ಮತ ಸಮರದಲ್ಲಿ ಕೃಷಿಗೆಲ್ಲಿ ಜಾಗ?
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕಾರಣಿಗಳು...
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕಾರಣಿಗಳು ಜನಸೇವೆಯ ಕಾಳಜಿಯನ್ನು ಹೆಚ್ಚು ಹೆಚ್ಚು ವ್ಯಕ್ತಪಡಿಸತೊಡಗುತ್ತಾರೆ. ಈ ಬಾರಿಯೂ ಅದು ನಡೆದೇ ಇದೆ. ನಿವೃತ್ತ ಯೋಧರ ವಿಷಯದಲ್ಲಿ ಒಂದು ಶ್ರೇಣಿ- ಒಂದು ಪಿಂಚಣಿ, ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿ ಬಡ ಕುಟುಂಬಕ್ಕೆ ಗೋದಿ/ಅಕ್ಕಿ/ಧಾನ್ಯಗಳನ್ನು ಕೊಡುವ ಯೋಜನೆ, ಏಳನೇ ವೇತನ ಆಯೋಗದ ಮೂಲಕ ಕೇಂದ್ರಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ, ಜಾಟ್ ಸಮುದಾಯಕ್ಕೆ ಮೀಸಲು.... ಹೀಗೆ ಕಸರತ್ತುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದು ಚುನಾವಣಾ ಕೊಡುಗೆ ಕಾಲ. ನೀವು ಸಂಘಟಿತರಾಗಿದ್ದಷ್ಟೂ, ವಿಸ್ತಾರದ ಮತಬ್ಯಾಂಕ್ಗೆ ಸೇರಿದವರಾಗಿದ್ದಷ್ಟೂ ನಿಮಗೆ ಹರಿದುಬರುವ ಪುಕ್ಕಟ್ಟೆ ಕೊಡುಗೆಗಳ ಪ್ರಮಾಣ ದೊಡ್ಡದಿರುತ್ತದೆ.
ಆದರೆ ಒಂದು ವಿಚಿತ್ರ ಕಾಡುತ್ತಿದೆ. ದೇಶದ ಜನಸಂಖ್ಯೆಯ ಬಹುದೊಡ್ಡ ಭಾಗವಾಗಿರುವ ರೈತ ಸಮುದಾಯವನ್ನು ಮಾತ್ರ ಇಂಥ ಆಕರ್ಷಣೆಗಳಿಂದ ಉಪೇಕ್ಷಿಸಲಾಗಿದೆ. ದೇಶದ ಜನಸಂಖ್ಯೆಯ ಶೇ. 54 ಭಾಗ ತುಂಬುವ, ಭೂರಹಿತ ಕೂಲಿಗಳನ್ನೂ ಸೇರಿಸಿ 60 ಕೋಟಿ ಜನಸಂಖ್ಯೆ ರೈತಾಪಿ ಸಮುದಾಯಕ್ಕೆ ಬಾಯ್ಮಾತಿನ ಅನುಕಂಪವನ್ನು ಮೀರಿ ಏನನ್ನೂ ನೀಡಲಾಗಿಲ್ಲ. ಕೇವಲ ಯುಪಿಎ ಸರ್ಕಾರ ಎಂದಲ್ಲ, ಪ್ರಮುಖ ರಾಜಕೀಯ ಪಕ್ಷಗಳ್ಯಾವುವೂ ದೇಶದ ಕೃಷಿ ಬಿಕ್ಕಟ್ಟುಗಳಿಗೆ ಪರಿಹಾರ ಒದಗಿಸುವ ನಿಖರ ಆರ್ಥಿಕ ಕ್ರಮಗಳ ಬಗ್ಗೆ ಮಾತನಾಡುತ್ತಿಲ್ಲ. ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ ಎಂಬ ಮಾತು ನಿಜವಾದರೂ ರೈತರನ್ನು ತಮ್ಮ ನೀಲನಕ್ಷೆಯಲ್ಲಿ ತೊಡಗಿಸಿಕೊಂಡಿರುವ ರಾಜಕೀಯ ಪಕ್ಷಗಳು ಸದ್ಯಕ್ಕೆ ಕಣ್ಣಿಗೆ ಬೀಳುತ್ತಿಲ್ಲ.
ಇದ್ದಿದ್ದರಲ್ಲಿ ನರೇಂದ್ರ ಮೋದಿಯವರು ಮೀರತ್ನ ಸಮಾವೇಶದಲ್ಲಿ ಮಾತನಾಡುತ್ತ ಕಬ್ಬಿಗೆ ಹೆಚ್ಚಿನ ಬೆಲೆ ದೊರಕಿಸಿಕೊಡುವ ಬಗ್ಗೆ ಹೇಳಿದರು. 5 ಸಾವಿರ ಕೋಟಿ ರುಪಾಯಿಗಳ ಮಾರುಕಟ್ಟೆ ಸ್ಥಿರತೆಯ ನಿಧಿಯೊಂದನ್ನು ಸ್ಥಾಪಿಸಿದರೆ ಅದು ರೈತರಿಗೆ ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ ಎಂಬುದವರ ಅಭಿಮತ. ವಾಣಿಜ್ಯ ಬೆಳೆಗಳನ್ನು ಪ್ರೋತ್ಸಾಹಿಸಿ, ಗುಜರಾತ್ ಮಾದರಿಯ ಕೃಷಿಯನ್ನು ಬೇರೆಡೆಯೂ ಪ್ರಯೋಗಿಸುವ ಇಂಗಿತವನ್ನೂ ಅವರು ಹೊರಹಾಕಿದ್ದಾರೆ.
ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯವರು ತಮ್ಮ ಭಾಷಣಗಳಲ್ಲಿ ಯುವ ಜನತೆ ಹಾಗೂ ಮಹಿಳೆಯರ ಸಬಲೀಕರಣದ ಬಗ್ಗೆ ಬಹಳ ಮಾತನಾಡುತ್ತಿದ್ದಾರಾದರೂ ತಮ್ಮ ಮಾತಿನ ಪ್ರಮುಖ ಗಮನವನ್ನು ಕೃಷಿಯ ಸುತ್ತ ಇರಿಸಿ ರೈತರಿಗೆ ಭರವಸೆ ಉಕ್ಕಿಸುವ ಕೆಲಸವನ್ನು ಈವರೆಗೂ ಮಾಡಿಲ್ಲ. ಪಂಜಾಬ್ನಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರು ಕೃಷಿ ಸಬ್ಸಿಡಿಯನ್ನು ಕಡಿತಗೊಳಿಸುವುದಕ್ಕೆ ವಿರೋಧಿಸಿದ್ದಾರೆ. ಅಲ್ಲಿನ 1.92 ಕೋಟಿ ಮತದಾರರ ಪೈಕಿ ಅರ್ಧದಷ್ಟು ಮಂದಿ ರೈತರೇ ಇರುವುದರಿಂದ ಈ ಹೆಜ್ಜೆ. ದಶಕಗಳವರೆಗೆ ನೆನೆಗುದಿಗೆ ಬಿದ್ದುಕೊಂಡಿದ್ದ 7200 ಟ್ಯೂಬ್ವೆಲ್ ಸಂಪರ್ಕಕ್ಕೂ ಅವರು ಸಮ್ಮತಿ ಇತ್ತಿದ್ದಾರೆ. ಅಲ್ಲದೇ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೀಡಬೇಕಿದ್ದ ಪರಿಹಾರ ಬಾಕಿ ಉಳಿದಿರುವುದನ್ನು ಚುಕ್ತಾ ಮಾಡುವುದಾಗಿಯೂ ಹೇಳಿದ್ದಾರೆ. ವಾರಗಳ ಕಾಲ ರೈತರು ಧರಣಿ ಕೂತ ಪರಿಣಾಮವಾಗಿ ಕೈಗೊಂಡ ನಿರ್ಧಾರ ಇದಾಗಿದೆ ಅಷ್ಟೆ.
ಮಧ್ಯ ಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣರು ಅತಿವೃಷ್ಟಿ ಹಾಗೂ ಪ್ರವಾಹದಿಂದ ಆಗಿರುವ ಬೆಳಹಾನಿಗೆ ಕೇಂದ್ರದಿಂದ 5 ಸಾವಿರ ಕೋಟಿ ರುಪಾಯಿ ಪರಿಹಾರ ಬರಬೇಕು ಎಂದು ಧರಣಿಗೆ ಕುಳಿತರು. ಇದೇ ಜಾಡಿನಲ್ಲೇ ಹಲವು ರಾಜ್ಯ ಸರ್ಕಾರಗಳು ರೈತರನ್ನು ಖುಷಿಗೊಳಿಸುವ ನಿಟ್ಟಿನಲ್ಲಿ ಹಲಬಗೆಯ ಪರಿಹಾರ ಪ್ಯಾಕೇಜುಗಳನ್ನು ಪ್ರಕಟಿಸುತ್ತಿವೆ. ಆದರೆ ಇವ್ಯಾವುವೂ ದೀರ್ಘಾವಧಿಯಲ್ಲಿ ಕೃಷಿ ಕ್ಷೇತ್ರದ ಸ್ಥಿರತೆ ವೃದ್ಧಿಸುವುದಕ್ಕಾಗಲೀ ಅಲ್ಲಿನ ಆದಾಯ ಅಸಮಾನತೆಯನ್ನು ನಿವಾರಿಸುವುದಕ್ಕಾಗಲೀ ಸಹಕರಿಸುವುದಿಲ್ಲ.
ಕೃಷಿಕ್ಷೇತ್ರವು ವಾಸ್ತವದಲ್ಲಿ ಬಹುದೊಡ್ಡ ಮತಬ್ಯಾಂಕ್ ಹೊಂದಿದೆಯಾದರೂ ರಾಜಕೀಯ ನೆಲೆಯಲ್ಲಿ ಹರಿದು ಹಂಚಿರುವುದರಿಂದ ರಾಜಕಾರಣಿಗಳ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಕೃಷಿ ಅಭ್ಯುದಯವನ್ನೇ ಮೂಲವಾಗಿರಿಸಿಕೊಂಡು ಒತ್ತಡ ಸೃಷ್ಟಿಸುವ ಬಲವಾಗಿ ಈ ಸಮುದಾಯ ಉಳಿದುಕೊಂಡಿಲ್ಲ. ಕೃಷಿ ವಲಯದಲ್ಲಿ ಸಂಘಟನೆಗಳ ನೇತೃತ್ವ ವಹಿಸಿರುವವರೂ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳಾಗಿ, ಓಲೈಕೆಯಲ್ಲಿ ತೊಡಗಿದ್ದಾರೆ. ಇದೂ ಕೃಷಿಕ್ಷೇತ್ರವು ರಾಜಕೀಯ ಶಕ್ತಿಯಾಗಿ ಬೆಳೆಯುವುದಕ್ಕೆ ಹಿನ್ನಡೆ ಉಂಟುಮಾಡಿರುವ ಬೆಳವಣಿಗೆ. ರೈತ ಕುಟುಂಬದ ಸರಾಸರಿ ಮಾಸಿಕ ಆದಾಯ ಕೇವಲ 2115 ರುಪಾಯಿಗಳಿಗೆ ಬಂದುಮುಟ್ಟಿರುವ, ಪ್ರತಿದಿನ 2500 ರೈತರು ಕೃಷಿಯನ್ನು ತೊರೆಯುತ್ತಿರುವ ಈ ಕಾಲಘಟ್ಟದಲ್ಲಿ ರಾಜಕೀಯ ಪಕ್ಷಗಳು ತಮ್ಮ ಕಾರ್ಯಸೂಚಿಯಲ್ಲಿ ಈ ವಲಯಕ್ಕೆ ಎಲ್ಲಿಲ್ಲದ ಪ್ರಾಮುಖ್ಯ ನೀಡಬೇಕಿತ್ತು. ದೇಶದ ಮೂರನೇ ಎರಡರಷ್ಟು ಜನಸಂಖ್ಯೆ ಬಡತನ ಮತ್ತು ಹಸಿವಿನಲ್ಲಿ ಇರುವಾಗ ಸೂಪರ್ ಪವರ್ ಆಗುವ ಕನಸು ಕಾಣುವುದಕ್ಕೆ ಅರ್ಥವೇ ಇರದು.
ಹಾಗೆಂದು, ಈಗ ಎಲ್ಲವೂ ಕಳೆದುಹೋಗಿಲ್ಲ. ದೇಶದಾದ್ಯಂತ ಇರುವ ಕೃಷಿ ಸಂಘಟನೆಗಳೆಲ್ಲ ಚುನಾವಣೆ ಹೊಸ್ತಿಲಿನಲ್ಲಿ ಒಂದೇ ಛತ್ರದ ಅಡಿ ಬಂದು, ತಮ್ಮ ನಿರ್ದಿಷ್ಟ ಬೇಡಿಕೆಗಳನ್ನು ರಾಜಕೀಯ ಪಕ್ಷಗಳ ಮುಂದಿಟ್ಟು, ಅವಕ್ಕೆ ತೃಪ್ತಿಕರ ಉತ್ತರ ನೀಡುವವರಿಗಷ್ಟೇ ಮತ ಹಾಕುತ್ತೇವೆ ಎಂಬ ಒತ್ತಡ ತರುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕೆಲವು ಆದ್ಯತೆಗಳನ್ನು ಹೀಗೆ ಪಟ್ಟಿ ಮಾಡಬಹುದಾಗಿದೆ.
- ರೈತರಿಗೆ ಗ್ಯಾರಂಟಿಯಾದ ಮಾಸಿಕ ಆದಾಯವೊಂದು ಸಾಧ್ಯವಾಗಬೇಕಿದೆ. ಹೀಗಾಗಿ ರೈತರ ಆದಾಯದ ರಾಷ್ಟ್ರೀಯ ಆಯೋಗದ ಸ್ಥಾಪನೆ ಮುಖ್ಯವಾಗುತ್ತದೆ. ವಿಶ್ವ ವ್ಯಾಪಾರ ಒಕ್ಕೂಟವು ರೈತರಿಗೆ ಬೆಂಬಲ ಬೆಲೆ ನೀಡುವುದನ್ನೇ ವಿರೋಧಿಸುತ್ತದೆ! ಅದೂ ಅಲ್ಲದೇ ಕನಿಷ್ಠ ಬೆಂಬಲ ಬೆಲೆ ಎಂಬುದು ಶೇಕಡ 30ರಷ್ಟು ರೈತರಿಗೆ ಮಾತ್ರವೇ ಲಭ್ಯ. ಅಂದಮೇಲೆ ಭಾರತೀಯ ರೈತರಿಗೆ ತಿಂಗಳಿಗೆ ಇಂತಿಷ್ಟೆಂಬ ನಿಖರ ಆದಾಯವೊಂದನ್ನು ಒದಗಿಸುವ ತುರ್ತು ಕೆಲಸ ಆಗಬೇಕಲ್ಲವೇ? ಉತ್ತರ ಪ್ರದೇಶದ ಸ್ವಚ್ಛತಾ ಕಾರ್ಮಿಕರಿಗೆ 18,500 ರುಪಾಯಿಗಳ ತಿಂಗಳ ಪಗಾರ ನಿಗದಿಪಡಿಸುವುದು ಮಾಯಾವತಿಯವರಿಗೆ ಸಾಧ್ಯವಾಗಿತ್ತು ಎನ್ನುವುದಾದರೆ ರೈತರೂ ಕೂಡ ನಿಗದಿತ ಆದಾಯ, ತುಟ್ಟಿಭತ್ಯೆ, ಆರೋಗ್ಯ ಮತ್ತು ವೈದ್ಯಕೀಯ ಸವಲತ್ತು ಹಾಗೂ ಪಿಂಚಣಿ ಲಾಭಗಳನ್ನು ಪಡೆಯುವಂತೆ ಮಾಡುವುದು ಅಸಾಧ್ಯವಲ್ಲ.
-ಪಂಜಾಬ್ ವ್ಯಾಪಾರ ಮಂಡಿಗಳನ್ನು ಸಂಪರ್ಕಿಸುವ ಉತ್ತಮ ರಸ್ತೆ ಜಾಲ ಹೊಂದಿರುವುದರಿಂದ ಅಲ್ಲಿನ ರೈತರಿಗೆ ಉತ್ತಮ ಬೆಲೆ ಒದಗಿಸುವುದು ಸಾಧ್ಯವಾಗುತ್ತಿದೆ. ರೈತರು ತಮ್ಮ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗೆ ಮಾರುವುದನ್ನು ಸಾಧ್ಯವಾಗಿಸುವ ಮಂಡಿ ಮತ್ತು ಮಾರುಕಟ್ಟೆಗಳ ಜಾಲವನ್ನು ದೇಶಾದ್ಯಂತ ಹಬ್ಬಿಸಬೇಕು. ಬಿಹಾರದಲ್ಲಿ ಮಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿವರ್ಷವೂ ರೈತರು ವ್ಯಾಪಾರಿಗಳಿಂದ ಶೋಷಣೆಗೆ ಒಳಗಾಗುತ್ತಾರೆ.
-ರಾಸಾಯನಿಕ ಕ್ರಿಮಿನಾಶಕಗಳು ಹಾಗೂ ರಸಗೊಬ್ಬರಗಳ ಅತಿಯಾದ ಬಳಕೆ ಭೂಮಿಯ ಫಲವತ್ತತೆಯನ್ನು ಕುಗ್ಗಿಸಿರುವುದಷ್ಟೇ ಅಲ್ಲ, ನೈಸರ್ಗಿಕ ಸಂಪತ್ತನ್ನು ಕುಂದಿಸಿ, ಅಂತರ್ಜಲ ಹಾಳುಗೆಡವಿ, ಆಹಾರ ಜಾಲವನ್ನೇ ಪ್ರದೂಷಿತಗೊಳಿಸಿ ರೋಗಗ್ರಸ್ತ ಸಮಾಜವನ್ನು ನಿರ್ಮಿಸಿದೆ. ಈ ನಿಟ್ಟಿನಲ್ಲಿ ಸುಸ್ಥಿರ ಕೃಷಿಗೆ ಮರಳಲು ಆಂಧ್ರಪ್ರದೇಶದ ಮಾದರಿಯನ್ನು ದೇಶದ ಇತರೆಡೆ ಜಾರಿಗೆ ತರಬೇಕಿದೆ. 35 ಲಕ್ಷ ಎಕರೆಗಳಿಗೂ ಮೀರಿದ ಜಾಗದಲ್ಲಿ ರೈತರು ಕೀಟನಾಶಕ ಉಪಯೋಗಿಸುತ್ತಿಲ್ಲ. ಅವರ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. ರಾಸಾಯನಿಕ ಕೀಟನಾಶಕಗಳನ್ನು ಬಳಸದ ಆಂಧ್ರದ ಈ ಭಾಗದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳೂ ನಡೆದಿಲ್ಲ.
-ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸುವುದಕ್ಕೆ ತಡೆ ಹಾಕಬೇಕಿದೆ. ಬೆಳವಣಿಗೆ ಮತ್ತು ನಗರೀಕರಣಗಳ ಭ್ರಮೆ ಹುಟ್ಟಿಸಿ ಕೃಷಿ ಭೂಮಿಯ ಸ್ವಾಧೀನ ಭಾರತದಲ್ಲಿ ಹೆಚ್ಚುತ್ತಿದೆ. ವಿದೇಶಿ ಕಂಪನಿಗಳಿಗೂ ಕೃಷಿ ಭೂಮಿ ಸ್ವಾಧೀನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದರ ಪರಿಣಾಮ ಮುಂಬರುವ ದಿನಗಳಲ್ಲಿ ಭೂತಾಕಾರವಾಗಿ ಕಾಡಲಿದೆ. ಭೂಸ್ವಾಧೀನದ ತನ್ನ ಈ ಹಿಂದಿನ ನೀತಿ ತಪ್ಪೆಂದು ಅರಿತ ಚೀನಾ ಇದೀಗ ಅವನ್ನೆಲ್ಲ ಸರಿಪಡಿಸಿಕೊಳ್ಳುತ್ತಿದೆ ಎಂಬುದನ್ನು ಗಮನಿಸಬೇಕು.
ಕೃಷಿಕ್ಷೇತ್ರದ ಉದ್ಯೋಗಗಳನ್ನು ಕಸಿದು ನಗರಗಳಲ್ಲಿ ನೀರ ಮೇಲಿನ ಗುಳ್ಳೆಯಂಥ ನೌಕರಿಗಳನ್ನು ಸೃಷ್ಟಿಸುವುದನ್ನೇ ಆರ್ಥಿಕ ಪ್ರಗತಿ ಎಂದು ಒಪ್ಪುವುದಕ್ಕೆ ಸಾಧ್ಯವಿಲ್ಲ.
ದೇವಿಂದರ್ ಶರ್ಮ
ಕೃಷಿವಲಯ ವಿಶ್ಲೇಷಕ