ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬರಿ ಮಾತಿನಲ್ಲಿ ಮಹಲು ಕಟ್ಟುವ ಕಿಮ್ಮನೆ, ಕೆಲಸದಲ್ಲೇಕೆ ಸುಮ್ಮನೆ?

ಬರಿ ಮಾತಿನಲ್ಲಿ ಮಹಲು ಕಟ್ಟುವ ಕಿಮ್ಮನೆ, ಕೆಲಸದಲ್ಲೇಕೆ ಸುಮ್ಮನೆ?

Rashmi Kasaragodu
Updated On : 13 May 2014, 11:21 am

ಇವರು ಬಹಳ ಪ್ರಾಮಾಣಿಕರು. ಶಾಸಕರಾಗಿದ್ದಾಗಲೂ ಯಾವುದೇ ಭ್ರಷ್ಟಾಚಾರದ ಆರೋಪ ಬರಲಿಲ್ಲ. ಸುಮಾರು 16 ಸಾವಿರ ಕೋಟಿ ಬಜೆಟ್ ಇರುವ ಇಲಾಖೆ ನಿರ್ವಹಿಸಿದರೂ ಕಳೆದ ಒಂದು ವರ್ಷದಲ್ಲಿ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲ. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿನ ಅತಿ ಪ್ರಾಮಾಣಿಕ ಸಚಿವ ಎಂಬ ಹೆಗ್ಗಳಿಕೆ. ಸಾಹಿತ್ಯದ ಮೂಲಕ ಸಿದ್ಧಾಂತ ಹಾಗೂ ಸಮಾಜದ ನಾನಾ ಮಜಲುಗಳ ಬಗ್ಗೆ ಸಾಕಷ್ಟು ಓದಿಕೊಂಡ ಬುದ್ದಿಜೀವಿ. ಆದರೆ ಇಲಾಖೆಯ ವಿಚಾರಗಳನ್ನು ಕೇಳಿದರೆ ಮಾತ್ರ ನಾನಿನ್ನೂ ಅಧಿಕಾರಕ್ಕೆ ಬಂದು 11 ತಿಂಗಳಾಯಿತು ಎಂಬ ಮತ್ತಷ್ಟು ಬುದ್ಧಿವಂತಿಕೆಯ ಮಾತನ್ನಾಡುತ್ತಾರೆ.
ಇಷ್ಟೆಲ್ಲ ಹೇಳಹೊರಟಿರುವುದು ನಮ್ಮ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತಿರುವ, ಒಂದು ಕೋಟಿಗೂ ಅಧಿಕ ಮಕ್ಕಳ ಶೈಕ್ಷಣಿಕ ಏಳ್ಗೆಯ ಜವಾಬ್ದಾರಿ ಹೊತ್ತಿರುವ ಕಿಮ್ಮನೆ ರತ್ನಾಕರ ಅವರ ಬಗ್ಗೆ. ಇಬ್ಬರು ಪ್ರಾಮಾಣಿಕರ ನಡುವೆ ನಡೆದ ವಿಧಾನಸಭಾ ಕದನದಲ್ಲಿ ಆರಿಸಿ ಬಂದು ಸಚಿವರಾದಂತಹ ಒಬ್ಬ ಸುಶಿಕ್ಷಿತ ಮನುಷ್ಯ ಇವರು. ರಾಜ್ಯದ ಅತಿ ಭ್ರಷ್ಟ ಇಲಾಖೆಯ ಜವಾಬ್ದಾರಿಯು ಒಬ್ಬ ಪ್ರಾಮಾಣಿಕ ಸಚಿವರ ಕೈಗೆ ಸಿಕ್ಕಾಗ ಜನರಿಗೂ ಅದೇ ರೀತಿಯ ನಿರೀಕ್ಷೆ ಇರುತ್ತದೆ. ಆದರೆ ಕಿಮ್ಮನೆ ಏಕೋ ಎಲ್ಲ ವಿಚಾರಗಳಲ್ಲಿಯೂ ಸುಮ್ಮನಾಗಿದ್ದಾರೆ.
ಸುಮಾರು ಆರು ತಿಂಗಳ ಹಿಂದಿನ ಮಾತು. ಶಿವಮೊಗ್ಗದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, 'ಇದು ನನ್ನ ಕೊನೆಯ ಚುನಾವಣೆ, ನನ್ನಂತಹ ಪ್ರಾಮಾಣಿಕರಿಗೆ ಇಲ್ಲಿ ರಾಜಕೀಯ ನಡೆಸುವುದು ಕಷ್ಟ' ಎಂಬ ಮಾತುಗಳನ್ನಾಡಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆಗ ಕಿಮ್ಮನೆ ಮೇಲೆ ಮತ್ತಷ್ಟು ನಿರೀಕ್ಷೆಗಳು ಹುಟ್ಟಿಕೊಂಡವು. ರಾಜಕೀಯ ನಿವೃತ್ತಿ ತೆಗೆದುಕೊಳ್ಳುವವರಿಗೆ ಅಥವಾ ಇದೇ ಕೊನೆಯ ಚುನಾವಣೆ ಎಂದವರಿಗೆ ಯಾವುದೇ ಹುದ್ದೆ ಅಥವಾ ರಾಜಕೀಯ ಫಲಾಪೇಕ್ಷೆಗಳಿರುವುದಿಲ್ಲ. ಆದ್ದರಿಂದ ಇಲಾಖೆಯಲ್ಲಿನ ಎಲ್ಲ ಹೆಗ್ಗಣಗಳನ್ನು ಮುಲಾಜಿಲ್ಲದೇ ಓಡಿಸುತ್ತಾರೆ, ಶೈಕ್ಷಣಿಕವಾಗಿಯೂ ಉತ್ತಮ ಸ್ಕಾಲರ್ ಎನಿಸಿಕೊಂಡವರು ಹೊಸ ಬದಲಾವಣೆಗೆ ಕಾರಣರಾಗುತ್ತಾರೆ ಎಂದೆಲ್ಲ ಕನಸುಗಳು ಬೀಳಲು ಆರಂಭವಾದವು.
ಆದರೆ ಮೊದಲ ವರ್ಷದಲ್ಲಿ ಕಿಮ್ಮನೆ ರತ್ನಾಕರ ಅವರು ಈ ವಿಚಾರದಲ್ಲಿ ಸಂಪೂರ್ಣ ವಿಫಲರಾದರು. ಕೇವಲ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವಗಿರಿ ಹಾಗೂ ಕೆಂಪುಗೂಟ ಸೀಮಿತವಾಗಿದೆ. ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಆರಂಭದಲ್ಲಿ ಏನೂ ಗೊತ್ತಿಲ್ಲ, ತಿಳಿದಿಲ್ಲ, ಹೊಸದಾಗಿ ಬಂದಿದ್ದೇನೆ ಎನ್ನುವ ಸಬೂಬುಗಳನ್ನು ಕೇಳಲು ಇಂಪಾಗಿರುತ್ತವೆ. ಆದರೆ ಒಂದು ವರ್ಷ ಕಳೆದರೂ ಇಂತಹುದೇ ನೆಪ ಹೇಳಿದರೆ ಕಷ್ಟವಾಗುತ್ತದೆ. ಇಲಾಖೆಯಲ್ಲಿನ ಯಾವುದೇ ವಿಚಾರಗಳನ್ನು ಪ್ರಶ್ನಿಸಿದಾಗ ತೇಲಿಕೆ ಉತ್ತರವೇ ಸಾಮಾನ್ಯವಾಗುತ್ತಾ ಹೋದಂತೆ ಕೆಲಸಕ್ಕೆ ಬಾರದ ಪ್ರಾಮಾಣಿಕತೆಯಿಂದ ಇಲಾಖೆಗೆ ಯಾವುದೇ ಪ್ರಯೋಜನವಿಲ್ಲ ಎನಿಸುತ್ತದೆ.
ಇದೇ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಕಾರ್ಯದ ಅಂಗವಾಗಿ ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿನ ಒಂದು ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇನ್ನು ಮುಂದುವರಿದು ರಾಜ್ಯ ಸರ್ಕಾರದಿಂದ ಮಾತ್ರ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ, ಅಷ್ಟೊಂದು ಹಣವೂ ನಮ್ಮಲ್ಲಿಲ್ಲ ಎಂದು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಶಾಲೆಯೊಂದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಹೇಳಿದರು. ಆದರೆ ಕಿಮ್ಮನೆಯವರ ಆ ಕಾಳಜಿ ಅದ್ಭುತ ಭಾಷಣಕ್ಕೆ ನಿಂತುಹೋಯಿತು. ಮುಂದಿನ ಕೆಲಸಗಳೆಲ್ಲ ಆಮೆ ವೇಗದಲ್ಲಿ ಸಾಗುತ್ತಿದೆ. ಭಾಷಣದ ವೇಗಕ್ಕೂ, ಕೆಲಸಕ್ಕೂ ಸಂಬಂಧವಿಲ್ಲದಂತಾಯಿತು.
ಇದಾದ ಬಳಿಕ ಕಿಮ್ಮನೆ ರತ್ನಾಕರ ಅವರು ಶಿಕ್ಷಣ ಸಚಿವರಾದ ಬಳಿಕ ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಆರೋಪಗಳು ಕೇಳಿಬಂದವು. ಅದರ ಜವಾಬ್ದಾರಿ ಹೊತ್ತಿದ್ದ ಕೆಲ ಅಧಿಕಾರಿಗಳು ಕೋಟಿಗಟ್ಟಲೇ ಹಣ ನುಂಗಿದ್ದಾರೆ ಎಂದು ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಯಿತು. ಪ್ರಾಮಾಣಿಕ ಸಚಿವರಿಂದ ಕೊನೆಗೆ ಆದ ಅತ್ಯಾಕರ್ಷಕ ಕೆಲಸವೆಂದರೆ ಇಂತಹ ಒಬ್ಬ ಭ್ರಷ್ಟ ಅಧಿಕಾರಿ ವಿರುದ್ಧ ವರದಿ ತಯಾರಿಸುತ್ತಿದ್ದ ಸುಭೋದ್ ಯಾದವ್ ಎಂಬ ಪ್ರಾಮಾಣಿಕ ಅಧಿಕಾರಿಯನ್ನು ಚುನಾವಣಾ ಕಾರ್ಯದ ಮೇಲೆ ಹೋಗಿ ಬರುವಷ್ಟರಲ್ಲಿ ಸರ್ವ ಶಿಕ್ಷಣ ಅಭಿಯಾನದ ನಿರ್ದೇಶಕ ಹುದ್ದೆಯಿಂದ ಓಡಿಸಲಾಯಿತು. ಇದಾದ ಬಳಿಕವೂ ಆ ಭ್ರಷ್ಟ ಅಧಿಕಾರಿ ವಿರುದ್ಧ ಕಿಮ್ಮನೆ ತುಟಿ ಬಿಚ್ಚಲೇ ಇಲ್ಲ. ಶಿಕ್ಷಕರ ವರ್ಗಾವಣೆ ಬಗ್ಗೆ ವಿಧಾನಸೌಧದಲ್ಲಿ ಅತಿಯಾದ ಕಾಳಜಿ ತೋರಿದರು. ಆದರೆ ಒಬ್ಬ ಅಧಿಕಾರಿ ಜೈಲಿಗೆ ಹೋಗುತ್ತಾನೆ ಎಂದಾಗ ಕಾಲ್ಪನಿಕ ವೇತನಕ್ಕೆ ಸಂಬಂಧಿಸಿ ಕಾಯಿದೆ ತಂದಂತಹ ವೇಗವು ಈ ವಿಚಾರದಲ್ಲಿ ಕಾಣಲೇ ಇಲ್ಲ. ಸುಮಾರು ಮೂರು ತಿಂಗಳುಗಳ ಕಾಲ ಪ್ರಾಥಮಿಕ ಶಿಕ್ಷಣ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯೇ ಇಲ್ಲದಿದ್ದಾಗ ಒಬ್ಬ ಪ್ರಧಾನ ಕಾರ್ಯದರ್ಶಿ ನೇಮಿಸಿಕೊಳ್ಳಬೇಕು ಎಂಬ ಹಪಾಹಪಿಯೂ ಸಚಿವರಲ್ಲಿರಲಿಲ್ಲ. ಇಲ್ಲವಾದರೆ ಸಚಿವರೇ ಒಪ್ಪಿಕೊಂಡು ಬಿಡಿ, ಲ್ಯಾಪ್‌ಟಾಪ್ ವಿಚಾರದಲ್ಲಿ ನಿಮಗೆ ಗೊತ್ತಿಲ್ಲದೆ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಾದಂತೆ, ನನ್ನದೇನು ನಡೆಯುವುದಿಲ್ಲ ಎಂದು.
ಒಂದೊಮ್ಮೆ ಇವೆಲ್ಲ ಪ್ರಶ್ನೆಗಳನ್ನು ಸಚಿವರಿಗೆ ಕೇಳಿದರೆ 'ನಾನೇನು ಪ್ರಚಾರ ಪ್ರಿಯನಲ್ಲ, ನಾನು ಮಾಡಿದ ಕೆಲಸಕ್ಕೆ ಪ್ರಚಾರ ತೆಗೆದುಕೊಳ್ಳಬೇಕಿಲ್ಲ. ನಾನು 11 ತಿಂಗಳಲ್ಲಿ 77ರಿಂದ 80 ಸಾವಿರ ಕಿ.ಮೀ ಓಡಾಡಿದ್ದೇನೆ, ನನ್ನ ವಯಸ್ಸೇಷ್ಟು ಗೊತ್ತಲ್ಲವೇ?' ಎಂಬ ದಾರ್ಶನಿಕ ಉತ್ತರ ನೀಡುತ್ತಾರೆ. ಹೌದು ಸ್ವಾಮಿ, ಈ ವಯಸ್ಸಿನ ವಿಚಾರ ನಿಮ್ಮಂತಹ ರಾಜಕಾರಣಿಗಳಿಗೆ ಚುನಾವಣೆಗೆ ನಿಲ್ಲುವಾಗ ಏಕೆ ನೆನಪಾಗುವುದಿಲ್ಲ. ಇನ್ನು ನೀವು ಪ್ರಚಾರ ಪ್ರಿಯರಾಗಬೇಕಿಲ್ಲ. ಆದರೆ ನೀವು ನಿರ್ವಹಿಸುತ್ತಿರುವ ಇಲಾಖೆಯಲ್ಲಿ 1.10 ಕೋಟಿ ವಿದ್ಯಾರ್ಥಿಗಳು, ಅವರ ಪಾಲಕರ ಸಂಖ್ಯೆ 2.20 ಕೋಟಿಯಿದೆ. ಇದರರ್ಥ ರಾಜ್ಯದ ಶೇ.60ರಷ್ಟು ಜನರೊಂದಿಗೆ ನಿಮ್ಮ ನಂಟಿದೆ. ಕೇವಲ ತೀರ್ಥಹಳ್ಳಿ ಮತದಾರರಿಗೆ ಸೀಮಿತಗೊಳಿಸಿಕೊಂಡರೆ ಆಗುವುದಿಲ್ಲ. ಇಲಾಖೆಯಲ್ಲಿನ ಬೆಳವಣಿಗೆಗಳ ಬಗ್ಗೆ ಆಗಾಗ ಈ ಜನರಿಗೆ ಮಾಹಿತಿ ನೀಡಲೇಬೇಕಾಗುತ್ತದೆ.
ಕಿಮ್ಮನೆಯವರೇ, ನೀವು ಹೇಳಿದಂತೆ ಇದು ನಿಮ್ಮ ಕೊನೆಯ ಅವಧಿಯೇ ಆಗಿರಬಹುದು. ಹಾಗಿದ್ದಾಗ ಯಾವುದೇ ಹೆದರಿಕೆಯಿಲ್ಲದೇ ಇಲಾಖೆಯಲ್ಲಿನ ಭ್ರಷ್ಟರಿಗೆ ನಡುಕ ಹುಟ್ಟಿಸಿ. ನಿಮ್ಮ ಸುತ್ತಲಿರುವ 'ಭ್ರಷ್ಟ ಕೂಟ'ವನ್ನು ಇಲಾಖೆಯಿಂದ ಬಡಿದಟ್ಟಿಸಿ. ಆಗ ನಿಮ್ಮ ಪ್ರಾಮಾಣಿಕ ಹಾಗೂ ನಿವೃತ್ತಿಯ ಮಾತಿಗೆ ಬೆಲೆ ಬರುತ್ತದೆ. ಮಾತಿನಿಂದ ಸೌಧ ಕಟ್ಟಬೇಡಿ, ಶಿಕ್ಷಣ ಇಲಾಖೆಯನ್ನು ಸುಶಿಕ್ಷಿತವಾಗಿ ಕಟ್ಟಿ.



 -ರಾಜೀವ ಹೆಗಡೆ
ಕನ್ನಡಪ್ರಭ
meet.hegde@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement