ನೈರ್ಮಲ್ಯದ ನೆಲವಾಗಿ ಬದಲಾದ ಭಾಗ್ಯನಗರ
ಕಳೆದ ಮೂರು ವಾರಗಳಿಂದ ಶೌಚಾಲಯದ ಬಗ್ಗೆಯೇ ಏಕೆ ಬರೆಯುತ್ತಿದ್ದೇನೆಂದರೆ ಪ್ರಾಣಿಗಳಿಗಿಂತ...
ಕಳೆದ ಮೂರು ವಾರಗಳಿಂದ ಶೌಚಾಲಯದ ಬಗ್ಗೆಯೇ ಏಕೆ ಬರೆಯುತ್ತಿದ್ದೇನೆಂದರೆ ಪ್ರಾಣಿಗಳಿಗಿಂತ ನಾವು ಭಿನ್ನವಾಗಿರುವುದರಿಂದ ಮತ್ತು ನಮಗೆ ಇಚ್ಛಾಶಕ್ತಿ ಇರುವುದರಿಂದ ಸ್ವಚ್ಛತೆಯನ್ನು ನಮ್ಮ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ. ಕೊಪ್ಪಳದ ಭಾಗ್ಯನಗರದ ಯಶೋಗಾಥೆಯನ್ನು ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಗ್ರಾಮ ಪಂಚಾಯಿತಿ ಮನಸ್ಸು ಮಾಡಿದರೆ ಜನ ಜಾಗೃತಿಯ ಆಂದೋಲನವನ್ನೇ ಮಾಡಬಹುದು. ಶೌಚಕ್ಕಾಗಿ ಬಯಲನ್ನೇ ಆಶ್ರಯಸಿದ್ದ ಭಾಗ್ಯನಗರದ ಜನರು ಇಂದು ಶೌಚಾಲಯ ಉಪಯೋಗಿಸಿ ಸ್ವಾಭಿಮಾನ ಮತ್ತು ಗೌರವದಿಂದ ಸಂಪೂರ್ಣ ನೈರ್ಮಲ್ಯತೆಯೆಡೆಗೆ ಸಾಗಿದ್ದಾರೆ. "ಪಾಯಿಖಾನೆ ಅವಶ್ಯಕತೆಯನ್ನು ಗಂಡಸರು ಅಷ್ಟೊಂದು ಮನಗಾಣುವುದಿಲ್ಲ, ಬಯಲಲ್ಲಿ ಶೌಚಕ್ಕೆ ಹೋಗುವುದರ ಸಂಕಟ ಅವಮಾನ ಎಷ್ಟೆಂಬುದು ಗೊತ್ತಿಲ್ಲ. ಸೂರ್ಯನಿರದ ಸಮಯದಲ್ಲಿ ಮಾತ್ರ ರಸ್ತೆ ಬದಿಯಲ್ಲಿ ಬಹಿರ್ದೆಸೆಗೆ ತೆರಳುವ ನಿಮಗೆ ಮಾತ್ರ ಗೊತ್ತು ಪಡಿಪಾಟಿಲು. ಹೆಂಡ್ತೀರೇ ಹಾಗಂತ ಸುಮ್ನೆ ಕೂರ್ಬೇಡಿ, ಗಂಡಸರನ್ನ ನಂಬಬೇಡಿ, ಶೌಚಾಲಯ ಕಟ್ಸು ಅಂತ ಹಿಡಿರಿ ಪಟ್ಟು" ಹೀಗೆ ಮಹಿಳಾ ಜನಸ್ಥೋಮವನ್ನು ಉದ್ದೇಶಿಸಿ ಶೌಚಾಲಯದ ಮಹತ್ವವನ್ನು ಸಾರಿದ ಜಿಲ್ಲಾ ಪಂಚಾಯತಿಯ ಸಿ.ಇ.ಓ ಹೆಚ್ ಮೂರ್ತಿ ಅವರ ಪರಿಶ್ರಮ ಇಂದು ಸಾರ್ಥಕವಾಗಿದೆ.
ಕೊಪ್ಪಳ ನಗರಕ್ಕೆ ತನ್ನದೆ ಆದ ಸಮೃದ್ಧ ಇತಿಹಾಸ ಇದೆ. ಹಿಂದೆ ಕೊಪಣನಗರವೆಂದು ಕರೆಸಿಕೊಂಡ ಇಂದಿನ ಕೊಪ್ಪಳ, ಪ್ರಾಚಿನ ಇತಿಹಾಸ ಹೊಂದಿದ ನಗರ. ಈ ನಗರವನ್ನು ಜೈನ ಕಾಶಿಯೆಂದೂ ಕರೆಯುವುದುಂಟು. ಕನ್ನಡ ಸಾಹಿತ್ಯದ ಮೇರು ಕವಿಗಳಲ್ಲಿ ಒಬ್ಬನಾದ ರನ್ನ ತನ್ನ ಕಾವ್ಯದಲ್ಲಿ ತನಗೆ ಆಶ್ರಯ ನೀಡಿದ ದಾನಚಿಂತಾಮಣಿ ಅತ್ತಿಮಬ್ಬೆಯ ವ್ಯಕ್ತಿತ್ವವನ್ನು ಬಣ್ಣಿಸುವಾಗ "ನೆಗಳ್ದ ಕೊಪಣಚಳದಂತೆ" ಎಂದು ವರ್ಣಿಸಿ ಕೊಪ್ಪಳದ ಪ್ರಸಿದ್ಧಿಯನ್ನು ಪ್ರಚುರ ಪಡಿಸಿದ್ದಾನೆ. ಇಂದು ಈ ನಗರ ಜಿಲ್ಲಾ ಕೇಂದ್ರವಾಗಿದೆ.
ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿ ಬರುವ ಗ್ರಾಮಗಳಲ್ಲಿ ದೊಡ್ಡ ಗ್ರಾಮ ಭಾಗ್ಯನಗರ. ಈ ಗ್ರಾಮಕ್ಕೆ 56 ವರ್ಷಗಳ ಇತಿಹಾಸವುಂಟು. ಈ ಭಾಗದ ಜೀವನದಿಯಾದ ತುಂಗಭದ್ರಗೆ ಕೀ.ಶ 1953 ರಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದ್ದರಿಂದ ಆಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾದ ಅನೇಕ ಗ್ರಾಮಗಳಲ್ಲಿ ಕಾತರಕಿ ಗ್ರಾಮ ಒಂದು. ಈ ಗ್ರಾಮದ ಜನರ ಪುನರ್ವಸತಿಗಾಗಿ ಕೊಪ್ಪಳ ನಗರದ ಅತೀವ ಹತ್ತಿರದಲ್ಲಿ 90 ಎಕರೆ ವಿಸ್ತೀರ್ಣದಲ್ಲಿ ಯೋಜನಾ ಬದ್ಧವಾಗಿ 5.3.1953 ರಲ್ಲಿ ಭಾಗ್ಯನಗರ ಗ್ರಾಮ ನಿರ್ಮಾಣದ ಶಂಕು ಸ್ಥಾಪನೆಯಾಯಿತು. ಈಗ ಅರ್ಧ ಶತಮಾನವನ್ನು ಪೂರೈಸಿದ ಈ ಗ್ರಾಮ ಸರ್ವರಂಗದಲ್ಲಿ ಅಭಿವೃದ್ಧಿಯತ್ತ ಅಡಿ ಇಟ್ಟಿದೆ. ಅದರಲ್ಲಿಯೂ ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯಡಿಯಲ್ಲಿ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಹಾಗೂ ರಾಜ್ಯ ನೈರ್ಮಲ್ಯ ಪುರಸ್ಕಾರಕ್ಕೆ ಅಣಿಯಾಗಿದೆ. ಈ ಗ್ರಾಮದ ಜನಸಂಖ್ಯೆ 2001ರ ಜನಗಣತಿಯ ಪ್ರಕಾರ 12,584.
ನೈರ್ಮಲ್ಯ ಎನ್ನುವುದು ಕೇವಲ ಒಂದು ದಿನದ ಕೆಲಸವಲ್ಲ ಅದೊಂದು ನಿರಂತರ ಪ್ರಕ್ರಿಯೆ. ಇದು ಎಲ್ಲರೂ ಪಾಲಿಸಬೇಕಾದ ಕರ್ತವ್ಯ. ಸಮುದಾಯದಲ್ಲಿ ಯಾರದರೂ ಒಬ್ಬರೂ ಈ ಪ್ರಕ್ರಿಯೆ ಪಾಲಿಸದೆ ಹೋದರೂ, ನಮ್ಮ ಗ್ರಾಮ, ಕೇರಿ, ಓಣಿ ಮತ್ತು ಬೀದಿ ಅನೈರ್ಮಲ್ಯವಾಗಿ ಬಿಡುತ್ತದೆ. ಹೀಗಾಗಿಯೇ ಯಾವುದೇ ಒಂದು ಗ್ರಾಮ ಸಂಪೂರ್ಣ ನೈರ್ಮಲ್ಯ ಸಾಧಿಸಬೇಕಾದರೆ ಸ್ಥಳೀಯ ನಿರ್ವಹಣಾಕಾರರು ಅತ್ಯಂತ ಕಾಳಜಿ ಮತ್ತು ಅಷ್ಟೇ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಶೌಚಕ್ಕಾಗಿ ಅನುಭವಿಸುತ್ತಿರುವ ಕಷ್ಟ ಹೇಳತೀರದು. ತಮ್ಮ ದೈನಂದಿನ ನಿತ್ಯ ಕರ್ಮಗಳ ಪೂರೈಕೆಗಾಗಿ ರಸ್ತೆ ಬದಿಯನ್ನೇ ಅವಲಂಬಿಸಬೇಕಾಗಿದೆ. ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಸ್ಥಿತಿಯೂ ಇದೇ ಆಗಿತ್ತು. ನಮ್ಮ ಗ್ರಾಮ ಪಂಚಾಯಿತಿಯನ್ನು ನಾವೇ ಶುಚಿಯಾಗಿಡಬೇಕು ಎಂಬ ಮಹಾದಾಸೆಯಿಂದ ಪಂಚಾಯಿತಿ ಜನಪ್ರತಿನಿಧಿಗಳು, ಇಲ್ಲಿನ ಸಮುದಾಯ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಯುವ ಸಮುದಾಯ, ಸ್ವಯಂ ಸೇವಾ ಸಂಘಗಳು, ಸ್ರೀಶಕ್ತಿ ಸ್ವಸಹಾಯ ಸಂಘಗಳು ಪಣತೊಟ್ಟು ಹಗಲಿರುಳು ಕಾಳಜಿ ವಹಿಸಿ ಇಡೀ ಗ್ರಾಮವನ್ನು ಸಂಪೂರ್ಣ ನೈರ್ಮಲ್ಯದೆಡೆಗೆ ಕೊಂಡೊಯ್ಯಲು ಸಫಲರಾಗಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ವಿಶಿಷ್ಟತೆಗಳನ್ನು ಹೊಂದಿರುವ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾಗ್ಯನಗರ, ಅಭಿವೃದ್ಧಿಯಲ್ಲಿ ಮೂಂಚೂಣಿಯಲ್ಲಿದೆ. ಪಂಚಾಯಿತಿಗೆ ತೆರಿಗೆ ರೂಪದಲ್ಲಿ ಸಾಕಷ್ಟು ಹಣ ಹರಿದು ಬರುತ್ತಿದೆ. ಬಂದ ಆದಾಯದಲ್ಲಿ ಪ್ರತಿ ವರ್ಷ ಗ್ರಾಮದ ಸ್ವಚ್ಛತೆಗೆ ಇಂತಿಷ್ಟು ಅನುದಾನವನ್ನು ಮೀಸಲಿರಿಸಿ, ಗ್ರಾಮವನ್ನು ಶುಚಿಯಾಗಿಡಲು ಪ್ರಯತ್ನಿಸಲಾಗಿದೆ. ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಲೇಬೇಕೆಂಬ ಸಂಕಲ್ಪದೊಂದಿಗೆ ಪಂಚಾಯಿತಿ ಗ್ರಾಮಸ್ಥರ ಅಭಿಪ್ರಾಯದಂತೆ ತನಗೆ ತಾನೇ ನಿಯಮವೊಂದನ್ನು ರೂಪಿಸಿ ಸ್ವಚ್ಛತಾ ನೀತಿಯನ್ನು ಜಾರಿಗೊಳಿಸಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಯಲು ಶೌಚವನ್ನು ಸಂಪೂರ್ಣವಾಗಿ ನೀಷೇಧಿಸಲಾಗಿದೆ. ಸಾರ್ವಜನಿಕರು ಮಲಮೂತ್ರ ವಿಸರ್ಜನೆಗೆ ಕಡ್ಡಾಯವಾಗಿ ಶೌಚಾಲಯವನ್ನು ಬಳಸುವುದು, ಬಯಲಲ್ಲಿ ಮಲಮೂತ್ರ ವಿಸರ್ಜನೆ ಕಂಡುಬಂದರೆ ಡಂಡ ವಿಧಿಸಲು ಪಂಚಾಯಿತಿ ಸೂಕ್ತ ಕ್ರಮಕೈಗೊಂಡಿದೆ.
ಟಿ ಎಲ್ಲಾ ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳಲ್ಲಿ ಮಕ್ಕಳು ಕಡ್ಡಾಯವಾಗಿ ಶೌಚಾಲಯಗಳನ್ನು ಬಳಸುವುದು, ಅವರಲ್ಲಿ ಸ್ವಚ್ಛತೆಯ ಅಭ್ಯಾಸಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಿಕ್ಷಕರು ರೂಢಿಸುವುದು.
ಟಿ ಶಾಲೆ ಮತ್ತು ಅಂಗನವಾಡಿ ಪರಿಸರದಲ್ಲಿ ಹೂತೋಟ, ಕೈದೋಟ, ಗಿಡಮರಗಳನ್ನು ಬೆಳೆಸುವುದು ಹಾಗೂ ಕಾಂಪೋಸ್ಟ್ ಗುಂಡಿ ಮತ್ತು ಇಂಗುಗುಂಡಿಗಳನ್ನು ನಿರ್ಮಿಸಿ ದ್ರವ, ಘನ ತ್ಯಾಜ್ಯಗಳು ಸಮರ್ಪಕವಾಗಿ ವಿಲೇವಾರಿಯಾಗುತ್ತಿರುವುದನ್ನು ಖಾತ್ರಿಗೊಳಿಸುವುದು, ಎಲ್ಲಾ ಮನೆಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೆ ಅಥವಾ ಇಂಗದೆ ಅಲ್ಲಲ್ಲಿ ಸಂಗ್ರಹವಾಗದಂತೆ ಎಚ್ಚರವಹಿಸುವುದು.
ಟಿ ಮನೆ, ವಠಾರ ಶುಚಿಯಾಗಿಟ್ಟುಕೊಳ್ಳುವುದು, ಬಚ್ಚಲು ಮನೆ, ಅಡುಗೆ ಮನೆಯ ನೀರನ್ನು ಕೈತೋಟಗಳಿಗೆ, ಗಿಡಗಳಿಗೆ ಹರಿಯುವ ವ್ಯವಸ್ಥೆ ಮಾಡುವುದು ಅಥವಾ ಇಂಗುಗುಂಡಿಗಳನ್ನು ನಿರ್ಮಿಸಿ ಅದಕ್ಕೆ ನೀರು ಹರಿಯುವಂತೆ ಮಾಡುವುದು. ಹಸಿಕಸ ಮತ್ತು ಇತರೆ ಕೊಳೆಯುವ ತ್ಯಾಜ್ಯ ವಸ್ತುಗಳಿಂದ ಕಾಂಪೋಸ್ಟ್ ಗೊಬ್ಬರ ಮಾಡುವುದು.
ಟಿ ಹೋಟೆಲುಗಳಲ್ಲಿ, ಅಂಗಡಿಗಳಲ್ಲಿ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ತ್ಯಾಜ್ಯ ನೀರು ಇಂಗಲು ಇಂಗುಗುಂಡಿಗಳನ್ನು ನಿರ್ಮಿಸುವುದನ್ನು ಕಡ್ಡಾಯಗೊಳಿಸಿರುವುದು. ತ್ಯಾಜ್ಯ ವಸ್ತುಗಳನ್ನು ಕಾಂಪೋಸ್ಟ್ ಗುಂಡಿಗಳಲ್ಲಿ ತುಂಬಿ ಗೊಬ್ಬರವಾಗಿ ಉಪಯೋಗಿಸುವುದು ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವುದು ಕೂಡ ಇಲ್ಲಿ ಕಡ್ಡಾಯವಾಗಿದೆ. ಒಮ್ಮೆ ಉಪಯೋಗಿಸಿದ ಪ್ಲಾಸ್ಟಿಕ್ ಚೀಲಗಳನ್ನು ಮತ್ತೆ ಬಳಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬಳಸಿದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ನಿಷೇಧಿಸಲಾಗಿದೆ. ಮನೆ, ಅಂಗಡಿ ಹೋಟೆಲುಗಳಲ್ಲಿ ಬಳಸಿದ ಪ್ಲಾಸ್ಟಿಕ್‌ಗಳನ್ನು ಹಾಕಿ ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದರ ವಿಲೇವಾರಿಗೆ ಗ್ರಾಮ ಪಂಚಾಯಿತಿ ವ್ಯವಸ್ಥೆ ರೂಪಿಸಿದೆ.
ಟಿ ಹೊಸದಾಗಿ ಮನೆ ನಿರ್ಮಿಸುವವರು ಕಡ್ಡಾಯವಾಗಿ ಶೌಚಾಲಯ ಕಟ್ಟಿಸಬೇಕು. ಶೌಚಾಲಯ ಹೊಂದಿರದ ಮನೆಗೆ ಸಂಖ್ಯೆ ನೀಡಲಾಗುವುದಿಲ್ಲ. ಯಾವುದೇ ಕಟ್ಟಡ ಮಾಲೀಕರು ತಮ್ಮ ಕಟ್ಟಡವನ್ನು ವಾಸ್ತವ್ಯದ ಉದ್ದೇಶಕ್ಕೆ ಯಾರಿಗಾದರೂ ಬಾಡಿಗೆಗೆ ಕೊಡುವುದಿದ್ದರೆ ಆ ಕಟ್ಟಡಕ್ಕೆ ಸೂಕ್ತ ಶೌಚಾಲಯ ಒದಗಿಸಬೇಕು. ಇದು ಗ್ರಾ.ಪಂ ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮ.
ಟಿ ಅಂಗಡಿ ಹೋಟೆಲುಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ತಿಂಡಿ, ತಿನಿಸುಗಳನ್ನು ಹೊರಗೆ ತೆಗೆದಿಡುವುದನ್ನು ನೀಷೇಧಿಸಲಾಗಿದೆ, ಇಂತಹ ನಿಯಮವನ್ನು ಪಾಲಿಸದ ಅಂಗಡಿ, ಹೋಟೆಲುಗಳ ವಿರುದ್ಧ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳುತ್ತದೆ.
ಪಂಚಾಯಿತಿ ರೂಪಿಸಿರುವ ಈ ನಿಯಮಗಳನ್ನು ಇಲ್ಲಿ ಬಹಳಷ್ಟು ಮಂದಿ ಪಾಲಿಸಿ ತಮ್ಮ ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ವಾರಕ್ಕೊಮ್ಮೆ ಸಭೆ ಸೇರಿ ಈ ಸಂಪೂರ್ಣ ಸ್ವಚ್ಛತಾ ಆಂದೋಲನದ ಪ್ರಗತಿ ಬಗ್ಗೆ ಪರಿಶೀಲನಾ ಸಭೆ ನಡೆಸಿ, ಪ್ರತಿಯೊಂದು ವಾರ್ಡ್‌ನ ಜವಾಬ್ದಾರಿಯನ್ನು ಆಯಾ ಭಾಗದ ಸದಸ್ಯರೇ ವಹಿಸಿಕೊಂಡು ಶೌಚಾಲಯವಿಲ್ಲದ ಕುಟುಂಬಗಳನ್ನು ಗುರುತಿಸಿ ಶೌಚಾಲಯಗಳನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಕುಟುಂಬಕ್ಕೆ ಆಗ ಸರ್ಕಾರ ನೀಡುವ ಮೂರು ಸಾವಿರ ಸಹಾಯಧನದ ಜತೆಗೆ ಪಂಚಾಯಿತಿ ತನ್ನ ಅದಾಯದ ಅನುದಾನದಲ್ಲಿ ತಲಾ ಒಂದು ಸಾವಿರ ರುಪಾಯಿಗಳನ್ನು ನೀಡಿದೆ. ಅಲ್ಲದೇ ಬಿ.ಪಿ.ಎಲ್. ಕಾರ್ಡ್ ಇಲ್ಲದ ಬಡ ಕುಟುಂಬಗಳಿಗೂ ಸಹ ಪಂಚಾಯಿತಿ ಮತ್ತು ಸಂಘ ಸಂಸ್ಥೆಗಳು ತಮ್ಮ ಕೈಲಾದ ಸಹಾಯ ನೀಡಿದೆ.
ಭಾಗ್ಯನಗರ ಸ್ವಚ್ಛತೆಯ ಸಾಧನೆಯಲ್ಲಿ ಇಲ್ಲಿನ ಮಹಿಳಾ ವೃತ್ತಿ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸಂಸ್ಥೆ, ದಲಿತ ಸಂಘಟನೆ, ಯುವಕ ಮಂಡಳಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ, ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಇಲ್ಲಿನ ನೈರ್ಮಲ್ಯ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಶೌಚಾಲಯ ಇಲ್ಲದ ಕುಟುಂಬಗಳ ಮನೆಗಳಿಗೆ ಮುತ್ತಿಗೆ ಹಾಕಿ, ಅಂತಹವರ ಮನವೊಲಿಸಿ ಪ್ರತಿಯೊಂದು ಮನೆಯಲ್ಲೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ಮಾಡಿದ್ದಾರೆ. ಇಲ್ಲಿನ ಶಾಲೆಗಳು ಅತ್ಯಂತ ಮಹತ್ತರವಾದ ಪಾತ್ರ ವಹಿಸಿವೆ. ಪ್ರತಿ ಶನಿವಾರ ಶಾಲಾ ಕಾಲೇಜು ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆಯ ಸಂದೇಶ ಸಾರುವ ನಾಮ ಫಲಕಗಳನ್ನು ಹಿಡಿದುಕೊಂಡು ಜಾಥಾ ನಡೆಸುವ ಮೂಲಕ ಜನರಲ್ಲಿ ಸಚ್ಛತೆಯ ಬಗ್ಗೆ ಅರಿವು ಮೂಡಿಸಿದ್ದಾರೆ. ಇದರ ಜತೆಗೆ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲು ತಮ್ಮ ಪೋಷಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಯಲು ಮಲವಿಸರ್ಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವಂತಹ ಗೋಡೆ ಬರಹಗಳನ್ನು ಬರೆಯಲಾಗಿದೆ. ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಹಾಗೂ ಈಗಾಗಲೇ ಸ್ವಚ್ಛತೆ ಸಾಧಿಸಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಸಂಪೂರ್ಣ ನೈರ್ಮಲ್ಯ ಆಂದೋಲನ ಯಶಸ್ವಿಯಾಗಿ ಜಾರಿಯಾದ ಬಗ್ಗೆ ಹೊರತಂದಿರುವ ಶಿವಮೊಗ್ಗದ ಕಿರು ಚಿತ್ರ ಹಾಗೂ ಮಲ ವಿಸರ್ಜನೆಗೆ ಹೋಗುವುದೆಲ್ಲಿ ಇತ್ಯಾದಿ ಕಿರುಚಿತ್ರಗಳನ್ನು ಬೀದಿ ಬೀದಿಯಲ್ಲಿ ಪ್ರದರ್ಶನ ಮಾಡಲಾಗಿದೆ. ಇಲ್ಲಿನ ಬ್ಯಾಂಕುಗಳು ಬರೀ ಸಾಲ ನೀಡುವುದು, ಡಿಪಾಜಿಟ್ ಪಡೆಯುವುದು ಮಾತ್ರ ತಮ್ಮ ಕೆಲಸವೆಂದು ತಿಳಿದಿಲ್ಲ. ಬ್ಯಾಂಕುಗಳು ಸಹ ಗ್ರಾಮೀಣ ಸಮುದಾಯದ ಸ್ವಚ್ಛತೆಗೆ ಸಹಾಯ ಮಾಡಲು ಮುಂದೆ ಬಂದಿವೆ. ಕೊಪ್ಪಳ ಜಿಲ್ಲೆಯ ಡಿಎಲ್‌ಸಿ ಸಭೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆರು ಸಾವಿರ ರುಪಾಯಿ ಪ್ರತಿ ಫಲಾನುಭವಿಗಳಿಗೆ ನೀಡಲು ಮುಂದೆ ಬಂದಿವೆ. ಅದರ ಜೊತೆಗೆ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಸಾರ್ವಜನಿಕ ವಂತಿಕೆ ಸಂಗ್ರಹಿಸುವುದು ಕಷ್ಟವಾಗಿರುವಾಗ ಬ್ಯಾಂಕುಗಳು ಸ್ವತಃ ನಲವತ್ತು ಸಾವಿರ ರುಪಾಯಿಗಳನ್ನು ವಂತಿಗೆ ನೀಡಿ ಸಮುದಾಯ ಶೌಚಾಲಯಕ್ಕೆ ತಮ್ಮ ಸಹಕಾರ ನೀಡುತ್ತಿವೆ.
ಪ್ರತಿ ಗ್ರಾಮ ಪಂಚಾಯತಿಯೂ ಇದೇ ರೀತಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಸಂಪೂರ್ಣ ಸ್ವಚ್ಛ ಭಾರತವನ್ನು ನಾವು ಕಾಣುವ ದಿನ ಮತ್ತು ನಮ್ಮನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು ಬೇರೆ ಹಿಂದುಳಿದ ದೇಶಗಳು ನಮ್ಮನ್ನು ಅನುಸರಿಸುವ ದಿನ ದೂರವಿಲ್ಲ ಅಲ್ಲವೇ?
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com