ಸ್ಥಳದಲ್ಲೇ ವಿನಿಮಯ ಕೇಂದ್ರ ಸ್ಥಾಪಿಸಿದಾಗ...
ಗುಲ್ಬರ್ಗಾ ಜಿಲ್ಲೆ ತೊಗರಿ ಕಣಜವೆಂದು ಹೆಸರುವಾಸಿ. ತೊಗರಿ ಬೆಳೆಯಲ್ಲಿ ರಾಷ್ಟ್ರದಲ್ಲಿ ಅದು ಎರಡನೇ ಸ್ಥಾನ ಪಡೆದಿದೆ. ಒಟ್ಟು ತೊಗರಿಯ ಕ್ಷೇತ್ರ 3,28,545 ಹೆಕ್ಟೇರ್ ಪ್ರದೇಶವಿದ್ದು, ಸಾಮಾನ್ಯವಾಗಿ ಪ್ರತಿ ಹೆಕ್ಟೇರಿಗೆ ಆರೇಳು ಕ್ವಿಂಟಲ್ ಉತ್ಪಾದನೆ ಇದೆ. ಒಟ್ಟು ಸರಾಸರಿ ಉತ್ಪಾದನೆ 2,30,000 ಮೆಟ್ರಿಕ್ ಟನ್ನಷ್ಟಿದೆ. ಇದರಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆ 87,767 ಆಗಿದ್ದು, ಕ್ಷೇತ್ರದ ವಿಸ್ತೀರ್ಣ 8,189 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ. ಅತೀ ಸಣ್ಣ ಹಿಡುವಳಿದಾರರು 52,046 ಸಂಖ್ಯೆಯಲ್ಲಿದ್ದು, ಕ್ಷೇತ್ರದ ವಿಸ್ತೀರ್ಣ 40,764 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ.
ಗುಲ್ಬರ್ಗಾ ಜಿಲ್ಲೆ ತೊಗರಿ ಕಣಜವೆಂದು ಹೆಸರು ವಾಸಿಯಾಗಿದ್ದರೂ ಸಹ ರೈತರು ಅನೇಕ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಉದಾಹರಣೆಗೆ ರೈತರು ಮಧ್ಯವರ್ತಿಗಳ ಮೇಲೆ ಅವಲಂಬಿತರಾಗಿರುತ್ತಾರೆ. ಏಕೆಂದರೆ ಪ್ರತಿಯೊಬ್ಬರೂ ಸಣ್ಣ ಹಿಡುವಳಿದಾರರಾಗಿರುವುದರಿಂದ ತಮ್ಮ ಉತ್ಪಾದನೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಾದರೆ ತುಂಬ ಕಷ್ಟವೆದುರಾಗುತ್ತದೆ. ರೈತರು ಸಂಘಟಿತರಾಗಿರುವುದಿಲ್ಲ. ಹಾಗಾಗಿ ಮಧ್ಯವರ್ತಿಗಳು ರೈತರಿಂದ ಖರೀದಿ ಮಾಡಿ ಸ್ವಲ್ಪ ಮುಂಗಡ ಹಣ ನೀಡಿ ತಮಗೆ ಬೇಕಾದ ಹಾಗೆ ದರ ನಿಗದಿ ಪಡಿಸುತ್ತಿದ್ದರು. ಮಾತ್ರವಲ್ಲ, ಬೆಲೆ ಪರಿಷ್ಕರಣೆ ಆಗದೇ ಇರುವುದರಿಂದ ಒಟ್ಟು ತೂಕದಲ್ಲಿ ಕಡಿತಗೊಳಿಸುತ್ತಿದ್ದರು. ರೈತರಿಗೆ ಲಾಭವಾಗುತ್ತಿರಲಿಲ್ಲ.
ಹೇಗೆ ಸಣ್ಣ ಹಿಡುವಳಿದಾರರು ಸಂಘಟಿತರಾಗಿ ಹೊಸ ತಂತ್ರಜ್ಞಾನದ ಮೂಲಕ ನೇರವಾಗಿ ತಮ್ಮ ಫಸಲಿಗೆ ಇಂಟರ್ನೆಟ್ ಮೂಲಕ ದೇಶ ವಿದೇಶದಲ್ಲಿ ತಮಗೆ ಬೇಕಾದ ಬೆಲೆಯನ್ನು ಪಡೆದು ಶೋಷಣೆಯಿಂದ ಮುಕ್ತವಾಗಿ ಹೆಚ್ಚಿನ ಆದಾಯವನ್ನು ಗಳಿಸಲು ಸಶಕ್ತರಾಗಿದ್ದಾರೆನ್ನುವುದನ್ನು ನಾನು ಜಪಾನ್ಗೆ ಹೋದಾಗ ನೋಡಿದ್ದೆ. ಅದೇ ರೀತಿ ನಮ್ಮಲ್ಲಿ ಏಕೆ ಮಾಡಬಾರದು ಎಂಬ ಆಲೋಚನೆ ನನ್ನಲ್ಲಿ ಮೂಡಿತು.
ಆಗ ಎ.ಪಿ.ಎಂ.ಸಿ. ಪಕ್ಕದ ಹನುಮಾನ್ ದೇವಸ್ಥಾನದಲ್ಲಿ ಬಹಿರಂಗ ಹರಾಜು ನಡೆಸಲಾಗುತ್ತಿತ್ತು. ಕಮಿಷನ್ ಏಜೆಂಟ್ಗಳು ಒಂದು ಬಟ್ಟಲಿನಲ್ಲಿ ತೊಗರಿ ಮಾದರಿಯನ್ನು ತರುತ್ತಿದ್ದರು. ದಾಲ್ ಮಿಲ್ ಮಾಲೀಕರು ಅಥವಾ ವ್ಯಾಪಾರಿಗಳು ಈ ಮಾದರಿಯನ್ನು ವೀಕ್ಷಿಸಿ, ಗುಣಮಟ್ಟಕ್ಕೆ ತಕ್ಕಂತೆ ಬೆಲೆಯನ್ನು ನಿರ್ಧರಿಸಿದ ಹರಾಜು ನಂತರ ಹಣ ಪಾವತಿ ಮಾಡಲಾಗುತ್ತಿತ್ತು. ತೊಗರಿ ಬೆಳೆಯ ಗುಣಮಟ್ಟವನ್ನು ನಿರ್ಧರಿಸಲು ಲಾತೂರ್ ಜಾಲಿಯನ್ನು ಉಪಯೋಗಿಸಲಾಗುತ್ತಿತ್ತು. 3.75 ಮಿಲಿ ಮೀಟರ್ ರಂಧ್ರದ ಜರಡಿ ಮೇಲೆ ಇರುವ ಬೆಳೆಯನ್ನು ಉತ್ತಮ ಗಾತ್ರ ಎಂದು ಪರಿಗಣಿಸಲಾಗುತ್ತಿತ್ತು. ಇದಕ್ಕಿಂತ ಕಡಿಮೆ ಗಾತ್ರದ ತೊಗರಿ ಮಿಶ್ರಣವಾದರೆ, ಉತ್ತಮ ಗುಣಮಟ್ಟದ ತಳಿಯಾದ ಮಾರುತಿ ಹಾಗೂ ಗುಳಿಯಾಲ್ ಉತ್ಪಾದನೆ ಮಾಡಿರುವ ರೈತರಿಗೆ. ಬಹು ಕಾಲದಿಂದ ರೈತರು ಸ್ಥಳೀಯ ಆಶಾ, ನಿರ್ಮಲ ತಳಿಗಳಿಗೆ ಉತ್ತಮ ಇಳುವರಿ ಇರುವುದರಿಂದ ಬಳಸುತ್ತಿದ್ದರು. ಆದರೆ, ಈ ತಳಿಗೆ ತುಂಬಾ ಕಡಿಮೆ ಬೆಲೆ ಸಿಗುತ್ತಿತ್ತು, ಏಕೆಂದರೆ ಇದರ ಮೇಲ್ಮೈ ಗಟ್ಟಿ ಇದ್ದುದರಿಂದ ದಾಲ್ ಮಿಲ್ಗಳು ತೆಗೆದುಕೊಳ್ಳಲು ಇಷ್ಟಪಡುತ್ತಿರಲಿಲ್ಲ.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಸರಕುಗಳು ಮತ್ತು ಉದ್ಯಮಗಳ ವಿನಿಮಯ ಸಂಸ್ಥೆಯ (ಎನ್.ಸಿ.ಇ.ಡಿ.ಎಕ್ಸ್ ಪ್ರೈ ವೇಟ್ ಲಿಮಿಟೆಡ್) ಮೂಲಕ ತೊಗರಿ ಮಾರಾಟಕ್ಕೆ ಒಂದು ವಿನಿಮಯ ಕೇಂದ್ರ ಅನ್ನು ಪ್ರಾರಂಭಿಸಲು ನಮ್ಮ ಹಿರಿಯ ಐಎಎಸ್ ಅಧಿಕಾರಿಯಾದ ರಾಮಶೇಷನ್ರೊಂದಿಗೆ ಮಾತನಾಡಿದೆ. ಅವರು ಸ್ವಯಂ ನಿವೃತ್ತಿ ತೆಗೆದುಕೊಂಡು ಎನ್.ಸಿ.ಇ.ಡಿ.ಎಕ್ಸ್. ಗೆ ಸೇರಿದ್ದರು ಹಾಗೂ ಈ ವಿಷಯದಲ್ಲಿ ತುಂಬಾ ಆಸಕ್ತಿ ವ್ಯಕ್ತಪಡಿಸಿದರು.
ಅದೇ ರೀತಿ ದಾಲ್ ಮಿಲ್ ಸಂಘದ ಜೊತೆಗೆ ಸ್ಪಾಟ್ ಎಕ್ಸ್ಚೇಂಜ್ ವಿಷಯದ ಬಗ್ಗೆ ಚರ್ಚಿಸಿದೆ. ದಾಲ್ ಮಿಲ್ ಮಾಲೀಕರು ಉತ್ತಮ ಗುಣಮಟ್ಟದ ಬೆಳೆಯನ್ನು ಪಡೆಯಲು ಇಚ್ಛಿಸುತ್ತಿದ್ದರು ಹಾಗೂ ಅಂತಾರಾರಾಷ್ಟ್ರೀಯ ಮಟ್ಟದ ಬೆಲೆಯನ್ನು ಕೂಡ ಕೊಡಲೂ ಸಿದ್ಧರಿದ್ದರು. ಆದರೆ ಅವರಿಗೆ ಎ.ಪಿ.ಎಂ.ಸಿ.ಯಲ್ಲಿ ಸಿಗುವ ಸಾಮಾಗ್ರಿಯಿಂದ ಅಸಮಾಧಾನರಾಗಿದ್ದರು. ಏಕೆಂದರೆ ಅದರಲ್ಲಿ ಎಲ್ಲಾ ಗಾತ್ರದ ಬೇಳೆಗಳು ಮಿಶ್ರಣವಾಗಿರುತ್ತವೆ ಮತ್ತು ಅದನ್ನು ಬೇರ್ಪಡಿಸುವುದು ಬಲು ಕಷ್ಟದ ಮತ್ತು ಖರ್ಚಿನ ಕೆಲಸ. ಈ ಕಾರಣಕ್ಕಾಗೇ ರೈತರು ತಮ್ಮ ಕಟಾವು ಮಾಡಿದ ನಂತರ ತಕ್ಷಣವೇ ಗುಣಮಟ್ಟದ ಆಧಾರದ ಮೇಲೆ ಬೇರ್ಪಡಿಸಿ, ಗ್ರೇಡ್-ಎ, ಗ್ರೇಡ್-ಬಿ, ಗ್ರೇಡ್-ಸಿ ಪ್ರಕಾರ ಇ-ಮಾರುಕಟ್ಟೆ ಮೂಲಕ ಮಾರಾಟ ಮಾಡಿದರೆ ಅವರು ಕೂಡ ಗುಣಮಟ್ಟಕ್ಕೆ ತಕ್ಕಂತೆ ಉತ್ತಮ ದರವನ್ನು ಕೊಡಲು ಒಪ್ಪಿದರು.
ದಾಲ್ ಮಿಲ್ ಸಂಘದವರು ಮಧ್ಯವರ್ತಿಗಳೊಂದಿಗೆ ವ್ಯವಹಾರ ನಡೆಸುತ್ತಿದ್ದರು. ಅಂತಹ ಮಧ್ಯವರ್ತಿಗಳನ್ನು ಸಹ ಈ ಸಭೆಯಲ್ಲಿ ಆಹ್ವಾನಿಸಲಾಯಿತು. ಅವರೂ ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು. ಒಂದೊಂದು ಹಳ್ಳಿಯಿಂದ ಸ್ವಲ್ಪಸ್ವಲ್ಪ ಬೇಳೆಯನ್ನು ಸಂಗ್ರಹಣೆ ಮಾಡುವುದಕ್ಕೆ ಬಹಳ ಕಷ್ಟಪಡಬೇಕು ಎಂದು ವಿವರಿಸಿದರು. ಏಕೆಂದರೆ ಕೆಲವೊಮ್ಮೆ ಸಣ್ಣಸಣ್ಣ ಟೆಂಪೋಗಳನ್ನು ರೈತರ ಹೊಲಕ್ಕೆ ಕಳುಹಿಸಬೇಕಾಗುತ್ತದೆ. ಹಳ್ಳಿಯಲ್ಲಿ ಸರಿಯಾದ ರಸ್ತೆ ಇರುವುದಿಲ್ಲ ಹಾಗೂ ವಾಹನಗಳು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ರೈತರು ಹಾಗೂ ದಾಲ್ ಮಿಲ್ ಮಾಲೀಕರು ಒಂದಾದಾಗ ಅವರಿಗೆ ಈ ಹೊಸ ವ್ಯವಸ್ಥೆಯಲ್ಲಿ ಯಾವುದೇ ಅವಕಾಶ ಉಳಿಯುವುದಿಲ್ಲ.
ವೇರ್ ಹೌಸ್ ಕಾರ್ಪೊರೇಷನ್ ನವರು ಕೂಡ ಈ ಚರ್ಚೆಯಲ್ಲಿ ಪಾಲ್ಗೊಂಡರು. ಅವರು ಹೇಳಿದಂತೆ ಖಾಸಗಿ ಮತ್ತು ಸರ್ಕಾರಿ ಗೋದಾಮುಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇರುತ್ತದೆ ಹಾಗೂ ಅವರ ಯೋಜನೆಯಲ್ಲಿ ರೈತರು ತಮ್ಮ ಸಾಮಾಗ್ರಿಗಳನ್ನು ಇಟ್ಟರೆ, ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ಶೇಕಡ ಎಪ್ಪತ್ತರಷ್ಟು ಮುಂಗಡ ಹಣವನ್ನು ಅವರು ರೈತರಿಗೆ ನೀಡಲು ಅವಕಾಶ ಇರುತ್ತದೆ.
ತೊಗರಿ ಬೆಳೆ ಸಂಘದವರ ಜೊತೆ ಮಾತನಾಡಿದಾಗ ಅವರು ರೈತರಿಗೆ ಕೊಡಬೇಕಾದ ಸುಮಾರು ಸೌಲಭ್ಯಗಳು ಇದ್ದು, ಅವರ ಹತ್ತಿರ ಸಾಕಷ್ಟು ಅನುದಾನ ಸರ್ಕಾರದಿಂದ ಸಿಗದೇ ಇರುವುದರಿಂದ ಯಾವುದೇ ಕಾರ್ಯಕ್ರಮಕ್ಕೆ ಕೈ ಹಾಕಲು ಸಾಧ್ಯವಾಗಿಲ್ಲವೆಂದು ತಿಳಿಸಿದರು.
ಈ ನಿಟ್ಟಿನಲ್ಲಿ ಮೈರಾಡ ಸಂಸ್ಥೆಯು 1984 ರಿಂದ ಗುಲ್ಬರ್ಗಾ ಜಿಲ್ಲೆಯ ಗ್ರಾಮೀಣ ಅಭಿವೃದ್ಧಿಯಲ್ಲಿ ಸ್ಥಳೀಯ ಜನರನ್ನು ಸಂಘಟಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶದ ರೈತರಿಗೆ ವಿಷಯಾಧಾರಿತ ತಿಳಿವಳಿಕೆ, ಶಿಬಿರಗಳು ಇತ್ಯಾದಿ ಅಯೋಜಿಸುತ್ತಾ ಬಂದಿದೆ. ಈ ಸಂಸ್ಥೆಯು ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ, ಗುಲ್ಬರ್ಗಾ, ಚಿತ್ತಾಪೂರ, ಆಳಂದ ಹಾಗೂ ಸೇಡಂ ತಾಲೂಕಿನ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ರೈತರಿಗೆ ವಿವಿಧ ಸಂಘಟನೆಗಳ ಮೂಲಕ ಸಂಪನ್ಮೂಲ ಕ್ರೋಢಿಕರಿಸಿ ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದುಡಿಯುತ್ತಿದೆ. ಮೈರಾಡ ಸಂಸ್ಥೆಯು ಗ್ರಾಮೀಣ ಮಟ್ಟದಲ್ಲಿ, 650 ಸ್ವಸಹಾಯ ಸಂಘಗಳನ್ನು ರಚಿಸಿ, ಜೊತೆಗೆ ಹತ್ತು ಸಮುದಾಯ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದೆ. ಅದ್ದರಿಂದ ಮೈರಾಡ ಸಂಸ್ಥೆಯೊಂದಿಗೆ ನಮ್ಮ ಕೇಂದ್ರ ಒಪ್ಪಂದ ಮಾಡಲಾಯಿತು.
ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ಒಂದು ಪ್ರಸ್ತಾವನೆಯನ್ನು ತಯಾರಿಸಲಾಯಿತು. ಇದರಲ್ಲಿ ತೊಗರಿ ಬೆಳೆ ಸಂಘಕ್ಕೆ ಮುಂಗಡ ಹಣವನ್ನು ಕೊಟ್ಟು, ಆ ಮುಂಗಡ ಹಣವನ್ನು ಮೈರಾಡ ಸಂಸ್ಥೆಗೆ ನೀಡಿ, ಹಳ್ಳಿ ಮಟ್ಟದಲ್ಲಿ ರೈತರನ್ನು ಒಂದು ಕಡೆ ಸೇರಿಸಿ, ಅವರಿಗೆ ಸರಿಯಾದ ತಿಳಿವಳಿಕೆ ನೀಡಿ ಅವರ ಬೆಳೆಯನ್ನು ಸಂಗ್ರಹಿಸುವ, ವಿಂಗಡಿಸುವ ಹಾಗೂ ಸಾಗಿಸುವ ವ್ಯವಸ್ಥೆಯನ್ನು ಏರ್ಪಡಿಸುವ ಜವಾಬ್ದಾರಿಯನ್ನು ಮೈರಾಡ ಸಂಸ್ಥೆಗೆ ನೀಡಲಾಯಿತು. ಈ ಸಂಸ್ಥೆಯ ಪಕ್ಕದಲ್ಲಿರುವ ಗೋದಾಮುಗಳಿಗೆ ಸಾಮಾಗ್ರಿಯನ್ನು ನೀಡಿ ಮುಂಗಡ ಹಣವನ್ನು ಪಡೆದು ರೈತರಿಗೆ ತಕ್ಷಣ ತಮ್ಮ ಬ್ಯಾಂಕ್ ಅಕೌಂಟ್ಗೆ ಹಣ ಮುಟ್ಟಿಸುವ ಜವಾಬ್ದಾರಿಯನ್ನು ಸಹ ನೀಡಲಾಯಿತು. ಮೈರಾಡ ಸಂಸ್ಥೆಯಲ್ಲಿ ಗೊಂಚಲುಗಳಲ್ಲಿ ವಿಂಗಡಣೆ ಮಾಡುವ ಯಂತ್ರಗಳನ್ನು ಸಹ ಒದಗಿಸಲಾಯಿತು. ಗುಲ್ಬರ್ಗಾ ಎ.ಪಿ.ಎಂ.ಸಿ.ಯಲ್ಲಿ ಎನ್.ಸಿ.ಇ.ಡಿ.ಎಕ್ಸ್ ವತಿಯಿಂದ ಒಂದು ದೊಡ್ಡ ಎಲೆಕ್ಟ್ರಾನಿಕ್ಸ್ ಪರದೆಯನ್ನು ನೀಡಲಾಯಿತು. ಈ ಪರದೆಯ ಮೂಲಕ ಎನ್.ಸಿ.ಇ.ಡಿ.ಎಕ್ಸ್. ರವರ ತಂತ್ರಾಂಶದ ವತಿಯಿಂದ ದೇಶ-ವಿದೇಶದಲ್ಲಿ ಇರುವ ದರಗಳ ಪ್ರದರ್ಶನವನ್ನು ಎಲ್ಲಾ ರೈತರು ವೀಕ್ಷಿಸುವ ಹಾಗೆ ವ್ಯವಸ್ಥೆ ಮಾಡಲಾಯಿತು.
ರೈತರು ತಮ್ಮ ಹಳ್ಳಿಯಲ್ಲಿ ತೊಗರಿ ಬೆಳೆದಿದ್ದರೂ ಸಹ ತಮ್ಮ ಸ್ವಂತ ಉಪಯೋಗಕ್ಕೆ ಅದನ್ನು ಉಪಯೋಗಿಸಲು ಆಗುತ್ತಿರಲಿಲ್ಲ. ಏಕೆಂದರೆ, ಸ್ಥಳೀಯವಾಗಿ ಯಾವುದೇ ತೊಗರಿ ದಾಲ್ ಮಿಲ್ ಇರಲಿಲ್ಲ. ಇದರ ಪರಿಣಾಮವಾಗಿ ರೈತನು ಅಂಗಡಿಯಿಂದ ಬೇಳೆಯನ್ನು ಕೊಂಡುಕೊಳ್ಳಬೇಕಾಗಿತ್ತು. ರೈತರ ಬೆಳೆಗೆ ಸಿಗುವ ಬೆಲೆ 32 ರು. ಪ್ರತಿ ಕಿಲೋ, ಆದರೆ ಅಂಗಡಿಯಿಂದ ತಂದ ಬೆಳೆಗೆ 70 ರಿಂದ 80 ರುಪಾಯಿಗಳು. ಇದರಿಂದ ಅವರಿಗೆ ಎರಡು ಪಟ್ಟು ಹಾನಿಯಾಗುತ್ತಿತ್ತು. ಆದ್ದರಿಂದ, ಸುಮಾರು 60,000 ರುಪಾಯಿಯಲ್ಲಿ ಒಂದು ಮಿನಿ ದಾಲ್ಮಿಲ್ ಕೃಷಿ ಇಲಾಖೆ ವತಿಯಿಂದ ಶೇಕಡ 50ರ ಸಬ್ಸಿಡಿ ಮೇಲೆ ಮೈರಾಡ ಸಂಸ್ಥೆಯ ಮೂಲಕ ಮಹಿಳಾ ರೈತರಿಗೆ ಕ್ಲಸ್ಟರ್ ಹಂತದಲ್ಲಿ ಒದಗಿಸಲಾಯಿತು. ಅದನ್ನು ಉಪಯೋಗಿಸಿಕೊಳ್ಳುವ ಬಗ್ಗೆ ತರಬೇತಿಯನ್ನು ನೀಡಲಾಯಿತು. ರೈತ ಮಹಿಳೆಯರು ಇದಕ್ಕೆ ತುಂಬಾ ಖುಷಿಪಟ್ಟರು. ಅದರಂತೆ ಹಳ್ಳಿ ಮಟ್ಟದಲ್ಲಿ ಬೆಳೆ ಕಟಾವು ಆದ ಮೇಲೆ ಅದನ್ನು ಒಣಗಿಸುವುದು, ವಿಂಗಡಿಸುವುದು ಹಾಗೂ ಬೆಳೆಯಿಂದ ದಾಲ್ ಮಾಡುವುದು, ಈ ಎಲ್ಲಾ ಆರ್ಥಿಕ ಚಟುವಟಿಕೆಗಳು ಸಹ ಪ್ರಾರಂಭವಾಗುವುದಕ್ಕೆ ಇದೂ ಒಂದು ಕಾರಣವಾಯಿತು. ಉದ್ಯೋಗ ಸೃಷ್ಟಿಯಾಗತೊಡಗಿದವು. ಈ ಬೆಳವಣಿಗೆಗಳಿಂದ ಸಣ್ಣ/ ಅತೀ ಸಣ್ಣ ರೈತರಿಗೆ ಹಣ ಉಳಿತಾಯವಾಯಿತು. ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಗಳಿಗೆ ಉತ್ತಮ ದರ ಸಿಗುತ್ತಿತ್ತು. ಎನ್ ಸ್ಪಾಟ್ ಮೂಲಕ ಮಾರುಕಟ್ಟೆ ಖರ್ಚಿನಲ್ಲಿ ಸುಮಾರು ಶೇಕಡ 50 ರಷ್ಟು ಇಳಿಕೆ ಹಾಗೂ ಬೇಳೆ ದರಗಳಲ್ಲಿ ಶೇಕಡ 10 ರಷ್ಟು ಏರಿಕೆಯ ಉತ್ತಮ ಫಲಿತಾಂಶ ದೊರಕಿದ್ದರಿಂದ, ಶ್ರಮ ಸಾರ್ಥಕವಾಯಿತೆಂಬ ಸಂತೋಷ ನನ್ನದಾಯಿತು.
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com