ಸುಪ್ರೀಂ ತೀರ್ಪು ಕನ್ನಡಕ್ಕೆ ಕಂಟಕ ಎನ್ನುವ ಮುನ್ನ
ಮಂಗಳವಾರ ಸುಪ್ರೀಂ ಕೋರ್ಟ್ ಅತ್ಯಂತ ಗಮನಾರ್ಹ ತೀರ್ಪೊಂದನ್ನು ನೀಡಿದೆ. "ವಿದ್ಯಾರ್ಥಿಗಳ ಮೇಲೆ ಭಾಷಾ ...
ಮಂಗಳವಾರ ಸುಪ್ರೀಂ ಕೋರ್ಟ್ ಅತ್ಯಂತ ಗಮನಾರ್ಹ ತೀರ್ಪೊಂದನ್ನು ನೀಡಿದೆ. "ವಿದ್ಯಾರ್ಥಿಗಳ ಮೇಲೆ ಭಾಷಾ ಮಾಧ್ಯಮವನ್ನು ಹೇರುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲ. ಪೊಷಕರಿಗೆ ತಮ್ಮ ಮಕ್ಕಳ ಶಿಕ್ಷಣ ಮಾಧ್ಯಮವನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕಿದೆ" ಎಂಬ ಅದರ ತೀರ್ಪಿನಿಂದ ಕರ್ನಾಟಕದಲ್ಲಂತೂ ಒಟ್ಟಾರೆ ನಿರಾಶೆಯ ಭಾವ ಮಡುಗಟ್ಟಿದೆ. ಕನ್ನಡದ ಸುದ್ದಿವಾಹಿನಿಗಳೂ ಇದು ಕನ್ನಡ ಭಾಷೆಗಾದ ಹಿನ್ನಡೆ ಎಂದು ಹೇಳತೊಡಗಿವೆ.
ಈ ವಿಷಯ ನನ್ನ ಹೃದಯಕ್ಕೆ ಹತ್ತಿರವಾದದ್ದರಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ. ನಾನು ಕನ್ನಡ ಮಾಧ್ಯಮ ಶಾಲೆಯಲ್ಲೇ ಓದಿದವನು. ನಂತರ ಉನ್ನತ ಶಿಕ್ಷಣಕ್ಕಾಗಿ ಆಂಗ್ಲ ಮಾಧ್ಯಮಕ್ಕೆ ಬದಲಾದರೂ, ಕನ್ನಡ ಮಾಧ್ಯಮದ ಹಿನ್ನೆಲೆ ನನ್ನ ಸಹಾಯಕ್ಕೆ ಬಂದಿತು. ಹಲವಾರು ವರ್ಷಗಳವರೆಗೆ ದೊಡ್ಡ ದೊಡ್ಡ ಐಟಿ ಉದ್ಯಮದಲ್ಲಿ ಉದ್ಯೋಗ ಮಾಡಿದಾಗಲೂ ನನಗೆ ನನ್ನ ಶಿಕ್ಷಣ ಮಾಧ್ಯಮ ಯಾವುದೇ ಕಾರಣಕ್ಕೂ ತೊಡರಾಗಲಿಲ್ಲ. ನಿಜ ಹೇಳಬೇಕೆಂದರೆ, ನಮ್ಮ ಮಾತೃಭಾಷೆಯಲ್ಲಿ ಗಣಿತ, ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನಗಳನ್ನು ಬೋಧಿಸಿದಾಗ ಅತ್ಯಂತ ವೇಗವಾಗಿ ನಾವು ಅವನ್ನೆಲ್ಲ ಅರ್ಥಮಾಡಿಕೊಂಡೆವು. ಆ ಬಗ್ಗೆ ನನಗೆ ಸಂತೋಷವಂತೂ ಇದೆ.
ಆದರೆ ಸುಪ್ರೀಂ ಕೋರ್ಟ್ನ ತೀರ್ಪು ಮತ್ತು ಆನಂತರ ಅದು ಹುಟ್ಟುಹಾಕಿದ ಪ್ರತಿಕ್ರಿಯೆಯನ್ನು ವಿಶ್ಲೇಷಿಸುವ ಅಗತ್ಯವಂತೂ ಇದ್ದೇ ಇದೆ. ಮೊದಲನೆಯದಾಗಿ, ನನ್ನ ದೃಷ್ಟಿಯಲ್ಲಿ ಬಹುತೇಕ ಕನ್ನಡ ದಿನಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ಕನ್ನಡಕ್ಕೆ ಹಿನ್ನಡೆಯಾಗಿದೆ, ಕನ್ನಡದ ಕೊಲೆಯಾಯಿತು ಎಂದೆಲ್ಲ ಅತಿಯಾದ ಪ್ರತಿಕ್ರಿಯೆ ತೋರಿಸುತ್ತಿವೆ. ಕನ್ನಡ ಕಾರ್ಯಕರ್ತರ ಪ್ರತಿಕ್ರಿಯೆ ಕೂಡ ತುಸು ಅತಿ ಎನ್ನಿಸುವಂತಿದೆ. ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠ, ಈ ತೀರ್ಪಿಗೆ ಪರಿಚ್ಛೇದ 19(1)ನ್ನು ಉಲ್ಲೇಖಿಸಿದೆ. "ಯಾವುದೇ ಸರ್ಕಾರ ಅಥವಾ ಸಂಸ್ಥೆ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವಂತಿಲ್ಲ."
ಎರಡನೆಯದಾಗಿ, ಇದು ಕನ್ನಡ ಅಥವಾ ಕರ್ನಾಟಕಕ್ಕೇ ಸೀಮಿತವಾದ ವಿಷಯವಲ್ಲ. ಹಿಂದೆ ಎಸ್.ಆರ್.ಬೊಮ್ಮಾಯಿಯವರ ಕೇಸಿನಲ್ಲಿ ಹೇಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮೈಲಿಗಲ್ಲಾಯಿತೋ, ಅದೇ ರೀತಿಯಲ್ಲೇ ಈಗಿನ ವಿದ್ಯಮಾನ ಭವಿಷ್ಯದಲ್ಲಿ ಉಳಿದ ರಾಜ್ಯಗಳಿಗೂ ಅನ್ವಯವಾಗಿ, ಈ ತೀರ್ಪು ಪ್ರಮುಖ ಮೈಲಿಗಲ್ಲೆಂದು ಪರಿಗಣಿತವಾಗುವುದರಲ್ಲಿ ಸಂಶಯವಿಲ್ಲ.
ಮೂರನೆಯದಾಗಿ, ಕನ್ನಡಕ್ಕೆ ಸೋಲಾಯಿತು ಅಥವಾ ಹಿನ್ನಡೆಯಾಯಿತು ಎಂದು ಎದೆ ಬಡಿದುಕೊಳ್ಳಬೇಕಾದ ಅವಶ್ಯಕತೆಯಂತೂ ಇಲ್ಲ. ಎಲ್ಲದಕ್ಕಿಂತ ಮೊದಲು ವಾಸ್ತವವನ್ನು ನಾವು ಗಮನಿಸಬೇಕಾಗುತ್ತದೆ. 2012-13ನೇ ಸಾಲಿನ ಡೈಸ್ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ-73,75,695 ರಷ್ಟಿದ್ದರೆ, ಆಂಗ್ಲ ಮಾಧ್ಯಮ-20,03,829, ಹಿಂದಿ-10,000, ತೆಲುಗು-7,088, ತಮಿಳು-12,269, ಮರಾಠಿ 1,52,091 ಮತ್ತು ಉರ್ದು ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆ 5,00,683ರಷ್ಟಿದೆ. ಅಂದರೆ ಕರ್ನಾಟಕದ ಒಂದು ಕೋಟಿ ವಿದ್ಯಾರ್ಥಿಗಳಲ್ಲಿ ಸುಮಾರು 74 ಪ್ರತಿಶತ ವಿದ್ಯಾರ್ಥಿಗಳು ಅದಾಗಲೇ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಓದುತ್ತಿದ್ದಾರೆ ಎಂದಾಯಿತು. ಸರ್ಕಾರ ಮಾಡಬೇಕಿರುವುದಿಷ್ಟೆ- ಈ 74 ಪ್ರತಿಶತ ವಿದ್ಯಾರ್ಥಿಗಳೊಂದಿಗೆ, ಅನ್ಯ ಭಾರತೀಯ ಭಾಷೆಯ 6 ಪ್ರತಿಶತ ವಿದ್ಯಾರ್ಥಿಗಳಿಗೆ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ(20 ಪ್ರತಿಶತ) ಸಿಗುವಷ್ಟೇ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಆದರೆ ಸರ್ಕಾರಕ್ಕೆ ಇದು ಸಾಧ್ಯವೇ? ಇದು ಅತಿದೊಡ್ಡ ಸವಾಲೇ ಸರಿ.
ನಾಲ್ಕನೆಯದಾಗಿ, ಅದಾಗಲೇ ಕರ್ನಾಟಕದಲ್ಲಿರುವ 69 ಪ್ರತಿಶತ ಶಾಲೆಗಳ(ಸರ್ಕಾರಿ ಅಥವಾ ಅನುದಾನಿತ) ಮೇಲಿನ ನಿಯಂತ್ರಣ ನಮ್ಮ ರಾಜ್ಯ ಸರ್ಕಾರದ ಕೈಯಲ್ಲೇ ಇದೆ. ಒಂದು ವೇಳೆ ಇಲ್ಲೆಲ್ಲ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ದೊರಕಿತೆಂದರೆ ನಿಸ್ಸಂಶಯವಾಗಿಯೂ ಪ್ರತಿವರ್ಷ ಖಾಸಗಿ ಶಾಲೆಗಳತ್ತ ಹೋಗುತ್ತಿರುವ 2-3 ಪ್ರತಿಶತ ವಿದ್ಯಾರ್ಥಿಗಳ ಹರಿವನ್ನು ನಿಯಂತ್ರಿಸಬಹುದು. ಆದಾಗ್ಯೂ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ, ಅದರಲ್ಲೂ ಮುಖ್ಯವಾಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುವುದೇಕೆ? ಏಕೆಂದರೆ, ಅವರಿಗೆ 'ಉತ್ತಮ' ಶಿಕ್ಷಣ ಮತ್ತು 'ಉತ್ತಮ' ವೃತ್ತಿಜೀವನದ ಅವಶ್ಯಕತೆಯಿರುತ್ತದೆ. ಒಂದು ವೇಳೆ ಸರ್ಕಾರಿ ಅಥವಾ ಅನುದಾನಿತ ಶಾಲೆಗಳೂ ಕೂಡ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಫಲವಾದರೆ, ಪೋಷಕರೇಕೆ ತಮ್ಮ ಮಕ್ಕಳನ್ನು ಹೆಚ್ಚಿನ ದುಡ್ಡು ತೆತ್ತು ಅನುದಾನರಹಿತ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ ಹೇಳಿ?
ಐದನೆಯದಾಗಿ, ಭಾರತ ಸುಮಾರು 1400 ಮಾತೃಭಾಷೆಗಳನ್ನು ಹೊಂದಿರುವ ದೇಶ. ಬೃಹತ್ ವಿಸ್ತಾರವುಳ್ಳ, ಅನೇಕ ಭಾಷೆಗಳ ನೆಲೆಯಾದ ಈ ದೇಶದಲ್ಲಿ, ಯಾವುದೇ ರೀತಿಯ ಒಂದು ಭಾಷಾ ಸೂತ್ರವನ್ನು ತಯಾರಿಸುವುದು ಅತ್ಯಂತ ಕ್ಲಿಷ್ಟಕರ ಕೆಲಸ. ಎರಡು ಅಥವಾ ಮೂರು ಭಾಷೆಗಳ ಸೂತ್ರಗಳ ಸಂದರ್ಭದಲ್ಲೂ ಕೂಡ, ಇಂಗ್ಲಿಷ್ ಭಾಷೆಯೂ ಇಂದು 'ಭಾರತೀಯವಾಗಿದೆ' ಎನ್ನುವ ಮುಖ್ಯ ಸಂಗತಿಯನ್ನು ನಾವು ಮನಗಾಣಬೇಕು. ಉದಾಹರಣೆಗಾಗಿ ಪಶ್ಚಿಮ ಬಂಗಾಳ ಅಥವಾ ಉತ್ತರಪ್ರದೇಶವನ್ನೇ ತೆಗೆದುಕೊಳ್ಳಿ. ಕಳೆದ ಮೂರು ತಲೆಮಾರಿನ ಸಾಮಾನ್ಯ ಜನರು ಕೂಡ ತಮ್ಮ ಮಕ್ಕಳಿಗೆ ಆಂಗ್ಲ ಭಾಷೆಯೇ 'ಉತ್ತಮ' ನೆಲೆ ಒದಗಿಸಿಕೊಡಬಲ್ಲದು ಎಂದು ಭಾವಿಸುತ್ತಾರೆ. ಸರ್ಕಾರಗಳೂ ಕೂಡ ಈ "ಉತ್ತಮ" ಅಂಶವನ್ನು ಅರ್ಥಮಾಡಿಕೊಳ್ಳಬೇಕಿದೆ. ಇಲ್ಲಿಯವರೆಗೂ ಯಾವುದೇ ಶಾಲೆಗಳಲ್ಲೂ ಕೂಡ ಏಕ ಕ್ಲಿಷ್ಟಕರ ಭಾಷಾ ಸ್ತರವನ್ನು ಹೊಂದಿರುವ, ಆದರೆ ಮಕ್ಕಳಿಗೆ ಭವಿಷ್ಯದಲ್ಲಿ ಉತ್ತಮ ಜೀವನ ಒದಗಿಸುವಂಥ ಪ್ರಾಯೋಗಿಕ ಭಾಷಾ ನೀತಿ ಅಳವಡಿಕೆಯಾಗಿಲ್ಲ.
ಕೊನೆಯದಾಗಿ, ಇಲ್ಯಾರೂ ಯಾವುದೇ ಭಾಷೆಯನ್ನು ಅಥವಾ ಕನ್ನಡ ಬೋಧನೆಯನ್ನು ವಿರೋಧಿಸುತ್ತಿಲ್ಲ. ಚರ್ಚೆಯಿರುವುದು ಭಾಷಾ ಮಾಧ್ಯಮವನ್ನು ಹೇರುವ ವಿಷಯದಲ್ಲಿ. ಒಂದು ವೇಳೆ ನಮ್ಮ ರಾಜ್ಯದಲ್ಲಿ ಸುಮಾರು 25-35 ಪ್ರತಿಶತ ಜನರು ಆಂಗ್ಲ ಮಾಧ್ಯಮ ಶಾಲೆಗಳಲ್ಲೇ ಹೆಚ್ಚು ಮೌಲ್ಯವನ್ನು ಕಾಣುತ್ತಿದ್ದಾರೆಂದರೆ, ಮೊದಲು ಸರ್ಕಾರ ಮತ್ತು ಕಾರ್ಯಕರ್ತರು ಕುಳಿತು ಯೋಚಿಸುವ ಅಗತ್ಯವಿದೆ: "ಪೋಷಕರೇಕೆ ಇಂಗ್ಲಿಷ್ಗೆ ಆದ್ಯತೆ ಕೊಡುತ್ತಿದ್ದಾರೆ? ಇದು ಕೇವಲ ಕುರುಡು ಪಾಶ್ಚಾತ್ಯೀಕರಣವೇ? ಕನ್ನಡ ಅಥವಾ ಅನ್ಯ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಉತ್ತಮ ನೌಕರಿಗಳು ಸಿಗುತ್ತಿವೆಯೇ? ಬಹುತೇಕ ಭಾರತೀಯ ಭಾಷಾ ಮಾಧ್ಯಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲವೇ?" ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ಪ್ರಯತ್ನಗಳಾಗಬೇಕಿವೆ.
ಪರಿಣತರು, ಲಕ್ಷಾಂತರ ಪೋಷಕರೊಂದಿಗೆ ಕುಳಿತು ಈ ಕುರಿತು ಚರ್ಚಿಸಲೇಬೇಕಾದ ಸಂದರ್ಭ ಬಂದಿದೆ. ಏಕೆ ಆಂಗ್ಲ ಮಾಧ್ಯಮ ಶಾಲೆಗಳತ್ತ ಒಲವು ಹೆಚ್ಚುತ್ತಿದೆ ಮತ್ತು ಏಕೆ ಜನರು ಭಾಷಾ ಮಾಧ್ಯಮ ಹೇರಿಕೆಯ ವಿರುದ್ಧವಾಗಿ 20 ವರ್ಷಗಳ ವರೆಗೆ ನ್ಯಾಯಾಲಯಗಳಲ್ಲಿ ಹೋರಾಡಲು ಸಿದ್ಧರಿದ್ದಾರೆ ಎನ್ನುವುದನ್ನು ಅವರು ಪತ್ತೆಹಚ್ಚಬೇಕು.
ನನಗನ್ನಿಸಿದಂತೆ ಬಹುತೇಕ ಪೋಷಕರು ಕನ್ನಡ ಅಥವಾ ಅನ್ಯ ಭಾರತೀಯ ಭಾಷೆಯನ್ನು ದ್ವೇಷಿಸುವವರೇನೂ ಅಲ್ಲ. ಅವರು ತಮ್ಮ ಮನೆಯಲ್ಲೆಲ್ಲ ಮಾತೃಭಾಷೆಯಲ್ಲೇ ಮಾತನಾಡುತ್ತಾರೆ. ಮಕ್ಕಳ ಮೇಲೆ ಮಾಡಿದ ಹೂಡಿಕೆ ಭವಿಷ್ಯದಲ್ಲಿ ಮಕ್ಕಳಿಗೆ ಮತ್ತು ತಮಗೆ ಉತ್ತಮ ಪ್ರತಿಫಲವನ್ನು ತಂದುಕೊಡಲಿ ಎಂದವರು ಆಶಿಸುತ್ತಾರೆ. ಬಹಳಷ್ಟು ನಗರೀಕೃತ ಪೋಷಕರು ಮತ್ತು ಪಟ್ಟಣಗಳ ಜನರು ಶಿಕ್ಷಣವನ್ನು ಒಂದು ಹೂಡಿಕೆ ಎಂದು ಭಾವಿಸುತ್ತಿರುವುದರಿಂದ, ತನ್ನ ಅಡಿಯಲ್ಲಿರುವ ಎಲ್ಲಾ ಶಾಲೆಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕಗೊಳಿಸಲೇಬೇಕಾದ ಏಕೈಕ ಆಯ್ಕೆ ಸರ್ಕಾರದ ಮುಂದೆ ಉಳಿದಿದೆ. ಆ ಕೆಲಸವಾದರೆ ಎಲ್ಲವೂ ಸರಿಹೋಗುತ್ತದೆ.
-ಕಿರಣ್ ಕುಮಾರ್. ಎಸ್.
kirankumars@hotmail.com