ಆರೆಸ್ಸೆಸ್-ನರೇಂದ್ರ ಮೋದಿ ಮತ್ತೊಂದಿಷ್ಟು ಲೆಕ್ಕಾಚಾರ
ಆರೆಸ್ಸೆಸ್- ಬಿಜೆಪಿ ಯಾವತ್ತೂ ವಿಶ್ಲೇಷಕರ ಪಾಲಿಗೆ ವಸ್ತುವನ್ನು ಒದಗಿಸುತ್ತಲೇ ಇರುತ್ತವೆ. ವಿರೋಧಿಗಳು ಬಿಜೆಪಿ ಅಧಿಕಾರದಲ್ಲಿದ್ದರೆ ಆರೆಸ್ಸೆಸ್ನ ಮೂಲಕ ಕೋಮುಹಿಂಸೆ ಮಾಡಿಸುತ್ತದೆ ಎಂದು ಆರೋಪಿಸುವುದು ಮೊದಲಿನಿಂದ ನಡೆದು ಬಂದಿದ್ದು. ಇದಕ್ಕೆ ಪ್ರತಿಯಾಗಿ ಆರೆಸ್ಸೆಸ್ ತಾನು ಬಿಜೆಪಿಗೆ ಆಗೀಗ ಸಲಹೆಗಳನ್ನು ಕೊಡುವ ಸಾಂಸ್ಕೃತಿಕ ಘಟಕ ಮಾತ್ರ ಎಂದು ಪ್ರತಿಪಾದಿಸುತ್ತ ಬಂದಿದೆ.
ಆರೆಸ್ಸೆಸ್- ಬಿಜೆಪಿಯನ್ನು ಒಂದೇ ನೆಲೆಯಲ್ಲಿ ಟೀಕಿಸುವವರೂ ಅವೆರಡರ ನಡುವೆ ಭಿನ್ನಾಭಿಪ್ರಾಯ ಬಂದಿದೆ ಎಂಬ ಪುಕಾರು ಎದ್ದಾಗಲೆಲ್ಲ ಅದಕ್ಕೆ ಭಾರಿ ಮಹತ್ವ ಕೊಟ್ಟು ಚರ್ಚೆ ಮಾಡುತ್ತಾರೆ. ಇದೀಗ ಮಹಾಯುದ್ಧದ ಹಿನ್ನೆಲೆಯಲ್ಲಿ 'ಮೋದಿ-ಆರೆಸ್ಸೆಸ್' ನಡುವಿನ ಸಮೀಕರಣಗಳು ಚರ್ಚೆಯಾಗುತ್ತಿವೆ.
ಇತ್ತೀಚೆಗೆ ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗ್ವತ್ ಅವರು, 'ನಮೋ- ನಮೋ ಎಂದು ಪಠಿಸುವುದೇ ಸಂಘದವರ ಆದ್ಯತೆ ಆಗಬಾರದು' ಎಂಬ ಕಿವಿಮಾತು ಹೇಳಿದರೆಂಬುದು ವರದಿಯಾಗಿತ್ತು. ನರೇಂದ್ರ ಮೋದಿಯವರ ವೈಭವದ ಉಪಸ್ಥಿತಿ ಸಂಘಕ್ಕೆ ಕಿರಿಕಿರಿ ಉಂಟುಮಾಡಿದೆಯೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿತ್ತು. ಅದರ ಬೆನ್ನಲ್ಲೇ ಆರೆಸ್ಸೆಸ್ ಸ್ಪಷ್ಟನೆಯೊಂದನ್ನು ನೀಡಿ, ವ್ಯಕ್ತಿ ವೈಭವದ ಹೊರತಾಗಿಯೂ ಮಾಡಬೇಕಾದ ಸಾಮಾಜಿಕ ಕಾರ್ಯಗಳಿವೆ ಎಂಬರ್ಥದಲ್ಲಿ ಹೇಳಿದ್ದ ಸರಸಂಘಚಾಲಕರ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿತು. ಈ ಹಿನ್ನೆಲೆಯಲ್ಲಿ ಮಾಧ್ಯಮದಲ್ಲಿ ಪ್ರಕಟವಾಗುತ್ತಿರುವ ಒಂದೆರಡು ಅಭಿಪ್ರಾಯಗಳನ್ನು ಇಲ್ಲಿ ಗಮನಿಸಬಹುದಾಗಿದೆ.
----
'ಆರೆಸ್ಸೆಸ್ ವಿಭಿನ್ನ ಮೋದಿ ಅಲೆಯೊಂದನ್ನು ಎದುರಿಸುತ್ತಿದೆ' ಎಂಬ ಶೀರ್ಷಿಕೆಯಲ್ಲಿ ನೀಲಾಂಜನ ಮುಖೋಪಾಧ್ಯಾಯ ಅವರು ಬಿಸಿನೆಸ್ ಸ್ಟ್ಯಾಂಡರ್ಡ್ನಲ್ಲಿ ಅಂಕಣವೊಂದನ್ನು ಬರೆದಿದ್ದಾರೆ. ಮೋದಿಯ ಜೀವನ ಚರಿತ್ರಕಾರರೂ ಆಗಿರುವ ಅವರ ಅಭಿಪ್ರಾಯದ ಸಾರಸಂಗ್ರಹ ಹೀಗಿದೆ: 'ಬರುವ ಅಕ್ಟೋಬರ್ನಲ್ಲಿ ತನ್ನ ತೊಂಬತ್ತನೆಯ ವರ್ಷ ಪ್ರವೇಶಿಸಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತೀಯ ರಾಜಕಾರಣವನ್ನು ಪ್ರಭಾವಿಸುವುದಕ್ಕೆ ಕಾರ್ಯತಂತ್ರ ಮರುಪರಿಶೀಲನೆ ಮಾಡಬೇಕಾಗುವುದೇನೋ. ತುರ್ತು ಪರಿಸ್ಥಿತಿ ವಿರೋಧದಲ್ಲಿ ಭಾಗವಹಿಸಿದ್ದ ಇದರ ನಾಯಕರು ರಾಜಕಾರಣದ ನೀತಿಗಳನ್ನು ಆ ಮೂಲಕ ಪ್ರಭಾವಿಸಿದ್ದರು. 1980ರ ನಂತರದ ದಿನಗಳಲ್ಲಿ ಬಿಜೆಪಿ ಆಂತರಿಕ ವಿಷಯಗಳಲ್ಲೂ ಅದು ನಿರ್ಧಾರ ಹೇಳುವಂತಾಗಿತ್ತು. 1998ರ ವಾಜಪೇಯಿ ಸರ್ಕಾರದಲ್ಲಿ ಕೆಲವರನ್ನು ಮಂತ್ರಿಯಾಗಿ ತೆಗೆದುಕೊಳ್ಳುವಂತೆ ಸೂಚಿಸುವುದಕ್ಕೆ ಅಂದಿನ ಆರೆಸ್ಸೆಸ್ ಮುಖ್ಯಸ್ಥರಾಗಿದ್ದ ಕೆ. ಎಸ್. ಸುದರ್ಶನ ಅವರು ತಡರಾತ್ರಿ ವಾಜಪೇಯಿ ನಿವಾಸಕ್ಕೆ ಭೇಟಿ ಇತ್ತಿದ್ದೊಂದು ಉದಾಹರಣೆ. ಆದರೆ ವಾಜಪೇಯಿ ಅವರು ಎರಡನೇ ಬಾರಿ ಪ್ರಧಾನಿ ಆದಾಗ ಬಿಜೆಪಿ ಮೇಲೆ ಆರೆಸ್ಸೆಸ್ ಪಟ್ಟು ಸಡಿಲವಾಗಿತ್ತು. ಈ ಅವಧಿಯಲ್ಲೇ ವಾಜಪೇಯಿ ಅವರು ಗುಜರಾತ್ ಗಲಭೆಗೆ ಪ್ರತಿಯಾಗಿ ನರೇಂದ್ರ ಮೋದಿಯವರನ್ನು ಪದಚ್ಯುತರನ್ನಾಗಿಸಲು ವಿಫಲ ಪ್ರಯತ್ನ ಮಾಡಿದರು. ಆಗ ನರೇಂದ್ರ ಮೋದಿಯವರ ಬೆನ್ನಿಗೆ ಆರೆಸ್ಸೆಸ್ ದೃಢವಾಗಿ ನಿಂತಿತ್ತು. 2002 ಡಿಸೆಂಬರ್ನಲ್ಲಿ ಮತ್ತೆ ಮೋದಿ ಅಧಿಕಾರಕ್ಕೆ ಬಂದಾಗ ತಮ್ಮ ಮಾಸ್ಟರ್ ತಾವೇ ಆಗಿರುವ ನಿರ್ಧಾರಕ್ಕೆ ಬಂದು ಆರೆಸ್ಸೆಸ್ನಿಂದ ಅಂತರ ಕಾಪಾಡಿಕೊಂಡರು.
ಆದರೆ ಮೋದಿ ಈಗಲೂ ಆರೆಸ್ಸೆಸ್ ಜತೆ ಸಂವಾದದಲ್ಲೇ ಇದ್ದಾರೆ. ಏಕೆಂದರೆ ಈ ಚುನಾವಣೆಯನ್ನು ಗೆಲ್ಲುವುದಕ್ಕೆ ಕಾಲಾಳು ಯೋಧರ ಬೃಹತ್ ಪಡೆ ಅವಶ್ಯ. ಅದನ್ನು ಆರೆಸ್ಸೆಸ್ ಮಾತ್ರವೇ ಒದಗಿಸಬಲ್ಲದು. ಕೊನೆಯಲ್ಲಿ ಮೋದಿಗೆ ಕೆಲಸ್ಥಾನಗಳು ಕಡಿಮೆಬಿದ್ದು ಅವರ ಬದಲು ಬೇರೊಬ್ಬರು ಪ್ರಧಾನಿಯಾದರೆ ಆರೆಸ್ಸೆಸ್ ತಲೆಕೆಡಿಸಿಕೊಳ್ಳದು. ಆದರೆ ಮೋದಿಗೆ ಬೃಹತ್ ಬಹುಮತ ಲಭ್ಯವಾದರೆ ಆರೆಸ್ಸೆಸ್ ಪ್ರಭಾವ ಮಂಕಾಗುತ್ತದೆ. ಅದಿಲ್ಲದಿದ್ದರೆ ಮೋದಿ ಆರೆಸ್ಸೆಸ್ಸಿಗರನ್ನು, ಇತರ ಮೈತ್ರಿಗಳ ಮಾತನ್ನು ಕೇಳುವ ಸಹನೆಯನ್ನು ಅನಿವಾರ್ಯವಾಗಿ ತೋರಬೇಕಾಗುತ್ತದೆ.'
---
'ಪ್ರಸ್ತುತ ನರೇಂದ್ರ ಮೋದಿ ಅಲೆ, ವಾಜಪೇಯಿ ಅಲೆಗಿಂತಲೂ ತೀಕ್ಷ್ಣವಾದದ್ದು. ಹೀಗಾಗಿ ಆರೆಸ್ಸೆಸ್ ಸಹ ಬಹಿರಂಗವಾಗಿ ಮೋದಿಯವರನ್ನು ಬೆಂಬಲಿಸಿ ಪ್ರಚಾರ ಮಾಡುವ ನಿರ್ಧಾರ ತೆಗೆದುಕೊಂಡಿದೆ'- ಇದು ರೀಡಿಫ್ ಜಾಲತಾಣದ ಸಂದರ್ಶನದಲ್ಲಿ ಬಿಜೆಪಿಯ ಮೈಸೂರು-ಕೊಡಗು ಲೋಕಸಭೆ ಅಭ್ಯರ್ಥಿ ಪ್ರತಾಪ್ ಸಿಂಹ ಅಭಿಪ್ರಾಯ.
----
ಆರೆಸ್ಸೆಸ್-ಬಿಜೆಪಿಗಳ ತುಲನೆ ಇಲ್ಲದಿದ್ದರೂ ಇವೆರಡಕ್ಕೂ ಸಂಬಂಧಿಸಿದ ವಿಷಯವೊಂದರ ಬಗ್ಗೆ ಫಸ್ಟ್ಪೋಸ್ಟ್ ಸಂಪಾದಕ ಆರ್. ಜಗನ್ನಾಥನ್ ಹೀಗೆ ಬರೆಯುತ್ತಾರೆ: ಈ ಬಾರಿ ಬಿಜೆಪಿ ಹಿಂದುತ್ವದ ಆಧಾರದಲ್ಲಿ ಮತ ಕೇಳುತ್ತಿಲ್ಲವಾದರೂ ಪಶ್ಚಿಮ ಬಂಗಾಳ, ಅಸ್ಸಾಮ್, ಬಿಹಾರಗಳಲ್ಲಿ ಹಿಂದುತ್ವದ ಗುಪ್ತಗಾಮಿನಿ ಕಾಣಬಹುದಾಗಿದೆ. ಈ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಮುಸ್ಲಿಮರ ಅಕ್ರಮ ವಲಸೆ, ಜನಸಂಖ್ಯೆ ಹೆಚ್ಚಳದಿಂದಾಗಿ ಹಿಂದುಗಳು ಅಲ್ಪಸಂಖ್ಯಾತರಾಗಿರುವುದರಿಂದ ಅವರ ಆತಂಕದ ಮತಗಳ ಇಡುಗಂಟು ಬಿಜೆಪಿಗೆ ದಕ್ಕಬಹುದು. ಹೀಗಾಗಿಯೇ ಅಸ್ಸಾಂ ಗಣ ಪರಿಷತ್ನ ಮೈತ್ರಿ ತೊರೆದು ಅಸ್ಸಾಮಿನಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆಗಿಳಿದಿದೆ. ಬಿಹಾರದಲ್ಲಿ ನಿತೀಶ್ ಜತೆ ಕಡಿದಿರುವ ಮೈತ್ರಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲದಿದ್ದರೂ ಮತ ಗಳಿಕೆ ಪ್ರಮಾಣ ಗಣನೀಯ ಹೆಚ್ಚಳ ಕಾಣಲಿದೆ. ಹಿಂದು ಮತಗಳ ಧ್ರುವೀಕರಣವೇ ಇವಕ್ಕೆಲ್ಲ ಕಾರಣ.