ಮತಮಹಾಸಮರದಲ್ಲಿ ಮೋದಿ ಮತ್ತು ಮಾಧ್ಯಮ
ಮೋದಿ ಮಾಧ್ಯಮದಲ್ಲಿ ಭರ್ಜರಿ ಹವಾ ಸೃಷ್ಟಿಸಿ ಜಯ ತಮ್ಮದಾಗಿಸಿಕೊಂಡರು ಅನ್ನೋದು ಸೋತ ಕಾಂಗ್ರೆಸ್ನ ಆರೋಪ. ಇದಕ್ಕೆ ವ್ಯತಿರಿಕ್ತವಾಗಿ ಮಾಧ್ಯಮದ ದೊಡ್ಡ ವರ್ಗ ಮೋದಿಯವರನ್ನು ಮೊದಲಿನಿಂದಲೂ ಟೀಕಿಸಿಕೊಂಡೇ ಬಂತು, ಆದರೆ ಸಾಮಾಜಿಕ ಮಾಧ್ಯಮವು ಸಕಾರಾತ್ಮಕ ಮೋದಿ ಅಲೆ ಸೃಷ್ಟಿಸಿತು ಎಂಬುದು ನರೇಂದ್ರ ಮೋದಿ ಅಭಿಮಾನಿಗಳ ಗಟ್ಟಿಧ್ವನಿ. ಮೋದಿ ಮತ್ತು ಮಾಧ್ಯಮದ ನಿಜ ಸಮೀಕರಣಗಳು ಹೇಗಿದ್ದವು ಎಂದು ಕೆಲ ಉದಾಹರಣೆಗಳೊಂದಿಗೆ ಪರಿಶೀಲಿಸುವುದು ಸೂಕ್ತ.
ಜನಸಾಮಾನ್ಯರು ದಿನನಿತ್ಯದಂತೆ ರಾಜಕೀಯ ಚರ್ಚೆ ನಡೆಸುತ್ತಿದ್ದರೆ, ಅದಕ್ಕಿಂತಲೂ ದೊಡ್ಡಮಟ್ಟದ ಹಗೆ ತುಂಬಿದ ಚರ್ಚೆ ಸೋಷಿಯಲ್ ಮೀಡಿಯಾದಲ್ಲೂ (ಟ್ವಿಟರ್, ಫೇಸ್ಬುಕ್, ಯೂಟ್ಯೂಬ್ ಇತ್ಯಾದಿ) ನಡೆಯುತ್ತಿತ್ತು.
ಡಿಸೆಂಬರ್ 2013 ರ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಅಚ್ಚರಿಯ ಫಲಿತಾಂಶ ಕೊಟ್ಟಿದ್ದು ಸಕಾರಾತ್ಮಕ ವಿದ್ಯಮಾನವೇ. ವಿಷಯವೇ. ಆಗಲೇ ಪ್ರಾರಂಭವಾದ ಇವರ 'ಫ್ಯಾನ್ ಫೊಲೊವಿಂಗ್' ಇಂದಿಗೂ ಇದೆ. ಈ ಪಕ್ಷವನ್ನು ಜರೆಯುವ, ಹೀಯಾಳಿಸುವವರ ಸಂಖ್ಯೆ ಇದೆಯಾದರೂ ಅವರನ್ನು ಸಮರ್ಥಿಸಿಕೊಳ್ಳುವವರ ಸಂಖ್ಯೆ ಕಡಿಮೆಯಂತೂ ಇಲ್ಲ. ಆದರೂ ಕೆಲವರಂತೂ ಕೇಜ್ರಿವಾಲ್ರನ್ನು ಕಣ್ಣು ಮುಚ್ಚಿ ಒಪ್ಪಿಯಾಗಿತ್ತು. ದೆಹಲಿಯ ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡಿದ ಬಳಿಕವೂ ಕೇಜ್ರಿವಾಲ್ ಮೇಲಿನ ಕುರುಡು ಮೋಹ ಮಾತ್ರ ಬದಲಾಗಲಿಲ್ಲ. ಅವರನ್ನು ದೂಷಿಸಿದರೆ ಅವರನ್ನು ಆರಾಧಿಸುವವರೆಲ್ಲರೂ ಕಣ್ಣು ಮುಚ್ಚಿಕೊಂಡು ದೂಷಿಸುತ್ತಿದ್ದರು. ಸತ್ಯ ಏನಿರಬಹುದೆಂಬ ಅನ್ವೇಷಣೆಯ ಗೋಜಿಗೆ ಇವರು ಹೋಗುತ್ತಿರಲ್ಲಿಲ್ಲ. ಆಗಲೇ ಸೋಷಿಯಲ್ ಮೀಡಿಯಾದಲ್ಲಿ ಪ್ರಾರಂಭವಾದದ್ದು 'ಆಪ್ಟಾರ್ಡ್' ಎಂಬ ಪ್ರಯೋಗ. ಕೇಜ್ರಿವಾಲರ ರಾಷ್ಟ್ರೀಯ ವಿಷಯಗಳ ಬಗೆಗಿನ ದೃಷ್ಟಿಕೋನ ಇನ್ನು ಮೂಡಿಯೇ ಇರದಿದ್ದರೂ ದೇಶದ ಏಳಿಗೆಯ ಹೊರೆಯನ್ನು- ಹೊಣೆಯನ್ನು ಆಮ್ ಆದ್ಮಿ ಪಕ್ಷಕ್ಕೆ ನೀಡ ಹೊರಟಿದ್ದರು ಈ ಆಪ್ಟಾರ್ಡ್ಗಳು. ಲೋಕ ಸಭಾ ಚುನಾವಣೆಯಲ್ಲಿ ಆಪ್ ಗೆದ್ದು, ಕೇಜ್ರಿವಾಲ್ ಮುಂದಿನ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆಂದು ಕೆಲವರು ವಾದಿಸಿದರೆ ಮತ್ತೆ ಕೆಲವರು ಕೇಜ್ರಿವಾಲ್ ಮುಂದಿನ ಪ್ರಧಾನಿಯೆಂದು ಬೀಗತೊಡಗಿದ್ದರು.
ರಾಹುಲ್ ಗಾಂಧಿ ಯುವ ನಾಯಕರಂತೆ ಕಂಡರೂ (ಕೇವಲ ವಯಸ್ಸಿನ ಅನ್ವಯ) ಕಾಂಗ್ರೆಸ್ನ ಪಾಪದ ಕೊಡ ತುಂಬಿತ್ತಲ್ಲ? ಮುಂಚೆಲ್ಲಾ ಜಾತ್ಯತೀತತೆಗೆಂದು ಕಾಂಗ್ರೆಸ್ಗೆ ಹೆಗಲುಕೊಡುತ್ತಿದ್ದ ಬುದ್ಧಿಜೀವಿ ವರ್ಗ ಅನಾಯಾಸವಾಗಿ ಆಮ್ ಆದ್ಮಿಯ ಕೈ ಹಿಡಿಯಿತು. ಆದ್ದರಿಂದಲೇ ಟ್ವಿಟರ್, ಫೇಸ್ಬುಕ್ಗಳಲ್ಲಿ ನಡೆಯುತ್ತಿದ್ದುದು ಆಮ್ ಆದ್ಮಿ- ಭಾಜಪದ ನಡುವಿನ ಚರ್ಚೆಯಷ್ಟೇ. ದೆಹಲಿಯಲ್ಲಿ ಕಾಂಗ್ರೆಸ್ ಸೋಲಿಸಿಯಾಗಿದೆ. ಇನ್ನೇನಿದ್ದರೂ ಭಾಜಪ ದ ಮತಗಳನ್ನು ಕಸಿಯುವುದು, ಗೆಲ್ಲುವುದು, ಕೆಂದ್ರದಲ್ಲಿ ಸರ್ಕಾರ ರಚಿಸುವುದು ಎಂಬ ರೆಸಿಪಿ 'ಆಪ್ಟಾರ್ಡ್' ಗಳು ಮುಂದಿಟ್ಟರು.
ನರೇಂದ್ರ ಮೋದಿಯವರು ಭಾಜಪಾದ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗಿನಿಂದಲೂ ದೇಶದಲ್ಲಿ ಒಂದು ಚರ್ಚೆ ಪ್ರಾರಂಭವಾಯ್ತು. ನರೇಂದ್ರ ಮೋದಿಯವರು ಸಮರ್ಥ ನಾಯಕರಾಗಬಲ್ಲರೇ ಎಂಬುದಾಗಿನಿಂದ ಹಿಡಿದು, ಅವರೊಬ್ಬ ಹಿಟ್ಲರ್ ತರಹದ ನಾಯಕ ಮೋದಿ ಪ್ರಧಾನಿಯಾದರೆ ದಂಗೆಗಳು 'ಅನ್ಲಿಮಿಟೆಡ್' ಆಗಿ ನಡೆಯುತ್ತವೆ ಎಂಬುವವರೆಗೂ ಸಾಕಷ್ಟು ಚರ್ಚೆಗಳು ನಡೆದವು. ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂಬುದರಿಂದ ಹಿಡಿದು, ಭಾಜಪ ಏಕ ವ್ಯಕ್ತಿಯ ಸೇನೆ ಎಂಬೆಲ್ಲ ಟೀಕೆಗಳಾದವು. ಮೋದಿಯವರ ಧನಾತ್ಮಕ ಅಂಶಗಳನ್ನು ಬದಿಗಿಟ್ಟು, ನಕಾರಾತ್ಮಕ ಸುದ್ದಿಗಳನ್ನೇ ದಿನಗಟ್ಟಲೆ ನೀಡಿದರು. ಅವರ ವಯಕ್ತಿಕ ವಿಚಾರವನ್ನು ಹಿಡಿದು ನೈತಿಕತೆಯೇ ಇಲ್ಲದ ಕೆಲ ರಾಜಕಾರಣಿಗಳು, ಕೆಲ ಟಿ.ವಿ ಪತ್ರಕರ್ತರು ರೋಷಾವೇಶದಿಂದ ಎಷ್ಟೆಲ್ಲಾ ಮಾತನಾಡಿದರು ಎಂಬುದೂ ತಿಳಿದಿರುವ ವಿಷಯವೇ.
ಮೋದಿಯ ಯಾವುದೇ ರ್ಯಾಲಿಯಾಗಲಿ ತಪ್ಪದೇ ತಮ್ಮ ವಾಹಿನಿಗಳಲ್ಲಿ ಬಿತ್ತರಿಸುತ್ತಿದ್ದರು. ಅದರಿಂದ ಟಿ.ಆರ್.ಪಿ ಹೆಚ್ಚುತ್ತಿದ್ದುದಂತೂ ತಿಳಿದಿರುವ ವಿಷಯ. ಅದರ ಬಗ್ಗೆ ಸಲ್ಲದ ಚರ್ಚೆ ನಡೆಸುತ್ತಿದ್ದುದು, ಇನ್ನಷ್ಟು ರಾಜಕೀಯ ಪಕ್ಷದ ವಿಷಭರಿತ ಮಾತುಗಳೇ ವೀಕ್ಷಕರಿಗೆ ಕೊಟ್ಟ ವಿಶೇಷ ಸುದ್ದಿಯ ಪ್ಯಾಕೇಜ್. ಚರ್ಚೆಯಲ್ಲಿ ಕುಳಿತ 4 ಜನ ನಾಲ್ಕು ದಿಕ್ಕನ್ನು ತೋರಿಸುತ್ತಿದ್ದರೆ ಅಷ್ಟದಿಕ್ಕುಪಾಲಕನಂತೆ ವರ್ತಿಸುತ್ತಿದ್ದ ಚರ್ಚೆಯ ಸಂಪಾದಕ ಯಾವುದನ್ನೂ ಒಪ್ಪದೆ ತನ್ನದೊಂದು ತೀರ್ಪನ್ನು ಕೊಟ್ಟುಬಿಡುತ್ತಿದ್ದ. ಮೋದಿಯವರು ಅರ್ನಾಬ್ ಗೋಸ್ವಾಮಿಯವರ ಜೊತೆಗಿನ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿದಂತೆ ಅವರ ಒಂದು ಗಂಟೆಯ ಭಾಷಣದಲ್ಲಿನ ಆಯ್ದ ಅರ್ಧ ನಿಮಿಷದ ಹೇಳಿಕೆಯನ್ನು ಹಿಡಿದುಕೊಂಡು ದಿನಗಟ್ಟಲೆ ಚರ್ಚೆ ನಡೆಸುತ್ತಿದ್ದರು.
ಹಿಂದೊಮ್ಮೆ ಮೋದಿ, ಕರಣ್ ಥಾಪರ್ ಸಂದರ್ಶನದಿಂದ ಎದ್ದು ಹೋಗಿದ್ದರು. ಕರಣ್ ತಮ್ಮ ವಿಷಯವನ್ನೇ ಕೇಂದ್ರೀಕರಿಸುತ್ತಾ 2002 ರ ಗೋಧ್ರಾ ದಂಗೆಯನ್ನೇ ಉದ್ದೇಶಿಸಿ ಪ್ರಶ್ನೆ ಕೇಳುತ್ತಿದ್ದರು. ಎಷ್ಟು ಸಮಜಾಯಿಷಿ ನೀಡಿದರೂ ತಮ್ಮ ಏಕವಾದ ಬಿಡದಿದ್ದರಿಂದ ಮೋದಿ ಸಾರಾಸಗಟಾಗಿ ಆ ಸಂದರ್ಶನದಿಂದ ನಡೆದುಹೋಗಿದ್ದರು. ಕರಣ್ರ ಒರಟುತನದ ಸಂದರ್ಶನದಿಂದ ಹಿಂದೆ ರಾಮ್ಜೇಠ್ಮಲಾನಿಯವರೂ ಎದ್ದು ಹೋಗಿದ್ದಾರೆ. ಈ ವಿಷಯವನ್ನು ಹಿಡಿದುಕೊಂಡು ಆಪ್ನ ಹಲವರು ಆ ಸಂದರ್ಶನದ ತುಣುಕನ್ನೇ ಹಿಡಿದು ನರೇಂದ್ರ ಮೋದಿ ಭಯದಿಂದ ಓಡಿಹೋದರು, ಒಂದು ಸಂದರ್ಶನವನ್ನು ಸಮಂಜಸವಾಗಿ ನೀಡದವರು ಇನ್ನು ದೇಶ ಆಳಿಯಾರ ಎಂದರು. ಮತ್ತೊಬ್ಬ ಮಹಾನುಭಾವರು ವಾಜಪೇಯಿ- ಮೋದಿ ಸುದ್ದಿ ಗೋಷ್ಠಿಯ ವಿಡಿಯೋದ ಆಯ್ದ ತುಣುಕನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿ ಮೋದಿ ಎಷ್ಟು ಉದ್ಧಟ ಎಂದು ಹೇಳಲೆತ್ನಿಸಿದ್ದರು. ಪೂರ್ಣ ವಿಡಿಯೋವನ್ನು ಅವರ ಮುಂದಿಟ್ಟಾಗ, ಅದರಲ್ಲಿ ವಾಜಪೇಯಿ, ಮೋದಿಯವರನ್ನು ಸಮರ್ಥಸಿಕೊಂಡದ್ದನ್ನು ಕಂಡು ಮುಖದಲ್ಲಿ ನೀರಿಳಿಯಲಾರಂಭಿಸಿತ್ತು. ಟಿ.ವಿ. ಸಂದರ್ಶನ ಕೊಡದೇ ಓಡಾಡುತ್ತಿರುವ ಮೋದಿ, ಭಾಷಣ ಮಾಡುತ್ತಾ ಈ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಹೊರಟಿರುವವ ಎಂದು ದಿನವೂ ಆಪ್ನವರು ಹೇಳುತ್ತಿದ್ದರೆ, ಒಂದರ ನಂತರ ಮತ್ತೊಂದು ವಾಹಿನಿಯಲ್ಲಿ ಮೋದಿ ಸಂದರ್ಶನ ಕೊಡಲಾರಂಭಿಸಿದರು. ಇನ್ನೂ ಆ ಸಂದರ್ಶನದ ಮೌಲ್ಯವೂ ಎಷ್ಟಿತ್ತೆಂದರೆ ಕೇಳಿದ ಪ್ರಶ್ನೆಗೆ ಉತ್ತರ ಇಷ್ಟು ಸುಲಭವಿದೆ ಎನ್ನುವಂತೆ ಮೋದಿ ಪ್ರತಿಕ್ರಿಯಿಸುತ್ತಿದ್ದರೆ ಈ ಬಾರಿ ಸಂದರ್ಶನದಿಂದ ಓಡಿಹೋಗುವ ಸರದಿ ಪತ್ರಕರ್ತರದ್ದಾ ಎಂದು ವಿಕ್ಷಕರಿಗೆ ಅನ್ನಿಸುವಂತಿತ್ತು. ಸಂದರ್ಶನಗಳಿಂದ ಮೋದಿಯವರಿಗೆ ಹೊಸ ಅಭಿಮಾನಿಗಳು ಹುಟ್ಟಿಕೊಂಡರೆ, ಇತ್ತ 'ಆಪ್ಟಾರ್ಡ್'ಗಳು ಮಾತ್ರ ಪ್ರತಿಯೊಂದು ಸಂದರ್ಶನವೂ ಪೂರ್ವ ನಿಗದಿತ ಎಂದು ಹೊಸ ಸಿದ್ಧಾಂತ ಮುಂದಿಟ್ಟರು.
ಅದೇನೇ ಇರಲಿ, ಮೋದಿ ಪ್ರಧಾನಿಯಾಗಬೇಕಾದರೆ ಅವರ ಪಕ್ಷಕ್ಕೆ 272 ಸ್ಥಾನಗಳ ಅವಶ್ಯಕತೆ ಇತ್ತಾದರೂ, ಕೇಜ್ರಿವಾಲ್, ಜಯಲಲಿತಾ, ನಿತೀಶ್ ಕುಮಾರ್, ಮಾಯಾವತಿ, ಮುಲಾಯಂ ಸಿಂಗ್ ಯಾದವ್ ಯಾರಿಗೂ 272ರ ಮ್ಯಾಜಿಕ್ ನಂಬರ್ನ ಅಗತ್ಯ ಇರಲಿಲ್ಲ. 40-50 ಸ್ಥಾನಗಳೊಂದಿಗೆ ಭಾಜಪಾ ಹೊರತುಪಡಿಸಿ ಮತ್ತ್ಯಾವುದೇ ಪಕ್ಷಕ್ಕೂ ಬೆಂಬಲ ಸೂಚಿಸಿ ತಮ್ಮ ಪ್ರಧಾನಿಯಾಗುವ ಕನಸನ್ನು ನನಸಾಗಿಕೊಳ್ಳುವ ಇರಾದೆ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ತಿಳಿದುಬರುತ್ತಿತ್ತು.
ಬಾಯಿ ಬಿಟ್ಟರೆ ಮೋದಿಯವರು ಅಂಬಾನಿ, ಅದಾನಿಯ ಪರವಾಗಿ ಕೆಲಸ ಮಾಡುತ್ತಾರೆಂದ ಕೇಜ್ರಿವಾಲ್ ವಾರಣಾಸಿಯಲ್ಲಿ 3 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋತಿದ್ದಾರೆ. ಇಡಿ ದೇಶಕ್ಕೆ ಅಂಬಾನಿ, ಅದಾನಿಯರು ಲಂಚ ಕೊಟ್ಟು ಇವರ ವಿರುದ್ಧ ಮತ ಚಲಾಯಿಸಲು ಹೇಳಿದ್ದಾರೆಂದು 'ಆಪ್ಟಾರ್ಡ್'ಗಳು ಹೇಳಿದರೆ ನಕ್ಕು ಸುಮ್ಮನಾಗಬೇಕಷ್ಟೇ. ಮೋದಿಯ ಅಲೆ ಇಲ್ಲ ಎಂದವರು, ಮೋದಿ ಅಲೆ ಕಾಣುತ್ತಿಲ್ಲ ಅಂದವರು, ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗಿಬಿಡುತ್ತೇನೆ ಎಂದವರ ಮುಂದಿನ ನಡೆ ಏನು ಎಂಬುದೇ ಇಂದಿನ ಪ್ರಶ್ನೆ.
-ಪ್ರವೀಣ್ ಪಟವರ್ಧನ್, ಬ್ಲಾಗಿಗ
praveen.patavardhan@gmail.com