ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾರತೀಯರು ಭ್ರಷ್ಟಾಚಾರಕ್ಕೆ ಒಗ್ಗಿ ಹೋಗಿರುವುದೇಕೆ?

Vishwanath S
Updated On : 3 May 2014, 12:18 pm

ಭಾರತದ ತುಂಬೆಲ್ಲ ಇಂದು ಭ್ರಷ್ಟಾಚಾರದ ಬೇರುಗಳು ಆಳವಾಗಿ ಹೊಕ್ಕಿವೆ. ಒಬ್ಬ ಸಾಮಾನ್ಯ ಪೇದೆಯೋ, ಒಬ್ಬ ಪಿ.ಡಿ.ಓ ಅಧಿಕಾರಿಯೋ ಅಪ್ಪಿ ತಪ್ಪಿ ಲೋಕಾಯುಕ್ತರ ಬಲೆಗೆ ಬಿದ್ದರೆನ್ನಿ ಅವರ ಬಳಿ ಏನಿಲ್ಲವೆಂದರೂ ಹತ್ತಿರ ಹತ್ತಿರ ಒಂದು ಕೋಟಿ ರುಪಾಯಿವರೆಗಿನ ಹಣ ಪತ್ತೆಯಾಗುತ್ತದೆ. ಅದೂ ಆತನ ಮನೆಯ ತಿಜೋರಿಯಲ್ಲಿ ಮಾತ್ರ! ಇನ್ನು ಆತ ಎಲ್ಲೆಲ್ಲಿ, ಯಾರ್ಯಾರ ಹೆಸರಲ್ಲಿ ಎಷ್ಟು ಹಣ ಇಟ್ಟಿರುತ್ತಾನೋ ಯಾರು ಬಲ್ಲರು? ಕಮಾಯಿಸಿದ್ದೆಲ್ಲಾ ತಂದು ತಿಜೋರಿಯಲ್ಲಿ ಇಡುವಷ್ಟು ಮೂರ್ಖರಲ್ಲ ನಮ್ಮವರು. ಆ ಲೋಕಾಯುಕ್ತರಿಗೆ ಸಿಕ್ಕಿದ್ದು ಸಾಗರದಲ್ಲಿನ ಹನಿ ಇದ್ದ ಹಾಗೆ!
ಎಂಥಾ ವಿಪರ್ಯಾಸ ನೋಡಿ. ಭಾರತೀಯರಾದ ನಮಗೆ ಭ್ರಷ್ಟಾಚಾರ ಎಂಬುದು ಘನಘೋರ ಎಂದೆನಿಸುತ್ತಿಲ್ಲ. ಅದೊಂದು ಸಾಮಾನ್ಯ ವಿಷಯವಷ್ಟೇ. ಯಾವುದೋ ಒಬ್ಬ ಭ್ರಷ್ಟ ಅಧಿಕಾರಿಯೋ, ರಾಜಕಾರಣಿಯೋ ಸಿಕ್ಕಿ ಬಿದ್ದರೆ ಅದು ನಮಗೆ ಅಚ್ಚರಿಯೆನಿಸುವುದಿಲ್ಲ. ಏಕೆಂದರೆ ನಮ್ಮಲ್ಲಿ "ಇದೇನು ಹೊಸದಾ?" ಎನ್ನುವಷ್ಟರ ಮಟ್ಟಿಗೆ ಭ್ರಷ್ಟಾಚಾರ ಜನಜನಿತ.
2012ರಲ್ಲಿ 1.86 ಲಕ್ಷ ಕೋಟಿ ರುಪಾಯಿಯ ಕಲ್ಲಿದ್ದಲು ಹಗರಣ ಬೆಳಕಿಗೆ ಬಂತು. 2011ರಲ್ಲಿ 1.76 ಲಕ್ಷ ಕೋಟಿ ರುಪಾಯಿಯ 2ಜಿ ಸ್ಪೆಕ್ಟ್ರಮ್ ಹಗರಣ ದೇಶದ ಮಾನ ಹರಾಜು ಹಾಕಿತು. ಆದರೂ ಜನರು ಸ್ವಲ್ಪವೂ ವಿಚಲಿತರಾಗಲಿಲ್ಲ. ದೇಶದ ಯಾವುದೇ ಭಾಗದಲ್ಲೂ ಜನರು ದಂಗೆಯೇಳಲಿಲ್ಲ. ಸರ್ಕಾರದ ವಿರುದ್ಧ ಒಂದು ಸಣ್ಣ ಕೂಗೂ ಹಾಕಲಿಲ್ಲ. ಬಂದ್ ಮಾಡಿ ಬೀದಿ ಬೀದಿಯಲ್ಲಿ ಹೋರಾಟಕ್ಕಿಳಿಯಲಿಲ್ಲ. ಏಕೆಂದರೆ ಸ್ವಾತಂತ್ರ್ಯ ಬಂದಾಗಿನಿಂದಲೂ ಭ್ರಷ್ಟಾಚಾರವಿದೆ. ಆಗ ಸ್ವಲ್ಪ ಕಡಿಮೆ ತಿನ್ನುತ್ತಿದ್ದರು, ಈಗ ಸ್ವಲ್ಪ ಜಾಸ್ತಿ ಕಮಾಯಿಸುತ್ತಾರೆ ಎನ್ನುವ ಸಿನಿಕತನ ನಮ್ಮಲ್ಲಿ ಆವರಿಸಿಕೊಂಡಿದೆ. ಅಷ್ಟರ ಮಟ್ಟಿಗೆ ನಾವೂ ಭ್ರಷ್ಟಾಚಾರದ ಪರವಾಗಿ ಇದ್ದೇವೆ. ತ್ರಿಬಲ್ ರೈಡ್ ಹೊರಟಾಗಲೋ, ಜಾತಿ ಮತ್ತು ಆದಾಯ ಸರ್ಟಿಫಿಕೆಟ್ ಬೇಗ ಸಿಗಲಿ ಎಂದೋ ಅಧಿಕಾರಿಯ ಕೈ ಬೆಚ್ಚಗೆ ಮಾಡುತ್ತೇವೆ. "ಈ ದೇಶದಲ್ಲಿ ಅದ್ಯಾವನ್ ಸಾಚಾ ಗುರು?" ಎಂದು ನಮ್ಮನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ.
ಹಾಗಂತ ಭಾರತದಲ್ಲಿ ಭ್ರಷ್ಟಾಚಾರ ನಿನ್ನೆ ಮೊನ್ನೆಯದಲ್ಲ. ಈ ದೇಶದ ಮೊದಲ ಭ್ರಷ್ಟಾಚಾರದ ಪ್ರಕರಣ ಬೆಳಕಿಗೆ ಬಂದಿದ್ದು ನೆಹರೂರವರ ಕಾಲದಲ್ಲಿ. ಅದು ಜೀಪ್ ಹಗರಣದಲ್ಲಿ. ಅಂದಿನಿಂದ ಹಿಡಿದು ಮೊನ್ನೆ ಮೊನ್ನೆಯ ಸ್ಟಾಕ್ ಮಾರ್ಕೆಟ್ ಹಗರಣದವರೆಗೆ ಸಾವಿರಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೂ ನಾವು ಎಚ್ಚೆತ್ತುಕೊಂಡಿಲ್ಲ. ಮತ್ತದೇ ಭ್ರಷ್ಟ ರಾಜಕಾರಣಗಳಿಗೆ ಓಟು ಹಾಕುತ್ತೇವೆ. ಅಂತಹವರನ್ನೇ ಐದಾರು ಬಾರಿ ಆರಿಸಿ ಕಳುಹಿಸುತ್ತೇವೆ. ಪರಿಣಾಮ ಸ್ವಾತಂತ್ರ್ಯ ಬಂದು ಆರೂವರೆ ದಶಕಗಳೇ ಕಳೆದರೂ ದೇಶದ ಅಭಿವೃದ್ಧಿ ಮಾತ್ರ ಶೂನ್ಯ. ಹುಟ್ಟುವ ಪ್ರತಿ ಮಗುವಿಗೂ ನಾವು ಕೊಡುವ ಉಡುಗೊರೆ ಸಾಲ. ಸ್ವಾತಂತ್ರ್ಯ ಬಂದಾಗ ನಮ್ಮಷ್ಟೇ ಇದ್ದ ಡಾಲರ್ ಬೆಲೆ ಇಂದು ಎಪ್ಪತ್ತು ರುಪಾಯಿ ಬೆಲೆಬಾಳುವಂತಾಗಿದೆ. ಅದಾಗಲೇ ಜಪಾನ್, ಅಮೆರಿಕಗಳು 4ಜಿ, 5ಜಿ ಎನ್ನುತ್ತಿದ್ದರೆ ನಮ್ಮವರು ಹಳ್ಳಿಗಳಲ್ಲಿ, ಸ್ಲಮ್‌ಗಳಲ್ಲಿ ಒಪ್ಪೊತ್ತಿನ ಊಟಕ್ಕೂ ಲಾಟರಿ ಹೊಡೆಯುವಂತಹ ಸ್ಥಿತಿ ಎದುರಾಗಿದೆ ಎಂದರೆ ಯೋಚಿಸಿ. ನಾವು ಎತ್ತ ಸಾಗುತ್ತಿದ್ದೇವೆ ಎಂದು. ಭಾರತದಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಭ್ರಷ್ಟಾಚಾರವಾಗಿದೆ ಎಂದು ತಿಳಿಯಲು ಗ್ಲೋಬಲ್ ಕರಪ್ಶನ್ ಬ್ಯಾರೋಮೀಟರ್ ಎಂಬ ಸಂಸ್ಥೆಯ 2013ರ ಸಮೀಕ್ಷೆಯನ್ನು ನೋಡಬೇಕಾಗುತ್ತದೆ. ಅದರ ಪ್ರಕಾರ ಭಾರತದ ಭವಿಷ್ಯ ನಿರ್ಧರಿಸುವ ರಾಜಕೀಯ ಕ್ಷೇತ್ರದಲ್ಲಿ 86 ಪ್ರತಿಶತ ಭ್ರಷ್ಟಾಚಾರ ಕಂಡುಬರುತ್ತದೆ. ಹಾಗೆಯೇ ಮುಂದುವರೆದು, ದೇಶವನ್ನು ಆಂತರಿಕವಾಗಿ ರಕ್ಷಿಸಬೇಕಾದ ಪೊಲೀಸ್ ವ್ಯವಸ್ಥೆಯಲ್ಲಿ 75 ಪ್ರತಿಶತ, ದೇಶವನ್ನು ಭೌದ್ಧಿಕವಾಗಿ ರೂಪಿಸಬೇಕಾದ ಶಿಕ್ಷಣ ಕ್ಷೇತ್ರದಲ್ಲಿ 61 ಪ್ರತಿಶತ, ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ 56 ಪ್ರತಿಶತ, ವಾಣಿಜ್ಯ ಕ್ಷೇತ್ರದಲ್ಲಿ ಶೇ. 50, ನ್ಯಾಯಾಂಗದಲ್ಲಿ ಶೇ. 45, ಧಾರ್ಮಿಕ ಕ್ಷೇತ್ರದಲ್ಲಿ ಶೇ. 44, ಎನ್‌ಜಿಒಗಳಲ್ಲಿ ಶೇ 30.ಅಲ್ಲದೆ ದೇಶವನ್ನು ರಕ್ಷಿಸಬೇಕಾದ ಮಿಲಿಟರಿ ಕ್ಷೇತ್ರದಲ್ಲಿ ಶೇ20,  ಮಾಧ್ಯಮಗಳಲ್ಲೇ ಶೇ. 41 ಭ್ರಷ್ಟಾಚಾರವಿದೆ.
 ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಯಾವುದೇ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತನ್ನ ಛಾಪನ್ನು ಮೂಡಿಸಿದೆ. ಮೂಡಿಸುತ್ತಿದೆ... ಇನ್ನಾದರೂ ನಾವೆಲ್ಲ ಎಚ್ಚೆತ್ತುಕೊಳ್ಳೋಣ. ಭ್ರಷ್ಟಾಚಾರವನ್ನು ಒಮ್ಮೆಗೇ ಕಿತ್ತೊಗೆಯಲು ಅಸಾಧ್ಯವಾದರೂ ಹಂತ ಹಂತವಾಗಿ ನಿರ್ಮೂಲನೆ ಮಾಡಲು ಸಹಕರಿಸೋಣ. ದೇಶ ಮತ್ತೊಂದು ಮಹಾ ಚುನಾವಣೆ ಎದುರಿಸುತ್ತಿದೆ. ನಿಷ್ಠಾವಂತ ರಾಜಕಾರಣಿಗಳು ಆರಿಸಿ ಬರಲಿ ಎಂದು ಹಾರೈಸೋಣ. ಭ್ರಷ್ಟರನ್ನು ಸಹಿಸಿಕೊಳ್ಳುವ ನಮ್ಮ ಜಡ ಮನಸ್ಸುಗಳನ್ನು ಬದಲಿಸಿಕೊಳ್ಳೋಣ.


-ಬಿ.ಸೋಮಶೇಖರ್  
ಪತ್ರಿಕೋದ್ಯಮ ವಿದ್ಯಾರ್ಥಿ, ಗುಲ್ಬರ್ಗ ವಿ.ವಿ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement