ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇಷ್ಟಕ್ಕೂ ಬುದ್ಧಿಜೀವಿಗಳು ಎಂದರೆ ಯಾರು?

ತಂತ್ರಜ್ಞಾನದ ಬಳಕೆ ಹಾಗೂ ಅದರ ವಿಶಿಷ್ಟ ಆಯಾಮಗಳು ನಮ್ಮ ದೈನಂದಿನ ಬದುಕಿನ ಬೇರ್ಪಡಿಸಲಾಗದ ಭಾಗಗಳಾಗಿವೆ.

Srinivasa Murthy VN
Updated On : 15 Mar 2014, 12:55 pm

ತಂತ್ರಜ್ಞಾನದ ಬಳಕೆ ಹಾಗೂ ಅದರ ವಿಶಿಷ್ಟ ಆಯಾಮಗಳು ನಮ್ಮ ದೈನಂದಿನ ಬದುಕಿನ ಬೇರ್ಪಡಿಸಲಾಗದ ಭಾಗಗಳಾಗಿವೆ. ಇಂಟರ್‌ನೆಟ್‌ನ ಹೊಸ ವೇದಿಕೆಯನ್ನು ಬಹಳ ಪ್ರಜ್ಞಾವಂತಿಕೆಯಿಂದ ಬಳಕೆ ಮಾಡಿಕೊಳ್ಳಬೇಕಿದೆ. ಎಚ್ಚರವಹಿಸಬೇಕಾದ ಒಂದು ಸಂಗತಿ ಎಂದರೆ ವೆಬ್‌ಸೈಟ್‌ನಂಥ ವೇದಿಕೆಯಲ್ಲಿ ಸಂವಾದಗಳು ರೂಪುಗೊಳ್ಳುತ್ತಿರುವಾಗ ಅವನ್ನು ಹ್ಯಾಕರ್‌ಗಳಿಂದ ಕಾಪಾಡಿಕೊಳ್ಳಬೇಕಾದ ತುರ್ತೂ ಇರುತ್ತದೆ.
ಅಂದಹಾಗೆ, ಈ ಹ್ಯಾಕರ್‌ಗಳು ಜಾಲಜಗತ್ತಿನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ ಎಂದಲ್ಲ. ನಮ್ಮೆಲ್ಲರ ಜಗತ್ತಿನಲ್ಲೂ ಅವರಿದ್ದಾರೆ. ರಾಷ್ಟ್ರನೀತಿಯ ಅತ್ಯಂತ ವಿಷಾದಕರ ವಾಸ್ತವವೇ ಇದು. ರಾಷ್ಟ್ರನೀತಿಯನ್ನು ನಿರೂಪಿಸುವ ಬೌದ್ಧಿಕ ವೇದಿಕೆಯನ್ನು ಹ್ಯಾಕರ್‌ಗಳು ಅಪಹರಿಸಿಬಿಟ್ಟಿದ್ದಾರೆ. ಕಳೆದ 60-70 ವರ್ಷಗಳಲ್ಲಿ ನಮ್ಮ ದೇಶದ ಬೌದ್ಧಿಕ ಪರಂಪರೆಯನ್ನು ಬೆರಳೆಣಿಕೆಯ ವ್ಯಕ್ತಿಗಳು ತಮ್ಮ ಒತ್ತೆಯಲ್ಲಿ ಇರಿಸಿಕೊಂಡಿದ್ದಾರೆ. ಇಂಥ ಹ್ಯಾಕಿಂಗ್ ಧೋರಣೆ ನಮ್ಮ ಸಮಾಜದಲ್ಲಿ ದಶಕಗಳಿಂದ ಉಪಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯನಾಗಿರುವುದು 'ಬೌದ್ಧಿಕ ವಲಯ'ಕ್ಕೆ ಸೇರುವುದಕ್ಕೆ 'ಅನರ್ಹತೆ' ಎಂದಾಗಿಬಿಟ್ಟಿದೆ. ಹೀಗಾಗಿ ನನ್ನನ್ನು 'ಅಬೌದ್ಧಿಕ ವ್ಯಕ್ತಿ' ಎಂದೋ ಬೌದ್ಧಿಕ ವಿರೋಧಿ ಎಂದೋ ಕರೆಯಬೇಕಾಗುತ್ತದೆ! ಏಕೆಂದರೆ ಸಮಕಾಲೀನ ಸಮಾಜದಲ್ಲಿ 'ಬುದ್ಧಿಜೀವಿಗಳು' ಎಂದು ಕರೆಸಿಕೊಳ್ಳುವ ಹಕ್ಕು ಕೆಲವರಿಗೆ ಮಾತ್ರವೇ ಇದೆ. ಅಲ್ಲದೇ, ಬುದ್ಧಿಜೀವಿಗಳು ಯಾರು ಹೌದು, ಇನ್ಯಾರಲ್ಲ ಎಂಬ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರವೂ ಇಂಥ ಕೆಲವರಿಗೆ ಮಾತ್ರವಿದೆ.
ಲೋಕ್ಪಾಲ್ ಜಾರಿಗೆ ಒತ್ತಾಯಿಸಿ ಅಭಿಯಾನ ನಡೆಯಿತಲ್ಲ, ಅದರಲ್ಲಿ ಈ ಬೌದ್ಧಿಕ ವಲಯದ ಜಾಯಮಾನವನ್ನು ಗುರುತಿಸಬಹುದು. 'ಬೌದ್ಧಿಕ ವಲಯ' ಎಂದು ಗುರುತಿಸಿಕೊಳ್ಳುವುದರ ಆಚೆಗಿನ ಅನಾಕರ್ಷಕ ಮಂದಿ ಇಂಥ ಗಹನ ವಿಷಯಗಳ ಬಗ್ಗೆ ಚರ್ಚಿಸುವ ಅರ್ಹತೆ ಪಡೆಯುತ್ತಾರಾದರೂ ಹೇಗೆ?! ಹೀಗಾಗಿ ನಮ್ಮಲ್ಲಿ ಹೆಚ್ಚಿನವರು ಈ ಆಕರ್ಷಕ ವೃತ್ತದಿಂದ ಆಚೆಯೇ ಉಳಿದಿದ್ದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ.
ಇರಲಿ. ಆದರೆ ಸತ್ಯದ ನಿರಂತರ ಅನ್ವೇಷಣೆಯಲ್ಲಿ ತೊಡಗಿರುವ ಯಾವುದೇ ವ್ಯಕ್ತಿಗೆ ಒಂದಂಶ ಸ್ಪಷ್ಟವಾಗಿರುತ್ತದೆ. ಏನೆಂದರೆ, ಸತ್ಯಕ್ಕೆ ಹಲವು ರೂಪಗಳಿವೆ. ಹೀಗಾಗಿ ಆತ ನಿಜಕ್ಕೂ ಅರಿವುಳ್ಳವನಾಗಿ ಹಾಗೂ ಜ್ಞಾನೋದಯ ಹೊಂದಿರುವವನ ಜಾಯಮಾನದಲ್ಲಿ ಆಲೋಚಿಸುತ್ತಾನೆ. ಆತನಿಗೆ ಯಾವುದೇ ಹಣೆಪಟ್ಟಿಗಳು ಬೇಕಾಗುವುದಿಲ್ಲ. ಯಾರಾದರೂ ಆತನಿಗೆ ಬುದ್ಧಿಜೀವಿ ಅಂತ ಪ್ರಮಾಣಪತ್ರ ಕೊಡಲಿ ಎಂಬ ಅಪೇಕ್ಷೆ ಹುಟ್ಟುವುದಿಲ್ಲ. ಇಂಥದೊಂದು ಜ್ಞಾನೋದಯವು ಬುದ್ಧಿಕ್ಕಿಂತ ಹೆಚ್ಚಾಗಿ ಭಾವಕ್ಕೆ ವ್ಯಕ್ತವಾಗುವಂಥ ಸಂಗತಿ. ಇಂಥ ಜ್ಞಾನೋದಯಕ್ಕೆ ತೆರೆದುಕೊಂಡ ಆತ್ಮವು ಸತ್ಯವನ್ನು ಸಾರುವುದಕ್ಕೆ ಬೌದ್ಧಿಕ ಕಸರತ್ತುಗಳಲ್ಲಿ ತೊಡಗಿಕೊಳ್ಳುವುದಿಲ್ಲ. ಆತನ ಹೃದಯ ಪರಿಶುದ್ಧತೆ ಹಾಗೂ ಔನ್ನತ್ಯಗಳೇ ಸಂದೇಶವನ್ನು ರವಾನಿಸುತ್ತವೆ. ಸತ್ಯದ ನಿರಂತರ ಹುಡುಕಾಟದಲ್ಲಿ ತೊಡಗಿಸಿಕೊಂಡವರು ಮಾತ್ರವೇ ಬೌದ್ಧಿಕ ವ್ಯಕ್ತಿಗಳು ಅಥವಾ ಬುದ್ಧಿಜೀವಿಗಳೆನಿಸಿಕೊಳ್ಳುತ್ತಾರೆ. ಈ ಬೌದ್ಧಿಕ ಅನ್ವೇಷಣೆಯೇ ಅವರನ್ನು ಸಂತನ ಹಂತಕ್ಕೆ ಏರಿಸುತ್ತದೆ. ನಮ್ಮ ದೇಶದ ಪ್ರಾಚೀನ ಋಷಿಮುನಿಗಳು ಹೀಗೆ ಜ್ಞಾನೋದಯ ಹೊಂದಿರುವ ವರ್ಗಕ್ಕೆ ಸೇರುತ್ತಾರೆ.
ಇವತ್ತಿನ ತಥಾಕಥಿತ ಬುದ್ಧಿಜೀವಿಗಳ ಬೂಟಾಟಿಕೆಯನ್ನು ಈ ಹಂತದಲ್ಲಿ ಪ್ರಶ್ನೆ ಮಾಡಲೇಬೇಕಾಗುತ್ತದೆ. ಬಹಳ ವರ್ಷಗಳ ಹಿಂದೆ ಭಾರತದ ಪ್ರಮುಖ ಪತ್ರಕರ್ತರಾಗಿದ್ದ ಜನಾರ್ದನ ಠಾಕೂರ್ ಅವರು ಈ 'ಬುದ್ಧಿಜೀವಿ'ಗಳ ಬಗ್ಗೆ ಹೀಗೆ ಹೇಳಿದ್ದರು. 'ಇವರಿಗೆ ಎಡಚಿಂತನೆಯ ಇಮೇಜ್ ಬೇಕು. ಆದರೆ ಬಲವಾಗಿ ಇರುವವರ ಜೀವನಸುಖ ಬೇಕು.' ಈ ಮಾತು ಇವತ್ತಿಗೂ ಪ್ರಸ್ತುತವೆನಿಸುತ್ತದೆ. ಇವತ್ತಿನ ಬುದ್ಧಿಜೀವಿಗಳೆನಿಸಿಕೊಂಡವರ ದ್ವಂದ್ವನೀತಿ ಹಾಗೂ ಬೂಟಾಟಿಕೆಗಳು ಎಂಥ ಆಳಕ್ಕೆ ಇಳಿದಿವೆ ಎಂದರೆ ಅವರು ತಮ್ಮನ್ನು ತಾವು ಮಾರಿಕೊಳ್ಳುವುದಕ್ಕೆ, ವಿದೇಶಿ ಹಿತಾಸಕ್ತಿಗಳ ದಾಳವಾಗುವುದಕ್ಕೆ ಒಂದನಿತೂ ಹೇಸುತ್ತಿಲ್ಲ.
ಈ ನಿಟ್ಟಿನಲ್ಲಿ ದೃಷ್ಟಾಂತವೊಂದನ್ನು ಉಲ್ಲೇಖಿಸಿದರೆ ಪರಿಸ್ಥಿತಿಯ ನಿಖರ ಚಿತ್ರಣ ಸಿಗಬಹುದೇನೋ. ಒಂದಾನೊಂದು ಕಾಲದಲ್ಲಿ ಕಾಶ್ಮೀರವನ್ನು ಆಳುತ್ತಿದ್ದ ದೊರೆಗೆ ತನ್ನ ರಾಜ್ಯದಲ್ಲಿ ಪ್ರಕಾಂಡ ಪಂಡಿತನೊಬ್ಬ ಜೀವಿಸುತ್ತಿದ್ದಾನೆ ಎಂಬುದು ತಿಳಿದುಬಂತು. ಆದರೆ ಆತ ಕಡು ಬಡತನದಲ್ಲಿದ್ದಾನೆ ಎಂಬುದೂ ತಿಳಿದುಬಂತು. ಅಪಾರ ಧನಕನಕಗಳೊಂದಿಗೆ ಆ ಸಂತನ ಗುಡಿಸಲಿಗೆ ಹೋದ ರಾಜನು, ಅವನ್ನೆಲ್ಲ ಸ್ವೀಕರಿಸಿ ಆ ಬುದ್ಧಿವಂತ ವ್ಯಕ್ತಿ ತನ್ನ ದಾರಿದ್ರ್ಯವನ್ನು ನಿವಾರಿಸಿಕೊಳ್ಳಬೇಕು ಎಂಬುದಾಗಿ ಕೇಳಿಕೊಂಡ. ಇದನ್ನು ಕೇಳುತ್ತಲೇ ಆ ವ್ಯಕ್ತಿ ತನ್ನ ಹೆಂಡತಿಯತ್ತ ತಿರುಗಿ, 'ಗಂಟುಮೂಟೆ ಕಟ್ಟು. ನಾವು ಬೇರೆ ಊರಿಗೆ ಹೋಗೋಣ' ಎಂದ. ರಾಜನಿಗೋ ಈ ವರ್ತನೆಯಿಂದ ಆಘಾತ. ತನ್ನ ಸಾಮ್ರಾಜ್ಯವನ್ನು ತೊರೆದು ಹೋಗುವಂತಹ ತಪ್ಪನ್ನು ತಾನೇನು ಮಾಡಿದ್ದೇನೆ ಎಂದು ರಾಜ ಕೇಳಿದ. ಅದಕ್ಕೆ ಆ ಜ್ಞಾನದ ಆತ್ಮದ ಪ್ರತಿಕ್ರಿಯೆ ಹೀಗಿತ್ತು- 'ನಾನು ನನ್ನ ಅಸ್ತಿತ್ವದ ಬಗ್ಗೆ ಸಂತೃಪ್ತಿಯಿಂದಿದ್ದೇನೆ. ನೀನೂ ನಿನ್ನ ಅಸ್ತಿತ್ವ ಏನಿದೆಯೋ ಆ ಬಗ್ಗೆ ಸಂತೃಪ್ತಿಯಿಂದಿರು. ಇಲ್ಲದಿದ್ದರೆ ನಾನು ಸಾಮ್ರಾಜ್ಯ ತೊರೆಯಬೇಕಾಗುತ್ತದೆ.'
ಅನಾದಿ ಕಾಲದಿಂದ ನಮ್ಮ ನೆಲದಲ್ಲಿ ಜಾರಿಯಲ್ಲಿದ್ದ ಬೌದ್ಧಿಕ ಸಂಪ್ರದಾಯ ಈ ಬಗೆಯದ್ದಾಗಿತ್ತು! ನಮ್ಮ ಋಷಿಗಳು, ಗುರುಗಳು ಯಾವ ಅಧಿಕಾರ ಕೇಂದ್ರ ಮೇಲೂ ಅವಲಂಬಿತರಾಗಿ ಇದ್ದಿರಲಿಲ್ಲ. ಅಧಿಕಾರ ಸೌಧದ ಮೇಲೆ ಬೆರಗನ್ನೂ ಇರಿಸಿಕೊಂಡಿರಲಿಲ್ಲ. ಹೀಗಾಗಿಯೇ ಎಂದಿಗೋ ಆಗಿಹೋದ ಆ ಋಷಿಗಳು ಮತ್ತು ಸಂತ ಪರಂಪರೆಯನ್ನು ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಧಿಕಾರ ಕೇಂದ್ರದ ಕೃಪಾಶ್ರಯವನ್ನು ಬಯಸಿ ಅದರ ಎದುರಿಗೆ ಮಂಡಿಯೂರಿದವರ ಬಗ್ಗೆ ಜನರ ಮನಸ್ಸಿನಲ್ಲಿ ಆದರ- ಗೌರವಗಳು ನೆಲೆಯಾಗಲೇ ಇಲ್ಲ. ಸ್ವತಂತ್ರ, ತಾರತಮ್ಯರಹಿತ, ಸತ್ಯವಂತರಿಗೆ ಮಾತ್ರವೇ ಜನರಿಂದ ಗೌರವ ಸಂದಾಯವಾಗಿದೆ.
ನಿಜವಾದ ಬುದ್ಧಿಜೀವಿಗಳಿಗೆ ಈ ಕೆಳಗಿನ ಅರ್ಹತೆಗಳು ಇರಬೇಕಾಗುತ್ತದೆ ಎಂಬುದ ನನ್ನ ಬಲವಾದ ನಂಬಿಕೆ.
1. ಪರಿಸರ ಮತ್ತು ಸ್ವಾತಂತ್ರ್ಯ: ಬುದ್ಧಿಜೀವಿಗಳ ಸುತ್ತಲಿನ ಪರಿಸರ ಹೇಗಿರಬೇಕು? ಸ್ವಾತಂತ್ರ್ಯ ಎಂಬುದು ಅಭಿಪ್ರಾಯಗಳನ್ನು ಮುಕ್ತವಾಗಿ ಪ್ರತಿಪಾದಿಸುವ ಅವಕಾಶವಾಗಿರುತ್ತದೆ. ಇದರಲ್ಲಿ ವಿರೋಧಿಗಳ ವಾದವನ್ನು ಆಲಿಸುವ, ಅದಕ್ಕೆ ಅವಕಾಶ ಕಲ್ಪಿಸುವ ಗುಣವೂ ಸೇರಿದೆ. ನಿಜವಾದ ಬುದ್ಧಿಜೀವಿ ಆಂತರಿಕ ಹಾಗೂ ಬಾಹ್ಯ ಸ್ವಾತಂತ್ರ್ಯಗಳಿಗೆ ತೆರೆದುಕೊಂಡಿರುತ್ತಾನೆ.
2. ವ್ಯಕ್ತಿತ್ವ: ಇದು ಬೌದ್ಧಿಕವಲಯದ ಅತಿಮುಖ್ಯ ಚಹರೆ ಆಗಬೇಕು. ಬುದ್ಧಿಜೀವಿಯ ವ್ಯಕ್ತಿತ್ವವು ಸಂಪೂರ್ಣ ಪ್ರಾಮಾಣಿಕತೆ ಹಾಗೂ ಬೂಟಾಟಿಕೆ ರಹಿತವಾಗಿರಬೇಕಾದದ್ದು ಅತ್ಯಗತ್ಯ. ತನ್ನ ತತ್ತ್ವವನ್ನು ಬರಹ, ಶಬ್ದ ಹಾಗೂ ಬೌದ್ಧಿಕ ಪ್ರತಿಕ್ರಿಯೆಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಲು ಸೋಲುವವನು ದೀರ್ಘಾವಧಿಗೆ ಉಳಿದುಕೊಳ್ಳಲಾರ.
3. ಹೋರಾಟ: 'ಯಃ ಕ್ರಿಯಾವಾನ್ ಸಃ ಪಂಡಿತಃ' ಎಂಬ ಸಂಸ್ಕೃತದ ಉಕ್ತಿ ಒಂದಿದೆ. ಯಾರು ಕ್ರಿಯಾಶೀಲನಾಗಿರುತ್ತಾನೋ ಅವನನ್ನು ಮಾತ್ರವೇ ತಿಳಿದವನು ಎಂದು ಒಪ್ಪಿಕೊಳ್ಳಬಹುದು. ಬುದ್ಧಿಜೀವಿಗಳು ಎನ್ನಿಸಿಕೊಂಡವರು ಸಮಾಜದ ಒಳಿತಿಗಾಗಿ ಯಾವತ್ತೂ ಕ್ರಿಯಾಶೀಲರಾಗಿ ಇರಬೇಕು. ಬೌದ್ಧಿಕತೆಯ ಜತೆಯಲ್ಲಿ ಹೋರಾಟಗಾರರಂತೆ ಅವರು ಕೆಲಸ ಮಾಡಬೇಕು.
ಮೇಲಿಂದ ಮೇಲೆ ನೋಡಬಹುದಾದ ಸಂಗತಿ ಎಂದರೆ ಈ ಬುದ್ಧಿಜೀವಿಗಳೆನಿಸಿಕೊಂಡವರು ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಿಬಿಡುತ್ತಾರೆ. ಆದರೆ ಆ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕೆ ಮಾತ್ರ ಅವರಲ್ಲಿ ಯಾವ ಸೂತ್ರಗಳೂ ಇದ್ದಿರುವುದಿಲ್ಲ. ನೆಪೋಲಿಯನ್ ಬೊನಾಪಾರ್ಟೆ ತಮ್ಮ ಮಿಲಿಟರಿ ಅಭಿಯಾನದಲ್ಲಿ ಹಲವು 'ಪರಿಣತ'ರೆನಿಸಿಕೊಂಡವರನ್ನೂ ಬೌದ್ಧಿಕ ವರ್ಗದವರನ್ನೂ ಇರಿಸಿಕೊಂಡಿದ್ದರು. ಅವರು ಯಾವುದು ತಪ್ಪು, ಯಾವುದು ಸರಿ ಅಂತೆಲ್ಲ ಗಂಟೆಗಟ್ಟಲೇ ಚರ್ಚೆ ಮಾಡುತ್ತಿದ್ದರು. ಒಮ್ಮೆ ನೆಪೋಲಿಯನ್, ತಮ್ಮ ಆ ಕ್ಷಣದ ಮಿಲಿಟರಿ ಕಾರ್ಯತಂತ್ರ ಹೇಗಿರಬೇಕು ಎಂಬ ನಿಖರ ಕಾರ್ಯತಂತ್ರವನ್ನು ಅಪೇಕ್ಷಿಸಿದಾಗ ಅವರಿಗೆ ಹೇಳುವುದಕ್ಕೆ ಏನಿರಲಿಲ್ಲ. ಇವತ್ತಿನ ಬುದ್ಧಿಜೀವಿಗಳ ಸ್ಥಿತಿಯೂ ಹೆಚ್ಚು ಕಡಿಮೆ ಹೀಗೆಯೇ ಇದೆ.
ಬದುಕನ್ನು ಸಮಕಾಲೀನ ನಗರೀಕೃತ ಭಾರತವು ಹೇಗೆ ಗ್ರಹಿಸುತ್ತಿದೆ ಎಂಬುದೂ ಬಹಳ ಮುಖ್ಯವಾಗುತ್ತದೆ. ಆಲೋಚನಾ ಧಾಟಿಯಲ್ಲಿ ಚಿಕ್ಕಮಟ್ಟಿಗಿನ ಸ್ಥಿತ್ಯಂತರವೊಂದು ಬುದ್ಧಿಜೀವಿಗಳ ಯೋಚನಾ ಪಾತಳಿಯನ್ನು ಬದಲಿಸಿ, ದೇಶದ ನೀತಿ ನಿರೂಪಣೆಯನ್ನೇ ಬೇರೆ ದಿಕ್ಕಿನಲ್ಲಿ ಒಯ್ಯುವ ಶಕ್ತಿಯನ್ನು ಹೊಂದಿರುತ್ತದೆ ಎಂಬುದನ್ನು ಧರ್ಮಪಾಲ್‌ಜಿ ಹೇಳಿದ್ದಾರೆ. ಅಂಕೆಯಿಲ್ಲದ ನಗರೀಕರಣವು ಕೇವಲ ವ್ಯಕ್ತಿಗಳು ಮತ್ತು ಕುಟುಂಬದ ಮೇಲಷ್ಟೇ ಪರಿಣಾಮವನ್ನು ಬೀರದೇ ಒಟ್ಟಾರೆ ಜೀವನ ವಿಧಾನವನ್ನೇ ಬದಲಿಸಿ ಭಾರತದಿಂದ ಭಾರತೀಯತೆಯನ್ನೇ ತೊಲಗಿಸುತ್ತಿದೆ. ಇವೆಲ್ಲದರ ಪರಿಣಾಮವನ್ನು ಇಡೀ ಪೀಳಿಗೆ ಎದುರಿಸಬೇಕಾಗುತ್ತದೆ.
ಕೆಲಕಾಲದ ಹಿಂದೆ ಕೈಗಾರಿಕೋದ್ಯಮಿಗಳ ಗುಂಪೊಂದರ ಜತೆ ಸಂವಾದ ನಡೆಸಿದ್ದೆ. ದೆಹಲಿಯ ಕ್ಯಾಪಿಟಲ್ ಕಾನ್‌ಸ್ಟಿಟ್ಯೂಷನ್ ಕ್ಲಬ್‌ಗೆ ಸೇರಿದ್ದ ಅವರೆಲ್ಲರೊಂದಿಗಿನ ಮಾತುಕತೆಯಲ್ಲಿ ವೈರುಧ್ಯವೊಂದನ್ನು ನಾನು ಪ್ರಮುಖವಾಗಿ ಪ್ರಸ್ತಾಪಿಸಿದ್ದೆ. ಕಳೆದ 10-11 ವರ್ಷದ ಅಂಕಿಅಂಶ ತೆಗೆದುಕೊಂಡರೆ ಸುಮಾರು ಲಕ್ಷಕ್ಕೂ ಮೀರಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ದೇಶದ ಸುಶಿಕ್ಷಿತ ಸಮುದಾಯದಲ್ಲಿ ಇದು ಸಣ್ಣದೊಂದು ಕಂಪನವನ್ನೂ ಸೃಷ್ಟಿಸಿಲ್ಲ. ಐಟಿ ವೃತ್ತಿಪರರು, ವ್ಯಾಪಾರಿ ಇಲ್ಲವೇ ಕೈಗಾರಿಕೋದ್ಯಮಿಗಳ ಪೈಕಿ ಕೆಲವೇ ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಂಡರು ಎಂದಿಟ್ಟುಕೊಳ್ಳೋಣ. ಆಗ ಅದೆಂಥ ಕೋಲಾಹಲ ಸೃಷ್ಟಿಯಾಗುವುದಲ್ಲವೇ? ನಮ್ಮ ಹೊಟ್ಟೆ ತುಂಬಿಸುವ ಲಕ್ಷ ಮಂದಿ ಅನ್ನದಾತರು ಪ್ರಾಣ ಬಿಟ್ಟಿದ್ದಾರೆ. ಆದರೆ ಈ ದೇಶದ ಜೀವನ 'ಏನೂ ಆಗಿಲ್ಲ ಬಿಡು' ಎಂಬಂತೆ ಮುಂದುವರಿಯುತ್ತದೆ ಎಂದಾದರೆ? ಕೇವಲ ನಾಲ್ಕೆ ಐಟಿ ಕಂಪನಿಗಳು ಬೆಂಗಳೂರನ್ನು ಬಿಡುವ ನಿರ್ಧಾರ ಪ್ರಕಟಿಸುತ್ತವೆ ಅಂತಿಟ್ಟುಕೊಳ್ಳಿ. ಆಗ ಮಾಧ್ಯಮ ಮತ್ತು ಬೌದ್ಧಿಕ ವಲಯದಲ್ಲಿ ಏಳುವ ಬೊಬ್ಬೆ ಎಂಥಾದ್ದು ಎಂಬುದನ್ನು ಕಲ್ಪಿಸಿಕೊಳ್ಳಿ. ಆದರೆ ಲಕ್ಷದ ಸಂಖ್ಯೆಯಲ್ಲಿ ಈ ದೇಶದ ರೈತರು ತಮ್ಮ ಕುಟುಂಬಗಳೊಂದಿಗೆ ಸಮಾಧಿ ಸೇರಿದರೆ ಅಧಿಕಾರ ಕೇಂದ್ರ ದೆಹಲಿ ಹಾಗೂ ದೇಶದ ಇತರ ಭಾಗಗಳಲ್ಲಿ ಸಣ್ಣದೊಂದು ತಲ್ಲಣದ ಅಲೆಯೂ ಏಳುವುದಿಲ್ಲವಲ್ಲ! ನಮ್ಮ ನಗರೀಕೃತ ಜೀವನವು ಬದುಕನ್ನು ಗ್ರಹಿಸುತ್ತಿರುವ ರೀತಿ ಹೇಗಿದೆ ಎಂಬುದರ ಪ್ರತಿಫಲನ ಇದು.
ಯಾವಾಗ ನಾವು ನಮ್ಮ ಪ್ರಾಚೀನ ವಿಚಾರಧಾರೆಗಳನ್ನು ತೊರೆದು ನೆಹರೂ ಪ್ರಣೀತ ವ್ಯವಸ್ಥೆಯನ್ನು ರೂಢಿಸಿಕೊಂಡೆವೋ ಆ ಕ್ಷಣದಲ್ಲೇ ಶುರುವಾದ ತಾಕಲಾಟವಿದು. ಅದು ನಮ್ಮ ನೆಲಕ್ಕೆ ಒಗ್ಗುವಂಥದ್ದೇ ಆಗಿರಲಿಲ್ಲ. ನೆಹರೂ ಮಾದರಿಯಲ್ಲೇ ನಮ್ಮ ಸಂಸ್ಥೆಗಳು, ಅಕಾಡೆಮಿಕ್ ವಲಯ ಹಾಗೂ ಮಾಧ್ಯಮವನ್ನು ರೂಪಿಸಿಕೊಂಡಿದ್ದರಿಂದಲೇ ಈ ಎಲ್ಲ ಪರಿಣಾಮಗಳನ್ನು ನಾವು ಅನುಭವಿಸಬೇಕಾಗಿ ಬಂದಿದೆ.
ಬೆಲ್ಜಿಯಮ್‌ನ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಬಾಲ ಗಂಗಾಧರ ಅವರು ಮಾರ್ಕ್ಸ್‌ವಾದಿ ವಿಚಾರಗಳ ಉಗ್ರ ಪ್ರತಿಪಾದಕರಾಗಿದ್ದರು. ಅನೇಕ ಪುಸ್ತಕಗಳ ಕೃತಿಕಾರರೂ ಆಗಿರುವ ಅವರು ಇದೀಗ ತಾವು ಮೂರು ದಶಕಗಳ ಕಾಲ ತಪ್ಪು ದಾರಿಯಲ್ಲಿ ನಡೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ನಮ್ಮ ಮನಸ್ಸು, ಸಾಮಾಜಿಕ ವಿಜ್ಞಾನ, ಯೋಚನಾ ಲಹರಿಗಳೇ ವಸಾಹತುಶಾಹಿ ಚಿಂತನೆಗೆ ಒಳಪಟ್ಟಿವೆ ಎಂಬುದನ್ನು ಅವರೀಗ ಸಾರಿ ಸಾರಿ ಹೇಳುತ್ತಿದ್ದಾರೆ.
ಈ ವಸಾಹತುಶಾಹಿ ವ್ಯವಸ್ಥೆಯಿಂದ ಮುಕ್ತರಾಗುವುದೇ ನಮ್ಮ ಮೇಲೆ ಈಗಿರುವ ಜವಾಬ್ದಾರಿ. ಎಡಪಂಥೀಯರೆಂದು ತಮ್ಮನ್ನು ಗುರುತಿಸಿಕೊಂಡವರೂ ಈಗ ಈ ವಸಾಹತುಶಾಹಿ ಚಿಂತನೆಗಳಿಂದ ಹೊರಬರುವ ಮಾತುಗಳನ್ನಾಡುತ್ತಿದ್ದಾರೆ ಎಂಬುದು ಗಮನೀಯ. ಒಬ್ಬ ನಿಜವಾದ ಬುದ್ಧಿಜೀವಿಗೆ ಎಡಪಂಥ- ಬಲಪಂಥಗಳೆಂಬ ವರ್ಗೀಕರಣಗಳೇ ಲಾಗೂ ಆಗುವುದಿಲ್ಲ. ಆತ ಸತ್ಯದ ಹಾದಿಯನ್ನು ಕ್ರಮಿಸುವುದಕ್ಕೆ ಯಾವ ಹಿತಾನುಭವಗಳ ಅಪೇಕ್ಷೆಯನ್ನೂ ಇಟ್ಟುಕೊಂಡಿರುವುದಿಲ್ಲ. ಸಂವಾದ ಮತ್ತು ಚರ್ಚೆಗಳು ನಮ್ಮ ದೇಶದ ನೈಜ ಸಂಪ್ರದಾಯ.
ನಾವು ಅಸ್ಪೃಶ್ಯತೆ ಬಗ್ಗೆ ಮಾತನಾಡುತ್ತೇವೆ. ಆದರೆ ಬೌದ್ಧಿಕ ವಲಯದಲ್ಲಿ ಲಾಗಾಯ್ತಿನಿಂದ ವಿಚಾರದ ಅಸ್ಪೃಶ್ಯತೆಜಾರಿಯಲ್ಲಿದೆ. ಈ ಐರೋಪ್ಯ ಮಾನಸಿಕತೆ ಬದಲಾಗಿ ನಮ್ಮ ಅಕಾಡೆಮಿಕ್, ಬೌದ್ಧಿಕ ವಲಯ ಹಾಗೂ ಆಡಳಿತ ಮಾದರಿಗಳಲ್ಲಿ ಬದಲಾವಣೆ ಬರಬೇಕಿದೆ. ಇದಕ್ಕೊಂದು ಬೌದ್ಧಿಕ ಮಹಾಯುದ್ಧವೇ ಅಗತ್ಯವಿದೆ. ನಮ್ಮ ಪ್ರಾಚೀನ ಬೌದ್ಧಿಕ ಪರಂಪರೆಯನ್ನು ಅಪ್ಪಿಕೊಳ್ಳುವುದು ಭಾರತಕ್ಕಷ್ಟೇ ಅಲ್ಲದೇ ಜಗತ್ತಿಗೆ ಹಿತವನ್ನುಂಟು ಮಾಡಬಲ್ಲ ಸಂಗತಿ. ಭ್ರಷ್ಟಾಚಾರ, ಅನೈತಿಕತೆ, ರಾಜಕೀಯ ಹಲ್ಲಾಹಲ್ಲಿಗಳು ದೇಶದಲ್ಲಿ ವಿಜೃಂಭಿಸುತ್ತಿದ್ದರೂ ಆಶಾದಾಯಕ ಬೆಳ್ಳಿಗೆರೆಯಂತೂ ಪ್ರೇರೇಪಿಸುತ್ತಲೇ ಇದೆ.
(ಇಂಡಿಯನ್ ಪಾಲಿಸಿ ಫೌಂಡೇಷನ್‌ನ ಉಪನ್ಯಾಸಮಾಲೆಯಲ್ಲಿ ಆರೆಸ್ಸೆಸ್‌ನ ಸಹ- ಸರಕಾರ್ಯವಾಹರಾದ ಲೇಖಕರು ಮಾತನಾಡಿದ್ದರ ಬರಹರೂಪ)

-ದತ್ತಾತ್ರೇಯ ಹೊಸಬಾಳೆ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement