ಯುದ್ಧಕಾಂಡದಲ್ಲಿ 'ಆಮ್ ಆದ್ಮಿ' ಕಥಾನಕವು...
ಭೂಲೋಕದಲ್ಲಿ ತಟ್ಟಿಮುಟ್ಟಿದಲ್ಲೆಲ್ಲಾ ಉಪಲಭ್ಯವಿರುವ ಭ್ರಷ್ಟಾಚಾರವೆಂಬ ಅನಾಚಾರವನ್ನೇ ತಮ್ಮ ಪಕ್ಷದ ಪ್ರಧಾನ ವಿಚಾರವಾಗಿಸಿಕೊಂಡು..
ಭೂಲೋಕದಲ್ಲಿ ತಟ್ಟಿಮುಟ್ಟಿದಲ್ಲೆಲ್ಲಾ ಉಪಲಭ್ಯವಿರುವ ಭ್ರಷ್ಟಾಚಾರವೆಂಬ ಅನಾಚಾರವನ್ನೇ ತಮ್ಮ ಪಕ್ಷದ ಪ್ರಧಾನ ವಿಚಾರವಾಗಿಸಿಕೊಂಡು ಏಕ್ದಮ್ ರಾಜಕೀಯಕ್ಕೆ 'ಇಳಿದು ಬಂದ' ಪಕ್ಷವೆಂದರೆ ಅದು ಆಮ್ ಆದ್ಮಿ ಪಾರ್ಟಿ. ಅಣ್ಣಾ ಹಜಾರೆಯೆಂಬ ಮುಗ್ಧ ವೃದ್ಧ ಭಾರತದ ವ್ಯವಸ್ಥೆಯನ್ನು 'ಗುಡಿಸಿ' ಸ್ವಚ್ಛಗೊಳಿಸುವ 'ಶುದ್ಧ' ಉದ್ದೇಶವನ್ನಿಟ್ಟುಕೊಂಡು ಹೊಟ್ಟೆಬಟ್ಟೆ ಕಟ್ಟಿಕೊಂಡು ನಡೆಸಿದ ದೇಶವ್ಯಾಪಿ ಚಳವಳಿಯ ಯಶಸ್ಸನ್ನೇ ಬಳುವಳಿಯಾಗಿ ಪಡೆದ ಕೇಜ್ರಿವಾಲರೆಂಬ ಕ್ರೇಜಿ ಮನುಷ್ಯ 'ಸುಯ್ ಟಬಕ್' ಅಂತ ದೆಹಲಿಯ ಗದ್ದುಗೆ ಏರಿ ಪುಸುಕ್ ಎಂದು ಜಾರಿಯೂ ಬಿದ್ದರು. ಈಗ ಪ್ರಧಾನಿಯಾಗುವ ಕನಸನ್ನು ಕಾಣುತ್ತಾ ತನ್ನ ಕನಸನ್ನು ಎಲ್ಲರಿಗೂ ಹೀಗಿದೆ ಎಂದು ರಾತ್ರೋರಾತ್ರಿ ಕಾಣಿಸಲು ಹೊರಟು ಹಲವರ ನಿದ್ದೆಗೆಡಿಸುತ್ತಿದ್ದಾರೆ.
ಅಷ್ಟಕ್ಕೂ ಈ 'ಅರವಿಂದ' ಅರಳಿದ್ದು ಕಮಲ ಅರಳುವ ಜಾಗದಲ್ಲೇ. ಅಂದರೆ ಕೆಸರಿನಲ್ಲೇ. ಆಚಾರವೇ ಸ್ವರ್ಗ, ಭ್ರಷ್ಟಾಚಾರವೇ ನರಕ ಎಂದು ಉದ್ದುದ್ದ ಘೋಷವಾಕ್ಯಗಳನ್ನು ಉದ್ಘೋಷಿಸುತ್ತಾ ಸ್ವಚ್ಛ ಆಡಳಿತ ನೀಡುತ್ತೇನೆಂಬ ವರಸೆ ಮತ್ತು ಭರವಸೆಯನ್ನು ನೀಡುತ್ತಾ 'ಪೊರಕೆ' ಹಿಡಿದರು. ಪೊರಕೆ ಕಂಡಕೂಡಲೇ ಸ್ತ್ರೀಯರ ನೆನಪಾಯಿತೋ ಏನೋ...(ವ್ಯಂಗ್ಯಚಿತ್ರಗಳಲ್ಲಿ ಹೆಂಡತಿಯಿಂದ ಪೊರಕೆ ಸೇವೆ ಮಾಡಿಸಿಕೊಳ್ಳುವ ಗಂಡಂದಿರ ಚಿತ್ರಗಳನ್ನು ಅವರು ನೋಡಿಯೇ ಇರುತ್ತಾರೆ ಬಿಡಿ). ಪೊರಕೆ ಹಿಡಿದು ಹೆಂಗಸರನ್ನೂ ಬಳಿ ಸಾರಿದರು. ದೆಹಲಿಯಲ್ಲಿ ಆದ ಕೆಲವು ಸ್ತ್ರೀದೌರ್ಜನ್ಯ ಪ್ರಕರಣಗಳನ್ನು ತಮ್ಮ ಬಂಡ(ಲ್)ವಾಳವಾಗಿಸಿಕೊಂಡು ಸ್ತ್ರೀಸುರಕ್ಷೆಯನ್ನೂ ತಮ್ಮ ಪ್ರಣಾಳಿಕೆಯಲ್ಲಿ ತುರುಕಿದರು.
ಜನಲೋಕಪಾಲ್ ಚಳವಳಿಯಲ್ಲಿ ಅಣ್ಣಾ ಉಪವಾಸ ಕೂತಿದ್ದಾಗ ಆಗಾಗ ವೇದಿಕೆಯ ಒಳ ಹೋಗಿ ಉದರಭರಣವನ್ನು ಮಾಡಿಕೊಂಡು ಹೊರಬಂದು ಕೈ ಮೇಲಕ್ಕೆತ್ತಿ ಅಲ್ಲಾಡಿಸಿ ಹೀರೋ ಥರಾ ಪೋಸ್ ಕೊಟ್ಟು ದೆಹಲಿಯ ಜನಮನವನ್ನು ಅನಾಮತ್ತಾಗಿ ಕನ್ಫ್ಯೂಸ್ ಮಾಡಿದ ಈ ಆಸಾಮಿ ಮೊದಮೊದಲು ನಿಜಕ್ಕೂ ಆಮ್ ಆದ್ಮಿಯೇ ಆಗಿದ್ದರು. ಆಮ್ ಆದ್ಮಿ ಕಟ್ಟಿದ ಮೇಲೆ ಬಡಾ ಆದ್ಮಿಯಾಗಿಬಿಟ್ಟರು. ಆ ಮೂಲಕ ಒಂದಿಷ್ಟು ಅಮೀರ್ ಆದ್ಮಿಗಳನ್ನೂ ತನ್ನತ್ತ ಸೆಳೆದು ಫಂಡಮೆಂಟಲ್(ಫಂಡ್ಮೆಂಟಲ್) ನಾಯಕರಾಗಿ ಬೆಳೆದರು. ಯಾವಾಗ ಅಣ್ಣಾ ಇನ್ನಷ್ಟು ದಿನ ಉಪವಾಸ ಕೂರಲಾರರು ಎಂಬ ಜ್ಞಾನೋದಯವಾಯಿತೋ ಅಂದಿನಿಂದಲೇ ಉಪವಾಸವಷ್ಟೇ ಅಲ್ಲ ಅವರ ಸಹವಾಸವೂ ಬೇಡವೆಂಬಂತೆ ತಾನೊಬ್ಬನೇ ದೂರ ಹೋಗಿ ಪಕ್ಷ ಸ್ಥಾಪಿಸಿಯೇಬಿಟ್ಟರು. ಅಣ್ಣಾ ಹಜಾರೆಯವರ ಬೆಂಬಲಿಗರಲ್ಲಿ ಒಂದಿಷ್ಟು ಹಜಾರ್ ಜನರನ್ನು ತನ್ನ ಸುತ್ತ ಸೇರಿಸಿ ರಾಜಕೀಯ ಅಂಗಳದೊಳಕ್ಕೆ ಮೀಸೆಯನ್ನು ತೂರಿಸಿ ನಿಧಾನಕ್ಕೆ ಒಳಸೇರಿಕೊಂಡುಬಿಟ್ಟರು.
ಇವರ ರಾಜಕೀಯ ಪ್ರವೇಶವನ್ನು ಮಾಧ್ಯಮಗಳು ಕಾಳಿದಾಸನನ್ನೂ ಮೀರಿಸುವಂಥಾ ಉಪಮೆಗಳಿಂದ, ಬಣ್ಣ ಬಣ್ಣದ ಮಾತುಗಳಿಂದ ಬಣ್ಣಿಸಿದ್ದೇ ಬಣ್ಣಿಸಿದ್ದು. "ಅಭ್ಯುತ್ಥಾನಗೊಂಡ ಭ್ರಷ್ಟಾಚಾರವೆಂಬ ಅಧರ್ಮದ ನಾಶಕ್ಕಾಗಿ ಭೂಮಿಯಲ್ಲಿ ಸಂಭವಿಸಿದ ಅಪರ ಶ್ರೀಕೃಷ್ಣಾವತಾರವೆಂಬಂತೆ, ರೋಗಗ್ರಸ್ತ ಸಮಾಜಕ್ಕೆ ಔಷಧಿಯನ್ನು ಕೈಯ್ಯಲ್ಲಿ ಹಿಡಿದುನಿಂತ ಧನ್ವಂತರಿಯಂತೆ, ಕಾಂಗ್ರೆಸ್ ಮತ್ತು ಬಿಜೆಪಿಯೆಂಬ ದೇಶದ ಮೂಲವ್ಯಾಧಿಗೆ ಮುಲಾಮೋ ಎಂಬಂತೆ, ಲಂಚ ಕೇಳುವವರನ್ನು ನಿರ್ಲಂಚ(ಲಂಚ್ಗೂ ಗತಿಯಿಲ್ಲದವ)ರನ್ನಾಗಿ ಮಾಡಬಲ್ಲ ಏಕೈಕ ಪುರಾಣ ಪುಣ್ಯ ಮಹಿಮನೋ ಎಂಬಂತೆ, ಶತಶತಮಾನಗಳಿಂದ ದೇಶದ ಉಬ್ಬಸಕ್ಕೆ ಕಾರಣವಾದ ಪಾರ್ಥೇನಿಯಮ್ಮನ್ನು ಬುಡ ಸಹಿತು ಕಿತ್ತು ಹಾಕುವ ಪಾರ್ಥನೋ ಎಂಬಂತೆ, ಕಮಲದ ಬದಲಿಗೆ ಹುಟ್ಟಿ ಬಂದ ಅರವಿಂದವೋ ಎಂಬಂತೆ, ಕಲಿಯುಗದ ಕಲ್ಕಿಯೋ.." ಎಂಬಿತ್ಯಾದಿ ಬಿರುದು ಬಾವಲಿಗಳ ಮೂಲಕ ರಾಷ್ಟ್ರೀಯ ಮಾಧ್ಯಮಗಳ ಬಾಯಲ್ಲಿ ಹಿಗ್ಗಾಮುಗ್ಗಾ ಹೊಗಳಿಸಿಕೊಂಡು, ಮಾಧ್ಯಮಗಳು ಹಾಕಿದ 'ಗಾಳಿ'ಯನ್ನೇ ತಮ್ಮ ಗಾಲಿಯಲ್ಲಿ ತುಂಬಿಸಿಕೊಂಡು ಹೊರಟೇಬಿಟ್ಟರು. ಹೀಗೆ ಹೊರಟ 'ಆಪ್' ವಾಹನವು ಹಳ್ಳಿ ಮೂಲೆಯನ್ನೂ ತಲುಪಿ ಕಂಡಕಂಡ ಜನಸಾಮಾನ್ಯರಿಗೆಲ್ಲ ಟೋಪಿ ಹಾಕಿ 'ನೀನೂ ಸಾಮಾನ್ಯ' ಎಂದು ಸರ್ಟಿಫಿಕೇಟ್ ಕೊಟ್ಟಿತು. ಅಲ್ಲಿಯವರೆಗೆ ತಾನು ಜನಸಾಮಾನ್ಯ ಎಂದು ಭಾವಿಸಿ ಕೈಕಟ್ಟಿ ಅರಳೀಕಟ್ಟೆಯ ಮೇಲೆ ಕುಳಿತಿದ್ದವರೆಲ್ಲ ತಮ್ಮ ಸಾಮಾನ್ಯತ್ವಕ್ಕೂ ಒಳ್ಳೆಯ ಬೆಲೆ ಬಂತೆಂದು ತಿಳಿದು ಮುಂಡಾಸನ್ನು ಕೊಡವಿ ತಾವೇ ತಾವಾಗಿ ಮುಂದೆ ಬಂದು ಟೊಪ್ಪಿಗೆ ತಲೆ ಕೊಟ್ಟರು.
ಟೊಪ್ಪಿಯೂ ಇವತ್ತಿನ ದಿನದಲ್ಲಿ ಪುಕ್ಕಟೆ ಸಿಗುವುದಿಲ್ಲ ಎಂದು ಅರಿವಾಗಲು ದೆಹಲಿ ಜನರಿಗೆ ಬಹಳ ಸಮಯ ಬೇಕಾಗಲಿಲ್ಲ. ಟೊಪ್ಪಿಯೂ ಹಾಕಿಸಿಕೊಂಡರು. ದುಡ್ಡನ್ನೂ ದೇಣಿಗೆ ರೂಪದಲ್ಲಿ ತೆತ್ತರು. ಚುನಾವಣೆಯಲ್ಲಿ ಮಾತ್ರ ಅಲ್ಲಿಯ ಮಹಾಜನತೆ ಅವರಿಗೂ ಬೇಸರವಾಗಬಾರದು, ಇವರಿಗೂ ಸಂತೋಷವಾಗಬಾರದು ಎಂಬ ರೀತಿಯಲ್ಲಿ ಮತ ಕೊಟ್ಟು ತಮ್ಮ ಕಾಲ ಮೇಲೆ ತಾವೇ ನೈಸಾಗಿ ಐಸ್ ಇಟ್ಟುಕೊಂಡರು. ಇತ್ತ ಯಾರದೋ ದುಡ್ಡು ಡೆಲ್ಲಿಯ ಜಾತ್ರೆ ಎಂಬಂತೆ ಚುನಾವಣೆ ಎದುರಿಸಿದ್ದ ಆಪಿಗಳಿಗೆ ಮೊದಲ ಬಾರಿ ಅಧಿಕಾರದ ರುಚಿ ನೋಡುವ ತವಕ. ಏನೆಲ್ಲ ಕಸರತ್ತು ಮಾಡಿ ಕುರ್ಚಿಯನ್ನೇ ತಮ್ಮೆತ್ತರಕ್ಕೆ ಬಗ್ಗಿಸಿ ಏರಿಯೂ ಆಯಿತು. ಏನೇನೋ ಮಾಡುತ್ತೇವೆಂದು ಹೇಳಿ ಅಧಿಕಾರ ಹಿಡಿದು ತಿಂಗಳೊಪ್ಪೊತ್ತಿನೊಳಗೇ ಬಾಲ ಸುಟ್ಟವರಂತೆ ಊರೆಲ್ಲಾ ಗದ್ದಲವೆಬ್ಬಿಸಿದ್ದೇ ಆಯಿತು. ದೆಹಲಿ ಮಹಾಜನತೆಗೆ ಉಚಿತ ಕರೆಂಟ್ ಸಿಕ್ಕಿತೋ ಇಲ್ಲವೋ ಅದರ ಶಾಕ್ ಅಂತೂ ಉಚಿತವಾಗಿಯೇ ಸಿಕ್ಕಿತು. ಅವರಿಗೆ ಮುಖ್ಯಮಂತ್ರಿ ಆಡಳಿತಕ್ಕಿಂತ ಮೇಲ್ಮಟ್ಟದ ರಾಷ್ಟ್ರಪತಿ ಆಡಳಿತದ ಕೊಡುಗೆ ಕೊಟ್ಟು ಕೈ ತೊಳೆದುಕೊಂಡುಬಿಟ್ಟರು ಕೇಜ್ರಿವಾಲ್.
ಕುಣಿಯಲಾಗದವಳಿಗೆ ನೆಲ ಡೊಂಕು. ಆಡಳಿತ ನಡೆಸಲು ಬಾರದವರಿಗೆ ಮೈ ತುಂಬಾ ಕೊಂಕು. ರಾಜನಾಗಿ ವಿರಾಜಿಸಲು ಹೊರಟವ ಅರಾಜಕತೆಯ ಮಂತ್ರ ಪಠಿಸುತ್ತಾ 'ಧರಣಿ' ಮಂಡಲ ಮಧ್ಯದೊಳಗೆ ಅಹೋರಾತ್ರಿ ಕೂತು ಸರ್ಕಾರವನ್ನೇ ಬೀದಿಗೆ ತಂದರು. ಆಡಳಿತ ನಡೆಸಬೇಕಾದವರೇ ಪ್ರತಿಪಕ್ಷಗಳಂತೆ ಪ್ರತಿಭಟನೆಗೆ ಕೂತು ನಡೆಸಿದ ಆ ನಾಟಕದಲ್ಲಿ ದ್ವಿಪಾತ್ರದಲ್ಲಿ ಮಿಂಚಿದರು ಕೇಜ್ರಿವಾಲ್. ವ್ಯವಸ್ಥೆಯನ್ನು ಬದಲಿಸುವುದು ಮಾತು ಬದಲಿಸಿದಷ್ಟು ಸುಲಭವಲ್ಲವೆಂದರಿತ ಸೀನಿಯರ್ ಮತ್ತು ಜ್ಯೂನಿಯರ್ ಆರ್ಟಿಸ್ಟ್ಗಳು 'ನಾವು ಯಾವುದಕ್ಕೂ ರಾಜಿಯಾಗುವುದಿಲ್ಲ' ಎಂದೆನ್ನುತ್ತಾ ರಾಜೀನಾಮೆ ಕೊಡುವ ವಿಷಯದಲ್ಲಿ ರಾಜಿಯಾದರು.
ಅಷ್ಟೊತ್ತಿಗೆ ರಾಜಕಾರಣಿಗಳ ನಿರುದ್ಯೋಗವನ್ನು ಹೋಗಲಾಡಿಸುವ ಲೋಕಸಭೆ ಚುನಾವಣೆಯೆಂಬ ಯೋಜನೆ ಜಾರಿಗೆ ಬಂತು. ದೆಹಲಿ ಆಳಲಾಗದಿದ್ದರೇನು ಇಡೀ ಭಾರತವನ್ನೇ ಆಳಬಲ್ಲೆವು ಎನ್ನುತ್ತಾ ಕಂಡಕಂಡವರನ್ನೆಲ್ಲ ಬೈದುಕೊಳ್ಳುತ್ತಾ ಈಗ ಊರೂರು ತಿರುಗುತ್ತಿದ್ದಾರೆ. ಸಾಮಾನ್ಯ ಜನತೆಯ ಮಟ್ಟಿಗೆ ನಿಜಕ್ಕೂ ಹೀರೋ ಆಗಬೇಕಿದ್ದ ಮತ್ತು ಬದಲಾವಣೆಯ ಸಣ್ಣ ಆಶಾವಾದ ಮೂಡಿಸಿದ್ದ ಆಪ್ ಇಂದು ನಿಜಕ್ಕೂ 'ಆಪತ್ಕಾಲ'ವನ್ನು ಎದುರಿಸುತ್ತಿದೆ. ತಾವು ಮಾತ್ರ ಯಾರನ್ನು ಬೇಕಾದರೂ ಪ್ರಶ್ನಿಸಬಹುದು ಆದರೆ ತಾವು ಮಾತ್ರ ಪ್ರಶ್ನಾತೀತರೆಂಬ ಅವರ ನಿಲುವೇ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೋದಲ್ಲೆಲ್ಲ ಏನಾದರೂ ಎಡವಟ್ಟು ಮಾಡಿಕೊಳ್ಳುವ ಈ ಎಡವಾದಿಗಳು ಅಧಿಕಾರಕ್ಕೂ 'ವಾಮ'ಮಾರ್ಗ ಹಿಡಿಯುತ್ತಿರುವಂತೆ ಭಾಸವಾಗುತ್ತಿದೆ. ಹದಿನೈದು ವರ್ಷ ಆಡಳಿತದ ಮೂಲಕ ಅಭಿವೃದ್ಧಿ ಕೈಗೊಂಡಿರುವ ಮೋದಿಯ ರಾಜ್ಯಕ್ಕೆ ನಲವತ್ತು ದಿನವೂ ಸುರಳೀತ ಆಡಳಿತ ಮಾಡಲಾಗದ ಕೇಜ್ರಿ ಅಲ್ಲಿ ಹೋಗಿ ನಾಲ್ಕು ದಿನದಲ್ಲೇ ಇಲ್ಲಿ ಏನೂ ಆಗಿಲ್ಲ ಎಂದು ಬಡಬಡಿಸುವ ಗಡಿಬಿಡಿಯನ್ನು ನೋಡಿದರೆ ಆತುರಗಾರನಿಗೆ ಬುದ್ಧಿಮಟ್ಟ ಎಂಬ ಮಾತು ನೆನಪಾಗುತ್ತದೆ. ಯಾವ ಕ್ಷೇತ್ರವಾದರೂ ಬೇರೂರಲು ಸ್ವಲ್ಪ ಸಮಯ ಹಿಡಿಯುತ್ತದೆ. ಅದಕ್ಕೂ ಕಾಯುವ ಸಹನೆಯಿಲ್ಲದವ ರಾಜಕೀಯದಲ್ಲಿ ಅಸ್ತಿತ್ವ ಕಂಡುಕೊಳ್ಳುವುದು ಕಷ್ಟವೇ ಸರಿ. ಇಷ್ಟು ದಿನ ಶೀಲಾ ದೀಕ್ಷಿತ್ ಹಿಂದೆ ಬಿದ್ದಿದ್ದ ಇವರು ಈಗ ಮೋದಿಯ ಬೆನ್ನಿಗೆ ಬಿದ್ದಿದ್ದಾರೆ. ಯಶಸ್ವೀ ಪುರುಷರ ಹಿಂದೆ ಹೋಗಿ ಬೊಂಬಡ ಹೊಡೆದರೆ ಎಲ್ಲರೂ ಗಮನಿಸುತ್ತಾರೆ ಎಂಬ 'ವ್ಯವಹಾರ ಜ್ಞಾನ' ಅವರಿಗಿದೆ. ಹಾಗಾಗಿಯೇ ವಿಮಾನದಲ್ಲಿ ಹಾರಿ ಬಂದು ಜನರಲ್ ರೈಲಿನಲ್ಲಿ ತೂರಿಕೊಂಡು ಅಲ್ಲಿರುವ ಸಾಮಾನ್ಯರನ್ನೂ ಕೆಳಕ್ಕೆ ತಳ್ಳಿ, ಮುನ್ಸೂಚನೆ ಇಲ್ಲದೇ ಮುಖ್ಯಮಂತ್ರಿಗಳ ಮನೆಗೆ ಮಾಧ್ಯಮದವರ ಜೊತೆ ನುಗ್ಗಿ ಗಲಾಟೆ ಎಬ್ಬಿಸಿ ಇಡೀ ದಿನ ಟಿ.ವಿ.ಯಲ್ಲಿ ಕಾಣಿಸಿಕೊಳ್ಳಲು ಏನು ಬೇಕೋ ಅದನ್ನೆಲ್ಲ ಮಾಡುವ ಈ ಸುದ್ದಿಜೀವಿಗಳ ಅರ್ಹತೆ ಏನು ಎಂಬುದನ್ನು ಜನತೆ ಸದ್ಯದಲ್ಲೇ ನಿರ್ಧರಿಸಲಿದೆ.
ಆದಾಗ್ಯೂ ಆಪ್ ಎನ್ನುವುದು ಕೆಲವು ನಿರಾಶ್ರಿತರ ಪುನರ್ವಸತಿ ಕೇಂದ್ರವಾಗಿರುವುದರಿಂದ ಚುನಾವಣೆ ಮುಗಿಯುವ ತನಕವಂತೂ ಅದರ ಅಸ್ತಿತ್ವವಿರುವುದು ಪಕ್ಕಾ. ಬಿಜೆಪಿ, ಕಾಂಗ್ರೆಸ್, ತೃತೀಯರಂಗ ಈ ಮೂರೂಬಿಟ್ಟವರು ಸೇರಿಕೊಳ್ಳುವ ಪಕ್ಷವಾಗುತ್ತಿರುವುದು ಆಮ್ ಆದ್ಮಿ ಪಕ್ಷದ ಭವಿಷ್ಯವನ್ನು ಸೂಚಿಸುತ್ತದೆ. ಭಾರತದ ಹಣೆಬರಹವೇ ಇಷ್ಟು ಎನ್ನುವಂತೆ ಮಾಡಿರುವ ಇಂಥ ಘಟನೆಗಳು ಮನದಲ್ಲಿ ಮೂಡುವ ಸಣ್ಣ ಆಶಾವಾದದ ಎಳೆಯನ್ನೂ ಕತ್ತರಿಸಿ ಹಾಕುತ್ತವೆ. ನಿಜಕ್ಕೂ ನಮಗೆ ದುರ್ಬಲರ, ಬಡವರ, ಶೋಷಿತರ, ಮಧ್ಯಮವರ್ಗದವರನ್ನು ಪ್ರತಿನಿಧಿಸುವ ಶುದ್ಧ, ಪ್ರಾಮಾಣಿಕ ನಾಯಕರನ್ನು ಒಳಗೊಂಡ ಒಂದು ಪಕ್ಷದ ಅಗತ್ಯವಿತ್ತು. ಆದರೆ ಅಂಥ ಆಸೆಯನ್ನು ಹುಟ್ಟಿಸಿದ್ದ ಆಪ್ ಬಾಯಲ್ಲಿ ನೀರೂರಿಸುವ ಕೈಗೆಟುಕದ ಹುಣಸೇಹಣ್ಣಿನಂತಾಗಿದೆ ಎಂಬುದು ಮಾತ್ರ ಆತಂಕದ ವಿಷಯವೇ.
-ವಿಶ್ವನಾಥ ಸುಂಕಸಾಳ
sunkasalvishwa@gmail.com