಬ ನಂಬಿಕೆಯಿಂದ ವೋಟು ಹಾಕಿದೆ. ಆದರೆ ಇತ್ತೀಚಿನ ಹರ್ಷವರ್ಧನ್ ಅವರ ಹೇಳಿಕೆಗಳು ದೇಶವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿರುವಂತೆ ಭಾಸವಾಗುತ್ತಿದೆ" ಎಂದರು ಭಗತ್. ಕೆಲವು ಟ್ವೀಟ್ಸ್ಗಳನ್ನು ಇಲ್ಲಿ ಉಲ್ಲೇಖಿಸದಿರುವುದೇ ಒಳಿತು ಬಿಡಿ.
ತಮ್ಮ ಹೇಳಿಕೆ ತಿರುಚಲ್ಪಟ್ಟಾಗ ಹರ್ಷವರ್ಧನ್ ಒಂದು ಸ್ಪಷ್ಟನೆಯನ್ನೂ ನೀಡಿದ್ದರು. "ಏಡ್ಸ್ ನಿಯಂತ್ರಣದಲ್ಲಿ ನೈತಿಕತೆಯ ಪ್ರಭಾವ ಆಫ್ರಿಕನ್ ದೇಶಗಳಲ್ಲಿ ಚೆನ್ನಾಗಿಯೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ಏಡ್ಸ್ ಹರಡುವಿಕೆಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಉಗಾಂಡದಂಥ ದೇಶವೇ ಈ ದಿಸೆಯಲ್ಲಿ ಯಶಸ್ಸನ್ನೂ ಕಂಡಿದೆ. ಹೀಗಾಗಿ ನಮ್ಮಲ್ಲೂ ಏಡ್ಸ್ ನಿಯಂತ್ರಣಕ್ಕೆ ನೈತಿಕತೆಯೇ ಮೂಲ ಬಂಡವಾಳವನ್ನಾಗಿ ಇಟ್ಟುಕೊಳ್ಳಬಹುದು ಎಂದು ನಾನು ಹೇಳಿದೆ" ಅಂದಿದ್ದರು.
ಏಡ್ಸ್ ಮತ್ತು ನೈತಿಕತೆಯ ಬಗ್ಗೆ ಪ್ರಪಂಚದಾದ್ಯಂತ ಭಾರಿ ಚರ್ಚೆಯೇ ಆಗಿದೆ. ಪಾಶ್ಚಿಮಾತ್ಯ ಮತ್ತು ಆಫ್ರಿಕನ್ ದೇಶಗಳಲ್ಲಿ ಕೆಲವೊಂದು ಚರ್ಚ್ಗಳು ನೈತಿಕತೆಯ ಪಾಠ ಮಾಡುತ್ತಿವೆ. ಉಂಗಾಡದಲ್ಲಿ ಮದುವೆಗೂ ಮುನ್ನ ಲೈಂಗಿಕತೆ ಸಲ್ಲದು. ಏಕಪತ್ನಿ ವ್ರತಸ್ಥರಾಗಿ, ಒಬ್ಬರಿಗಿಂತ ಹೆಚ್ಚು ಜನರ ಜೊತೆ ಲೈಂಗಿಕ ಸಂಬಂಧ ಒಳ್ಳೆಯದಲ್ಲ ಎಂಬ ನೈತಿಕ ನಿಯಮಾವಳಿಗಳನ್ನು ಆ ದೇಶದಲ್ಲಿ ರೂಪಿಸಲಾಗಿದೆ. ಇದು ತುಸು ಹೆಚ್ಚೇ ಎನ್ನುವಷ್ಟು ಪ್ರಯೋಜನಕಾರಿಯೂ ಆಗಿದೆ. ಉಗಾಂಡಾದ ಈ ನಿಯಮದ ಬಗ್ಗೆ ಬೇರೆ ದೇಶಗಳಲ್ಲೂ ಚರ್ಚೆ ನಡೆದಿವೆ.
ಆದರೂ ಉಗಾಂಡದ ಈ ನಿಯಮಕ್ಕೆ "ಮುಂದುವರಿದವರು" ಎಂದು ಅನ್ನಿಸಿಕೊಂಡವರೇ ಬೈಯುತ್ತಿದ್ದಾರೆ. ಆದರೆ ಹರ್ಷವರ್ಧನ್ ಹೇಳಿರುವಂತೆ ಕಾಂಡೋಮ್ಗಿಂತ ನೈತಿಕತೆಯೇ ವಾಸಿ ಅಲ್ಲವೇ?
ಏಕಪತ್ನಿ ಅಥವಾ ಏಕ ಪತಿ ವ್ರತಸ್ಥರು ಮತ್ತು ಅಕ್ರಮ ಸಂಬಂಧದ ನಡುವೆ ಬಲು ಅಂತರವೇ ಇದೆ. ಜನರಿಗಿಂತ ಹೆಚ್ಚಾಗಿ ಮಾಧ್ಯಮಗಳು ಅಕ್ರಮ ಸಂಬಂಧದ ವಿಚಾರ ಬಂದಾಗ ಆ ವಿಷಯಕ್ಕೆ ಹೆಚ್ಚೇ ಮಹತ್ವ ಕೊಡುತ್ತವೆ. ಇದು ಇತ್ತೀಚಿನ ದಿನಗಳಲ್ಲಿನ ಮಾಧ್ಯಮಗಳು ಅದರಲ್ಲೂ ಟಿವಿ ಮಾಧ್ಯಮಗಳ ಪಾಲಿಗೆ ಟಿಆರ್ಪಿ ವಿಚಾರವೇ ಆಗಿ ಹೋಗಿದೆ. ಇಂಥ ಸಂದರ್ಭಗಳಲ್ಲಿ ಮುಂದುವರಿದ ಮನೋಭಾವ ಬದಿಗೊತ್ತಿ ಇದೇ ಮಾಧ್ಯಮಗಳು ನೈತಿಕತೆಯ ಪಾಠ ಮಾಡುತ್ತವೆ. "ಛೇ ಇವರೆಂಥಾ ಮನುಷ್ಯರು, ಮನೆಯಲ್ಲಿ ಕಟ್ಟಿಕೊಂಡ ಹೆಂಡತಿ ಅಥವಾ ಗಂಡನಿದ್ದಾನೆ. ಆದರೂ ಇವರಿಗೆ ಇನ್ನೊಂದು ಸಂಬಂಧ ಬೇಕು. ಸಂಬಂಧಗಳಲ್ಲಿ ಬೆಲೆಯೇ ಇಲ್ಲವೇ?" ಎಂದು ಕೂಗು ಹಾಕುತ್ತವೆ. ಹಾಗಾದರೆ, ಹರ್ಷವರ್ಧನ್ರ ಹೇಳಿಕೆಯನ್ನು ಇದೇ ದೃಷ್ಟಿಯಿಂದ ಮಾಧ್ಯಮಗಳು ನೋಡುತ್ತಿಲ್ಲವೇಕೆ?
ಆರೋಗ್ಯ ಸುಧಾರಣೆಗೆ ಸಂಬಂಧಿಸಿದ ವಿಚಾರದಲ್ಲಿ ಕಾಂಡೋಮ್ ಬಳಕೆ ಸೂಕ್ತವೇ. ಕೆಲವೊಂದು ಗುಪ್ತ ರೋಗ ತಡೆಯಲು ಕಾಂಡೋಮ್ ಬಳಕೆ ಸರಿ ಎಂದು ವೈದ್ಯರೇ ಹೇಳುತ್ತಾರೆ. ಕಾಂಡೋಮ್ಗಳ ಬಳಕೆ ಈ ನಿಟ್ಟಿನಲ್ಲಿ ಆದರೆ ತಪ್ಪೇನಿಲ್ಲ, ಆದರೆ ಕಾಂಡೋಮ್ ಇದ್ದರೆ ರೋಗ ಬರುವುದಿಲ್ಲ ಎನ್ನುವ ಕಾರಣದಿಂದಾಗಿ ಅಕ್ರಮ ಸಂಬಂಧಗಳಿಗೆ ಇದೇ ಮಾರ್ಗವಾಗಬಾರದು ಎಂಬ ಸಂದೇಶ ಹರ್ಷವರ್ಧನ್ ಅವರ ಹೇಳಿಕೆಯಲ್ಲಿದೆ.
ಇನ್ನು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕುರಿತ ವಿಚಾರ. ಇದೂ ಕೂಡ ತಪ್ಪಾಗಿ ಅರ್ಥೈಸಲಾದ ಹೇಳಿಕೆಯೇ. ಮುಂದಿನ ದಿನಗಳಲ್ಲಿ ಲೈಂಗಿಕ ಶಿಕ್ಷಣವನ್ನು ನಿಷೇಧಿಸಿ ಯೋಗವನ್ನು ಕಡ್ಡಾಯ ಮಾಡುತ್ತೇವೆ ಎಂದು ಹರ್ಷವರ್ಧನ್ ತಮ್ಮ ವೆಬ್ ಸೈಟಿನಲ್ಲಿ ಬರೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ಬಿಂಬಿಸಿದವು. ಹರ್ಷವರ್ಧನ್ ಅಂತೂ ಆರೋಗ್ಯ ಇಲಾಖೆಯನ್ನೇ ಕೇಸರೀಕರಣ ಮಾಡಲು ಹೊರಟಿದ್ದಾರೆ ಎಂದು ಹೇಳಿದವು. ಇದಕ್ಕೂ ಸ್ಪಷ್ಟನೆ ಕೊಟ್ಟ ಅವರು, ನಾನು ಹೇಳಿದ್ದು "ಅಶ್ಲೀಲ" ಎನ್ನುವಂಥ ಚಿತ್ರಗಳ ಬಳಕೆ ಬೇಡ ಎಂದಷ್ಟೇ. ಯುಪಿಎ ಸರ್ಕಾರದ ಈ ಲೈಂಗಿಕ ಶಿಕ್ಷಣಕ್ಕೆ ಅವರದ್ದೇ ಪಕ್ಷಗಳು, ಆಡಳಿತದಲ್ಲಿದ್ದ ಸರ್ಕಾರಗಳು ವಿರೋಧಿಸಿದ್ದವು. ಆದರೆ ಲೈಂಗಿಕ ಶಿಕ್ಷಣವನ್ನೇ ನಿಷೇಧಿಸುತ್ತೇವೆ ಎಂದು ಹೇಳಿಯೇ ಇಲ್ಲ ಎಂಬ ಸ್ಪಷ್ಟನೆ ಕೊಡಬೇಕಾಯಿತು. ಆದರೆ ಅಷ್ಟೊತ್ತಿಗೆ ವಿವಾದದ ಕಾವು ಏರಿತ್ತು.
ಏಡ್ಸ್, ಸೆಕ್ಸ್ ಮತ್ತು ನೈತಿಕತೆ ವಿಚಾರಕ್ಕೆ ಬಂದರೆ ಗಮನಿಸಬೇಕಾದ ಅಂಶವೊಂದಿದೆ. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಸಹೋದರನಿಂದಲೇ ಅತ್ಯಾಚಾರ, ಸ್ನೇಹಿತನಿಂದಲೇ ಅತ್ಯಾಚಾರ... ಇಂಥ ಘಟನೆಗಳ ತಡೆಯಲು ಎಂಥಾ ಕಾನೂನು ಮಾಡಿದರೂ ಸಾಕಾಗದು. ಏಕೆಂದರೆ ಪ್ರತಿ ಮನೆಗೂ ಪೊಲೀಸರನ್ನು ನೇಮಿಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರಲ್ಲೂ ಈಕೆ ತನ್ನ ಮಗಳು, ತನ್ನದೇ ಸಹೋದರಿ, ತನ್ನ ಸ್ನೇಹಿತನ ಮಗಳು ಎಂಬ ಪ್ರೀತಿಪೂರ್ವಕ ಗೌರವವಿದ್ದಲ್ಲಿ, ನೈತಿಕತೆಯಿದ್ದಲ್ಲಿ ಹೀನಕೃತ್ಯಗಳು ನಡೆಯುವುದಿಲ್ಲ. ಇಂಥ ವಿಚಾರದಲ್ಲಿ ಕಾನೂನಿಗಿಂತ ಹೆಚ್ಚಾಗಿ ನೈತಿಕತೆಯೇ ಹೆಚ್ಚು ಕೆಲಸ ಮಾಡಬೇಕು.
= ಸಿ.ಜೆ. ಸೋಮಶೇಖರ್, ಕನ್ನಡಪ್ರಭ
sompreethi@gmail.com