ಕರಾವಳಿಯಲ್ಲಿ ಗೂಂಡಾಗಿರಿಗೆ ಅಭಯ
'ನಮಗೆ ಹೊಡೆಯಲು ಗೊತ್ತಿದೆ. ನಮ್ಮವರ ಕೈ, ಕಾಲು ಗಟ್ಟಿ ಇದೆ. ಇನ್ನೊಮ್ಮೆ ಪೇಪರ್ನಲ್ಲಿ ಬರೆದು ಇರಿಟೇಟ್ ಮಾಡಿದರೆ ನಿಮ್ಮ ಕೈಕಾಲು ಮುರಿಯುತ್ತೇವೆ, ಭಿಕ್ಷೆ ಬೇಡಿ ಬದುಕುವಂತೆ ಮಾಡುತ್ತೇವೆ. ಇದು ವಾರ್ನಿಂಗ್. ಇನ್ನು ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಸುಮ್ಮನೆ ಇರೋದಿಲ್ಲ. ಮೂಡುಬಿದರೆಗೆ ನಿಮ್ಮ ಪೊಟ್ಟು ಪತ್ರಿಕೆ ಬಂದರೆ ಸುಟ್ಟು ಹಾಕುತ್ತೇವೆ...'
ಕಡಿಯುತ್ತೇವೆ, ಸುಡುತ್ತೇವೆ ಎಂಬ ಭಯೋತ್ಪಾದನೆ ಹೇಳಿಕೆ ಬಂದದ್ದು ಕಾಂಗ್ರೆಸ್ ಸರ್ಕಾರದಲ್ಲಿ ಘನತೆವೆತ್ತ ಯುವಜನ ಮತ್ತು ಕ್ರೀಡಾ ಸಚಿವ, ಮೀನುಗಾರಿಕೆ ಸಚಿವ, ಚಿಕ್ಕಮಗಳೂರು ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಅವರಿಂದ. ಅದೂ ಮೂಡುಬಿದರೆಯ ಹಳ್ಳಿಯ ಪತ್ರಕರ್ತನ ವಿರುದ್ಧ! ಅಭಯಚಂದ್ರರು ಹೆಸರಿಗೆ ವಿರುದ್ಧವಾಗಿ, ಅವರ ಶ್ರೇಷ್ಠ ಧರ್ಮದ ಅಹಿಂಸೆ ವಿರುದ್ಧವಾಗಿ, ಸಚಿವನ ಜವಾಬ್ದಾರಿಯುತ ಹುದ್ದೆಗೆ ವಿರುದ್ಧವಾಗಿ ಅಂತಿಮವಾಗಿ ಮಾನವೀಯತೆ ವಿರುದ್ಧವಾಗಿ ಗುಡುಗಿದ್ದಾರೆ. ದರ್ಪದ ಉಸ್ತುವಾರಿ ಸಚಿವರುಗಳು ಒಂದೆಡೆಯಾದರೆ, ಹಿಂಸಾ ಪ್ರವೃತ್ತಿಯ ತಾಲಿಬಾನಿ ಸಂತತಿಗಳು, ಪೂರ್ವಗ್ರಹ ಪೀಡಿತ ಪೊಲೀಸ್ ಅಧಿಕಾರಿಗಳು, ಬದುಕನ್ನೇ ಕಿತ್ತು ಹಾಕಲು ಬರುತ್ತಿರುವ ಉಷ್ಣ ವಿದ್ಯುತ್ ಸ್ಥಾವರಗಳು...
ರಕ್ಷಣೆಗೆ ಮೊರೆ ಇಡಬೇಕಾದ ಸರ್ಕಾರದ ಪ್ರತಿನಿಧಿಗಳೇ ಕೈಕಾಲು ಮುರಿಯುತ್ತೇವೆ ಎನ್ನುವುದನ್ನು ಕೇಳುವಂಥ ಸ್ಥಿತಿ ಕರಾವಳಿ ಜನರಿಗೆ ಬಂದಿರುವುದು ವಿಪರ್ಯಾಸ. ದಕ್ಷಿಣ ಕನ್ನಡದಲ್ಲಿ 'ಗೂಂಡಾ ರಾಜ್' ವರ್ಷಪೂರ್ತಿ ಯಶಸ್ವಿ ಪ್ರದರ್ಶನ ಕಂಡಿದೆ. ಅಭಯಚಂದ್ರ ಜೈನ್ ಭಯೋತ್ಪಾದನೆ ಹೇಳಿಕೆಗೆ ಮುಂಚಿತವಾಗಿ ಪ್ರಚಾರದಲ್ಲಿ ಇದ್ದದ್ದು ಕಾಂಗ್ರೆಸ್ ಮುಖಂಡರ ಬಂಟ್ವಾಳ ಟೋಲ್ಗೇಟ್ ಧ್ವಂಸ ಪ್ರಕರಣ. ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಜನಪ್ರತಿನಿಧಿಗಳೇ ಖುದ್ದು ದೊಣ್ಣೆ, ರಾಡ್ಗಳನ್ನು ಹಿಡಿದುಕೊಂಡು ಹೆದ್ದಾರಿಯಲ್ಲಿರುವ ಟೋಲ್ ಗೇಟ್ಗೆ ನುಗ್ಗಿ ಪೊಲೀಸರ ಸಮ್ಮುಖವೇ ಧ್ವಂಸ ಮಾಡಿರುವುದು. ಇದಕ್ಕೆ ಹಿಂದೆ ರೌಡಿ ಶೀಟ್ನಲ್ಲಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರು ಮತ್ತು ಪುರಸಭೆ ಸದಸ್ಯರದೇ ನೇತೃತ್ವ. ಸಿಸಿ ಕ್ಯಾಮೆರಾದಲ್ಲಿ ಎಲ್ಲ ದಾಂಧಲೆಕೋರರ ಮುಖ ಕಾಣುತ್ತದೆ. ಆದರೆ ಆರೋಪಿಗಳನ್ನು ಬಂಧಿಸುವುದಿಲ್ಲ. ನಾಮಕೇವಾಸ್ತೆಗೆ ಒಬ್ಬನನ್ನು ಬಂಧಿಸುತ್ತಾರೆ. ಕೊನೆಗೆ ಯಥಾ ಪ್ರಕಾರ ಪೊಲೀಸರನ್ನು ಅಮಾನತು ಮಾಡಿ ಬಲಿಪಶು ಮಾಡಲಾಗುತ್ತದೆ.
16 ಕ್ರಿಮಿನಲ್ ಕೇಸ್, 8 ಜಾಮೀನು ರಹಿತ ವಾರಂಟ್ ಇರುವ ಹಸೈನಾರ್ ಎಂಬ ಕ್ರಿಮಿನಲ್, ಚುನಾವಣೆ ಪ್ರಚಾರ ವೇಳೆ ಉಸ್ತುವಾರಿ ಸಚಿವರ ರೈಗಳ ಹಿಂಬದಿಯಲ್ಲಿ ಇರುತ್ತಾರೆ, ಕಾಂಗ್ರೆಸ್ ಅಭ್ಯರ್ಥಿಗಳ ಹಿಂದೆ ತಿರುಗಾಡುತ್ತಾರೆ. ಇದೇ ಧೈರ್ಯದಲ್ಲಿ ಟೋಲ್ಗೇಟ್ ಧ್ವಂಸಮಾಡುತ್ತಾರೆ, ಅಲ್ಲಿದ್ದ ಕೂಲಿ ಕಾರ್ಮಿಕರು ಕೋಮು ದ್ವೇಷದಿಂದ ಹಲ್ಲೆಗೊಳಗಾಗುತ್ತಾರೆ. ಏನಿದು ಮಂಗಳೂರಲ್ಲಿ ಗೂಂಡಾ ರಾಜ್ಯವೇ? ಬಿಜೆಪಿ ಸರ್ಕಾರ ಇರುವಾಗ ಪಬ್, ಹೋಮ್ ಸ್ಟೇಗಳಲ್ಲಿ ಪಾರ್ಟಿ ಮಾಡುತ್ತಿದ್ದವರಿಗೆ ಹಲ್ಲೆ, ಪ್ರಾರ್ಥನೆ ಮಂದಿರಗಳಿಗೆ ಕಲ್ಲು, ನೈತಿಕ ಪೊಲೀಸ್ ಗಿರಿ ನಡೆಯುತ್ತಿತ್ತು. ಆದರೆ ಈಗ ಅನ್ಯಮತೀಯ ಮಹಿಳೆಗೆ ನೆರವಿಗೆ ಹೋದ ಪತ್ರಕರ್ತರಿಗೆ, ಕೂಲಿ ಕಾರ್ಮಿಕನ ಮೇಲೆ ತಾಲಿಬಾನಿಗಳ ಹಿಂಸಾ ಕೃತ್ಯಗಳು, ಗೂಂಡಾಗಳ ದಾಂಧಲೆಗಳು.. ಆಗ ಕಿವಿ ಹಿಂಡುತ್ತಿದ್ದರೆ ಈಗ ಕೈಕಾಲು, ಕತ್ತನ್ನೇ ಕತ್ತರಿಸುತ್ತಿದ್ದಾರೆ! ಇದಕ್ಕೆಲ್ಲ ಕ್ಲೈಮ್ಯಾಕ್ಸ್ ಎನ್ನುವಂತೆ ಸರ್ಕಾರದ ಪ್ರತಿನಿಧಿಯಿಂದಲೇ ಪತ್ರಕರ್ತರ ಕೈಕಾಲು ಮುರಿಯುವ ಬೆದರಿಕೆ ಹೊರಬಿದ್ದಿದೆ. ಪತ್ರಕರ್ತರಿಗೆ ನಿಂದಿಸಿದರೆ ಹಲ್ಲೆ ಮಾಡಿದರೆ ಏನು ಆಗದು, ಮಾಧ್ಯಮದಲ್ಲಿ ತಮಗೆ ಪ್ರಚಾರ ಸಿಗುತ್ತದೆ ಎಂಬ ಹುಚ್ಚು ಧೈರ್ಯವೇ ಇದಕ್ಕೆ ಕಾರಣ. ಆದರೆ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗದ ಹುಳುಕುಗಳನ್ನು ತೆಗೆಯುವುದು ಮಾತ್ರವಲ್ಲದೆ, ಜನಸಾಮಾನ್ಯರ ಸಮಸ್ಯೆಗಳಿಗೆ, ನೋವು ನಲಿವುಗಳಿಗೆ ಆಧಾರವಾಗಿರುವುದು ಇದೇ ಮಾಧ್ಯಮ. ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿಚಾರದಲ್ಲಂತೂ ಮಾಧ್ಯಮ ಸಂತ್ರಸ್ತರಾಗಲಿರುವ ನಿಡ್ಡೋಡಿ ಜನರ ಪರವಾಗಿಯೇ ವರದಿ ಮಾಡಿದೆ. ಪರೋಕ್ಷವಾಗಿ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸಿದಂತಾಗಿದೆ.
ಜನ ಸಾಮಾನ್ಯರನ್ನು ದಮನಿಸುವ ಪ್ರವೃತ್ತಿ ಮೂಲ್ಕಿ ರಿಕ್ಷಾ ಚಾಲಕರ ಪ್ರಕರಣದಲ್ಲಿ ಬಹಿರಂಗವಾಗಿತ್ತು. ರಿಕ್ಷಾ ಚಾಲಕರ ಮೇಲೆ ಹಲ್ಲೆಗೆ ಮುಂದಾದ ಕ್ರೀಡಾ ಸಚಿವರನ್ನು ಉಳಿದವರೇ ತಡೆದಿದ್ದರಿಂದ ಕೆಟ್ಟ ಘಟನೆ ತಪ್ಪಿ ಹೋಗಿತ್ತು. ಇದಾದ ಬಳಿಕ ಕಾಂಗ್ರೆಸ್ ಆಡಳಿತದಲ್ಲಿದ್ದ ಮೂಲ್ಕಿ ಸ್ಥಳಿಯಾಡಳಿತ ಬಿಜೆಪಿ ಕೈವಶ ಆಗಿದ್ದನ್ನು ನೆನಪಿಸಲೇಬೇಕು. ಅಧಿಕಾರ ಮದದಿಂದ ಜನರ ಮುಖವಾಣಿಯಾಗಿರುವ ಮಾಧ್ಯಮದ ಮೇಲೆಯೇ ದಬ್ಬಾಳಿಕೆ ನಡೆದರೆ ಅಪಾಯಕಾರಿ.
ಒಂದು ಇರುವೆಯನ್ನು ಕೊಲ್ಲುವುದಿಲ್ಲ ನಾವು ಎಂದು ಹಲವು ಬಾರಿ ಹೇಳಿದ್ದ ಜೈನ್, ಮೀನುಗಾರಿಕೆಯಲ್ಲಿ ಹಿಂಸೆ ಆಗುತ್ತದೆ ಎಂಬ ಕಾರಣಕ್ಕೆ ಖಾತೆ ಬೇಡ ಎಂದು ಸ್ವಾಮೀಜಿಗಳ ಮೂಲಕ ಹೇಳಿಸಿದ್ದರು. ಇರುವೆ ಕೊಲ್ಲುವುದಿಲ್ಲ ಸರಿ, ಪತ್ರಕರ್ತರನ್ನು ಕೊಲ್ಲಬಹುದೇ? ಒಬ್ಬೊಬ್ಬ ಉಸ್ತುವಾರಿ ಸಚಿವರು ಒಂದೊಂದು ಕಡೆ ದಾಂಧಲೆ ನಡೆಸುವ ಉಸ್ತುವಾರಿ ವಹಿಸಿಕೊಂಡಿದ್ದಾರೆಯೇ?
ಕಲ್ಲಡ್ಕದಲ್ಲಿ ಕಾಂಗ್ರೆಸ್ ಸೌಹಾರ್ದ ಸಮಾವೇಶದ ಕಲ್ಲು ತೂರಾಟ ಪ್ರಕರಣದಲ್ಲಿಯೂ ಬಲಿ ಪಶು ಆದದ್ದು ಬಡಪಾಯಿ ಪೊಲೀಸರು. ಎಲ್ಲಿಯವರೆಗೆ ಎಂದರೆ ಉಡುಪಿಯಲ್ಲಿ ತರಬೇತಿ ಪಡೆಯುತ್ತಿದ್ದ ಬಂಟ್ವಾಳ ಠಾಣೆ ಪೊಲೀಸ್ ಕೂಡಾ ಗೋವಾ ಗಡಿ ಪ್ರದೇಶದ ಜೊಯ್ಡಾಕ್ಕೆ ವರ್ಗವಾಗಿದ್ದಾನೆ. ಏಕೆಂದರೆ ಆತ ಕೈಗೆ ಕೇಸರಿ ದಾರ ಕಟ್ಟುಕೊಳ್ಳುತ್ತಾನೆ. ಕಲ್ಲೇಟಿನಲ್ಲಿ ಗಾಯಗೊಂಡ ಇನ್ನೊಬ್ಬ ಪೊಲೀಸ್ ಆಸ್ಪತ್ರೆಯಿಂದ ನೇರವಾಗಿ ಜೊಯ್ಡಾಕ್ಕೆ ಕರ್ತವ್ಯಕ್ಕೆ ಹೋಗಬೇಕಾಯಿತು. ಘಟನೆ ದಿನ ದೂರದ ಪುತ್ತೂರಲ್ಲಿದ್ದ ಪೊಲೀಸ್ ಕೂಡಾ ಜೊಯ್ಡಾಕ್ಕೆ ವರ್ಗಾಯಿಸಲಾಗಿದೆ.
ಜಿಲ್ಲೆಯ ಹೊರಗೆ ವರ್ಗಾವಣೆ ಪೊಲೀಸ್ ನಿಯಮಾವಳಿಯಲ್ಲಿಯೇ ಇಲ್ಲ. ಆದರೆ ದಕ್ಷಿಣ ಕನ್ನಡದಲ್ಲಿರುವ ಕೋಮುವಾದಿ ಪೊಲೀಸರ ವರ್ಗಾವಣೆಗೆ ಪೊಲೀಸ್ ಕಾಯ್ದೆಯಲ್ಲಿಯೇ ತಿದ್ದುಪಡಿ ಮಾಡಿ ಹೊರ ಜಿಲ್ಲೆಗಳಿಗೆ ವರ್ಗಾವಣೆ ಮಾಡುವ ನಿಯಮ ಜಾರಿಗೆ ತರಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿ ಹೇಳಿ ಸಂಭ್ರಮಿಸುತ್ತಾರೆ. ಬಾವಾ ಬೆಳಗ್ಗೆ ಸುದ್ದಿಗೋಷ್ಠಿ ಮಾಡಿ ರಾತ್ರಿ ಮಲ್ಯನ ಜತೆ ಐಪಿಎಲ್ ನೋಡುತ್ತಿರುತ್ತಾರೆ, ಅವರಿಗೆ ಸಾಮರ್ಥ್ಯ ಇದೆ. ಆದರೆ ಸಂಬಳ ಎರಡಂಕಿ ತಲುಪದೆ ಒದ್ದಾಡುತ್ತಿರುವ ಪೊಲೀಸರು ಕುಟುಂಬ ಸಮೇತರಾಗಿ ಗೋವಾ ಗಡಿಯಲ್ಲಿ ಬದುಕಲು ಸಾಧ್ಯವೇ? ಪೊಲೀಸರ ವೇತನದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸದರೆ ರಾಜ್ಯದಲ್ಲಿ ಅತಿ ಕನಿಷ್ಠ. ಈಗ ಎಲ್ಲಿಯವರೆಗೆ ಕಿರಿಕ್ ಪ್ರದೇಶ ಎಂದರೆ ಬಂಟ್ವಾಳಕ್ಕೆ ಎಸಿಪಿಯಾಗಿ ಬರಲೂ ಇಲಾಖೆಯಲ್ಲಿ ಯಾರೂ ಒಪ್ಪುತ್ತಿಲ್ಲ. ಸುಳ್ಯದಲ್ಲಿ ಕಾಂಗ್ರೆಸ್ನ ಗೂಂಡಾ ಒಬ್ಬ ತಮ್ಮದೇ ಪಕ್ಷದ ನಾಯಕಿಯ ಎದೆಗೆ ಚೂರಿ ಹಾಕುತ್ತಾರೆ, ಆಕೆಯ ಗಂಡನಿಗೂ ಚೂರಿ ಇರಿಯುತ್ತಾನೆ. ಯಥಾ ಪ್ರಕಾರ ಜನಾರ್ದನ ಪೂಜಾರಿ ಅವರು ಘಟನೆಯನ್ನು ಖಂಡಿಸುತ್ತಾರೆ. ಬಿಜೆಪಿ ಸರ್ಕಾರದಲ್ಲಿಯೂ ಖಂಡನೆ, ಕಾಂಗ್ರೆಸ್ ಸರ್ಕಾರದಲ್ಲಿಯೂ ಖಂಡನೆ. ಟೋಲ್ಗೇಟ್ ಧ್ವಂಸದಲ್ಲಿಯೂ ಸಂಘ ಪರಿವಾರದ ಕೈವಾಡ ಇದೆ ಎನ್ನುವ ಪೂಜಾರಿಗಳು, ದಿಗ್ವಿಜಯ ಸಿಂಗ್ ರಾಸಲೀಲೆ ಮಾಡಿ ಅಪ್ಪಿಕೊಂಡರೂ ಒಪ್ಪಿಕೊಂಡಿದ್ದಾರೆ ಎಂಬ ಕಾರಣಕ್ಕೆ ಮಾಫಿ ನೀಡುತ್ತಾರೆ. ಪ್ರಪಂಚವೇ ಮುಳುಗಲಿ ನರೇಂದ್ರ ಮೋದಿ ಪತ್ನಿ ವಿಚಾರದ ಸುತ್ತಲೇ ಇರುತ್ತಾರೆ!
ಬಿಜೆಪಿ ಸರ್ಕಾರ ಬಿದ್ದು ಕಾಂಗ್ರೆಸ್ ಬಂದ ಬಳಿಕ ಬದಲಾವಣೆ ಏನೋ ಆಗಿದೆ. ಅಲ್ಪಸಂಖ್ಯಾತ ರೌಡಿಗಳ ಮೇಲಿನ ರೌಡಿಶೀಟ್ ರದ್ದಾಗುತ್ತದೆ, ಸಂಘ ಪರಿವಾರ ಸಂಘಟನೆಯಲ್ಲಿ ಸಣ್ಣಪುಟ್ಟ ಕೇಸ್ ದಾಖಲಿಸಿಕೊಂಡವರ ಮೇಲೆ ರೌಡಿಶೀಟ್ ಓಪನ್ ಆಗುತ್ತದೆ. ಗೂಂಡಾ ಕಾಯ್ದೆ ಜಾರಿಗೆ ಸಿದ್ಧತೆ ನಡೆಯುತ್ತದೆ.
ಹಿಂದೆ ಸಂಘಪರಿವಾರ ಸಂಘಟನಗೆಳು ನೈತಿಕ ಪೊಲೀಸ್ಗಿರಿ ನಡೆಸುತ್ತಿದ್ದರೆ ಈಗ ಅದಕ್ಕಿಂತ ಭೀಕರವಾಗಿ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ತಾಲಿಬಾನಿ ಕೃತ್ಯ ನಡೆಸುತ್ತಿದೆ. ಜನ ಈ ಪರಿವರ್ತನೆ ಬಯಸಿದ್ದರೇ? ಇದಕ್ಕಾಗಿಯೇ ಮತ ನೀಡಿದ್ದಾರೆಯೇ?
- ಜಿತೇಂದ್ರ ಕುಂದೇಶ್ವರ, ಕನ್ನಡಪ್ರಭ