ಎಲ್ಲವನ್ನೂ ಸರ್ಕಾರವೇ ಪೂರೈಸಲೆಂಬ ಕಾಲದ ಮಹಿಮೆ
'ನಮ್ ಕಾಲ ಹಿಂಗಿರ್ಲಿಲ್ಲ. ಕಾಲ ಕೆಟ್ಟು ಹೋಗಿದೆ' ಸುಮಾರು 50 ವರ್ಷ ದಾಟಿದ ಬಹುತೇಕರು ಆಡುವ ಮಾತಿದು. ತಮಗೆ ವಯಸ್ಸಾಗಿದೆ ಎಂದ ಮಾತ್ರಕ್ಕೆ ಹಾಗೆ ಹೇಳುತ್ತಾರೋ ಅಥವಾ ನಿಜಕ್ಕೂ ಅಂತಹ ಅನಾವೃಷ್ಟಿ ಆಗಿದೆಯಾ? ಎಂಬುದು ನಿಗೂಢ. ಅಂದಿನ ಸ್ಥಿತಿಗತಿ ಗಮನಿಸಿದರೆ ಅಂದೇ ಚೆಂದ ಅನ್ನಲೂಬಹುದು. ಇಂದಿನ ಟೆಕ್ನಾಲಜಿ, ಟ್ರೆಂಡ್ ನೋಡಿದಾಗ ಇಂದೇ ಚೆನ್ನಾಗಿದೆ ಎಂದು ಸರ್ಟಿಫಿಕೇಟ್ ನೀಡಲೂಬಹುದು. ಒಟ್ಟಾರೆ ಹಿಂದಿನ, ಇಂದಿನ ಮತ್ತು ಮುಂದಿನ ಬಗೆಗಿನ ಚರ್ಚೆ ಮಾತ್ರ ನಿರಂತರ.
'ಅಂದೆಲ್ಲಾ 'ಗೌರ್ಮೆಂಟ್ ಸಬ್ಸಿಡಿ' ಇರಲಿಲ್ಲ. 'ಬಜೆಟ್ ಮಂಡನೆ' ಎಂಬುದು ಇರಲಿಲ್ಲ. 'ಅನ್ ಎಂಪ್ಲಾಯ್ಮೆಂಟ್ ಬೆನಿಫಿಟ್ಸ್' ಇರಲಿಲ್ಲ. 'ಆರೋಗ್ಯ ಯೋಜನೆ' ಇಲ್ಲ. 'ಜಾತಿವಾರು ಮೀಸಲು' ಇಲ್ಲ. 'ಹಿಂದುಳಿದವರು' ಎಂಬುದು ಇಲ್ಲ. 'ಅಲ್ಪಸಂಖ್ಯಾತರಿಗೆ' ಎಂಬುದಿಲ್ಲ. ಇದ್ದುದು ಕೆಲವೇ ಕೆಲವು ಜಾಬ್ ಅವಕಾಶಗಳು. ಅದು ಶಿಕ್ಷಣ ಪಡೆದುಕೊಂಡಿದ್ದರೆ ಮಾತ್ರ. ಪದವಿ ಎಂಬ ಸರ್ಟಿಫಿಕೇಟಿಗಿಂತ ಶಿಕ್ಷಿತರೇ ಎಂಬುದು ಮುಖ್ಯವಾಗಿತ್ತು. ಕೋಟಾ ಗೀಟಾ ಏನೂ ಇರಲಿಲ್ಲ. ಬಡವನಾದರೂ, ಬಲ್ಲಿದನಾದರೂ ಶಿಕ್ಷಣವಂತನಾಗುವುದೇ ಮುಖ್ಯವಾಗಿತ್ತು.
ಅನ್ನಭಾಗ್ಯ, ಕ್ಷೀರ ಭಾಗ್ಯ, ಸಾಲ ಮನ್ನಾ ಎಂಬಂತಹ ಯೋಜನೆಗಳೇ ಇರಲಿಲ್ಲ. 30, 40, 50ರ ದಶಕದ ಮಾತು. ಇಂದು ಸರ್ಕಾರ ಒದಗಿಸುತ್ತಿರುವ ಯಾವ ಸೌಲಭ್ಯಗಳೂ ಇರಲಿಲ್ಲ. ಸೌಲಭ್ಯಗಳು ಬೇಕು ಎಂದು ಯಾರೂ ಉಪವಾಸ ಕೂರಲಿಲ್ಲ. ಅಂದೆಲ್ಲಾ ಯಾರೂ 'ತಾನು ಮಾಡಿದ ಸಾಲ ಮನ್ನಾ ಮಾಡಿ' ಎಂದು ಕೈಯಲ್ಲಿ ಪೆಟ್ರೋಲ್ ಹಿಡಿದು ಆತ್ಮಹತ್ಯೆಯ ಬೆದರಿಕೆ ಒಡ್ಡುತ್ತಿರಲಿಲ್ಲ. ಉಪವಾಸ ಮಾಡಿದರು. ಕ್ರಾಂತಿ ಮಾಡಿದರು. ಕೆಚ್ಚಿನಿಂದ ಹೋರಾಡಿದರು. ಅದು ಸ್ವಾತಂತ್ರ್ಯಕ್ಕಾಗಿ ಮಾತ್ರ. ಸ್ವಾತಂತ್ರ್ಯ ಒಂದಿದ್ದರೆ ನಾವು ನೆಮ್ಮದಿಯಿಂದ ಬದುಕಬಹುದು ಎಂಬುದು ಪ್ರತಿಯೊಬ್ಬನಲ್ಲೂ ನಿಚ್ಚಳವಾಗಿತ್ತು. ದೇಶದ ಮುಂದೆ ಸರ್ಕಾರ ನಗಣ್ಯ. ಯಾರೂ ಸರ್ಕಾರ ಕೊಡಲಿ ಎಂದು ಕಾದು ಕೂರಲಿಲ್ಲ. ಉಚಿತ ವಿದ್ಯುತ್ ಕೊಡುತ್ತೀವಿ, ಉಚಿತ ಕಲರ್ ಟೀವಿ ಕೊಡುತ್ತೀವಿ ಎಂಬ ಪಾಂಪ್ಲೆಟ್ನೊಂದಿಗೆ ಮನೆಗೆ ಬರುತ್ತಿರಲಿಲ್ಲ.
ಅಂದು ಬರುತ್ತಿದ್ದವರೆಲ್ಲಾ ಬ್ರಿಟಿಷರ ವಿರುದ್ಧ ಹೋರಾಡೋಣ ಬನ್ನಿ, ಅನ್ಯಾಯದ ವಿರುದ್ಧ ಸಮರ ಸಾರೋಣ ಬನ್ನಿ ಎಂದು ಆಹ್ವಾನಿಸುವವರೇ ಆಗಿದ್ದರು. ಸ್ವತಂತ್ರ ಬಂತು, ಗಣರಾಜ್ಯವಾಗಿಯೂ ಆಯಿತು. ಎಲ್ಲಾ ಸಲೀಸಾಗುತ್ತಿದೆ ಎನ್ನುವಾಗ ರಾಜಕಾರಣ ಎಂಬ ಕಗ್ಗಂಟು ಬಿಗಿಯತೊಡಗಿತು. ಸರ್ಕಾರ ಕೊಡುತ್ತೀವಿ ಎಂದರು. ಪ್ರಜೆಗಳು ಕೊಡಿ ಎಂದರು. 'ಕೊಟ್ಟವ ಕೋಡಂಗಿ, ಇಸ್ಕಂಡವ ಈರಭದ್ರ' ಎಂಬಂತಾಗಿದೆ.
ಈಗಿನ ಪರಿಸ್ಥಿತಿ ನೋಡಿ, ಕೊಡುಕೊಳ್ಳುವಿಕೆಯಲ್ಲಿ ಪ್ರಜೆಗಳನ್ನು ದಾಸರನ್ನಾಗಿ ಮಾಡಿದೆ. 'ಅಲ್ಪಸಂಖ್ಯಾತರಿಗೆ ಅಷ್ಟೆಲ್ಲಾ ಸೌಲಭ್ಯ ಸಿಗುತ್ತಿದೆ ಎಂದ ಮೇಲೆ ನಾವೂ ಅಲ್ಪಸಂಖ್ಯಾತರಾಗೋಣ!' ಎಂಬಷ್ಟು ಅವಿವೇಕಿಗಳಾಗಿದ್ದಾರೆ. ಸಾಲ ಮನ್ನಾ, ಬಡ್ಡಿ ಮನ್ನಾ ಮಾಡುತ್ತಾರೆಂದು ನಕಲಿ ದಾಖಲೆ ಸೃಷ್ಟಿಸಿ ಲಾಭಪಡೆಯಲು ಹವಣಿಸುತ್ತಿದ್ದಾರೆ. ಸರ್ಕಾರಿ ಕೆಲಸಗಳಿಗಾಗಿ ಎಷ್ಟೋ ಮಂದಿ ಮೂಲ ಜಾತಿಯನ್ನು ಮರೆಮಾಡಿ ಪರಿಶಿಷ್ಟ ಪಂಗಡದವರಾಗಿ ಬದಲಾಗಿದ್ದಾರೆ. ಜಮೀನಿಲ್ಲದವರಿಗೆ ಸಿಗುವ ಸೌಲಭ್ಯ ನೋಡಿ ಜಮೀನು ಇರುವವರು ಯಾರ್ಯಾರ ಹೆಸರಿನಲ್ಲೋ ಬರೆಸಿ 'ನಮಗೆ ಜಮೀನೇ ಇಲ್ಲ. ನಾವು ಕಡು ಬಡವರು!' ಎಂದು ಪೋಸು ನೀಡುವವರು ಕಡಿಮೆ ಇದ್ದಾರಾ? ಪದವಿಯಲ್ಲಿ ಜಸ್ಟ್ ಪಾಸ್ ಮಾರ್ಕು ತೆಗೆದವರಿಗೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ. ಅಂತಹವರು ಅಧಿಕಾರಿಗಳಾದರೆ ಲೆಕ್ಕ ವ್ಯವಹಾರಗಳು ಎಷ್ಟರಮಟ್ಟಿಗೆ ಸರಿಯಾಗಿ ಸಾಗಬಹುದು? ಸರ್ಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸ ಒಂದೇ ದಿನದಲ್ಲಿ ಆದ ಉದಾಹರಣೆಗಳು ಇದೆಯಾ?
ಮಕ್ಕಳ ವಿಚಾರಕ್ಕೆ ಬರೋಣ. ಪ್ರತಿದಿನವೂ ಮಣ್ಣಲ್ಲೇ ಆಡುತ್ತಿದ್ದರು. ಸೂರ್ಯನಿಗೇ ಸವಾಲು ಹಾಕುತ್ತಿದ್ದೆವು. ಆಗ ಯಾರೂ 'ಬಿಸಿಲಲ್ಲಿ ಆಡಬೇಡ ತ್ವಚೆ ಒಣಗುತ್ತದೆ' ಎನ್ನುತ್ತಿರಲಿಲ್ಲ. 'ಡೆಟಾಲ್ನಿಂದ ಹ್ಯಾಂಡ್ ವಾಶ್ ಮಾಡು' ಎನ್ನುತ್ತಿರಲಿಲ್ಲ. ಎಷ್ಟೋಬಾರಿ ಕೈಗಳಲ್ಲಿ ಮೆತ್ತಿಕೊಂಡ ಮಣ್ಣು ಊಟದ ಜೊತೆಗೆ ಹೊಟ್ಟೆ ಸೇರಿದ್ದಿದೆ. ಮರುದಿನ ಅವರ್ಯಾರಿಗೂ ಹೊಟ್ಟೆ ನೋವು ಬರಲಿಲ್ಲ. ಶವರ್ ಆಗಲಿ, ಬಾತ್ ಟಬ್ ಆಗಲಿ ಕಂಡವರೇ ಅಲ್ಲ. ಜಲಪಾತವೇ ಶವರ್, ಕೆರೆಯೇ ಬಾತ್ ಟಬ್ ಆಗಿತ್ತು. ಆಗಿನ ಅಮ್ಮಂದಿರು 'ನೀರು ಜಾಸ್ತಿ ವೇಸ್ಟ್ ಮಾಡಬೇಡ' ಎನ್ನುತ್ತಿರಲಿಲ್ಲ.
ಹತ್ತಾರು ಮಿತ್ರರು ಒಂದೇ ಬಾಟಲ್ನಲ್ಲಿ ಜ್ಯೂಸ್ ಹೀರುತ್ತಿದ್ದರು. ಬೇರೆಯವರ ಎಂಜಲು, ಕೊಳಕು ಎಂದು ಅಂದಿನ ಅಮ್ಮಂದಿರು ಎಂದೂ ಹೇಳುತ್ತಿರಲಿಲ್ಲ. ತರಕಾರಿ ಸಂತೆಗಳಿಗೆ ಹೋಗಿ ಕ್ಯಾರೆಟ್, ಟಮೊಟೋ ತಿನ್ನುತ್ತಿದ್ದರು. ಇಂದಿನಂತೆ ತೊಳೆದು ತಿನ್ನಬೇಕು ಎಂಬ ಗೊಡವೆ ಏನೂ ಇರಲಿಲ್ಲ.
ಗಾಳಿಪಟ, ಬೇರಿಂಗ್ ಗಾಡಿ, ಗೊಂಬೆಗಳ ಆಟದ ಪ್ರಪಂಚ. ಸೈಕಲ್ ಟೈರ್, ಬ್ಯಾಟರಿಗಳಲ್ಲಿ ಸಿಗುತ್ತಿದ್ದ ಪುಟ್ಟ ಚಕ್ರಗಳೆಲ್ಲವೂ ಆಟದ ವಸ್ತುಗಳಾಗಿದ್ದವು. ಹೊಸ ಹೊಸ ಅನ್ವೇಷಣೆಗಳನ್ನು ಮಾಡಿ ಬೇಕಾದ ಆಟದ ವಸ್ತುಗಳನ್ನು ಮಾಡಿಕೊಳ್ಳುತ್ತಿದ್ದ ಚಾಕಚಕ್ಯತೆ. ಸೈಕಲ್ ಟ್ಯೂಬ್ ಬಳಸಿ ಕ್ಯಾಟರ್ ಬಿಲ್ ಸಿದ್ಧ. ದೊಡ್ಡ ದೊಡ್ಡ ಮರಗಳನ್ನು ಸಲೀಸಾಗಿ ಏರುತ್ತಿದ್ದರು. ಸೀಬೆಹಣ್ಣು, ಕಿತ್ತಳೆ, ಚಕ್ಕೊತ್ತಾ, ಸಪೋಟ, ನೇರಳೆ ಹಣ್ಣುಗಳನ್ನು ತಿನ್ನಬೇಕು ಎಂದಾದರೆ ದುಡ್ಡು ಕೊಟ್ಟರೆ ಸಿಗುತ್ತಿರಲಿಲ್ಲ. ಯಾರೂ ಅಂತಹ ಹಣ್ಣುಗಳನ್ನು ಮಾರುತ್ತಿರಲಿಲ್ಲ. ಅವರೇ ಮರ ಹತ್ತಿ ಎಷ್ಟು ಬೇಕೋ ಅಷ್ಟು ಹಣ್ಣುಗಳನ್ನು ಕುಯ್ದು ತಿನ್ನುತ್ತಿದ್ದರು.
ಆಗೆಲ್ಲಾ ಮುಸ್ಲಿಂ, ಹಿಂದು, ಕ್ರಿಶ್ಚಿಯನ್ ಎಂಬ ಬೇಧಗಳು ಇದ್ದವು ನಿಜ. ಆದರೆ ದೇಶ ವಿಭಜನೆ ಎಂಬ ವಿಚಾರದಿಂದಾದ ಬೇಧ ಮಾತ್ರವೇ ಆಗಿತ್ತು. ದೇಶದ ಒಡಕಿನಿಂದ ಅಂತಹ ವೈಪರಿತ್ಯಗಳು ಘಟಿಸಿದವು. ಈಗಿನಂತೆ ಯಾವ ಧರ್ಮಿಯನೂ ಅನ್ಯ ಧರ್ಮದ ಯುವತಿಗೆ ಅಮಲು ತರಿಸುವ ಜ್ಯೂಸ್ ಕುಡಿಸಿ ಬೇಕಾದ ಹಾಗೆ ಛಾಯಾಚಿತ್ರಗಳನ್ನು ತೆಗೆದು ಸಾಮಾಜಿಕ ತಾಣಗಳಲ್ಲಿ ಹರಿಯಬಿಡುತ್ತಿರಲಿಲ್ಲ. ಕೋಮು ಗಲಭೆಗೆ ಎಡೆ ಮಾಡಿಕೊಡುತ್ತಿರಲಿಲ್ಲ. ಆಗೆಲ್ಲಾ ಮುಸಲ್ಮಾನ ಬಂಧುಗಳನ್ನು 'ಬೇರ್ಗಳೇ', 'ಸಾಬ್ರೇ' ಎನ್ನುತ್ತಿದ್ದರು. ಅವರು 'ಗೌಡ್ರೇ' ಎನ್ನುತ್ತಿದ್ದರು. ಗೌಡರು ಎಂಬುದು ಒಂದು ಗೌರವ ಸೂಚಕ ಪದವಷ್ಟೇ ಆಗಿತ್ತು.
ಮೊಬೈಲ್ ಇಲ್ಲ, ಕಂಪ್ಯೂಟರ್ ಇಲ್ಲ, ಪರ್ಸನಲ್ ಕಂಪ್ಯೂಟರ್ ಇಲ್ಲ, ಲ್ಯಾಪ್ಟಾಪ್ ಇಲ್ಲ, ಇಂಟರ್ನೆಟ್ ಇಲ್ಲ, ಗೂಗಲ್ ಇಲ್ಲ, ಸಾಮಾಜಿಕ ತಾಣ ಎಂಬುದು ಪ್ರತಿ ಊರುಗಳಲ್ಲಿ ಇರುತ್ತಿದ್ದ ಹಳ್ಳಿಕಟ್ಟೆಗಳು ಮಾತ್ರ. ಹಾಗಂತ ಆ ಪೀಳಿಗೆಗೆ ಗೆಳೆಯರೇ ಇಲ್ಲ ಎಂದೇನಲ್ಲ. ಪ್ರಾಣ ಸ್ನೇಹಿತರಿದ್ದರು. ಕೆಲಸಗಳಿಗೆ ಲೈಕ್ ಮಾಡುತ್ತಿದ್ದರು. ಕಾಮೆಂಟ್ ಹಾಕುತ್ತಿದ್ದರು. ಶೇರ್ ಮಾಡುತ್ತಿದ್ದರು ಅಂದರೆ ಅವರ ಮನೆ ಮಂದಿಯಲ್ಲಿ ಹೇಳಿಕೊಳ್ಳುತ್ತಿದ್ದರು. 'ಕಾಫಿ ಡೇ' ಎಂಬ ಪ್ರತ್ಯೇಕ ತಾಣಗಳೇನೂ ಇರಲಿಲ್ಲ. ಬದಲಿಗೆ ಹಳ್ಳಿಯಲ್ಲಿ ಇರುತ್ತಿದ್ದ ಒಂದು ಅಂಗಡಿಯಲ್ಲಿ ಕಾಫಿ, ಟೀ ಇಂದ ಹಿಡಿದು ಬೀಡಿ, ಸಿಗರೇಟುಗಳು ಸಿಗುತ್ತಿದ್ದವು.
ಬಿಗ್ ಮಾಲ್ ಇಲ್ಲ, ಮೆಗಾ ಮಾಲ್ ಇಲ್ಲ. ವರ್ಷಕ್ಕೊಮ್ಮೆ ಆಗುತ್ತಿದ್ದ ಊರ ಜಾತ್ರೆಯೇ ಅವರ ಪಾಲಿಗೆ ಮೆಗಾ ಮಾಲ್! ವಾರಕ್ಕೊಮ್ಮೆ ಆಗುವ ಸಂತೆಯೇ ಬಿಗ್ ಮಾಲ್! ದಿನನಿತ್ಯವೂ ಸಂತೋಷದಿಂದಲೇ ಬದುಕುತ್ತಿದ್ದರು.
ಹೀಗೆಲ್ಲ ಕತೆ ಬಿಚ್ಚಿ ನೀರು ಕುಡಿದ ವ್ಯಕ್ತಿಗೆ ವಯಸ್ಸು 90. ಅಂದು ಅವರು ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಹೆಣಗುತ್ತಿದ್ದರು. ಆದರೆ ಇಂದು ಆ ಸ್ಥಿತಿ ಇಲ್ಲ. ಸ್ವಾತಂತ್ರ್ಯವಿದೆ. ಆದರೆ ಸ್ವೇಚ್ಛಾಚಾರ ಹೆಚ್ಚಾಗಿದೆ. ಆಗ ಇರಲಿಲ್ಲ ಎಂದು ಹೇಳಿದ ಎಲ್ಲವೂ ಈಗ ಇದೆ. ಆಗ ಹಾಗಿತ್ತು ಎಂದು ಯಾರಾದರೂ ಮಾತು ಆರಂಭಿಸಿದರೆ ಇದು ಕೆಲಸಕ್ಕೆ ಬಾರದ ಉಪದೇಶ ಎಂಬರ್ಥದಲ್ಲಿ ನಮಗೆ ಕಿರಿಕಿರಿ ಶುರುವಾಗುತ್ತದೆ. ಟೆಕ್ನಾಲಜಿ, ಟ್ರೆಂಡ್ನ ಬೆಳವಣಿಗೆ ಸಹ್ಯವೇ ಸರಿ. ಆದರೆ ಸಮುದಾಯದಲ್ಲಿ ಒಟ್ಟಾಗಿ ಆಚರಿಸುತ್ತಿದ್ದ ಚಿಕ್ಕ ಚಿಕ್ಕ ಖುಷಿಗಳೆಲ್ಲ ನಮಗೀಗ ಕ್ಷುಲ್ಲಕ ಅನ್ನಿಸಿಬಿಟ್ಟಿವೆ. ಇನ್ನು ಕೆಲವರ್ಷಗಳು ಹೋದರೆ ಮದುವೆ ಮಾಡಿಸುವುದು, ಮಕ್ಕಳ ಖರ್ಚು ನೋಡಿಕೊಳ್ಳುವುದು ಹಾಗೂ ವೃದ್ಧ ತಂದೆ-ತಾಯಿಯರನ್ನು ನೋಡಿಕೊಳ್ಳುವುದೆಲ್ಲ ಸರ್ಕಾರದ ಕೆಲಸ ಎಂಬ ಭಾವನೆ ಬಂದುಬಿಡಬಹುದೇನೋ? ಭವಿಷ್ಯತ್ತಿನಲ್ಲಿ ರಾಜಕೀಯ ಪಕ್ಷಗಳೂ ಇವೇ ಸಂಗತಿಗಳ ಸುತ್ತ ಆಕರ್ಷಕ ಯೋಜನೆಗಳನ್ನು ಹೆಣೆದಾರು! ನಮ್ಮ ಖಾಸಗಿ ಬೆರಗುಗಳನ್ನು ಒಂದೊಂದಾಗಿ ಕಳೆದುಕೊಂಡ ಪರಿಣಾಮವಾಗಿ ಕಾಲ ಪ್ರವಾಹವು ನಮ್ಮನ್ನು ಎಲ್ಲವೂ ಸರ್ಕಾರವೇ ಕೊಡಲಿ ಎಂಬಲ್ಲಿಗೆ ತಂದು ನಿಲ್ಲಿಸಿದೆ. ಯಾವ ಪಕ್ಷದವರು ಎಷ್ಟು ಸೌಲಭ್ಯ ಕೊಡುತ್ತಾರೆ ಎಂದಷ್ಟೇ ಗಣನೆಗೆ ತೆಗೆದುಕೊಂಡು ವೋಟ್ ಮಾಡುವುದು ಸರಿಯೇ? ಸರ್ಕಾರವೇ ನಮ್ಮನ್ನು ಸಾಕಬೇಕು ಎಂಬ ಧೋರಣೆ ಸರಿಯೇ?
-ಮಂಜುನಾಥ್ ಎಲ್. ಕೆ.
ಕನ್ನಡಪ್ರಭ