ಸಂಪನ್ಮೂಲ ಭೌತಿಕ ಆಸ್ತಿ, ಸಾಧಕರು ಬೌದ್ಧಿಕ ಆಸ್ತಿ
ಒಂದು ದೇಶದ ಭೌತಿಕವಾದ ಬೆಳವಣಿಗೆಗೆ ಸಂಪನ್ಮೂಲಗಳು ಬೇಕು. ಅದರಲ್ಲಿಯೂ ನಿಸರ್ಗದತ್ತವಾದ ಸಂಪನ್ಮೂಲಗಳನ್ನು ಹೊಂದಿರುವ ರಾಷ್ಟ್ರವು ಪ್ರಗತಿಯನ್ನು ಸಾಧಿಸಲು ಸಹಕಾರಿ. ಆ ನಿಟ್ಟಿನಲ್ಲಿ ಮುಖ್ಯವಾಗಿ ಜಲಸಂಪತ್ತು, ಅರಣ್ಯಸಂಪತ್ತು, ಖನಿಜಸಂಪತ್ತು ಮುಖ್ಯವಾಗುತ್ತವೆ. ನೈಸರ್ಗಿಕ ಸಂಪತ್ತುಗಳನ್ನು ಹೊಂದದ ದೇಶವು ಪ್ರಗತಿಯನ್ನು ಕಾಣುವುದು ಕಷ್ಟಸಾಧ್ಯ. ಅದಕ್ಕೊಂದು ಜ್ವಲಂತ ಉದಾಹರಣೆಯೆಂದರೆ, ಇಸ್ರೇಲ್ ದೇಶದ ಬಹುತೇಕ ಭಾಗದಲ್ಲಿ ಮರುಭೂಮಿಯಿದ್ದು, ಕೃಷಿಯೋಗ್ಯವಾದ ಭೂಮಿಯು ಕಡಿಮೆ ಇದೆ. ಕೃಷಿಗೆ ಬೇಕಾದ ನೀರಿನ ಪ್ರಮಾಣ ಅತ್ಯಲ್ಪ. ಈ ದೇಶದ ಸುತ್ತ ಶತ್ರುರಾಷ್ಟ್ರಗಳು. ವಿದ್ಯುತ್, ನೀರು ಇತ್ಯಾದಿಗಳಿಗಾಗಿ ಅವರು ತನ್ನ ಸಮೀಪದ ರಾಷ್ಟ್ರಗಳನ್ನು ಅವಲಂಬಿಸಿರುವುದಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಆ ದೇಶವು ಕೃಷಿ ಕ್ಷೇತ್ರದಲ್ಲಿ ಗಣನೀಯವಾದ ಪ್ರಗತಿಯನ್ನು ಸಾಧಿಸಿದೆ. ತನ್ನ ದೇಶಕ್ಕೆ ಬೇಕಾದ ಆಹಾರ ಸಾಮಗ್ರಿಗಳನ್ನು ಕಡಿಮೆ ನೀರಿನಲ್ಲಿ ಬೆಳೆಯುತ್ತ, ಜಗತ್ತಿಗೆ ಮಾದರಿಯಾಗಿದೆ. ಮಾನವ ಪ್ರಯತ್ನದಿಂದಾಗಿ ಇಸ್ರೇಲ್ ಅಭಿವೃದ್ಧಿ ಹೊಂದಿದ ದೇಶವಾಗಿದೆ. ಅಮೆರಿಕ ಮತ್ತು ಭಾರತದಂಥ ಬೃಹತ್ ರಾಷ್ಟ್ರಗಳು ಭದ್ರತೆಯ ವಿಧಾನವನ್ನು ಮತ್ತು ಯುದ್ಧದ ತಂತ್ರಗಳನ್ನು ಬಳಸಿಕೊಳ್ಳುವಷ್ಟು ಭದ್ರತೆಯ ವಿಧಾನವನ್ನು ಅವರಿಂದಲೇ ಕಲಿಯಬೇಕು. ಅತ್ಯಾಧುನಿಕ ತಂತ್ರಗಳಿಗೆ ಖ್ಯಾತಿ ಪಡೆದಿದೆ ಈ ದೇಶ. ನಿಸರ್ಗದಿಂದ ಇಂತಹ ದೇಶಗಳಿಗೆ ದ್ರೋಹವಾಗಿದ್ದು, ಮಾನವ ಪ್ರಯತ್ನದಿಂದ ಅದನ್ನು ಸರಿಪಡಿಸಿಕೊಂಡು ಪ್ರಗತಿಯನ್ನು ಸಾಧಿಸುತ್ತಿವೆ.
ಕೆಲದೇಶಗಳು ನಿಸರ್ಗ ಸಂಪತ್ತನ್ನು ದುರುಪಯೋಗಪಡಿಸಿಕೊಂಡರೆ, ಕೆಲವು ದೇಶಗಳು ಸದುಪಯೋಗಪಡಿಸಿಕೊಂಡಿವೆ. ಒಂದು ದೇಶದ ಸರ್ವಾಂಗೀಣ ಪ್ರಗತಿಗೆ ಸಂಪನ್ಮೂಲಗಳೇ ಆಸ್ತಿ. ಅದರಂತೆ ಒಬ್ಬ ಸಾಧಕನಿಗೆ ವಿಚಾರಗಳೇ ನಿಜವಾದ ಆಸ್ತಿ. ವಿಚಾರಗಳಿಗಾಗಿ ಅವನು ಹಾತೊರೆಯುತ್ತಾನೆ. ಕೆಲವರು ವಿಚಾರವಾದಿಗಳ ವಿಚಾರಗಳನ್ನು ಕೇಳಲು ಇಷ್ಟಪಡುತ್ತಾರೆ. ಇನ್ನು ಕೆಲವರು ಪುಸ್ತಕಗಳಿಂದ ವಿಚಾರಗಳನ್ನು ಸಂಪಾದಿಸುತ್ತಾರೆ. ಮತ್ತೆ ಕೆಲವರು ಪರ್ಯಟನೆಯಿಂದ ಲೋಕಾನುಭವವನ್ನು ಸಂಪಾದಿಸುತ್ತಾರೆ. 12ನೆಯ ಶತಮಾನದ ಅಲ್ಲಮ, ಸುತ್ತಾಟದ ಮುಖಾಂತರ ಹಲವು ಒಳನೋಟಗಳನ್ನು ಪಡೆಯುತ್ತಾನೆ. ಅದರಂತೆ ಅಕ್ಕಮಹಾದೇವಿ ಸಕಲ ಸಾಮ್ರಾಜ್ಯವನ್ನು ತೊರೆದು ಶರಣ ಸಂಕುಲವನ್ನು ಸೇರಿ, ಅವರ ಅನುಭಾವದ ಫಲದಿಂದ ವಚನಕಾರ್ತಿ ಎನಿಸಿಕೊಳ್ಳುತ್ತಾಳೆ. ಮೋಳಿಗೆಯ ಮಾರಯ್ಯ ಮತ್ತು ಆತನ ಸತಿ ಮಹದೇವಿಯರು ತಮ್ಮ ಬದುಕನ್ನು ಉದಾತ್ತೀಕರಣಗೊಳಿಸಿಕೊಳ್ಳಲು ದೂರದ ದೇಶದಿಂದ ಕಲ್ಯಾಣಕ್ಕೆ ಬಂದು, ಕಟ್ಟಿಗೆ ಕಾಯಕದೊಂದಿಗೆ ದಾಸೋಹವನ್ನು ನೆರವೇರಿಸುತ್ತ ಆದರ್ಶರೆನಿಸಿಕೊಳ್ಳುತ್ತಾರೆ. ಇದೇ ಮಾದರಿಯನ್ನು ಆಧರಿಸಿದ ಮರುಳಶಂಕರದೇವ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿಶ್ವಪರ್ಯಟನೆಯನ್ನು ಪ್ರಾರಂಭಿಸಿಕೊಂಡು ಪರಿವರ್ತನೆ ತಂದವರು ಸ್ವಾಮಿವಿವೇಕಾನಂದರು. ಅಬ್ರಾಹಾಂ ಲಿಂಕನ್ 40 ಕಿ.ಮೀ.ವರೆಗೆ ನಡೆದುಕೊಂಡು ಹೋಗಿ ಬ್ಲ್ಯಾಕ್ ಸ್ಟೋನ್ ಬರೆದ ಪುಸ್ತಕವನ್ನು ಓದಿಬಂದರು. ಇದರಂತೆ ಸಂವಿಧಾನ ಶಿಲ್ಪಿಯಾದ ಅಂಬೇಡ್ಕರ್ ಜಗತ್ತಿನ ಅನೇಕ ಗ್ರಂಥಾಲಯಗಳನ್ನು ಸಂದರ್ಶಿಸಿದ್ದರು.
ಸಮಾಜ ಸುಧಾರಕರು, ವಿಜ್ಞಾನಿಗಳು, ರಾಜಕೀಯ ಮುತ್ಸದ್ದಿಗಳು, ಸಾಹಿತಿಗಳು ಮತ್ತು ತತ್ತ್ವಜ್ಞಾನಿಗಳು ಹಾಗೂ ಪ್ರತಿಯೊಂದು ಕ್ಷೇತ್ರದಲ್ಲಿ ಇದ್ದುಕೊಂಡು ಸಾಧನೆ ಮಾಡುವ ಪ್ರತಿಯೊಬ್ಬರು ವಿಚಾರಗಳಿಗಾಗಿ ಕಾತುರಪಟ್ಟಿದ್ದಾರೆ. ಕಷ್ಟಪಟ್ಟು ಅವುಗಳನ್ನು ಪಡೆದುಕೊಂಡು ಜಗತ್ತಿಗೆ ಬೇಕಾದ ಕೊಡುಗೆಯನ್ನು ನೀಡಿದ್ದಾರೆ. ಸುಜ್ಞಾನವು ಸಾಧಕರಿಗೆ ಆಸ್ತಿ. ಇನ್ನೊಂದು ವಿಧದಲ್ಲಿ ಬಗೆಬಗೆಯ ಸಾಧನೆಯನ್ನು ಮಾಡುವ, ಆವಿಷ್ಕಾರಗಳನ್ನು ತರುವ, ಸಮಾಜಮುಖಿ ಪ್ರಯೋಗಗಳಿಗೆ ಚಾಲನೆ ನೀಡುವ ಸಾಧಕರು ಒಂದು ದೇಶದ ಬೌದ್ಧಿಕವಾದ ಆಸ್ತಿ. ಯಾವ ದೇಶದಲ್ಲಿ ಪ್ರಯೋಗಶೀಲರು, ಸಂಶೋಧಕರು ಮತ್ತು ರಾಷ್ಟ್ರನಿರ್ಮಾಪಕರು ಇರುವುದಿಲ್ಲವೋ, ಆ ದೇಶವು ಸರ್ವವಿಧದಲ್ಲೂ ಹಿನ್ನಡೆ ಅನುಭವಿಸುತ್ತದೆ. ಯಾವ ದೇಶವು ವಿಭಿನ್ನವಾದ ಸಾಧಕರನ್ನು ಹೆಚ್ಚುಹೆಚ್ಚು ಒಳಗೊಳ್ಳುತ್ತದೋ ಆ ದೇಶವು ಎಲ್ಲ ವಿಧದಲ್ಲೂ ಪ್ರಗತಿಯ ಮುನ್ನೋಟವನ್ನು ಕಂಡುಕೊಳ್ಳುತ್ತದೆ.
ನಿಸರ್ಗದತ್ತವಾದ ಆಸ್ತಿಯು ಎಟುಕದಿರುವಾಗ, ಮಾನವ ತನ್ನ ಪ್ರಜ್ಞೆಯಿಂದ ವಿವಿಧ ಯೋಜನೆಗಳನ್ನು ರೂಪಿಸಿ ದೇಶವನ್ನು ಸಂಪದ್ಭರಿತವಾಗಿಸುತ್ತಾನೆ. ಇದಕ್ಕೊಂದು ಉದಾಹರಣೆಯೆಂದರೆ, ಸರ್ ಎಂ. ವಿಶ್ವೇಶ್ವರಯ್ಯ. ಅವರೊಬ್ಬ ತಾಂತ್ರಿಕ ಪರಿಣಿತರು. ಅವರ ಪ್ರಜ್ಞೆಯು ಜೋಗದ ಜಲಪಾತ ಮತ್ತು ಕನ್ನಂಬಾಡಿಕಟ್ಟೆ ಮತ್ತಿತರ ಯೋಜನೆಗಳನ್ನು ಸೃಷ್ಟಿಸಿತು. ಪರಿಣತರು ಆಯಾದೇಶದ ಬೌದ್ಧಿಕ ಆಸ್ತಿ. ಪರಿಣತರು ದೇಶದ ಸಂಪನ್ಮೂಲವನ್ನು ಅಧಿಕಗೊಳಿಸುವ ಕಾರ್ಯವನ್ನು ಮಾಡುತ್ತಾರೆ. ಪರಿಣತರು ಪರಮಸಾಧಕರು. ಅವರನ್ನು ಹೊಂದಿರದ ದೇಶವು ದುರ್ಬಲ, ಅವರನ್ನು ಹೊಂದಿರುವ ದೇಶವು ಪ್ರಬಲ. ಸಂಪನ್ಮೂಲಗಳ ಮುಖಾಂತರ ದೇಶವನ್ನು ಬಲಿಷ್ಠಗೊಳಿಸುವವರು ಮಾತ್ರ ಸಾಧಕರಲ್ಲ ಸಾಮಾಜಿಕ ಅನಿಷ್ಟಗಳ ವಿರುದ್ಧವಾಗಿ ಹೋರಾಡುತ್ತ ಅರಿವನ್ನು ಮೂಡಿಸುವ ಸಾಧಕರು ಕೂಡಾ ದೇಶದ ಅದ್ಭುತ ಆಸ್ತಿ. ಅದರಂತೆ ಸಾಮಾಜಿಕ ಅಸಮಾನತೆ, ಗುಲಾಮಗಿರಿ, ಲಿಂಗತಾರತಮ್ಯ, ಮೌಢ್ಯತೆ, ಸಾಮಾಜಿಕ ಅನ್ಯಾಯ, ದೌರ್ಜನ್ಯ, ರಕ್ತಪಾತ, ಭಯೋತ್ಪಾದನೆ, ಧಾರ್ಮಿಕ ಮೂಲಭೂತವಾದ ಮೊದಲಾದವುಗಳ ವಿರುದ್ಧವಾಗಿ ಆಂದೋಲನ ನಡೆಸುವವರು ದೇಶದ ಆಸ್ತಿ ಆಗುತ್ತಾರೆ. ಉದ್ಯೋಗ ಸೃಷ್ಟಿ ಮಾಡುವವರು, ಹೊಲ-ಗದ್ದೆಗಳಲ್ಲಿ ದುಡಿಯುವ ಕೃಷಿಕ ವರ್ಗ, ಕಾರ್ಖಾನೆಗಳಲ್ಲಿ ಶ್ರಮಿಸುವ ಕಾರ್ಮಿಕರು, ಒಂದಿಲ್ಲೊಂದು ಶ್ರಮದಿಂದ ಬದುಕುವ ಪ್ರತಿಯೊಬ್ಬರೂ ದೇಶದ ಆಸ್ತಿ. ದೇಶಕಾಯುವ ಸೈನಿಕರು, ಪಾಠಮಾಡುವ ಶಿಕ್ಷಕರು, ಸಂಘ-ಸಂಸ್ಥೆಯನ್ನು ಕಟ್ಟುವವರು ಕೂಡಾ ಬಲಿಷ್ಠ ರಾಷ್ಟ್ರಕ್ಕೆ ಆಸ್ತಿ.
ಓದುವುದಕ್ಕಾಗಿ ಓದುವವರೆ ಬಹಳ. ಅಂತೆಯೇ ಪದವಿಗಾಗಿ ಪದವಿ ಅಲ್ಲ. ಓದುವುದು ಪದವಿಗಾಗಿ ಅನ್ನುವ ಭಾವನೆ ಅನೇಕ ಓದುಗರಲ್ಲಿ. ಜೀವನಕ್ಕಾಗಿ ಜೀವನ ಅನ್ನುವಂತಹ ನಿರಾಶಾವಾದ. ಓದುತ್ತಲೇ ಸಾಧನೆಯನ್ನು ಮಾಡಿ ಶೌರ್ಯಪ್ರಶಸ್ತಿಯನ್ನು ಪಡೆಯುತ್ತಿರುವ ಮಕ್ಕಳೇ ಇದಕ್ಕೆ ಸಾಕ್ಷಿ. ಅವಕಾಶಗಳಿಗಾಗಿ ಕಾಯ್ದು ಕುಳಿತುಕೊಳ್ಳದೆ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡರೆ ಅದೊಂದು ಮಹತ್ತರವಾದ ಸಾಧನೆ. ಓದುತ್ತಲೇ ಸಾಧನೆಯನ್ನು ಮಾಡುವುದು. ಜೀವನಕ್ಕಾಗಿ ಸಾಧನೆ ಅಲ್ಲ ಸಾಧನೆಗಾಗಿ ಜೀವನ. ಇಡೀ ಬದುಕನ್ನು ಒಂದು ಸವಾಲು ಎಂದು ಸ್ವೀಕರಿಸಿದರೆ, ಅದು ಸಾಧನೆಯತ್ತ ದಾರಿ ತೋರಿಸುತ್ತದೆ. ಹಲವಾರು ಜನರು ಅನ್ಯರ ಹಣವನ್ನು ಅವಲಂಬಿಸಿದ್ದಾರೆ. ಇನ್ನು ಕೆಲವರು ಅಧಿಕಾರವನ್ನು ನಂಬಿಕೊಂಡು ಕುಳಿತಿದ್ದಾರೆ. ಮತ್ತೆ ಕೆಲವರು ಜನ್ಮಭವಿಷ್ಯವನ್ನು ನೆಚ್ಚಿಕೊಂಡು ಅಮೂಲ್ಯವಾದ ಸಮಯವನ್ನು ಕಳೆದುಕೊಳ್ಳುತ್ತಾರೆ. ಯಾವ ಹಂತದಲ್ಲೂ ಪರಾವಲಂಬನೆ ಸೂಕ್ತವಲ್ಲ. ಸ್ವತಃ ಚಿಂತನೆ ಮಾಡುತ್ತ, ಸ್ವಾವಲಂಬನೆಯ ಬದುಕನ್ನು ನಡೆಸುವ ಅನಿವಾರ್ಯತೆ ಇದೆ. ತಮ್ಮ ಯೋಜನೆಯನ್ನು ಸಾಕಾರಗೊಳಿಸಲು ಯತ್ನಿಸಬೇಕಾಗುತ್ತದೆ. ತಮ್ಮ ಶಕ್ತಿ ಮತ್ತು ಯುಕ್ತಿಯನ್ನು ಬಳಸಿಕೊಂಡು ಯಾವುದಾದರೊಂದು ಸಾಧನೆಯನ್ನು ಮಾಡಿ ತೋರಿಸಬೇಕಾಗಿದೆ. ಸಾಧನೆಯ ನಂತರ ಬದುಕು ಸುಖಮಯ. ಕೀರ್ತಿಯನ್ನು ತಂದುಕೊಡುವ ಬದುಕು. ಯುವಕ-ಯುವತಿಯರೇ, ಈಗಾಗಲೇ ತಡವಾಗಿದೆ ತ್ವರೆ ಮಾಡಿ. ಸಾಹಸದ ಕಡೆಗೆ ಮುಖಮಾಡಿ. ಮುನ್ನುಗ್ಗಿ. ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ.
- ಡಾ. ಶಿವಮೂರ್ತಿ ಮುರುಘಾ ಶರಣರು
basavakendra@gmail.com