ಜವಾನರ ಆಕ್ರೋಶ ಇಂದಿನದಲ್ಲ
ಅವು ಎನ್ಸಿಸಿ ದಿನಗಳು. ನಮಗೆ ತರಬೇತಿ ನೀಡಲು ಬರುತ್ತಿದ್ದ ಸೈನಿಕರಲ್ಲಿ ಸೈನ್ಯದ ಬಗ್ಗೆ ಕೇಳುವುದೆಂದರೆ ಎಲ್ಲಿಲ್ಲದ ಕುತೂಹಲ. ಅವರೂ ಅಷ್ಟೇ. ಎಲ್ಲವನ್ನೂ ಅಸಕ್ತಿಯಿಂದ ವಿವರಿಸುತ್ತಿದ್ದರು. ಒಂದು ಬಾರಿ ಎಲ್ಒಸಿ ಬಗ್ಗೆ ಪ್ರಶ್ನೆ ಎದ್ದಾಗ ಭಾರತ ಯಾಕೆ ಇಂತೆಲ್ಲಾ ಸಮಸ್ಯೆಗಳು ಎಂದು ಒಬ್ಬ ಮೇಜರ್ ಅನ್ನು ಪ್ರಶ್ನಿಸಿದ್ದೆವು. ಪುಸ್ತಕದಲ್ಲಿ ಓದುವುದಕ್ಕೂ ಅನುಭವೀ ಸೈನಿಕನ ಬಾಯಿಂದ ಕೇಳುವುದಕ್ಕೆ ಯಾವತ್ತೂ ವ್ಯತ್ಯಾಸ ಇದ್ದೇ ಇರುತ್ತದಲ್ಲ. ನಮ್ಮ ದೇಶದ ಜವಾನನಲ್ಲಿ ಹೃದಯದಲ್ಲಿ ಇಷ್ಟೊಂದು ಆಕ್ರೋಶ, ಸಿಟ್ಟು, ನೋವು, ನಿರಾಸೆ, ತುಂಬಿರುತ್ತದೆಂದು ಅಂದೇ ನಮಗೆ ತಿಳಿದದ್ದು. ಆ ಸೈನಿಕ ಅಂದು ಹೇಳಿದ್ದು ಇಂದೂ ಕಿವಿಯಲ್ಲಿ ಗುನುಗುನಿಸುತ್ತಿದೆ. 'ಯೇ ನೌಟಂಕಿ ಪೊಲಿಟೀಶಿಯನ್ಸ್ ಹಮಾರೇ ಹಾಥ್ ಬಾಂದ್ಕರಕೇ ರಕೇ ಹೈ, ನಹೀ ತೋ ವೋ ಪಾಕಿಸ್ತಾನ್, ಚೈನಾವಾಲೊಂಕೆ ಟುಕಡೇ ಟುಕಡೇ ಕರ್ ದೇಂಗೇ ಹಮ್. ಇತನಾ ಬಡಾ ಆರ್ಮಿ ಹೇ, ಸಬ್ ಹತ್ಯಾರ್ ಹೇ, ಹಮ್ಬಿ ತಯ್ಯಾರ್ ಹೇ, ಏಕ್ಬಾರ್ಉದ್ಘೋಷಣಾ ಕರಕೇ ದೇಖೋ... ಹಮ್ ಸಬ್ ತಯ್ಯಾರ್ ಹೈ' ಒಬ್ಬ ಸೈನಿಕನ ಮನಸ್ಸಲ್ಲಿ ಭಾರತವನ್ನಾಳಿದ, ಆಳುತ್ತಿರುವ ಸರ್ಕಾರಗಳ ಬಗ್ಗೆ ಇಷ್ಟೊಂದು ಆಕ್ರೋಶ ಮಡುಗಟ್ಟಿ ನಿಂತಿರುತ್ತದೆ ಎಂದು ಅಂದಿನವರೆಗೆ ನನಗೆ ತಿಳಿದಿರಲಿಲ್ಲ. ಇದಾದ ಬಳಿಕ ಅನೇಕ ಸೈನಿಕರಲ್ಲಿ ನಾವು ಇದೇ ಪ್ರಶ್ನೆಯನ್ನು ಕೇಳಿದ್ದೆವು. ಅವರೆಲ್ಲರಿಂದಲೂ ಹೆಚ್ಚೂಕಡಿಮೆ ಇದೇ ಪ್ರತಿಕ್ರಿಯೆ ಬಂದಿತ್ತು.
***
ಮಂಗಳೂರಿನ ಖಾಸಗಿ ಕಾಲೇಜೊಂದರ ಸಮಾರಂಭವೊಂದರಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಯೇರಿ ಕಳೆದ ವರ್ಷವಷ್ಟೇ ನಿವೃತ್ತರಾಗಿರುವ ಸೇನಾ ಅಧಿಕಾರಿಯೊಬ್ಬರ ಭಾಷಣ ಕೇಳುತ್ತಿದ್ದೆ. ಭಾರತದ ಗಡಿ ಸಮಸ್ಯೆಯನ್ನು ವಿವರಿಸುತ್ತಾ, ನೆಹರುವಿನಿಂದ ಹಿಡಿದು ಇಂದಿನ ಭಾರತವನ್ನಾಳಿದ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು. ಪಾಕಿಸ್ತಾನ ವಿರುದ್ಧ ಯುದ್ಧ ಗೆಲ್ಲುವ ಪರಿಸ್ಥಿತಿ ಇದ್ದಾಗಲೂ ವಿಶ್ವಸಂಸ್ಥೆಯ ಮೊರೆ ಹೋದ, ಚೀನಾ ವಿರುದ್ಧ ಯುದ್ಧ ಏರ್ಪಟ್ಟಾಗಲೂ ಹಿಂದೀ ಚೀನಿ ಬಾಯಿ ಬಾಯಿ ಸಿದ್ಧಾಂತ ಜಪಿಸಿದ ಭಾರತದ ಪ್ರಥಮ ಪ್ರಧಾನಿಯ ಮೂರ್ಖತನವನ್ನೂ ವಾಚಾಮಗೋಚರವಾಗಿ ಖಂಡಿಸಿದರು. ಇಂತಹಾ ತಪ್ಪು ಮತ್ತೆ ಮತ್ತೆ ನಡೆಯಲು ಅವಕಾಶ ಕೊಡದೆ ಎಲ್ಲಾ ಯುವಕರು ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸಿ ಅವಶ್ಯವಾಗಿ ಮತ ಚಲಾಯಿಸಬೇಕೆಂದು ವಿನಂತಿಸಿದರು. ಅವರು ಯಾವ ಪಕ್ಷವನ್ನು ಹೆಸರಿಸದೇ ಇದ್ದರೂ ಅವರ ಬೊಟ್ಟು ಮಾಡಿದ್ದು ಅರ್ಧ ಶತಮಾನಕ್ಕೂ ಮಿಕ್ಕಿ ದೇಶವಾಳಿದ ಕಾಂಗ್ರೆಸ್ ಅನ್ನು ಎಂಬುದು ಸ್ಪಷ್ಟ.
***
ಈ ಎರಡು ಉದಾಹರಣೆಯನ್ನು ಯಾಕೆ ನೀಡಬೇಕಾಯಿತು ಎಂದರೆ, ಇತ್ತೀಚೆಗಷ್ಟೇ ಭೂಸೇನೆಯ ನಿವೃತ್ತ ಜನರಲ್ ವಿ. ಕೆ. ಸಿಂಗ್ ಮತ್ತವರ 24 ಅಧಿಕಾರಿಗಳ ಗುಂಪು ಬಿಜೆಪಿ ಸೇರಿತು.
ಅಧಿಕಾರದಲ್ಲಿರುವಾಗಲೇ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಭಾರತದ ಮೊದಲ ಭೂಸೇನಾ ಮುಖ್ಯಸ್ಥ ವಿಜಯ್ ಕುಮಾರ್ ಸಿಂಗ್ ಯುಪಿಎ ಸರ್ಕಾರಕ್ಕೆ ತಿರುಗಿಬಿದ್ದಿದ್ದರು. ಸೈನ್ಯದ ಬಗೆಗಿನ ಸರ್ಕಾರದ ನಿರ್ಲಕ್ಷ್ಯಕ್ಕೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಅವರು ಬಿಜೆಪಿ ಸೇರಿದಾಕ್ಷಣ ಹೇಳಿದ ಮಾತುಗಳಿವು.....
'ರಾಷ್ಟ್ರೀಯವಾದಿ ವಿಚಾರಧಾರೆ ಹಾಗೂ ದೇಶದ ಹಿತಾಸಕ್ತಿ ಹೊಂದಿರುವ ಪಕ್ಷವೊಂದಿದ್ದರೆ ಅದು ಬಿಜೆಪಿ ಮಾತ್ರ, ಹೀಗಾಗಿ ರಾಷ್ಟ್ರನಿರ್ಮಾಣ, ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆ, ಸ್ಥಿರ, ಬಲಿಷ್ಠ ಸರ್ಕಾರ ಸ್ಥಾಪನೆಯ ಉದ್ದೇಶದಿಂದ ನಾವು ಇಷ್ಟೂ ಮಂದಿ ಸೈನಿಕರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೇವೆ. ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿ ನಮ್ಮ ನೆಲ ಪ್ರವೇಶಿಸಿ ನಮ್ಮ ಸೈನಿಕರ ತಲೆ ಕತ್ತರಿಸುತ್ತಿದ್ದಾರೆ. ಇಲ್ಲಿ ನಮ್ಮ ಸೈನಿಕರ ಕೈಗಳನ್ನು ಕಟ್ಟಿಹಾಕಲಾಗಿದೆ. ಚೀನಾವೂ ಕದನವಿರಾಮ ಉಲ್ಲಂಘಿಸಿ ಭಾರತದ ವಿರುದ್ಧ ಹೊಂಚುಹಾಕುತ್ತಾ ಕುಳಿತಿದೆ. ನಮ್ಮ ಪ್ರಧಾನಿ ಬೀಜಿಂಗ್ಗೆ ಹೋಗಿ ಒಪ್ಪಂದಕ್ಕೆ ಸಹಿ ಹಾಕಿ ಬರುತ್ತಾರೆ. ಅಪಾಯದಲ್ಲಿರುವ ಈ ದೇಶಕ್ಕೆ ಉಕ್ಕಿನ ಮನುಷ್ಯ ಮೋದಿಯಂತಹ ನಾಯಕತ್ವದ ಅವಶ್ಯಕತೆ ಇದೆ' ಎಂದು.
ಸ್ವಾತಂತ್ರ್ಯ ಬಂದಂದಿನಿಂದ ಇಂದಿನವರೆಗೂ ನಮ್ಮ ವೀರ ಸೈನಿಕರು ಗೆದ್ದಿರುವುದನ್ನು ಹೇಡಿ, ಅವಕಾಶವಾದಿ ರಾಜಕಾರಣಿಗಳು ಬಿಟ್ಟುಕೊಟ್ಟಿದ್ದಾರೆ. ಕಡೇ ಪಕ್ಷ ಕಾರ್ಗಿಲ್ ಸಂಭ್ರಮವನ್ನು ಆಚರಿಸುವಂತಹಾ ಮನಸ್ಥಿತಿ ಕಾಂಗ್ರೆಸ್ ಮನಸ್ಸಿಗೆ ಇದ್ದಿದ್ದರೆ ಸೈನಿಕರ ಮನಸ್ಸಿಗೆ ಸಮಾಧಾನವಾಗುತ್ತಿತ್ತೋ ಏನೋ? ಪೊಳ್ಳು ಜಾತ್ಯತೀತವಾದಿ, ಅವಕಾಶವಾದಿ ರಾಜಕಾರಣವನ್ನು ನೋಡಿ ನೋಡಿ ಸುಸ್ತಾದ ಸೈನಿಕರು ಬಿಜೆಪಿಯನ್ನು ಅಪ್ಪಿಕೊಂಡಿರುವುದು ಅದರ ಮೇಲಿನ ಪ್ರೀತಿಗಿಂತಲೂ ಕಾಂಗ್ರೆಸ್ ಮೇಲಿನ ಸಿಟ್ಟಿಗೆ ಎಂಬುದು ವಾಸ್ತವ.
ಕಾಂಗ್ರೆಸ್ ಸೇರಿದಂತೆ ಓಲೈಕೆ ರಾಜಕಾರಣದಲ್ಲಿ ತೊಡಗಿರುವ ಅನೇಕ ರಾಜಕಾರಣದಲ್ಲಿ ತೊಡಗಿರುವ ಅನೇಕ ಪಕ್ಷದ ನಾಯಕರು ಈ ಬೆಳವಣಿಗೆಯ ವಿರುದ್ಧ ಹೇಳಿಕೆಗಳನ್ನು ನೀಡಲು ತೊರೆದಿದ್ದಾರೆ. ನಿವೃತ್ತ ಸೈನಿಕರು ಮತ್ತು ಅಧಿಕಾರಿಗಳು ರಾಜಕೀಯಕ್ಕೆ ಸೇರುವುದರ ಬಗ್ಗೆ ಕಾನೂನನ್ನು ತರಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಿಜೆಪಿಗೆ ಹಲವು ಮಾಜಿ ಸೈನಿಕರು ಸೇರಿದ್ದಾರೆ ಎಂಬ ಕಾರಣಕ್ಕೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಉಳಿದ ಪಕ್ಷಗಳೂ ಮಾಜಿ ಸೈನಿಕರನ್ನು ಕರೆತರುವ ಕಾಯಕಕ್ಕೆ ಕೈ ಹಾಕಬಹುದು. ಇಲ್ಲಾ ಬಹಳಷ್ಟು ನಾಟಕಗಳನ್ನು ಆಡಬಹುದು. ಏನೇ ಆದರೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಈ ವಿಷಯದಲ್ಲಿ ಮುಖಭಂಗ ಆಗಿರುವುದಂತೂ ದಿಟ.
- ಗಣೇಶಪ್ರಸಾದ್ ಕುಂಬ್ಳೆ, ಕನ್ನಡಪ್ರಭ
gprasad8@gmail.com