ಕಾಂಗ್ರೆಸ್ ಸೋಲು ಇಷ್ಟು ನಿಶ್ಚಿತ ಎಂಬ ಸ್ಥಿತಿ ಹಿಂದೆಂದೂ ಇರಲಿಲ್ಲ
1952ರಿಂದ ಸ್ವತಂತ್ರ ಭಾರತದಲ್ಲಿ ನಡೆದ ಎಲ್ಲಾ ಸಾರ್ವತ್ರಿಕ ಚುನಾವಣೆಗಳಲ್ಲೂ ನಾನು...
1952ರಿಂದ ಸ್ವತಂತ್ರ ಭಾರತದಲ್ಲಿ ನಡೆದ ಎಲ್ಲಾ ಸಾರ್ವತ್ರಿಕ ಚುನಾವಣೆಗಳಲ್ಲೂ ನಾನು ಭಾಗಿಯಾಗಿದ್ದೇನೆ. ಆದರೆ ಇದುವರೆಗಿನ 15 ಚುನಾವಣೆಗಳ್ಯಾವುದರಲ್ಲೂ ಇಂದಿನಂತೆ 'ಕಾಂಗ್ರೆಸ್ನ ಸೋಲು ನಿಶ್ಚಿತ' ಎಂಬ ಸ್ಥಿತಿ ಎಂದೂ ಇರಲಿಲ್ಲ.
1970ರಲ್ಲಿ ರಾಜ್ಯಸಭೆಯ ಮೂಲಕ ನನ್ನ ಸಂಸತ್ ಯಾನ ಆರಂಭವಾಯಿತು. ಸಂಪೂರ್ಣವಾಗಿ ಎರಡು ಅವಧಿಯವರೆಗೆ ನಾನು ರಾಜ್ಯಸಭೆಯಲ್ಲಿದ್ದೆ. ತದನಂತರದ ಆರು ಸಾರ್ವತ್ರಿಕ ಚುನಾವಣೆಗಳಲ್ಲಿ ಗಾಂಧಿನಗರದಿಂದ ಲೋಕಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾದೆ. ಆದರೆ 11ನೇ ಲೋಕಸಭೆ ಚುನಾವಣೆಯ ವೇಳೆ ನನ್ನ ವಿರುದ್ಧ ಹವಾಲಾ ಆರೋಪ ಎದುರಾದಾದ್ದರಿಂದ, ನ್ಯಾಯಾಲಯ ನನ್ನನ್ನು ಈ ಹುಸಿ ಆರೋಪದಿಂದ ಮುಕ್ತಗೊಳಿಸುವವರೆಗೂ ಸಂಸತ್ತಿಗೆ ಕಾಲಿಡುವುದಿಲ್ಲ ಎಂದು ಘೋಷಿಸಿದೆ. ಹೀಗಾಗಿ, 1996ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಲಿಲ್ಲ. 8 ಏಪ್ರಿಲ್, 1997ರಲ್ಲಿ ದೆಹಲಿ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ಮೊಹಮ್ಮದ್ ಶಮೀಮ್, ಹವಾಲಾ ಹಗರಣದಲ್ಲಿ ನನ್ನ ವಿರುದ್ಧ ಮಾಡಲಾಗಿದ್ದ ಭ್ರಷ್ಟಾಚಾರದ ಆರೋಪವನ್ನು ರದ್ದುಪಡಿಸಿ ತೀರ್ಪು ನೀಡಿದರು.
ಈ ಬಗ್ಗೆ ಪಯೋನೀರ್ ಪತ್ರಿಕೆ ಬರೆದ ವರದಿ ಹೀಗಿತ್ತು: "ಸ್ವಚ್ಛ ಮತ್ತು ಪ್ರಾಮಾಣಿಕ ವ್ಯಕ್ತಿತ್ವದ ರಾಜಕೀಯ ನಾಯಕನ ಜೀವನದ ಮೇಲೆ ಮಾಡಲಾಗಿದ್ದ ವ್ಯವಸ್ಥಿತ ಸಂಚನ್ನು ನ್ಯಾಯಾಲಯ ನಿರಸ್ತ್ರಗೊಳಿಸಿದೆ. 70 ಪುಟಗಳ ಆ ತೀರ್ಪು ಆಡ್ವಾಣಿ ಅವರನ್ನು ಎಲ್ಲಾ ಆರೋಪಗಳಿಂದಲೂ ಮುಕ್ತಗೊಳಿಸಿದ್ದಷ್ಟೇ ಅಲ್ಲದೆ, ಆ ಆರೋಪ ವಿಚಾರಣೆಗೂ ಅನರ್ಹವಾದದ್ದು ಎಂದು ಹೇಳಿದೆ."
-----
ವರ್ಷದ ಹಿಂದೆ ಸ್ವತಂತ್ರ ಭಾರತದ 14 ಪ್ರಧಾನಿಗಳ ಬಗ್ಗೆ ನಾನು ಬರೆದ ಲೇಖನದ ಮುಕ್ತಾಯ ಭಾಗ ಹೀಗಿತ್ತು: ಒಂದು ವೇಳೆ ಯಾವುದೇ ರಾಜಕೀಯ ವಿಶ್ಲೇಷಕನೊಬ್ಬ ಅಟಲ್ ಬಿಹಾರಿ ವಾಜಪೇಯಿಯವರ ಆರು ವರ್ಷಗಳ ಆಡಳಿತವನ್ನು ನಿರುದ್ವಿಗ್ನವಾಗಿ ಮೌಲ್ಯಮಾಪನ ಮಾಡಿದನೆಂದರೆ, ಆತ ನಿಸ್ಸಂಶಯವಾಗಿಯೂ 1998ರಿಂದ 2004ರ ವರೆಗಿನ ಎನ್ಡಿಎದ ಆಡಳಿತ ಸಾಧನೆಗಳಿಂದ ತುಂಬಿತ್ತು ಎಂದು ಹೇಳುತ್ತಾನೆ.
1. ವಾಜಪೇಯಿ ಅಧಿಕಾರವಹಿಸಿಕೊಂಡ ಕೆಲವೇ ತಿಂಗಳಲ್ಲಿ ಭಾರತ ನ್ಯೂಕ್ಲಿಯರ್ ಸೂಪರ್ ಪವರ್ ಆಯಿತು.
2. ಆರ್ಥಿಕ ಕ್ಷೇತ್ರದಲ್ಲಿ ಆ ಸರ್ಕಾರ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತುಕೊಟ್ಟಿತು( ಹೆದ್ದಾರಿಗಳು, ಗ್ರಾಮೀಣ ರಸ್ತೆಗಳು, ಕೃಷಿ ಮತ್ತು ವಿದ್ಯುತ್)
3. ಸಾಫ್ಟ್ವೇರ್ ವಲಯದಲ್ಲಿ ಭಾರತ ಸೂಪರ್ಪವರ್ ಆಗಿ ಹೊರಹೊಮ್ಮಿತು.
4. ಒಂದೆಡೆ ಅಮೆರಿಕ ನಮ್ಮ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಿದರೂ, ಕಚ್ನಲ್ಲಿ ಭೀಕರ ಭೂಕಂಪ ಬಂದೆರಗಿದರೂ, ಆಟಲ್ ಅವರು ಹಣದುಬ್ಬರವನ್ನು ತಡೆಹಿಡಿದರು.
5. ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಆ ಆರು ವರ್ಷಗಳು ಮಾದರಿಯಾಗಿದ್ದವು.
6. ಸರ್ಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪವೂ ಉದ್ಭವವಾಗಲಿಲ್ಲ.
7. ನದಿಗಳ ಜೋಡಣೆಯಂಥ ಮಹತ್ವಾಕಾಂಕ್ಷಿ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಇದರ ಜವಾಬ್ದಾರಿಯನ್ನು ಪೂರ್ಣಾವಧಿಗೆ ಕ್ಯಾಬಿನೆಟ್ ಸಚಿವರಿಗೆ ವಹಿಸಿದರು.
ಅಟಲ್ ಅವರಲ್ಲಿ ನನಗೆ ಇಷ್ಟವಾದ ಗುಣವೆಂದರೆ ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ ನಂತರವೂ ಅವರಲ್ಲಿ ಅಹಂಕಾರದ ಸಣ್ಣ ಭಾವವೂ ಸುಳಿಯಲಿಲ್ಲ ಎನ್ನುವುದು. ಹಾಗಾಗೇ 1947ರ ನಂತರ ಭಾರತವನ್ನಾಳಿದ ಪ್ರಧಾನಿಗಳಲ್ಲಿ 'ಎದ್ದು ಕಾಣುವ' ಆಡಳಿತಗಾರ ಅವರೇ ಎನ್ನುವುದು ನಿರ್ವಿವಾದ.
2004ರಿಂದ ಸೋನಿಯಾ - ಮನಮೋಹನ್ ಸಿಂಗ್ ಸರ್ಕಾರದ ಆಡಳಿತ ವೈಖರಿಯನ್ನು ಗಮನಿಸುತ್ತಾ ಬಂದಿದ್ದೇನೆ. "2014ರ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಯುಪಿಎದ ಈ ಜೋಡಿ ವ್ಯವಸ್ಥಿತವಾಗಿ ಮತ್ತು ದೃಢವಾಗಿ ಸಾಧ್ಯವಾಗಿಸುವತ್ತ ಸಾಗುತ್ತಿದೆ. ಈ ಕಾರಣಕ್ಕಾಗಿ ಅವರಿಗೆ ನಾವು ಕೃತಜ್ಞರಾಗಿರಬೇಕು" ಎಂದು ಸಹೋದ್ಯೋಗಿಗಳಿಗೆ ಹೇಳುತ್ತಿರುತ್ತೇನೆ! ಇದುವರೆಗೂ ಬಂದ ಯಾವ ಸರ್ಕಾರಗಳೂ ಈ ಪರಿಯ ಭ್ರಷ್ಟಾಚಾರ ಮತ್ತು ಹಗರಣಗಳನ್ನು ತುಂಬಿಕೊಂಡಿರಲಿಲ್ಲ. ಭ್ರಷ್ಟಾಚಾರವೇ ಈ ಸರ್ಕಾರದ ಪ್ರಮುಖ ಗುಣವಾಗಿಬಿಟ್ಟಿದೆ. ಎದುರಾಗಲಿರುವ ಚುನಾವಣೆಗಳಲ್ಲಿ ಯುಪಿಎ ಒಕ್ಕೂಟವನ್ನು ಕಿತ್ತೆಸೆಯಬೇಕು ಎಂದು ಜನರು ಕಾದಿದ್ದಾರೆ.
-----
1951ರಲ್ಲಿ ಹುಟ್ಟಿಕೊಂಡ ಜನಸಂಘ ಈಗ ಬಿಜೆಪಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಂದರೆ 63 ವರ್ಷಗಳಿಂದ. ಎಷ್ಟೋ ಮಂದಿ ಕ್ರಿಯಾತ್ಮಕ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದು, ಅದನ್ನಿಂದು ಭಾರತೀಯ ರಾಜಕೀಯದಲ್ಲಿ ಈ ಮಟ್ಟಕ್ಕೆ ಏರಿಸಿದ್ದಾರೆ. ಆದರೆ ಒಂದು ವೇಳೆ ಪಕ್ಷವನ್ನು ಔನತ್ಯಕ್ಕೊಯ್ದ 4 ಪ್ರಮುಖರ ಹೆಸರು ಹೇಳಿ ಎಂದು ನನ್ನನ್ನು ಕೇಳಿದರೆ, ಅದು ದೀನ್ದಯಾಳ್ ಉಪಾಧ್ಯಾಯ, ನಾನಾಜಿ ದೇಶಮುಖ್, ಅಟಲ್ಬಿಹಾರಿ ವಾಜಪೇಯಿ ಮತ್ತು ಖುಷಭಾವು ಠಾಕ್ರೆ ಎಂದು ಹೇಳುತ್ತೇನೆ.
ಮಾರ್ಚ್ 23ಕ್ಕೆ ಡಾ. ರಾಮ್ ಮನೋಹರ್ ಲೋಹಿಯಾ ಅವರ ಜನ್ಮ ವಾರ್ಷಿಕೋತ್ಸವವಿತ್ತು. ಡಾ. ಲೋಹಿಯಾ ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸಮಾಜವಾದಿ ಚಳವಳಿಯ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ಸುಮಾರು 25 ಬಾರಿ ಬಂಧನಕ್ಕೊಳಗಾಗಿದ್ದರು. ನಾನು ಆರ್ಗನೈಜರ್ ಪತ್ರಿಕೆಯಲ್ಲಿ ಪತ್ರಕರ್ತನಾಗಿ ದುಡಿಯುತ್ತಿದ್ದಾಗ ವೈಯಕ್ತಿಕವಾಗಿ ಅವರ ಪರಿಚಯವಾಯಿತು. ಒಮ್ಮೆ ಅವರು ನನಗೆ "ಜನಸಂಘದ ಅಖಂಡ ಭಾರತದ ಕಲ್ಪನೆಯೇನು? ಏಕೆಂದರೆ ಇದರಿಂದಾಗಿ ಮುಸಲ್ಮಾನರು ಹೆದರುವಂತಾಗಿದೆ" ಎಂದು ಕೇಳಿದ್ದರು. ಆಗ ಅವರಿಗೆ ಪಂಡಿತ್ ದೀನ್ದಯಾಳ್ ಅವರನ್ನು ಭೇಟಿಯಾಗಿ, "ಜನಸಂಘದ ಅಖಂಡ ಭಾರತದ ಕಲ್ಪನೆ ಹೇಗಿದೆ?" ಎನ್ನುವುದನ್ನು ತಿಳಿದುಕೊಳ್ಳಬೇಕೆಂದು ಸೂಚಿಸಿದೆ. ಅವರಿಬ್ಬರ ಆ ಐತಿಹಾಸಿಕ ಭೇಟಿಯೂ ನಡೆಯಿತು. ಮಾತುಕತೆ ನಡೆಸಿದ ಬಳಿಕ ಆ ಇಬ್ಬರು ಹಿರಿಯ ನಾಯಕರು- "ವಿಭಜನೆಯಿಂದಾಗಿ ಭಾರತದ ಮತ್ತು ಪಾಕಿಸ್ತಾನದ ಹಿಂದು ಅಥವಾ ಮುಸಲ್ಮಾನರಿಗೆ ಲಾಭಕ್ಕಿಂತ ಲುಕ್ಸಾನಾದದ್ದೇ ಹೆಚ್ಚು ಎನ್ನುವುದು ಒಂದಲ್ಲ ಒಂದು ದಿನ ಪಾಕಿಸ್ತಾನಕ್ಕೆ ಅರಿವಾಗಲಿದೆ. ಹಾಗಾಗೇ ಎರಡೂ ದೇಶಗಳು ಭಾರತ-ಪಾಕ್ ಕಾನ್ಫಿಡರೇಷನ್(ರಾಷ್ಟ್ರಗಳ ಕೂಟ)ಗಾಗಿ ಮಾನಸಿಕವಾಗಿ ಸಿದ್ಧಗೊಳ್ಳಬೇಕು!" ಎಂದು ಜಂಟಿ ಹೇಳಿಕೆ ನೀಡಿದರು.
-ಎಲ್.ಕೆ. ಆಡ್ವಾಣಿ