ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸ್ವಾಯತ್ತ ಪ್ರಸಾರ ಭಾರತಿ ಎಂಬ ಜೋಕ್

ಭಾರತದ ರಾಷ್ಟ್ರೀಯ ಪ್ರಸಾರವಾಹಿನಿಯಾದ ದೂರದರ್ಶನವು ಕೆಟ್ಟ ಕಾರಣಗಳಿಗಾಗಿ...

Vishwanath S
Updated On : 5 May 2014, 12:19 pm

ಭಾರತದ ರಾಷ್ಟ್ರೀಯ ಪ್ರಸಾರವಾಹಿನಿಯಾದ ದೂರದರ್ಶನವು ಕೆಟ್ಟ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ದೂರದರ್ಶನಕ್ಕೆ ನೀಡಿದ್ದ ಸಂದರ್ಶನವನ್ನು ಕತ್ತರಿ ಹಾಕಿ ಪ್ರಸಾರ ಮಾಡಲಾಯಿತು ಎಂಬ ವಿವಾದ ಹುಟ್ಟಿಕೊಂಡಿದೆ. ಪ್ರಸಾರ ಭಾರತಿಯ ಸಿಇಒ ಜವಾಹರ್ ಸರ್ಕಾರ್ ಈ ಕುರಿತು ನೀಡಿರುವ ಸ್ಪಷ್ಟನೆ ಪರೋಕ್ಷವಾಗಿ, ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಮನೀಷ್ ತಿವಾರಿಯವರು ದೂರದರ್ಶನದ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಹೊಂದಿದೆ. ಬಹಳ ವರ್ಷಗಳಿಂದ ನಾವು ಕೇಳುತ್ತಿರುವ ಸ್ವಾಯತ್ತೆಯನ್ನು ನೀಡುವುದಕ್ಕೆ ಸಚಿವರು ವಿಫಲರಾಗಿದ್ದಾರೆ ಎಂದು ಗಣ್ಯ ಅಧಿಕಾರಿ ಎಂದೇ ಪರಿಗಣಿತವಾಗಿರುವ ಸರ್ಕಾರ್ ಆರೋಪಿಸಿದ್ದಾರೆ. ಮೋದಿಯವರ ಸಂದರ್ಶನದ ಹಲವು ಭಾಗಗಳು ಕತ್ತರಿ ಪ್ರಯೋಗಕ್ಕೆ ಒಳಗಾಗಿದ್ದೂ ಹೌದು ಎಂದೂ ಅವರು ಒಪ್ಪಿಕೊಂಡಿದ್ದಾರೆ. ಮೋದಿಯವರು ಪ್ರಿಯಾಂಕಾರನ್ನು ಮಗಳಿದ್ದಂತೆ ಎಂದು ಹೇಳಿರುವುದಾಗಿ ಸಂದರ್ಶನವು ಬಿಂಬಿಸಿತ್ತು. ಅಲ್ಲಿಂದಲೇ ವಿವಾದ ಶುರುವಾಯಿತು. ಜವಾಹರ್ ಸರ್ಕಾರ್ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಮನೀಷ್ ತಿವಾರಿ, ಪ್ರಸಾರ ಭಾರತಿಗೆ ಸಂಸತ್ತಿನಂದಲೇ ಸ್ವಾಯತ್ತೆ ಸಿಕ್ಕಿದೆಯೆಂದೂ, ಅದರ ವ್ಯವಹಾರಗಳಿಂದ ಸಚಿವಾಲಯವು ಸುರಕ್ಷಿತ ಅಂತರವನ್ನು ಕಾಪಾಡಿಕೊಂಡಿರುವುದಾಗಿಯೂ ಹೇಳಿದ್ದಾರೆ.
ಇವೆಲ್ಲವನ್ನೂ ನಂಬಿಬಿಡೋಣ ಎಂದುಕೊಂಡರೂ ವಾಸ್ತವದಲ್ಲಿ ಬೇರೆಯದೇ ಚಿತ್ರಣವೊಂದು ಕಣ್ಣಿಗೆ ಕಟ್ಟುತ್ತದೆ.
ಪ್ರಸಾರ ಭಾರತಿ ವೆಬ್‌ಸೈಟ್ ಹೇಳುವ ಪ್ರಕಾರ- '23.11.1997ರ ಪ್ರಸಾರ ಭಾರತಿ ಆ್ಯಕ್ಟ್ ಅನ್ವಯ ಪ್ರಸಾರ ಭಾರತಿಯನ್ನು ಕಾಯಿದೆಬದ್ಧ ಸ್ವಾಯತ್ತ ಸಂಸ್ಥೆಯನ್ನಾಗಿಸಲಾಗಿದೆ. ಇದು ದೇಶದ ಸಾರ್ವಜನಿಕ ಪ್ರಸಾರ ಸೇವೆಯಾಗಿರುತ್ತದೆ. ಸಾರ್ವಜನಿಕ ಪ್ರಸಾರ ಸೇವೆಯ ಉದ್ದೇಶವನ್ನು ಪ್ರಸಾರ ಭಾರತಿ ಕಾಯ್ದೆ ಮೂಲಕ ಈಡೇರಿಸಲು, ಈ ಹಿಂದೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮಾಧ್ಯಮ ಅಂಗಗಳಾಗಿದ್ದ ಆಲ್ ಇಂಡಿಯಾ ರೇಡಿಯೊ ಮತ್ತು ದೂರದರ್ಶನವನ್ನು ಬಳಸಿಕೊಂಡು ಪ್ರಸಾರ ಭಾರತಿ ರೂಪುಗೊಂಡಿದೆ.'
ಪ್ರಸಾರ ಭಾರತಿ ಬೋರ್ಡ್ ಒಂದನ್ನು ಹೊಂದಿದ್ದು ಇದರ ಅಧ್ಯಕ್ಷರು ಹಾಗೂ ಅರೆಕಾಲಿಕ ಸದಸ್ಯರು ಕೇಂದ್ರ ಸರ್ಕಾರದಿಂದ ನೇಮಕವಾಗುತ್ತಾರೆ. ಇವರಲ್ಲಿ ಹೆಚ್ಚಿನವರು 'ಬೌದ್ಧಿಕ ವರ್ಗ' ಎಂದು ಕರೆಸಿಕೊಂಡು ಆಳುವ ಪಕ್ಷಕ್ಕೆ ಹತ್ತಿರವಾಗಿ ಇರುವವರು. ಇದರ ಪೂರ್ಣಕಾಲಿಕ ಉದ್ಯೋಗಿಗಳು ಸರ್ಕಾರಿ ನೌಕರರಾಗಿರುತ್ತಾರೆ. ಪ್ರಸಾರ ಭಾರತಿಗೆ ಎರವಲು ಸೇವೆಯ ಮೇಲೆ ಬಂದವರು ಇವರು. ಪ್ರಸಾರ ಭಾರತಿಯ ನಿರ್ದೇಶಕ ಸ್ಥಾನದಲ್ಲಿದ್ದು ನಿವೃತ್ತರಾದ ಉದ್ಯೋಗಿಯೊಬ್ಬರು ಹೇಳುವಂತೆ, ಸಿಇಒರನ್ನು ಹೊರತುಪಡಿಸಿ ಉಳಿದೆಲ್ಲ ಉದ್ಯೋಗಿಗಳೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಎರವಲು ಸೇವೆಯ ಮೇಲೆ ಬಂದವರೇ ಆಗಿರುತ್ತಾರೆ. ಈ ಉದ್ಯೋಗಿಗಳು ವಾರ್ತಾ ಮತ್ತು ಪ್ರಸಾರ ಇಲಾಖೆಗೇ ಸೇರಿರುವವರಾದ್ದರಿಂದ ಆಯಾ ಕಾಲದ ಸರ್ಕಾರಗಳು ಏನು ಹೇಳುತ್ತವೆಯೋ ಅದನ್ನು ಪಾಲಿಸುವುದು ಅನಿವಾರ್ಯವಾಗುತ್ತದೆ.
ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋಗಳ ಪ್ರಧಾನ ನಿರ್ದೇಶಕರೂ ಸರ್ಕಾರಿ ಉದ್ಯೋಗಿಗಳೇ ಆಗಿರುತ್ತಾರೆ. ಸಾಮಾನ್ಯವಾಗಿ, ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ಸಮನಾದ ಐಎಎಸ್ ಅಧಿಕಾರಿಯೊಬ್ಬರು ದೂರದರ್ಶನದ ಪ್ರಧಾನ ನಿರ್ದೇಶಕ ಹುದ್ದೆಯಲ್ಲಿರುತ್ತಾರೆ. ವಾರ್ತಾ ಮತ್ತು ಪ್ರಸಾರ ಸೇವೆ ಹಿರಿಯ ಅಧಿಕಾರಿಯೇ ಆಲ್ ಇಂಡಿಯಾ ರೇಡಿಯೊದ ಪ್ರಧಾನ ನಿರ್ದೇಶಕರಾಗಿರುತ್ತಾರೆ. ಸಿಬ್ಬಂದಿ ಸಚಿವಾಲಯದ ನಿಯಂತ್ರಣಕ್ಕೆ ಇವರೆಲ್ಲರೂ ಒಳಪಟ್ಟಿರುತ್ತಾರೆ. ದಾಖಲೆಯ ಮಟ್ಟಿಗೆ ಮಾತ್ರವೇ ಅವರು ಪ್ರಸಾರ ಭಾರತಿಯ ಉದ್ಯೋಗಿಗಳು. ವಾಸ್ತವದಲ್ಲಿ ಸರ್ಕಾರದ ಇತರೇ ನೌಕರರಿಗೂ ಇವರಿಗೂ ವ್ಯತ್ಯಾಸವೇನೂ ಇಲ್ಲ.
ದೂರದರ್ಶನದ ಉದ್ಯೋಗಿಯೊಬ್ಬರು ಖಾಸಗಿಯಾಗಿ ಮಾತನಾಡುತ್ತ ಹೀಗೆ ಹೇಳುತ್ತಾರೆ- 'ಅವರು ಸ್ವಾಯತ್ತರಾಗಿರುವುದಾದರೂ ಹೇಗೆ? ಪ್ರಸಾರ ಭಾರತಿ ಸ್ವಾಯತ್ತ ಸಂಸ್ಥೆ ಎಂದು ಹೇಳುವುದೇ ಒಂದು ಜೋಕ್. ಸರ್ಕಾರ ಈ ಬಗ್ಗೆ ನಿಜಕ್ಕೂ ಗಂಭೀರವಾಗಿದ್ದರೆ ಅದನ್ನೊಂದು ಸಂವಿಧಾನಿಕ ಸಂಸ್ಥೆಯಂತೆ ನಡೆಸಬೇಕು.' ಅವರ ಪ್ರಕಾರ, ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಹಿಡಿದು ಪ್ರಧಾನಿ ಕಚೇರಿಯವರೆಗೆ ಎಲ್ಲರೂ ಆಗಾಗ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊಗಳ ದೈನಂದಿನ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುತ್ತಲೇ ಇರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಡಿಡಿ ಮತ್ತು ಎಐಆರ್‌ನ ಮೇಲ್ಮಟ್ಟದ ಉದ್ಯೋಗಿಗಳು ತಾವೇ ಸರ್ಕಾರವನ್ನು ಪುಸಲಾಯಿಸುತ್ತ ಉತ್ತಮ ಹುದ್ದೆ ಹಾಗೂ ನಿವೃತ್ತಿ ನಂತರದ ಲಾಭಗಳಿಗೆ ಹಾತೊರೆದುಕೊಂಡಿರುತ್ತಾರೆ.
'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ಬರೆದ ಲೇಖನದಲ್ಲಿ ಖ್ಯಾತ ಪತ್ರಕರ್ತ ಬಿ ಜಿ ವರ್ಗೀಸ್ ಹೀಗೆ ಅಭಿಪ್ರಾಯಪಟ್ಟಿದ್ದಾರೆ- 'ಸರ್ಕಾರಕ್ಕೇ ಎಲ್ಲವೂ ಗೊತ್ತು ಎಂಬ ನಿಲವು ಸಿಇಒ ಮತ್ತು ಇಬ್ಬರು ಪ್ರಧಾನ ನಿರ್ದೇಶಕರ ನಿಯಂತ್ರಣದಲ್ಲೇ ಗೊತ್ತಾಗುತ್ತದೆ. ಈ ಕೇಡರ್ ಸಿಬ್ಬಂದಿ ಇಲಾಖೆಯ ಅಧೀನವೇ ಹೊರತು ಪ್ರಸಾರ ಭಾರತಿಯದ್ದಲ್ಲ. ಉತ್ತಮ ವ್ಯಕ್ತಿಗಳು ಎಲ್ಲೇ ಇರಲಿ ಅವರನ್ನು ಸೆಳೆದುಕೊಳ್ಳುವ ವ್ಯವಸ್ಥೆ ಏಕೆ ಆಗಬಾರದು? ಪ್ರಸಾರ ಭಾರತಿ ಮರು ರಚನೆ ಆಗುವ ಅವಶ್ಯಕತೆ ಇದೆ. ಅದಕ್ಕೂ ಮೊದಲು ದಯಾಮರಣ ಬೇಡುವಂಥ ಸ್ಥಿತಿಯಿಂದ ಅದು ಹೊರಬರಬೇಕು. ನಿಜಕ್ಕೂ ಸ್ವಾಯತ್ತವಾಗಿರುವ ಹಾಗೂ ಕೇಂದ್ರೀಕೃತವಲ್ಲದ ಸಾರ್ವಜನಿಕ ಪ್ರಸಾರ ಸೇವೆ, ಸಂವಾದ, ಸಬಲೀಕರಣ, ಸಂಸ್ಕೃತಿ, ಸೃಜನಾತ್ಮಕತೆ ಹಾಗೂ ಭಾರತದ ವೈವಿಧ್ಯದಲ್ಲಿ ಏಕತೆಯ ಆಶಯಗಳನ್ನು ಈಡೇರಿಸುವಲ್ಲಿ ಉತ್ತಮ ಪಾತ್ರ ನಿರ್ವಹಿಸಲಿದೆ. ಸರ್ಕಾರದ ವ್ಯವಸ್ಥೆಯಿಂದಾಚೆಗೆ ಲಭ್ಯವಿರುವ ಪ್ರತಿಭೆಗಳು ಹಲವು. ಹೀಗಾಗಿ ಮುಚ್ಚಿದ ಬಾಗಿಲಿನ ಚಟುವಟಿಕೆ ಹೊರತಾದ, ಭಾರತದ ಜನರ ಸೃಜನಾತ್ಮಕತೆ ಮತ್ತು ನಂಬಿಕೆಗಳನ್ನು ಬಲಗೊಳಿಸುವ ವ್ಯವಸ್ಥೆಯಾಗಬೇಕು.'  
ಪ್ರಸಾರ ಭಾರತಿಯಿಂದಲೇ ಅದರ ಉದ್ಯೋಗಿಗಳ ನೇರ ನೇಮಕವಾಗುವ ಪರಿಸ್ಥಿತಿ ಬರದಿದ್ದರೆ, ಸಿಬ್ಬಂದಿ ಸಚಿವಾಲಯದ ನಿಯಂತ್ರಣದಲ್ಲೇ ಇರುವಂತಾದರೆ, ಅದು ಸರ್ಕಾರದ ಪರ ಪ್ರಚಾರ ಮಾಡುವ ಯಂತ್ರವಾಗಿಯೇ ಉಳಿದುಕೊಳ್ಳಲಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದರೂ, ಬಿಜೆಪಿ ನೇತೃತ್ವದ ಸರ್ಕಾರವೇ ಬಂದರೂ, ತೃತೀಯ ರಂಗದ ಸರ್ಕಾರವೇ ಆದರೂ ಈ ಪರಿಸ್ಥಿತಿಯಲ್ಲಿ ಬದಲಾವಣೆಗಳಾಗದು.


- ಡಿ. ಪಿ. ಸತೀಶ್
ಸಿಎನ್‌ಎನ್-ಐಬಿಎನ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement