ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಈ ಮುಖಾಮುಖಿಯ ಹಿಂದಿನ ಕಥೆಯೇನು?

ಚುನಾವಣಾ ಆಯೋಗ ಮತ್ತು ಅದರಲ್ಲೂ ಮುಖ್ಯವಾಗಿ ಮುಖ್ಯ ಚುನಾವಣಾ ...

Rashmi Kasaragodu
Updated On : 12 May 2014, 1:49 am

ಚುನಾವಣಾ ಆಯೋಗ ಮತ್ತು ಅದರಲ್ಲೂ ಮುಖ್ಯವಾಗಿ ಮುಖ್ಯ ಚುನಾವಣಾ ಆಯುಕ್ತ ಸಂಪತ್ ಅವರ ವಿರುದ್ಧ ವಾರಾಣಸಿಯಲ್ಲಿ ಬಿಜೆಪಿ ರೊಚ್ಚಿಗೆದ್ದು ನಿಂತಿದ್ದು ಕೇವಲ ಆ ಕ್ಷಣದ ಪ್ರತಿಕ್ರಿಯೆಯಾಗಿರಲಿಲ್ಲ. ಕೆಲವು ಸಮಯಗಳಿಂದ ಚುನಾವಣಾ ಆಯೋಗ ಮತ್ತು ಬಿಜೆಪಿಯ ನಡುವೆ ಮುಖಾಮುಖಿಗೆ ಅಖಾಡ ಸಿದ್ಧವಾಗುತ್ತಿತ್ತು. ಬಿಜೆಪಿಯ ಹಿರಿಯ ನಾಯಕರ ದೃಷ್ಟಿಯಲ್ಲಿ, ಸಂಪತ್ ಅವರು ಈ ಹಿಂದಿನ ಮುಖ್ಯ ಚುನಾವಣಾ ಆಯುಕ್ತರಿಗಿಂತ ದುರ್ಬಲರು. ಕೇವಲ ಒಬ್ಬೇ ಒಬ್ಬ ಬಿಜೆಪಿ ನಾಯಕ ಮಾತ್ರ ಸಂಪತ್ ಅವರನ್ನು ಹಿಂದಿನ ಆಯುಕ್ತ ಎಸ್ವೈ ಖುರೇಶಿಗಾದರೂ ಹೋಲಿಸಿದ್ದಾರೆ. ಆದರೆ ಆ ಹೋಲಿಕೆಯಲ್ಲಿ ಹೆಚ್ಚು ಅಂಕಗಳು ಖುರೇಶಿಯವರಿಗೇ ದಕ್ಕಿದೆ.
ಕಳೆದ 10-15 ವರ್ಷಗಳಲ್ಲಿ ಈ ಮಟ್ಟದ ಹಿಂಸಾಚಾರ, ಪ್ರಮುಖ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಉದ್ದೇಶಪೂರ್ವಕ ವ್ಯತ್ಯಯ ನಡೆದಿರಲೇ ಇಲ್ಲ ಎನ್ನುವುದು ಬಿಜೆಪಿಯ ಹಿರಿಯ ನಾಯಕರ ಗ್ರಹಿಕೆ. "ಪರಿಸ್ಥಿತಿ ಪ್ರತಿಗಾಮಿಯಾಗಿದೆ. ಇದಕ್ಕೆ ಸಂಪತ್ ಅವರೂ ಕಾರಣಕರ್ತರು" ಎನ್ನುತ್ತಾರೆ ಬಿಜೆಪಿಯ ಸಂಸದರೊಬ್ಬರು.
 ವಾರಾಣಸಿಯ ಜಿಲ್ಲಾ ನ್ಯಾಯಾಧೀಶರು ನರೇಂದ್ರ ಮೋದಿಯವರು ನಡೆಸಬೇಕೆಂದುಕೊಂಡಿದ್ದ ಸಾರ್ವಜನಿಕ ಸಭೆಗೆ ಅನುಮತಿ ಕೊಡಲಿಲ್ಲ. ಅವರ ನಿರ್ಣಯವನ್ನು ಚುನಾವಣಾ ಆಯೋಗ ಕೂಡ ಬೆಂಬಲಿಸಿತು. ತಾವು ಮೆಜಿಸ್ಟ್ರೇಟರ "ವೃತ್ತಿಪರ" ಆದೇಶಕ್ಕೆ ತಕ್ಕಂತೆ ನಡೆದುಕೊಂಡಿದ್ದೇನೆ ಎಂದು ಸಂಪತ್ ಹೇಳುತ್ತಾರೆ. ಆದರೆ ಚುನಾವಣಾ ಆಯೋಗದ ಅಧಿಕೃತ ಆಜ್ಞೆಯೇ, "ಒಬ್ಬ ಜಿಲ್ಲಾ ಮೆಜಿಸ್ಟ್ರೇಟ್ ಅಥವಾ ಸರ್ಕಾರಿ ಅಧಿಕಾರಿಗಳ 'ವೃತ್ತಿಪರ' ತೀರ್ಪು ಸ್ವಾಯತ್ತ ನಿರ್ಧಾರವೇ ಅಥವಾ ಅದರ ಹಿಂದೆ ರಾಜ್ಯ ಸರ್ಕಾರ/ ಸ್ಥಳೀಯ ರಾಜಕೀಯ ವ್ಯವಸ್ಥೆಯ ಒತ್ತಡವಿದೆಯೇ ಎನ್ನುವುದು ಗಮನಿಸಬೇಕು" ಎಂದು ಹೇಳುತ್ತದೆ. ಆದರೆ ಸಂಪತ್ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಜಿಲ್ಲಾ ಮೆಜಿಸ್ಟ್ರೇಟರು ನೀಡಿದ ಆಜ್ಞೆಯನ್ನೇ ಬೆಂಬಲಿಸಿದರು ಎಂದು ಬಿಜೆಪಿ ವಾದಿಸುತ್ತಿದೆ.
ವಾರಾಣಸಿ ಪ್ರಕರಣವಷ್ಟೇ ಅಲ್ಲ, ಅದಕ್ಕೂ ಹಿಂದಿನಿಂದಲೇ ಸಂಪತ್ ಅವರ ವಿರುದ್ಧ ಆರೋಪಗಳು ಹರಿದು ಬರತೊಡಗಿದ್ದವು(ಬಿಜೆಪಿಯಂತೂ ಹಾಗೇ ಭಾವಿಸುತ್ತದೆ). ಮಹಾರಾಷ್ಟ್ರದಲ್ಲಿ ಚುನಾವಣಾ ಅಧಿಕಾರಿಗಳ ಮೇಲೆ ಪ್ರಾಂತೀಯ ರಾಜಕೀಯ ಒತ್ತಡ ಹೆಚ್ಚಿದ್ದು ಗೊತ್ತಿದ್ದರೂ ಕೂಡ ಚುನಾವಣಾ ಆಯೋಗ ಕ್ರಮಕೈಗೊಳ್ಳಲಿಲ್ಲ ಎಂದು ಆ ಪಕ್ಷ ದೂರುತ್ತದೆ. ಇದನ್ನು ಪುಷ್ಟೀಕರಿಸಲು ಪುಣೆಯ ಮತದಾರರ ಪಟ್ಟಿಯಲ್ಲಿ ಮಧ್ಯಮ ವರ್ಗದ ಜನರ ಹೆಸರು ಕಾಣೆಯಾಗಿರುವುದನ್ನು ಸಬೂತಾಗಿ ನೀಡಲಾಗುತ್ತಿದೆ. ಇಂಥದ್ದೇ ಪರಿಸ್ಥಿತಿ ಉತ್ತರ ಪ್ರದೇಶದ ಪೂರ್ವ ಭಾಗದ ಹಲವು ಜಿಲ್ಲೆಗಳು ಮತ್ತು ಕ್ಷೇತ್ರಗಳಲ್ಲಿಯೂ ಉದ್ಭವವಾಗಿತ್ತು. ಒಂದೇ ಕುಟುಂಬದ, ಒಂದೇ ಮನೆಯಲ್ಲಿ ವಾಸಿಸುವವರಿಗೆ ಪರಸ್ಪರ ದೂರ ದೂರದ ಮತಗಟ್ಟೆಗಳಲ್ಲಿ ಮತದಾನ ಗೊತ್ತುಪಡಿಸಲಾಗಿದ್ದು ತಿಳಿದುಬಂದಿದೆ.
ಈ ಬಗ್ಗೆ ಉತ್ತರ ಪ್ರದೇಶ ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾತನಾಡುತ್ತಾ, "ಅಂಥ ಒಂದು ಘಟನೆಯಂತೂ ನನಗೆ ತಿಳಿದಿಬಂದಿದೆ. ತಂದೆ ಮತ್ತು ಮಕ್ಕಳಿಗೆ ಮೂರು ಪ್ರತ್ಯೇಕ ಬೂತ್ಗಳಲ್ಲಿ ಮತದಾನ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಆ ಬೂತ್ಗಳೋ ಪರಸ್ಪರ ಬಹಳ ದೂರದಲ್ಲಿವೆ. ಸನಿಹದ ಮತಗಟ್ಟೆಗೆ ಹೋಗಿ ಮತದಾನ ಮಾಡಲು ಅವರಿಗೇಕೆ ಅವಕಾಶ ಮಾಡಿಕೊಡಲಿಲ್ಲ?"ಎಂದು ಪ್ರಶ್ನಿಸುತ್ತಾರೆ. ಈ ಪ್ರಮಾದವನ್ನು ಸರಿಪಡಿಸಲು ಬಿಜೆಪಿಯ ಕಾರ್ಯಕರ್ತರು ಹೊಸ ಮತಗಟ್ಟೆಗಳನ್ನು ಒದಗಿಸಬೇಕೆಂದು ಕೋರಿ ಮತದಾರರಿಂದ ಅರ್ಜಿಗೆ ಸಹಿ ಮಾಡಿಸಿ ಆಯೋಗಕ್ಕೆ ಸಲ್ಲಿಸಿದರಾದರೂ ಸಮಸ್ಯೆಯಂತೂ ಬಗೆಹರಿಯಲಿಲ್ಲ. ತಮ್ಮ ಮತದಾರರಿಗೆ ತೊಂದರೆ ಕೊಟ್ಟು ಲಕ್ನೋದಲ್ಲಿ ರಾಜ್ಯಭಾರ ನಡೆಸುವ ಸಮಾಜವಾದಿ ಪಕ್ಷಕ್ಕೆ ಸಹಾಯ ಮಾಡಬೇಕೆಂದು ಈ ತಂತ್ರವನ್ನು ಹೆಣೆಯಲಾಯಿತು ಎಂದು ಬಿಜೆಪಿ ದೂರುತ್ತಿದೆ. ಇದರಲ್ಲಿ ಎಷ್ಟು ಸತ್ಯವಿದೆಯೋ ತಿಳಿಯದು. ಆದರೆ ಚುನಾವಣಾ ಆಯೋಗ ತನ್ನ ಓಟದಲ್ಲಿ ಎಲ್ಲೋ ಮುಗ್ಗರಿಸಿರುವುದಂತೂ ನಿಜ.  
ಕೇಂದ್ರ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಮತಗಟ್ಟೆಯನ್ನು ವಶಪಡಿಸಿಕೊಂಡ ವಿಚಾರವೂ ಸುದ್ದಿಯಾಯಿತು. ಇದರಿಂದಾಗಿ ತನ್ನ ಕೆಲವು ಸೀಟುಗಳು ಸಮಾಜವಾದಿ ಪಕ್ಷಕ್ಕೆ ಹರಿದು ಹೋದವು(ಅದರಲ್ಲೂ ಮುಖ್ಯವಾಗಿ ಏಪ್ರಿಲ್ 24ರಂದು) ಎಂದು ಬಿಜೆಪಿ ಪೇಚಾಡುತ್ತಿದೆ. ಈ ಕಾರಣಕ್ಕಾಗೇ ಉಳಿದ ಹಂತದ ಮತದಾನದ ದಿನಗಳಂದು ಮತಗಟ್ಟೆಯ ಸುತ್ತ ಪ್ಯಾರಾಮಿಲಿಟರಿ ಭದ್ರತೆ ಒದಗಿಸಬೇಕು ಎಂಬ ಒತ್ತಡ ಚುನಾವಣಾ ಆಯೋಗದ ಹೆಗಲೇರಿತು.
ಇನ್ನು ಪಶ್ಚಿಮ ಬಂಗಾಳದ ಕೆಲ ಭಾಗಗಳಲ್ಲೂ ಬೂತ್ ಮಟ್ಟದ ಸಮಗ್ರತೆಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಸುದ್ದಿಯಾಯಿತು. ಆದರೆ ಸತ್ಯವೇನೆಂದರೆ, ಇಂಥ ಘಟನೆಗಳಿಂದಾಗಿ ರಾಜ್ಯದ ಒಟ್ಟಾರೆ ಫಲಿತಾಂಶಕ್ಕೇನೂ ಹೊಡೆತ ಬೀಳುವುದಿಲ್ಲ. ಏಕೆಂದರೆ ತೃಣಮೂಲ ಕಾಂಗ್ರೆಸ್ ಉಳಿದ ಪಕ್ಷಗಳಿಗಿಂತ ಬಹಳ ಮುಂದಿದೆ ಎನ್ನುವುದು ಗೊತ್ತಿರುವಂಥದ್ದೆ. ಅದಾಗ್ಯೂ 2009ರ ಲೋಕಸಭಾ ಚುನಾವಣೆ ಮತ್ತು 2011ರ ವಿಧಾನಸಭಾ ಚುನಾವಣೆಯ ಬಿಗಿ ಭದ್ರತೆಯಲ್ಲಿ ಕಾಣೆಯಾಗಿದ್ದ ಬೂತ್ ಕ್ಯಾಪ್ಚುರಿಂಗ್ ಈಗ ಪಶ್ಚಿಮ ಬಂಗಾಳದಲ್ಲಿ ಮತ್ತೆ ತಲೆಯೆತ್ತಿದೆ.  
ಅಂಕಿ ಅಂಶಗಳನ್ನು ಅವಲೋಕಿಸಿದರೆ ವಾಸ್ತವದ ಅರಿವಾಗುತ್ತದೆ. ಮೇ7ರಂದು ಪಶ್ಚಿಮ ಬಂಗಾಳ, ಬಿಹಾರ ಮತ್ತು ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಮತದಾನ ನಡೆಯಿತು. 11 ಗಂಟೆಯೊಳಗೆ ಸುಮಾರು 22.36 ಪ್ರತಿಶತ ಮತದಾರರು ಬಿಹಾರದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು. ಇದಕ್ಕೆ ಹೋಲಿಸಿದರೆ ಆ ವೇಳೆಗಾಗಲೇ ಪಶ್ಚಿಮ ಬಂಗಾಳದಲ್ಲಿ ಮತದಾನ ಪ್ರಮಾಣ 45 ಪ್ರತಿಶತದಷ್ಟಿತ್ತು.
ಪಶ್ಚಿಮ ಬಂಗಾಳದ ಮತದಾರರು ಹೆಚ್ಚು ಉತ್ಸಾಹ ಹೊಂದಿದ್ದಾರೆ ಎನ್ನುವುದು ಇದಕ್ಕೆ ಕಾರಣವೇ? ಅಥವಾ ನಿರ್ವಚನ ಸದನದಲ್ಲಿ( ಚುನಾವಣಾ ಆಯೋಗದ ಕಚೇರಿ) ಯಾರೋ ನಿದ್ದೆಹೊಡೆಯುತ್ತಿದ್ದರು ಎನ್ನುವುದು ಇದಕ್ಕೆ ಕಾರಣವೇ? ಕೇವಲ ಬಿಜೆಪಿಯಷ್ಟೇ ಅಲ್ಲ, ಅನೇಕ ರಾಜಕೀಯ ಪಕ್ಷಗಳೂ ಈ ಪ್ರಶ್ನೆ ಕೇಳುತ್ತಿವೆ.

- ಅಶೋಕ್ ಮಲಿಕ್ 
ಹಿರಿಯ ಅಂಕಣಕಾರರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement