ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನಳಂದಾದ ಪುನರುತ್ಥಾನ ಪಶ್ಚಿಮದ ಬೆಳಕಲ್ಲೇ ಆಗಬೇಕೆ?

ಬಿಹಾರ ಸಂಭ್ರಮ ಆಚರಣೆಯ ಮೂಡ್‌ನಲ್ಲಿತ್ತು. ಈ ಸಾಹಸಕ್ಕೆ ಹಣ ಸುರಿಯಲು ಭಾರತ...

Vishwanath S
Updated On : 12 Mar 2014, 12:56 pm

ಬಿಹಾರ ಸಂಭ್ರಮ ಆಚರಣೆಯ ಮೂಡ್‌ನಲ್ಲಿತ್ತು. ಈ ಸಾಹಸಕ್ಕೆ ಹಣ ಸುರಿಯಲು ಭಾರತ ಸರ್ಕಾರ ಪರ್ಸ್ ತೆಗೆದು ನಿಂತಿತ್ತು. ಹೊಸ ನಳಂದಾಕ್ಕೆ ಬೇಕಾದ ಜಾಗವನ್ನೂ ಸುಲಭವಾಗಿ ಕೊಡಲಾಯಿತು. ಆದರೆ ನೇಮಕಾತಿಗಳಾಗಬೇಕಿತ್ತು... ನಮ್ಮ ಸರ್ಕಾರದ ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಪಶ್ಚಿಮದಿಂದ ಸ್ಫೂರ್ತಿ ಪಡೆದಿರುತ್ತಾರೆ. ಬಹುಶಃ ಅವರ ತಲೆಯಲ್ಲಿ ಜಾಣ ಭಾರತೀಯ ಯುವಕರನ್ನು ಸೆಳೆಯುವ, ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲಿ ಉನ್ನತ ಸ್ಥಾನ ಪಡೆಯುವ ಕೆಲವು ಪಶ್ಚಿಮ ವಿಶ್ವವಿದ್ಯಾಲಯಗಳೇ ಇದ್ದವೇನೊ? ಈ ಕಾರಣಕ್ಕಾಗಿಯೇ ನೊಬೆಲ್ ಪುರಸ್ಕೃತ ಮತ್ತು ಸರ್ಕಾರದ ಪ್ರೀತಿಪಾತ್ರರಾದ ಅಮರ್ತ್ಯ ಸೇನ್‌ರನ್ನು ಮಾರ್ಗದರ್ಶಕರ ಗುಂಪಿನ ಮುಖ್ಯಸ್ಥರನ್ನಾಗಿ ಆರಿಸಲಾಯಿತು. ಯಾವ ಕಾರಣಕ್ಕಾಗಿ ನಳಂದ ಅಷ್ಟೊಂದು ಶ್ರೇಷ್ಠತೆ ಪಡೆದಿತ್ತು ಎನ್ನುವುದನ್ನು ಅರ್ಥಮಾಡಿಕೊಳ್ಳದೇ ಅದರ 'ಪುನರುತ್ಥಾನ'ಕ್ಕೆ ಸರ್ಕಾರ ಮುಂದಾಯಿತು. ಒಂದು ಕಾಲಕ್ಕೆ 'ಭಾರತೀಯ'ರೂ ಆಗಿದ್ದ, ಈಗ ಅಂತಾರಾಷ್ಟ್ರೀಯ ವ್ಯಕ್ತಿಯಾಗಿ ಬದಲಾಗಿರುವ ಅಮರ್ತ್ಯ ಸೇನ್ ಅವರನ್ನು ಬಿಟ್ಟು ಬೇರ್ಯಾವ ಉತ್ತಮ ಆಯ್ಕೆಯೂ ಅದಕ್ಕೆ ಕಾಣಲಿಲ್ಲ. ಈ ಯೋಜನೆಯನ್ನು ಮುನ್ನಡೆಸಿ, ಭಾರತದ ಇತಿಹಾಸ ಮತ್ತು ಪರಂಪರೆಯನ್ನು ಬೋಧಿಸುವಂಥ ಕೇಂದ್ರವೊಂದನ್ನು ಸ್ಥಾಪಿಸುವ ಜವಾಬ್ದಾರಿ ಸೇನ್ ಅವರ ಭುಜವೇರಿತು. ಇನ್ನು  ಸಲಹೆಗಾರರ ಸಮಿತಿಯಲ್ಲಿ ಭಾರತೀಯರ, ಅದರಲ್ಲೂ ಮುಖ್ಯವಾಗಿ ಯುವಜನತೆಯ ಅಕ್ಕರೆಯ ವ್ಯಕ್ತಿಯಾದ ಅಬ್ದುಲ್ ಕಲಾಂ ಕೂಡ ಜೊತೆಯಾದರು.
ಆದರೆ ಈಗ ಆ ಯೋಜನೆ ಹಳ್ಳ ಹಿಡಿದಿದೆ. ಯಾರಾದರೂ ತಮ್ಮ ನಿರ್ಧಾರಗಳಲ್ಲಿ ತಲೆ ಹಾಕಿದರೆ ತಮ್ಮ ಸ್ಥಾನದಿಂದ ಹೊರನಡೆಯುವುದಾಗಿ ಪ್ರೊ. ಅಮರ್ತ್ಯ ಸೇನ್ ಧಮಕಿ ಹಾಕುತ್ತಿದ್ದಾರೆ. ಈ ಯೋಜನೆಯಲ್ಲಿ ಮುಂದುವರಿಯಲು ತಮಗೆ ಕಷ್ಟವಾಗುತ್ತಿದೆ ಎಂದು ಕಲಾಂ ಅಸಹಾಯಕತೆ ತೋಡಿಕೊಂಡಿದ್ದಾರೆ. ತಮ್ಮ ಸ್ವಾಯತ್ತತೆಯನ್ನು ಯಾರೂ ಪ್ರಶ್ನಿಸಬಾರದು ಎಂದು ಸೇನ್ ಬಯಸುತ್ತಿದ್ದಾರೆ. ಈ ಕಾರಣಕ್ಕಾಗೇ ಅನೇಕ ವ್ಯಾಖ್ಯಾನಗಳು ಹುಟ್ಟಿಕೊಳ್ಳುತ್ತಿವೆ. ಈ ಪ್ರಗತಿಪರ ಮಂದಿ, ತಾವು ಸಾರ್ವಜನಿಕ ಹಣದಲ್ಲಿ ಮೋಜು ಮಾಡುತ್ತಿದ್ದಾಗ್ಯೂ, ತಮ್ಮನ್ನು ಉತ್ತರದಾಯಿಯನ್ನಾಗಿ ಮಾಡಬಾರದು ಎಂದು ಬಯಸುತ್ತಾರೆ. ನಳಂದಾಕ್ಕೆ ಉಪಕುಲಪತಿ ಮತ್ತಾಕೆಯ ಸಹಾಯಕಿಯನ್ನು ನೇಮಕ ಮಾಡಿದ ಸೇನ್, ಅವರಿಬ್ಬರಿಗೆ 'ಅಂತಾರಾಷ್ಟ್ರೀಯ ಮಟ್ಟದ' ಸಂಬಳ ಕೊಟ್ಟು ಸಂಚಲನವುಂಟುಮಾಡಿದ್ದರು. ಇನ್ನು ಅವರ ತಂಡದಲ್ಲಿರುವ ಕೆಲವರು ವಾರ್ಷಿಕ 50,000-55,000  ಡಾಲರ್ ಸಂಬಳ ಎಣಿಸುತ್ತಿದ್ದರೆ, ಮೇಲ್ಮಟ್ಟದ ಮತ್ತಷ್ಟು ಜನ ವಾರ್ಷಿಕ 80 ಸಾವಿರ ಡಾಲರ್ ಪಡೆಯುತ್ತಿದ್ದಾರೆ. ಇದರಿಂದಾಗಿ ಭಾರತದ ಇತರ ವಿಶ್ವವಿದ್ಯಾನಿಲಯಗಳ ಸ್ಥಾನಿಕ ಕುಲಪತಿಗಳು ಮತ್ತು ಶಿಕ್ಷಣ ತಜ್ಞರ ಮೇಲೆ ಯಾವ ಮಟ್ಟದಲ್ಲಿ ಪ್ರತಿಕೂಲ ಪರಿಣಾಮವುಂಟಾಗಲಿದೆ ಎನ್ನುವುದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಇಂಥ ವಿವೇಕವಿಲ್ಲದ ನಿರ್ಧಾರಗಳೇ ಇಂದು ಸಂಶೋಧನೆ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಘಾಸಿ ಮಾಡುತ್ತಿರುವುದು.
ಪೂರ್ತಿ ಪ್ರೊಫೆಸರ್ ಕೂಡ ಆಗದ, ಅಪ್ರಬುದ್ಧ ಯುವಕರನ್ನು ಉಪಕುಲಪತಿಗಳಾಗಿ ನೇಮಕ ಮಾಡಬಲ್ಲ ಶಕ್ತಿ ಸೇನ್ ಅವರಿಗೆ ಮಾತ್ರ ಇದೆಯೇನೋ? ಜನರು ಗಾಬರಿಯಿಂದ ಎದ್ದು ಕೂಡಲು ಇದೊಂದು ನಡೆಯೇ ಸಾಕಾಯಿತು. ಉಪಕುಲಪತಿಗಳಿಗೆ ಕಾರ್ಯ ನಿರ್ವಹಿಸಲು ಸರಿಯಾದ ಸೌಕರ್ಯಗಳು ನಳಂದಾದಲ್ಲಿಲ್ಲ ಎನ್ನುವ ಕಾರಣಕ್ಕೆ, ಅವರ ಕಾರುಬಾರನ್ನು ನವ ದೆಹಲಿಯಿಂದಲೇ ನಡೆಸಲಾಗುತ್ತಿದೆ. ಆದಾಗ್ಯೂ ನಮ್ಮ ಪ್ರತಿ ಹೆಜ್ಜೆಯೂ ಪಶ್ಚಿಮದ ಬೆಳಕಲ್ಲೇ ಸಾಗುತ್ತಿರುವಾಗ, ಭಾರತದ ನಿಯಮ ಮತ್ತು ನಿಬಂಧನೆಗಳನ್ನು ಯಾರು ಅನುಸರಿಸುತ್ತಾರೆ ಹೇಳಿ? ಭಾರತದಲ್ಲಿ ಉನ್ನತ ಸ್ಥಾನಗಳಲ್ಲಿರುವವರೆಲ್ಲಾ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ಪಡೆಯುವುದರಲ್ಲೇ ನಂಬಿಕೆಯಿಟ್ಟಿದ್ದಾರೆ. ಸೇನ್‌ರಂಥ 'ಶ್ರೇಷ್ಠ' ವ್ಯಕ್ತಿಯನ್ನು ಪ್ರಶ್ನಿಸುವ ಧೈರ್ಯವಾದರೂ ಯಾರಿಗಿದೆ? ಆದರೆ ಸರ್ಕಾರದ ಕೆಲವು ನಾಯಕರು, ಈ ಪರಿ ಹಣ ಖರ್ಚಾಗುತ್ತಿರುವುದನ್ನು ನೋಡಿ ಪ್ರಶ್ನೆಯೆತ್ತಿದ್ದಾರೆ. ಆಮೆಗತಿಯಲ್ಲಿ ಸಾಗಿರುವ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ವೇಗ ಕೊಡುವುದಕ್ಕಾಗಿ ಸಿಇಒ ನೇಮಕ ಮಾಡಬೇಕೆಂದು ರಾಷ್ಟ್ರಪತಿ ಕಾರ್ಯಾಲಯ ಆಜ್ಞೆ ನೀಡಿದೆ.
ಹೊಸ ನಳಂದ, ಜ್ಞಾನ ಸೃಷ್ಟಿ ಮತ್ತು ಭಾರತೀಯ ಭಾಷೆಗಳ ಏಳ್ಗೆಯತ್ತ ಗಮನ ಕೊಡುವ ಕೇಂದ್ರವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಭಾರತೀಯರು. ಅಲ್ಲ, ಪಶ್ಚಿಮವನ್ನು ಅನುಕರಿಸುವುದೇ ನಮ್ಮೆದುರಿಗಿರುವ ದಾರಿಯೇ?


- ಜೆ. ಎಸ್. ರಜಪೂತ್
ಮಾಜಿ ನಿರ್ದೇಶಕರು, ಎನ್‌ಸಿಇಆರ್‌ಟಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement