ಒಬಾಮಾ ಗುಟುರಿದರೆ ರಷ್ಯ ಬೆದರುತ್ತಾ?
ಉಕ್ರೇನ್‌ನ ಅಸ್ಥಿರತೆ ಸಂದರ್ಭದಲ್ಲಿ ಅಲ್ಲಿಗೆ ಸೇನೆ ನುಗ್ಗಿಸುವ ನಿರ್ಧಾರ ತೆಗೆದುಕೊಂಡಿರುವ ರಷ್ಯದ ವಿರುದ್ಧ ಒಬಾಮಾ ಎಚ್ಚರಿಕೆ ನೀಡಿದ್ದಾರೆ. ಈ ಸಾಹಸಕ್ಕೆ ರಷ್ಯ ಬೆಲೆ ತೆರಬೇಕಾಗುತ್ತದೆ ಎಂಬ ಎಚ್ಚರಿಕೆ ಅವರ ಕಡೆಯಿಂದ ಬಂದಿದೆ. ಆದರೆ ಅದೇನು ಬೆಲೆ ತೆರಬೇಕೋ ನಾವೂ ನೋಡೇಬಿಡುತ್ತೇವೆ ಎಂಬಂತಿದೆ ರಷ್ಯ.
ಉಕ್ರೇನ್‌ನ ನೆಲ ಕ್ರಿಮಿಯಾ ಮೇಲೆ ರಷ್ಯದ ಪಡೆ ನುಗ್ಗಿಸುವ ನಿರ್ಧಾರವನ್ನು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಕೈಗೊಳ್ಳುತ್ತಿದ್ದಂತೆ, ಇತ್ತ ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಒಬಾಮಾ ಪಡೆ ಲೆಕ್ಕ ಹಾಕುತ್ತಿದೆ. ಜೂನ್‌ನಲ್ಲಿ ಮಾಸ್ಕೊದಲ್ಲಿ ನಡೆಯುವ ಜಿ8 ಸಭೆಯನ್ನು ಬಹಿಷ್ಕರಿಸುವುದು, ಅಮೆರಿಕ ಯುದ್ಧನೌಕೆಯನ್ನು ಕಳುಹಿಸುವುದು ಹೀಗೆಲ್ಲ ಆಯ್ಕೆಗಳನ್ನು ಅಳೆದು ತೂಗಲಾಗುತ್ತಿದೆ.
2008ರಲ್ಲಿ ರಷ್ಯವು ಜಾರ್ಜಿಯಾ ವಿರುದ್ಧ ಆಕ್ರಮಣಕ್ಕೆ ಹೋದಾಗಲೂ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಇದೇ ಬಗೆಯ ಮಾರ್ಗವನ್ನು ಅನುಸರಿಸಿದ್ದರು. ಆಗ ರಷ್ಯ ಪ್ರಾರಂಭದಲ್ಲಿ ಹಿಂತೆಗೆಯಿತಾದರೂ ನಂತರ ಕದನ ವಿರಾಮ ಉಲ್ಲಂಘಿಸಿ ತಾನು ತನ್ನ ಹಿತಾಸಕ್ತಿ ಈಡೇರಿಸಿಕೊಳ್ಳುವುದಕ್ಕೆ ಯಾವ ಬೆಲೆಯನ್ನಾದರೂ ತೆರುವುದಕ್ಕೆ ಸಿದ್ಧ ಎಂದು ದೃಢಪಡಿಸಿತು.
ರಷ್ಯ ತನ್ನ ಆಕ್ರಮಕ ಧೋರಣೆಯನ್ನು ಘೋಷಿಸಿದ ಬೆನ್ನಲ್ಲೇ ಪುಟಿನ್ ಜತೆ ಬರೋಬ್ಬರಿ 90 ನಿಮಿಷಗಳ ದೂರವಾಣಿ ಸಂಭಾಷಣೆ ನಡೆಸಿರುವ ಒಬಾಮಾ, ಜೂನ್‌ನ ಜಿ8 ಸಭೆಗೆ ತಮ್ಮ ತಯಾರಿಯನ್ನು ಬರ್ಖಾಸ್ತುಗೊಳಿಸಿರುವುದಾಗಿ ತಿಳಿಸಿದ್ದಾರೆ. ಒಬಾಮಾರ ಹಳೆಯ ಸಲಹೆಗಾರ ಮೈಖೆಲ್ ಮೆಕಾಫ್ ಅವರು, 'ರಷ್ಯದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸುವ ನಿಟ್ಟಿನಲ್ಲಿ ಮಾತುಕತೆ ಆಗಬೇಕು. ಈ ಹೆಜ್ಜೆಯಿಂದ ತಮ್ಮ ವ್ಯಾಪಾರಿ ಹಿತಾಸಕ್ತಿಗಳಿಗೆ ಹೊಡೆತ ಬೀಳುತ್ತದೆ ಎಂಬುದವರಿಗೆ ಮನದಟ್ಟಾಗಬೇಕು' ಎನ್ನುತ್ತಾರೆ.
ಅಂತಾರಾಷ್ಟ್ರೀಯ ಗೌರವದ ಹೆಸರಲ್ಲಿ ತಮ್ಮನ್ನು ಹೆದರಿಸಿದರೆ ತಾವೇನೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದನ್ನು ಪುಟಿನ್ ಈಗಾಗಲೇ ಸ್ಪಷ್ಟಪಡಿಸಿಬಿಟ್ಟಿದ್ದಾರೆ. 1991ರಲ್ಲಿ ಸೋವಿಯತ್ ಯೂನಿಯನ್ ಚೂರಾಗುವವರೆಗೂ ರಷ್ಯದ ಆಡಳಿತದಲ್ಲೇ ಇತ್ತು ಉಕ್ರೇನ್. ಇಂಥ ಐತಿಹಾಸಿಕ ಮಹತ್ವದೆದುರು ರಾಜತಾಂತ್ರಿಕ ನಷ್ಟ ಸಂಭವಿಸುವುದನ್ನು ತಾಳಿಕೊಳ್ಳಬಹುದು. ಹೀಗಾಗಿ ಉಕ್ರೇನ್ ಮೇಲೆ ಹಿಡಿತ ಸಾಧಿಸುವ ನಿರ್ಧಾರದಿಂದ ಹಿಂತೆಗೆಯುವುದು ಬೇಡ ಎಂಬ ನಿರ್ಧಾರದಲ್ಲಿದ್ದಾರೆ ಪುಟಿನ್. ಕ್ರಿಮಿಯಾವನ್ನು ಇಡಿ ಇಡಿಯಾಗಿ ಆವರಿಸಿಕೊಂಡು ಜಾಗತಿಕ ಸಮುದಾಯವನ್ನು ನಿರ್ಲಕ್ಷಿಸುವ ಅತಿಯಾದ ಹಂತಕ್ಕೇನೂ ಪುಟಿನ್ ಹೋಗಲಿಕ್ಕಿಲ್ಲ. ಆದರೆ ಉಕ್ರೇನ್‌ನ ಭಾಗಗಳಲ್ಲಿ ರಷ್ಯದ ಮಿಲಿಟರಿ ಉಪಸ್ಥಿತಿಯನ್ನು ಪ್ರಖರಗೊಳಿಸಿ, ಮುಂದೊಮ್ಮೆ ಅಲ್ಲಿ ಸ್ಥಾಪನೆಯಾಗುವ ಸರ್ಕಾರವು ಪಶ್ಚಿಮದ ರಾಷ್ಟ್ರಗಳಿಗೆ ನಿಷ್ಠೆ ತೋರದಂತೆ ನೋಡಿಕೊಳ್ಳುವ ಆಸಕ್ತಿ ಅವರದ್ದಾಗಿದೆ. ಇತ್ತ, ರಷ್ಯನ್ ಭಾಷೆಯನ್ನೇ ಮಾತನಾಡುವ ಪೂರ್ವ ಉಕ್ರೇನ್ ಪ್ರತ್ಯೇಕವಾಗಿಹೋಗುತ್ತದೇನೋ ಎಂಬ ಆತಂಕ ಅಮೆರಿಕದ್ದಾಗಿದೆ.
ಸಂಪನ್ಮೂಲ ಸಮೃದ್ಧಿಯ ರಷ್ಯವನ್ನು ಆರ್ಥಿಕ ದಿಗ್ಬಂಧನದ ಅಸ್ತ್ರದಲ್ಲಿ ಮಣಿಸುವುದು ಅಷ್ಟು ಸುಲಭವಲ್ಲ. ವಿಶ್ವಸಂಸ್ಥೆ ಭದ್ರತಾ ಸಭೆಯಲ್ಲಿ ವಿಟೊ ಪವರ್ ಹೊಂದಿರುವ ರಷ್ಯ, ಜಾಗತಿಕ ಸಮುದಾಯದ ಒತ್ತಡದ ಕುರಿತೂ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಅಲ್ಲದೇ ಯುರೋಪಿನ ಹೆಚ್ಚಿನ ರಾಷ್ಟ್ರಗಳಿಗೆ ನೈಸರ್ಗಿಕ ಇಂಧನವನ್ನು ಪೂರೈಸುವ ದೇಶ ಇದಾಗಿರುವುದರಿಂದ ಅಲ್ಲಿನ ಅಮೆರಿಕ ಮಿತ್ರರಾಷ್ಟ್ರಗಳೂ ತೀರ ಕೆಮ್ಮುವಂತಿಲ್ಲ! ಇರಾನ್ ಅರ್ಥವ್ಯವಸ್ಥೆ ಮೇಲೆ ಹೇರಿದಂಥ ಒತ್ತಡವನ್ನು ಒಬಾಮಾ ಇಲ್ಲಿ ಸೃಷ್ಟಿಸಲಾಗದು. ಅವರ ಯುರೋಪ್ ಮಿತ್ರರೇ ಇದಕ್ಕೆ ಸಮ್ಮತಿಸುವುದಿಲ್ಲ. ಅಲ್ಲದೇ ಇರಾನ್ ಮತ್ತು ಸಿರಿಯಾಗಳ ಜತೆಗಿನ ವ್ಯವಹಾರದಲ್ಲೂ ಅಮೆರಿಕಕ್ಕೆ ಒಂದು ಹಂತದ ಸಹಕಾರವು ರಷ್ಯದಿಂದ ಲಭ್ಯವಾಗಬೇಕಿದೆ.
-ನ್ಯೂಯಾರ್ಕ್ ಟೈಮ್ಸ್ ವರದಿ