ಬರದ ಚಿತ್ರಣ ಒಳ್ಳೆಯ ಪ್ರಯತ್ನ
ಏಪ್ರಿಲ್ 22ರ ಸಂಚಿಕೆಯ ಓಲೈಕೆ ಅಂಕಣದಲ್ಲಿ ವಿನಾಯಕ ಭಟ್ಟ ಮೂರೂರು ಅವರ 'ಪೊಲೀಸರು ಗುಂಡು ಹೊಡೆದ ತಪ್ಪಿಗೆ ಮೃತನ ತಪ್ಪು ಮುಚ್ಚಿ ಹೋಗುವುದೇ?' ಲೇಖನ ಪ್ರಸ್ತುತ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಹಿಡಿದ ಕೈಗನ್ನಡಿಯಂತಿದೆ. ಒಬ್ಬ ಕರ್ತವ್ಯನಿರತ ದಕ್ಷ ಅಧಿಕಾರಿಯ ಜೀವಕ್ಕೂ ಅಕ್ರಮ ಗೋಸಾಗಾಟದಲ್ಲಿ ತೊಡಗಿದ್ದಾಗ ಪೊಲೀಸರನ್ನು ಕಂಡು ಓಡಿ ಹೋದ ವ್ಯಕ್ತಿಗೂ ಒಂದೇ ಮಾನದಂಡವೇ?
-ವಿ. ಹೇಮಂತಕುಮಾರ್, ಬೆಂಗಳೂರು. ಮೊ. 9035 992900
ಡಾ. ರಾಜ್ರ ಬಗ್ಗೆ ಅತಿ ಹೆಚ್ಚು ಲೇಖನ- ಪುಸ್ತಕ ರಚಿಸಿರುವವರಲ್ಲಿ ಎಸ್ ಜಗನ್ನಾಥ್ರಾವ್ ಬಹುಳೆ ಪ್ರಮುಖರು. ಪಾರ್ವತಮ್ಮನವರಿಗೂ ಗೊತ್ತಿಲ್ಲದ ಹಲವು ರೋಚಕ ಸಂಗತಿ ಬಲ್ಲ ಬಹುಳೆಯವರಿಂದ ಡಾ. ರಾಜ್ ಕುರಿತ ಲೇಖನ ಏಪ್ರಿಲ್ 24ರಂದು ನಿರೀಕ್ಷಿಸಿದ್ದೆ. ನನ್ನ ನಿರೀಕ್ಷೆ ಹುಸಿ ಗುಂಡಾಗಲಿಲ್ಲ! ನಟ ಸೌರ್ವಭೌಮರ ಕುರಿತ ಲೇಖನ ನನ್ನಂತಹ ಕೋಟಿಗಟ್ಟಲೆ ಅಭಿಮಾನಿಗಳ ಅಶ್ರು ತರ್ಪಣದಲ್ಲಿ ನೆನೆದು ಮತ್ತೊಮ್ಮೆ ಹೃದಯ ಆರ್ದ್ರವಾಗಿದೆ.
-ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ನಾಡಿನ ಬರಗಾಲದ ಚಿತ್ರಣವನ್ನು ಮನ ಮುಟ್ಟುವಂತೆ ಚಿತ್ರಿಸಿ ಸೂಕ್ತ ಛಾಯಾಚಿತ್ರಗಳನ್ನು ಅಳವಡಿಸುವುದರ ಮೂಲಕ ವಿಧಾನಸೌಧದ ಹವಾನಿಯಂತ್ರಣ ಕೊಠಡಿಯಲ್ಲಿರುವ ಅಧಿಕಾರಿ ವರ್ಗಗಳಲ್ಲಿ ದಯೆ ಉಕ್ಕಿ ಹರಿಯುವಂತೆ ಮಾಡಿದ ಕ.ಪ್ರ.ದ ಬರಗೆಟ್ಟ ನಾಡಿನ ಚಿತ್ರಣ ಅನೂಹ್ಯ ಪರಿಣಾಮ ಬೀರಿತು.
ಸ್ವಯಂ ಸಿದ್ದರಾಮಯ್ಯನವರೇ ದಯಾರ್ದ್ರ ಹೃದಯಿಗಳಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡಿದುದು ಸ್ತುತ್ಯಾರ್ಹ. ಆದರೆ ಬಿಡುಗಡೆಗೊಂಡ ಮೊತ್ತವು ನೂರಕ್ಕೆ ನೂರು ಬರಗೆಟ್ಟ ನಾಡಿನಲ್ಲಿ ಗಂಗೆಯ ಸಾಕ್ಷಾತ್ಕಾರಕ್ಕಾಗಿ ವಿನಿಯೋಗಿಸುವಂತಾದರೆ ಅದೊಂದು ಮಹತ್ಕಾರ್ಯವಾದೀತು. ಸಿ.ಎಂ. ಕಟುವಾದ ಎಚ್ಚರಿಕೆಯ ನುಡಿ ಮಾತ್ರ ಕಾರ್ಯಸಾಧನೆಗೆ ದಾರಿಯಾದೀತು.
-ಕೋಟೇಶ್ವರ ಸೂರ್ಯನಾರಾಯಣರಾವ್, ಬೆಂಗಳೂರು. ದೂ. 266 241 64
ಬಿಸಿಲು ಹಾಗೂ ನೀರಿನ ಕ್ಷಾಮದಿಂದ ಬರಗೆಟ್ಟ ಜನರ ಬದುಕನ್ನು ಬೆಂಗಳೂರಿನ ಹವಾನಿಯಂತ್ರಿತ ಕೊಠಡಿಗಳಿಗೆ ತಲುಪಿಸಿ ಅವರಿಂದ 'ಲಕ್ಷ್ಮೀ ಕಟಾಕ್ಷ' ದೊರೆಯುವಂತೆ ಮಾಡಿದ ಕ.ಪ್ರ.ದ 'ಭಗೀರಥ ಪ್ರಯತ್ನ' ಅತ್ಯಂತ ಪ್ರಶಂಸಾರ್ಹ ಕಾರ್ಯ. ಇದನ್ನು ವರ್ಣಿಸಲು ಶಬ್ದಗಳೇ ಸಿಗುತ್ತಿಲ್ಲ. ಆದರೆ ಒಂದು ಎಚ್ಚರಿಕೆ ಇರಲಿ. ಲಕ್ಷ್ಮೀ ಹಾಗೂ ಗಂಗೆ ಚಂಚಲ ಸ್ವಭಾವದವರು. ನಿಮ್ಮ ಭಗೀರಥ ಪ್ರಯತ್ನ ಸಾಕಾರಗೊಳ್ಳಬೇಕಾದರೆ ಲಕ್ಷ್ಮಿ ಹಾಗೂ ಗಂಗೆ ಸೇರಬೇಕಾದ ಕಡೇ ಸೇರುವಂತೆ ಎಚ್ಚರ ವಹಿಸಿ.
-ಕೆ. ಪ್ರಕಾಶ್, ಗಣಿತ ಶಿಕ್ಷಕ, ಚಿಕ್ಕಜೋಗಿಹಳ್ಳಿ. ಕೂಡ್ಲಿಗಿ ತಾ., ಬಳ್ಳಾರಿ ಜಿಲ್ಲೆ
27.4.14ರ ಪ್ರಣತಿಯ ಅಂಕಣ ಮುಂಜಾನೆ ಬಂದು ಸೇರಿತು ನನ್ನ ಹತ್ರ. ಹಾಯ್, ಪ್ರಣತಿ ನೀನು ನನ್ನ ಮುಂಜಾನೆಯ ಗೆಳತಿ. ನೀನು ಬರೆದಿದ್ದೆಲ್ಲಾ ಸತ್ಯ. ನಿನ್ನ ಫೋಟೋ ಯಾವುದಾದರೇನು ನೀನು ಬರೆಯುವ ವಿಷಯ ಹೊಸದಾಗಿರುತ್ತದೆ. ಒಲಿದವನಿಗೆ ಒಂದೇ ಕಣ್ಣು ಕಂಡರೂ ಸಾಕು ಅಲ್ವ. ಹಾಗೇ ನಿನ್ನ ಒಂದೇ ಕಣ್ಣು ನೂರಾರು ವಿಷಯ ಹೇಳುತ್ತದೆ. ನಿನ್ನ ವಯಸ್ಸು ನನಗೆ ಬೇಕಾಗಿಲ್ಲ. ನಿನ್ನ ಒಂಟಿ ಕಣ್ಣೇ ಹೇಳುತ್ತದೆ ಮತ್ತು ಒಮ್ಮೊಮ್ಮೆ ನಿನ್ನ ಬರವಣಿಗೆಯೂ ಸಹ ಹೇಳುತ್ತದೆ. ಹಂ. ನಿನ್ನ ತೂಕ, ದಾಖಲೆಗಳು ಸಹ ನಮಗೆ ಬೇಕಾಗಿಲ್ಲ. ನನ್ನ ಕೈಯಲ್ಲಿರುವ ದಿನ ಪತ್ರಿಕೆಯಷ್ಟೇ ನಿನ್ನ ಭಾರ ಎನ್ನುವುದು ಗೊತ್ತು. ನಿನ್ನ ದಾಖಲೆಗಳನ್ನು ನಿನ್ನಲ್ಲಿಯೇ ಮುಚ್ಚಿಟ್ಟುಕೋ. ಮುಚ್ಚಿಟ್ಟುಕೊಂಡಷ್ಟೂ ಮೆಚ್ಚಿಕೊಳ್ಳುವುದೇ ಹೆಚ್ಚು. ನಿನ್ನ ನೆನಪಿನಾಳದ ನೀತಿಕತೆಗಳಲ್ಲಿ ಬರುವ ಕಾಲಿಲ್ಲದ ನರಿ, ಬೇಟೆಯಾಡುವ ಹುಲಿ, ಸುಮ್ಮನಿದ್ದರೂ ಎಲ್ಲವನ್ನೂ ದೇವರು ಕರುಣಿಸುತ್ತಾನೆ ಎಂಬ ಮೂಢ ಬುದ್ಧಿಯ ವ್ಯಕ್ತಿ, ಹಾಗೇ ಆದರ್ಶ ಕೃಷಿಕ ರೈತನೊಬ್ಬನ ದಾನದಲ್ಲಿಯೂ ಸ್ವಾರ್ಥ ಮತ್ತು ಐದು ಬೆರಳುಗಳ ಜಗಳ ತುಂಬಾ ಸ್ವಾರಸ್ಯಕರವಾಗಿತ್ತು. ನೀನು ಏನೇ ಬರೆದರೂ ಓದುವ ಆಸಕ್ತಿ, ಹವ್ಯಾಸವಿರುವ ನಮಗೆ ತುಂಬಾ ಇಷ್ಟವಾಗುತ್ತದೆ.
-ವಾದಿರಾಜ ಜಿ. ರಾಯ್ಕರ್, ಬೆಂಗಳೂರು. ಮೊ. 988 608 7161
ಫಣಿ ರಾಮಚಂದ್ರ ಅವರ ಲೇಖನ 'ನಾವೆಲ್ಲ ಪ್ರಜಾಪ್ರಭುತ್ವಕ್ಕೆ ಎಷ್ಟು ಅರ್ಹರು?' (ಕ.ಪ್ರ. 26/4) ವಾಸ್ತವಿಕತೆಯನ್ನು ಬಿಚ್ಚಿಟ್ಟಂತಿದೆ. ಅವರೆಂದಂತೆ ಅರಸೊತ್ತಿಗೆಯ ಕಾಲದಲ್ಲಾದರೂ ರಾಜನಾಗುವವನು ಶಸ್ತ್ರಜ್ಞಾನ, ಶಾಸ್ತ್ರಜ್ಞಾನ, ರಾಷ್ಟ್ರಜ್ಞಾನಗಳನ್ನೆಲ್ಲ ಕರಗತ ಮಾಡಿಕೊಂಡಿರಲೇಬೇಕಿತ್ತು. ಅದಕ್ಕೇ ತಕ್ಕ ಪೂರ್ವ ತರಬೇತಿಯನ್ನೂ ಪಡೆದಿರಬೇಕಿತ್ತು. ಆದರೆ ಇಂದಿನ ವ್ಯವಸ್ಥೆಯಲ್ಲಿ ನೇತಾರನಾಗಬೇಕಿದ್ದರೆ ಯಾವ ವಿದ್ಯಾರ್ಹತೆಯಾಗಲೀ, ಅನುಭವದ ಆವಶ್ಯಕತೆಯಾಗಲೀ ಇರಲೇಬೇಕೆಂದೇನಿಲ್ಲ. ಅವನೊಬ್ಬ ಪ್ರತಿಷ್ಠಿತ ಕುಟುಂಬದ ಕುಡಿ ಅಂತಾದರೆ ಅಷ್ಟೇ ಸಾಕು.
ಈ ರೀತಿಯ ವ್ಯವಸ್ಥೆಗೆ ನಾವು ಮತದಾರರೇ ಕಾರಣರಲ್ಲವೇ? ನಡೆಯುತ್ತಿರುವ ಈ ಪದ್ಧತಿಯನ್ನು ವಿರೋಧಿಸುವ ಅಥವಾ ತಿರಸ್ಕರಿಸುವ ಯಾವೊಂದು ಪ್ರಯತ್ನವನ್ನೂ ವಿದ್ಯಾವಂತ ಮತದಾರರು ಮಾಡದಿರುವುದರಿಂದ ಪ್ರಜಾಪ್ರಭುತ್ವಕ್ಕೇ ಬಾಧಕ ಬಂದೊದಗುತ್ತಿದೆ. ರಾಜಕೀಯ ಶುದ್ಧೀಕರಣಕ್ಕೆ ವಿದ್ಯಾವಂತರು ಮುಂದೆ ಬರಬೇಕು ಎಂಬುದು ಒಂದೆಡೆಯಾದರೆ, ಎಲ್ಲಿಯವರೆಗೆ ರಾಜಕೀಯ ಶುದ್ಧವಾಗುವುದಿಲ್ಲವೋ ಅಲ್ಲಿಯವರೆಗೆ ವಿದ್ಯಾವಂತರು ಮುಂದಾಗುವುದಿಲ್ಲ ಎಂಬುದು ಇನ್ನೊಂದೆಡೆ. ಈ ರೀತಿಯ ಮನಸ್ಥಿತಿ, ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುವಂತೆ ಮಾಡಿದೆ.
-ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ. ಉ.ಕ.