ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಆಕರ್ಷಕ ಪಠ್ಯಪುಸ್ತಕಗಳು ಸಂಸ್ಕೃತ ವಿವಿ ಸಾಧನೆ

Vishwanath S
Updated On : 7 May 2014, 12:30 pm

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆರಂಭವಾಗಿ ಕೆಲವು ವರ್ಷಗಳು ಕಳೆದು ಹೋದವು. ಇಂಥ ಒಂದು ವಿಶ್ವವಿದ್ಯಾಲಯದ ಅವಶ್ಯಕತೆ ಇತ್ತೆ, ಈ ಅವಧಿಯಲ್ಲಿ ವಿಶ್ವವಿದ್ಯಾಲಯವು ಸಾಧಿಸಿದ್ದೇನು ಎಂದು ಪ್ರಶ್ನೆಗಳನ್ನೆಸೆಯುವವರೂ, ಟೀಕಾಸ್ತ್ರಗಳನ್ನು ತೂರಿ ಬಿಡುವವರೂ ಸಾಕಷ್ಟು ಮಂದಿ ಇದ್ದಾರೆ. ಈ ಪ್ರಶ್ನೆಗಳ, ಟೀಕೆಗಳ ಸುರಿಮಳೆಯಲ್ಲಿ ವಿಶ್ವವಿದ್ಯಾಲಯವು ಮಾಡಿರುವ ಅನನ್ಯ ಸಾಧನೆಗಳೂ ಮರೆಯಾಗಿ ಬಿಡುವ ಅಪಾಯವಿದೆ. ವಿಶ್ವವಿದ್ಯಾಲಯವು ಮಾಡಿರುವ ಮಹತ್ವದ ಸಾಧನೆಗಳಲ್ಲಿ ಒಂದು ಪಠ್ಯಪುಸ್ತಕಗಳನ್ನು ಹೊಸದಾಗಿ ರಚಿಸಿ ಪ್ರಕಾಶಿಸಿರುವುದು.
ರಾಜ್ಯಾದ್ಯಂತ ಹರಡಿಕೊಂಡಿರುವ ಐನೂರಕ್ಕೂ ಹೆಚ್ಚು ಸಂಸ್ಕೃತ ಪಾಠಶಾಲೆಗಳಲ್ಲಿ ನಡೆಯುವ ಪ್ರಥಮಾ-ಕಾವ್ಯ- ಸಾಹಿತ್ಯ ತರಗತಿಗಳಲ್ಲಿ ಈವರೆಗೆ ಚಾಲ್ತಿಯಲ್ಲಿದ್ದ ಪಠ್ಯಪುಸ್ತಕಗಳು ಸುಮಾರು ಮೂವತ್ತು ವರ್ಷಗಳ ಹಿಂದೆ ರಚಿತವಾದವು. ಕಡಿಮೆ ದರ್ಜೆಯ ಕಾಗದದ ಮೇಲೆ ನೂರಾರು ಮುದ್ರಣ ದೋಷಗಳ ಸಹಿತವಾಗಿಯೇ ಮುದ್ರಿತವಾದ ಈ ಪುಸ್ತಕಗಳು ಎಳ್ಳಷ್ಟೂ ಆಕರ್ಷಕವಾಗಿರಲಿಲ್ಲ. ಆಕರ್ಷಕವಾಗಿರಲಿ, ಅನಾಕರ್ಷಕವಾಗಿರಲಿ, ಅವು ಸುಲಭವಾಗಿ ದೊರೆಯುತ್ತಲೂ ಇರಲಿಲ್ಲ.  ಈ ಪಠ್ಯಪುಸ್ತಕಗಳ ಪರಿವರ್ತನೆ ಮಾಡಬೇಕು ಎಂದು ವಿಶ್ವವಿದ್ಯಾಲಯವು ಚಿಂತನೆ ನಡೆಸಿ ಕುಲಪತಿಗಳ ಸಮ್ಮುಖದಲ್ಲಿ ತುಂಬಾ ದೀರ್ಘಕಾಲದಿಂದ ಸಂಸ್ಕೃತ ಪುಸ್ತಕಗಳನ್ನು ಪಾಠ ಮಾಡಿ ವಿಶೇಷ ಅನುಭವ ಇರುವ ವಿದ್ವಾಂಸರ ಸಮಿತಿಯನ್ನು ರಚಿಸಿ ಚಿಂತನೆ ನಡೆಸಿತು. ಅಂತೆಯೇ ಅನೇಕ ಪಾಠಶಾಲೆಯ ಶಿಕ್ಷಕರ ಸೂಚನೆಯನ್ನು ಅಭಿಪ್ರಾಯಗಳನ್ನು ಸಂಗ್ರಹಿಸಿ ಅವಶ್ಯಕತೆಗಳಿಗನುಸಾರವಾಗಿ ಪಠ್ಯಪುಸ್ತಕಗಳನ್ನು ಹೊಸದಾಗಿ ರಚಿಸಿ ಅವುಗಳ ಮುದ್ರಣವನ್ನು ಕೈಗೊಂಡಿತು. ಅದರಂತೆ ಪ್ರಥಮಾ- ಕಾವ್ಯ- ಸಾಹಿತ್ಯ ತರಗತಿಗಳಿಗೆ ಮೊದಲ ವರ್ಷದ ಪಠ್ಯ ಪುಸ್ತಕಗಳು ನೂತನ ರೂಪದಲ್ಲಿ ಪ್ರಕಟ ನಿರ್ಮಿತವಾದವು.  
ವಿಶೇಷವಾಗಿ ಕಾವ್ಯ ಮತ್ತು ಸಾಹಿತ್ಯ ಪಠ್ಯಪುಸ್ತಕಗಳಲ್ಲಿ ಪ್ರಾಚೀನ ಸಂಸ್ಕೃತ ಸಾಹಿತ್ಯದ ಜೊತೆಗೆ ಆಧುನಿಕ ಸಾಹಿತ್ಯವನ್ನೂ ಸೇರಿಸಿರುವುದು ವಿಶೇಷ. ಗದ್ಯ, ಪದ್ಯ, ಚಂಪೂ, ನಾಟಕ ಈ ಎಲ್ಲ ವಿಭಾಗಗಳಲ್ಲೂ ಆಧುನಿಕ ಕಾಲದಲ್ಲಿ ಪ್ರಕಟವಾಗಿರುವ ಒಂದಿಲ್ಲೊಂದು ಕೃತಿಯಿಂದ ಆಯ್ದ ಭಾಗಗಳನ್ನು ಸೇರಿಸಲಾಗಿದೆ. ವಿದ್ವಾನ್ ಎನ್. ರಂಗನಾಥ ಶರ್ಮಾ, ಪಂಡರೀನಾಥಾಚಾರ್ಯ ಗಲಗಲಿ, ಶ್ರೀಧರ ಭಾಸ್ಕರ ವರ್ಣೇಕರ್, ಎಚ್.ವಿ. ನಾಗರಾಜರಾವ್ ಮೊದಲಾದ ಆಧುನಿಕ ಕವಿಗಳು ಇತ್ತೀಚಿನ ದಿನಗಳಲ್ಲಿ ರಚಿಸಿರುವ ಕೃತಿಗಳನ್ನು ಸೇರಿಸಲಾಗಿದೆ. ಇದರಿಂದ ಸಂಸ್ಕೃತ ಸಾಹಿತ್ಯ ಗಂಗೆ ಇಂದಿಗೂ ಮುಂದುವರಿಯುತ್ತಲೇ ಇದೆ ಎಂಬ ವಿಶ್ವಾಸ ಕಲಿಯುವವರಲ್ಲಿ ನಿಶ್ಚಯವಾಗಿ ಮೂಡುತ್ತದೆ.  
ಇನ್ನು ಪ್ರತಿಯೊಂದು ಪಾಠದ ಕೊನೆಯಲ್ಲಿ ವಿಸ್ತಾರವಾದ ಟಿಪ್ಪಣಿಯೂ ಇದೆ. ತರಗತಿಯಲ್ಲಿ ಶಿಕ್ಷಕರು ತೊಂದರೆ ಪಡಬಾರದೆಂಬ ಉದ್ದೇಶದಿಂದ ಅತ್ಯಂತ ಸರಳವಾದ ವಿವರಣೆಯೊಂದಿಗೆ ಈ ಟಿಪ್ಪಣಿಗಳನ್ನು ಜೋಡಿಸಲಾಗಿದೆ. ಪದ್ಯವಾಗಲಿ, ಗದ್ಯವಾಗಲಿ, ಯಾವುದೇ ಪಾಠವಾದರೂ ಅವುಗಳಿಗೆ ಪ್ರತಿಪದಾರ್ಥ, ಅನ್ವಯ, ತಾತ್ಪರ್ಯ, ವ್ಯಾಕರಣ ವಿಶೇಷಗಳೆಲ್ಲವನ್ನೂ ಅವಶ್ಯಕತೆ ಗಳಿಗನುಸಾರವಾಗಿ ಕೊಡಲಾಗಿದೆ. ಈ ಪುಸ್ತಕಗಳ ಮುದ್ರಣವೂ ಹಿಂದಿನಂತಲ್ಲದೆ ಸುಂದರವಾಗಿದ್ದು, ಮುದ್ರಣದೋಷಗಳು ಅತ್ಯಲ್ಪ ಪ್ರಮಾಣದಲ್ಲಿವೆ. ಹೀಗೆಯೇ ವಿದ್ವತ್ ತರಗತಿಗಳಿಗೂ ಪಠ್ಯಪುಸ್ತಕಗಳ ನಿರ್ಮಾಣ ಕಾರ್ಯವು ನಡೆಯುತ್ತಿದೆ.
ಪಠ್ಯಪುಸ್ತಕಗಳ ರಚನೆಯಷ್ಟೇ ಅಲ್ಲದೇ ವಿಶ್ವವಿದ್ಯಾಲಯವು ಇನ್ನೂ ಅನೇಕ ಶಿಕ್ಷಣಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ಆಸಕ್ತರಾದ ಎಲ್ಲ ಜನರಿಗೆ ಸಂಸ್ಕೃತವನ್ನು ಕಲಿಸುವುದಕ್ಕಾಗಿ ಸಾಯಂಕಾಲದ ತರಗತಿಗಳನ್ನು ಆರಂಭಿಸಿದೆ. ಇದರ ಜೊತೆಗೆ ಎಂ.ಫಿಲ್. ತರಗತಿಗಳನ್ನು ಆರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ಆಧುನಿಕ ಸಂಸ್ಕೃತ ಸಾಹಿತ್ಯವನ್ನು ರಚಿಸಿದ ಕರ್ಣಾಟಕದವರೇ ಆದ ಇತ್ತೀಚಿನ ಸಂಸ್ಕೃತ ಕವಿಗಳ ಜೀವನ ಮತ್ತು ಕೃತಿಗಳ ಪರಿಚಯ ಮಾಡಿಸುವ ಗ್ರಂಥಮಾಲೆಯೊಂದನ್ನು ಆರಂಭಿಸಿ ಪ್ರಸಾರಾಂಗದ ವತಿಯಿಂದ ಅವುಗಳನ್ನು ಪ್ರಕಾಶಿಸುವ ಕೆಲಸವನ್ನೂ ವಿಶ್ವವಿದ್ಯಾಲಯ ಮಾಡುತ್ತಿದ್ದು, ಈ ಮಾಲೆಯಲ್ಲಿ ಈಗಾಗಲೇ ಐದು ಪುಸ್ತಕಗಳು ಹೊರಬಂದಿವೆ.
ಸಂಸ್ಕೃತ ಭಾಷೆಯ ಯುವ ಸಾಹಿತ್ಯಕಾರರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದಕ್ಕಾಗಿ ಪ್ರೊ. ಹಿರಣ್ಣಯ್ಯ ಸ್ಮಾರಕ ಗ್ರಂಥ ಪ್ರಶಸ್ತಿಯನ್ನು ಆರಂಭಿಸಿ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದವರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡುತ್ತಿದೆ.  ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಎಲ್ಲ ಮಾಹಿತಿಗಳು ವೆಬ್‌ಸೈಟ್‌ನಲ್ಲಿ ಉಪಲಭ್ಯವಿರುತ್ತವೆ. ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಕುಲಸಚಿವ ಪ್ರೊ. ಸಂತಪ್ಪನವರ್ ಅವರ ಮಾರ್ಗದರ್ಶನದಲ್ಲಿ ಈ ಸಂಸ್ಕೃತ ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ಅನೇಕ ಸಾಧನೆಗಳನ್ನು ಮಾಡುವುದಕ್ಕೆ ಯೋಜನೆಗಳನ್ನು ಹಾಕಿಕೊಂಡಿದೆ.


- ಡಾ. ಶಾಂತಲಾ, ಮಂಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement