ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮೋದಿ ಪರ್ವದಲ್ಲಿ ಹೈಕಮಾಂಡ್ಗಿಲ್ಲ ನೆಲೆ; ಬಿಜೆಪಿ ಮುಖ್ಯಮಂತ್ರಿಗಳಿಗೆ ಮುನ್ನೆಲೆ

ಈಗ ರಾಜಕೀಯವಾಗಿ ನಿರ್ಗಮನ ಸಮೀಕ್ಷೆಯನ್ನು ನಂಬಿಕೊಂಡೇ...

Rashmi Kasaragodu
Updated On : 17 May 2014, 1:02 am

ಈಗ ರಾಜಕೀಯವಾಗಿ ನಿರ್ಗಮನ ಸಮೀಕ್ಷೆಯನ್ನು ನಂಬಿಕೊಂಡೇ ಮಾತನಾಡಬೇಕಾಗುತ್ತದೆ. ಚುನಾವಣೋತ್ತರ ಸಮೀಕ್ಷೆಗಳು ಮತ್ತು ನಿರ್ಗಮನ ಸಮೀಕ್ಷೆಯನ್ನೇ ನಂಬುವುದಾದರೆ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ಗಡಗಳ ಮುಖ್ಯಮಂತ್ರಿಗಳು ತಕ್ಕ ಫಲಿತಾಂಶ ನೀಡುವುದಕ್ಕೆ ಸಫಲರಾಗಿದ್ದಾರೆ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಸಂಭಾವ್ಯ ನರೇಂದ್ರ ಮೋದಿ ಸಂಪುಟದಲ್ಲಿ ಎಲ್ಕೆ ಆಡ್ವಾಣಿ, ಮುರಳಿ ಮನೋಹರ ಜೋಶಿ, ಸುಷ್ಮಾ ಸ್ವರಾಜ್ ಸ್ಥಾನಮಾನ ಏನಾಗುತ್ತದೆ, ರಾಜನಾಥ್ ಸಿಂಗ್ ಅವರಿಗೆ ಏನು ಸಿಗಬಹುದು ಎಂಬ ಬಗ್ಗೆಯೇ ದೆಹಲಿಯ ಮಾಧ್ಯಮಗಳಲ್ಲಿ ಚರ್ಚೆಗಳಾಗುತ್ತಿವೆ. ಆದರೆ ನಮ್ಮ ದೆಹಲಿ ಪಂಡಿತರು ವಸುಂದರಾ ರಾಜೆ, ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಮಣ್ ಸಿಂಗ್ ಅವರನ್ನು ಸಂಪೂರ್ಣ ಮರೆತಂತಿದೆ.
ಆಡ್ವಾಣಿ, ಸ್ವರಾಜ್, ಜೋಶಿ ಮತ್ತು ರಾಜನಾಥ್ ಸಿಂಗ್ ಇವರೆಲ್ಲ ಒಟ್ಟುಗೂಡಿ ಪಕ್ಷಕ್ಕೆ ಎಷ್ಟು ಸ್ಥಾನಗಳನ್ನು ತರಬಲ್ಲರೋ ಗೊತ್ತಿಲ್ಲವಾದರೂ, ಮೇಲೆ ಹೆಸರಿಸಿದ ಮೂವರು ಮುಖ್ಯಮಂತ್ರಿಗಳು ಒಟ್ಟಾಗಿ ಸುಮಾರು 55-60 ಸಂಸದರನ್ನು ತರಬಲ್ಲವರಾಗಿದ್ದಾರೆ. ಅದಾಗಲೇ ಈ ಮೂರು ರಾಜ್ಯಗಳಲ್ಲಿ ತಮ್ಮ ನೂರಾರು ಶಾಸಕರ ಮೂಲಕ 'ಕಾಂಗ್ರೆಸ್ ಮುಕ್ತ' ವಾತಾವರಣವನ್ನು ನಿರ್ಮಿಸಿರುವುದು ಇನ್ನೊಂದು ಶ್ರೇಯಸ್ಸು.
ದೆಹಲಿಯಲ್ಲಿ ಕುಳಿತಿರುವ ಬಿಜೆಪಿ ನಾಯಕರು ಮಾಧ್ಯಮಗಳಿಗೆ ಈಗ ಎಷ್ಟೇ ಸುದ್ದಿ ನೀಡುತ್ತಿದ್ದರೂ ಜೈಪುರದ ಶ್ರೀಮತಿ ಹಾಗೂ ಭೋಪಾಲ್ ಮತ್ತು ರಾಯ್ಪುರಗಳ ಶ್ರೀಮಾನರು ದೆಹಲಿಯಲ್ಲಿ ನರೇಂದ್ರ ಮೋದಿ ಭವನವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕೇಂದ್ರದಲ್ಲಿ ಈ ಬಾರಿ ಬಿಜೆಪಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಯಿರುವ ಸರ್ಕಾರವನ್ನು ನಿಭಾಯಿಸುವವರು ಆ ಪಕ್ಷದ ದೆಹಲಿಯ ನೇತಾರರು ಅಲ್ಲವೇ ಅಲ್ಲ. ಪಕ್ಷದ ಮುಖ್ಯಮಂತ್ರಿಗಳಾದ ವಸುಂದರಾ ರಾಜೇ, ಶಿವರಾಜ್ ಚೌಹಾಣ್ ಹಾಗೂ ರಮಣ್ ಸಿಂಗ್ ಇವರಿಗೇ ಪ್ರಧಾನ ಭೂಮಿಕೆ.
ಹೀಗೊಂದು ಬದಲಾವಣೆಯ ಸಾಧ್ಯತೆಗೆ ಮೊದಲ ಕಾರಣವೇ ನರೇಂದ್ರ ಮೋದಿ. ಅವರು ದೆಹಲಿ ರಾಜಕಾರಣದ ಆಡುಂಬೊಲದಲ್ಲಿ ಇದ್ದವರಲ್ಲ. ಈ ಹಿಂದೆ ಆಗಿದ್ದರೂ ಅವರ ಪಾತ್ರ ನೇಪಥ್ಯಕ್ಕೆ ಸೀಮಿತವಾಗಿತ್ತು ಅಷ್ಟೆ. ಪ್ರಾದೇಶಿಕ ಪ್ರಾಬಲ್ಯದ ವ್ಯಕ್ತಿಯಾಗಿ ಒಂದೊಂದೇ ಹಂತಗಳನ್ನು ಜಯಿಸುತ್ತ ದೆಹಲಿಯತ್ತ ಪ್ರಯಾಣಿಸಿರುವ ಇವರು ಕೇಂದ್ರದ ಅಧಿಕಾರ ಆಯಾಮಗಳನ್ನು ಬದಲಾಯಿಸುವುದಕ್ಕೆ ಮುನ್ನುಡಿ ಬರೆಯುವ ಎಲ್ಲ ಲಕ್ಷಣಗಳೂ ಇವೆ.
ದೆಹಲಿ ಹೇಗೆ ಕಾರ್ಯಕ್ಷಮತೆಯನ್ನು ಕಳೆದುಕೊಂಡು ಲಕ್ವ ಹೊಡೆಸಿಕೊಂಡಿದೆ ಎಂಬುದನ್ನು ಟೀಕಿಸುತ್ತಲೇ ತಮ್ಮ 'ಗುಜರಾತ್ ಮಾದರಿ'ಯನ್ನು ಟಾಂಟಾಂ ಮಾಡಿಕೊಂಡಿದ್ದವರು ಅವರು. ಹೀಗಾಗಿ ವಸುಂದರಾ, ಚೌಹಾಣ್ ಮತ್ತು ರಮಣ್ ಸಿಂಗ್ ಅವರ ರಾಜಕೀಯ ಪ್ರಸ್ತುತತೆಯನ್ನು ತಳ್ಳಿ ಹಾಕುವ ಕಾರ್ಯದಲ್ಲಿ ಅವರು ತೊಡಗಿಕೊಳ್ಳುವುದಿಲ್ಲ. ಬಹಳ ಮುಖ್ಯವಾಗಿ ಮೋದಿ ಸಹ ಇದೇ ಹಿನ್ನೆಲೆಯಿಂದ ಬಂದವರಲ್ಲವೇ?  
ಎರಡನೆಯದಾಗಿ, ಆಡ್ವಾಣಿ, ಸ್ವರಾಜ್, ಜೋಶಿ ಇವರೆಲ್ಲ ಎಂಥದೇ ಉನ್ನತ ಸ್ಥಾನದಲ್ಲಿದ್ದರೂ ಅವರನ್ನು ಮತ್ತೊಂದು ರೀತಿಯಲ್ಲಿ ಸರಿದೂಗಿಸಿಕೊಳ್ಳುವುದಕ್ಕೆ ನರೇಂದ್ರ ಮೋದಿ ಈ ಮುಖ್ಯಮಂತ್ರಿಗಳನ್ನು ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ತಮ್ಮ ಆಡಳಿತದಲ್ಲಿ ಹೆಚ್ಚಿನ ಏರುಪೇರುಗಳಾಗದಂತೆ ಅವರು ತಡೆಯಬಲ್ಲರು.
ಈಗೇನೋ ಪಕ್ಷವು ನರೇಂದ್ರ ಮೋದಿ ಹಿಂದೆ ಗಟ್ಟಿಯಾಗಿಯೇ ನಿಂತಿದೆ. ಏಕೆಂದರೆ ಅವರ ನಾಯಕತ್ವ ಮುರಿಯಲಾಗದ್ದು ಎಂಬುದು ಮನದಟ್ಟಾಗಿದೆ. ಆದರೆ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಏನಾಗುವುದೆಂದು ಹೇಳುವುದು ಹೇಗೆ? ಹೀಗಾಗಿ ಅಹಮಿಕೆಯ ಪರ್ವತಗಳಲ್ಲಿ ಕುಳಿತಿರುವ, ಎದೆಯಲ್ಲಿ ಹಳೆಗಾಯಗಳನ್ನು ಹೊತ್ತುಕೊಂಡಿರುವ ಪಕ್ಷದ ಹಿರಿಯರನ್ನು ಓಲೈಸುವುದಕ್ಕಿಂತ ತಮ್ಮ ಸಂಸದರನ್ನು ಮತ್ತು ಶಾಸಕರ ಸಮೂಹ ಹೊಂದಿರುವ ಮುಖ್ಯಮಂತ್ರಿಗಳನ್ನು ಚೆನ್ನಾಗಿ ಇಟ್ಟುಕೊಳ್ಳುವುದನ್ನೇ ಮೋದಿ ತಮ್ಮ ಆದ್ಯತೆಯನ್ನಾಗಿಸಲಿದ್ದಾರೆ.
ಮೂರನೆಯದಾಗಿ, ಅಧಿಕಾರ ಕೇಂದ್ರದಲ್ಲಿ ಕುಳಿತು ಮೋದಿ ವಿಸ್ತಾರದ ಕನಸನ್ನು ಕಾಣಲಿದ್ದಾರೆಂಬುದು ನಿಜವಾದರೂ ಅದರ ಬೇರುಗಳು ರಾಜ್ಯಗಳಲ್ಲೇ ಇರುತ್ತವೆ. ಛತ್ತೀಸ್ಗಢ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ (ಇದೇ ಅನುಕ್ರಮಣಿಕೆಯಲ್ಲೇ ಓದಿಕೊಳ್ಳಬೇಕು.) ಸಹಕಾರ ಮನೋಭಾವವನ್ನು ಹೊಂದಿರುವ ಮೂವರು ಮುಖ್ಯಮಂತ್ರಿಗಳಿದ್ದಾರೆ. ತಮ್ಮ ಆರ್ಥಿಕ ಮತ್ತು ಅಭಿವೃದ್ಧಿ ಯೋಜನೆಗಳ ಪ್ರಯೋಗಶಾಲೆಗಳನ್ನಾಗಿ ಈ ನೆಲಗಳನ್ನು ನರೇಂದ್ರ ಮೋದಿ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೆಲ ವೈಫಲ್ಯ, ಘಾಸಿ ಎದುರಾದರೂ ಅವನ್ನು ಒಟ್ಟಾರೆಯಾಗಿ ತಾವೇ ಹೊರಬೇಕಾಗಿಲ್ಲ ಎಂಬ ಅರಿವಂತೂ ಈ ಮುಖ್ಯಮಂತ್ರಿಗಳಿಗಿದೆಯಾದ್ದರಿಂದ ಸಹಕಾರಕ್ಕೇನೂ ತೊಂದರೆ ಆಗದು.
ಕೊನೆಯದಾಗಿ ಇಲ್ಲಿ ಕಾಂಗ್ರೆಸ್ ಆಯಾಮವೂ ಇದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಈ ಮೇಲಿನ ಎಲ್ಲ ಮುಖ್ಯಮಂತ್ರಿಗಳೂ ಕಾಂಗ್ರೆಸ್ಗೆ ತಾಳಿಕೊಳ್ಳಲಾಗದ ಹೊಡೆತವನ್ನು ಕೊಟ್ಟಿದ್ದಾರೆ. ಈ ಮೂರು ರಾಜ್ಯಗಳಲ್ಲಿ ಬೇರೆ ಯಾವ ನಾಯಕರಿಗೂ ಈ ಸಾಧನೆ ಮಾಡುವುದಕ್ಕೆ ಆಗುತ್ತಿರಲಿಲ್ಲ. 2009ರಲ್ಲಿ ಬಿಜೆಪಿಯ ಕೇಂದ್ರ ಆಡಳಿತವು ವಸುಂದರಾ ರಾಜೇ ಅವರ ಸ್ಥಾನವನ್ನು ಅಲುಗಾಡಿಸಿತ್ತು. ಆದರೆ ಅವರ ಪ್ರಮಾದವನ್ನು ನಂತರ ತಿದ್ದಿಕೊಂಡರು. ಮಧ್ಯಪ್ರದೇಶದಲ್ಲಿ ಉಮಾ ಭಾರತಿಯವರ ನಿರಾಶಾದಾಯಕ ಅವಧಿಯ ನಂತರ ಶಿವರಾಜ್ ಸಿಂಗ್ ಚೌಹಾಣ್ ವರದಾನವಾಗಿ ಪರಿಣಮಿಸಿದ್ದಾರೆ. 2013ರಲ್ಲಿ ರಮಣ್ ಸಿಂಗ್ ಅವರು ಮತ್ತೆ ಅಧಿಕಾರಕ್ಕೆ ಬಂದಾಗ ಸ್ವಪಕ್ಷೀಯರಲ್ಲೇ ಹಲವರು ಮುಖ ಊದಿಸಿಕೊಂಡಿದ್ದರು. ಇರಲಿ. ಈ ಸಾಧನೆಯನ್ನು ಸುಷ್ಮಾ, ರಾಜನಾಥ್, ಆಡ್ವಾಣಿ ಇಲ್ಲವೇ ಅರುಣ್ ಜೇಟ್ಲಿ ಮಾಡುವುದಕ್ಕೆ ಸಾಧ್ಯವೇ? ಉತ್ತರ ಮೋದಿಯವರಿಗೆ ತಿಳಿದಿದೆ.
ದೇಶದ 14ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದು ನರೇಂದ್ರ ಮೋದಿಯವರಿಗೆ ಸಾಧ್ಯವಾಗುವುದು ಹೌದಾದರೆ, ರಾಷ್ಟ್ರಪತಿ ಭವನದ ಮುಂದಿನ ಸಾಲಿನಲ್ಲಿ 'ಸೂಪರ್ ಸಿಎಂ'ಗಳನ್ನು ನಾವು ಕಾಣಲಿದ್ದೇವೆ. ಬಿಜೆಪಿಯ ದೆಹಲಿ ಪ್ರಧಾನ ಕಚೇರಿ, 11 ಅಶೋಕ ರಸ್ತೆಯ ಪ್ರಾಮುಖ್ಯ ಕುಗ್ಗಲಿರುವ ಪ್ರಯಾಣವೊಂದು ಇಲ್ಲಿಂದಲೇ ಆರಂಭವಾಗಲಿದೆ.


- ದ್ವೈಪಾಯನ ಬೋಸ್,
ಸಿಎನ್ಎನ್-ಐಬಿಎನ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement