ಕನ್ನಡದ ಮರ್ಯಾದೆ ಇಷ್ಟು ಅಗ್ಗವೇ?
ಮೂರನೇ ತರಗತಿಯಲ್ಲಿ ಓದುತ್ತಿದ್ದೆ. ಹೊಸ ಮಿಸ್ ಒಬ್ಬರು ತರಗತಿಗೆ ಬಂದರು...
ಮೂರನೇ ತರಗತಿಯಲ್ಲಿ ಓದುತ್ತಿದ್ದೆ. ಹೊಸ ಮಿಸ್ ಒಬ್ಬರು ತರಗತಿಗೆ ಬಂದರು. ಡಿಕ್ಟೇಷನ್ ಕೊಡುತ್ತೀನಿ ಅಂತ ಸ್ಕೇಲನ್ನು ಕೈಗೆತ್ತಿಕೊಂಡರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಬಂದು ಬೋರ್ಡ್ ಮೇಲೆ ಶಬ್ದಗಳನ್ನ ಬರೆದು ಹೋಗುತ್ತಿದ್ದರು. ನನ್ನ ಸರದಿ ಬಂತು. "ಎಸ್ಟು" ಬರಿ, ನೋಡೋಣ, ಎಂದರು. ನಾನು 'ಖ2' ಅಂತ ಬರೆದೆ. ತರಗತಿಯಲ್ಲಿದ್ದ ಮಕ್ಕಳೆಲ್ಲ ಗೊಳ್ ಎಂದು ನಕ್ಕರು. ನನಗೆ ತಮಾಷೆ ಏನೆಂಬುದೇ ಅರ್ಥ ಆಗಲಿಲ್ಲ! ಇನ್ನೊಬ್ಬಳು ಹುಡುಗಿ ಬಂದು ಬೋರ್ಡ್ ಮೇಲೆ "ಎಷ್ಟು" ಅಂತ ಬರೆದಾಗಲೇ ನನಗೆ ನಾನು ಬರೆದದ್ದು ತಪ್ಪು ಅಂತ ಗೊತ್ತಾಗಿದ್ದು! ಮಿಸ್ ಕೈಲಿದ್ದ ಸ್ಕೇಲ್ ನೋಡಿ, ಸುಮ್ಮನೆ ವಾದ ಮಾಡೋದು ಬೇಡ ಎಂದು ಅನಿಸಿತು. ಮರಳಿ ನನ್ನ ಜಾಗಕ್ಕೆ ಬಂದು ಕುಳಿತೆ. ಶಿಕ್ಷಕರೇ ತಪ್ಪು ಮಾತನಾಡಿದರೆ, ಮಕ್ಕಳು ಸಹಜವಾಗಿ ಅದನ್ನೇ ಅನುಕರಿಸುತ್ತಾರೆ, ಅಲ್ಲವೇ?
ಇದೀಗ ಸಿನಿಮಾ ತಾರೆಯರು ಹೊಸ ಟ್ರೆಂಡ್ ಶುರು ಮಾಡಿಕೊಂಡಿದ್ದಾರೆ. ಕನ್ನಡವನ್ನ ಇಂಗ್ಲಿಷ್‌ನಲ್ಲಿ ಮಾತನಾಡುವುದು. ಅದು ಹೇಗಂತೀರಾ? ಬಟ್, ಸೋ, ಆ್ಯಂಡ್, ಓಕೆ, ಯು ನೋ, ಓಹ್ ಮೈ ಗಾಡ್... ಇವೆಲ್ಲಾ ಹಳೆಯದಾಗಿವೆ. ಅದಕ್ಕೆ ಅವರೀಗ, "ಅಸ್ಟು, ಇಸ್ಟು, ಕಸ್ಟ, ಇಸ್ಟ, ದೃಸ್ಟಿ, ಪುಸ್ಟಿ" ಅಂತೆಲ್ಲಾ ಮಾತನಾಡುತ್ತಾರೆ! ಸಿನಿಮಾ ತಾರೆಯರನ್ನು ಬಿಡಿ, ವಾರ್ತಾ ವಾಚಕರು ಕೂಡ ಕನ್ನಡದ ಕೊಲೆ ಮಾಡುತ್ತಾರೆ.
ವಾರ್ತೆ ಪೂರ್ತಿ ತಪ್ಪು ಉಚ್ಚಾರಣೆಗಳಿಂದ ತುಂಬಿರುತ್ತದೆ. ಬ್ರಸ್ಟಾಚಾರ, ಸಿಸ್ಟಾಚಾರ, ರಾಸ್ಟ್ರ, ವರಿಸ್ಟ, ಕನಿಸ್ಟ, ಗರಿಸ್ಟ, ನಸ್ಟ, ದುಸ್ಟ, ಅನಿಸ್ಟ, ಮುಸ್ಟಿ, ಕುಸ್ಟ ರೋಗ, ಅಂತೆಲ್ಲಾ ಓದುತ್ತಾ ಹೋಗುತ್ತಾರೆ. ವಿಪರ್ಯಾಸ ಅಂದರೆ 'ಸ್ಪಷ್ಟ' ಎನ್ನುವ ಪದವೇ ಸ್ಪಷ್ಟವಿಲ್ಲ! ಅದನ್ನ ಸ್ಪಸ್ಟ ಅಂತ ಓದುತ್ತಾರೆ.
ಸೀನು ಬಂದಾಗ ಅವರುಗಳು "ಅಕ್ಷೀ.." ಅಂತಾರಾ? ಅಥವಾ "ಅಕ್ಸೀ..." ಅಂತಾರಾ ಅನ್ನೋ ಕುತೂಹಲ ನನಗೆ! ಉಚ್ಚರಿಸಲು ಅಷ್ಟು ಒದ್ದಾಡುವವರನ್ನ ವಾರ್ತಾ ವಾಚಕರಾಗಿ ಕೂರಿಸಬೇಕು ಏಕೆ? ಕನ್ನಡದ ಮಾನ-ಮರ್ಯಾದೆ ಹರಾಜು ಹಾಕುವ ಬದಲು, ಅವರು ಮಾತನಾಡದೇ ಇರುವುದು ಒಳಿತು! ಕನ್ನಡ ಬಾರದೇ ಇರುವವರು ತೊದಲಿಕೊಂಡು ಮಾತನಾಡಿದರೆ, ಕ್ಷಮೆ ಇದೆ. ಕನ್ನಡ ಗೊತ್ತಿದ್ದೂ ಗೊತ್ತಿಲ್ಲದವರಂತೆ ವರ್ತಿಸುವುದು ಅಸಹ್ಯಕರ!
ಪ್ರಸಿದ್ಧ ಸುದ್ದಿ ವಾಹಿನಿಯ ವಾರ್ತಾ ವಾಚಕಿಯೊಬ್ಬರು, "ಮಾಡಿದೆ, ಹೋಗಿದೆ" ಎನ್ನಲು, "ಮಾಡಿದ್ಯೆ, ಹೋಗಿದ್ಯೆ" ಅಂತಾರೆ. ಇನ್ನೊಬ್ಬ ವಾರ್ತಾ ವಾಚಕ, "ಮಾಡಿದ್ದಾರೆ, ಹೋಗಿದ್ದಾರೆ" ಎನ್ನಲು, "ಮಾಡಿದ್ದಾರ್, ಹೋಗಿದ್ದಾರ್" ಅನ್ನೋದೇ? "ಬೇಟೆಗಾರ" ಎನ್ನುವ ಸುಲಭ ಶಬ್ದವನ್ನ ಕಷ್ಟ ಪಟ್ಟು "ಬ್ಯೇಟೇಗ್ಯಾರ" ಅಂತೆಲ್ಲಾ ಓದಿದಾಗ ನಗಬೇಕೋ, ಅಳಬೇಕೋ... ತಿಳಿಯದು. ಇವರಿಗೆ ಕನ್ನಡ ಬಾರದೆ ಏನೂ ಇಲ್ಲ. ಇದು ಇವರ ಸ್ಟೈಲ್! ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದರೂ ಕನ್ನಡ ಎಂದರೆ ಕೆಲವರಿಗೆ ಕೇವಲ! ಬಟ್ಟೆ ಒಗೆಯೋದಿದೆ ಎಂದರೆ, "ಬಟ್ಟೆ ವಾಶ್ ಮಾಡೋದಾ?" ಅಂತಾರೆ. "ಚೀಲ" ಎಂದರೆ "ಓಹ್! ಬ್ಯಾಗ್ ಆ?" ಅಂತಾರೆ. "ಬೆಳಗ್ಗೆ" ಎಂದರೆ "ಮಾರ್ನಿಂಗಾ?" ಅಂತಾರೆ. ಕನ್ನಡ ಎಂದಾಕ್ಷಣ ಈ ತಾರತಮ್ಯ ಏಕೆ?
ಮಾಡರ್ನ್ ಅನ್ನೋಕೆ ಅದೆಷ್ಟೋ ಜನ ಮಾಡ್ರನ್ ಅಂತಾರೆ. ಹಾಫ್ ಎನ್ನಲು ಆಫ್ ಅಂತಾರೆ, Last ಅನ್ನೋದಿಕ್ಕೆ Lost ಅಂತಾರೆ, ಪಾಸ್ಟ್ ಮತ್ತು ಫಾಸ್ಟ್ ನ ಕನ್ಫ್ಯೂಸ್ ಮಾಡಿಕೊಳ್ಳುತ್ತಾರೆ. ಇಂಗ್ಲಿಷ್ ಪದ ಕೊಲೆಯಾದರೆ ಪರ್ವಾಗಿಲ್ಲ. ಏಕೆಂದರೆ ಅದು ನಮ್ಮ ಮಾತೃಭಾಷೆ ಅಲ್ಲ. ಇಂಗ್ಲಿಷ್‌ನಲ್ಲಿ ಮಾತನಾಡಿದಾಗ ಮಾತ್ರ ಅದು ಸರಿಯೋ, ತಪ್ಪೋ ಅಂತ ನೋಡಿಕೊಂಡರಾಯಿತು.
ಕ್ರಿಸ್ಮಸ್ ಸ್ಪೆಷಲ್ ಅಂತ ಸುದ್ದಿ ವಾಹಿನಿ ಒಂದರಲ್ಲಿ ವಿಶೇಷ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು. ವಾಚಕಿಯೊಬ್ಬರು Santa Claus ನನ್ನು ಕಾರ್ಯಕ್ರಮ ಪೂರ್ತಿ "ಶಾಂತಾ- ಶಾಂತಾ" ಅಂತ ಓದುತ್ತಾ ಹೋಗಿದ್ದಾರೆ. ಅಂತ ಸಂತನೂ ಅಲ್ಲ, ಇತ್ತ Santa ನೂ ಅಲ್ಲ. ಪಾಪ, ಕ್ರಿಸ್ಮಸ್ ತಾತನ ಲಿಂಗವೇ ಬದಲಾಗಿ ಹೋಯಿತು!
ಇನ್ನೂ ಕೆಲವರಿಗೆ ಕನ್ನಡ ಗೊತ್ತಿಲ್ಲ ಎಂದು ತೋರಿಸಿಕೊಂಡರೆ ಅದೇನೋ ಖುಶಿ! ಪಾನಿಪುರಿಯವನ ಬಳಿ, ರಿಕ್ಷಾ ಚಾಲಕರ ಬಳಿ, ತರಕಾರಿ ಮಾರುವವರ ಬಳಿ ಇವರು ತಮ್ಮ ಇಂಗ್ಲಿಷ್ ಪಾಂಡಿತ್ಯವನ್ನ ತೋರಿಸಿಕೊಳ್ಳುತ್ತಾರೆ. "ಹತ್ತು ರುಪಾಯಿ" ಅನ್ನುವ ಬದಲು "ಟೆನ್ ರುಪೀಸ್" ಎಂದರೆ ಬೆಲೆ ಹೆಚ್ಚಾಗುತ್ತಾ?
ಚಪ್ಪಲಿ ರಿಪೇರಿ ಮಾಡುವವನು 'ಟೈಂ ಎಷ್ಟು' ಅಂತ ಕೇಳಿದರೆ, ಇವರು 'ಟ್ವೆಲ್ವ್‌ತರ್ಟಿತ್ರಿ' ಎಂದರೆ, ಅವನಿಗೆ ಏನು ತಾನೆ ಅರ್ಥ ಆಗಬೇಕು? ಅಷ್ಟೆಲ್ಲಾ ತಿಳಿದಿದ್ದರೆ, ಆತ ಚಪ್ಪಲಿ ಹೊಲಿಯಲು ಕೂರುತ್ತಿದ್ದನೇ? ಅದೇ ಇಂಗ್ಲಿಷ್‌ನಲ್ಲಿ ಯಾರಾದರು ಇವರ ಬಳಿ ಏನ್ನನ್ನಾದರೂ ಕೇಳಿದರೆ, ಇವರ ಬಾಯಿಂದ ಹೊರಬರುವುದು ಅವಾಚ್ಯ ಶಬ್ದಗಳು ಮಾತ್ರ. ಪ್ರತಿಯೊಂದು ವಾಕ್ಯವನ್ನ "F" ಪದದಿಂದ ಸುಪ್ರಭಾತ ಮಾಡುತ್ತಾರೆ, "F" ಪದದೊಂದಿಗೆ ಸಂಧ್ಯಾ ವಂದನೆಯೂ ಮಾಡುತ್ತಾರೆ! ಇಷ್ಟು ಮಾಡಿದರೆ ಇವರ ಜೀವನ ಸಾರ್ಥಕವಾದಂತೆ.
'ಳ' ಇದ್ದಲ್ಲಿ 'ಲ' ಉಪಯೋಗಿಸಿದರೆ, ಹಲವು ಪದಗಳ ಅರ್ಥವೇ ಬೇರೆಯಾಗುತ್ತವೆ. ಇದರ ಅರಿವಿದ್ದರೂ ಕೆಲವರು 'ಹೇಳು, ಕೇಳು' ಎನ್ನುವಲ್ಲಿ ಎಡವಿದಾಗ 'ಕೇಲಲು' ಆಗುವುದಿಲ್ಲ. ಮಾತ್ರೆ, ಛಂದಸ್ಸು, ಅಲಂಕಾರ... ಇವುಗಳ ಜ್ಞಾನ ಇರಲೇಬೇಕೆಂದಿಲ್ಲ. ಇದ್ದರೆ ಒಳ್ಳೆಯದೆ! ಆದರೆ ಗೊತ್ತಿದ್ದ ಪದಗಳನ್ನು ಏಕೆ ದಾರುಣವಾಗಿ ಕೊಲ್ಲಬೇಕು? ಕನ್ನಡದ ಮರ್ಯಾದೆಯನ್ನ ಸ್ವಲ್ಪವಾದರೂ ಉಳಿಸೋದು ಬೇಡವೇ?
ನೀವು ತಮಿಳು ನಾಡಿಗೆ ಹೋದರೆ, ಅಲ್ಲಿ ತಮಿಳು ಬಿಟ್ಟು ಯಾವುದೇ ಭಾಷೆ ಮಾತನಾಡಿ, ಎಷ್ಟೇ ದುಡ್ಡು ಕೊಟ್ಟರೂ ರಿಕ್ಷಾ ಚಾಲಕರು ನಿಮಗೆ ಮರ್ಯಾದೆ ಕೊಡುವುದಿಲ್ಲ. ನಿಮಗೆ ಅಲ್ಪ ಸ್ವಲ್ಪ ತಮಿಳು ಬರುತ್ತದೆಯೆಂದಾದರೆ, ತಮ್ಮ ಮನೆಯವರಂತೆ ಪ್ರೀತಿಯಿಂದ ಮಾತನಾಡಿಸುತ್ತಾರೆ. ಅಂತಹ ಭಾಷಾ ಪ್ರೇಮ ನಮ್ಮಲ್ಲಿ ಏಕೆ ಕಾಣ ಸಿಗುವುದಿಲ್ಲ? ಕನ್ನಡವೆಂದರೆ ಕನ್ನಡಿಗರು ಮತ್ತು ಕನ್ನಡತಿಯರಿಗೆ ತಾತ್ಸಾರವೇಕೆ?
"ಪ್ರಜ್ಞಾ" ಅನ್ನೋ ಹುಡುಗಿ ತನ್ನ ಹೆಸರನ್ನ ತಾನೇ "ಪ್ರಗ್ನಾ" ಅನ್ನುತ್ತಿದ್ದಳು! ಅದೇ ತರಹ, ಕೃತಜ್ಞ ಅನ್ನಲು ಕೃತಘ್ನ ಅಂದರೆ, ಅರ್ಥಾನೇ ಬೇರೆ ಆಗಲ್ಲಿಲ್ಲವೇ? ಜ್ಞಾನ ಅನ್ನಲು ಗ್ನಾನ ಅಂತಾರೆ. ಪ್ರಗ್ನೆ, ಆಗ್ನೆ, ತಗ್ನ, ಯಗ್ನ ಅಂತೆಲ್ಲಾ ಹೇಳಿದಾಗ ಕಿರಿಕಿರಿ ಆಗಲ್ವಾ?
ಹಲವು ಮಂದಿಗೆ ಗಡಿಯಾರ, ಕುರ್ಚಿ, ಕೊಡೆ (ಛತ್ರಿ), ಬಾಗಿಲು, ಬಾವಿ, ಕಿಟಕಿ ಅನ್ನುವ ಪದಗಳೇ ಉಪಯೋಗಿಸಿ ಗೊತ್ತಿಲ್ಲ. ವಾಚ್, ಚೇರ್, ಅಂಬ್ರೆಲಾ, ಡೋರ್, ವೆಲ್, ವಿಂಡೋ ಅಂತಾನೇ ಕನ್ನಡ ಮಾತನಾಡುವಾಗ ಬಳಸುವುದರಿಂದ ಆ ಪದಗಳು ಅವರ ಶಬ್ದಕೋಶದಿಂದ ಯಾವಾಗಲೋ ಅಳಸಿ ಹೋಗಿವೆ. ಇನ್ನು ಬಾನುಲಿ/ ಆಕಾಶವಾಣಿ, ದೂರದರ್ಶನ, ದೂರವಾಣಿ ಅಂದರೆ "ಯಾರು ಅವರೆಲ್ಲ?" ಅಂತ ಕೇಳಿಬಿಟ್ಟಾರು!
"ನ್ಯಾನ್ ಮಲಯಾಳಿ", "ಮೈ ಪಂಜಾಬಿ ಹೂಂ" ಅಂತ ಜನರು ಹೆಮ್ಮೆಯಿಂದ ಹೇಳಿಕೊಂಡರೆ, ಕನ್ನಡಿಗರು ಏಕೆ "I am a Bangalorean" ಅಂತಾರೆ? "ನಾನು ಕನ್ನಡಿಗ", "ನಾನು ಕನ್ನಡತಿ" ಅಂತ ಏಕೆ ಹೇಳಿಕೊಳ್ಳುವುದಿಲ್ಲ? ಅದೆಷ್ಟೋ ಕನ್ನಡಿಗರಿಗೆ, ಗಂಡಸು ಅಂದರೆ ಕನ್ನಡಿಗ, ಹೆಂಗಸು ಅಂದರೆ ಕನ್ನಡತಿ ಅಂತಾನೂ ಗೊತ್ತಿಲ್ಲ! ಹುಡುಗಿಯರ ಬಳಿ "ಐಂ ಅ ಕನ್ನಡಿಗ, ಆರ್ ಯು ಟೂ ಅ ಕನ್ನಡಿಗ?" ಅಂತಾರೆ, ತುಂಬಾ ಬೇಜಾರು ಆಗುತ್ತೆ. ಕನ್ನಡವನ್ನ ಇಷ್ಟು ಬರ್ಬರವಾಗಿ ಕೊಲ್ಲುತ್ತಿದ್ದಾರಲ್ಲಾ ಅಂತ. ಅದಕ್ಕೆ ಪ್ರತಿಕ್ರಿಯೆಯಾಗಿ ಹುಡುಗಿಯರೂ ಕೂಡ "ಯೆಸ್ ಡೂಡ್, ಐಂ ಅ ಕನ್ನಡಿಗ ಟೂ, ಬಟ್ ಐ ಡೋಂಟ್ ನೋ ಕನ್ನಡ" ಎಂದು ಬಿಟ್ಟರೆ ಜೈ!
- ಅದಿತಿಮಾನಸ ಟಿ. ಎಸ್.
adithimanasa@yahoo.co.in