ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಿನೆಮಾ ನಟರಷ್ಟೇ ನಮ್ಮ ಆದರ್ಶವಾಗಬೇಕೇ?

Srinivasa Murthy VN
Updated On : 10 May 2014, 10:45 am

ಕ್ರಿಕೆಟ್ ಆಟಗಾರ ಅಥವಾ ಸಿನಿಮಾ ನಾಯಕರ ಎಲ್ಲ ಅಲಂಕಾರಳೂ ಮ್ಯಾನರಿಸಂಗಳೂ ನಮಗೆ ಅನುಕರಣಯೋಗ್ಯ. ಆದರೆ ಅವರ ಸಾಧನೆಯಲ್ಲ. ಸಾಧನೆ ಶ್ರಮ ಮತ್ತು ಪರಿಶ್ರಮವನ್ನು ಬಯಸುತ್ತದೆ. ಅನುಕರಣೆಯನ್ನಲ್ಲ!

ಹಳೆಯ ಚಲನಚಿತ್ರಗಳಲ್ಲಿ ನಾಯಕನನ್ನು ಸಹ ನಟರು 'ಗುರೂ' ಎಂದು ಸಂಬೋಧಿಸುತ್ತಿದ್ದರು. ಗುರುವೇ ಹೀರೋ, ಹೀರೋವೇ ಗುರು. ಅವನೇ ಆದರ್ಶ ವ್ಯಕ್ತಿ. ಶ್ರೀಕೃಷ್ಣ ಅಂತಹ ಒಬ್ಬ ರೋಲ್ ಮಾಡೆಲ್-"ಕೃಷ್ಣಂ ವಂದೇ ಜಗದ್ಗುರುಮ್‌". ಬಾಲಕೃಷ್ಣನ ತುಂಟಾಟದ ಕಥೆಗಳು ನಮ್ಮ ಹೃದಯಕ್ಕೂ, ಅವನ ರಾಜಕೀಯದ ಪಟ್ಟುಗಳು ನಮ್ಮ ಮೆದುಳಿಗೂ ಸಂಸ್ಕಾರವನ್ನು ಕೊಡಬಲ್ಲವು. ಸಂಸ್ಕರಿಸಲ್ಪಟ್ಟ ಹೃದಯ-ತಲೆ ಎರಡೂ ವಿಶ್ವದ ಒಳಿತಿಗಾಗಿ ಅನುದಿನವೂ ಮುಡಿಪಾದೀತು. ಚಾಣಕ್ಯನನ್ನು ಇನ್ನೂ ನಾವು ಮರೆತಿಲ್ಲವೆಂದರೆ ನಮ್ಮದೋ ಅವನದೋ ಪುಣ್ಯವಷ್ಟೆ. ಇವರಿಬ್ಬರ ಜೊತೆಗೆ ಹನುಮಂತನ ಉದಾಹರಣೆ ಸಾಕು ನಮ್ಮ ಜೀವನವನ್ನು ಬೆಳಗಲು. ಆದರ್ಶ, ಹೀರೋ ಎಂಬ ವಿಶೇಷಣಗಳು ಮತ್ತಾರಿಗೆ ಅನ್ವಯವಾಗಲು ಸಾಧ್ಯ?
ಶ್ರೀಕೃಷ್ಣ ಪಾಂಡವರ ಪರ ಎಂಬುದು ನಮ್ಮ ತಿಳಿವಳಿಕೆ. ಅವನು ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ. ಅಧರ್ಮಿಗಳಾದ ಕೌರವರಿಂದಾಗುವ ಅನಾಹುತವನ್ನು ತಪ್ಪಿಸಲಷ್ಟೆ ಆತ ಯುದ್ಧಕ್ಕೆ ಒಪ್ಪಿದ್ದು. ಆತ ಧರ್ಮದ ಪರ ವಹಿಸಿದ. ಪರಮಾತ್ಮನನ್ನು ಒಲಿಸಿಕೊಳ್ಳಲು ಬೇರೆ ಮಾರ್ಗವುಂಟೆ? ಕೇವಲ ಐದು ಹಳ್ಳಿಗಳನ್ನು ಪಡೆಯಲು ಭಿಕ್ಷುಕನಂತೆ ದುರ್ಯೋಧನನ ಮುಂದೆ ಉತ್ತರೀಯವನ್ನೊಡ್ಡಿದ. ಲಕ್ಷಾಂತರ ಅಮಾಯಕ ಸೈನಿಕರ ಪ್ರಾಣನಾಶ ಅವನಿಗೆ ಬೇಕಿರಲಿಲ್ಲ. ಮಹಾತ್ಮರಿಗೆ ಯಾವುದೂ ಕಷ್ಟವಲ್ಲ ಎಲ್ಲದಕ್ಕೂ ಸೈ! ಹರಿಶ್ಚಂದ್ರನು ಸ್ಮಶಾನ ಕಾಯಲಿಲ್ಲವೇ? ಸಾಕ್ಷಾತ್ ಭಗವಂತನೇ ಮುಂದೆ ಭಿಕ್ಷುಕನಾಗಿ ನಿಂತಿರುವಾಗ ಅದಕ್ಕಿಂತ ಭಾಗ್ಯವುಂಟೆ? ಆದರೆ ಅದು ದುರ್ಯೋಧನ! ಕಳೆದುಕೊಂಡ ಅವಕಾಶ ಮತ್ತೆ ಸಿಗಲಿಲ್ಲ. "ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿ, ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿ"  ಇದು ದುರ್ಯೋಧನನದೇ ಮಾತು!  
ಅಧರ್ಮಿಗಳನ್ನು ಹೊಸಕಿಹಾಕುವುದು ಕೃಷ್ಣನಿಗೆ ನಿಮಿಷದ ಕೆಲಸ. ಆದರೆ ಪಾಂಡವರಿಗೆ ಕರ್ತವ್ಯವನ್ನು ನೆನಪಿಸಿದ. ಯುದ್ಧ ಮಾಡಿಸಿದ. ಗೆದ್ದ ನಂತರ ಚಕ್ರಾಧಿಪತಿಯಾಗುತ್ತೇನೆಂದರೆ ಐವರೂ ಅವನ ಪಾದಸೇವೆಗೆ ಸಿದ್ಧರಾಗಿದ್ದರು. ಅವನು ಹಾಗೆ ಮಾಡಿದ್ದರೆ ಸಾವಿರಾರು ವರ್ಷಗಳ ನಂತರವೂ ಅವನನ್ನು ನಾವು ಸ್ಮರಿಸಿಕೊಳ್ಳಬೇಕಿರಲಿಲ್ಲ. ಕೆಲಸ ಮುಗಿದೊಡನೆ ತನ್ನ ಪಾಡಿಗೆ ಹೊರಟುಬಿಟ್ಟ. ಅಮರನಾದ. ಇನ್ನೂವರೆಗೂ ಶ್ರೀಕೃಷ್ಣ ಪೂಜ್ಯನಾಗಿರುವುದು ಇದೇ ಕಾರಣಕ್ಕೆ.
ಚಾಣಕ್ಯನಾದರೋ ನಂದರನ್ನು ಹೊಸಕಿಹಾಕಿದ. ರಾಜಕೀಯದಾಟದಲ್ಲಿ ಎಂಥವರ ಪ್ರಾಣ ತೆಗೆಯಲೂ ಹಿಂದೆ ಮುಂದೆ ನೋಡಲಿಲ್ಲ. ಆದರೂ ತನ್ನ ಬುದ್ಧಿಚಾತುರ್ಯದಿಂದಾಗಿ ಸಾವಿರಾರು ಸೈನಿಕರ ನಾಶವನ್ನು ತಡೆದ.  ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ. ತಾನೇ ರಾಜನೆಂದು ಘೋಷಿಸಿಕೊಂಡಿದ್ದರೂ ಚಂದ್ರಗುಪ್ತನು ಪರಮಸಂತೋಷದಿಂದ ಪ್ರತಿದಿನವೂ ಅವನ ಶ್ರೀಪಾದತೀರ್ಥವನ್ನು ಸ್ವೀಕರಿಸಲು ಸಿದ್ಧನಾಗಿದ್ದ. ಚಾಣಕ್ಯನಿಗೆ ಬೇಕಾದದ್ದು ಸಂಪತ್ತೂ ಅಲ್ಲ, ರಾಜ್ಯವೂ ಅಲ್ಲ, ಪದವಿಯೂ ಅಲ್ಲ. ಅಧರ್ಮದ ನಾಶವಷ್ಟೇ ಅವನ ಧ್ಯೇಯವಾಗಿತ್ತು. ಪ್ರತಿಸ್ಪರ್ಧಿಯೂ, ಕಡುವೈರಿಯೂ ಆದ ಅಮಾತ್ಯ ರಾಕ್ಷಸನನ್ನು ಮಂತ್ರಿಸ್ಥಾನಕ್ಕೆ ನಿಯಮಿಸಿ ಎಲ್ಲವನ್ನೂ ತ್ಯಜಿಸಿ ಗುರುಕುಲದಲ್ಲಿ ಅಧ್ಯಾಪನಕ್ಕಾಗಿ ಹೊರಟೇಬಿಟ್ಟ.
ಗಟ್ಟಿಯಾದ ಬೆರಣಿಯನ್ನು ಒಡೆಯಲು ಬೇಕಾದ ಕಲ್ಲು, ಶಿಷ್ಯರು ಆರಿಸಿ ತಂದ ದರ್ಭೆಯ ಕಟ್ಟುಗಳು, ಒಣಗಲು ಹಾಕಿದ್ದ ಸಮಿತ್ತಿನ ಭಾರದಿಂದ ಕುಸಿದ ಛಾವಣಿ. ಬಿರುಕುಬಿಟ್ಟ ಹಳೆಯ ಗೋಡೆ ಇವೇ ಆ ಗುಡಿಸಿಲಿನ ಅಲಂಕಾರ. ಇಂತಹ ಮುರುಕುಮನೆ ರಾಜಾಧಿರಾಜ ಚಂದ್ರಗುಪ್ತಮೌರ್ಯನ ಕುಲಗುರುವೂ ಮಹಾಮಂತ್ರಿಯೂ ಆಗಿದ್ದ ಚಾಣಕ್ಯನ ಆಸ್ತಿ!
ತಮ್ಮ ವಾಸದ ನವೀಕರಣದ ತೆವಲಿಗಾಗಿ, ವಿದೇಶೀ ಪ್ರವಾಸದ ತೆವಲಿಗಾಗಿ ಕೋಟ್ಯಂತರ ತೆರಿಗೆಹಣವನ್ನು ನುಂಗುವ ಇಂದಿನ ನಮ್ಮ ಘನಮಂತ್ರಿಗಳು ಮತ್ತು ಶಾಸಕರು ಈ ಶ್ಲೋಕವನ್ನು ನಿತ್ಯ ಪಾರಾಯಣ ಮಾಡಬೇಕು.
ಇಂದಿನ ಯುವಕರನ್ನು "ನಿಮ್ಮ ಆದರ್ಶ ವ್ಯಕ್ತಿ ಯಾರೆಂದು?" ಕೇಳಿದರೆ ಸಾಮಾನ್ಯವಾಗಿ ಒಬ್ಬ ಸಿನೆಮಾ ನಟನನ್ನೋ ಕ್ರಿಕೆಟ್ ಪಟುವನ್ನೋ ಹೆಸರಿಸುತ್ತಾರೆ. ಸ್ವಲ್ಪ ಚಿಕ್ಕವರಾದರೆ ಅಬ್ದುಲ್ ಕಲಾಂ ಎನ್ನಬಹುದು. ಹೆಣ್ಣುಮಕ್ಕಳಾದರೆ ಕಲ್ಪನಾ ಚಾವ್ಲಾ ಅಥವಾ ಸುನೀತಾ ವಿಲಿಯಂಸ್ ಎಂದರೆ ಅದು ನಮ್ಮ ಅದೃಷ್ಟ. ನಟರೂ, ಆಟಗಾರರೂ, ಗಿಗಊಿ ಕುಸ್ತಿಪಟುಗಳೂ ನಮ್ಮ ಹೀರೋಗಳು! ಯಾವುದೂ ತಪ್ಪಲ್ಲ, ಎಷ್ಟು ಮಾತ್ರಕ್ಕೆ ಅವರು ನಮಗೆ ಸಲ್ಲುವರೆಂದು ವಿವೇಕವಿರಬೇಕಷ್ಟೆ. ಆಜಾದ್, ಭಗತ್ ಸಿಂಗ್, ವಿವೇಕಾನಂದ, ಸಾವರ್ಕರ್, ವಲ್ಲಭಭಾಯಿ ಪಟೇಲ್, ಎಡಿಸನ್, ಸಂದೀಪ್ ಉನಿಕೃಷ್ಣನ್ ಮುಂತಾದವರು ನಮಗೆ ಹೀರೋಗಳಾಗಿ ಕಾಣುವುದಿಲ್ಲವೇಕೆ?
ಕ್ರಿಕೆಟ್ ಆಟಗಾರ ಅಥವಾ ಸಿನಿಮಾ ನಾಯಕರ ಎಲ್ಲ ಅಲಂಕಾರಳೂ ಮ್ಯಾನರಿಸಂಗಳೂ ನಮಗೆ ಅನುಕರಣಯೋಗ್ಯ. ಆದರೆ ಅವರ ಸಾಧನೆಯಲ್ಲ. ಸಾಧನೆ ಶ್ರಮ ಮತ್ತು ಪರಿಶ್ರಮವನ್ನು ಬಯಸುತ್ತದೆ. ಅನುಕರಣೆಯನ್ನಲ್ಲ!  ಸಿನೆಮಾ ನಟರೇ ನಮ್ಮ ಆದರ್ಶವಾಗಬೇಕಿಲ್ಲ. ಒಂದು ಇರುವೆ, ಒಂದು ಪಕ್ಷಿ, ಶಾಲೆಯ ಮೆಟ್ಟಿಲು ಕಾಣದ ವೃತ್ತಪತ್ರಿಕೆ ಹಂಚುವ ಹತ್ತು ವರ್ಷದ ಹುಡುಗನೂ ಆದೀತು. ಬೆಳಿಗ್ಗೆ ಮೂರಕ್ಕೆ ಎದ್ದು-ಒಂದು ದಿನವೂ ತಪ್ಪದೆ, ಗೊಣಗದೆ, ಆರಕ್ಕೋ ಏಳಕ್ಕೋ ತನ್ನ ಕೆಲಸ ಮುಗಿಸಿ ತನ್ನ ಮನೆಯ ನಿರ್ವಹಣೆಗಾಗಿ ಮತ್ತೊಂದು ಕೆಲಸಕ್ಕೆ ಅಣಿಯಾಗುತ್ತಾನೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಂಸಾರಕ್ಕೆ ಹೆಗಲಾಗಿರುತ್ತಾನೆ. ಅವರಿಂದ ಕಲಿಯಲು ಯೋಗ್ಯವಾದ ಯಾವುದನ್ನಾದರೂ ಅಥವಾ ಎಲ್ಲವನ್ನೂ ನಾವು ಗಮನಿಸಬೇಕಷ್ಟೆ.
ನಮ್ಮ ಯುವಕರಿಗೆ ನಟರು ಮಾಡುವ ಪಾತ್ರಗಳು, ಹಾಕುವ ವೇಷಗಳು, ಯಾರೋ ಬರೆದುಕೊಟ್ಟದ್ದನ್ನು ಹೊಡೆಯುವ ಡೈಲಾಗ್‌ಗಳು ಆಪ್ಯಾಯಮಾನ. ಅದನ್ನು ಹೊರತಾಗಿ ನಿಜಜೀವನದಲ್ಲಿ ಅವರಿಂದ ಅನುಸರಿಸಲು ಯೋಗ್ಯವಾದ ಯಾವುದೂ ಹೆಚ್ಚಾಗಿ ಕಂಡುಬರುವುದಿಲ್ಲ. ಇಲವೆಂದಲ್ಲ, ಅಪರೂಪ. ಅವು ಅವರು ಹಣಕ್ಕಾಗಿಯೋ, ತಮ್ಮ ಮನಸ್ಸಂತೋಷಕ್ಕಾಗಿಯೋ, ಚಲಾವಣೆಗೆಗಾಗಿಯೋ ಮಾಡುವ ಕ್ಷಣಿಕಪಾತ್ರಗಳಷ್ಟೆ. ಅದನ್ನೇ ನಿಜವೆಂದು ಭಾವಿಸುವುದು ದುರಂತ.  ಈಗಿನ ಪ್ರಪಂಚಕ್ಕೆ ಪ್ರಮೆಗಿಂತ ಭ್ರಮೆಯೇ ಆಪ್ಯಾಯಮಾನವಲ್ಲವೇ! ನಿಜಜೀವನಕ್ಕಿಂತ ಕನಸಿನ ಪ್ರಪಂಚ ಆಕರ್ಷಕವೇ ಹೌದು. ಕನಸಿನಲ್ಲಿ ಕೋಟ್ಯಧಿಪತಿಯೂ ಆಗಬಹುದು, ಭಾರತದ ಕ್ರಿಕೆಟ್ ತಂಡದ ನಾಯಕನೂ ಆಗಬಹುದು.
ಶ್ರೀರಾಮನು ತಾನು ಗೆದ್ದ ದೇಶಗಳಿಗೆ ತನ್ನ ಆಳ್ವಿಕೆಯನ್ನು ವಿಸ್ತರಿಸಲಿಲ್ಲ. ಲಂಕೆಗೆ ವಿಭೀಷಣನನ್ನೂ, ವಾನರಸಾಮ್ರಾಜ್ಯಕ್ಕೆ ಸುಗ್ರೀವನನ್ನೂ ರಾಜರನ್ನಾಗಿಸಿ ಸ್ವರ್ಗಗರೀಯಸಿಯಾದ ಜನ್ಮಸ್ಥಲಕ್ಕೆ ಹೊರಟುಬಿಟ್ಟ. ಆದರೂ ಅಂತಹ ರಾಮನಲ್ಲಿಯೂ ಇಂದಿಗೂ ದೋಷಗಳನ್ನು ಹೆಕ್ಕಿ ವಾದ ಮಾಡುತ್ತಲೇ ಇರುವವರಿದ್ದಾರೆ. ಆದರೆ ಹನುಮಂತನ ಕಡೆಗೆ ಬೆರಳು ತೋರುವವರು ಕಡಿಮೆ. ಅವನೊಬ್ಬ ಅಕಳಂಕ ಹೀರೋ. ಅತಿಬಲಪರಾಕ್ರಮಿಯಾದರೂ ಅತಿ ವಿನಯವಂತ, ಅತಿಸಮರ್ಥನಾದರೂ ನಿಷ್ಠಾವಂತ. ಕಾರ್ಯಪರತೆ, ಭಕ್ತಿ, ಬ್ರಹ್ಮಚರ್ಯ, ಬುದ್ಧಿಚಾತುರ್ಯ, ಮಿತಭಾಷೆ ಇವುಗಳಿಗೆ ಮೂರ್ತರೂಪನಾಗಿದ್ದ. ಸ್ವತಃ ಶ್ರೀರಾಮನೇ ಹನುಮನ ಪರಿಚಯವನ್ನು ಹೀಗೆ ಮಾಡಿಸುತ್ತಾನೆ.
"ಬಹು ವ್ಯಾಹರತಾನೇನ ನ ಕಿಂಚಿದಪಶಬ್ದಿತಮ್....ಉಚ್ಚಾರಯತಿ ಕಲ್ಯಾಣೀಂ ವಾಚಂ ಹೃದಯಹಾರಿಣೀಮ್‌".
ಹೃದಯಾಕರ್ಷಕವಾದ ಮಂಗಳಕರವಾದ ಹದವರಿತ ಮಾತುಗಳು! ಸಾಕ್ಷಾತ್ ಭಗವಂತನಿಂದಲೇ ಪ್ರಶಂಸೆ ಪಡೆಯುವ ಭಾಗ್ಯ ಎಷ್ಟು ಜನರಿಗಿದೆ?
ಇಂದಿನ ಗೊ ಯಾ, ವ್ಹಾಟ್ ಯಾ, ಡ್ಯೂಡ್, ಡ್ಯಾಡ್ ಭಾಷಿಕರಿಗೆ ಇಂತಹ ಪ್ರಯೋಗ ಮಾತ್ರದಿಂದಲೇ ತಾವು ಹೀರೋ ಆಗಬಯಸುವ ಜನರಿಗೆ ಶ್ರೀರಾಮನ ಮಾತೂ ಕೇಳಿಸುವುದಿಲ್ಲ. ರಾಮನ ಜಯದಲ್ಲಿ ಬಹುಪಾಲು ಪಾತ್ರ ಹನುಮನದೇ. ನಮ್ಮಲ್ಲಿ ರಾಮಮಂದಿರಗಳ ಸಂಖ್ಯೆಗಿಂತ ಹೆಚ್ಚಾಗಿ ಕಂಡುರುವುದು ಹನುಮನ ಗುಡಿಗಳು. ಹನುಮ ನಮ್ಮ ಜನಮನಕ್ಕೆ ಎಷ್ಟು ಸಮೀಪ ಮತ್ತು ಆಪ್ಯಾಯಮಾನ ಎಂಬುದು ಇದರಿಂದ ಗೊತ್ತಾಗುತ್ತದೆ. ಎಲ್ಲವನ್ನೂ ಸಾಧಿಸಿದ್ದರೂ ಯಾವುದನ್ನೂ ತೋರ್ಪಡಿಸದ ್ಡಟಿಛಡಡ್ಡಟ್ಝಟ್ಜಿ ಠಜ್ಠಡ್ಟಟಿಛಟ್ಝಡಿಣ!! ಹನುಮನದು. ಇವನಿಗಿಂತ ದೊಡ್ಡ ಆದರ್ಶಪುರುಷ ಬೇಕೆ?

-ಎಸ್. ಎನ್. ಶ್ರೀನಿವಾಸನ್
ಸಂಸ್ಕೃತ ಅಧ್ಯಾಪಕ ವಾಗ್ದೇವೀ ವಿಲಾಸ ವಿದ್ಯಾಸಂಸ್ಥೆ, ಬೆಂಗಳೂರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement