ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭವಿಷ್ಯದ ಪ್ರಧಾನಿಯ ಬೀಳಿಸಲು ಕಾಂಗ್ರೆಸ್‌ನ ಕುಟಿಲ ತಂತ್ರ

Vishwanath S
Updated On : 6 Mar 2014, 12:17 pm

ಕುಸಿಯುತ್ತಿರುವ ಭಾರತದಲ್ಲಿ, ಬೆಳೆಯುತ್ತಲೇ ಇರುವ ಕೆಲವೇ ಕೆಲವು ವಲಯಗಳಲ್ಲಿ ಅಭಿಪ್ರಾಯ ಸಂಗ್ರಹ ಉದ್ಯಮವೂ ಒಂದು. ಟಿ.ವಿ. ವಾಹಿನಿಯೊಂದು ಕುಟುಕು ಕಾರ್ಯಾಚರಣೆಯ ಮೂಲಕ ಇಂಥ ಅಭಿಪ್ರಾಯ ಸಂಗ್ರಹ ಸಂಸ್ಥೆಯಲ್ಲಿನ ಕೆಲವು ಅಪಾಯಕಾರಿ ಅಟಗಾರರ ಬಂಡವಾಳವನ್ನು ಬಯಲುಮಾಡಿದೆ ಎಂದು ಹೇಳಲಾಗುತ್ತಿದೆ. ಈ ರೀತಿಯ "ಅನಾವರಣ"ಗಳು ನಡೆಯಲೇಬೇಕು, ಏಕೆಂದರೆ ಇದರಿಂದಾಗಿ ಸಮೀಕ್ಷೆಯೆಂಬ 'ಡಿಸೈನ್‌' ಮತ್ತು ನಿಜವಾದ ಚುನಾವಣೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಂಥ ಬದಲಾವಣೆಗಳಾಗುವ ಸಾಧ್ಯತೆ ಇರುತ್ತದೆ.
ನನಗೆ ಗೊತ್ತಿರುವಂತೆ, 'ದೆಹಲಿ ಸ್ಥಾಪನೆಯ' ಅಂದಾಜು ಇದುವರೆಗೂ ಹುಸಿಯಾಗಿರುವುದು ಕೇವಲ ಎರಡೇ ಬಾರಿ. 1977ರಲ್ಲಿ ಮತ್ತು 2004ರಲ್ಲಿ. 1977ರ ಚುನಾವಣೆಯಲ್ಲಿ ಇಂದಿರಾ ಸೋಲುತ್ತಾರೆ ಎನ್ನುವುದನ್ನು ನಂಬಲು ಯಾರೂ ಸಿದ್ಧರಿರಲಿಲ್ಲ. ಆದರೆ ಫಲಿತಾಂಶ ತದ್ವಿರುದ್ಧವಾಗಿತ್ತು. ಇನ್ನು 2004ರಲ್ಲಿ, ಗೆದ್ದೇ ತೀರುತ್ತೇವೆಂದು ಸ್ವಸಂತುಷ್ಟ ಮತ್ತು ಅತಿ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ದಕ್ಷಿಣ ಭಾರತದಲ್ಲಿನ ತನ್ನ ದೋಷಯುಕ್ತ ಮೈತ್ರಿಗಳಿಂದ ಹೊಡೆತ ತಿಂದಿತು.
ಲೋಕಸಭಾ ಚುನಾವಣೆಗಳಿಗೆ ಇನ್ನು ಕೆಲವೇ ತಿಂಗಳು ಉಳಿದಿರುವಂತೆಯೇ, ನರೇಂದ್ರ ಮೋದಿಯವರೇ ಮುಂದಿನ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ನಂಬಿಕೆ ಆಡಳಿತ ವರ್ಗದಲ್ಲಿ ಅದಾಗಲೇ ಮನೆಮಾಡಿದೆ. ಕೆಲವು ತಿಂಗಳ ಹಿಂದೆ ಈ ಬಗ್ಗೆ ಅನುಮಾನಗಳಿದ್ದವಾದರೂ, ಈಗಂತೂ ಚರ್ಚೆಯೆಲ್ಲವೂ ಮೋದಿಯವರ ಕ್ಯಾಬಿನೆಟ್ ರಚನೆ ಹೇಗಿರಲಿದೆ ಎನ್ನುವುದರತ್ತ ವಾಲಿದೆ. ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಅನ್ನು ಅದಾಗಲೇ ಅನೌಪಚಾರಿಕವಾಗಿ ವಿರೋಧ ಪಕ್ಷದ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ! ಕಾಂಗ್ರೆಸ್ ಬೆಂಬಲಿಗರೂ ಇದನ್ನು ಒಪ್ಪಿಕೊಳ್ಳತೊಡಗಿದ್ದಾರೆ. ವಾರದ ಹಿಂದೆ ಕಾಂಗ್ರೆಸ್ ಬೆಂಬಲಿಗರಾದ ಮಾಜಿ ಸಂಪಾದಕರೊಬ್ಬರು ನನ್ನೊಂದಿಗೆ ಮಾತನಾಡುತ್ತಾ- "ಕಡೇಪಕ್ಷ ತನ್ನ ಸೋಲು ಗೌರವಪೂರ್ಣವಾಗಿ ಇರಲಿ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ" ಎಂದು ಒಪ್ಪಿಕೊಳ್ಳುತ್ತಾರೆ.
ಅದಾಗ್ಯೂ, ಇನ್ನೂ ಕೆಲವರು ಹುಲ್ಲುಕಡ್ಡಿಯನ್ನು ಹಿಡಿಯುವ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. "ಆಮ್ ಆದ್ಮಿ ಪಕ್ಷ" ಎಲ್ಲರನ್ನೂ ದಂಗುಬಡಿಸಿ ಪುಟಿದೆದ್ದು ನಿಂತು ಮೋದಿ ದೆಹಲಿಗೆ ಬರದಂತೆ ಮಾಡಲಿದೆ ಎಂದು ಭಾವಿಸುವ ವಲಯವೂ ಇದೆ. ಇನ್ನು, ಬಿಜೆಪಿ ಮೇ ತಿಂಗಳಲ್ಲಿ ಪ್ರಾದೇಶಿಕ ಪಕ್ಷಗಳ ತಾಳಕ್ಕೆ ಹೆಜ್ಜೆ ಹಾಕಿ ಮೋದಿ ಜಾಗದಲ್ಲಿ ತುಸು "ವಿಧೇಯ" ವ್ಯಕ್ತಿಯನ್ನು ತಂದು ಕೂರಿಸಲಿದೆ ಎನ್ನುವವರೂ ಇದ್ದಾರೆ.   
ಮತ ಎಣಿಕೆ ಮುಗಿಯುವವರೆಗೂ ಯಾರೂ ಗೆಲ್ಲುವುದಿಲ್ಲ ಎಂದು ನಂಬುವವರಲ್ಲಿ ನಾನೂ ಒಬ್ಬ. ಮೋದಿಗೆ ಆರಂಭಿಕ ಅನುಕೂಲವೇನೋ ಸಿಗಬಹುದು, ಆದರೆ ಅಭ್ಯರ್ಥಿಗಳ ಹೆಸರನ್ನು ಘೋಷಿಸುವವರೆಗೂ, ಚುನಾವಣಾ ಪ್ರಚಾರ ಕೊನೆಯ ಹಂತವನ್ನು ಮುಟ್ಟುವವರೆಗೂ "ಇದು ಹೀಗೇ ಆಗಲಿದೆ" ಎಂದು ಸ್ಪಷ್ಟವಾಗಿ ಹೇಳುವುದಕ್ಕಂತೂ ಸಾಧ್ಯವಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಕೊನೆಯ ದಿನದವರೆಗೂ ಪ್ರಬಲ ಪೈಪೋಟಿ ನೀಡುವ ಶಕ್ತಿಯಂತೂ ಕಾಂಗ್ರೆಸ್‌ಗೆ ಇದೆ ಎನ್ನುವುದರಲ್ಲಿ ಸಂಶಯವಿಲ್ಲ. ಬಿಜೆಪಿಗೆ ಹೋಲಿಸಿದರೆ ಕಠೋರ ರಾಜಕೀಯ ನಡೆಸುವಲ್ಲಿ ಕಾಂಗ್ರೆಸ್ ಎಷ್ಟೋ ಮುಂದಕ್ಕಿದೆ ಎನ್ನುವುದು ನಮಗೆ ಗೊತ್ತಿದೆ(ತೆಲಂಗಾಣ ಮಸೂದೆಯ ವಿಷಯದಲ್ಲಿ ಇದನ್ನು ನೋಡಿದ್ದೇವೆ).
ಕೆಲವು ವಾರಗಳಿಂದ ಕಾಂಗ್ರೆಸ್ ಅನಿರೀಕ್ಷಿತ ಬದಲಾವಣೆಗಳನ್ನು ಮಾಡುವುದರಲ್ಲಿ ನಿರತವಾಗಿದೆ. ಅದರ ಮೊದಲ ಆದ್ಯತೆಯೇನಿದ್ದರೂ ಹೇಗಾದರೂ ಮಾಡಿ ಮೋದಿಯವರನ್ನು ತಡೆಯುವುದು. ಅದಾಗ್ಯೂ, ರಾಮ್‌ವಿಲಾಸ್ ಪಾಸ್ವಾನ್ ಯು-ಟರ್ನ್ ಹೊಡೆದು ಎನ್‌ಡಿಎ ಸೇರಿಕೊಂಡಿರುವುದರಿಂದ, ತನ್ನ ಮುಂದಿನ ಹಾದಿ ಅಷ್ಟು ಸುಲಭವಾಗಿಲ್ಲ ಎನ್ನುವುದು ಕಾಂಗ್ರೆಸ್‌ಗೂ ಅರಿವಾಗಿದೆ. ಅಷ್ಟೇ ಅಲ್ಲ, ಆ ಹಾದಿ ಅತ್ಯಂತ ಕಠೋರವಾಗಿರಲಿದೆ ಎನ್ನುವ ಪಿಸುಗುಟ್ಟುವಿಕೆಯೂ ಕಾಂಗ್ರೆಸ್ ಪಾಳಯದಲ್ಲಿ ಹರಿದಾಡತೊಡಗಿದೆ.
ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಎರಡನೇ ಆಯ್ಕೆಯತ್ತ ಹೊರಳಿರುವುದು: ಅದೆಂದರೆ, ಹೇಗಾದರೂ ಮಾಡಿ ಮೋದಿ ನೇತೃತ್ವದ ಹೊಸ ಸರ್ಕಾರಕ್ಕೆ(ಅದು ಬಂದರೆ) ಸಾಧ್ಯವಾದಷ್ಟು ತೊಂದರೆಗಳನ್ನು ತಂದೊಡ್ಡುವುದು. ಆರೋಗ್ಯ ಇಲಾಖೆಯ ಕಾರ್ಯದಶಿಯೊಬ್ಬರನ್ನು ವರ್ಗಾವಣೆ ಮಾಡಿದ್ದು, ಪ್ರಮುಖ ಸಾರ್ವಜನಿಕ ವಲಯದ ಮುಖ್ಯಸ್ಥರೊಬ್ಬರಿಗೆ ವಿಸ್ತರಣೆ ನೀಡಿದ್ದು, ಅಲ್ಲದೆ ಕೊನೆಯ ಕ್ಷಣದಲ್ಲಿ ರಾಜ್ಯ ಸಭೆಗೆ ಎಂಪಿಯೊಬ್ಬರ ನಾಮನಿರ್ದೇಶನ ಮಾಡಿದ್ದೆಲ್ಲವೂ ಈ ಕಾರಣಕ್ಕಾಗಿಯೇ ಹುಬ್ಬೇರಿಸುವಂತೆ ಮಾಡಿವೆ. ಹೆಚ್ಚು ಸುದ್ದಿಯಾಗದ ವಿಷಯವೆಂದರೆ ಪ್ರಮುಖ ಸಮಿತಿಗಳು, ಅಧಿಕಾರ ವರ್ಗದ ಪ್ರತಿಯೊಂದು ಮುಖ್ಯ ಸ್ಥಾನಗಳು ಮತ್ತು ಆಯಕಟ್ಟಿನ ಜಾಗಗಳೆಲ್ಲದರಲ್ಲಿಯೂ ತಮಗೆ ಬೇಕಾದ ವ್ಯಕ್ತಿಗಳನ್ನು ಕಾಂಗ್ರೆಸ್ ಕೂರಿಸುತ್ತಿರುವುದು. ಹಾಗಂತ ಆ ವ್ಯಕ್ತಿಗಳು ಕಾಂಗ್ರೆಸ್ ಬೆಂಬಲಿಗರಾಗಿರಬೇಕೆಂದೇನೂ ಇಲ್ಲ. ನರೇಂದ್ರ ಮೋದಿ ವಿರೋಧಿಗಳಾಗಿದ್ದರೆ ಸಾಕು! ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ, 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ನಂತರ ಆಗಬೇಕಿರುವ ನೇಮಕಾತಿಗಳೆಲ್ಲವನ್ನೂ ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದಕ್ಕಿಂತ ಮುಂಚೆಯೇ ಅವಸರವಸರವಾಗಿ ಮಾಡುವ ಕೆಲಸಕ್ಕೆ ಕೈ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ತನ್ನ ಈ ಕೊನೆಯ ನಿಮಿಷದ ನಿರ್ಧಾರಗಳನ್ನು ಹೊಸ ಸರ್ಕಾರ ಸುಲಭವಾಗಿ ಬದಲಿಸಿಬಿಡಬಹುದು ಎನ್ನುವುದು ದೀರ್ಘಕಾಲಿಕ ಆಡಳಿತಾನುಭವವಿರುವ ಕಾಂಗ್ರೆಸ್‌ಗೆ ಗೊತ್ತಿಲ್ಲವೆಂದೇನೂ ಅಲ್ಲ. ಆದರೆ, ಆ ಬದಲಾವಣೆಗಳನ್ನು ಮಾಡಲು ಹೊಸ ಸರ್ಕಾರಕ್ಕೆ ತಿಂಗಳುಗಳೇ(ಕೆಲವೊಮ್ಮೆ ವರ್ಷಗಳೇ) ಹಿಡಿಯಲಿವೆ ಎನ್ನುವುದೂ ಅದಕ್ಕೆ ಚೆನ್ನಾಗಿ ಗೊತ್ತು. ಈ ಕಾರಣಕ್ಕಾಗಿ, ಮುಂದಿನ ದಿನಗಳಲ್ಲಿ ಅನಿರೀಕ್ಷಿತ ಜಾಗಗಳಲ್ಲಿ ಗದ್ದಲವೆಬ್ಬಿಸಿ, ಸರ್ಕಾರದ ಹೆಸರು ಕೆಡಿಸುವ ಅವಕಾಶಗಳೂ ದಂಡಿಯಾಗಿರುತ್ತವೆ.
ಹೇಗೆ ಅಧಿಕಾರ ವರ್ಗದ ಕುತಂತ್ರದಿಂದಾಗಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ 1998ರ ಸರ್ಕಾರ ತನ್ನ ಮೊದಲ ದಿನಗಳಲ್ಲಿ ಮುಗ್ಗರಿಸುತ್ತಾ ಸಾಗಿತ್ತು ಎನ್ನುವುದು ಎಲ್ಲರಿಗೂ ನೆನಪಿದೆ. ಉದಾಹರಣೆಗೆ, 1998ರಲ್ಲಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲನುಭವಿಸುವುದಕ್ಕೆ ಕಾರಣ ಈರುಳ್ಳಿ ಬಿಕ್ಕಟ್ಟು. ಆದರೆ ಆ ಬಿಕ್ಕಟ್ಟು ಉದ್ಭವವಾಗಿದ್ದು ಎನ್‌ಎಎಫ್‌ಇಡಿ ಎಂಬ ಈ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ವ್ಯಕ್ತಿಯಿಂದ ಎಂದು ಬಹುತೇಕರಿಗೆ ಗೊತ್ತಿಲ್ಲ. ಈ ವ್ಯಕ್ತಿಯನ್ನು ನೇಮಿಸಿದ್ದು ಕಾಂಗ್ರೆಸ್. ಅದರಂತೆಯೇ, ಪೋಖ್ರಾನ್-2 ಪರೀಕ್ಷೆಯ ನಂತರ ವಾಜಪೇಯಿ ಸರ್ಕಾರದ ವಿರುದ್ಧ ಉದ್ಭವವಾದ ರಾಜತಾಂತ್ರಿಕ ಬಿಕ್ಕಟ್ಟುಗಳಿಗೂ, ಕಾಂಗ್ರೆಸ್ ನೇಮಿತ ಅಧಿಕಾರವರ್ಗದ ಅಸಹಕಾರವೇ ಕಾರಣವಾಯಿತು.
ಒಂದು ವೇಳೆ ಮೋದಿ ಈಗಿನ ವೇಗದಲ್ಲೇ ಕೊನೆಯ ಹಂತದ ಮುಕ್ತಾಯದವರೆಗೂ ಓಡಿದರೆ, ನಿಸ್ಸಂಶಯವಾಗಿಯೂ ಪ್ರಧಾನಿ ಹುದ್ದೆಯಲ್ಲಿ ಕೂರಲಿದ್ದಾರೆ. ಆದರೆ ಅಧಿಕಾರಕ್ಕೆ ಬಂದ ಹೊಸ ವ್ಯಕ್ತಿಯೊಬ್ಬ ರಾತ್ರೋರಾತ್ರಿ ದೇಶದ ದಿಶೆಯನ್ನೇ ಬದಲಿಸಿಬಿಡುತ್ತಾನೆ ಎಂದು ಭಾವಿಸುವುದು ಬಾಲಿಶವಾಗುತ್ತದಷ್ಟೆ. ಹೊರಹೋಗುತ್ತಿರುವ ಸರ್ಕಾರ ಅನೇಕ ಜಾಗಗಳಲ್ಲಿ ಬಾಂಬುಗಳನ್ನಿಟ್ಟು ಹೋಗುತ್ತಿದೆ. ಅವನ್ನೆಲ್ಲ ಎಲ್ಲೆಲ್ಲಿ ಇಟ್ಟಿದೆ/ ಇಡಲಿದೆ ಎನ್ನುವುದು ಯಾರಿಗೂ ತಿಳಿಯದು. ಪ್ರಧಾನಿಯಾಗುವವನಿಗೆ(ಳಿಗೆ) ಮುಂದೆ ಬಹಳಷ್ಟು ಸವಾಲುಗಳು ಕಾದಿವೆ!


- ಸ್ವಪನ್‌ದಾಸ್ ಗುಪ್ತ
swapan55@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement