ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇಂದಿರಾ-ಹಿಟ್ಲರ್ ಹೋಲಿಕೆ ಮಾಡಿದ ಜೇಟ್ಲಿಯವರಿಗಿದೆಯೇ ಇತಿಹಾಸ ಪ್ರಜ್ಞೆ?

Vishwanath S
Updated On : 14 Mar 2014, 12:49 pm

ರಾಷ್ಟ್ರ ನಾಯಕಿಯಾಗಿ, ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಸಮರ್ಥ ಆಡಳಿತ ನೀಡಿ ಇಡೀ ಜಗತ್ತಿನಲ್ಲೇ "ಉಕ್ಕಿನ ಮಹಿಳೆ" ಎಂದು ಕೀರ್ತಿ ಪಡೆದ ಇಂದಿರಾಗಾಂಧಿಯವರನ್ನು ಬಿಜೆಪಿ ಮುಖಂಡರಾದ ಅರುಣ್ ಜೇಟ್ಲಿಯವರು 'ಹಿಟ್ಲರ್‌'ಗೆ ಹೋಲಿಸಿ ಟೀಕಿಸಿರುವುದು ಖಂಡನೀಯವಷ್ಟೇ ಅಲ್ಲ, ಇದು ಚುನಾವಣೆಯ ಸಂದರ್ಭದಲ್ಲಿ ಜನರನ್ನು ತಪ್ಪು ದಾರಿಗೆ ಎಳೆದು ರಾಜಕೀಯ ದುರ್ಲಾಭ ಮಾಡಿಕೊಳ್ಳುವ ಹುನ್ನಾರ ಎಂಬುದು ಸ್ಪಷ್ಟವಾಗುತ್ತದೆ. ಇಂದಿರಾಜಿಯವರನ್ನು ಹಿಟ್ಲರ್‌ಗೆ ಹೋಲಿಸಿರುವುದು ಜೇಟ್ಲಿಯವರ ಅಪ್ರಬುದ್ಧತೆಯ ಲಕ್ಷಣ. ಜೊತೆಗೆ ಇದು ಇತಿಹಾಸಕ್ಕೆ ಮಾಡುವ ಅಪಚಾರವೂ ಹೌದು.
ಇಂದಿರಾಜಿಯವರು ಪ್ರಧಾನಿಯಾಗಿ ಭಾರತದ ಏಕತೆ, ಸ್ವಾವಲಂಬನೆ, ಅಭಿವೃದ್ಧಿ ಮತ್ತು ಹಸಿರು ಕ್ರಾಂತಿಗೆ ಏನೆಲ್ಲ ಕೊಡುಗೆಗಳನ್ನು ನೀಡಿದ್ದಾರೆ ಎಂಬುದು ಜೇಟ್ಲಿಯವರಿಗೆ ಚರಿತ್ರೆ ಓದಿದ್ದರೆ ಅರ್ಥವಾಗಿರುತ್ತಿತ್ತು. ಇಂದಿರಾರ ಹೃದಯದಲ್ಲಿ ಕಡು ಬಡವರಿಗೆ, ದೀನದಲಿತರಿಗೆ ಶಾಶ್ವತ ಸ್ಥಾನವಿತ್ತು ಎಂಬುದಕ್ಕೆ ಅವರು ರೂಪಿಸಿದ 'ಗರೀಬಿ ಹಠಾವೋ', 20 ಅಂಶಗಳ ಕಾರ್ಯಕ್ರಮದ ಅನುಷ್ಠಾನ ಮುಂತಾದವುಗಳೇ ಸಾಕ್ಷಿ. ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಇಂದಿರಾಜಿಯವರು ಯಶಸ್ವಿಯಾಗಿ ಅನುಷ್ಠಾನಗೊಳಿಸಿದಾಗ ಅವರನ್ನು ಭಾರತದ ಉಕ್ಕಿನ ಮಹಿಳೆ ಎಂದು ವಿಶ್ವದಾದ್ಯಂತ ಅನೇಕ ಹಿರಿಯ ಮುಖಂಡರು ಪ್ರಶಂಸಿಸಿದರು. ಹಿಟ್ಲರ್ ಮನಃಸ್ಥಿತಿಯ ಲವಲೇಶವಾದರೂ ಇಂದಿರಾಜಿಯವರಲ್ಲಿದ್ದಿದ್ದರೆ ಅವರಿಂದ 'ಗರೀಬಿ ಹಠಾವೋ'ದಂತಹ ಬಡವರ ಕಲ್ಯಾಣ ಕಾರ್ಯಕ್ರಮಗಳು ರೂಪುಗೊಳ್ಳುವುದು ಸಾಧ್ಯವಿತ್ತೇ ಎಂಬುದನ್ನು ಜೇಟ್ಲಿಯವರು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
'ಹಿಟ್ಲರ್ ಆಡಳಿತದ ಇತಿಹಾಸ ರಾಹುಲ್ ಗಾಂಧಿಯವರಿಗೆ ತಿಳಿದಿರಲಿಕ್ಕಿಲ್ಲ' ಎಂದು ವ್ಯಂಗ್ಯವಾಡಿರುವ ಜೇಟ್ಲಿಯವರ ಇತಿಹಾಸ ಪ್ರಜ್ಞೆಯ ಬಗ್ಗೆಯೇ ನಮಗೆ ಸಂದೇಹ ಉಂಟಾಗುವುದು ಸಹಜ, ಏಕೆಂದರೆ ಬಿಜೆಪಿಯ ಶ್ರೇಷ್ಠ ನಾಯಕರಲ್ಲೊಬ್ಬರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೇ  ಇಂದಿರಾಜಿಯವರ ಬಗ್ಗೆ ಮುಕ್ತ ಮನಸ್ಸಿನಿಂದ ಪ್ರಶಂಸಿಸಿದ್ದಾರೆ. ಈ ಇತಿಹಾಸ ಜೇಟ್ಲಿಯವರಿಗೆ ಗೊತ್ತಿಲ್ಲವೇ?
ಸ್ವತಃ ಅಟಲ್ ಅವರೇ ಇಂದಿರಾರನ್ನು ಹೇಗೆ ಮುಕ್ತ ಕಂಠದಿಂದ ಹೊಗಳಿದ್ದರು ಎಂಬುದನ್ನು ಜೇಟ್ಲಿಯವರಿಗೆ ಇಲ್ಲಿ ನಾನು ಮತ್ತೊಮ್ಮೆ ಇತಿಹಾಸದ ಪುಟಗಳಿಂದ ನೆನಪಿಸಲು ಬಯಸುತ್ತೇನೆ.
ಅಟಲ್‌ಜೀ ಹೇಳಿದ್ದು: "ನಾನು ಸಂಸತ್ತಿನಲ್ಲಿ ಇಂದಿರಾರ ಜೊತೆ ಪದೇ ಪದೇ ಸಂಘರ್ಷಕ್ಕಿಳಿದದ್ದುಂಟು. ಆದರೆ ರಾಜಕೀಯ ಭಿನ್ನಾಭಿಪ್ರಾಯ ನಮ್ಮ ವೈಯಕ್ತಿಕ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿಲ್ಲ. ಇಂದಿರಾಜಿಯವರ ಹತ್ಯೆ ಅರ್ಹ ತಂದೆಯ ಅರ್ಹ ಮಗಳಲ್ಲನ್ನದೇ, ತನ್ನ ಸಾಮರ್ಥ್ಯ, ಕೌಶಲ್ಯ, ದೃಢತೆಗೆ ಹೆಸರಾಗಿದ್ದ ವ್ಯಕ್ತಿಯೊಬ್ಬರನ್ನು ನಮ್ಮ ನಡುವಿನಿಂದ ಹಠಾತ್ತನೇ ಎಳೆದೊಯ್ದಿತು. ಸ್ವತಂತ್ರ ಬಾಂಗ್ಲಾ ದೇಶದ ನಿರ್ಮಾಣದಲ್ಲಿ ಅವರ ಪಾತ್ರ ಯಾವತ್ತೂ ಸ್ಮರಣೀಯ. ಪಾಕಿಸ್ತಾನವನ್ನು ಸೋಲಿಸಲು ಅವರು ದೃಢ ಸಂಕಲ್ಪ ಕೈಗೊಂಡಿದ್ದರು. ಕ್ಲಿಷ್ಟ ಸಂದರ್ಭದಲ್ಲಿ ಅಧಿಕಾರ ನಡೆಸಿ ಇಡೀ ಜಗತ್ತೇ ಬೆರಗಾಗುವಂತೆ ಕೆಲಸ ಮಾಡಿದ್ದರಲ್ಲದೇ ಅನೇಕ ಸಲ ಪ್ರತಿಪಕ್ಷಗಳನ್ನೂ ವಿಸ್ಮಯಗೊಳಿಸಿದ್ದರು"
ವಾಜಪೇಯಿವರ ಈ ಎರಡೇ ವಾಕ್ಯಗಳಲ್ಲಿ, ಅವರು ಇಂದಿರಾರ ಬಗ್ಗೆ ಎಷ್ಟೊಂದು ಗೌರವಾದರಗಳನ್ನು ಇಟ್ಟುಕೊಂಡಿದ್ದರು ಎಂಬುದು ಎಂತಹವರಿಗಾದರೂ ಅರ್ಥವಾಗುತ್ತದೆ. ಆದರೆ ದುರದೃಷ್ಟವಶಾತ್ ಅದೇ ಪಕ್ಷದ ಹಿರಿಯ ಮುಖಂಡರಾದ ಜೇಟ್ಲಿಯವರಿಗೆ ಇದೆಲ್ಲ ಮರೆತಿರುವುದಕ್ಕೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದೇ ಕಾರಣವಾಗಿರಬಹುದೇ?
ಇನ್ನು ತುರ್ತು ಪರಿಸ್ಥಿತಿಯ ಸಂದರ್ಭವನ್ನು ಜರ್ಮನಿಯ ನಾಜಿಗಳ ಆಡಳಿತಕ್ಕೆ ಜಾಣ ಹೋಲಿಕೆ ಮಾಡಿದ ಜೇಟ್ಲಯವರು ಆ ಕಾಲದ ಸಂದಿಗ್ಧ ರಾಜಕೀಯ ವಿಪ್ಲವಗಳನ್ನು ಅವಲೋಕಿಸಿದ್ದರೆ ಆಗ ತೆಗೆದುಕೊಂಡಿದ್ದ ನಿರ್ಧಾರಗಳ ಹಿಂದಿನ ನೈಜ ಕಾರಣಗಳೂ ಬೆಳಕಿಗೆ ಬಂದು ಸತ್ಯ ದರ್ಶನವಾಗುತ್ತಿತ್ತು. ಅಷ್ಟೇ ಅಲ್ಲ, ನಾಜಿ ಆಡಳಿತದ ಹಿಂಸಾಚಾರದ ನೆನಪು ಮಾಡಿಕೊಳ್ಳುವಾಗ ಜೇಟ್ಲಿಯವರಿಗೆ ಗೋಧ್ರಾ ನರಮೇಧದ ಘಟನೆ ಮರೆತು ಹೋಗಿರುವುದು ಸಹ ಆಶ್ಚರ್ಯವೆನಿಸುತ್ತದೆ.
ರಾಜಕಾರಣದಲ್ಲಿ ಟೀಕೆ, ಟಿಪ್ಪಣಿ, ಹೇಳಿಕೆ, ಪ್ರತಿಹೇಳಿಕೆಗಳು ಸಹಜ. ಆದರೆ ರಾಜಕಾರಣದ ಲಾಭಕ್ಕಾಗಿ ಸತ್ಯವನ್ನೇ ಮರೆಮಾಚುವಷ್ಟರ ಮಟ್ಟಿಗೆ ಜೇಟ್ಲಿಯವರಂತಹ ಹಿರಿಯ ಮುಖಂಡರು ಇಳಿದುಬಿಟ್ಟರೆ ಅದು ಇತಿಹಾಸದ ಪುಟಗಳ ಮೇಲೆ ಮೊಳೆ ಹೊಡೆದಂತಾಗುತ್ತದೆ. ಅಷ್ಟೇ ಅಲ್ಲ, ದುರುದ್ದೇಶಪೂರಕವಾಗಿ ವಾಸ್ತವತೆಯ ದಾರಿಯಿಂದ ಜನತೆಯನ್ನು ವಿಮುಖರನ್ನಾಗಿ ಮಾಡಿದಂತಾಗುತ್ತದೆ ಎಂಬುದು ನನ್ನ ಭಾವನೆ. ಇನ್ನಾದರೂ ಅನುಭವಿ ರಾಜಕಾರಣಿಗಳಾದ ನಾವು ಕೇವಲ ಪ್ರಚಾರದ ಬೆನ್ನತ್ತಿ ಹೋಗದೇ ಅತ್ಯಂತ ಜವಾಬ್ದಾರಿಯುತವಾಗಿ ರಾಜಕಾರಣದ ಆಗುಹೋಗುಗಳಲ್ಲಿ ಪಾಲ್ಗೊಳ್ಳೋಣ ಮತ್ತು ನಮ್ಮ ಹಿರಿಯ ತಲೆಮಾರಿನ ರಾಷ್ಟ್ರನಾಯಕರ ಬಗ್ಗೆ ನಮ್ಮ ಮಾತು ಕೃತಿಗಳಲ್ಲಿ ಗೌರವವನ್ನು ಬಿಂಬಿಸೋಣ. ಇದರಿಂದ ಮುಂದಿನ ತಲೆಮಾರಿನವರಿಗೂ ಉತ್ತಮ ಸಂದೇಶ ನೀಡಿದಂತಾಗುತ್ತದೆ. ಅಷ್ಟೇ ಅಲ್ಲ, ನಾವು ಮಾಡುವ ರಾಜಕಾರಣಕ್ಕೂ ಇದರಿಂದ ಗೌರವ ಸಿಗುತ್ತದೆ ಎಂಬುದಷ್ಟೇ ನನ್ನ ಈ ಲೇಖನದ ಕಳಕಳಿ.
- ಆರ್.ವಿ. ದೇಶಪಾಂಡೆ ಉನ್ನತ ಶಿಕ್ಷಣಪ್ರವಾಸೋದ್ಯಮ ಸಚಿವರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement