ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಧಿಕಾರಿಗಳ ಆಟಕ್ಕೆ ಬೇಸ್ತು ಬಿದ್ದರೇ ಆಡಳಿತ ಚತುರ?

ಜಾರಿ ಬಿದ್ದಲ್ಲಿಂದಲೇ ಎದ್ದೇಳುವಷ್ಟರಲ್ಲಿ ತಡವಾಗಿ ಹೋಯ್ತು...! ಆಡಳಿತ ಚತುರ ಎಂದು ಮಂದಿ ಬಣ್ಣಿಸಿದಾಗಲೆಲ್ಲ...

Rashmi Kasaragodu
Updated On : 8 May 2014, 12:28 pm

ಜಾರಿ ಬಿದ್ದಲ್ಲಿಂದಲೇ ಎದ್ದೇಳುವಷ್ಟರಲ್ಲಿ ತಡವಾಗಿ ಹೋಯ್ತು...!
ಆಡಳಿತ ಚತುರ ಎಂದು ಮಂದಿ ಬಣ್ಣಿಸಿದಾಗಲೆಲ್ಲ ಹಿರಿ ಹಿರಿ ಹಿಗ್ಗಿ ಬೀಗುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಗರಿಕ ಸೇವಾ ಮಂಡಳಿ ರಚನೆ ವಿಚಾರದಲ್ಲಿ ಮುಗ್ಗರಿಸಿ ಬಿದ್ದು ಎದ್ದು ಕೊಳೆ ತೊಳೆದುಕೊಳ್ಳಲು ಪರದಾಡುತ್ತಿರುವ ಪರಿಗೆ ಅಧಿಕಾರ ವಲಯದಲ್ಲಿ ವ್ಯಕ್ತವಾಗುತ್ತಿರುವ ವ್ಯಾಖ್ಯಾನವಿದು.
ಹೇಳಿ ಕೇಳಿ ನಾಗರಿಕ ಸೇವಾ ಮಂಡಳಿ ರಚನೆಯೆಂಬುದು ನೇರವಾಗಿ ಜನಸಾಮಾನ್ಯರಿಗೆ ತಟ್ಟುವ ವಿಚಾರ ಅಲ್ಲವೇ ಅಲ್ಲ. ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಐಎಎಸ್ ಸಾರಥ್ಯದ ಉನ್ನತ ಅಧಿಕಾರ ವೃಂದಕ್ಕೆ ಸಂಬಂಧಿಸಿದ್ದು. ಹೀಗಾಗಿ ಈ ವಿಚಾರದಲ್ಲಿ ಆಯತಪ್ಪಿ ಬಿದ್ದು ಪರಿಸ್ಥಿತಿ ಸುಧಾರಿಸಲು ಯತ್ನಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎದುರಿಸುತ್ತಿರುವುದೂ ದೊಡ್ಡ ಮಟ್ಟದ ಸಾರ್ವಜನಿಕ ಟೀಕೆಯಲ್ಲವಾದರೂ ಶಕ್ತಿ ಕೇಂದ್ರದ ಸುತ್ತ ಇರುವ 'ಸಾರ್ವಜನಿಕ' ಅಥವಾ 'ಕ್ಲಾಸ್' ಟೀಕೆ ಎನ್ನಬಹುದು. ಅಧಿಕಾರಿಗಳ ವ್ಯಕ್ತಪಡಿಸಲಾಗದ ಅಸಹನೆ, ಪ್ರತಿಪಕ್ಷಗಳ ವ್ಯಂಗ್ಯ, ವಿಧಾನಸೌಧದ ಕಾರಿಡಾರ್ ಚರ್ಚೆಗಳೆಲ್ಲವನ್ನೂ ಅಡಕಗೊಳಿಸಿಕೊಂಡಿರುವ ಈ ವಿಮರ್ಶೆ ಈಗ ಸಿಎಂ ಸಿದ್ದರಾಮಯ್ಯ ಅಧಿಕಾರ ರಥ ಓಡಿಸುವ ಹದತಪ್ಪಿದ್ದಾರೆ ಎಂಬ ಭಾವನೆಯನ್ನು ರಾಜಭವನದಿಂದ ಹೈಕಮಾಂಡ್ ಅಂಗಳದವರೆಗೆ ತಲುಪಿಸುವಷ್ಟು ಪ್ರಬಲವಾಗಿದೆ.
ಅಷ್ಟಕ್ಕೂ ಈ ವಿವಾದ ಹುಟ್ಟಿದ್ದೇ ಒಂದು ಕಡೆ, ಬಿಸಿ ಮುಟ್ಟಿಸಿದ್ದೇ ಇನ್ನೊಂದು ಕಡೆಗೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯುವ ಅಧಿಕಾರಿಗಳ ಎತ್ತಂಗಡಿ ಪ್ರಹಸನ ಹಿನ್ನೆಲೆಯಲ್ಲಿ ಕೇಂದ್ರದ ನಿವೃತ್ತ ಸಂಪುಟ ಕಾರ್ಯದರ್ಶಿ ಟಿ.ಎಸ್.ಆರ್.ಸುಬ್ರಹ್ಮಣ್ಯನ್ ಹಾಗೂ 82 ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳು ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳಿಗೆ ವರ್ಗಾವಣೆ ಅವಧಿ ನಿಗದಿಗೊಳಿಸುವಂತೆ ಸುಪ್ರೀಂ ಕೋರ್ಟ್ನಲ್ಲಿ ಮಹತ್ವದ ಅರ್ಜಿ ಸಲ್ಲಿಸಿದ್ದರು. ಹಗರಣಗಳ ಸುಳಿಯಲ್ಲಿ ಸಿಕ್ಕಿದ್ದ ಕೇಂದ್ರದ ಯುಪಿಎ ಸರ್ಕಾರ ಯಾವ್ಯಾವುದೋ ಹಿತಾಸಕ್ತಿ ರಕ್ಷಣೆಗಾಗಿ ಅಧಿಕಾರಿಗಳನ್ನು ಮನಬಂದಂತೆ 'ಚೆಂಡಾಡು'ವುದನ್ನು ತಪ್ಪಿಸುವ ಉದ್ದೇಶ ಈ ಅರ್ಜಿ ಸಲ್ಲಿಕೆಯ ಹಿಂದಿತ್ತು. ಅಷ್ಟು ಮಾತ್ರವಲ್ಲ 1968ರ ಅಖಿಲ ಭಾರತ ನಾಗರಿಕ ಸೇವಾ ಕಾಯ್ದೆಯ ನಿಯಮ 3(3) ರ ಪರಿಧಿಯಲ್ಲಿ ಮೇಲಾಧಿಕಾರಿಗಳು, ರಾಜಕೀಯ ಶಕ್ತಿಗಳು, ಶಾಸಕರು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಧಿಕಾರಿ ವೃಂದದ ಮೇಲೆ ಪರಿಣಾಮ ಬೀರುವ ವಾಣಿಜ್ಯ ಶಕ್ತಿಗಳು ಆದೇಶ, ಸಲಹೆ ಹೆಸರಿನಲ್ಲಿ ಬೀರುವ ಪ್ರಭಾವ ತಡೆಯುವ ಉದ್ದೇಶವೂ ಇತ್ತು.
ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 31-10-2013ರಂದು ಮಹತ್ವದ ತೀರ್ಪು ನೀಡಿತು. ಕೇಂದ್ರ, ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಮೂರು ತಿಂಗಳೊಳಗಾಗಿ ನಾಗರಿಕ ಸೇವಾ ಮಂಡಳಿ ರಚಿಸುವಂತೆ ಆದೇಶ ನೀಡಲಾಗಿತ್ತು. ಈ ತೀರ್ಪಿನ 29, 31 ಹಾಗೂ 35ನೇ ಪರಿಚ್ಛೇದದಲ್ಲಿ ನಾಗರಿಕ ಸೇವಾ ಮಂಡಳಿ ಉದ್ದೇಶ, ರಚನೆ ಹಾಗೂ ಕಾರ್ಯ ನಿರ್ವಹಣೆ ಹೇಗಿರಬೇಕೆಂಬ ಸ್ಪಷ್ಟ ಸೂಚನೆಯೂ ಇದೆ. ಅದರಲ್ಲಿ ಅಧಿಕಾರಿಗಳ ವರ್ಗಾವಣೆ ಅವಧಿ ಮಹತ್ವದ್ದು. to issue appropriate direction to secure providing of minimum tenure of service to various civil servants within a period of three monthsಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರರ್ಥ ಒಮ್ಮೆ ನಾಗರಿಕ ಸೇವಾ ಮಂಡಳಿ ಅಸ್ಥಿತ್ವಕ್ಕೆ ಬಂದರೆ ಸರ್ಕಾರ ಅಧಿಕಾರಿಗಳನ್ನು ಮನಬಂದಂತೆ ಎತ್ತಂಗಡಿ ಮಾಡುವುದು ಕಷ್ಟ.
ಕೇಂದ್ರ ಸರ್ಕಾರವೂ ಸೇರಿದಂತೆ ದೇಶದ ಉಳಿದೆಲ್ಲ ರಾಜ್ಯಗಳು ಈ ತೀರ್ಪಿನ ಜಾರಿಗೆ ವಿಶೇಷ ಆಸಕ್ತಿ ತೋರಲಿಲ್ಲ. (ಸುಪ್ರೀಂ ಕೋರ್ಟ್ನ ಎಷ್ಟೋ ತೀರ್ಪುಗಳ ವಿಚಾರದಲ್ಲಿ ಹೀಗಾಗಿದೆ) ಆದರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ನೇತೃತ್ವದ ಐಎಎಸ್ ಕೂಟ 'ಆಡಳಿತ ಚತುರ' ಸಿದ್ದರಾಮಯ್ಯನವರ ಮನವೊಲಿಸುವಲ್ಲಿ ಯಶಸ್ವಿಯಾಯ್ತು. ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸಲೇಬೇಕಾಗುತ್ತದೆ. ಇಲ್ಲವಾದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಅಧಿಕಾರಿಗಳು ಕೊಟ್ಟ ಸಲಹೆ ಆಧರಿಸಿ ನಾಗರಿಕ ಸೇವಾ ಮಂಡಳಿ ರಚನೆ ಮಾಡುವುದಕ್ಕೆ ಸಿದ್ದರಾಮಯ್ಯ ಒಪ್ಪಿಗೆ ನೀಡಿದರು. ಇದರ ಪರಿಣಾಮವಾಗಿ ಫೆಬ್ರವರಿ 1ರಂದು ರಾಜ್ಯಪತ್ರ ಹೊರಡಿಸಲಾಯಿತು. 'ನ್ಯಾಯಾಲಯದ ಆದೇಶವಿದೆ ಎಂದ ಮಾತ್ರಕ್ಕೆ ಕಾವೇರಿ ನೀರು ಬಿಡುವುದಕ್ಕಾಗುತ್ತದೆಯೇ?' ಎಂದು ಪ್ರತಿಪಕ್ಷ ನಾಯಕರಾಗಿದ್ದಾಗ ಪ್ರಶ್ನೆ ಮಾಡಿದ್ದ ಇದೇ ಸಿದ್ದರಾಮಯ್ಯನವರು ನಾಗರಿಕ ಮಂಡಳಿ ರಚನೆಗೆ ಒಪ್ಪಿಗೆ ನೀಡುವ ಮೂಲಕ ಅಧಿಕಾರಿಗಳ ಕೈಗೆ ಹಗ್ಗ ಕೊಟ್ಟು ಕಟ್ಟಿ ಪ್ಲೀಸ್ ಎಂದರು.
ಈ ರಾಜ್ಯಪತ್ರ ಪತ್ರಿಕಾ ವರದಿ ರೂಪದಲ್ಲಿ ಪ್ರಕಟವಾಗುತ್ತಿದ್ದಂತೆ ಕನಲಿ ಕೆಂಡವಾದವರು ಸಿದ್ದರಾಮಯ್ಯನವರ ಸಂಪುಟದ ಸಚಿವರು. ಅದರಲ್ಲೂ ಗೃಹ ಸಚಿವ ಕೆ.ಜೆ.ಜಾರ್ಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಾಳ್ಮೆಯೇ ಕೆಟ್ಟು ಹೋಗಿತ್ತು. ಕುತೂಹಲಕಾರಿ ಸಂಗತಿ ಎಂದರೆ ಇಂಥದೊಂದು ರಾಜ್ಯಪತ್ರ ಕಾನೂನು ಮತ್ತು ಸಂಸದೀಯ ಇಲಾಖೆ ಸಚಿವರ ಗಮನಕ್ಕೆ ಬಾರದೇ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದಿತ್ತು. ಹೀಗಾಗಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಕರೆದ ಸಂಪುಟ ಸಭೆ ಸಂದರ್ಭದಲ್ಲಿ ಸಚಿವರು ಮುಖ್ಯಮಂತ್ರಿಗಳಿಗೆ ಮುಜುಗರವಾಗುವಂತೆ ಮಾತನಾಡಿದ್ದರು. ಅಧಿಕಾರಿಗಳು ತಾನು ನಡೆಯುವ ದಾರಿಗೆ ಕೋಲು ಅಡ್ಡವಿಟ್ಟು ಕೆಡವಿದ್ದಾರೆ ಎಂಬ ಸತ್ಯ ಮೊಟ್ಟ ಮೊದಲ ಬಾರಿಗೆ ಸಿದ್ದರಾಮಯ್ಯನವರಿಗೆ ಅರ್ಥವಾಗಿದ್ದೇ ಆಗ!
ಏಕೆಂದರೆ ರಾಜ್ಯ ಸರ್ಕಾರ ಜಾರಿಗೆ ತರುವ ಸೇವಾ ಮಂಡಳಿಯಲ್ಲಿ ಐಎಎಸ್, ಐಎಫ್ಎಸ್, ಐಪಿಎಸ್, ಮುಖ್ಯ ಎಂಜಿನಿಯರ್ಗಳು, ಕರ್ನಾಟಕ ರಾಜ್ಯ ಸಚಿವಾಲಯದ ವಿವಿಧ ಇಲಾಖಾ ಮುಖ್ಯಸ್ಥರು, ಅಧೀನ ಕಾರ್ಯದರ್ಶಿಗಳನ್ನು ಒಮ್ಮೆ ವರ್ಗಾವಣೆಗೊಳಿಸಿದ ಮೇಲೆ ಎರಡು ವರ್ಷ ಬೇರೆ ಕಡೆಗೆ ಅಲ್ಲಾಡಿಸುವುದಕ್ಕೆ ಸಾಧ್ಯವಿರಲಿಲ್ಲ. ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಸಂಪುಟದ ಸಚಿವರಿಗೆ 'ಎತ್ತಂಗಡಿ' ವ್ಯವಹಾರದ ತಲೆ ಬಿಸಿಯೂ ಇರಲಿಲ್ಲ. ಆದರೆ ದಿನಗಳೆದಂತೆ ಹೀಗೆಲ್ಲ ಆಗಬಹುದು ಎಂಬ ವಾಸ್ತವ ಅನಾವರಣಗೊಂಡಾಗ ವಿರೋಧ ವ್ಯಕ್ತವಾಯಿತು. ಆಗ ಸಚಿವರ ಓಲೈಸುವ ಅನಿವಾರ್ಯತೆಗೆ ಬಿದ್ದ ಸಿದ್ದರಾಮಯ್ಯನವರು ಮಾ.3ರಂದು ನಡೆದ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ನಡೆದ ಚರ್ಚೆಯ ಅನುಸಾರ ನಾಗರಿಕ ಸೇವಾ ಮಂಡಳಿಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡುವಂತೆ ಮಾ 12ರಂದು ಆದೇಶ ನೀಡಿದ್ದರು. ಮಾತ್ರವಲ್ಲ ಸುಪ್ರೀಂ ಕೋರ್ಟ್ ಆದೇಶದನ್ವಯ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಲು ಸಚಿವ ಜಯಚಂದ್ರ ನೇತೃತ್ವದಲ್ಲಿ ಸಂಪುಟ ಉಪಸಮಿತಿಯನ್ನೂ ರಚಿಸಲಾಯಿತು.
ಇದಾದ ನಂತರ ನಡೆದದ್ದೆಲ್ಲವೂ ಮುಖ್ಯಮಂತ್ರಿಗಳ ಪಾಲಿಗೆ ದುಃಖಾಂತ್ಯವೇ. ಮಂಡಳಿ ರಚನೆಯಾಗಿದ್ದರೂ ವರ್ಗಾವಣೆ ಅವಧಿ ನಿಗದಿ ಮಾಡುವಾಗ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಹೊರಗಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಫೆ 1ರ ಆದೇಶವನ್ನು ನಿಲಂಬನೆಯಲ್ಲಿಟ್ಟ ನಂತರ ಇದ್ದಕ್ಕಿದ್ದಂತೆ ಹೈಕೋರ್ಟ್ ಅಂಗಳದಲ್ಲಿ ಪ್ರತ್ಯಕ್ಷರಾದ ಸಾಯಿದತ್ತ ಎಂಬ ವ್ಯಕ್ತಿ, ಸರ್ಕಾರ ಐಪಿಎಸ್ ಅಧಿಕಾರಿಗಳಿಗೆ ಏಕೆ ಅವಧಿ ನಿಗದಿಗೊಳಿಸಿಲ್ಲ ಎಂದು ಅರ್ಜಿ ಸಲ್ಲಿಸಿದರು. ಈ ಅರ್ಜಿ ಸಲ್ಲಿಸುವುದಕ್ಕೆ ಸಾಯಿದತ್ತ ಅವರಿಗೆ ಪ್ರೇರಣೆ ಯಾರು ಎಂಬುದೂ ನಿಗೂಢ. ಇದನ್ನೊಂದು 'ಸಾರ್ವಜನಿಕ ಹಿತಾಸಕ್ತಿ' ಎಂದೇ ಪರಿಗಣಿಸೋಣ. ಇದರ ಆಧಾರದ ಮೇಲೆ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿವರಣೆ ಕೋರಿದಾಗ ಡಿಪಿಎಆರ್ ಕಾರ್ಯದರ್ಶಿ ಸಂಜೀವ್ಕುಮಾರ್ ಹೈಕೋರ್ಟ್ಗೆ ಹಾಜರಾಗಿ ಫೆ 1ರಂದು ಸರ್ಕಾರ ಹೊರಡಿಸಿದ್ದ ರಾಜ್ಯಪತ್ರವನ್ನು ಹಾಜರುಪಡಿಸಿ ನಾಗರಿಕ ಸೇವಾ ಮಂಡಳಿಯಲ್ಲಿ ಐಪಿಎಸ್ ಅಧಿಕಾರಿಗಳನ್ನು ಸೇರಿಸಲಾಗಿದೆ ಎಂದು ಹೇಳಿಕೆ ನೀಡಿದರು.
ಅಲ್ಲಿಗೆ ಸಾಯಿದತ್ತ ಅವರ ಅರ್ಜಿ ಬಿದ್ದು ಹೋಯ್ತು. ಆದರೆ ಸರ್ಕಾರ ಅಮಾನತಿನಲ್ಲಿಟ್ಟ ರಾಜ್ಯಪತ್ರಕ್ಕೆ (ನಾಗರಿಕ ಸೇವಾ ಮಂಡಳಿಗೆ ) ನ್ಯಾಯಾಲಯದ ಅಧಿಕೃತ ಮುದ್ರೆ ಬಿತ್ತು. ಐಎಎಸ್ ಅಧಿಕಾರಿಗಳು ಸರ್ಕಾರವನ್ನು ಕತ್ತಲೆಯಲ್ಲಿಟ್ಟು ಪರೋಕ್ಷವಾಗಿ ತಮ್ಮ ಉದ್ದೇಶ ಸಾಧಿಸಿಕೊಂಡಿದ್ದು, ಸಿದ್ದರಾಮಯ್ಯನವರ ಸಂಪುಟದ ಬಹುಪಾಲು ಸಚಿವರನ್ನು ಕೆರಳಿಸಿದ್ದರಿಂದ ಕಳೆದ ಸಂಪುಟ ಸಭೆಯಲ್ಲಿ ಆಕ್ರೋಶ ಸ್ಫೋಟಗೊಂಡಿತ್ತು. ಆಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸಂಜೀವ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಸಂಜೀವ್ಕುಮಾರ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಇದು ಸರ್ಕಾರದ ವಿರುದ್ಧ ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳು ತಿರುಗಿ ಬೀಳುವಂತೆ ಮಾಡಿದೆ. ಸರ್ಕಾರ ನೀಡಿದ ನೋಟಿಸ್ಗೆ ಕಳೆದ ಸೋಮವಾರ ಉತ್ತರ ಕೊಟ್ಟಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಅಧಿಕಾರಶಾಹಿ ವರ್ಗ ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಸದಸ್ಯರನ್ನು ಹಣಿಯುವುದಕ್ಕೆ ಸಮಯ ಕಾಯುತ್ತಿದ್ದಾರೆ.
ಇವಕ್ಕೆಲ್ಲ ಸಿದ್ದರಾಮಯ್ಯನವರ 'ತಾನೇ ಎಲ್ಲ, ತನ್ನಿಂದಲೇ ಎಲ್ಲ' ಎಂಬ ಧೋರಣೆ ಕಾರಣವೇ? ಅಥವಾ ಸಿದ್ದರಾಮಯ್ಯನವರು ವ್ಯವಸ್ಥೆಯನ್ನು ಬಿಗಿ ಮಾಡುವ ನಿರಂತರತೆ ಕಳೆದುಕೊಂಡಿದ್ದಾರೆಯೇ? ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಮುಗ್ಗರಿಸಿ ಬಿದ್ದವರ್ಯಾರು ನೋವಾಯ್ತು ಎನ್ನುವುದಿಲ್ಲ. ಸ್ವಲ್ಪ ಗುಂಡಿ ಇತ್ತು, ಗಮನಿಸದೇ ಕಾಲಿಟ್ಟೆ. ಏನಾಗಿಲ್ಲ ಬಿಡಿ ಎನ್ನುವುದೇ ಲೋಕ ನೀತಿ. ಎಲ್ಲ ಬಗೆ ಹರಿದಿದೆ ಬಿಡಿ ಎಂದು ಸಿದ್ದರಾಮಯ್ಯನವರು ಈಗ ವಿವಾದದ ಸಮರ್ಥನೆ ಮಾಡಿಕೊಳ್ಳುತ್ತಿರುವುದರ ಹಿಂದಿರುವ ಧ್ವನಿಯೂ ಅದೆ. ಆದರೆ ಹೇಳುವಾಗ ತಡವಾಗಿದೆಯಷ್ಟೇ.


-  ರಾಘವೇಂದ್ರ ಭಟ್
ಕನ್ನಡಪ್ರಭ
rythmraghu@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement