ಗಂಗೆಯ ತಟದಲ್ಲಿ ರಾಜಕೀಯ ಮಹಾ ಮಂಥನ
ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದಂತೆಯೇ ಅವರ...
ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದಂತೆಯೇ ಅವರ ಮೊದಲ ಕೆಲಸ ತಮ್ಮ ವಿಶ್ವಾಸಿ ಅಧಿಕಾರಿ ಕೈಲಾಶನಾಥನ್ ಅವರ ನೇತ್ರತ್ವದ ತಂಡವನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿದ್ದಾಗಿತ್ತು. ಮೋದಿ ಉತ್ತರ ಪ್ರದೇಶದಲ್ಲಿ ಎಲ್ಲಿಂದ ಸ್ಪರ್ಧಿಸಬೇಕು ಎಂಬ ಪ್ರಶ್ನೆಗೆ ಸಮೀಕ್ಷೆ ನಡೆಸಿದ ಈ ತಂಡ ಉತ್ತರ ಮಥುರಾ, ಲಕ್ನೌ ಮತ್ತು ವಾರಾಣಸಿ ಎಂಬ ಉತ್ತರ ನೀಡಿತು. ಕೊನೆಗೆ ಟೀಂ ಮೋದಿ ಅಂತಿಮವಾಗಿ ಆಯ್ದುಕೊಂಡಿದ್ದು ಕಾಶಿಯನ್ನು. ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು 1991 ರಿಂದ ಒಮ್ಮೆ ಹೊರತುಪಡಿಸಿ ವಾರಾಣಸಿ ಬಿಜೆಪಿಯ ಶಕ್ತಿ ಕೇಂದ್ರ, ಎರಡನೆಯದು ಹಿಂದುತ್ವದ ಕೇಂದ್ರ, ಮೂರನೆಯದು ಪೂರ್ವಾಂಚಲದ ಸುಮಾರು 50ಕ್ಕೂ ಹೆಚ್ಚು ಕ್ಷೇತ್ರಗಳ ಮೇಲೆ ಬೀರಬಹುದಾದ ಪ್ರಭಾವ.
ಸಾವಿರಾರು ವರ್ಷಗಳವರೆಗೆ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಸಂಗೀತದ ಮೇಲೆ ಪ್ರಭುತ್ವ ಸಾಧಿಸಿದ ಕಾಶಿ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಕಳೆಗುಂದಿತ್ತು. ಈಗ ಮೋದಿ ಸ್ಪರ್ಧೆಯ ಕಾರಣದಿಂದ ಸಿಗುತ್ತಿರುವ ಏಕಾಏಕಿ ಮಹತ್ವ ಇಲ್ಲಿನ ಜನಕ್ಕೆ ವನವಾಸದ ಅಂತ್ಯದಂತೆ ಕಾಣುತ್ತಿದೆ.
ಮೇಲ್ನೋಟಕ್ಕೆ ವಾರಾಣಸಿಯಲ್ಲಿ ನರೇಂದ್ರ ಮೋದಿ ಗೆಲ್ಲುತ್ತಾರೆ ಎಂದು ಅನ್ನಿಸುತ್ತದೆ. ಪ್ರಮುಖ ಸ್ಪರ್ಧೆ ಇರುವುದು ಎರಡನೇ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಆಮ್ ಅದ್ಮಿ ಪಕ್ಷದ ನಡುವೆ. ಏಪ್ರಿಲ್ 23 ರಂದು ಕೇಜ್ರಿವಾಲ್ ನಾಮಪತ್ರ ಸಲ್ಲಿಸಿದಾಗ ಆಮ್ ಅದ್ಮಿ ಪಕ್ಷ ಠೇವಣಿ ಕಳೆದುಕೊಳ್ಳುತ್ತದೆ ಎಂದು ಇಲ್ಲಿನ ಜನ ಲೇವಡಿ ಮಾಡುತ್ತಿದ್ದರು, ಆದರೆ ಪ್ರಚಾರದ ಕೊನೆಯ ದಿನ ಹತ್ತಿರವಾದ ಹಾಗೆ ಕೇಜ್ರಿವಾಲ್ ಇಲ್ಲಿ ಸಾಕಷ್ಟು ಶ್ರಮ ಪಟ್ಟ ಹಾಗೆ ಕಾಣುತ್ತಿದೆ.
ವಾರಾಣಸಿ ತಲುಪಿದ ತಕ್ಷಣ ನರೇಂದ್ರ ಮೋದಿಯವರ ಬೃಹತ್ ಪೋಸ್ಟರ್ಗಳು ನಮ್ಮನ್ನು ಸ್ವಾಗತಿಸುತ್ತವೆ. ಇವುಗಳಿಗೆ ಉತ್ತರ ನೀಡಲು ಕಾಂಗ್ರೆಸ್ನ ಅಜಯ್ ರಾಯ್ ಕೂಡ ಗಂಗೆಗೆ ನಮನ ಸಲ್ಲಿಸುವ ತಮ್ಮ ಪೋಸ್ಟರ್ಗಳನ್ನು ಅಂಟಿಸಿದರೆ, ಕಾಶಿಯ ಬಹುತೇಕ ಬೀದಿಗಳಲ್ಲಿ, ಚೌಕ್ಗಳಲ್ಲಿ ಆಪ್ನ ಕಸಬರಿಗೆ ಹಿಡಿದ ಕಾರ್ಯಕರ್ತರು ಕಾಣ ಸಿಗುತ್ತಾರೆ. ಬಹುತೇಕ ಎಲ್ಲ ರಸ್ತೆಗಳ ಇಕ್ಕೆಲಗಳಲ್ಲೂ ಕಾಣಿಸುವ ಕೇಸರಿ ಮತ್ತು ಬಿಳಿ ಟೋಪಿ ಧಾರಿಗಳಲ್ಲಿ ಒಂದು ಗುಂಪು ಮೋದಿ ಜಿಂದಾಬಾದ್ ಎಂದು ಘೋಷಣೆ ಹಾಕಿದ ತಕ್ಷಣ ಇನ್ನೊಂದು ಗುಂಪು 'ಝಾಡು ಚಲಾವೋ' ಎಂದು ಕೂಗುತ್ತದೆ. ಇಡೀ ಬನಾರಸ್ನ ಬೀದಿ ಬೀದಿಗಳು ಈ ರಾಜಕೀಯ ಮಂಥನದ ಬಣ್ಣ ಹಾಕಿಕೊಂಡು ನಿಂತಿವೆ. ಮುಸ್ಲಿಮರು ಹೆಚ್ಚು ವಾಸಿಸುವ ಪೀಲಿ ಕೋಠಿಯಿಂದ ಬನಾರಸ್ ಹಿಂದೂ ವಿ.ವಿ.ಯ ಲಂಕಾ ಚೌಕ್ವರೆಗೆ ನಡೆದುಕೊಂಡು ಬಂದರೆ ರಾಜಕೀಯದ ಭಾಂಗ್ ಹೇಗೆ ಇಲ್ಲಿನ ಜನರನ್ನು ಆವರಿಸಿಕೊಂಡಿದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು.
ಪಂಡಿತ ಮದನ ಮೋಹನ್ ಮಾಳವೀಯರು ಸ್ಥಾಪಿಸಿದ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಒಂದು ಕಾಲದಲ್ಲಿ ದೇಶಕ್ಕೆ ಶಿಕ್ಷಣ ಹಾಗೂ ಚಳವಳಿಯ ಕೇಂದ್ರವಾಗಿತ್ತು. ಆದರೆ ಐ.ಟಿ., ಬಿ.ಟಿ.ಗಳು ಬೆಳೆದಂತೆಲ್ಲ ಅದು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ದೇಶದ ಬಹುತೇಕ ವಿಶ್ವವಿದ್ಯಾಲಯಗಳು ಎಡ ಪಕ್ಷಗಳ ಕೋಟೆಗಳಾಗಿದ್ದರೆ ಬಿಎಚ್ಯು ಮಾತ್ರ ಆರ್ಎಸ್ಎಸ್ನ ಶಕ್ತಿ ಕೇಂದ್ರ. ಇಲ್ಲಿನ ವಿದ್ಯಾರ್ಥಿಗಳು ಹೆಚ್ಚು 'ಮೋದಿ ಮೋದಿ' ಎನ್ನುವುದು ಕಂಡುಬರುತ್ತದೆ. ನಾನು ಹೋಗಿದ್ದ ಮೇ 9ರ ಸಂಜೆ ಆಪ್ನ ಗುಲ್ಪನಾಗ್ ಇಲ್ಲಿನ ಕ್ಯಾಂಪಸ್ ಪ್ರವೇಶಿಸಲು ವಿದ್ಯಾರ್ಥಿಗಳು ವಿರೋಧ ಸೂಚಿಸುತ್ತಿದ್ದರು. ಒಂದಷ್ಟು ಘರ್ಷಣೆಯ ಸ್ಥಿತಿ ಕೂಡ ಉದ್ಭವಾಗಿತ್ತು.
ಚುನಾವಣೆಗಳು ಬಂತೆಂದರೆ ಸಾಕು ಎಲ್ಲ ಪಕ್ಷಗಳು ಗಂಗೆಯ ಶುದ್ಧೀಕರಣದ ಬಗ್ಗೆ ಮಾತನಾಡುತ್ತವೆ. ಆದರೆ ನಂತರ ಯಥಾ ಪ್ರಕಾರ ನಾಪತ್ತೆ. ಸಾಂಸ್ಕೃತಿಕ ರಾಷ್ಟ್ರವಾದದ ಬಗ್ಗೆ ದಿನಗಟ್ಟಲೆ ಭಾಷಣ ಮಾಡುತ್ತಿದ್ದ ಇಲ್ಲಿನ ಸಂಸದ ಮುರಳಿ ಮನೋಹರ ಜೋಷಿ ಅವರಿಗೆ ಗಂಗೆಯನ್ನು ಶುದ್ಧ ಮಾಡುವುದು ಅಜೆಂಡಾ ಆಗಿರಲೇ ಇಲ್ಲ ಎಂದು ಇಲ್ಲಿನ ಜನ ಹೇಳುತ್ತಾರೆ. ಮಹಂತರೊಬ್ಬರು ಹೇಳುವ ಪ್ರಕಾರ ಕಾಶಿಯ ಸಮಸ್ಯೆ ಮೂರು- ರಿವರ್, ಸಿವರ್ ಮತ್ತು ಫಿವರ್. ಅಂದರೆ ನದಿ, ಕೊಳಚೆ ನೀರು ಮತ್ತು ಅದರಿಂದ ಬರುವ ಜ್ವರ. ನರೇಂದ್ರ ಮೋದಿ ಗುಜರಾತ್ನಲ್ಲಿ ಸಾಬರಮತಿಯನ್ನು ಶುದ್ಧ ಮಾಡಿದ ಹಾಗೆ ಗಂಗೆಯನ್ನು ಶುದ್ಧಗೊಳಿಸಿದರೆ ಸಾಕು ಎನ್ನುತ್ತಾರೆ.
ವಾರಾಣಸಿಯ ರಾಜಕೀಯಕ್ಕೂ ಒಂದು ವಿಶಿಷ್ಟ್ಯ ಇತಿಹಾಸವಿದೆ. ಇಲ್ಲಿ ಚುನಾವಣೆಗೆ ನಿಲ್ಲುತ್ತಿದ್ದ ಸಿಪಿಐನ ರುಸ್ತುಂ ಸಾಟಿನ್ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ನ ಸಂಪೂರ್ಣಾನಂದ್ ಅವರ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸುತ್ತಿದ್ದರಂತೆ. ಅಷ್ಟೇ ಅಲ್ಲ ಇಲ್ಲಿನ ವರ್ಣರಂಜಿತ ಸಮಾಜವಾದಿ ರಾಜನಾರಾಯಣ ಚುನಾವಣೆಯಲ್ಲಿ ದುಡ್ಡು ಕಡಿಮೆ ಬಿದ್ದಾಗ ತಮ್ಮ ಪ್ರತಿಸ್ಪರ್ಧಿ, ಕಾಂಗ್ರೆಸ್ ಅಭ್ಯರ್ಥಿ ಕಮಲಾಪತಿ ತ್ರಿಪಾಠಿ ಅವರಿಂದ ಹಣ ಎರವಲು ಪಡೆಯುತ್ತಿದ್ದರಂತೆ.
ವಾರಾಣಸಿಯಲ್ಲಿ ಬ್ರಾಹ್ಮಣ, ಬನಿಯಾ, ಠಾಕೂರ್, ಕುರ್ಮಿ, ಕೊಯಿರಿ, ಚೌರಾಸಿಯಾ, ದಲಿತ, ಯಾದವ್ ಹಾಗೂ ಮುಸ್ಲಿಂ ಮತಗಳು ನಿರ್ಣಾಯಕ. ಆದರೆ ಕಾಶಿಯ ಬ್ರಾಹ್ಮಣರು ಮತ್ತು ಮುಸ್ಲಿಂ ಮತಗಳು ಇಲ್ಲಿನ ರಾಜಕೀಯ ಗಾಳಿಯ ದಿಕ್ಕನ್ನು ನಿರ್ಧರಿಸುವ ಮುಖ್ಯ ಧ್ರುವಗಳು. ಈಗಿನ ಪ್ರಕಾರ ಹೆಚ್ಚಿನ ಬ್ರಾಹ್ಮಣರು ಮೋದಿ ಪರವಾಗಿದ್ದರೆ 90 ಪ್ರತಿಶತ ಮುಸ್ಲಿಮರು ಕಾಂಗ್ರೆಸ್ಗೆ ಕೈ ಕೊಟ್ಟು ಕೇಜ್ರೀವಾಲ್ ಪರ ವಾಲುತ್ತಿದ್ದಾರೆ. ಠಾಕೂರ್, ಬನಿಯಾ, ಕುರ್ಮಿ, ಕೊಯರಿಗಳಲ್ಲಿ ಮೋದಿ ಹೆಚ್ಚು ಪ್ರಚಲಿತವಿದ್ದರೆ ದಲಿತರು ಮತ್ತು ಯಾದವರು ಕೊನೆಯ ಕ್ಷಣದಲ್ಲಿ ಬಿಜೆಪಿಯನ್ನು ಸೋಲಿಸಲು ಕೇಜ್ರಿವಾಲ್ರತ್ತ ಬರಬಹುದು ಎನ್ನುವುದು ಆಪ್ನ ಲೆಕ್ಕಾಚಾರ. ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಅವರ ಭೂಮಿಹಾರ ಬ್ರಾಹ್ಮಣರು ಬಿಜೆಪಿಯತ್ತ ವಾಲುತ್ತಿದ್ದು ಚಿತ್ರ ವಿಚಿತ್ರ ಸಮೀಕರಣಗಳು ರಾತ್ರಿಯಿಂದ ಬೆಳಿಗ್ಗೆಗೆ ಬದಲಾಗುತ್ತಿವೆ. ಗೋರಖಪುರದ ಮುಕ್ತಾರ್ ಅನ್ಸಾರಿ ಎಂಬ ಡಾನ್ಗೆ ವಾರಾಣಸಿಯ ಮುಸ್ಲಿಮರಲ್ಲಿ ಪ್ರಭಾವವಿದೆ. ಮುಕ್ತಾರ್ ಮೋದಿಯನ್ನು ತಡೆಯಲು ಬಹಿರಂಗವಾಗಿ ಕಾಂಗ್ರೆಸ್ನ ಅಜಯ್ ರಾಯ್ ಅವರಿಗೆ ಬೆಂಬಲ ನೀಡಿದ್ದಾರೆ. ಆದರೆ ಮುಸ್ಲಿಮರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ವಿಶ್ವಾಸ ಕಡಿಮೆ ಇದ್ದು ನರೇಂದ್ರ ಮೋದಿ ವಿರುದ್ಧ ಜಬರದಸ್ತ್ ಭಾಷಣ ಬಿಗಿಯುವ ಅರವಿಂದ್ ಕೇಜ್ರೀವಾಲ್ ಅವರಿಗೆಲ್ಲ ಹತ್ತಿರದವರಾಗಿ ಕಾಣಿಸುತ್ತಿದ್ದಾರೆ.
ವಿಶ್ವ ಪ್ರಸಿದ್ಧ ಬನಾರಸಿ ಸೀರೆ ತಯಾರಿಸುವ ಪೀಲಿ ಕೋಠಿಯಲ್ಲಿ ಒಂದು ಕಾಲಕ್ಕೆ 2 ಲಕ್ಷ ಕೈ ಮಗ್ಗಗಳಿದ್ದವು. ಆದರೆ ಈಗ ಪವರ್ ಲೂಂ ಬಂದ ಮೇಲೆ ಕೇವಲ 30 ಸಾವಿರ ಕೈಮಗ್ಗಗಳು ಉಳಿದುಕೊಂಡಿವೆ. ಇಲ್ಲಿ ಕಾರ್ಮಿಕ ಯಾಸಿನ್ "ಮೂರು ದಿನಕ್ಕೆ ಮುನ್ನೂರು ರುಪಾಯಿ ಮಜ್ದೂರಿ ಸಿಗುತ್ತದೆ. ಆದರೆ ಈಗ ಚುನಾವಣೆ ಪ್ರಚಾರಕ್ಕೆ ದಿನಕ್ಕೆ 500 ರುಪಾಯಿ ಕೊಡುತ್ತಿದ್ದು ತುಂಬಾ ಜನ ಅಲ್ಲಿಗೆ ಹೋಗಿದ್ದಾರೆ. ಕೈ ತುಂಬಾ ಹಣ ಮತ್ತು ಬಿರಿಯಾನಿ ಕೊಡುತ್ತಾರೆ" ಎನ್ನುತ್ತಿದ್ದ. ಕೈ ಮಗ್ಗದ ಮಾಲೀಕ ಶೇರ್ ಅಲಿ ಅನ್ನು ಮಾತನಾಡಿಸಿದಾಗ, "ಇಸ್ ಬಾರ್ ತೋ ಝಾಡು ಚಲೇಗಾ ಸಾಹಬ್. ಮೋದಿ ಕೋ ವೋಹಿ ಟಕ್ಕರ್ ದೇ ಸಕತಾ ಹೈ" ಎನ್ನುತ್ತಿದ್ದ.
ದೇಶದಲ್ಲೆಡೆ ಮುಸ್ಲಿಮರು ಮೋದಿ ವಿರುದ್ಧ ನಿಲ್ಲುವ ಅಭ್ಯರ್ಥಿಗೆ ಮತ ಹಾಕುತ್ತಿರುವಾಗ ವಾರಾಣಸಿಯ ದೊಶಿಪುರಾದ ಶಿಯಾ ಮುಸ್ಲಿಮರು ಮಾತ್ರ ಮೋದಿ ಪರ ಪ್ರಚಾರ ನಡೆಸಿದ್ದಾರೆ. ಪವರ್ ಲೂಂ ಇಟ್ಟುಕೊಂಡಿರುವ ಇವರಿಗೆ ಮೋದಿ 24 ಗಂಟೆ ವಿದ್ಯುತ್ ಕೊಡಬಹುದು ಎಂಬ ನಿರೀಕ್ಷೆಯಿದೆ.
ವಾರಾಣಸಿಯ ಲೋಕಸಭಾ ಕ್ಷೇತ್ರದಲ್ಲಿ ಎರಡು ಗ್ರಾಮೀಣ ಕ್ಷೇತ್ರಗಳು ಕೂಡ ಇವೆ. ರೊಹನಿಯಾ ಮತ್ತು ಸೆವಾಪೂರಿ. ರೊಹನಿಯಾದ ವಿಷ್ಣುಪುರಿ ಎಂಬ ಹಳ್ಳಿಗೆ ಹೋದಾಗ ಸಿಕ್ಕಿದ್ದ ಊರಿಂದ ಊರಿಗೆ ಉಪ್ಪು ಮಾರಾಟ ಮಾಡುವ ಬಗ್ಲು ಇಲ್ಲಿ ಮೋದಿ ಬಗ್ಗೆ ಜನಕ್ಕೆ ನಿರೀಕ್ಷೆಯಿದೆ ಎಂದು ಹೇಳುತ್ತಿದ್ದ.
ನಗರ ಭಾಗದಲ್ಲಿ ಮೋದಿ ಮತ್ತು ಕೇಜ್ರಿವಾಲ್ ನಡುವೆ ಪೈಪೋಟಿಯಿದ್ದರೆ ಗ್ರಾಮೀಣ ಭಾಗದಲ್ಲಿ ಮೋದಿ ಮತ್ತು ಕಾಂಗ್ರೆಸ್ ಅನ್ನುವುದಕ್ಕಿಂತ ಅಜಯ್ ರಾಯ್ ಬಗ್ಗೆ ಒಲವಿದೆ. ಆದರೆ ನಾನು ಮಾತನಾಡಿಸಿದ ಬೇರೆ ಬೇರೆ ಸಣ್ಣ ಜಾತಿಯ ಯುವಕರು ಮೋದಿ ಪರವಾಗೇ ಮಾತನಾಡುತ್ತಿದ್ದರು. ಒಂದಂತೂ ಸತ್ಯ, ಉತ್ತರ ಪ್ರದೇಶದ ಎರಡು ಪ್ರಬಲ ನಾಯಕರಾದ ಮುಲಾಯಂ ಮತ್ತು ಮಾಯಾವತಿ ಅವರ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿಯಲ್ಲಿವೆ. ಆದರೆ ಈ ನಾಯಕರಿಗೆ ತಮ್ಮ ಯಾದವ್ ಮತ್ತು ದಲಿತ ಜಾಟವ ಮತಗಳನ್ನು ವರ್ಗಾಯಿಸುವ ಶಕ್ತಿಯಿದ್ದು ಇವು ಎಲ್ಲಿ ಹೋಗುತ್ತವೆ ಎನ್ನುವುದು ಮುಖ್ಯ. ಹಿಂದುತ್ವದ ಧ್ರುವೀಕರಣವಾಗಿ ಇವರೆಲ್ಲ ಮೋದಿಗೆ ಮತ ನೀಡುತ್ತಾರೆ ಎನ್ನುವುದು ಬಿಜೆಪಿ ಲೆಕ್ಕಾಚಾರ. ಆದರೆ ಇವರು ಕೂಡ ಕೇಜ್ರಿವಾಲ್ ಪರ ವಾಲಿದರೆ ಮುಸ್ಲಿಮರ ಹೆಚ್ಚು ಮತ ಪಡೆಯುವ ಆಮ್ ಅದ್ಮಿ ಮೋದಿಗೆ ಪ್ರಬಲ ಪೈಪೋಟಿ ಒಡ್ಡಬಹುದು. ಮುಸ್ಲಿಮರು ವಾಸಿಸುವ ಬೇನಿಯಾ ಬಾಗ್ನಲ್ಲಿ ಚುನಾವಣಾ ಆಯೋಗ ಸಭೆ ನಡೆಸಲು ಅನುಮತಿ ನೀಡದೇ ಇದ್ದಾಗ ನರೇಂದ್ರ ಮೋದಿ ಕಾಶಿಯಲ್ಲಿ ರೋಡ್ ಶೋ ನಡೆಸಿದ್ದು ಕೂಡ ಹಿಂದುತ್ವದ ಪ್ರಭಾವ ಬೀರಿ ಧ್ರುವಿಕರಣ ಮಾಡುವ ಸಂಕೇತ ಎಂದು ನೋಡಲಾಗುತ್ತಿದೆ .
ಉತ್ತರ ಪ್ರದೇಶದ ಅಲಹಾಬಾದ್, ಫೂಲ್ಪುರ, ರಾಯಬರೇಲಿ, ಅಮೇಠಿ ಕ್ಷೇತ್ರಗಳು ದೇಶಕ್ಕೆ ಪ್ರಧಾನಿಗಳನ್ನು ಕೊಟ್ಟಿರುವಾಗ ವಾರಾಣಸಿ ಕೂಡ ಪ್ರಧಾನಿಯ ಕ್ಷೇತ್ರ ಯಾಕಾಗಬಾರದು ಎಂದು ಇಲ್ಲಿನ ಮತದಾರರ ಮನಸ್ಸಲ್ಲಿ ತುಂಬಾ ಇದ್ದಂತಿದೆ.
-ಪ್ರಶಾಂತ್ ನಾತು
ಸುವರ್ಣ ನ್ಯೂಸ್
prashant.natu@gmail.com