ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮೊದಲ ವಿಕ್ರಮ ಮುಡಿಗೇರಿಸಿಕೊಂಡವನ ಮನದಾಳ

Srinivasa Murthy VN
Updated On : 8 Mar 2014, 11:29 am

ಜರ್ಮನ್ ಗ್ರ್ಯಾನ್‌ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಅರವಿಂದ್ ಭಟ್ ಅವರೊಂದಿಗೆ ಮಾತಿಗಿಳಿದಾಗ...
ಮಾರ್ಚ್ 2, 2014ರಂದು ಪಕ್ಕದ ಬಾಂಗ್ಲಾದೇಶದ ಮೀರ್ಪುರನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಎಲ್ಲರ ಚಿತ್ತ ಈ ಪಂದ್ಯದ ಮೇಲೆಯೇ ನೆಟ್ಟಿತ್ತು. ಪಾಕಿಸ್ತಾನದ ಎದುರು ಸೋತ ಭಾರತ ಫೈನಲ್ ತಲುಪುವ ಆಸೆ ಕೈಬಿಟ್ಟಿತು. ಫೈನಲ್ ತಲುಪಲಿಲ್ಲ ಎಂಬ ನೋವಿಗಿಂತ ಹೆಚ್ಚಾಗಿ ಪಾಕ್ ಎದುರು ಸೋತಿದ್ದೇ ಭಾರತೀಯರಿಗೆ ದೊಡ್ಡ ಆಘಾತ ನೀಡಿತ್ತು. ಆದರೆ, ಇದರ ಮಧ್ಯೆ ದೂರದ ಜರ್ಮನಿಯಲ್ಲಿ ನಡೆದ "ಜರ್ಮನ್ ಓಪನ್ ಗ್ರ್ಯಾನ್‌ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌"ನಲ್ಲಿ ಅರವಿಂದ ಭಟ್ ಜಯಗಳಿಸಿದ್ದು, ಹೆಚ್ಚು ಸುದ್ದಿಯಾಗಲೇ ಇಲ್ಲ. ಮೊದಲ ಬಾರಿ ಭಾರತೀಯ ಆಟಗಾರ ಜರ್ಮನ್ ಓಪನ್ ಗೆದ್ದ ಸಾಧನೆ ಅದಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಆತ ಕನ್ನಡಿಗ ಎಂಬುದು ಮತ್ತೊಂದು ಹೆಮ್ಮೆಯ ಸಂಗತಿ.  
ಅರವಿಂದ್ ದೇಶ ಕಂಡ ಒಬ್ಬ ಪ್ರತಿಭಾನ್ವಿತ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಸ್ಕಾಟಿಷ್ ಓಪನ್ (2004), ಸಿರಿಯಾ ಇಂಟರ್‌ನ್ಯಾಷನಲ್ (2007), ಜೋರ್ಡಾನ್ ಇಂಟರ್‌ನ್ಯಾಷನಲ್, ಜೆಕ್ ಇಂಟರ್‌ನ್ಯಾಷನಲ್, ಬಿಟ್‌ಬರ್ಗ್ ಓಪನ್... ಹೀಗೆ ಇನ್ನೂ ಕೆಲವು ಅಂತಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ಒಲಿದುಬಂದಿವೆ. ಇದೀಗ ದೇಶದ ಆಚೆಗೆ ಗ್ರ್ಯಾನ್‌ಪ್ರೀ ಗೋಲ್ಡ್ ಟೂರ್ನಿಯಲ್ಲಿ ಪ್ರಶಸ್ತಿ ಸಂಪಾದಿಸಿದ ಭಾರತದ  ಎರಡನೇ ಆಟಗಾರ ಅವರಾಗಿದ್ದಾರೆ. ಕೆ. ಶ್ರೀಕಾಂತ್, ಕಳೆದ ವರ್ಷ ಥಾಯ್ಲೆಂಡ್ ಗ್ರ್ಯಾನ್ ಪ್ರೀ ಗೋಲ್ಡ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

-ಪ್ರಶಸ್ತಿ ಗೆದ್ದದ್ದು ಹೇಗನ್ನಿಸುತ್ತದೆ ಮತ್ತು ಭವಿಷ್ಯದ ದೃಷ್ಟಿಯಿಂದ ಇದು ಎಷ್ಟು ಮಹತ್ವದ್ದು?
ಅಂತಾರಾಷ್ಟ್ರೀಯ ಮಟ್ಟದ ಮಹತ್ವದ ಟೂರ್ನಿಗಳಲ್ಲಿ ಇದೂ ಒಂದು. ವಿಶ್ವದ ಉನ್ನತ ಕ್ರಮಾಂಕದ ಆಟಗಾರರು ಇದರಲ್ಲಿ ಪಾಲ್ಗೊಳ್ಳುವುದರಿಂದ ಇದೊಂದು ಪ್ರಮುಖ ಟೂರ್ನಿ. ಇಲ್ಲಿ ಪ್ರಶಸ್ತಿ ಗೆದ್ದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಜೀವನದ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿರುವುದು ಎಂದೂ ಮರೆಯಲಾಗದ ಕ್ಷಣ ಎನಿಸಿದೆ. ಈ ಯಶಸ್ಸು ನನ್ನಲ್ಲಿ ಹೊಸ ಸ್ಫೂರ್ತಿ, ಚೈತನ್ಯ ತುಂಬಿದೆ.
 
-ಗಾಯದ ಸಮಸ್ಯೆಯಿಂದಾಗಿ ಒಂದು ಹಂತದಲ್ಲಿ ವೃತ್ತಿ ಬದುಕು ಮುಗಿಯಿತೇನೋ ಎಂಬ ಆತಂಕದಲ್ಲಿ ಇದ್ದಿರಿ. ಅಂತಹದರಲ್ಲಿ ಸಂಪೂರ್ಣ ಚೇತರಿಸಿಕೊಂಡು 34ನೇ ವರ್ಷದಲ್ಲಿ ಪ್ರಮುಖ ಪ್ರಶಸ್ತಿಯೊಂದು ಗೆಲ್ಲುವುದು ಸುಲಭವಲ್ಲ...
ನಿಜ, ಪದೇ ಪದೇ ಕಾಡಿದ ನೋವಿನ ಸಮಸ್ಯೆ 2-3 ವರ್ಷಗಳ ಕಾಲ ಬ್ಯಾಡ್ಮಿಂಟನ್ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಆದರೆ ನಾನು ಇದರಿಂದ ಎದೆಗುಂದಲಿಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ದೃಢ ಸಂಕಲ್ಪದೊಂದಿಗೆ ಮುನ್ನುಗ್ಗಿ ಸಮಸ್ಯೆಯನ್ನು ಮೆಟ್ಟಿನಿಂತೆ. ವಯಸ್ಸಿನ ಬಗ್ಗೆ ಯಾವತ್ತೂ ಯೋಚಿಸಲಿಲ್ಲ. ಗುರಿಯೆಡೆಗೆ ಸಾಗುವ ಒಂದೇ ಉದ್ದೇಶ ನನ್ನಲ್ಲಿತ್ತು. ಕಠಿಣ ಪರಿಶ್ರಮದ ಜೊತೆಗೆ ನನಗೆ ನನ್ನ ಮೇಲಿದ್ದ ಅಪಾರವಾದ ನಂಬಿಕೆಯಿಂದ ಈ ಮಹತ್ತರ ಮೈಲಿಗಲ್ಲು ಸ್ಥಾಪನೆ ಸಾಧ್ಯವಾಯಿತು.
 
-ಮುಂದಿನ ಒಲಿಂಪಿಕ್ಸ್ ಅನ್ನು ಎದುರು ನೋಡುತ್ತಿದ್ದೀರಾ?
ಸದ್ಯಕ್ಕೆ ಆ ಬಗ್ಗೆ ಯೋಚನೆ ಇಲ್ಲ. ನನಗೀಗ 34 ವರ್ಷ. 2016ರ ಒಲಿಂಪಿಕ್ಸ್‌ಬರುವಷ್ಟರಲ್ಲಿ 36 ವರ್ಷ ತುಂಬಿರುತ್ತದೆ. ಆಗ ನಾನು ಯಾವ ರೀತಿಯ ಸಾಮರ್ಥ್ಯ, ಕ್ಷಮತೆ ಹೊಂದಿರುತ್ತೇನೆ ಎಂಬುದು ತಿಳಿಯದು. ಹಾಗಾಗಿ ಮುಂಬರುವ ಟೂರ್ನಿಗಳ ಮೇಲಷ್ಟೇ ಗಮನ ಕೇಂದ್ರೀಕರಿಸಿದ್ದೇನೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲಬೇಕೆಂಬ ಆಸೆಯಿದೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಬೇಕಿದೆ.

-ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಗೆಲ್ಲದಿರಲು ಕಾರಣಗಳೇನು, ಅದಕ್ಕಾಗಿ ಯಾವ ರೀತಿಯ ಸಿದ್ಧತೆಗಳಾಗಬೇಕು?
ಖಂಡಿತವಾಗಿಯೂ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ, ಪ್ರಾಥಮಿಕ ಹಂತದಿಂದಲೇ (ಗ್ರಾಸ್‌ರೂಟ್ ಲೆವೆಲ್) ಇದಕ್ಕಾಗಿ ತಯಾರಿ ಮಾಡಿಕೊಳ್ಳಬೇಕು. ಸಹಜವಾಗಿ ನಮ್ಮ ದೇಶದಲ್ಲಿ 15ನೇ ವರ್ಷಕ್ಕೇ ವೃತ್ತಿಪರತೆ ಬಗ್ಗೆ ಯೋಚಿಸುತ್ತೇವೆ. ಆದರೆ ಚೀನಾದಲ್ಲಿ 6-7 ವರ್ಷಕ್ಕೇ ಆಟಗಾರರು ಈ ಬಗ್ಗೆ ಚಿಂತಿಸುತ್ತಾರೆ. ನಮ್ಮ ಅವರ ನಡುವಿನ ಯೋಚನೆಯಲ್ಲಿ 7 ವರ್ಷಗಳ ವ್ಯತ್ಯಾಸವಿದೆ. ಹಾಗಾಗಿ ನಮ್ಮಲ್ಲೂ ಕೂಡ ಬಾಲ್ಯದಲ್ಲೇ ಒಂದು ನಿರ್ದಿಷ್ಟ ಗುರಿಯ ಬಗ್ಗೆ ಯೋಚಿಸಿ ಆ ದಿಕ್ಕಿನತ್ತ ಕಠಿಣ ಪರಿಶ್ರಮಪಡುವಂಥ  ವಾತಾವರಣ ನಿರ್ಮಾಣವಾಗಬೇಕು. ಪ್ರಯತ್ನ ಪಟ್ಟರೆ ಖಂಡಿತ ಯಶಸ್ಸು ಸಿಗಲಿದೆ. ಬ್ಯಾಡ್ಮಿಂಟನ್ ಸಂಸ್ಥೆಗಳು, ಸರ್ಕಾರಗಳು ಮೂಲಭೂತ ಸೌಕರ್ಯ ಕಲ್ಪಿಸಿಕೊಡುವುದರ ಜೊತೆಗೆ ಸಸಿಯಾಗಿದ್ದಾಗಲೇ ನೀರೆರೆದು ಪೋಷಿಸಲು ಮುಂದಾಗಬೇಕು. ಅಂದಾಗ ಮಾತ್ರ ದೇಶದಲ್ಲಿ ಕ್ರಿಕೆಟ್‌ನಂತೆ ಬ್ಯಾಡ್ಮಿಂಟನ್ ಕೂಡ ಒಂದು "ಕಲ್ಚರ್‌" ಎಂದೆನಿಸಿಕೊಳ್ಳಲು ಸಾಧ್ಯವಾಗುತ್ತದೆ.

-ಇಂದಿನ ಯುವಪೀಳಿಗೆಗೆ ನಿಮ್ಮ ಕಿವಿಮಾತೇನು?
ಚಿಕ್ಕವರಿದ್ದಾಗಲೇ ಒಂದು ಸ್ಪಷ್ಟವಾದ ಗುರಿ ಹೊಂದಿರಬೇಕು. ಆ ಗುರಿ ಈಡೇರಿಕೆಗೆ ಕಠಿಣ ತರಬೇತಿಗೆ ಆಣಿಯಾಗಬೇಕು. ಇದೊಂದು ರೀತಿಯ ಹವ್ಯಾಸವಾಗದೇ ಅತ್ಯಂತ ಪರಿಶ್ರಮ ವಹಿಸಿ ಜೀವನದಲ್ಲಿ ಕಂಡ ಕನಸು ನನಸಾಗಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲು ಪ್ರಯತ್ನಿಸಬೇಕು. ಆಟದ ಮೇಲೆ ಬದ್ಧತೆ, ಆ ಬಗ್ಗೆ ದೃಢಸಂಕಲ್ಪ ಮಾಡಿರಬೇಕು. ಸಾಧಿಸುವ ಛಲ, ಹಟವಿದ್ದರೆ ಎಂತಹ ಶಿಖರವನ್ನೂ ಏರಲು ಸಾಧ್ಯವಾಗುತ್ತದೆ.
 
-ನಿಮಗೆ ರೋಲ್ ಮಾಡಲ್ ಯಾರು?
ನಾನು ಇಂತಹವರನ್ನೇ ರೋಲ್ ಮಾಡಲ್ ಆಗಿ ಇಟ್ಟುಕೊಂಡಿಲ್ಲ. ಉತ್ತಮ ಆಟಗಾರರು ಯಾರೇ ಆಗಿರಲಿ ಅವರನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯುತ್ತೇನೆ. ಅವರಿಂದ ಕಲಿಯಬಯಸುತ್ತೇನೆ. ಪ್ರಕಾಶ್ ಪಡುಕೋಣೆ, ತೌಫಿಕ್ ಹಿದಾಯತ್, ಪುಲ್ಲೇಲ ಗೋಪಿಚಂದ ಹೀಗೆ ಅನೇಕ ಶ್ರೇಷ್ಠ ಆಟಗಾರರು ನನಗೆ ಸ್ಫೂರ್ತಿ ಎನಿಸಿದ್ದಾರೆ.

-ಪ್ರಸ್ತುತ ರಾಜ್ಯದಲ್ಲಿನ ಬ್ಯಾಡ್ಮಿಂಟನ್‌ನ ಸ್ಥಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಡ್ಮಿಂಟನ್ ಪಟುಗಳು ಹುಟ್ಟಿಕೊಳ್ಳುತ್ತಿದ್ದಾರೆ. ರಾಜ್ಯ ಸಂಸ್ಥೆ ಕೂಡ ಅನೇಕ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸಿದೆ. ಪ್ರಕಾಶ್ ಪಡುಕೋಣೆ ಅವರಂತಹ ಶ್ರೇಷ್ಠ ಪ್ರತಿಭೆ ಮೂಡಿಬಂದಿದ್ದು, ಈ ರಾಜ್ಯದಿಂದಲೇ. ಆದರೆ, ಆಟಗಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಬೇಕು. ಉದಾಹರಣೆಗೆ ಈಗ 100ರಲ್ಲಿ ಒಬ್ಬ ಶ್ರೇಷ್ಠ ಆಟಗಾರ ಹೊರಹೊಮ್ಮುತ್ತಿದ್ದರೆ, ಸಂಖ್ಯೆ 1000ಕ್ಕೇರಿದಲ್ಲಿ 100 ಮಂದಿ ಶ್ರೇಷ್ಠರು ಬೆಳಕಿಗೆ ಬರಲು ಅವಕಾಶವಿರುತ್ತದೆ. ಆದರೆ ಅದಕ್ಕಾಗಿ ಪೂರಕ ವಾತಾವರಣ ಕಲ್ಪಿಸಿಕೊಡಬೇಕಾಗುತ್ತದೆ. ಅತ್ಯಂತ ಗುಣಮಟ್ಟದ ತರಬೇತಿ, ನುರಿತ ತರಬೇತುದಾರರ ನೆರವು ದೊರೆತಾಗ ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಹೆಚ್ಚೆಚ್ಚು ಪ್ರತಿಭೆಗಳು ಮಿಂಚಲು ಸಾಧ್ಯವಾಗುತ್ತದೆ.   

-ಹೆಂಡತಿ (ಪಲ್ಲವಿ) ಕೂಡ ಬ್ಯಾಡ್ಮಿಂಟನ್ ಆಟಗಾರ್ತಿ. ನೀವು ಪ್ರಶಸ್ತಿ ಗೆದ್ದಿದ್ದು ಅವರಿಗೆ ಯಾವ ರೀತಿಯ ಖುಷಿ ನೀಡಿದೆ ಹಾಗೂ ತಂದೆ-ತಾಯಿ ಏನನ್ನುತ್ತಾರೆ?

ಪಲ್ಲವಿ ಅವರನ್ನು 2002ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆ. ಆಗಲೇ ನಾವಿಬ್ಬರೂ ಜೀವನದಲ್ಲಿ ಏನಾದರೊಂದು ದೊಡ್ಡ ಸಾಧನೆ ಮಾಡುವ ಕನಸು ಕಟ್ಟಿಕೊಂಡಿದ್ದೆವು. ಆಕೆ ಕೂಡ ಬ್ಯಾಡ್ಮಿಂಟನ್ ಆಟಗಾರ್ತಿಯಾದ್ದರಿಂದ ನನ್ನ ವೃತ್ತಿ ಪರತೆಗೂ ಒಂದು ಹೊಸ ದಿಕ್ಸೂಚಿಯಾಗುತ್ತಾಳೆ ಎಂಬ ಉದ್ದೇಶದಿಂದ ಆಕೆಯನ್ನೇ ಮದುವೆಯಾಗ ಬಯಸಿದೆ. ಈಗ ಬಹುವರ್ಷಗಳ ಕನಸು ನನಸಾದ ತೃಪ್ತಿ ನಮಗಿದೆ. ಇನ್ನು ಚಿಕ್ಕವನಿರುವಾಗಲೇ ನನ್ನ ಪ್ರತಿಭೆಗೆ ನೀರೆರೆದು ಬೆಳೆಸಿದ ತಂದೆ-ತಾಯಿಗಳಲ್ಲಿ ಈ ಪ್ರಶಸ್ತಿಯ ಸಂಭ್ರಮ ಎಲ್ಲೆ ಮೀರಿದೆ. ಪ್ರತಿಹೆಜ್ಜೆಯಲ್ಲೂ ನನ್ನಲ್ಲಿ ಹೊಸ ಸ್ಫೂರ್ತಿ ತುಂಬುತ್ತಾ ಸದಾ ಬೆಂಬಲವಾಗಿ ನಿಂತು, ಪರಿಪೂರ್ಣ ಬ್ಯಾಡ್ಮಿಂಟನ್ ಆಟಗಾರನನ್ನಾಗಿ ರೂಪಿಸಿದ ಅವರಿಗೆ ಖಂಡಿತ ಈ ಶ್ರೇಯಸ್ಸು ಸಲ್ಲುತ್ತದೆ.

-ಹೆಂಡತಿ ಮತ್ತು ಮಗ ಲಕ್ಕಿ ಎಂದೆನಿಸುವುದಿಲ್ಲವೇ?
ಖಂಡಿತ ಹೌದು... ಏಕೆಂದರೆ ಪಲ್ಲವಿಯನ್ನು ಮದುವೆಯಾದ ಕೂಡಲೇ, ಅಂದರೆ 2008ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆದೆ. ಅದಕ್ಕೂ ಮುನ್ನ 4 ಬಾರಿ ಫೈನಲ್ ತಲುಪಿದರು ಪ್ರಶಸ್ತಿ ಗೆದ್ದುಕೊಳ್ಳಲು ಸಾಧ್ಯವಾಗಿರಲಿಲ್ಲ. ಅದೇ ರೀತಿ, ಈಗ ಮಗ ಹುಟ್ಟಿದ 7 ತಿಂಗಳಲ್ಲೇ ಚೊಚ್ಚಲ ಬಾರಿಗೆ ಗ್ರ್ಯಾನ್ ಪ್ರೀ ಗೋಲ್ಡ್ ಟೂರ್ನಿಯಲ್ಲಿ ಗೆದ್ದಿದ್ದೇನೆ. ನಿಜಕ್ಕೂ ಈ ಇಬ್ಬರೂ ನನ್ನ ಜೀವನದ ಲಕ್ಕಿ ಸ್ಟಾರ್‌ಗಳು.

-ನಿಮ್ಮ ಇತರೆ ಹವ್ಯಾಸಗಳೇನು?
ಇತಿಹಾಸದ ಪುಸ್ತಕಗಳನ್ನು ಓದಲು ಇಷ್ಟಪಡುತ್ತೇನೆ. ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ನನಗೆ ಅಪಾರ ಆಸಕ್ತಿ. ಕನ್ನಡ, ಹಿಂದಿ, ಇಂಗ್ಲಿಷ್ ಈ ಮೂರು ಭಾಷೆಗಳಲ್ಲಿ ಯಾವುದೇ ಉತ್ತಮ ಚಿತ್ರ ಬಂದರೂ ವೀಕ್ಷಿಸುತ್ತೇನೆ. ಹೃತಿಕ್ ರೋಷನ್, ಆಮೀರ್ ಖಾನ್ ಇಷ್ಟದ ನಟರು. ನಾನ್‌ವೆಜ್ ತುಂಬಾ ಇಷ್ಟವಾದರೂ ಉಳಿದ ಯಾವುದೇ ಆಹಾರವನ್ನೂ ಆಸ್ವಾದಿಸುತ್ತೇನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement