ಗಾಂಧಿ ಕುಟುಂಬ ನಿಷ್ಠ ಅಮೇಠಿಯಲ್ಲಿ ಅಭಿವೃದ್ಧಿಗೆ ಮಾತ್ರ 'ರಾಹು'ಕಾಲ
ಮೂರು ತಿಂಗಳ ಹಿಂದಿನ ಮಾತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್...
ಮೂರು ತಿಂಗಳ ಹಿಂದಿನ ಮಾತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೆಹಲಿಯ ತುಘಲಕ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಒಂದಿಷ್ಟು ಪತ್ರಕರ್ತರನ್ನು ಚಹಾಕ್ಕೆ ಕರೆದು 2 ಗಂಟೆ ಹರಟೆ ಹೊಡೆದಿದ್ದರು. ಆಗ ರಾಹುಲ್ ಓತಪ್ರೋತವಾಗಿ ಹರಿಬಿಟ್ಟಿದ್ದ ಆಫ್ ದಿ ರೆಕಾರ್ಡ್ ಚಿಂತನೆ ಕೇಳಿ ನನಗೆ ಈ ವ್ಯಕ್ತಿ ಸ್ವಲ್ಪ ್ಛ್ಟಟಿಜ್ಡಿಡಜಜ ಹೌದು, ಆದರೆ ಕೆಲಸ ಮಾಡಬೇಕೆಂಬ ಉಮೇದಿಯಂತೂ ಹೊಂದಿದ್ದಾನೆ ಎಂದೆನಿಸಿತ್ತು. ಆದರೆ ರಾಹುಲ್ರ ಅಮೇಠಿಯಲ್ಲಿ 2 ದಿನ ಕಳೆದ ಮೇಲೆ ನನಗೆ ಅನ್ನಿಸಿದ್ದು ರಾಹುಲ್ ಹೆಚ್ಚು ಮಾತನಾಡುತ್ತಾರೆ ಆದರೆ ಅದನ್ನು ಜಾರಿಗೆ ತರುವ ಕ್ಷಮತೆ ಅನುಭವ ಮತ್ತು ಇಚ್ಛಾಶಕ್ತಿ ಸದ್ಯಕ್ಕೆ ಅವರಲ್ಲಿಲ್ಲ ಎಂದು. ಜನವರಿಯಲ್ಲಿ ದೆಹಲಿಯ ತಾಲಕತೋರಾನಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ತನ್ನ ಕನಸಿನ ಭಾರತದ ಬಗ್ಗೆ ರಾಹುಲ್ ಹೇಳಿಕೊಂಡಾಗ ಖುಷಿಯೆನಿಸಿತ್ತು. ಆದರೆ ರಾಹುಲ್ರ ಅಮೇಠಿ ನೋಡಿದಾಗ ನಿಜಕ್ಕೂ ಭ್ರಮನಿರಸನವಾಗುತ್ತದೆ.
ನನ್ನ ಪ್ರಕಾರ ನರೇಂದ್ರ ಮೋದಿಯನ್ನು ವಿರೋಧಿಸುವವರು ಒಮ್ಮೆ ಗುಜರಾತ್ಗೆ ಹಾಗೂ ಗಾಂಧೀ ಪರಿವಾರವನ್ನು ಅಂಧಾನುಕರಣೆ ಮಾಡುವವರು ಅಮೇಠಿಗೆ ಅಧ್ಯಯನ ಪ್ರವಾಸಕ್ಕೆ ಹೋಗಿ ಬಂದರೆ ದೇಶದ ಯುವ ಜನತೆ ಸದ್ಯಕ್ಕೆ ಯುವರಾಜನನ್ನು ಕೈ ಬಿಟ್ಟು ಮೋದಿಯವರ ಬೆನ್ನು ಹತ್ತಿದ್ದು ಏಕೆ ಎಂದು ಸ್ಪಷ್ಟವಾಗಿ ಅರ್ಥವಾಗುತ್ತದೆ.
ಅಮೇಠಿ ಅಯೋಧ್ಯೆಯ ಹತ್ತಿರವಿರುವ ಅವಧ ಪ್ರಾಂತ್ಯದ ಸಣ್ಣ ಪಟ್ಟಣ. ಮಾ ಅಂಬೆಯಿಂದ "ಅಮೇಠಿ" ಹೆಸರು ಪಡೆದುಕೊಂಡಿತು ಈ ಊರು. ಜನ ಮಾತನಾಡುವುದು ಗ್ರಾಮ್ಯ ಹಿಂದಿಯಲ್ಲಿ. ಕೃಷಿ ಪ್ರಧಾನವಾಗಿರುವ ಅಮೇಠಿಯಲ್ಲಿ ಜಗದೀಶಪುರ ತಾಲೂಕಿನಲ್ಲಿ ಮಾತ್ರ ರಾಜೀವ್ ಆರಂಭಿಸಿದ ಕೆಲ ಖಾಸಗಿ ಕಾರ್ಖಾನೆಗಳಿವೆ.
ರಾಯ್ಬರೇಲಿ ಪಕ್ಕದಲ್ಲಿರುವುದರಿಂದ ಮೊದಲು ಸಂಜಯ್ ಗಾಂಧಿ ತುರ್ತುಪರಿಸ್ಥಿತಿ ನಂತರದ ಚುನಾವಣೆಯಲ್ಲಿ ಸೋತು ನಂತರ 1980 ರಲ್ಲಿ ಗೆದ್ದ ನಂತರ ಸತತವಾಗಿ (1998 ಬಿಟ್ಟು )ಅಮೇಠಿ ಗಾಂಧಿ ಕುಟುಂಬಕ್ಕೆ ನಿಷ್ಠೆ ಮೆರೆದಿದೆ. ಇನ್ನುವರೆಗೂ ಕೂಡ ಇಲ್ಲಿನ ಜನ ಸಂಜಯ್ ಹಾಗೂ ರಾಜೀವ್ ಗಾಂಧಿ ಮಾಡಿದ ಕೆಲಸ ಹಾಗೂ ತೋರಿಸಿದ ಪ್ರೀತಿಯನ್ನು ನೆನೆಸುತ್ತಾರೆ. ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಹಾಗು ಬಿ ಎಚ್ಇಎಲ್ ಕಾರ್ಖಾನೆಯನ್ನು ಅಮೇಠಿಗೆ ತಂದು ರಾಜೀವ ಗಾಂಧಿ ಇಲ್ಲಿ ಅಭಿವೃದ್ಧಿಯ ಕನಸನ್ನು ಬಿತ್ತಿದ್ದರು. ಅರವತ್ತು ಹಾಗೂ ನಲವತ್ತರ ಆಸುಪಾಸು ವಯಸ್ಸಿನ ಎರಡು ಪೀಳಿಗೆಯ ಮುಗ್ಧ ಜನ ಇನ್ನೂ ಕೂಡ ತಾವು ಗಾಂಧಿ ಪರಿವಾರದ ಭಾಗ ಎನ್ನುವಷ್ಟರ ಮಟ್ಟಿಗೆ ರಾಹುಲ್ ಭಯ್ಯಾ ಹಾಗೂ ಪ್ರಿಯಾಂಕಾ ದೀದಿಯನ್ನು ಪ್ರೀತಿಸುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಆರಾಧಿಸುತ್ತಾರೆ.
ಆದರೆ ಇದಕ್ಕೆ ಪ್ರತಿಯಾಗಿ ರಾಹುಲ್ ಕಳೆದ ಹತ್ತು ವರ್ಷಗಳಲ್ಲಿ ಅಮೇಠಿಯ ಜನರ ಆಶೋತ್ತರಗಳಿಗೆ ಸ್ಪಂದಿಸಿ ಅಭಿವೃದ್ಧಿ ನಡೆಸಿದ ದೃಶ್ಯಗಳು ಇಲ್ಲಿ ಮೇಲ್ನೋಟಕ್ಕೆ ಕಾಣುವುದಿಲ್ಲ. ಅಮೇಠಿ ಇನ್ನು ಕೂಡ 1970ರ ದಶಕದ ಪಟ್ಟಣದಂತಿದೆ. ಗುಂಡಿ ಬಿದ್ದಿರುವ ರಸ್ತೆಗಳು, ಕಣ್ಣಾ ಮುಚ್ಚಾಲೆಯಾಡುವ ಲೈಟು, ಮುಚ್ಚಿ ಹೋಗಿರುವ ರಾಜೀವ್ ಕಾಲದ ಜಗದೀಶಪುರದ ಖಾಸಗಿ ಕಾರ್ಖಾನೆಗಳು, ಉದ್ಯೋಗ ವಂಚಿತ ಯುವ ಜನರು. ಸರಳವಾಗಿ ಹೇಳಬೇಕೆಂದರೆ ದೇಶದ ಜ್ಝ್ಠಿಡಡಿ ಜಿಛಟ್ಝಟಣ ಪ್ರತಿನಿಧಿಸುವ ಕ್ಷೇತ್ರ ಹೇಗೆ ಇರಬೇಕೋ ಹಾಗೇ ಅಮೇಠಿ ಇಲ್ಲ. ಈ ಬಗ್ಗೆ ರಾಹುಲ್ ತಮ್ಮ ಮಿತ್ರಪಕ್ಷದ ಶರದ್ ಪವಾರ್ ಅಂಥವರಿಂದ "ಬಾರಾಮತಿ" ತರಬೇತಿ ತೆಗೆದುಕೊಳ್ಳುವುದು ಒಳ್ಳೆಯದು ಎನಿಸುತ್ತದೆ. ಅಮೇಠಿಯಲ್ಲಿ ಸಿಕ್ಕಿದ್ದ ಹಿರಿಯ ಪತ್ರಕರ್ತ ಅರಕೂಲುಗೂಡು ಸೂರ್ಯಪ್ರಕಾಶ "ಮೂವತ್ತು ವರ್ಷಗಳ ಹಿಂದೆ ಅಮೇಠಿ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಗುಜರಾತ್ ಮಾದರಿಯನ್ನು ಟೀಕಿಸುವ ರಾಹುಲ್ ಹತ್ತಿರ ಅಮೇಠಿ ಮಾದರಿ ಬಗ್ಗೆ ಹೇಳಲು ಏನು ಇಲ್ಲವೇ ಇಲ್ಲ" ಎಂದಿದ್ದರು.
ಹಾಗೆಂದ ಮಾತ್ರಕ್ಕೆ ರಾಹುಲ್ ಅಮೇಠಿಯಲ್ಲಿ ಕೆಲಸವೇ ಮಾಡಿಲ್ಲ ಎಂದು ಹೇಳುವಂತಿಲ್ಲ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ(ಐಐಐಟಿ), ಒಂದಿಷ್ಟು ಹೊಸ ರೈಲುಗಳು, ಕೇಂದ್ರದ ನಾನಾ ಸಂಸ್ಥೆಗಳು ಕೇಂದ್ರದ ಯೋಜನೆಗಳಿಂದ ಹಣ ಅಷ್ಟೇ ಅಲ್ಲ, 9 ರಾಷ್ಟ್ರೀಯ ಹೆದ್ದಾರಿಗಳನ್ನು ಮಂಜೂರು ಮಾಡಿಸಿದ್ದಾರೆ. ಮಹಿಳಾ ಸ್ತ್ರೀ ಶಕ್ತಿ ಗುಂಪುಗಳಿಗೆ ಹಣ ಕೊಟ್ಟಿದ್ದಾರೆ. ಆದರೆ ಇವತ್ತಿನ ಮಹತ್ವಾಕಾಂಕ್ಷಿ ಯುಗದಲ್ಲಿ ಪ್ರಧಾನಿ ಅಭ್ಯರ್ಥಿಯಿಂದ ಇಷ್ಟು ಮಾತ್ರ ಸಾಕೇ ಎನ್ನುವುದು ಹೊರಗಿನಿಂದ ಹೋದವರು ಕೇಳುವ ಪ್ರಶ್ನೆ.
ಟಿಕರ್ಮಾಫಿ, ರಾಮಗಂಜ್ ರಸ್ತೆಯಲ್ಲಿರುವ ಅಮೇಠಿ ವಿಧಾನಸಭಾ ಕ್ಷೇತ್ರದ ಸಣ್ಣ ಹಳ್ಳಿ. ಇಲ್ಲಿಗೆ ಹೋಗುವ ರಸ್ತೆಗಳು ದೇವರಿಗೆ ಪ್ರೀತಿ. ಮೇ 4 ರಂದು ಇಲ್ಲಿ ರಾಹುಲ್ ಸಭೆ ನಿಗದಿಯಾಗಿತ್ತು. ಮೂರು ಗಂಟೆ ತಡವಾಗಿ ತಲುಪಿದ ರಾಹುಲ್ " ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಅಮೇಠಿಯನ್ನು ಇಂಗ್ಲೆಂಡ್ ಮಾಡುತ್ತೇನೆ ನಾನು ಸಾಯುವವರೆಗೆ ಅಮೇಠಿಯಲ್ಲಿರುತ್ತೇನೆ. ಉಳಿದವರು ಇವತ್ತು ತಮಟೆ ಬಾರಿಸಿ ನಾಳೆ ಓಡಿ ಹೋಗುತ್ತಾರೆ" ಎಂದು ಹೇಳಿದಾಗ ಮಹಿಳೆಯರು ಯುವಕರು ಕಣ್ಣು ತುಂಬಿಕೊಂಡು ರಾಹುಲ್ ಭಯ್ಯಾ ಜಿಂದಾಬಾದ್ ಎನ್ನುತ್ತಾರೆ. ಏನೋ ಒಂದು ಭಾವನಾತ್ಮಕ ಸಂಬಂಧ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಮಾಡಲಿ ಬಿಡಲಿ ರಾಹು ಕ್ರೇಜ್ ಇಲ್ಲಿದೆ. ರಾಹುಲ್ ಹೆಮ್ಮೆಯಿಂದ ಹೇಳಿಕೊಳ್ಳುವ ನರೇಗಾ ಯೋಜನೆ ಇಲ್ಲಿ ದಲ್ಲಾಳಿಗಳ ಪಾಲಾಗಿದ್ದರೆ, ಆಹಾರ ಹಕ್ಕು ಅಮೇಠಿಯಲ್ಲಿ ಆರಂಭವೇ ಆಗಿಲ್ಲ. ಆದರೆ ರಾಹುಲ್ ಈ ಬಗ್ಗೆ ಭಾಷಣದಲ್ಲಿ ಮಾತನಾಡುವುದಿಲ್ಲ. ನಾನು ವಿದ್ಯುತ್ ಕಂಬ ಕೊಟ್ಟೆ, ತಂತಿ ಕೊಟ್ಟೆ, ಆದರೆ ಇಲ್ಲಿನ ರಾಜ್ಯ ಸರ್ಕಾರ ವಿದ್ಯುತ್ ಕೊಡಲಿಲ್ಲ ಎಂದು ಹೋದಗಲೆಲ್ಲ ಹೇಳುತ್ತಾರೆ
ಟಿಕರ್ಮಾಫಿಯಲ್ಲಿ ಪಾನ್ ಅಂಗಡಿ ನಡೆಸುವ 65ರ ಗಯಾ ಪ್ರಸಾದ್ ಗುಪ್ತಾ "ದೇಶದಲ್ಲಿ ನಾವು ಎಲ್ಲೇ ಹೋಗಲಿ ನಮ್ಮನ್ನು ಗಾಂಧಿ ಪರಿವಾರದ ಅಮೇಠಿಯವರು ಎಂದು ಗುರುತಿಸುತ್ತಾರೆ. ಅಭಿವೃದ್ಧಿ ಸ್ವಲ್ಪ ಕಡಿಮೆಯಾಗಿದೆ, ಆದರೆ ರಾಹುಲ್ರನ್ನು ಸೋಲಿಸಿದರೆ ನಮ್ಮನ್ನು ಯಾರೂ ಮಾತನಾಡಿಸುವುದಿಲ್ಲ" ಎಂದು ಹೇಳಿದರೆ ಬಘವರಿಯಾ ಎಂಬ ಹಳ್ಳಿಯ ರೈತ ಯುವಕ ಲಕ್ಷ್ಮಿಕಾಂತ್ ಶುಕ್ಲಾ "ಚುನಾವಣೆ ಬಂದಾಗ ರಾಹುಲ್ ಪ್ರಿಯಾಂಕ ಬಂದು ಕೈ ಮುಗಿದು ಹೋಗುತ್ತಾರೆ. ಕೆಲಸ ಮಾಡದೇ ಮತ ಕೊಡಲು ನಾವೇನು ಕುರಿ ಮಂದೆಗಳಲ್ಲ. ಇಸ್ ಬಾರ್ ಮೇರಾ ವೋಟ ಮೋದಿ ಕೊ" ಎನ್ನುತ್ತಾನೆ.
ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ 5 ವಿಧಾನಸಭಾ ಕ್ಷೇತ್ರಗಳಿದ್ದು ಬ್ರಾಹ್ಮಣ ರಜಪೂತ ಹಾಗೂ ಮುಸ್ಲಿಂ ಬಾಹುಳ್ಯ ವಿರುವ ಕ್ಷೇತ್ರವಿದು. ಇವರೆಲ್ಲ ಪರಂಪರಾಗತವಾಗಿ ಕಾಂಗ್ರೆಸ್ನ ಕಟ್ಟಾ ಮತದಾರರು. ಆದರೆ 2012ರ ವಿಧಾನಸಭಾ ಚುನಾವಣೆಯಲ್ಲಿ 5 ರಲ್ಲಿ 3 ಕ್ಷೇತ್ರ ಸಮಾಜವಾದಿ ಪಕ್ಷದ ಪಾಲಾದಾಗ ಎಚ್ಚೆತ್ತುಕೊಂಡ ಪ್ರಿಯಾಂಕಾ ಗಾಂಧಿ ಇಲ್ಲಿ ತಿಂಗಳಿಗೊಮ್ಮೆ ಬಂದು ಹೋಗುತ್ತಾರೆ. ಆದರೆ ತುಂಬಾ ಕೆಲಸ ಮಾಡಲು ಸಾಧ್ಯವಾದಂತೆ ಕಾಣುವುದಿಲ್ಲ. ಒಂದು ವರ್ಷದ ಹಿಂದೆ ತಿಲೋಹಿ ಎಂಬ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಒಬ್ಬೇ ಒಬ್ಬ ಕಾರ್ಯಕರ್ತನ ಹೆಸರು ಹೇಳಿ ಗುರುತಿಸಲೂ ರಾಹುಲ್ಗೆ ಸಾಧ್ಯವಾಗಲಿಲ್ಲವಂತೆ. ಆದರೆ ಪ್ರಿಯಾಂಕಾಗೆ ಇಲ್ಲಿನ ಕಾರ್ಯಕರ್ತರ ಪರಿಚಯ ಮತ್ತು ಸ್ನೇಹವಿದೆ.
ನಾಮಪತ್ರ ಸಲ್ಲಿಸಿದ ನಂತರ ರಾಹುಲ್ ಕೊನೆಯ 3 ದಿನ ಇಲ್ಲಿ ಪ್ರಚಾರ ನಡೆಸಿದ್ದು ಬಿಟ್ಟರೆ ಅಮೇಠಿಯ ಪ್ರಚಾರದ ಉಸ್ತುವಾರಿ ವಹಿಸಿದ್ದು ಮಾತ್ರ ಪ್ರಿಯಾಂಕಾ. ಮುನ್ಷಿಗಂಜ್ ಅತಿಥಿ ಗೃಹದಲ್ಲಿ ಬೆಳಿಗ್ಗೆಯಿಂದ ಕಾರ್ಯಕರ್ತರ ಚುನಾವಣಾ ತಯಾರಿಸಭೆ ನಡೆಸುವ ಪ್ರಿಯಾಂಕಾ ದಿನಕ್ಕೆ 5 ಕಡೆ ಪ್ರಚಾರ ಭಾಷಣ ಮಾಡುತ್ತಾರೆ. ಮೊದಲಿಗೆ ಪ್ರಿಯಾಂಕಾ ಮತ್ತು ಇಲ್ಲಿಯೇ ಪಕ್ಕದ ಸುಲ್ತಾನಪುರದಿಂದ ಸ್ಪರ್ಧಿಸಿರುವ ವರುಣ್ ಗಾಂಧಿ ಪರಸ್ಪರರ ವಿರುದ್ಧ ಪ್ರಚಾರ ನಡೆಸುತ್ತಾರೆ ಎನ್ನುವ ಮಾತು ಇತ್ತಾದರೂ ಈಗ ಇಬ್ಬರ ನಡುವೆ ಕದನ ವಿರಾಮ ನಡೆದಂತಿದೆ. ಗಾಂಧಿ ಪರಿವಾರದಿಂದ ಮುನಿಸಿಕೊಂಡಿದ್ದ ಅಮೇಠಿಯ ರಾಜ ಸಂಜಯ್ ಸಿಂಗ್ ಬಿಜೆಪಿಗೆ ಹೋಗಿ ರಾಹುಲ್ ವಿರುದ್ಧ ನಿಲ್ಲಬಹುದು ಎಂಬ ಸ್ಥಿತಿಯಿದ್ದಾಗ ಸಂಜಯ್ ಸಿಂಗ್ರನ್ನು ಅಸ್ಸಾಂನಿಂದ ರಾಜ್ಯಸಭೆಗೆ ಆರಿಸಿ ಕಳಿಸುವ ಜಾಣ ನಿರ್ಣಯವನ್ನು ಪ್ರಿಯಾಂಕಾ ತೆಗೆದುಕೊಂಡಿದ್ದರು.
ಅಮೇಠಿ ಎಂದರೆ ಗಾಂಧಿ ಪರಿವಾರ ಎನ್ನುವ ರಾಜಕೀಯ ಚಿತ್ರಣವನ್ನು ಬದಲಿಸಿದ್ದು ಮಾತ್ರ ಆಮ್ ಅದ್ಮಿ ಪಕ್ಷದ ಡಾಕ್ಟರ ಕುಮಾರ್ ವಿಶ್ವಾಸ್. 96 ದಿನಗಳಿಂದ ಅಮೇಠಿಯ ಮನೆ ಮನೆ ಸುತ್ತುತ್ತಿರುವ ವಿಶ್ವಾಸ್ ಇಲ್ಲಿ ಮೊದಲ ಬಾರಿಗೆ ಯುವಕರಲ್ಲಿ ಗಾಂಧಿ ವಿರೋಧಿ ಮಾತುಗಳನ್ನು ಆರಂಭ ಮಾಡಿದ್ದಾರೆ. ತಮ್ಮ ಕವಿತೆಗಳು, ನೇರ ಮಾತುಗಳಿಂದ ಕುಮಾರ್ ಶಹರದ ಯುವಕರ ವಿಶ್ವಾಸ ಗಳಿಸಿದ್ದಾರೆ. ಆದರೆ ದೆಹಲಿಯಲ್ಲಿ ಕೇಜ್ರಿವಾಲ್ ನೀಡಿದ ರಾಜೀನಾಮೆ ಇಲ್ಲಿ ಪ್ರತಿಕೂಲ ಪರಿಣಾಮ ಬೀರಿದೆ.
ಮೇ 5ರಂದು ಬೆಳಿಗ್ಗೆ ಸಗರ ತಿರಾಹಾದಲ್ಲಿ ಭೇಟಿಯಾದ ಕುಮಾರ್ ವಿಶ್ವಾಸ "ಇಲ್ಲಿ ಇತಿಹಾಸ ಸೃಷ್ಟಿಯಾಗಲಿದೆ. ರಾಹುಲ್ ರಾಜಕೀಯ ಅಂತ್ಯವಾಗಲಿದೆ. ಜನಕ್ಕೆ ಗಾಂಧಿ ಕುಟುಂಬದ ನಾಟಕೀಯ ಮಾತುಗಳು ಅರ್ಥವಾಗುತ್ತಿವೆ ಎಂದು ಹೇಳುತ್ತಾರೆ. ಕುಮಾರ್ ವಿಶ್ವಾಸ್ ಇಲ್ಲಿ ಪರಿಶ್ರಮ ಪಡುತ್ತಿರುವುದಂತೂ ನಿಜ. ದೆಹಲಿ ಚಂಡೀಗಢನ 9 ಸಾವಿರ ಆಪ್ ಕಾರ್ಯಕರ್ತರು ಇಲ್ಲಿ ಬೀಡುಬಿಟ್ಟಿದ್ದಾರೆ.
ಆದರೆ ಅಮೇಠಿಯ ರಾಜಶ್ರಿ ರನಂಜಯ ಕಾಲೇಜಿನಲ್ಲಿ ಓದುವ ದಲಿತ ಯುವತಿ ಸರೋಜ "ರಾಹುಲ್ ಭಯ್ಯಾ ವಿರುದ್ಧ ಮತ ಹಾಕುವುದಿದ್ದರೆ, ನರೇಂದ್ರ ಮೋದಿಗೆ ಮತ ಹಾಕುತ್ತೇನೆ. ಆಮ್ ಅದ್ಮಿಗೆ ಹಾಕಿ ಪ್ರಯೋಜನವೇನು?" ಎಂದು ಪ್ರಶ್ನಿಸಿದರೆ. ಯುವಕ ಸದ್ದಾಮ್ ಅಹ್ಮದ್ "ಇದೆಲ್ಲ ಹೊರಗಿನಿಂದ ಬಂದವರ ಹವಾಬಾಜಿ. ರಾಹುಲ್ ವಿರೋಧಿ ಅಲೆಯನ್ನು ಮಾಧ್ಯಮಗಳು ಸೃಷ್ಟಿಸುತ್ತಿವೆ. ಆದರೆ ಇಲ್ಲಿ ಗೆಲ್ಲುವುದು ರಾಹುಲ್ ಮಾತ್ರ" ಎಂದು ಕಡ್ಡಿ ಮುರಿದಂತೆ ಹೇಳುತ್ತಾನೆ. ಅಮೇಠಿಯ ಗಾಳಿ ನೋಡಿಕೊಂಡು ಇಲ್ಲಿ ಕೊನೆಯದಾಗಿ ಕಣಕ್ಕೆ ಇಳಿದಿದ್ದು ಮಾತ್ರ ಬಿಜೆಪಿಯ ಸ್ಮೃತಿ ಇರಾನಿ. ಪ್ರಚಾರ ಸಭೆಗಳಲ್ಲಿ ರಾಹುಲ್ ಅವರಿಗೆ ದಿನಕ್ಕೊಂದು ಪ್ರಶ್ನೆ ಕೇಳುವ ಸ್ಮೃತಿ, ಹೋದಲ್ಲೆಲ್ಲ ನರೇಂದ್ರ ಮೋದಿ ಹೆಸರು ಹೇಳಿ ಮತ ಕೇಳುತ್ತಾರೆ. 2009ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಕೇವಲ 30 ಸಾವಿರ ಮತ ಗಳಿಸಿತ್ತು. ಆದರೆ ನಮೋ ಜಪ ಇಲ್ಲೂ ಕೂಡ ನಿಧಾನವಾಗಿ ಆರಂಭವಾಗಿದೆ. ನಾನು ದುರ್ಗಾಪುರ ರಸ್ತೆಯಲ್ಲಿರುವ ರಾಹುಲ್ ತಂದಿರುವ ಐಐಐಟಿ ಕ್ಯಾಂಪಸ್ಗೆ ಹೋದಾಗ ವಿದ್ಯಾರ್ಥಿಗಳು ಮೋದಿ ಹೆಸರು ಹೇಳುತ್ತಿದ್ದರು. ಜಗದೀಶಪುರದ ಸಭೆಯಲ್ಲಿ ಮಾತನಾಡುತ್ತಿದ್ದ ಸ್ಮೃತಿ ಇರಾನಿ "ಮೋದಿ ಪ್ರಧಾನಿ ಆದರೆ ಅಮೇಠಿ ಅಭಿವೃದ್ಧಿ ಆಗುತ್ತದೆ. ಗಾಂಧಿ ಪರಿವಾರದ ಜೊತೆಗಿನ ಭಾವನಾತ್ಮಕ ಸಂಬಂಧ ಸಾಕು. ಮೋದಿ ಕೊ ಆಜಮಾಕೆ ದೇಖೋ" ಎಂದು ಜೋರ್ದಾರ್ ಭಾಷಣ ಮಾಡುತ್ತಾರೆ. ಇಲ್ಲಿನ ಬ್ರಾಹ್ಮಣರು, ರಜಪೂತರು ಮೋದಿ ಬಗ್ಗೆ ಮಾತನಾಡುತ್ತಾರೆ ಆದರೆ ರಾಹುಲ್ರನ್ನು ಕೈ ಬಿಟ್ಟು ಮೋದಿಯತ್ತ ವಾಲಿದರೆ 'ಮೋಸ'ವಾಗುವುದಿಲ್ಲವೇ ಎಂಬ ಅಸ್ಪಷ್ಟ ಮನಸ್ಥಿತಿಯಲ್ಲಿದ್ದಾರೆ ಇಲ್ಲಿನ ಜನರು. ಪ್ರಚಾರದ ಕೊನೆಯ ದಿನ ಅಮೇಠಿ ಬಳಿಯ ಗೌರಿ ಗಂಜ್ನಲ್ಲಿ ಸಾರ್ವಜನಿಕ ಸಭೆ ನಡೆಸಿದ ನರೇಂದ್ರ ಮೋದಿ ಅವರನ್ನು ನೋಡಲು ಯುವಕರು ಹೆಚ್ಚು ಸಂಖ್ಯೆಯಲ್ಲಿ ಬಂದಿದ್ದರು. ಬಿಜೆಪಿಯ ರಾಷ್ಟ್ರೀಯ ನಾಯಕರು ಅಮೇಠಿಗೆ ಪ್ರಚಾರಕ್ಕೆ ಬಂದಿದ್ದೇ ಮೊದಲ ಬಾರಿ. ವಾಜಪೇಯಿ ಅಡ್ವಾಣಿ ಇಲ್ಲಿ ಪ್ರಚಾರಕ್ಕೆ ಬಂದಿಲ್ಲ.
ಕಾಂಗ್ರೆಸ್ನ ಕುಡಿ ಸ್ಪರ್ಧಿಸಿರುವ ಅಮೇಠಿಯಲ್ಲಿ ಮೇ 7 ರಂದು ಚುನಾವಣೆ ನಡೆಯಲಿದ್ದು ಮೇ 16 ರಂದು ದೇಶದ ಜನ ಕೇಳುವ ಪ್ರಶ್ನೆ ಒಂದೇ, ರಾಹುಲ್ ಗೆದ್ದರಾ- ಸೋತರಾ ಎಂದು. ಗೆದ್ದರೆ ಸರಿ, ಆದರೆ ಸೋತರೆ ಮಾತ್ರ ಸೋನಿಯಾ ಪುತ್ರನ ರಾಜಕೀಯ ಭವಿಷ್ಯಕ್ಕೆ ಅನಿಶ್ಚಿತತೆಯ ಕಾರ್ಮೋಡಗಳು ಕವಿಯಲಿವೆ.
ಅಮೇಠಿಯಿಂದ ವಾಪಸ್ ಬರುವಾಗ ನನ್ನನ್ನು ರೈಲ್ವೇ ಸ್ಟೇಷನ್ವರೆಗೆ ಬಿಡಲು ಬಂದಿದ್ದ ಸ್ಥಳೀಯ ಪತ್ರಕರ್ತನೊಬ್ಬ "ಫಿಜಾ ಮೇ ಬದಲಾವ್ ತೋ ಹೈ (ಗಾಳಿಯಲ್ಲಿ ಬದಲಾವಣೆಯೇನೋ ಇದೆ). ಆದರೆ ಇದು ರಾಹುಲ್ರನ್ನು ಕೊಚ್ಚಿಕೊಂಡು ಹೋಗುವುದೇ ಎಂಬುದು ಪ್ರಶ್ನೆ. ಕಳೆದ ಬಾರಿ ರಾಹುಲ್ ಮೂರುವರೆ ಲಕ್ಷ ಮತಗಳಿಂದ ಗೆದ್ದಿದ್ದರು. ಈ ಬಾರಿ ಅಂತರ ಕಡಿಮೆಯಾಗಬಹುದು" ಎಂದು ಅಲ್ಲಿನ ರಾಜಕೀಯ ಗೋಡೆ ಬರಹವನ್ನು ಹೇಳುತ್ತಿದ್ದ.
-ಪ್ರಶಾಂತ್ ನಾತು ಸುವರ್ಣ ನ್ಯೂಸ್
prashant.natu@gmail.com