ಪುರಾಣ ಪುರುಷರಾದರೂ ಜಾತ್ಯತೀತರಾಗಿ ಉಳಿಯಲಿ
ಜಾತ್ಯತೀತ ರಾಷ್ಟ್ರವೆಂಬ ಹಣೆಪಟ್ಟಿ ಹೊತ್ತು ಜಾತಿಯನ್ನು ವಿರೋಧಿಸುತ್ತಾ ಜಾತಿಯ ಹೆಸರಲ್ಲೇ ಎಲ್ಲಾ ಕೆಲಸಗಳು ನಡೆಯುವ ನಮ್ಮ ವಿಚಿತ್ರ ವ್ಯವಸ್ಥೆಯಲ್ಲಿ ಜಾತಿಯ ಹೆಸರಲ್ಲಿ ಸಂಘಟಿತರಾದಷ್ಟೂ, ಅಧಿಕಾರದಲ್ಲಿ ಪಾಲು ಹಾಗೂ ಸರ್ಕಾರಿ ಸವಲತ್ತುಗಳನ್ನು ಪಡೆಯಬಹುದು ಎಂಬ ಮನೋಭಾವವನ್ನು ಹುಟ್ಟುಹಾಕಲಾಗಿದೆ. ಇದರಿಂದಾಗಿ ಜನರೂ ಜಾತಿಯ ಹೆಸರಲ್ಲೇ ಹೆಚ್ಚು ಸಂಘಟಿತರಾಗುತ್ತಿದ್ದಾರೆ. ಅಲ್ಲಲ್ಲಿ ಹರಿದುಹಂಚಿಹೋಗಿರುವ ತಮ್ಮ ಜಾತಿಯ ಜನರನ್ನೆಲ್ಲಾ ಒಗ್ಗೂಡಿಸುವುದು, ಜಾತಿಯ ಹೆಸರಲ್ಲಿ ಸಂಘಟಿಸುವುದು, ಸರ್ಕಾರ ನಡೆಸುವವರೆದುರು ಶಕ್ತಿಪ್ರದರ್ಶನ ಮಾಡಿ ಆ ಜಾತಿಯ ನಾಯಕ ತಾನೇ ಎಂದು ಬಿಂಬಿಸಿಕೊಳ್ಳುವ ಹೊಸದೊಂದು ಉದ್ಯೋಗವೇ ಸೃಷ್ಟಿಯಾಗಿಹೋಗಿದೆ.
ಸಂಘಟನೆಗಳು, ಒಂದು ಜಾತಿಯಲ್ಲಿ ಹುಟ್ಟಿದ ಪುರಾಣ ಪುರುಷರು, ಸಾಧಕರನ್ನು ತಮ್ಮ ಸಮುದಾಯದ ಕೊಡುಗೆಯೆಂದು ಪ್ರಚುರಪಡಿಸುವುದು ಮತ್ತು ಗೌರವಾದರಗಳು ಸಿಗುವಂತೆ ಮಾಡುವುದು ಒಂದು ಅರ್ಥಪೂರ್ಣ ಬೆಳವಣಿಗೆ ಸರಿ. ಆದರೆ ಅದೇ ಸಂಘಟನೆಗಳು ಜಾತಿ ಜಾತಿಯ ನಡುವೆ ವೈಷಮ್ಯಕ್ಕೆ, ಸಂಘರ್ಷಕ್ಕೆ ಕಾರಣವಾಗಿಬಿಟ್ಟರೆ ಅದು ನಮ್ಮ ಪುರಾಣ ಪುರುಷರಿಗೆ ಹಾಗೂ ಇತಿಹಾಸ ಪುರುಷರಿಗೆ ಗೌರವ ಸೂಚಿಸಿದಂತಾಗುವುದಿಲ್ಲ. ಏಕೆಂದರೆ ಅವರು ಯಾವುದೇ ಜಾತಿಯಲ್ಲಿ ಹುಟ್ಟಿರಲಿ ಅವರು ಆ ಮಹೋನ್ನತ ಸ್ಥಾನ ಗಳಿಸಿರುವುದೇ ಅವರ ಜಾತ್ಯತೀತ ನಡವಳಿಕೆಯಿಂದ. ಅಂಥವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಮಾತಾಡುವುದು, ಅವರ ಹೆಸರಲ್ಲಿ ಇನ್ನೊಂದು ಜಾತಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು, ಪ್ರತಿಕೃತಿ ದಹನ, ಪುಸ್ತಕಗಳನ್ನು ಬೆಂಕಿಗೆ ಹಾಕಿ ಸುಟ್ಟು ಪ್ರತಿಭಟನೆ ಮಾಡುವುದು ಖಂಡಿತ ಅಂಥವರಿಗೆ ಮಾಡುವ ಅಪಮಾನವಾದೀತು.
ಕನಕದಾಸರ ಜೀವನಗಾಥೆಯನ್ನು ನೋಡಿದರೆ ಅವರ ಜೀವನದಲ್ಲಿ ಆಗಿನ ಮಾಧ್ವಮಠದ ಪೀಠಾಧೀಶರಾಗಿದ್ದ ವ್ಯಾಸರಾಜರ ಜಾತ್ಯತೀತ ಧೋರಣೆ ಎದ್ದುಕಾಣುತ್ತದೆ. ಒಮ್ಮೆ ವ್ಯಾಸರಾಜರು ತಮ್ಮ ಶಿಷ್ಯರನ್ನು ಪ್ರಶ್ನಿಸುತ್ತಾರೆ "ಸತ್ತಮೇಲೆ ನಮ್ಮಲ್ಲಿ ಯಾರು ಸ್ವರ್ಗಕ್ಕೆ ಹೋಗಬಹುದು?". ಆಗ ಕನಕ "ನಾನು ಹೋದರೆ ಹೋದೇನು" ಎಂಬ ಉತ್ತರ ಕೊಡುತ್ತಾನೆ. ಇದನ್ನು ಕೇಳಿದ ಶಿಷ್ಯರೆಲ್ಲಾ ಇದು ದುರಹಂಕಾರದ ಪರಮಾವಧಿಯೆಂದು ಜರಿಯುತ್ತಾರೆ. ನಂತರ ಗುರುಗಳು ಅದನ್ನು ವಿವರಿಸಿ ಹೇಳುವಂತೆ ಕನಕನಿಗೆ ಆದೇಶಿಸಿದಾಗ ಆತ "ನಾನು ಎಂಬ ಅಹಂಭಾವ ಹೋದರೆ ಮಾತ್ರ ಮುಕ್ತಿ ಸಿಗಲು ಸಾಧ್ಯ" ಎನ್ನುತ್ತಾನೆ. ಆಗ ಉಳಿದ ಶಿಷ್ಯರೆಲ್ಲಾ ದಂಗಾಗುತ್ತಾರೆ.
ಮತ್ತೊಮ್ಮೆ, ಕನಕನ ಮೂಲಕ ದೇವರು ನಮ್ಮೊಡನಿದ್ದರೂ ಗುರುತಿಸುವ ಜ್ಞಾನ ಇಲ್ಲದಿದ್ದರೆ ದೇವರನ್ನು ಕಾಣಲು ಸಾಧ್ಯವಿಲ್ಲ ಎಂಬ ತತ್ವವನ್ನು ತಮ್ಮ ಶಿಷ್ಯರಿಗೆ ಹೇಳಿಸಿದ್ದರು. ಇಂಥ ಕಥೆಗಳು ವ್ಯಾಸರಾಜರ ಜಾತ್ಯತೀತ ನಡವಳಿಕೆಯನ್ನು ಎತ್ತಿತೋರಿಸುತ್ತವೆ. ಅನ್ಯಜಾತಿಯವನೊಬ್ಬ ತಮ್ಮ ಜಾತಿಯವರಿಗಿಂತಲೂ ಬುದ್ಧಿವಂತ ಎಂದು ತಿಳಿದಾಗ ವ್ಯಾಸರಾಜರು ಅವನನ್ನು ಹತ್ತಿಕ್ಕಲು ನೋಡಲಿಲ್ಲ. ಬದಲಾಗಿ ಶ್ರೇಷ್ಠರೆಂದು ತಿಳಿದಿದ್ದ ತಮ್ಮ ಶಿಷ್ಯರಿಗೆ ಕೆಳಜಾತಿಯವನೆಂದು ನಿಂದಿಸಲ್ಪಟ್ಟವನಿಂದಲೇ ತತ್ವಬೋಧನೆ ಮಾಡಿಸುವ ಮೂಲಕ ಜ್ಞಾನಕ್ಕೆ ಜಾತಿಮತಗಳ ಭೇದವಿರಬಾರದೆಂಬ ಸಂದೇಶ ಸಾರಿದರು.
ಅವರ ನಂತರದ ಶ್ರೀ ರಾಘವೇಂದ್ರಸ್ವಾಮಿಗಳ ಜೀವನಚರಿತ್ರೆಯನ್ನು ನೋಡಿದರೆ: ಆದವಾನಿಯ ನವಾಬನಾಗಿದ್ದ ಅಸದುಲ್ಲಾ ಖಾನನು ರಾಘವೇಂದ್ರಸ್ವಾಮಿಗಳನ್ನು ಪರೀಕ್ಷೆ ಮಾಡುವ ಸಲುವಾಗಿ ತಟ್ಟೆಯ ತುಂಬಾ ಪ್ರಾಣಿಮಾಂಸವನ್ನು ಇಟ್ಟು, ಅದನ್ನು ಒಂದು ವಸ್ತ್ರದಿಂದ ಮುಚ್ಚಿ ತೆಗೆದುಕೊಂಡು ಹೋಗಿ "ನಾವು ಏನು ಕೊಟ್ಟರೂ ನಿಮ್ಮ ದೇವರು ಸ್ವೀಕರಿಸುತ್ತಾನೆಯೇ?" ಎಂದು ಕೇಳುತ್ತಾನೆ. ಆಗ ರಾಯರು "ಭಕ್ತಿಯಿಂದ ಏನು ಕೊಟ್ಟರೂ ನಮ್ಮ ಶ್ರೀರಾಮ ಸ್ವೀಕರಿಸುತ್ತಾನೆ" ಎಂದು ಹೇಳುತ್ತಾರೆ. ಹೊದಿಕೆಯನ್ನು ತೆರೆಯಲಾಗುತ್ತದೆ. ತಟ್ಟೆಯ ತುಂಬಾ ಮಾಂಸವಿರುವುದನ್ನು ಕಂಡು ಅಲ್ಲಿದ್ದವರೆಲ್ಲಾ ಕಣ್ಣುಮುಚ್ಚಿಕೊಳ್ಳುತ್ತಾರೆ. ಆದರೆ ಕೊಂಚವೂ ವಿಚಲಿತರಾಗದ ರಾಘವೇಂದ್ರರು ಅದನ್ನೇ ದೇವರಿಗೆ ನಿವೇದಿಸಲು ಹೇಳಿ ತೀರ್ಥ ಚಿಮುಕಿಸಿದಾಗ ಅದು ಬಗೆ ಬಗೆಯ ಹಣ್ಣುಗಳಾಗಿ ಮಾರ್ಪಾಡಾಗುತ್ತದೆ. ಇದನ್ನೆಲ್ಲ ನೋಡಿ ದಿಗ್ಭ್ರಾಂತನಾದ ನವಾಬ ರಾಯರ ಇಚ್ಛೆಯಂತೆ ಮಂಚಾಲೆ ಗ್ರಾಮವನ್ನು ಕಾಣಿಕೆಯಾಗಿ ನೀಡುತ್ತಾನೆ ಎಂಬ ಕಥೆಯಿದೆ. ಈ ಕಥೆ ಕೇಳಿದರೆ ಪವಾಡಗಳನ್ನು ಒಪ್ಪದವರು ಮಾಂಸ ಹಣ್ಣುಗಳಾಗಿ ಮಾರ್ಪಟ್ಟಿದ್ದನ್ನು ಒಪ್ಪಿಕೊಳ್ಳದಿದ್ದರೂ ರಾಯರು ಮಾತ್ರ ನವಾಬನನ್ನು ಅನ್ಯಧರ್ಮೀಯನೆಂದು, ಅವನು ತಮ್ಮ ಧರ್ಮಕ್ಕೆ ಅವಮಾನ ಮಾಡಲು ಬೇಕೆಂದೇ ಮಾಂಸವನ್ನು ತಂದಿದ್ದಾನೆಂದು ಭಾವಿಸಿ ಸಿಟ್ಟಾಗಲಿಲ್ಲ. 'ಯದ್ಭಾವಂ ತದ್ಭವತಿ' ನಾವು ಹೇಗೆ ಭಾವಿಸುತ್ತೇವೋ ಹಾಗೆ ಎಂಬ ತತ್ವದ ಮೇಲೆ ನೈವೇದ್ಯ ಮಾಡಿದ್ದನ್ನಂತೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಇಲ್ಲಿ ಗುರುಗಳು ಜಾತ್ಯತೀತರಾಗಿ ವರ್ತಿಸಿದಂತೆ ನವಾಬನೂ ಜಾತ್ಯತೀತನಾಗಿಯೇ ವರ್ತಿಸುತ್ತಾನೆ. ಗುರುಗಳು ತಾನು ತಂದಿದ್ದ ಮಾಂಸವನ್ನು ನಿವೇದನೆ ಮಾಡಿದ ಮೇಲೆ ನಾನು ಅವರ ಜಾತಿಗೆಡಿಸಿಬಿಟ್ಟೆ ಎಂದು ಕುಣಿದಾಡುವುದಿಲ್ಲ!
ಇನ್ನು ತ್ರಿಮತಸ್ಥ ಆಚಾರ್ಯರುಗಳ ವಿಷಯಕ್ಕೆ ಬಂದರೆ, ಶಂಕರಾಚಾರ್ಯರು ಒಮ್ಮೆ ವಾರಾಣಸಿಯಲ್ಲಿ ಗಂಗಾನದಿಯಲ್ಲಿ ಮಿಂದು ತಮ್ಮ ಶಿಷ್ಯರೊಡನೆ ಬರುತ್ತಿದ್ದಾಗ ಅಸ್ಪೃಶ್ಯನಾದ ಚಂಡಾಲನೊಬ್ಬ ನಾಲ್ಕು ನಾಯಿಗಳ ಜೊತೆ ಎದುರಿಗೆ ಬರುತ್ತಾನೆ. ಮೈಲಿಗೆಯಾಯಿತೆಂದು ಭಾವಿಸಿದ ಶಂಕರರು ಅವನನ್ನು ಆಕ್ಷೇಪಿಸುವಂತೆ "ದೂರಸರಿ ದೂರಸರಿ" ಎಂದು ಆದೇಶಿಸುತ್ತಾರೆ. ಇದರಿಂದ ಕುಪಿತನಾದ ಚಂಡಾಲನು "ನನ್ನ ದೇಹ ನಿನ್ನ ದೇಹದಿಂದ ದೂರ ಸರಿಯಬೇಕೋ? ನನ್ನ ಆತ್ಮ ನಿನ್ನ ಆತ್ಮನಿಂದ ದೂರ ಸರಿಯಬೇಕೋ? ನನ್ನ ದೇಹದಿಂದ ನಿನ್ನ ದೇಹಕ್ಕೆ ಮೈಲಿಗೆಯಾಯಿತೋ ಅಥವಾ ನನ್ನ ಆತ್ಮನಿಂದ ನಿನ್ನ ಆತ್ಮನಿಗೆ ಮೈಲಿಗೆಯಾಯಿತೋ?" ಎಂದು ನಿಗೂಢವಾಗಿ ಪ್ರಶ್ನಿಸುತ್ತಾನೆ. ಏಕಾತ್ಮ ಪ್ರತಿಪಾದಕರಾದ ಶಂಕರರಿಗೆ ಎಲ್ಲರ ದೇಹದಲ್ಲಿರುವ ಪರಬ್ರಹ್ಮ ವಸ್ತುವು ಒಂದೇ ಎಂದಾದಮೇಲೆ ಪರಸ್ಪರ ಭೇದವೆಲ್ಲಿಯದು ಮೈಲಿಗೆಯೆಲ್ಲಿಯದು ಎಂಬ ಜ್ಞಾನೋದಯ ಉಂಟಾಗಿ ತಾವು ನಂಬಿದ್ದ ಸಿದ್ಧಾಂತ ಹಾಗೂ ತಮ್ಮ ನಡವಳಿಕೆಯಲ್ಲಿ ಇದ್ದ ದ್ವಂದ್ವವನ್ನು ತಿದ್ದಿಕೊಂಡು ಅವನಿಗೆ ದೀರ್ಘದಂಡ ನಮಸ್ಕಾರ ಹಾಕಿ ಅವನನ್ನು 'ಜಗದ್ಗುರುವಿನ ಗುರು' ಎಂದು ಕರೆಯುತ್ತಾರೆ. ಮನೀಷಾ ಪಂಚಕಮ್ ಎಂಬ ಕೃತಿ ರಚಿಸುತ್ತಾರೆ.
ರಾಮಾನುಜಾಚಾರ್ಯರಿಗೆ ಅವರ ಗುರುಗಳಾದ ಗೋಷ್ಠಿ ಪೂರ್ಣರು ಇಹಪರಗಳೆರಡರಲ್ಲೂ ಸುಖವನ್ನು ಕೊಡುವಂಥ ಮುಕ್ತಿಗೆ ಕಾರಣವಾದಂಥ ನಾರಾಯಣ ಅಷ್ಟಾಕ್ಷರೀ ಮಂತ್ರವನ್ನು ಉಪದೇಶಿಸುತ್ತೇನೆ, ಅದನ್ನು ಮತ್ತಿನ್ಯಾರಿಗೂ ಉಪದೇಶಿಸುವುದಿಲ್ಲ ಎಂದು ನರಸಿಂಹ ದೇವರ ಮೇಲೆ ಆಣೆ ಮಾಡಿ ಹೇಳಬೇಕೆಂದು ಹೇಳುತ್ತಾರೆ. ಅದರಂತೆ ಪ್ರಮಾಣ ಮಾಡಿ ಉಪದೇಶ ಹೊಂದಿದ ರಾಮಾನುಜರು ಕೂಡಲೇ ದೇವಸ್ಥಾನದ ಗೋಪುರದ ಮೇಲೇರಿ ಇಡೀ ಊರಿನ ಜನತೆಯನ್ನೇ ಸೇರಿಸಿ ಎಲ್ಲರಿಗೂ ಆ ಮಂತ್ರವನ್ನು ಉಪದೇಶಿಸಿಬಿಡುತ್ತಾರೆ. ಇದರಿಂದ ಕೋಪಗೊಂಡ ಗೋಷ್ಠಿ ಪೂರ್ಣರು ದೇವರ ಮೇಲೆ ಆಣೆ ಮಾಡಿ ತಪ್ಪಿನಡೆದುದಕ್ಕಾಗಿ ನರಕ ಪ್ರಾಪ್ತಿಯಾಗುತ್ತದೆಂದು ಹೆದರಿಸುತ್ತಾರೆ. ಅದಕ್ಕೆ ರಾಮಾನುಜರು ಆ ಒಂದು ಮಂತ್ರಶಕ್ತಿಯಿಂದ ನನ್ನ ಊರಿನ ಜನರಿಗೆಲ್ಲಾ ಸುಖ ಹಾಗೂ ಮುಕ್ತಿ ಪ್ರಾಪ್ತಿಯಾಗುವುದಾದರೆ ವಚನಭಂಗದ ತಪ್ಪಿಗಾಗಿ ನಾನೊಬ್ಬ ನರಕಕ್ಕೆ ಹೋದರೂ ಪರವಾಗಿಲ್ಲ ಎಂದು ಹೇಳುತ್ತಾರೆ. ಶಿಷ್ಯನ ಭೇದಭಾವವಿಲ್ಲದ ಸರ್ವೇಜನೋ ಸುಖಿನೋ ಭವಂತು ಎಂಬ ಶ್ರೇಷ್ಠ ಗುಣವನ್ನು ಗುರುತಿಸಿದ ಗುರುಗಳು ವಿಶೇಷ ಅನುಗ್ರಹವನ್ನು ಮಾಡುತ್ತಾರೆ.
ಒಮ್ಮೆ ಮಧ್ವಾಚಾರ್ಯರು ತಮ್ಮ ಶಿಷ್ಯರೊಂದಿಗೆ ಸಂಚಾರ ಮಾಡುತ್ತಾ ಗಂಗಾತಟಕ್ಕೆ ಬರುತ್ತಾರೆ. ನದಿಯನ್ನು ದಾಟ ಬೇಕೆಂದರೆ ಒಂದು ದೋಣಿಯೂ ಇರುವುದಿಲ್ಲ. ಗಂಗೆಯ ಇನ್ನೊಂದು ತೀರಪ್ರದೇಶದ ಮುಸ್ಲಿಂ ರಾಜನು ಶತೃಗಳ ಭಯದಿಂದ ಎಲ್ಲಾ ದೋಣಿಗಳನ್ನು ತೆಗೆಸಿ ಹಾಕಿ ತೀರದಲ್ಲಿ ಕಾವಲುಭಟರನ್ನು ಹಾಕಿರುತ್ತಾನೆ. ಅನ್ಯಮಾರ್ಗವಿಲ್ಲದೆ ಆಚಾರ್ಯರು ಶಿಷ್ಯರಿಗೆ ಧೈರ್ಯ ತುಂಬಿ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ನದಿದಾಟಲು ಹೊರಡುತ್ತಾರೆ. ಆಗ ಆ ತೀರದ ಕಾವಲುಭಟರು ತಮ್ಮ ಪ್ರದೇಶಕ್ಕೆ ಪ್ರವೇಶ ನಿಷೇಧಿಸಲಾಗಿದೆ ಬರಕೂಡದೆಂದು ಬಂದರೆ ಕೊಂದುಹಾಕುವುದಾಗಿಯೂ ಕೂಗಿಕೊಳ್ಳುತ್ತಾರೆ. ಅದಕ್ಕೆ ಕೊಂಚವೂ ಹೆದರದ ಆಚಾರ್ಯರು ನದಿಯನ್ನು ದಾಟಿ ಬಂದುಬಿಡುತ್ತಾರೆ. ರಾಜಭಟರು ಆಚಾರ್ಯರನ್ನು ಶಿಷ್ಯರ ಸಮೇತ ರಾಜನ ಮುಂದೆ ತಂದು ನಿಲ್ಲಿಸುತ್ತಾರೆ. ಮುಸ್ಲಿಂ ದೊರೆಗೂ ಹಿಂದು ಯತಿಗೂ ಅಲ್ಲೊಂದು ಸಂವಾದವೇರ್ಪಡುತ್ತದೆ. ಆಗ ಮಧ್ವರು "ಸರ್ವೇ ಶಬ್ದಾಃ ಸರ್ವೇ ವೇದಾಃ ಸರ್ವಾಃ ರುಚಃ ಸರ್ವೇಘೋಷಾಃ ಏಕೈಕ ವ್ಯಾಹೃತಿಃ ಪ್ರಣವೇವ ಪ್ರಾಣರಚಯಿತ್ಯೇವ ವಿದ್ಯಾತ್" ಅಂದರೆ ಜಗತ್ತಿನಲ್ಲಿ ಉಚ್ಚರಿಸುವ ಪ್ರತಿಯೊಂದು ಅಕ್ಷರವೂ, ಹೊಮ್ಮುವ ಪ್ರತಿಯೊಂದು ನಾದವೂ ಶಬ್ದವೂ ಪ್ರತಿಯೊಂದು ಭಾಷೆಯೂ ಪರಮಾತ್ಮನ ಹೆಸರುಗಳೇ ಎಂದು ಹೇಳುವ ಮೂಲಕ ನೀವು ಅಲ್ಲಾಹ್ ಎಂದು ಕರೆಯುವುದು ನಾವು ನಾರಾಯಣ ಇಲ್ಲಾ ಇನ್ನಿತರೆ ಹೆಸರುಗಳಿಂದ ಕರೆಯುವುದು ಒಬ್ಬ ದೇವರನ್ನೇ ಎಂಬ ತತ್ವವನ್ನು ಮನದಟ್ಟು ಮಾಡಿಕೊಡುತ್ತಾರೆ.
ಹೀಗೆ ಉದಾಹರಿಸುತ್ತಾ ಹೋದರೆ ಶ್ರೀರಾಮ-ಹನುಮಂತ, ಶ್ರೀರಾಮ-ಶಬರಿ, ಶ್ರೀಕೃಷ್ಣ-ವಿದುರ, ನೂರಾರು ಉದಾಹರಣೆಗಳು ಸಿಗುತ್ತವೆ. ಜಾತೀಯತೆ ಎಂಬುದು ಉತ್ತುಂಗದಲ್ಲಿದ್ದ ಕಾಲದಲ್ಲೇ ನಮ್ಮ ಪೂರ್ವಜರು ಜಾತ್ಯತೀತತೆ ಮೆರೆದು ದೊಡ್ಡತನ ತೋರಿರಬೇಕಾದರೆ, ಜಾತ್ಯತೀತತೆ ವಿಜೃಂಭಿಸಬೇಕಾದ ಈ ಕಾಲದಲ್ಲಿ ಜಾತಿಯ ಹೆಸರಲ್ಲಿ ಸಂಘಟನೆಗಳನ್ನು ಮಾಡಿಕೊಂಡು ಒಬ್ಬರನ್ನೊಬ್ಬರು ದೂಷಿಸುವುದು ಅಪಮಾನಿಸುವುದು ಮಾಡುವುದಾದರೆ ಜಾತ್ಯತೀತ ರಾಷ್ಟ್ರ ಎಂದು ಕರೆಯುವುದಾದರೂ ಯಾವ ಪುರುಷಾರ್ಥಕ್ಕೆ? ಪರಮಾರ್ಥ ಸಾಧನೆಯೇ ಮುಖ್ಯ ಗುರಿಯಾಗಿಟ್ಟುಕೊಂಡು ಸಾಧನೆ ಮಾಡಿದ ವಾಲ್ಮೀಕಿ, ವ್ಯಾಸ, ವಿಶ್ವಕರ್ಮ, ಕನಕ, ಪುರಂದರ, ಶಂಕರ, ರಾಮಾನುಜ, ಮಧ್ವ, ಅಂಬೇಡ್ಕರ್ ಇಂಥವರನ್ನು ಲಾಂಛನವಾಗಿ ಬಳಸುವುದಾದರೂ ಏಕೆ? ಸಾಧನೆ ಮಾಡಿದ ಮಹಾಪುರುಷರನ್ನು ಇವ ನಮ್ಮ ಜಾತಿಗೆ ಸೇರಿದವನು ಅವ ನಮ್ಮ ಜಾತಿಗೆ ಸೇರಿದವನು ಎಂದು ಎಳೆದಾಡುವುದು ಏತಕ್ಕೆ? ಇವನು ಬ್ರಾಹ್ಮಣನಲ್ಲ ಹೊಲೆಯ, ಅವನು ಬೇಡನಲ್ಲ ಬ್ರಾಹ್ಮಣ, ಇವ ವೈಷ್ಣವನಲ್ಲ ಶೈವ ಇಂಥ ಸಂಶೋಧನೆಗಳು ಇಂದಿನ ಅಗತ್ಯವೇ? ಇಂಥ ಸಂಶೋಧನೆಗಳ ವರದಿಗಳನ್ನು ಓದಿದ ಅವರ ಆರಾಧಕರು ಮೇಲ್ಜಾತಿಗೆ ಸೇರಿದ ನಮ್ಮವರನ್ನು ಕೆಳಜಾತಿಯವನೆಂದು ಬರೆದು ಅವಮಾನಿಸಲಾಗಿದೆಯೆಂದೂ, ಹಿಂದುಳಿದ ಜಾತಿಗೆ ಸೇರಿದ ನಮ್ಮವರನ್ನು ಮೇಲ್ಜಾತಿಯವರು ಅಪಹರಿಸಿಬಿಟ್ಟಿದ್ದಾರೆಂದೂ ದೂಷಿಸಿ ಪ್ರತಿಭಟನೆ ನಡೆಸುತ್ತಾ ಜಾತಿನಿಂದನೆ ಮಾಡುತ್ತಾ ರಸ್ತೆಗಳಲ್ಲಿ ಟೈರ್ ಸುಟ್ಟು ಆ ಪುಸ್ತಕಗಳನ್ನು ಬೆಂಕಿಗೆ ಹಾಕುವುದು, ಅದನ್ನು ಮುಟ್ಟುಗೋಲು ಹಾಕಬೇಕೆಂದು ಸರ್ಕಾರವನ್ನು ಒತ್ತಾಯಿಸುವುದು ನಮ್ಮ ಜಾತ್ಯತೀತ ಸಿದ್ಧಾಂತಕ್ಕೆ ಶೋಭೆ ತಂದೀತೇ? ಸಾಧ್ಯವಾದರೆ ಕನಕನನ್ನು ತಮ್ಮ ಜಾತಿಯವನೆಂದು ಹೆಮ್ಮೆ ಪಡುವವರೆಲ್ಲಾ ಕನಕದಾಸರ ದೇವರನಾಮಗಳನ್ನು ಕಡ್ಡಾಯವಾಗಿ ಕಲಿಯಬೇಕು, ವಾಲ್ಮೀಕಿಯನ್ನು ತಮ್ಮ ಜಾತಿಯವನೆಂದು ಹೆಮ್ಮೆ ಪಡುವವರೆಲ್ಲಾ ರಾಮಾಯಣವನ್ನು ಕಡ್ಡಾಯವಾಗಿ ಓದಬೇಕು. ಯಾವ್ಯಾವ ಜಾತಿಯವರು ಯಾರ್ಯಾರನ್ನು ಲಾಂಛನವಾಗಿ ಬಳಸುತ್ತಾರೊ ಅವರು ಆವರ ಆದರ್ಶಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಹೋರಾಟ ನಡೆಸಲಿ. ಆಗ ನಮ್ಮ ರಾಜ್ಯ ಸಂಗೀತ, ಸಾಹಿತ್ಯ, ಕಲೆ ಹಾಗೂ ವಿನಯವಂತಿಕೆಯಲ್ಲಿ ಶ್ರೀಮಂತಿಕೆಯನ್ನೂ ಗಳಿಸುತ್ತೆ, ಆಯಾ ಜಾತಿಯ ಗೌರವವೂ ಹೆಚ್ಚುತ್ತೆ. ಆದರೆ ಸಂಘಟನೆ ಕಟ್ಟಿಕೊಂಡು ಬೀದಿಗಿಳಿದು ಪ್ರತಿಭಟನೆ ಮಾಡಿ ಜನಪ್ರಿಯತೆ ಗಳಿಸುವುದು ಸುಲಭ ಮಾರ್ಗವಾದ್ದರಿಂದ ಯಾರೂ ಹೀಗೆ ಮಾಡರು. ಅದಕ್ಕೆ ಅಧಿಕಾರದಲ್ಲಿ ಪಾಲು ಪಡೆಯಲು, ಸರ್ಕಾರಕ್ಕೆ ನಮ್ಮ ಕೂಗು ಕೇಳಿಸುವಂತೆ ಮಾಡಲು ಬೇರೆದಾರಿಯೇನಾದರೂ ಹುಡುಕಿಕೊಳ್ಳೋಣ. ಇಲ್ಲ ಜಾತಿಯನ್ನೇ ಅಸ್ತ್ರವಾಗಿ ಬಳಸಬೇಕೆಂಬುದಾದರೆ ಪುರಾಣೇತಿಹಾಸ ಪುರುಷರನ್ನು ಲಾಂಛನವಾಗಿ ಬಳಸದೆ ನಾವು ನಾವು ಹೊಡೆದಾಡಿಕೊಳ್ಳೋಣ. ಪಾಪ! ಪುರಾಣಪುರುಷರಾದರೂ ಜಾತ್ಯತೀತರಾಗಿ ಉಳಿಯಲಿ.
-ಫಣಿರಾಮಚಂದ್ರ
paniramachandra.hs@gmail.com