ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಶಿಸ್ತಿನ ಬದುಕ ರೂಪಿಸಲು ಕಡ್ಡಾಯವಾಗಲಿ ಮಿಲಿಟರಿ ಸೇವೆ

ಎರಡು ವರ್ಷಗಳ ಹಿಂದೆ ದೇಶದ...

Mainashree
Updated On : 30 Jun 2014, 1:29 am

ಎರಡು ವರ್ಷಗಳ ಹಿಂದೆ ದೇಶದ ಸೇನಾ ಪ್ರಮುಖರು ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದಿದ್ದರು. ಹಾಗಾಗಿ ಎಲ್ಲ ಯುವಕರಿಗೂ ಕೆಲ ಕಾಲ ಸೇನೆಯಲ್ಲಿ ಸೇವೆ ಕಡ್ಡಾಯ ಮಾಡುವುದು ಈ ಸಮಸ್ಯೆಗೆ ಒಂದು ಪರಿಹಾರ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ, ಈ ಅಭಿಪ್ರಾಯವನ್ನು ಅಂದಿನ ನಮ್ಮ ರಕ್ಷಣಾ ಸಚಿವರು ಸಾರಾ ಸಗಟಾಗಿ ತಿರಸ್ಕರಿದ್ದಲ್ಲದೇ ಅದು ನಮ್ಮ ದೇಶದ ವ್ಯವಸ್ಥೆಗೆ ಸರಿ ಹೊಂದುವುದಿಲ್ಲ, ಆದರೆ ಸೇನೆಯಲ್ಲಿನ ಹುದ್ದೆಗಳನ್ನು ಹೆಚ್ಚು ಆಕರ್ಷಕಗೊಳಿಸುವ ಪ್ರಯತ್ನ ಮಾಡಬಹುದು ಎಂದಿದ್ದರು.
ಅಂದಿನ ರಕ್ಷಣಾ ಮುಖ್ಯಸ್ಥರ ಅಭಿಪ್ರಾಯದ ಬಗ್ಗೆ ಏಕೆ ಗಂಭೀರ ಚಿಂತನೆಗಳಾಗಬಾರದು ಎನಿಸುತ್ತದೆ. ನಮ್ಮಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಉದ್ಯೋಗವಿರುವವರಲ್ಲೂ ಬಹಳಷ್ಟು ಮಂದಿ ಯಾವುದೇ ರೀತಿಯ ಪೂರ್ಣ ಪ್ರಮಾಣದ ತೃಪ್ತಿದಾಯಕ ಕೆಲಸ ಮಾಡುತ್ತಿರುವುದಿಲ್ಲ. ಇಂಥ ಪರಿಸ್ಥಿತಿ ನಗರವಾಸಿಗಳಷ್ಟೇ ಅಲ್ಲದೇ ಹಳ್ಳಿಗಳಿಂದ ಬಂದ ಯುವಕರಲ್ಲೂ ಇದೆ. ಇಂಥವರು ಹೀಗೆ ತಮ್ಮ ಜೀವನದ ಪ್ರಮುಖ ಘಟ್ಟದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲಾಗದಿರುವುದರಿಂದ ಇದರಿಂದ ಅವರ ಮುಂದಿನ ಭವಿಷ್ಯಕ್ಕಷ್ಟೇ ಅಲ್ಲದೇ ಸಮಾಜಕ್ಕೂ ಒಳಿತಾಗುವುದಿಲ್ಲ. ಯುವಕರನ್ನು ಸರಿದಾರಿಗೆ ತರಲು ಶಿಸ್ತಿನ ಜೀವನ ಕ್ರಮಕ್ಕೆ ಅವರನ್ನು ತೊಡಗಿಸುವ ಅವಶ್ಯಕತೆ ಇದೆ. ಇಂದಿನ ಸಮಾಜದಲ್ಲಿ ಅವರಿಗೆ ದೇಶಭಕ್ತಿ ಮತ್ತು ದೇಶದ ಮುಂಚೂಣಿಯಲ್ಲಿರುವ ಸೇನಾ ಸಿಬ್ಬಂದಿಯ ಪರಿಶ್ರಮದ ಬಗ್ಗೆ ಅರಿವು ಮೂಡಿಸುವವರು ಯಾರೂ ಇರುವುದಿಲ್ಲ. ಅನೇಕ ಮಿಲಿಟರಿ ಸಿಬ್ಬಂದಿ ದೇಶಕ್ಕಾಗಿ ಜೀವದ ಹಂಗು ತೊರೆದು ಹುತಾತ್ಮರಾಗಿರುತ್ತಾರೆ. ಆದರೆ, ಅವರ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ನಮ್ಮ ನಾಯಕರು ಹುತಾತ್ಮರ ದಿನಾಚರಣೆಯನ್ನು ಆಚರಿಸುವುದನ್ನು ಬಿಟ್ಟು ಮುಂದಕ್ಕೆ ಹೋಗುವುದೇ ಇಲ್ಲ. ಹಿಂದಿನ ಸೇನಾ ಮುಖ್ಯಸ್ಥರೊಬ್ಬರು ಬೇಡದ ಕಾರಣಕ್ಕಾಗಿ(ಅವರ ಜನ್ಮ ಪ್ರಮಾಣ ಪತ್ರದ ಬಗ್ಗೆ) ಮಾಧ್ಯಮದಲ್ಲಿ ಸುದ್ದಿಯಲ್ಲಿದ್ದರು. ಇವರು ಈಗ ಕೇಂದ್ರದಲ್ಲಿ ಮಂತ್ರಿಯೂ ಹೌದು. ಅದೇ ರೀತಿ ತೀರ ಇತ್ತೀಚಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸೇವಾನಿಷ್ಠೆಗೆ ವಿರುದ್ಧವಾಗಿ ನಡೆದುಕೊಂಡು ಮಾಧ್ಯಮಗಳಲ್ಲಿ ಸುದ್ದಿಯಾದರು. ಇಂಥವರು ಯುವಕರಿಗೆ ಯಾವ ರೀತಿಯ ಮಾದರಿಯಾಗಲು ಸಾಧ್ಯ?
ಈ ನಿಟ್ಟಿನಲ್ಲಿ 18 ರಿಂದ 23 ರ ವಯಸ್ಸಿನ ಎಲ್ಲ ಆರೋಗ್ಯವಂತ ಯುವಕ-ಯುವತಿಯರಿಗೆ ಎರಡು ಅಥವ ಮೂರು ವರ್ಷಗಳ ಕಾಲ ಕಡ್ಡಾಯ ಸೇನಾ ಸೇವೆಗೆ ನಿಯುಕ್ತಿಗೊಳಿಸುವುದು ವಿಹಿತವೆನಿಸುತ್ತದೆ. ಈ ರೀತಿಯ ಕಡ್ಡಾಯ ಸೇವೆಗೆ ಕಾನ್‌ಸ್ಕ್ರಿಪ್ಷನ್ ಎನ್ನುತ್ತಾರೆ. ತರಬೇತಿಯ ಸಮಯದಲ್ಲಿ ಯುವಕರಿಗೆ ಇತರ ಮಿಲಿಟರಿ ಕೆಡೆಟ್‌ಗಳಿಗೆ ನೀಡುವ ರೀತಿಯಲ್ಲೇ ತರಬೇತಿಯನ್ನು ನೀಡಬೇಕು. ಜೊತೆಗೆ ಅವರಿಗೆ ಈ ಅವಧಿಯಲ್ಲಿ ಉತ್ತಮ ಸಹಾಯಧನ ಕೂಡ ಸಿಗುವಂತಾಗಬೇಕು. ಹೀಗೆ ತರಬೇತಿ ಹೊಂದಿದವರು ಸೇನೆಯಲ್ಲಿರುವ ಶಿಸ್ತನ್ನು ಕಲಿಯಲು ಸಾಧ್ಯವಾಗುತ್ತದೆ. ಅದೇ ರೀತಿ ಅವರುಗಳು ದೇಶಭಕ್ತಿ, ಸಹನೆಯಷ್ಟೇ ಅಲ್ಲದೇ ಕಷ್ಟ ಸಹಿಷ್ಣುತೆಯನ್ನೂ ಬೆಳೆಸಿಕೊಳ್ಳುತ್ತಾರೆ. ಹೆಚ್ಚಿನ ಆಸಕ್ತಿ ಇರುವವರು ಮುಂದೆ ಮಿಲಿಟರಿಯ ವಿವಿಧ ಭಾಗಗಳಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು. ಅಲ್ಲದೇ, ಇವರು ಬೇರೆಡೆ ತಮ್ಮ ಭವಿಷ್ಯವನ್ನು ಅರಸಿ ಹೋದರೂ ಅಲ್ಲಿ ತಾವು ಸೇನೆಯಲ್ಲಿ ಕಲಿತ ಆದರ್ಶ, ಶಿಸ್ತನ್ನೇ ಪಾಲಿಸಿ ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇಂಥವರನ್ನು "ಶಾಂತಿ ಕಾಲದ ಯೋಧರು" ಎಂದೇ ಗುರುತಿಸಿರುವುದರಿಂದ ಇವರುಗಳ ಸೇವೆಯನ್ನು ಅನೇಕ ನಾಗರಿಕ ಸೇವೆಗಳಿಗೆ ಅಂದರೆ ಪ್ರಕೃತಿ ವಿಕೋಪದಂತಹ ಅನಾಹುತಗಳು ಸಂಭವಿಸಿದಾಗ ಬಳಕೆ ಮಾಡಿಕೊಳ್ಳಬಹುದು.
ಈಗಂತೂ ನಮ್ಮ ದೇಶದಲ್ಲಿ ನಕ್ಸಲ್ ಚಟುವಟಿಕೆಯೂ ಸೇರಿದಂತೆ ಶಸ್ತ್ರ ಹಿಡಿವ ಅನೇಕ ಆತಂಕಕಾರಿ ಚಟುವಟಿಕೆಗಳಿಗೆ ನಮ್ಮ ಯುವಕರು ಸುಲಭವಾಗಿ ಆಕರ್ಷಿತರಾಗುತ್ತಿದ್ದಾರೆ. ಎಲ್ಲಾ ಯುವಕರಿಗೂ ಕಡ್ಡಾಯ ಮಿಲಿಟರಿ ಶಿಕ್ಷಣ ದೊರೆತರೆ ದೇಶಪ್ರೇಮವನ್ನು ಬೆಳೆಸಿಕೊಂಡು ದೇಶದ್ರೋಹದ ಕುಕೃತ್ಯಗಳಿಂದ ದೂರವೇ ಉಳಿಯುತ್ತಾರೆ.   
ಯುವಕರಿಗೆ ಕಡ್ಡಾಯ ಮಿಲಿಟರಿ ಸೇವೆಗೆ ಮೊದಲಿನಿಂದಲೇ ತಯಾರು ಮಾಡುವುದು ಸೂಕ್ತ. ಮೊದಲನೆಯ ಹಂತವಾಗಿ ಎನ್‌ಸಿಸಿ ತರಬೇತಿ (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಮುಖ್ಯವಾದುದು. ಎನ್‌ಸಿಸಿಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸಮಗ್ರತೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದು. ಎನ್‌ಸಿಸಿ ಅನೇಕ ದಶಕಗಳಿಂದ ನಮ್ಮ ಶಾಲಾ ಕಾಲೇಜುಗಳಲ್ಲಿ ಸಕ್ರಿಯವಾಗಿದ್ದರೂ ಅದರಲ್ಲಿ ಎಲ್ಲ ವಿದ್ಯಾರ್ಥಿಗಳೂ ಭಾಗಿಯಾಗುತ್ತಿಲ್ಲ. ಇದರಲ್ಲಿ  ಸಮರ್ಥವಾಗಿ ತರಬೇತಿ ಪಡೆದವರಲ್ಲಿ ಕೆಲವೇ ಕೆಲವರು ಮಿಲಿಟರಿ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರೂ ಹೆಚ್ಚಿನವರು ಎನ್‌ಸಿಸಿ ಮಾನ್ಯತೆಯನ್ನು ಕೇವಲ ವಿಶೇಷ ಕೋಟಾದಡಿ ದೊರೆಯುವ ಉನ್ನತ ಶಿಕ್ಷಣಕ್ಕೆ ಸ್ಥಾನ ದೊರಕಿಸಿಕೊಳ್ಳಲು ಉಪಯೋಗ ಮಾಡಿಕೊಳುತ್ತಿದ್ದಾರೆ. ಸರ್ಕಾರ ಈ ತರಬೇತಿಯನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಕಡ್ಡಾಯ ಮಾಡಬೇಕಷ್ಟೇ ಅಲ್ಲದೆ, ಆಸಕ್ತಿ ಹೊಂದಿದವರಿಗೆ ಮಿಲಿಟರಿ ಆಯ್ಕೆಯಲ್ಲಿ ಪ್ರಾಮುಖ್ಯ ನೀಡಬೇಕು.
ಇನ್ನು ನಮ್ಮ ಯುವ ಜನಾಂಗವನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಅಸೋಶಿಯೇಷನ್ ಇದೆ. ಇದರ ಪ್ರಮುಖ ಉದ್ದೇಶ ಕೂಡ ಯುವಕರಲ್ಲಿ ದೇಶಭಕ್ತಿ ಮತ್ತು ಯಾವುದೇ ಕಾಲಕ್ಕೂ ಎಲ್ಲ ರೀತಿಯ ಸೇವೆಗೆ ಮಾನಸಿಕ ಮತ್ತು ದೈಹಿಕವಾಗಿ ಸನ್ನದ್ಧವಾಗಿಸುವುದೇ ಆಗಿರುತ್ತದೆ. ಇದನ್ನೂ ಸಹ ಎಲ್ಲ ಹಂತದ ಶಿಕ್ಷಣದಲ್ಲೂ ಕಡ್ಡಾಯಗೊಳಿಸಬೇಕು. ಪ್ರತಿ ಶಾಲೆಯಲ್ಲೂ ದೈಹಿಕ ಶಿಕ್ಷಕರಿರುತ್ತಾರೆ. ಇವರುಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ನೀಡಿ ಅವರ ಮೂಲಕ ಮಕ್ಕಳಿಗೆ ತರಬೇತಿ ಕೊಡಬಹುದು.
ಕಡ್ಡಾಯ ಮಿಲಿಟರಿ ಸೇವೆಯೆಂಬುದು ಒಬ್ಬ ವ್ಯಕ್ತಿಯ ಸ್ವಾತಂತ್ರ್ಯ ಹರಣ ಮತ್ತು ಅದೊಂದು ಜೀತ ಪದ್ಧತಿ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದ್ದು ಭಾರತವೂ ಸೇರಿದಂತೆ ಬಹುಪಾಲು ರಾಷ್ಟ್ರಗಳಲ್ಲಿ ಇದನ್ನು ಆಚರಣೆಗೆ ತಂದಿಲ್ಲ. ಆದರೆ ಚೀನ, ಜರ್ಮನಿ, ರಷ್ಯಾ ಮೊದಲಾದ ದೇಶಗಳಲ್ಲಿ ಈ ಪದ್ಧತಿ ಈಗಲೂ ಇದೆ. ಅಲ್ಲದೆ ಇದು ಯುವಕರ ಭವಿಷ್ಯಕ್ಕೆ ತಡೆಯಾಗುತ್ತದೆ ಎಂಬ ಅಭಿಪ್ರಾಯವೂ ಇದೆ. ಆದರೆ, ಈ ಹಂತ ಅಲ್ಪ ಕಾಲದ್ದು ಮತ್ತು ಜೀವಮಾನಪೂರ್ತಿ ಅನುಕೂಲಕ್ಕೆ ಬರುವಂಥ ಶಿಸ್ತು ಮತ್ತು ದೇಶಪ್ರೇಮವನ್ನು ಕಲಿಸುತ್ತದೆ.
ಯುವಕರಿಗೆ ಕಡ್ಡಾಯ ಮಿಲಿಟರಿ ತರಬೇತಿ ನೀಡುವುದರಿಂದ ಅವರಿಗಷ್ಟೇ ಅಲ್ಲದೇ ಸಮಾಜಕ್ಕೂ ಒಳಿತಿದೆ. ಹಾಗಾಗಿ ಇದಕ್ಕೆ ಅವರನ್ನು ಸಜ್ಜುಗೊಳಿಸಲು ಎನ್‌ಸಿಸಿ ಅಥವಾ ಸ್ಕೌಟ್ಸ್ ತರಬೇತಿ ಪ್ರಮುಖ ಪಾತ್ರ ವಹಿಸಬೇಕಿದೆ. ಅಲ್ಲದೆ ನಮ್ಮ ಸೇನೆಯಲ್ಲಿ ಸೇವೆ ಮಾಡುವ ಸೈನಿಕರ ಅನೇಕ ಸಮಸ್ಯೆಗಳ ಬಗ್ಗೆ, ಅಂದರೆ ದೀರ್ಘಕಾಲ ಕುಟುಂಬದಿಂದ ದೂರವಿರುವುದು, ಅಸಹನೀಯ ಪ್ರದೇಶಗಳಲ್ಲಿ ಸೇವೆ ಮಾಡುವುದು ಇಂತಹ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ, ಅವರಿಗೆ ವಿಶೇಷ ಆರ್ಥಿಕ ಸವಲತ್ತು ಮತ್ತಿತರ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಸರ್ಕಾರ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನೆಯಲ್ಲಿ ಸೇರುವ ಆಸಕ್ತಿ ಬೆಳೆಸಿಕೊಳ್ಳುತ್ತಾರೆ.
=  ಕೆ.ಎಸ್.ಸೋಮೇಶ್ವರ
kssomeswara@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement