ಹೀಗೊಂದು ತೃತೀಯ ರಂಗದ ಸಭೆ...
ತೃತೀಯ ರಂಗದ ನಾಯಕರೆಲ್ಲರೂ ಸಭೆ ಸೇರಿದ್ದಾರೆ. ಹಿರಿಯ ಕಮ್ಯುನಿಸ್ಟ್ ನಾಯಕ...
ತೃತೀಯ ರಂಗದ ನಾಯಕರೆಲ್ಲರೂ ಸಭೆ ಸೇರಿದ್ದಾರೆ. ಹಿರಿಯ ಕಮ್ಯುನಿಸ್ಟ್ ನಾಯಕ ಪ್ರಕಾಶ್ ಕಾರಟ್ ಮಾತನಾಡಲಾರಂಭಿಸುತ್ತಾರೆ...
- ಪ್ರಕಾಶ ಕಾರಟ್: "ಎಲ್ಲಾ ಮಹನೀಯರಿಗೂ ವಂದನೆಗಳು. ಈಗ ಮೀಟಿಂಗ್ ಆರಂಭಿಸೋಣ."
ಮುಲಾಯಂಸಿಂಗ್: "ಈಗ ನಾವು ಒಟ್ಟು ಹನ್ನೊಂದು ಪಕ್ಷಗಳು ತೃತೀಯ ರಂಗದ ವೇದಿಕೆಯಲ್ಲಿ ಸೇರಿಕೊಂಡಿದ್ದೇವೆ. ಕಾಮ್ರೇಡ್ ಸಾಹೇಬರೆ ನನಗೆ ಈ ತೃತೀಯ ಎಂಬ ಶಬ್ದದ ಬಗ್ಗೆಯೇ ಆಕ್ಷೇಪವಿದೆ. ನಮ್ಮನ್ನು ನಾವು ತೃತೀಯ ಶಕ್ತಿ ಎಂದು ಕರೆದುಕೊಂಡರೆ ನಾವಾಗಿಯೇ ಒಂದು ಮತ್ತು ಎರಡನೆಯ ಸ್ಥಾನಗಳನ್ನು ಈ ಕಾಂಗ್ರೆಸ್ ಮತ್ತು ಬಿಜೆಪಿಗಳಿಗೆ ಬಿಟ್ಟು ಕೊಟ್ಟಂತಾಗುವುದಿಲ್ಲವೇ?! ಇದರ ಬದಲು ಬೇರೆ ಯಾವುದಾದರೂ ಹೆಸರನ್ನು ಇಡುವುದು ಒಳ್ಳೆಯದಿತ್ತು."
ದೇವೇಗೌಡ: "ಆದರೆ ಮುಲಾಯಂ ಭಾಯ್, ನೀವೇ ಯೋಚನೆ ಮಾಡಿ ನೋಡಿ. ಈಗ ಒಂದು ಹೆಚ್ಚೋ? ಮೂರು ಹೆಚ್ಚೋ?"
ಮುಲಾಯಂ: "(ಉಗುಳು ನುಂಗುತ್ತಾ) "ಮೂರೇ ಹೆಚ್ಚು".
ದೇವೇಗೌಡ: "ಅದಕ್ಕೇ ನಾನು ಹೇಳುವುದು. ತೃತೀಯ ರಂಗ ಎಂದು ಹೆಸರಿಡುವುದೇ ಹೆಚ್ಚು ಸೂಕ್ತ ಎಂದು."
ನಿತೀಶ್‌ಕುಮಾರ್: "ರೈಲಿನಲ್ಲಿ ತೃತೀಯ ದರ್ಜೆಯಲ್ಲಿ ಪ್ರಯಾಣ ಮಾಡುವವರು ಯಾರೆಂದರೆ ಈ ದೇಶದ ಜನಸಾಮಾನ್ಯರು. ಹಾಗಾಗಿ ತೃತೀಯ ರಂಗ ಎನ್ನುವುದೇ ಹೆಚ್ಚು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ ಸಹ ಆಗಿದೆ."
ಜಯಲಲಿತಾ: "ನಿತೀಶ್‌ಜೀ ತುಂಬಾ ಕಾಲ ರೈಲ್ವೆ ಮಂತ್ರಿಯಾಗಿದ್ದವರು. ಆದ್ದರಿಂದ ಅವರು ಎಲ್ಲದಕ್ಕೂ ರೈಲಿನ ಉದಾಹರಣೆಯನ್ನೇ ಕೊಡುತ್ತಾರೆ."
ಶರದ್ ಯಾದವ್: "ನೀವು ಯಾವ ವಿಚಾರ ತಗೊಂಡ್ರೂ ಕಾವೇರಿ ವಿವಾದಕ್ಕೆ ಹೋಗಿ ಮುಟ್ಟುವ ಹಾಗೆ."
ಸೀತಾರಾಮ ಯೆಚೂರಿ: "ಈಗ ತುಂಬಾ ವಿಷಯಾಂತರವಾಗುತ್ತಿದೆ. ಮೊದಲು ಮೀಟಿಂಗ್‌ನ ವಿಚಾರಕ್ಕೆ ಬರೋಣ."
ಜಯಲಲಿತಾ: "ದೇಶದ ಇತಿಹಾಸದಲ್ಲಿ ನಾವು ಎರಡನೆಯ ಬಾರಿಗೆ ತೃತೀಯ ರಂಗ ರಚಿಸಿದ್ದೇವೆ..."
ಮುಲಾಯಂ: " ನೋ, ನೋ. ಮೇಡಂ. ಎರಡನೆಯ ಬಾರಿಗಲ್ಲ. ಇದು ಮೂರನೆಯ ಬಾರಿಗೆ ತೃತೀಯ ರಂಗ ರಚನೆಯಾಗುತ್ತಿರುವುದು... ಹಿಂದೆ ಜನತಾ ಪಕ್ಷದಲ್ಲಿ... ನನ್ನ ಮಾತುಗಳನ್ನು ಕೇಳಿಸಿಕೊಳ್ಳಿ..."
(ಸಭೆಯಲ್ಲಿ ದೊಡ್ಡ ಗಲಾಟೆ ಏಳುವುದು. ಕೆಲವರು ಎರಡನೆಯ ಬಾರಿಗೆ ಎನ್ನುವರು. ಇನ್ನು ಕೆಲವರು ಮೂರನೆಯ ಬಾರಿಗೆ ಎನ್ನುವರು).
ನಿತೀಶ್‌ಕುಮಾರ್: ದಯವಿಟ್ಟು ನನ್ನ ಮಾತು ಕೇಳಿಸಿಕೊಳ್ಳಿ...
ಎ.ಬಿ. ಬರ್ಧನ್: "ಎಲ್ಲರಲ್ಲೂ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಈ ವಿಚಾರದ ಬಗ್ಗೆ ಚರ್ಚೆ ಬೇಡ. ಮುಂದಕ್ಕೆ ಹೋಗೋಣ." (ಸಭೆ ಕ್ರಮೇಣ ಶಾಂತವಾಗುವುದು).
ಶರದ್ ಯಾದವ್: "ಇವತ್ತಿನ ಮೀಟಿಂಗ್ ವಿಚಾರಕ್ಕೆ ಬರೋಣ. ಈ ಎಡಪಕ್ಷದವರು ಎಲ್ಲಿ?"
ಪ್ರಕಾಶ್ ಕಾರಟ್: "ನಿಮ್ಮ ಎಡಭಾಗದಲ್ಲಿಯೇ ಕೂತಿದ್ದೇವಲ್ಲ."
ನಿತೀಶ್ ಕುಮಾರ್: "ಎಡ ಪಕ್ಷದವರು ಯಾವಾಗಲೂ ಎಡಭಾಗದಲ್ಲಿಯೇ ಕೂತಿರುತ್ತಾರೆ."
ಸೀತಾರಾಂ ಯೆಚೂರಿ: "ಹೌದು, ಹೌದು. ಆದರೆ ಲೆಫ್ಟ್ ಪಾರ್ಟೀಸ್ ಆರ್ ಆಲ್‌ವೇಸ್ ಆನ್ ದ ರೈಟ್‌ಸೈಡ್ ಆಫ್‌ದ ಪಾಲಿಟಿಕ್ಸ್." (ಎಲ್ಲರೂ ನಗುವರು)
ದೇವೇಗೌಡ:" ಈಗ ಗಂಭೀರವಾಗಿ ವಿಚಾರಕ್ಕೆ ಬರೋಣ. ಮೋದಿ ಅಲೆಯನ್ನು ತಡೆಯುವ ಬಗೆ ಹೇಗೆ ಎಂದು ಎಲ್ಲರೂ ಯೋಚನೆ ಮಾಡಿ."
ಪ್ರಕಾಶ್ ಕಾರಟ್: "ಅಲೆ, ಯಾವ ಅಲೆ. ಅಂತಹ ಅಲೆ ಯಾವುದೂ ನಮಗೆ ಕಾಣುತ್ತಿಲ್ಲವಲ್ಲ!"
ನಿತೀಶ್ ಸಾಹೇಬರು: " ಸಮುದ್ರವನ್ನು ನಿತ್ಯವೂ ನೋಡುತ್ತಿರುವ ಕಾರಟ್ ಸಾಹೇಬರು ಹೇಳಿದರೆಂದ ಮೇಲೆ ಮುಗಿಯಿತು. ಅಂತಹ ಯಾವ ಅಲೆಯೂ ಇಲ್ಲ. ನಮ್ಮ ಬಿಹಾರದಲ್ಲಿ ಸಮುದ್ರವಿಲ್ಲದಿರುವುದರಿಂದ ಅಲೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ." (ಎಲ್ಲರೂ ನಗುವರು).
ದೇವೇಗೌಡ: " ಮೋದಿ ಅಲೆಯನ್ನು ಎದುರಿಸಲು ನಮಗೆ ಭಗವಂತನೇ ಇಂದು ಎಎಪಿ ಎಂಬ ಬ್ರಹ್ಮಾಸ್ತ್ರವನ್ನು ಕರುಣಿಸಿದ್ದಾನೆ."
ಯೆಚೂರಿ: "ನೋ, ನೋ ಇಲ್ಲಿ ದೇವರ ವಿಚಾರ ಪ್ರಸ್ತಾಪ ಮಾಡಬೇಡಿ. ತೃತೀಯ ರಂಗವೆಂದರೆ ಒಂದು ಪ್ರಬುದ್ಧ, ವಿಚಾರವಂತರ, ಪ್ರಗತಿಶೀಲರ ವೇದಿಕೆ ಎಂಬುದನ್ನು ನಾವು ಜನರೆದುರು ಬಿಂಬಿಸಬೇಕಾಗಿದೆ."
ನಿತೀಶ್ ಕುಮಾರ್: " ದೇವರನ್ನು ಬಿಡುವಂತಿಲ್ಲ. ನಮಗೆ ಬಹುಮತ ಸಿಗದೇ ಇದ್ದರೆ ನಾವು ದೇವಿಗೇ ಶರಣು ಹೋಗಬೇಕಲ್ಲ. ದೇವಿ ಎಂದರೆ ಸೋನಿಯಾ ದೇವಿಗೆ."
ಪ್ರಕಾಶ ಕಾರಟ್: "ಚರ್ಚೆ ದಿಕ್ಕು ತಪ್ಪುತ್ತಿದೆ. ಜಯಲಲಿತಾರವರೇ ನಿಮ್ಮ ಅಭಿಪ್ರಾಯಗಳೇನು? ಈ ಕಾಂಗ್ರೆಸ್ ಮತ್ತು ಬಿಜೆಪಿಗಳನ್ನು ಸೋಲಿಸಬೇಕೆಂಬ ನಮ್ಮ ಉದ್ದೇಶವನ್ನು ಸಾಧಿಸಲು ನಿಮ್ಮಲ್ಲಿರುವ ಸಲಹೆಗಳನ್ನು ತಿಳಿಸಿ."
ಜಯಲಲಿತಾ: "ನನ್ನ ಪ್ರಕಾರ, ಕಾಂಗ್ರೆಸ್‌ಗೆ ಪರ್ಯಾಯವಾಗಿ ನಾವು ಬಲವಾಗಿ, ಐಕ್ಯಗೊಂಡಿರುವ ತೃತೀಯ ರಂಗವನ್ನು ಜನರೆದುರು ಪ್ರಸ್ತುತಪಡಿಸಬೇಕಾಗಿದೆ. ಆಗ ಜನರು ನಮ್ಮನ್ನು ಆಯ್ಕೆ ಮಾಡುತ್ತಾರೆ. ಹಾಗಾಗ ಬೇಕಾದರೆ ತೃತೀಯ ರಂಗಕ್ಕೆ ಒಬ್ಬ ಬಲವಾದ ಲೀಡರ್ ಬೇಕು.
ಜನಸಂಖ್ಯೆಯ ಶೇ.50ರಷ್ಟು ಮಹಿಳೆಯರಿರುವುದರಿಂದ ಆ ಲೀಡರ್ ಮಹಿಳೆಯಾಗಿದ್ದರೆ ಒಳ್ಳೆಯದು. ಬಿಜೆಪಿ, ಕಾಂಗ್ರೆಸ್ ಎರಡೂ ಉತ್ತರ ಭಾರತದ ಪಕ್ಷಗಳು. ಹಾಗಾಗಿ ನಾವು ತೃತೀಯ ರಂಗಕ್ಕೆ ನಾಯಕರನ್ನಾಗಿ ಜವಾಬ್ದಾರಿ ಸ್ಥಾನಗಳನ್ನು ನಿರ್ವಹಿಸುವ ಅನುಭವವಿದ್ದರೆ ಒಳ್ಳೆಯದು"
ದೇವೇಗೌಡ: "ತೃತೀಯ ರಂಗಕ್ಕೆ ಲೀಡರ್ ಆಗುವವರು ಜಾತ್ಯತೀತ ಹಿನ್ನೆಲೆಯುಳ್ಳ ನಾಯಕರಾಗಿರಬೇಕು."
ಮುಲಾಯಂಸಿಂಗ್: " ಎಲ್ಲದಕ್ಕಿಂತ ಮುಖ್ಯವಾಗಿ ಪ್ರಧಾನಮಂತ್ರಿಯಾಗಿ ಯಾರನ್ನು ಬಿಂಬಿಸಬೇಕೆನ್ನುವುದು ಬಹುಮುಖ್ಯ ವಿಚಾರವಾಗಿದೆ. ನನ್ನ ಪ್ರಕಾರ ಯಾರಾದರೂ ತುಂಬಾ ತ್ಯಾಗ ಮಾಡಿದ ವ್ಯಕ್ತಿಯನ್ನು ಈ ಸ್ಥಾನಕ್ಕೆ ನಾವು ಆರಿಸಬೇಕು. ಉದಾಹರಣೆಗೆ ನನ್ನನ್ನು ನೋಡಿ. ರಾಷ್ಟ್ರ ರಾಜಕಾರಣದಲ್ಲಿ ಸೇವೆ ಸಲ್ಲಿಸಬೇಕೆಂದು ಉತ್ತರ ಪ್ರದೇಶದ ಸಿಎಂ ಪದವಿಯನ್ನು ತ್ಯಾಗ ಮಾಡಿದ್ದೇನೆ. ನನ್ನ ಬದಲು ನನ್ನ ಮಗನನ್ನು ಕೂರಿಸಿದ್ದೇನೆ. ಇಂತಹ ತ್ಯಾಗ ಮಾಡಿದವರನ್ನು ಆರಿಸಬೇಕು.
ನಿತೀಶ್‌ಕುಮಾರ್: "ತಮ್ಮ ಅಧಿಕಾರ ಹೋದರೂ ಪರವಾಗಿಲ್ಲವೆಂದು ಬಿಜೆಪಿಯನ್ನು ದೂರವಿಟ್ಟಂತಹ ನಾಯಕರನ್ನು ನಾವು ಆರಿಸಬೇಕು. ಬಿಹಾರದಲ್ಲಿ ನೋಡಿ. ಅಧಿಕಾರ ಹೋದರೂ ಪರವಾಗಿಲ್ಲವೆಂದು ನಾನು ಬಿಜೆಪಿಯೊಡನೆ ಇದ್ದ ಸಂಬಂಧಗಳನ್ನು ಕಡಿದುಕೊಂಡೆ." (ಮತ್ತಿಬ್ಬರು ನಾಯಕರು ಪ್ರಧಾನ ಮಂತ್ರಿ ಅಭ್ಯರ್ಥಿ ಬಗ್ಗೆ ತಮ್ಮ ಅಹವಾಲುಗಳನ್ನು ಮಂಡಿಸಲು ಎದ್ದು ನಿಲ್ಲುತ್ತಿದ್ದಂತೆ ಸಭೆಯಲ್ಲಿ ಕೋಲಾಹಲವುಂಟಾಯಿತು.)
ಪ್ರಕಾಶ ಕಾರಟ್: (ಗಟ್ಟಿ ಧ್ವನಿಯಲ್ಲಿ) "ಶಾಂತಿ. ಶಾಂತಿ. ಪ್ರಧಾನಿ ಪದವಿಗೆ ಅರ್ಹ ಅಭ್ಯರ್ಥಿಯನ್ನು ಆಮೇಲೆ ನಿರ್ಧರಿಸೋಣ. ಸದ್ಯಕ್ಕೆ ಈಗ ಮೀಟಿಂಗ್ ಮುಕ್ತಾಯವಾಗಿದೆ."
-ಹೆಚ್.ಕೆ. ದಿವಾಕರ ಹನಕೋಡು