ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ರಾಣಿ ಪ್ರಿಯಾಂಕಾರ ರಾಜವಂಶದ ರೋಷಕ್ಕೆ ಬೆಲೆಯೆಷ್ಟು?

Srinivasa Murthy VN
Updated On : 8 May 2014, 9:54 am

ನೀವು ರಾಜವಂಶದವರಾಗಿದ್ದರೆ, ನಿಮಗೆ ಸಾಮಾನ್ಯ ನಿಯಮಗಳ್ಯಾವುವೂ ಅನ್ವಯವಾಗವು. ನೀವು ರೂಪಿಸುವ ಕಾನೂನು ಉಳಿದ ಜನರು ಪಾಲಿಸುವುದಕ್ಕಷ್ಟೇ ಸೀಮಿತವಾಗಿರುತ್ತದೆ. ಭಾರತದಲ್ಲಿ ಇದು ಸ್ಪಷ್ಟವಾಗಿ ಅನ್ವಯವಾಗುವುದು ನೆಹರು-ಗಾಂಧಿ ಮನೆತನಕ್ಕಷ್ಟೆ. ಅತ್ಯಂತ ನಿಷ್ಠಾವಂತ ಮತ್ತು ಅತ್ಯಂತ ಗುಲಾಮೀ ಆಸ್ಥಾನಿಕನೂ ಕೂಡ ಕಾನೂನು ಧಿಕ್ಕರಿಸಿದರೆ ತೊಂದರೆಗೆ ಸಿಲುಕಬಲ್ಲ, ಆದರೆ ಗಾಂಧಿಗಳು? ಕಾಂಗ್ರೆಸ್ ಸೂಚಿತ ಕಾರ್ಯಯೋಜನೆಯೊಂದು ಸಫಲವಾಯಿತೆಂದಿಟ್ಟುಕೊಳ್ಳಿ ಅದರ ಮನ್ನಣೆ ಸೋನಿಯಾ ಅಥವಾ ರಾಹುಲ್‌ಗೇ ದೊರಕುತ್ತದೆ. ಒಂದು ವೇಳೆ 2ಜಿ ಅಥವಾ ಕೋಲ್ಗೇಟ್‌ನಂಥ ದೈತ್ಯಾಕಾರದ ಹಗರಣ ನಡೆದರೆ? ಪ್ರಧಾನ ಮಂತ್ರಿ ಅಥವಾ ಉಸ್ತುವಾರಿ ಸಚಿವನ ಕುತ್ತಿಗ ೆಗಂಟುಹಾಕಲಾಗುತ್ತದೆ. ಎ.ರಾಜಾ ಜೈಲು ಸೇರುತ್ತಾನೆ, ಆದರೆ ರಿಮೋಟ್ ಕಂಟ್ರೋಲ್ ರಾಣಿ ಮಾತ್ರ ಪ್ರಶ್ನಾತೀತಳಾಗಿ ಉಳಿಯುತ್ತಾಳೆ.
ಸ್ವತಂತ್ರ ಭಾರತದ 67 ವರ್ಷಗಳ ಇತಿಹಾಸದ ತುಂಬಾ ಇಂಥದ್ದೇ ವ್ಯವಹಾರಗಳ ಕಾರುಬಾರೇ ನಡೆದುಕೊಂಡು ಬಂದಿದೆ. ಇಷ್ಟು ವರ್ಷಗಳವರೆಗೂ ಯಾವುದೇ ರೀತಿಯ ಗಂಭೀರ ಸವಾಲುಗಳು ಅವರಿಗೆ ಎದುರಾಗದೇ ಇರುವುದನ್ನು ನೋಡಿದರೆ, ಗುಲಾಮತನದಿಂದ ತುಂಬಿರುವ ಪರಿಸರವನ್ನು ಸೃಷ್ಟಿಸುವಲ್ಲಿ ಯಾವ ರೀತಿಯಲ್ಲಿ ಆ ಅಸಾಧಾರಣ ಪ್ರತಿಭೆಗಳು ಕೆಲಸ ಮಾಡಿರಬಹುದು ಎನ್ನುವುದರ ಅರಿವಾಗುತ್ತದೆ. ಹೀಗಾಗೇ, ರಾಜಕುಟುಂಬಕ್ಕೆ ಅರಿವಿರದ, ಆದರೆ ಸುಲಭವಾಗಿ ಗ್ರಹಿಸಬಹುದಾದ ಸಂಗತಿಯೆಂದರೆ ಗಂಭೀರ ಸವಾಲುಗಳು ಎದುರಾದಾಗ ಕಿಂಚಿತ್ ಪ್ರತಿರೋಧವನ್ನು ತೋರಿಸುವ ಪೂರ್ವತಯಾರಿಯೂ ಆ ಕುಟುಂಬದ ಬಳಿ ಇಲ್ಲ ಎಂಬುದು.
2014ರ ಲೋಕಸಭಾ ಚುನಾವಣೆಗಳಲ್ಲಿ ಅಡಗಿರುವ ಪ್ರಮುಖ ಸಂಗತಿಯೆಂದರೆ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರೆದುರು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಮೂಕವಾಗಿದೆ ಮತ್ತು ಅಸಹಾಯಕವಾಗಿದೆ ಎನ್ನುವುದು. ತನ್ನ ಹತ್ತು ವರ್ಷಗಳ ಸುಲಿಗೆ ಮತ್ತು ಅಳ್ಳೆದೆಯನ್ನು ಕಾಪಾಡುವುದಕ್ಕೆ ಇನ್ನು ಸಾಧ್ಯವಿಲ್ಲ ಎನ್ನುವುದನ್ನು ಕಾಂಗ್ರೆಸ್ ಅರ್ಥಮಾಡಿಕೊಂಡಿದೆ. ಹಾಗಾಗೇ ಅದು ಪದೇ ಪದೆ ತನ್ನ ಅರಸುತನದ ಹಿನ್ನೆಲೆಯನ್ನು ಮುಂದಿಟ್ಟು ತನಗೆ ಗೊತ್ತಿರುವ ಹಳೆಯ ರಕ್ಷಣಾ ತಂತ್ರಕ್ಕೇ ಮೊರೆಹೋಗುತ್ತಿದೆ. ಹಿನ್ನೆಲೆಯೆಂಬ ಹುಲ್ಲುಕಡ್ಡಿ ಮುಳುಗುತ್ತಿರುವ ತನ್ನನ್ನು ಈ ಬಾರಿ ಉಳಿಸುತ್ತದೆ ಎಂದದು ಭಾವಿಸುತ್ತಿದೆ.
ಸೋನಿಯಾ ಗಾಂಧಿಯವರ ಪ್ರಚಾರ ಈ ಬಾರಿ ಅಜಮಾಸು ಅಗೋಚರವಾಗೇ ನಡೆಯುತ್ತಿದೆ ಎನ್ನುವುದನ್ನು ಗಮನಿಸಬೇಕು. ಮೇ 16ರಂದು ತಮ್ಮ ಪಕ್ಷ ನಿಸ್ಸಂಶಯವಾಗಿಯೂ ಎದುರಿಸಲಿರುವ ಸೋಲಿನ ಭಯದಿಂದಾಗಿಯೇ ಅವರ ಚಹರೆ ಭ್ರಷ್ಟ ಸುದ್ದಿ ವಾಹಿನಿಗಳಲ್ಲಿ "ಭಾರತೀಯತೆಯ" ರೂಪ ಹೊತ್ತು ಕಾಣಿಸಿಕೊಳ್ಳುತ್ತಿದೆ. ಈ ಮಾತು, ಚುನಾವಣಾ ಪ್ರಚಾರಗಳಲ್ಲೂ ಕೂಡ ಅಸಂಖ್ಯ ಅವಿವೇಕತನವನ್ನು ಪ್ರದರ್ಶಿಸುತ್ತಿರುವ ರಾಹುಲ್ ಗಾಂಧಿಗೂ ಅನ್ವಯವಾಗುತ್ತದೆ. ಹಲ್ಲುಗಿಂಜುವ ಮಾಧ್ಯಮಗಳು ರಾಹುಲ್ ಗಾಂಧಿಯವರನ್ನು ಭಾರತದ ರಕ್ಷಕ ಎಂದು ಎಷ್ಟೇ ಬಿಂಬಿಸಿದರೂ, ಅವರೊಟ್ಟಿಗೆ ರಾಜಕುಟುಂಬದ ಅತಿದೊಡ್ಡ ವ್ಯಕ್ತಿಗಳ ಹಣೆಬರಹದಲ್ಲೂ ಸೋಲಿನ ಸಾಲು ಮೂಡಿಬಿಟ್ಟಿದೆ.  
ಈ ಭೂಮಿಕೆಯಲ್ಲೇ ಕಾಂಗ್ರೆಸ್‌ನ ಕೊನೆಯ ಬೆಳಕಾದ ಪ್ರಿಯಾಂಕಾ ಗಾಂಧಿ (ಒಂದೊಮ್ಮೆ 'ವಾದ್ರಾ') ಆಗಮನವಾಗಿದೆ. ಮಾಧ್ಯಮಗಳು ಪ್ರಿಯಾಂಕಾ ಇಮೇಜ್ ಹೆಚ್ಚಿಸುವ ವಿಷಯದಲ್ಲಿ ತಮ್ಮ ಕೆಲಸವನ್ನಂತೂ ಮಾಡಿವೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದಕ್ಕೊಂದು ಉದಾಹರಣೆಯಾಗಿ, ರೆಡಿಫ್‌ನ ಪತ್ರಕರ್ತೆ ಶೀಲಾ ಭಟ್, 2012ರ ಉತ್ತರಪ್ರದೇಶದ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಪ್ರಿಯಾಂಕಾರನ್ನು ವರ್ಣಿಸಿದ ರೀತಿಯನ್ನೇ ನೋಡಬಹುದು:
"ಪ್ರಿಯಾಂಕಾರನ್ನು ಟಿಲಿವಿಷನ್ ಕ್ಯಾಮಾರಾಗಳ ಸುದ್ದಿ ಫೂಟೇಜ್‌ನಲ್ಲಿ ನೋಡುವುದೇ ಒಂದು ಅದ್ಭುತ. ಆಕೆಯ ತೆಳು ಮೈಕಟ್ಟು, ಆಕೆಯ ಯುರೋಪಿಯನ್ ರಂಗಿನ ತ್ವಚೆ, ಆಕೆಯ ದಟ್ಟ ಕಡುಕಪ್ಪು ಕೇಶರಾಶಿ, ಅಜ್ಜಿ ಇಂದಿರಾಗೆ ಹೋಲುವ ಆಕೆಯ ವ್ಯಕ್ತಿತ್ವ ಕ್ಯಾಮರಾ ಕಣ್ಣಲ್ಲಿ ಇನ್ನಷ್ಟು ವರ್ಧಿಸುತ್ತದೆ ಮತ್ತು ಟೆಲಿವಿಷನ್ ವೀಕ್ಷಿಸುವ ನಗರದ ಮಧ್ಯಮ ವರ್ಗದಿಂದ ಪ್ರೀತಿಗೆ ಪಾತ್ರವಾಗುತ್ತದೆ. ಪ್ರತಿ ಬಾರಿಯೂ ಪ್ರಿಯಾಂಕಾ ಟಿ.ವಿ. ಪರದೆಯ ಮೇಲೆ ಮೂಡಿಬಂದಾಗ, ಆಕೆಯನ್ನು ಸುತ್ತುವರಿದ ಕಥೆಗಳೆಲ್ಲ ಇನ್ನಷ್ಟು ಗಾಢವಾಗುತ್ತವೆ. ಕ್ಯಾಮರಾ ಲೆನ್ಸ್‌ಗಳ ಮೂಲಕ ಆಕೆ ಬೆಡಗು, ಬುದ್ಧಿವಂತಿಕೆ ಮತ್ತು ಸ್ವಾಭಾವಿಕತೆಯ ಸುಂದರ ಮಿಶ್ರಣವಾಗಿ ಹೊರಹೊಮ್ಮುತ್ತಾಳೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಟಿ.ವಿ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವಾಗ ಆಕೆಯ ಆಕರ್ಷಕ ಗುಣ ಸ್ಪಷ್ಟವಾಗಿ ಎದುರಾಗುತ್ತದೆ."
ಪ್ರಿಯಾಂಕಾ ಗಾಂಧಿ ಅದ್ಹೇಗೆ ಕೇವಲ 5 ವರ್ಷಕ್ಕೊಮ್ಮೆ ಚುನಾವಣಾ ಸಮಯದಲ್ಲಿ ಮಾತ್ರವೇ ಮನೆಯಿಂದ ಹೊರಕ್ಕೆ ಕಾಲಿಡುತ್ತಾರೆ ಮತ್ತು ದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲೊಂದಾದ, ರಾಜಕುಟುಂಬದ ಉಂಬಳಿ ಕ್ಷೇತ್ರಗಳಾದ ರಾಯ್‌ಬರೇಲಿ ಮತ್ತು ಅಮೇಠಿಯಲ್ಲಷ್ಟೇ ಪ್ರವಾಸ ಕೈಗೊಳ್ಳುತ್ತಾರೆ ಎನ್ನುವುದು ಕುತೂಹಲಕರ ಸಂಗತಿ. 2012ರ ಉತ್ತರಪ್ರದೇಶದ ಚುನಾವಣಾ ಸಮಯದಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ತೋರಿಸಲು ವಿಫಲವಾದ ವಿಷಯಗಳಲ್ಲಿ ಒಬ್ಬ ವೃದ್ಧೆ ಪ್ರಿಯಾಂಕಾರಿಗೆ ಕೇಳಿದ ಮಾತುಗಳೂ ಇವೆ: "ಓಹ್ ಈಗ ಬಂದ್ಯಾ ಮಗಳೇ? ಮತ್ತೆ 5 ವರ್ಷದ ನಂತರವೇ ಬರುತ್ತೀಯೇನೋ?" ಎಂದು ಪ್ರಶ್ನಿಸಿದ್ದಳಾಕೆ!
ಸತ್ಯವೇನೆಂದರೆ ಪ್ರಿಯಾಂಕಾ ಗಾಂಧಿಗೆ ಅದು ಚುನಾವಣಾ ಪ್ರಚಾರವಲ್ಲ, ಬದಲಾಗಿ ಅದೊಂದು ಬಡತನ ಸಂದರ್ಶಿಸುವ ಪ್ರವಾಸ ಅಷ್ಟೆ! ಆದರೆ ಈ ಬಾರಿ ಬಿಜೆಪಿಯ ಸ್ಮೃತಿ ಇರಾನಿ ರಾಹುಲ್‌ರ ಮನೆ ಬಾಗಿಲಲ್ಲೇ ಯುದ್ಧಸಾರಿರುವುದರಿಂದಆಕೆಯ ಬಡತನ ಪ್ರವಾಸ ಉಲ್ಟಾಹೊಡೆದಿದೆ. ಇನ್ನೊಂದೆಡೆ ನರೇಂದ್ರ ಮೋದಿ ವಂಶಾಡಳಿತದ ವಿರುದ್ಧ ಅತ್ಯಂತ ಯಶಸ್ವಿ ರ್ಯಾಲಿಯೊಂದರಲ್ಲಿ ಗುಡುಗಿದಾಗಲೂ ರಾಜಮನಸ್ಥಿತಿಗಳಲ್ಲಿ ಯಾವುದೇ ಬದಲಾವಣೆಗಳಾದಂತೆ ಕಾಣಿಸುತ್ತಿಲ್ಲ. ರಾಜಕುಟುಂಬದವರಿಗೆ ಸಹಜವಾಗಿ ಬರುವ ಅಹಂಕಾರದ ಲೇಪದಲ್ಲಿಯೇ ಆಕೆ ಪ್ರತಿಕ್ರಿಯಿಸಿದಳು: "ಸ್ಮೃತಿ ಇರಾನಿ ಕಾಂಗ್ರೆಸ್‌ನ ಅವಕಾಶವನ್ನು ಈ ಬಾರಿ ಕಸಿದುಕೊಳ್ಳಲಿದ್ದಾರೆಯೇ?" ಎನ್ನುವ ಪ್ರಶ್ನೆಗೆ, "ಯಾರಾಕೆ?" ಎಂದು ನಗುತ್ತಾ ಮರುಪ್ರಶ್ನೆಯನ್ನೆಸೆದಳು ಪ್ರಿಯಾಂಕಾ.
"ಶತ್ರುಗಳ ಕೈಗೆ ಆಯುಧ ಕೊಡುವುದು" ಎಂದು ಇದಕ್ಕೇ ಹೇಳುತ್ತಾರೇನೋ? ಈ ವರ್ತನೆಯನ್ನೇ ಮೋದಿ ತಮ್ಮ ಭಾಷಣದಲ್ಲಿ ತಿರುಗುಬಾಣವಾಗಿ ಬಳಸಿದರು. ಪ್ರಿಯಾಂಕಾ ಅದಕ್ಕುತ್ತರವಾಗಿ "ತಮ್ಮ ತಂದೆ, 'ಹುತಾತ್ಮ' ರಾಜೀವ್‌ರನ್ನು ಅಪಮಾನ ಮಾಡಿದ್ದಕ್ಕಾಗಿ ಅಮೇಠಿಯ ಜನರು ಮೋದಿಯನ್ನು ಕ್ಷಮಿಸುವುದಿಲ್ಲ" ಎಂದದ್ದೂ ಆಯಿತು. ಮತ್ತದೇ...ಆಸರೆಗಾಗಿ ಹುಲ್ಲು ಕಡ್ಡಿ ಹಿಡಿಯುವ ಕೆಲಸ! ಪ್ರಿಯಾಂಕ ಅನ್ಯ ವಿಷಯಗಳನ್ನು ಪ್ರಸ್ತಾಪಿಸಿ ಮೋದಿಯವರಿಗೆ ಸವಾಲೊಡ್ಡಬಹುದಿತ್ತು. ಆದರೆ ಆಕೆ ಆಯ್ದುಕೊಂಡಿದ್ದು, 'ಹುತಾತ್ಮ' ರಾಜೀವ್ ಗಾಂಧಿ ಅವರ ವಿಷಯವನ್ನೇ.
ಹಾಗಿದ್ದರೆ ರಾಜೀವ್ ಗಾಂಧಿಯವರ 'ಹುತಾತ್ಮತೆ' ಯಾವ ಬಗೆಯದ್ದು ಎನ್ನುವುದನ್ನು ನೋಡಲೇಬೇಕಾಗುತ್ತದೆ. ಉದಾಹರಣೆಗೆ:
1) ರಾಜೀವ್ ಪ್ರಧಾನಿಯಾದ ಕೂಡಲೇ ದೆಹಲಿಯಲ್ಲಿ ಸಿಖ್ಖರ ಹತ್ಯಾಕಾಂಡ ನಡೆಯಿತು. ಆ ಹತ್ಯಾಕಾಂಡವನ್ನು ನಾಚಿಕೆಯಿಲ್ಲದೆ ರಾಜೀವ್ ಸಮರ್ಥಿಸಿಕೊಂಡರು.
2) ರಾಜೀವ್ ಗಾಂಧಿ ಸರ್ಕಾರದ ವೈಖರಿಯನ್ನು ಟೀಕಿಸಿ ಲೇಖನಗಳನ್ನು ಬರೆದ ಎಸ್. ಗುರುಮೂರ್ತಿಯವರ ಬಂಧನವಾಯಿತು.
3) ಅಭಿವ್ಯಕ್ತಿ ಸ್ವಾತಂತ್ರ್ಯ(ಮುಖ್ಯವಾಗಿ ಮಾಧ್ಯಮಗಳದ್ದು)ವನ್ನು ಕಸಿದುಕೊಳ್ಳಲು ತಯಾರಾದ ಕುಖ್ಯಾತ ಡಿಫೆಮೇಷನ್ ಮಸೂದೆಗೆ ಮಂಜೂರಾತಿ ದೊರಕಿಸಿಕೊಡಲು ಪ್ರಯತ್ನಿಸಿದ್ದು.
4) ಪತ್ರಗಳನ್ನು ತಡೆಹಿಡಿದು, ಪರೀಕ್ಷಣೆಗೆ ಒಳಪಡಿಸಲು ಸಿದ್ಧಪಡಿಸಲಾದ ಕ್ಟಿಡಡಿಛಟ ಇ್ಝಟಟ ಅನ್ನು ಜಾರಿಗೆ ತರಲು ಪ್ರಯತ್ನಿಸಿದ್ದು.
5) ಸಲ್ಮಾನ್ ರಶ್ದಿಯ "ಸತಾನಿಕ್ ವರ್ಸೆಸ್‌" ಪುಸ್ತಕವನ್ನು ನಿಷೇಧಿಸುವ ಮೂಲಕ, ಹಾಗೆ ಮಾಡಿದ ಪ್ರಪಂಚದ ಮೊದಲ ರಾಷ್ಟ್ರವಾಗಿ. ಪ್ರಪಂಚದ ಕಣ್ಣೆದುರು ಅವಿಶ್ವಸನೀಯ ದೇಶವಾಗಿದ್ದು.
6) ಬೋಫೋರ್ಸ್ ಹಗರಣ.
7) ಭಾರತಕ್ಕೆ ಅಪಖ್ಯಾತಿ ತಂದೊಡ್ಡಿದ ಶ್ರೀಲಂಕಾದಲ್ಲಿನ ಅವಿವೇಕದ ಸೇನಾ ಸಾಹಸ. ನೂರಾರು ಭಾರತೀಯ ಸೈನಿಕರು ಅನಗತ್ಯವಾಗಿ ಜೀವಕಳೆದುಕೊಳ್ಳಬೇಕಾಗಿ ಬಂದದ್ದು.
8) ಮುಸಲ್ಮಾನರ ಓಲೈಕೆಗಾಗಿ ಶಾಹ್ ಬಾನೋ ಕೇಸಿನಲ್ಲಿ ಸಂವಿಧಾನದ ಮೇಲಾದ ದಾರ್ಜನ್ಯ...  
ರಾಜೀವ್ ಗಾಂಧಿಯವರ 'ಹುತಾತ್ಮತೆ'ಯ ಈ ನಿಜವಾದ ಗುಣವನ್ನೇ ಅವರ ಮಗಳು ಪ್ರಿಯಾಂಕ ಅಮೇಠಿಯ ಜನತೆಗೆ ಮಾರುತ್ತಿದ್ದಾರೆ. ಇದು ಆಕೆಯ ಹತಾಶೆಯನ್ನು ಸ್ಪಷ್ಟಪಡಿಸುತ್ತಿದೆಯಷ್ಟೆ.   
ಅಮೇಠಿ, ಗಾಂಧಿ ಕುಟುಂಬದ ಹಿಡಿತದಿಂದ ವೇಗವಾಗಿ ಜಾರುತ್ತಿರುವಂತಿದೆ. ಭಾರತದ ಉಳಿದ ಭಾಗದ ಜನರಂತೆಯೇ ಅಮೇಠಿ ವಾಸಿಗಳಿಗೂ ಕೂಡ ಕಳೆದ 60 ವರ್ಷಗಳಿಂದ ಈ ಕುಟುಂಬದಿಂದ ತಮಗೆ ಆದ ವಂಚನೆಯ ಅರಿವಾಗಿದೆ. ಇದನ್ನೆಲ್ಲ ಅರ್ಥಮಾಡಿಕೊಳ್ಳುತ್ತಿರುವವರು 'ರಾಜವಂಶಕ್ಕೆ ನಿಷ್ಠೆ' ಎನ್ನುವುದಕ್ಕೆಲ್ಲ ಕವಡೆ ಕಾಸಿನ ಕಿಮ್ಮತ್ತೂ ಕೊಡದ ಭಾರತದ ಹೊಸ ತಲೆಮಾರಿನ ಮತದಾರರು.
ಇನ್ನು ರಾಹುಲ್ ಗಾಂಧಿಯ ಪ್ರಚಾರಗಳೇ ಇವೆಲ್ಲವನ್ನೂ ಹೇಳುವಂತಿವೆ. ಅಮೇಠಿ ರಾಹುಲ್‌ರ ಕ್ಷೇತ್ರವೇ ಹೊರತು, ಅವರ ಸಹೋದರಿಯದ್ದಲ್ಲ. ಆದರೆ ರಾಹುಲ್ ಅಮೇಠಿಯಲ್ಲಿ ಕಾಣಿಸಿಕೊಳ್ಳುತ್ತಲೇ ಇಲ್ಲ. ತಮ್ಮನ್ನು ಆಗಲೇ ಮನಸ್ಸಿನಿಂದ ದೂರತಳ್ಳಿರುವ ಮತದಾರರ ಮುಂದೆ 'ಬದಲಿ' ಪ್ರಚಾರ ನಡೆಸಲು ಸಹೋದರಿಯ ಮೊರೆ ಹೋಗಿದ್ದಾರಷ್ಟೆ. ಆದಾಗ್ಯೂ ನರೇಂದ್ರ ಮೋದಿ ಕೂಡ ಸ್ಮೃತಿ ಇರಾನಿ ಪರವಾಗಿ ಪ್ರಚಾರ ಮಾಡಿದ್ದಾರೆ. ಆದರೆ ಕೇವಲ ಒಂದೇ ಬಾರಿಯಷ್ಟೆ. ತಮ್ಮ ಹೆಸರು ಘೋಷಣೆಯಾದ ದಿನದಿಂದಲೇ ಸ್ಮೃತಿ ಇರಾನಿ ಅಮೇಠಿಯಲ್ಲಿ ಬೇರುಮಟ್ಟದಿಂದ ಕೆಲಸಮಾಡತೊಡಗಿದರು. ರಾಹುಲ್ ಅಮೇಠಿಯಲ್ಲಿ ಕೊನೆಗೆ ಗೆಲ್ಲುತ್ತಾರೋ ಇಲ್ಲವೋ ಎನ್ನುವ ಮಾತು ಬೇರೆ. ಆದರೆ ಸ್ಮೃತಿ ಇರಾನಿ ರಾಹುಲ್‌ಗೆ ಒಡ್ಡಿರುವ ಸವಾಲನ್ನು ಪರಿಗಣಿಸಬೇಕಾಗುತ್ತದೆ. ಇದು 90ರ ದಶಕದಲ್ಲಿ ಬಳ್ಳಾರಿಯಲ್ಲಿ ಸುಷ್ಮಾ ಸ್ವರಾಜ್ ಮತ್ತು ಸೋನಿಯಾ ಗಾಂಧಿ ನಡುವೆ ನಡೆದ ಯುದ್ಧವನ್ನು ನೆನಪಿಸುತ್ತಿದೆ. ಆಗ ಸುಷ್ಮಾ ಸ್ವರಾಜ್ ಸ್ಪರ್ಧೆಯಲ್ಲಿ ಸೋತರು. ಆದರೆ ಅಂದಿನಿಂದ ಇಂದಿನವರೆಗೂ ಬಳ್ಳಾರಿ ಬಿಜೆಪಿಯ ಭದ್ರಕೋಟೆಯಾಗಿದೆ. ರಾಹುಲ್ ಗಾಂಧಿ ಮುಂದೆಯೂ ಕಲಿಯದ ಪ್ರಮುಖ ಪಾಠವಿದು.
ಅದೂ ನಿಜವೇ, ಏಕೆಂದರೆ ನೀವು ರಾಜವಂಶದವರಾಗಿದ್ದರೆ ನಿಮಗೆ ಸಾಮಾನ್ಯ ನಿಯಮಗಳು ಅನ್ವಯವಾಗವು ಬಿಡಿ. ಆದರೆ ನಿಯಮಗಳು ಬದಲಾಗುವ ಕಾಲವಂತೂ ಎದುರಾಗುತ್ತಿದೆ.

-ಸಂದೀಪ್ ಬಾಲಕೃಷ್ಣ
deepu.sandeep@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement