ಅನಿತಾ ಹೇಳಿದ ಖುಷಿಯ ಸೂತ್ರ
ಬದುಕಿನ ಪ್ರತಿಯೊಂದು ಕಾಲಘಟ್ಟದಲ್ಲೂ ಹೊಸತನವಿದೆ. ಅದನ್ನು ನೋಡುವ ಕಣ್ಣುಗಳು, ಅನುಭವಿಸುವ ಮನಸ್ಸು ನಮ್ಮಲ್ಲಿರಬೇಕು...
ಬದುಕಿನ ಪ್ರತಿಯೊಂದು ಕಾಲಘಟ್ಟದಲ್ಲೂ ಹೊಸತನವಿದೆ. ಅದನ್ನು ನೋಡುವ ಕಣ್ಣುಗಳು, ಅನುಭವಿಸುವ ಮನಸ್ಸು ನಮ್ಮಲ್ಲಿರಬೇಕು...ಬದುಕಿನ್ನು ಮುಗಿದೇ ಹೋಯಿತೆನ್ನುವ ಮುಪ್ಪು ಕೂಡಾ ಹೊಸತೇ ಅಲ್ಲವೆ? ಅಲ್ಲಿಯವರೆಗೆ ನಾವು ಉಸಿರಾಡುತ್ತಿದ್ದೇವೆ ಎನ್ನುವುದು ಅಚ್ಚರಿಯೆನಿಸುವುದಿಲ್ಲವೇ ? ಕೊನೆ ಎಂದು ಮರುಗುವುದು ಸುಮ್ಮನೆ...ರಾತ್ರಿಯಾಗದೆ ನಕ್ಷತ್ರ ಕಾಣುವುದೆ?
---
ಅನಿತಾ ನರೇಶ್ ಮಂಚಿಯವರ ಫೇಸ್ಬುಕ್ ಟೈಮ್ಲೈನ್ನಲ್ಲಿ ಈ ಸಾಲುಗಳನ್ನು ಓದಿದಾಗ 'ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ' ಎಂಬ ಬೇಂದ್ರೆಯವರ ಸಾಲುಗಳು ನೆನಪಿಗೆ ಬರುತ್ತವೆ.
ಮನುಷ್ಯ ಜೀವನದಲ್ಲಿ ಪ್ರತಿಯೊಂದು ಕ್ಷಣವೂ ಹೊಸತೇ. ನಿನ್ನೆ ನೋಡಿದ್ದು ಇವತ್ತು ಹಾಗೇ ಇರುವುದಿಲ್ಲ. ಬದಲಾವಣೆಯೇ ಜಗದ ನಿಯಮ ಎನ್ನುವಾಗ ಕ್ಷಣ ಕ್ಷಣಕ್ಕೂ ನಮ್ಮಲ್ಲಿಯೂ , ನಮ್ಮ ಪರಿಸರದಲ್ಲಿಯೂ ಬದಲಾವಣೆಗಳು ಆಗುತ್ತವೇ ಇರುತ್ತದೆ. ಆದರೆ ಕೆಲವೊಂದು ಬದಲಾವಣೆಗಳು ನಮ್ಮ ಅನುಭವಕ್ಕೆ ಬರುವುದೇ ಇಲ್ಲ. ಎಲ್ಲೆಲ್ಲೂ ಸೌಂದರ್ಯವನ್ನು ಕಾಣುವ ಮನಸ್ಸಿರುವವರಿಗೆ ಮಾತ್ರ ಸೌಂದರ್ಯ ಆಸ್ವಾದನೆ ಸಾಧ್ಯ. ಬದುಕು ಬದಲಾಗುತ್ತಿದ್ದಂತೆ ನಾವು ಬದಲಾಗುತ್ತೇವೆ. ನಮ್ಮ ಬಾಲ್ಯ ಹೇಗೆ ಕಳೆದು ಹೋಯಿತು ಎಂದು ಅಚ್ಚರಿ ಪಡುವ ಹೊತ್ತಲ್ಲಿ ನಾವು ಯೌವನಕ್ಕೆ ಕಾಲಿಟ್ಟಿರುತ್ತೇವೆ. ಯೌವನದ ಸುಖ ಏನೆಂದು ಅರ್ಥವಾಗುವ ಹೊತ್ತಿಗೆ ಮುಪ್ಪು ಆವರಿಸಿ ಬಿಡುತ್ತದೆ. ಆದರೆ ಈ ಮುಪ್ಪು ಎಲ್ಲ ಘಟ್ಟಗಳಿಂದ ಭಿನ್ನವಾಗಿರುವುದು. ಮುಪ್ಪು ಎಂದರೆ ಆತಂಕ, ನಿಶ್ಶಕ್ತಿ, ಮರೆಗುಳಿತನ. ಅದು ಯಾತನಾಮಯವಾಗಿದ್ದರೂ ಮುಪ್ಪು ಕೂಡಾ ನಮಗೆ ಹೊಸತು. ಇದು ನಮ್ಮ ಜೀವನದ ಒಂದು ಘಟ್ಟವಷ್ಟೇ. ಇದೇ ಕೊನೆ ಎಂದು ಯಾಕೆ ಮರುಗಬೇಕು? ಅಲ್ಲಿಯವರೆಗೆ ನಾವು ಉಸಿರಾಡುತ್ತಿದ್ದೇವೆ.. ನಾವು ಬದುಕಿದ್ದೇವೆ, ನಮ್ಮ ಬದುಕಿನ್ನೂ ಮುಗಿದಿಲ್ಲ ಎನ್ನುವಾಗ ಮುಪ್ಪಿನ ಚಿಂತೆ ನಮ್ಮನ್ನು ಕಾಡದು.
ಹುಟ್ಟಿದವ ಸಾಯಲೇ ಬೇಕು..ಸಾವು ಎಂಬುದು ಸತ್ಯ. ಹೀಗಿರುವಾಗ ನಿನ್ನೆಯ ನೋವು ದುಃಖ, ನಾಳಿನ ಚಿಂತೆಯನ್ನು ಬಿಟ್ಟು ವರ್ತಮಾನದಲ್ಲಿ ಬದುಕುವುದನ್ನು ನಾವು ಕಲಿಯಬೇಕು. ಈ ಕ್ಷಣ ಹೊಸತು, ಈ ಕ್ಷಣ ನಮ್ಮದು..ಇದನ್ನು ಅನುಭವಿಸೋಣ ಎಂದು ಆಶಾವಾದವಿದ್ದರೆ ಬದುಕು ಸುಲಭ ಮತ್ತು ಸುಂದರವಾಗಿರುತ್ತದೆ. ರಾತ್ರಿಯಾಗದೆ ನಕ್ಷತ್ರ ಕಾಣುವುದೆ? ಎಂದು ಅನಿತಾ ಅವರು ಹೇಳಿದ್ದು ಕೂಡಾ ಅದನ್ನೇ...
ಈ ಬಾರಿ ಫೇಸ್ಬುಕ್ನಲ್ಲಿ ಕಂಡಂತೆ ಅಂಕಣಕ್ಕೆ ಆಯ್ಕೆ ಮಾಡಿದ ಸ್ಟೇಟಸ್ ಅನಿತಾ ನರೇಶ್ ಮಂಚಿ ಅವರದ್ದು
ಅವರ ಕಿರುಪರಿಚಯ
ಅನಿತಾ ನರೇಶ್ ಮಂಚಿ
ಮಂಗಳೂರು
-ರಶ್ಮಿ ಕಾಸರಗೋಡು