ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮೋದಿ: ಹಳಿ ತಪ್ಪಿದ ಭಾರತ

ಇಡೀ ದೇಶದ ನಿರೀಕ್ಷೆಯನ್ನು ಮೀರಿ ಮೋದಿ ಬಲಿಷ್ಠ ಪ್ರಧಾನಿಯಾಗಿ...

Mainashree
Updated On : 22 May 2014, 10:19 am

ಇಡೀ ದೇಶದ ನಿರೀಕ್ಷೆಯನ್ನು ಮೀರಿ ಮೋದಿ ಬಲಿಷ್ಠ ಪ್ರಧಾನಿಯಾಗಿ ಹೊಮ್ಮಿದ್ದಾರೆ. ಹೌದು, ಈ ಬಾರಿಯ ಗೆಲುವು ಬಿಜೆಪಿಯ ಗೆಲುವಲ್ಲ, ಮೋದಿ ಗೆಲುವು. ಈ ಬಾರಿ ಜರುಗಿದ ಚುನಾವಣೆ ಒಂದು ಐತಿಹಾಸಿಕ ವ್ಯಂಗ್ಯ. ಈ ಚುನಾವಣೆ ಪಕ್ಷಗಳ ನಡುವೆ ಜರುಗಿದ ಸ್ಪರ್ಧೆಯಾಗಿರಲಿಲ್ಲ. ಒಂದು ಕಡೆ ಮೋದಿ, ಮತ್ತೊಂದು ಕಡೆ ಮೋದಿಯನ್ನು ವಿರೋಧಿಸುವ ಪಕ್ಷಗಳು-ಅವುಗಳ ನಡುವೆ ಜರುಗಿದ ಜಟಾಪಟಿ. ಮೋದಿಯ ಅಡಿಪಾಯವಾಗಿ ಬಿಜೆಪಿಯಿದ್ದರೂ, ಅಲ್ಲೂ ಸಹ ಎದ್ದಿದ್ದ ಅಪಸ್ವರಗಳು ಕ್ಷೀಣವಾಗಿರಲಿಲ್ಲ. ಎಷ್ಟರಮಟ್ಟಿನ ಸಾಮರ್ಥ್ಯ ಆ ಅಪಸ್ವರಗಳಲ್ಲಿತ್ತೆಂದರೆ, ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೂ 'ಬುದ್ಧಿಜೀವಿ' ಹಣೆಪಟ್ಟಿ ಅಂಟಿಸಿಕೊಂಡಿರುವ ಸಾಕಷ್ಟು ಸಾಹಿತಿಗಳು " ಬಿಜೆಪಿ ಗೆದ್ದರೂ ಮೋದಿ ಪ್ರಧಾನಿಯಾಗುವ ಸಾಧ್ಯತೆಗಳು ಕಡಿಮೆ" ಎಂದು ತೀರ ಗಂಭೀರ ಧ್ವನಿಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಈಗ ಅವರು, "ಮೋದಿಯನ್ನು ಬೆಂಬಲಿಸಿರುವವರು ಕೇವಲ ಶೇ. 33ರಷ್ಟು ಜನ ಮಾತ್ರ.. ಉಳಿದವರು ವಿರೋಧಿಸಿದ್ದಾರೆ" ಎನ್ನುವ ಹಾಸ್ಯಾಸ್ಪದ ಹೇಳಿಕೆಯ ಮೂಲಕ ಬತ್ತಿಹೋಗಿರುವ 'ಬುದ್ಧಿವಂತಿಕೆಯನ್ನು' ಸಮರ್ಥಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಮೋದಿ ಗೆಲುವು ಸಾಕಷ್ಟು ಬರಹಗಾರರಲ್ಲಿ ಹುಟ್ಟಿಸಲಾರದಷ್ಟು ಇರುಸು-ಮುರುಸನ್ನು ಮತ್ತೊಂದು ನೆಲೆಯಲ್ಲಿ ಉಂಟು ಮಾಡಿದೆ. ನನ್ನನ್ನೂ ಸೇರಿದಂತೆ ಬಹುತೇಕ ಸಮಾಜಮುಖಿ ಬರಹಗಾರರು ಮೋದಿ ಕುರಿತು ಎಲ್ಲಿಯೂ ಸಹ ಒಮ್ಮೆಯಾದರೂ ಬಹುವಚನ ಬಳಸಿಲ್ಲ! ಮೋದಿ ನಮ್ಮ ಬರಹಗಳಲ್ಲಿ ಆಕಾರ ಪಡೆದದ್ದೇ 2002ರ ಗೋಧ್ರಾ ಗಲಭೆಗಳ ನಂತರ. ಮೋದಿ ಸರ್ಕಾರದ ಅದಕ್ಷತೆಯಿಂದಾಗಿ ಅಥವಾ ಕುಮ್ಮಕ್ಕಿನಿಂದಾಗಿ ಅಪಾರ ಪ್ರಮಾಣದ ಮುಸ್ಲಿಮರ ಮಾರಣಹೋಮ ಸಂಭವಿಸಿತೆಂದು ನಂಬಿರುವ ಯಾರಿಗೂ ಮೋದಿ ಬಗ್ಗೆ ಗೌರವ ಹುಟ್ಟುವುದು ಸಾಧ್ಯವೇ ಇರಲಿಲ್ಲ. ಹಾಗಾಗಿ ಎಲ್ಲರೂ ನರಹಂತಕ, ಹಿಟ್ಲರ್, ಅಮಾನುಷ, ರಾಕ್ಷಸ, ಕ್ರಿಮಿನಲ್, ಪಾತಕಿ ಮುಂತಾದ ವಿಶೇಷಣಗಳನ್ನು ಬಳಸಿಯೇ ಮೋದಿಯನ್ನು ಬೆತ್ತಲುಗೊಳಿಸುತ್ತಿದ್ದದ್ದು. ಮತ್ತೊಂದು ಆ ಸರ್ಕಾರದಲ್ಲಿ ಅಂತಹ ಗಲಭೆಗಳು ಜರುಗದಿದ್ದರೂ, ಯಾವ ಕ್ಷಣದಲ್ಲಿ ಬೇಕಾದರೂ ಜರುಗಬಹುದೆನ್ನುವ ಸ್ಥಿತಿಯನ್ನು ಆತ ಪೋಷಿಸಿಕೊಂಡೇ ಬರುತ್ತಿದ್ದಾನೆನ್ನುವುದು ನಮ್ಮೆಲ್ಲರ ಅಭಿಮತವಾಗಿತ್ತು.
ಹಾಗೆಂದು ಆ ವ್ಯಕ್ತಿಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಜನತೆಗಿಲ್ಲವೆನ್ನುವ ಹತಾಶೆ ಯಾರಲ್ಲೂ ಮೂಡಿರಲಿಲ್ಲ. ಕಟು ಎಚ್ಚರಿಕೆಯಿಂದ ಆತ ಆಡುವ ಒಂದೊಂದೂ ಪದ, ತೆಗೆದುಕೊಳ್ಳುವ ನಿರ್ಧಾರ ಮತ್ತು ರೂಪಿಸುವ ಯೋಜನೆಗಳನ್ನು ಆತನ ವಿರೋಧಿಗಳು ಸದಾ ಗಮನಿಸುತ್ತಿದ್ದರು. ಆತನ ರಾಜ್ಯ ಸಮೃದ್ಧಿ ಪಥದಲ್ಲಿ ಸಾಗುತ್ತಿದೆಯೆಂದು ಯಾರಾದರೂ ಹೇಳಿದರೆ ಅದನ್ನು ಧಿಕ್ಕರಿಸುವಂತಹ ನೂರಾರು ಹೇಳಿಕೆಗಳು ಜೊತೆಜೊತೆಯಲ್ಲಿಯೇ ವ್ಯಕ್ತವಾಗುತ್ತಿದ್ದವು.
ಅಂತಹ ಪರಿಸ್ಥಿತಿ ಚಾಲ್ತಿಯಲ್ಲಿದ್ದಾಗ ಮೋದಿಯನ್ನು ಆಗಸದ ಎತ್ತರಕ್ಕೆ ಏರಿಸಿದ್ದು ಸಂಘಪರಿವಾರವಲ್ಲ, ಪ್ರಗತಿಪರ ಬುದ್ಧಿಜೀವಿಗಳು! ಪದೇ ಪದೇ ಆತ ಆ ಮಾರಣಹೋಮ ಕುರಿತು 'ಕ್ಷಮೆ' ಕೇಳಲಿ ಎಂದು ಆತ ಕಾಣುವ ಕಡೆಗಳಲ್ಲೆಲ್ಲಾ ಆಗ್ರಹಿಸತೊಡಗಿದರು. ಮೋದಿ ಬಿಡಿ, ಸಾಮಾನ್ಯರಿಗೂ ಅದರ ಹಿಂದಿರುವ ಹುನ್ನಾರ ಸುಲಭವಾಗಿ ಅರ್ಥವಾಗುತ್ತಿತ್ತು: ಅಕಸ್ಮಾತ್ ಬಾಯಿ ತಪ್ಪಿ ಆತ "ಕ್ಷಮೆ" ಕೇಳಿದರೆ, ನಂತರ ಅಂತಹ ಮಾರಣಹೋಮಕ್ಕೆ ಕೇವಲ "ಕ್ಷಮೆ" ಸಾಕಾಗುವುದಿಲ್ಲವೆಂದೂ, ಶಿಕ್ಷೆಯಾಗಲೇಬೇಕೆಂದು ಚಳವಳಿ ಹೂಡಬಹುದಿತ್ತು! ಹಾಗೂ ಮೋದಿ, ಒಂದು ಬಾರಿ ಎಲ್ಲ ಮನುಷ್ಯರೂ ಹೇಳುವಂತೆ ಸಹಜ ಧ್ವನಿಯಲ್ಲಿ, '... ನಮ್ಮ ತಪ್ಪಿರಲಿ, ಇಲ್ಲದಿರಲಿ... ರಸ್ತೆಯಲ್ಲಿ ಹೋಗುವಾಗ ನಮ್ಮ ಗಾಡಿಗೆ ಒಂದು ನಾಯಿಮರಿ ಸಿಲುಕಿ ಸತ್ತರೂ ನಮಗೆ ದುಃಖವಾಗುವುದಿಲ್ಲವೆ? ಅಂದಮೇಲೆ ಜನರು ಸತ್ತಾಗ...' ಎಂದು ಹೇಳಿದ ನಂತರ ತಿಳಿವಳಿಕೆಯುಳ್ಳ ಜನ ಮತ್ತೆ 'ಕ್ಷಮೆ'ಯ ಸಂಗತಿ ಎತ್ತಬಾರದಿತ್ತು. ಆದರೆ, ತಾವು ಟೀಕಿಸುತ್ತಿರುವವರು ಎರಡು ಮತ್ತು ಎರಡು ಕೂಡಿದರೆ ನಾಲ್ಕೆನ್ನುವ ಲೆಕ್ಕದ ಸತ್ಯವನ್ನು ಹೇಳಿದರೂ ವಿರೋಧಿಸಲೇಬೇಕೆನ್ನುವ ಮನಃಸ್ಥಿತಿ ಬೆಳೆಸಿಕೊಂಡಿರುವವರು, "ನೋಡಿ... ಈ ಮನುಷ್ಯ ಮುಸ್ಲಿಮರನ್ನು ನಾಯಿಮರಿಗಳೆಂದು ಪರಿಗಣಿಸಿದ್ದಾನೆ" ಎನ್ನುವ ಹುಯಿಲನ್ನು ಎಬ್ಬಿಸಿದರು! ಮೋದಿಯ ಅದಕ್ಷತೆಯನ್ನು ನಾವು ಖಂಡಿಸಬಹುದು. ಆದರೆ, ಅದು ಕೇವಲ ಅದಕ್ಷತೆಯಲ್ಲ, ಕುಮ್ಮಕ್ಕು ಎಂದು ಆರೋಪಿಸುವಾಗ ಅದು ಶಿಕ್ಷಾರ್ಹ ಅಪರಾಧವಾದುದರಿಂದ ಸಾಬೀತುಗೊಳಿಸಲು ನ್ಯಾಯಾಲಯದ ಮುಂದೆ ಹೋಗಬೇಕಾಗುತ್ತದೆ. ಮತ್ತು ನಮ್ಮ ಆರೋಪಗಳನ್ನು ಒಪ್ಪುವ ಅಥವಾ ನಿರಾಕರಿಸುವ ಮತ್ತು ಶಿಕ್ಷಿಸುವ ಅಧಿಕಾರವಿರುವುದು ನ್ಯಾಯಾಲಯಕ್ಕೆ ಮಾತ್ರ ಎಂದು ತಿಳಿದಿರುವಾಗ, ಮತ್ತು ಆ ನ್ಯಾಯಾಲಯಗಳು ಮೋದಿಗೆ ಕ್ಲೀನ್ ಚಿಟ್ ನೀಡಿದಾಗ, ನಾವು ಆತನ ಅದಕ್ಷತೆಯನ್ನು ಖಂಡಿಸಬೇಕೇ ಹೊರತು ಕುಮ್ಮಕ್ಕಿನ ಬಗ್ಗೆ ಮಾತನಾಡಬಾರದು.
----
ಸಾಮಾನ್ಯವಾಗಿ ವಿಷಯಾಧಾರಿತ ಅಂಶಗಳನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಸುವ ಬಿಜೆಪಿ, ವ್ಯಕ್ತಿಯೊಬ್ಬನನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವ ತೀರ್ಮಾನ ತೆಗೆದುಕೊಂಡಾಗಲೇ ನಮ್ಮ ಪ್ರಗತಿಪರರು ಮತ್ತು ಸಾಹಿತಿಗಳು ಕಣ್ಣು ತೆರೆಯಬೇಕಿತ್ತು. ಬಿಜೆಪಿ ತೋಡಿದ ಹೊಂಡದಲ್ಲಿ ಬೀಳಲು ಹೋಗಬಾರದಿತ್ತು. ಇಂದು ಮೋದಿ ಈ ಪ್ರಮಾಣದ ಪ್ರಚಂಡ ಗೆಲುವನ್ನು ಸಾಧಿಸುವಲ್ಲಿ ಆತನನ್ನು ಆರ್ಭಟಿಸುವ ಧ್ವನಿಯಲ್ಲಿ ವಿರೋಧಿಸಿದವರ ಕೊಡುಗೆ ಅಪಾರವಾಗಿದೆ. ಮೋದಿಯನ್ನು ಬಿಜೆಪಿ ಮುಖವಾಣಿ ಮಾಡಿಕೊಂಡಿದ್ದನ್ನು ನಮ್ಮ ಬುದ್ಧಿಜೀವಿಗಳೆನಿಸಿಕೊಂಡವರು ಖಂಡಿಸಬೇಕಿತ್ತೇ ಹೊರತು ಮೋದಿಯನ್ನಲ್ಲ. ಮೋದಿಯನ್ನು ಭವಿಷ್ಯದ ಪ್ರಧಾನಿಯೆಂದು ಬಿಂಬಿಸುವಾಗಲೇ ಬಿಜೆಪಿಗೆ ಆ ನಿರ್ಧಾರವನ್ನು ಈ ದೇಶದ ಬುದ್ಧಿಜೀವಿಗಳು ಕಟುವಾಗಿ ವಿರೋಧಿಸುತ್ತಾರೆನ್ನುವ ಅರಿವಿತ್ತು. ಮತ್ತು ಆ ರೀತಿ ವಿರೋಧಿಸಲೆಂದೆ ಬಯಸಿದ್ದರು. ಮತ್ತು 'ಬುದ್ಧಿ'ಯನ್ನು ಬಳಸಲೂ ಸಹ ಹೋಗದೆ ನಮ್ಮ ಬುದ್ಧಿಜೀವಿಗಳು ಅದೇ ರೀತಿ ಕುರುಡಾಗಿ ವಿರೋಧಿಸಿದರು. ಅದೂ ಯಾವ ಪ್ರಮಾಣದಲ್ಲಿ? ಒಬ್ಬ ಬುದ್ಧಿಜೀವಿ, ಮೋದಿ ಪ್ರಧಾನಿಯಾದರೆ ದೇಶ ವಿಭಜನೆಯಾಗುತ್ತದೆಂದರೆ, ಮತ್ತೊಬ್ಬರು 'ಸಂವಿಧಾನವನ್ನು' ನಾಶ ಮಾಡುತ್ತಾನೆಂದರು! ನಮ್ಮ 'ಬುದ್ಧಿ ದೀವಿಗೆ' ಅನಂತಮೂರ್ತಿಯವರಂತೂ ಆತ ಪ್ರಧಾನಿಯಾದರೆ, ದೇಶದಲ್ಲೇ ಇರುವುದಿಲ್ಲವೆಂದು ಹೇಳಿ, ಇಡೀ ದೇಶದ ಗಮನ ಸೆಳೆದರು. ಅನಂತಮೂರ್ತಿಯವರು ಇಂದು ಆ ಹೇಳಿಕೆ ಆವೇಶದಿಂದ ಕೂಡಿತ್ತೆಂದು ಹೇಳಿ, ಅದನ್ನು ಖಂಡಿಸುವವರನ್ನು ಖಂಡಿಸುವುದು ಖಂಡಿತವಾಗಿಯೂ ಅವರಿಗೆ ಶೋಭೆ ನೀಡುವುದಿಲ್ಲ. ಸಾಹಿತಿ ಪುಢಾರಿಯ ಧ್ವನಿಯಲ್ಲಿ ಮಾತನಾಡಬಾರದು. ಬಳಸುವ ಪದಗಳನ್ನು ಜವಾಬ್ದಾರಿಯಿಂದ ಬಳಸಲು ಇತರರಿಗೆ ಸಲಹೆ ನೀಡುವ ಅನಂತಮೂರ್ತಿಯವರು ಆ ಪದಗಳನ್ನು ಬಳಸಿದ್ದು ಬೇಜವಾಬ್ದಾರಿಯಲ್ಲವೆ? ಮತ್ತು ಇಲ್ಲಿ ಇನ್ನೊಂದು ಸೂಕ್ಷ್ಮವಿದೆ. ಮೋದಿ ಗೆದ್ದಿದ್ದರಿಂದಾಗಿ ಅನಂತಮೂರ್ತಿಯವರು ದೇಶ ಅಥವಾ ಜೀವ ತ್ಯಾಗ ಮಾಡಲಿ ಎನ್ನುವ ಕುಹಕಿಗಳ ಹೇಳಿಕೆಗಳನ್ನು ಬದಿಗಿರಿಸಿ ನಾವು ಯೋಚಿಸಬೇಕಾಗುತ್ತದೆ. ಅಂತಹುದೆ ಹೇಳಿಕೆಯನ್ನು ದೇವೇಗೌಡರು ಅಥವಾ ಇತರ ರಾಜಕಾರಣಿಗಳು ಹೇಳಿದಾಗ ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಆದರೆ, ರಾಷ್ಟ್ರಮಾನ್ಯತೆ ಗಳಿಸಿರುವ ಒಬ್ಬ ಪ್ರಸಿದ್ಧ ಲೇಖಕ ಹೇಳಿದಾಗ ಗಂಭೀರವಾಗಿ ಸಾಕಷ್ಟು ಓದುಗರು ತೆಗೆದುಕೊಳ್ಳುತ್ತಾರೆ. ಏಕೆಂದರೆ, ಲೇಖಕ ರಾಜಕಾರಣಿಗಳಂತಲ್ಲ. ಬಹುದೂರದಲ್ಲಿರುವ, ದೂರಕಾಲದಲ್ಲಿರುವ ಸತ್ಯಗಳು ಆತನ ಆಲೋಚನೆಗೆ ದಕ್ಕುತ್ತವೆ. ಮೋದಿ ಪ್ರಧಾನಿಯಾದ ದೇಶದಲ್ಲಿ ತಾನಿರಲು ಒಪ್ಪುವುದಿಲ್ಲವೆನ್ನುವ ಹೇಳಿಕೆಯು ಆಂತರ್ಯದಲ್ಲಿ ಆತನಿಂದ ಆಗಬಾರದ, ನಾವು ಸಹಿಸಿಕೊಳ್ಳಲು ಸಾಧ್ಯವಾಗದ ಪಾತಕ ಆತನಿಂದ ಸಂಭವಿಸುತ್ತದೆನ್ನುವ ಅರ್ಥ ಹೊರಡುವುದಿಲ್ಲವೆ? ಅದನ್ನು ಪ್ರಸ್ತುತ ವಾಸ್ತವದ ಜೊತೆ ಇಟ್ಟು ನೋಡಿದಾಗ, ಮೋದಿ ಪ್ರಧಾನಿಯಾದರೆ ಮುಸ್ಲಿಮರ ಜನಾಂಗೀಯ ಹತ್ಯೆ ಜರುಗೇ ತೀರುತ್ತದೆಂದಲ್ಲವೆ? ಯಾವ ಕಾರಣಕ್ಕೂ ಆತನಿಂದ ತನಗಾಗಲಿ, ತನ್ನ ಜನಾಂಗಕ್ಕಾಗಲಿ ಅಥವಾ ಇತರ ಹಿಂದೂ ಸಮುದಾಯಗಳಿಗಾಗಲಿ ದೈಹಿಕ ಹಲ್ಲೆಯಾಗುವ ಸಾಧ್ಯತೆಗಳೆ ಇಲ್ಲವೆಂದು ಅರಿತಿರುವ ಅನಂತಮೂರ್ತಿ, ಕಾರ್ನಾಡ್‌ರಂಥವರ ಹೇಳಿಕೆಗಳನ್ನು ಮೀರಿ ಮೋದಿ ಪ್ರಧಾನಿಯಾದ ಈ ಸಂದರ್ಭ ಮುಸ್ಲಿಮರ ಎದೆಯಲ್ಲಿ ಎಂತಹ ಆತಂಕವನ್ನು ಹುಟ್ಟಿಸಬಹುದು? ಆ ಜನಾಂಗವೆ ಆ ಪ್ರಮಾಣದ ಆತಂಕವನ್ನು ವ್ಯಕ್ತಪಡಿಸದಿರುವಾಗ, ಅಂತಹ ಹೇಳಿಕೆಗಳನ್ನು ನೀಡಿ, ಅವರನ್ನು ಆತಂಕಕ್ಕೆ ದೂಡಲು ಯತ್ನಿಸುವುದು ಸಮಂಜಸವೆ? ಸಾಹಿತಿಗಳಿಗೆ ಶೋಭೆಯೆ? ಮತ್ತು ಮೋದಿ ಪದೇ ಪದೇ ಅಂತಹ ಪ್ರಮಾದ ಭವಿಷ್ಯದಲ್ಲಿ ಸಂಭವಿಸುವುದಿಲ್ಲವೆಂದು ಒತ್ತಿ ಒತ್ತಿ ಹೇಳಿದಾಗಲೂ, ನಾವು ಅದನ್ನು ತಿರಸ್ಕರಿಸುತ್ತಾ ಹೋದರೆ ಅಂತಹ ಪ್ರಮಾದ ಸಂಭವಿಸಲೆಂದು ನಾವು ಬಯಸಿದ ಹಾಗಾಗುವುದಿಲ್ಲವೆ? ಸದಾ ಮುಸ್ಲಿಮರು ಆತಂಕದಿಂದ ಬಳಲುವುದು ಈ ದೇಶದ ಪ್ರಗತಿಪರ ಸಾಹಿತಿಗಳ ಸುಪ್ತ ಬಯಕೆಯೆ? ಇಲ್ಲಿ ಬಹುತೇಕ ಬರಹಗಾರರು ಬಹಿರಂಗವಾಗಿ ಹೇಳಲು ಹಿಂಜರಿಯುವ ಆದರೆ ಖಾಸಗಿಯಾಗಿ ಚರ್ಚಿಸುವ ಸಂಗತಿಯೊಂದನ್ನು ನನಗೆ ದಾಖಲಿಸಬೇಕೆನ್ನಿಸಿದೆ: ಮೋದಿ ವಿರುದ್ಧ ತೀವ್ರವಾದ ವ್ಯಕ್ತಿಗತ ಆತಂಕವನ್ನು ವ್ಯಕ್ತಪಡಿಸುತ್ತಿರುವ ಬಹಳಷ್ಟು ಸಾಹಿತಿಗಳು ವೈದಿಕ ಜನಾಂಗಕ್ಕೆ ಸೇರಿದವರು. ಅಂದರೆ ಸೂಕ್ಷ್ಮ ಅರ್ಥವಾಯಿತೆ? ಆಳದಲ್ಲಿ ಅವರಿಗೆ ಮುಸ್ಲಿಮರು ತಮ್ಮಂತೆಯೇ ಮನುಷ್ಯರಾಗಿ ನಿಂತು ಪ್ರಮಾದಗಳನ್ನು ಹಿಮ್ಮೆಟ್ಟಿಸುವ ಶಕ್ತಿ ಬೆಳೆಸಿಕೊಳ್ಳುವುದು ಇಷ್ಟವಿಲ್ಲ. ಅವರು ಆತಂಕದಿಂದ ಬಳಲುತ್ತಿರಬೇಕು; ತಾವು ರಕ್ಷಿಸುವ ಭರವಸೆ ನೀಡುತ್ತಿರಬೇಕು.
ಸಂಘ ಪರಿವಾರಕ್ಕೆ ಹೇಗೋ ಹಾಗೆ ದೇಶದ ಪ್ರಗತಿಪರರಿಗೂ ಕೂಡಾ ಮುಸ್ಲಿಮರು ಮುಸ್ಲಿಮರೆನ್ನುವ ಚೌಕಟ್ಟಿನಲ್ಲಿಯೆ ಬಂಧಿಯಾಗಿರಬೇಕು; ತಾಜಾ ಭಾರತೀಯರಾಗಬಾರದು. ರಾಜಕೀಯ ಕಾರಣಗಳಿಗಾಗಿ ಬಿಜೆಪಿ ಮುಸ್ಲಿಮರನ್ನು ಮುಸ್ಲಿಮರನ್ನಾಗಿಯೆ ಇಡಲು ಬಯಸಿದರೆ, ತಮ್ಮೊಳಗಿರುವ ಮಾನವೀಯ ಸಂವೇದನೆ(?)ಗಳನ್ನು ಪ್ರಖರವಾಗಿ ಹೊರಹೊಮ್ಮಿಸಲು ಪ್ರಗತಿಪರರು ಅವರನ್ನು ಸಾಮಾಜಿಕವಾಗಿ ಮುಸ್ಲಿಮರಾಗಿಯೆ ಸದಾ ಇರಬೇಕೆಂದು ಬಯಸುತ್ತಾರೆ. ಶೋಷಿಸುವುದಕ್ಕೆ ಸಂಘಿಗಳಿಗೆ ಅವಕಾಶವಿದ್ದಾಗಲೆ ತಾವು ರಕ್ಷಕರಾಗಲು ಸಾಧ್ಯವೆಂದು ಅವರ ಸುಪ್ತ ಮನದ ನಂಬಿಕೆ. ಇಲ್ಲವಾದರೆ ಈ ಕ್ಷಣದವರೆಗೂ ಜಾತ್ಯತೀತತೆ ಕುರಿತು ಅಷ್ಟೆಲ್ಲಾ ಮಾತನಾಡುವವರು ಮುಸ್ಲಿಮರಲ್ಲೇಕೆ ಜಾತ್ಯತೀತ ಸಿದ್ಧಾಂತವನ್ನು ಬಿತ್ತಲು ಯತ್ನಿಸಿಲ್ಲ?
ಇಲ್ಲೊಂದು ಎದ್ದು ಕಾಣುವ ಸ್ವಾರಸ್ಯಕರ ಸಂಗತಿಯಿದೆ: ಇಡೀ ದೇಶದ ಎಲ್ಲೆಡೆ ಸಾಮಾನ್ಯ ಬ್ರಾಹ್ಮಣರು ಮೋದಿಯನ್ನು ಮೆಚ್ಚಿ ಮಾತನಾಡುತ್ತಿದ್ದರು. ಆತನ ಗೆಲುವಿಗಾಗಿ ಪೂಜಿಸುತ್ತಿದ್ದರು. ಮೋದಿ ತಮ್ಮ ಜಾತಿಗೆ ಸೇರಿದವನಲ್ಲವೆನ್ನುವ ಸಂಗತಿ ಅವರನ್ನು ಎಳ್ಳಷ್ಟೂ ಬಾಧಿಸಿರಲಿಲ್ಲ. ಏಕೆಂದರೆ, ಅವರು ಹಿಂದೂ ಧರ್ಮವನ್ನು ಪುರಸ್ಕರಿಸುವ ಜಾತ್ಯತೀತರು. ಆದರೆ, ಪ್ರಗತಿಪರ 'ಜಾತ್ಯತೀತ' ವೈದಿಕ ಮನಸ್ಸುಗಳು ಮೋದಿಯನ್ನು ರಾಕ್ಷಸನನ್ನಾಗಿ ಚಿತ್ರಿಸಲು ಹೆಣಗುತ್ತಿದ್ದವು. ಅಕಸ್ಮಾತ್ ಮೋದಿ ಬ್ರಾಹ್ಮಣ ಜಾತಿಗೆ ಸೇರಿದ್ದರೆ ಅಥವಾ ಬ್ರಾಹ್ಮಣ ಜಾತಿಗೆ ಸೇರಿದವರು ಅಂತಹ ಮಾರಣಹೋಮವನ್ನು ಎಸಗಿದ್ದರೆ ಖಂಡಿತವಾಗಿಯೂ ಆತನನ್ನು ಮೊಗುಂ ಆಗಿ ವೇದಗಳ 'ಇಂದ್ರ'ನ ಅವತಾರವನ್ನಾಗಿಸುತ್ತಿದ್ದರು. ಶೂದ್ರ ರಾಕ್ಷಸ, ವೈದಿಕ ಇಂದ್ರ-ವ್ಯತ್ಯಾಸವೆಲ್ಲಿದೆ?! ಇದು ಪ್ರಗತಿಪರ ಅವೈದಿಕರಲ್ಲಿ ಭುಗಿಲೇಳುವ ಸಂದೇಹ. ಅದಕ್ಕೆ ಪೂರಕವೆನ್ನುವಂತೆ ಬಿಜೆಪಿಯಿಂದ ಸೋಲನ್ನನುಭವಿಸಿದ್ದರೂ ಪ್ರಗತಿಪರ ರಾಜಕಾರಣಿಯೆಂದೆ ಪರಿಗಣಿತವಾಗಿರುವ ಎಚ್.ವಿಶ್ವನಾಥ್ ಸಂದರ್ಶನವೊಂದರಲ್ಲಿ ಮೋದಿಯವರನ್ನು 'ಶೂದ್ರ ಧೀಶಕ್ತಿ' ಎಂದು ಪ್ರಶಂಸಿಸಿದ್ದಾರೆ.
ಬಹಳಷ್ಟು ಪ್ರಗತಿಪರರಿಗೆ ತಿಳಿದಿರದ ಸಂಗತಿಯೆಂದರೆ, ಮುಸ್ಲಿಮರು ತಮ್ಮನ್ನು ಓಲೈಸಲು ಬಯಸುವುದಿಲ್ಲ; ಘನತೆಯಿಂದ ಸಮಾನನಂತೆ ಕಾಣಲು ಬಯಸುತ್ತಾರೆ. ಅವರು ಕರುಣೆಗಾಗಿ ಹಾತೊರೆಯುತ್ತಿಲ್ಲ; ತಮ್ಮನ್ನು ಸಹಜ ಭಾರತೀಯರಂತೆ ನಡೆಸಿಕೊಳ್ಳಲು ಬಯಸುತ್ತಿದ್ದಾರೆ. ಹಿಂದೂಗಳಲ್ಲಿರುವ ಡಂಭಾಚಾರವನ್ನು, ಮೌಢ್ಯತೆಯನ್ನು, ಅಂಧ ಪೂಜಾಪದ್ಧತಿಗಳನ್ನು ಖಂಡಿಸುವ ಪ್ರಗತಿಪರರು ಮುಸ್ಲಿಂ ಸಮುದಾಯದಲ್ಲಿ ಅವನ್ನು ಗಟ್ಟಿಗೊಳಿಸಲು ಬಯಸುವುದು ಈ ದೇಶದ ವಿಪರ್ಯಾಸ. ಇತ್ತೀಚೆಗೆ ಜರುಗಿದ ಮೌಢ್ಯತೆ ಕುರಿತ ಸಂವಾದವೊಂದರಲ್ಲಿ "ನ್ಯಾಯಕ್ಕಾಗಿ ನಾವು" ಸಂಘಟನೆಯ ವತಿಯಿಂದ ಇಂದೂಧರ ಹೊನ್ನಾಪುರ ಮತ್ತು ನಾನು ತೀರಾ ಮುಂಜಾವಿನಲ್ಲಿ ಧ್ವನಿ ಬಿತ್ತರವಾಗುವ 'ಸುಪ್ರಭಾತ'ವನ್ನು ನಿಲ್ಲಿಸಲು ಕಾನೂನು ಮಾಡಬೇಕೆಂದು ಪ್ರತಿಪಾದಿಸಿದಾಗ ನೆರೆದಿದ್ದವರೆಲ್ಲರೂ ಅದನ್ನು ಸ್ವಾಗತಿಸಿ, ಅದೇ ರೀತಿ ಮಸೀದಿಗಳಲ್ಲಿ ಕೂಗುವ 'ಅಜಂ' ಅನ್ನು ನಿಯಂತ್ರಿಸಬೇಕೆಂದಾಗ ಒಪ್ಪಲಿಲ್ಲ. ಇತರರಿರಲಿ, ಎ.ಕೆ.ಸುಬ್ಬಯ್ಯ, ಲಲಿತಾ ನಾಯಕ್ ಮತ್ತು ಗೋವಿಂದ ರಾವ್‌ರಂತಹ ಘಟಾನುಘಟಿಗಳೆ ಅದನ್ನು ನಿರಾಕರಿಸಿದರು. ಸಭೆಯಲ್ಲಿದ್ದ ಒಬ್ಬ ಮುಸ್ಲಿಂ 'ಪ್ರಗತಿ'ಪರರು ಅದನ್ನು ಧಾರ್ಮಿಕ ಸಂಗತಿಯೆಂದು ಹೇಳಿದಾಗ ಅವರ ಮಂಡನೆಯನ್ನು, ಒಪ್ಪಿ ನಮ್ಮ ಆಗ್ರಹವನ್ನು ತಿಳಿಗೊಳಿಸಿದರು. ನಂತರ ಊಟ ಮಾಡುವಾಗ ನಾವು ಅದನ್ನು ಪ್ರಸ್ತಾಪಿಸಿದೆವು. "ಅದು ಸೂಕ್ಷ್ಮ ಸಂಗತಿ. ಅದು ಸರಿಯಲ್ಲವೆಂದು ಗೊತ್ತು.. ಆದರೆ ನಾವು ಹಾಗೆ ಹೇಳುವ ಮೂಲಕ ಸಂಘ ಪರಿವಾರದ ಪರ ನಿಂತಂತಾಗುತ್ತದೆ..." ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಏನು ಹೇಳುವುದು?
ಇದುವರೆಗೂ ಒಬ್ಬನೇ ಒಬ್ಬ ಪ್ರಗತಿಪರ ವ್ಯಕ್ತಿ ಬುರ್ಖಾ ವಿರುದ್ಧ ಮಾತನಾಡಿಲ್ಲ. ಮಾತನಾಡಲು ಬಯಸುವುದಿಲ್ಲ. ಪಾಕಿಸ್ತಾನದಂತಹ ಇಸ್ಲಾಮ್ ರಾಷ್ಟ್ರದಲ್ಲಿಯೆ ಬುರ್ಖಾ ವಿರುದ್ಧ ಕೂಗು ಎದ್ದಿರುವಾಗಲೂ ನಮ್ಮ ದೇಶದಲ್ಲಿ ಕಡೆಯ ಪಕ್ಷ ಮುಸ್ಲಿಂ ಪ್ರಗತಿಪರರನ್ನು ಆ ಕುರಿತು ಧ್ವನಿ ಎತ್ತುವಂತೆಯೂ ಹೇಳುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ನಾವು, ಸಲ್ಮಾನ್ ರಶ್ದಿ ಪುಸ್ತಕಕ್ಕೆ ಬ್ಯಾನ್ ಮಾಡಿದ್ದನ್ನು ಸ್ವಾಗತಿಸುತ್ತೇವೆ. "ಇಷ್ಟ ಇಲ್ಲದಿದ್ದವರು ಅದನ್ನು ಓದುವುದು ಬೇಡ. ಆದರೆ, ಆ ಪುಸ್ತಕವನ್ನು ನಿಷೇಧಿಸಬೇಡಿ..." ಎಂದು ಒಬ್ಬನೇ ಒಬ್ಬ ಬುದ್ಧಿಜೀವಿ ಹೇಳುವುದಿಲ್ಲ. ಹಾಗೆ ಹೇಳಲು ಅವರಿಗೆ ಭೀತಿಯಿಲ್ಲ. ಆದರೆ, ಹಾಗೆ ಹೇಳುವ ಮೂಲಕ ಮುಸ್ಲಿಮರ ಮನಸ್ಸನ್ನು ನೋಯಿಸಬಾರದೆಂದು ನಮ್ಮ ಪ್ರಗತಿಪರರ ನಿಲುವು! ಆದರೆ, ಹಾಗೆ ಮಾಡುವುದರ ಮೂಲಕ ಬಹುಸಂಖ್ಯಾತ ಮುಸ್ಲಿಮರನ್ನು ನಾವು ಕಂದಾಚಾರದಲ್ಲೇ ಇಡಲು ಬಯಸುತ್ತಿದ್ದೇವೆನ್ನುವುದು ಅವರ ಗಮನಕ್ಕೆ ಬಂದಿಲ್ಲ. ಸದೃಢ ರಾಷ್ಟ್ರ ಮತ್ತು ಜನಾಂಗವನ್ನು ರೂಪಿಸುವಲ್ಲಿ ಹುಸಿ ಭಾವನೆಗಳಿಗೆ ಮಹತ್ವ ನೀಡಲಾಗದೆಂದು ಜನರನ್ನು ಎಚ್ಚರಿಸಬೇಕಾದವರೆ ಇಂತಹ ನಿಲುವುಗಳನ್ನು ಹೊಂದಿರುವಾಗ ಒಟ್ಟಾರೆ ಪ್ರಗತಿ ಹೇಗೆ ಸಾಧ್ಯ?
ಶುದ್ಧ ರಾಜಕೀಯ ರಂಗವನ್ನೇ ತೆಗೆದುಕೊಳ್ಳಿ.  ಪ್ರಿಯಾಂಕ ಗಾಂಧಿಯ ಪತಿ ರಾಬರ್ಟ್ ವಾದ್ರಾನನ್ನು ಬಿಜೆಪಿ ಟೀಕಿಸಿದಾಗ, ಅದನ್ನು ಬದಿಗೆ ಸರಿಸುವುದು ಸೂಕ್ತವೆ? ಅಂತಹ ಪ್ರತಿಷ್ಠಿತ ಕುಟುಂಬದೊಡನೆ ಸಂಬಂಧ ಬೆಳೆಸಿಕೊಂಡಿರುವ ವ್ಯಕ್ತಿ ಭ್ರಷ್ಟಾಚಾರದ ಆರೋಪ ಎದುರಿಸುವ ಸ್ಥಿತಿಗೆ ತಲುಪಿದ್ದನ್ನು ಬಲವಾಗಿ ಖಂಡಿಸಬೇಕಿತ್ತು. ಪದೇ ಪದೇ ಪ್ರಿಯಾಂಕ ಗಾಂಧಿ, "ನನ್ನ ಕುಟುಂಬದವರನ್ನು ಟೀಕಿಸಿದರೆ ಸುಮ್ಮನಿರುವುದಿಲ್ಲ" ಎಂದು ಹೆಣ್ಣು ಜನಾರ್ದನ ರೆಡ್ಡಿಯಂತೆ ಆರ್ಭಟಿಸಿದಾಗ, ಅದು ಘನತೆಯಲ್ಲವೆಂದು ಟೀಕಿಸಬೇಕಿತ್ತು. ಮತ್ತು 'ಜಾತ್ಯತೀತ' ಸಿದ್ಧಾಂತವನ್ನು ಬಂಡವಾಳ ಮಾಡಿಕೊಂಡು, ಅದರ ರಕ್ಷಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣವನ್ನು ಅರಸೊತ್ತಿಗೆಗಳಂತೆ ರೂಢಿಸಿದ ದೇವೇಗೌಡ, ಮುಲಾಯಂ ಸಿಂಗ್ ಯಾದವ್, ಲಾಲೂ, ಕರುಣಾನಿಧಿ ಮುಂತಾದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಬೇಕಿತ್ತು. 'ಜಾತ್ಯತೀತ' ಎನ್ನುವುದು ಕೇವಲ ಒಣ ರಾಜಕೀಯ ಸಿದ್ಧಾಂತವಲ್ಲ; ಬದುಕಿನಲ್ಲಿ ನಾವು ರೂಢಿಸಿಕೊಳ್ಳಬಹುದಾದ ಉನ್ನತ ಧೋರಣೆಯೆನ್ನುವುದನ್ನು ಸಾಮಾನ್ಯರಿಗೆ ಮನದಟ್ಟು ಮಾಡಿಸಬೇಕಿತ್ತು. ಉಪನಿಷತ್ ದ್ರಷ್ಟಾರರು, ವಚನಕಾರರು, ತಮಿಳಿನ ಸಿದ್ಧರು, ಸೂಫಿಗಳು, ಬಂಗಾಳದ ಬೋಲ್‌ಗಳು ಬೋಧಿಸುವ, ರೂಢಿಸಿಕೊಂಡಿರುವ ಧೋರಣೆ ಅದೆಂದು ಅವರಾದರೂ ಸ್ಪಷ್ಟವಾಗಿ ಗ್ರಹಿಸಬೇಕಿತ್ತು.
ಬಿಜೆಪಿ ನೂರಕ್ಕೆ ನೂರರಷ್ಟು ಬಲಪಂಥೀಯ ಪಕ್ಷ. ಹಾಗೆಂದು ಅದು ದೇಶದ ಬಗ್ಗೆ ಅಥವಾ ಜನಗಳ ಹಿತಾಸಕ್ತಿಯ ಬಗ್ಗೆ ಕಾಳಜಿಯಿಲ್ಲವೆಂದು ಅರ್ಥೈಸಬಾರದು. ಇಂಗ್ಲೆಂಡ್ ಸೇರಿದಂತೆ ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಸಾಕಷ್ಟು ಬಾರಿ ಬಲಪಂಥೀಯ ಪಕ್ಷಗಳು ಸರ್ಕಾರ ನಡೆಸಿವೆ ಅಥವಾ ಅಭಿವೃದ್ಧಿ ಕಾರ್ಯಗಳು ಗಮನಾರ್ಹವಾಗಿ ಜರುಗಿವೆ. ಆದರೆ, ಲೈಂಗಿಕ ಅಲ್ಪಸಂಖ್ಯಾತರು, ವಿವಾಹ ಕಾಯ್ದೆ, ಅಬಾರ್ಷನ್ ಮುಂತಾದ ಸಮಸ್ಯೆಗಳಲ್ಲಿ ಅವು ಶಾಸ್ತ್ರಾಧಾರಿತ ಸಾಂಪ್ರದಾಯಿಕ ಧೋರಣೆಗೆ ಹೆಚ್ಚು ಒತ್ತು ನೀಡುತ್ತಿದ್ದವು. ಅಂದರೆ, ಬಲ-ಎಡ ಎನ್ನುವುದು ಧೋರಣೆಗೆ ಸಂಬಂಧಿಸಿದ್ದು. ಎಸ್.ಎಲ್.ಭೈರಪ್ಪನವರು ಭಾವಿಸಿರುವಂತೆ (ಭ್ರಮಿಸಿರುವಂತೆ?) ಅದು ಬಯ್ಗುಳದ ಪದವಲ್ಲ. ನನ್ನ ತಂದೆತಾಯಿ, ದೊಡ್ಡಪ್ಪ ಮುಂತಾದ ಎಲ್ಲ ಹಿರಿಯರೂ ಅಕ್ಷರಶಃ ಬಲಪಂಥೀಯರಾಗಿದ್ದರು. ಹಾಗೆಂದು ಎಳ್ಳಷ್ಟೂ ಅಮಾನವೀಯ ಸಂವೇದನೆಗಳನ್ನು ಇಟ್ಟುಕೊಂಡಿರಲಿಲ್ಲ. ನನ್ನ ದೃಷ್ಟಿಯಲ್ಲಿ ಬಲಪಂಥೀಯ ಧೋರಣೆ ನಮ್ಮ ಬದುಕಿನ ನಡೆಯ ದಾರಿಯನ್ನು ಇಕ್ಕಟ್ಟುಗೊಳಿಸುತ್ತದೆ. ಎಡಪಂಥೀಯ ಧೋರಣೆ ದಾರಿಯನ್ನು ವಿಶಾಲಗೊಳಿಸುತ್ತದೆ. ಆದರೆ, ಕಿರಿದಾದ ರಸ್ತೆಯಲ್ಲಿ ಅಪಘಾತಗಳು ಕಡಿಮೆಯಿದ್ದು, ಹೆದ್ದಾರಿಯಲ್ಲಿ ಅವು ಹೆಚ್ಚಿರುವ ಸಾಧ್ಯತೆಗಳ ಬಗ್ಗೆಯೂ ನಮಗೆ ಗ್ರಹಿಕೆಯಿರಬೇಕು. ಅಪಘಾತವಾಗದಂತೆ ರಸ್ತೆಯಲ್ಲಿ ಸಾಗುವುದು ಮುಖ್ಯ.
ಸ್ವಾತಂತ್ರ್ಯ ಗಳಿಸಿದ ಮೂರು ದಶಕಗಳ ಹೊತ್ತಿಗೆ ನಮ್ಮ ದೇಶ ಸಮರ್ಪಕವಾದ ಹಳಿಯ ಮೇಲೆ ಸಾಗುತ್ತಿದೆಯೇನೊ ಎನ್ನುವ ಭರವಸೆ ಉಂಟಾಗತೊಡಗಿತ್ತು. ದಲಿತರು ಆತ್ಮಾಭಿಮಾನ ಬೆಳೆಸಿಕೊಳ್ಳತೊಡಗಿದ್ದರು; ತಮ್ಮ ಹಕ್ಕುಗಳನ್ನು ಅರಿವಿಗೆ ತಂದುಕೊಳ್ಳತೊಡಗಿದ್ದರು. ಮುಸ್ಲಿಮರು ಸಮಪಾತಳಿಯ ಮೇಲೆ ಬದುಕು ಕಟ್ಟಿಕೊಳ್ಳತೊಡಗಿದ್ದರು. ಆದರೆ, ತನಗೆ ಎದುರಾಳಿಗಳೆ ಇಲ್ಲವೇನೋ ಎನ್ನುವಂತೆ ವರ್ತಿಸತೊಡಗಿದ ಕಾಂಗ್ರೆಸ್ ಪಕ್ಷ ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಒತ್ತುಕೊಡದೆ ವ್ಯಾಪಕ ಭ್ರಷ್ಟಾಚಾರ ಮತ್ತು ಗುಂಪುಗಾರಿಕೆ ರಾಜಕಾರಣಕ್ಕೆ ದಿಡ್ಡಿ ಬಾಗಿಲು ತೆರೆಯಿತು. ಅದರ 'ಜಾತ್ಯತೀತ' ಧೋರಣೆಯಲ್ಲಿ ಒಡೆದು ಆಳುವ ನೀತಿ ಅಡಗಿತ್ತೆ ಹೊರತು ಸಮಾಜದಲ್ಲಿ ಘನತೆಯ ಸಮಾನತೆಯನ್ನು ತರುವುದಾಗಿರಲಿಲ್ಲ. ಅದರ ಅವಧಿಯಲ್ಲೆ 'ಕಪ್ಪು ಹಣ' ವಿದೇಶದಲ್ಲಿ ಯಥೇಚ್ಛವಾಗಿ ಠೇವಣಿಯಾದದ್ದನ್ನು ಬಿಜೆಪಿಯನ್ನು ವಿರೋಧಿಸುವ ನಾವು ಅರ್ಥ ಮಾಡಿಕೊಳ್ಳಬೇಕು.
ಇಂದು ಕಾಂಗ್ರೆಸ್ ಛಿದ್ರವಾದ ಹಡಗಾಗಿದೆ. ಕೇವಲ ಎರಡು-ಮೂರು ರಾಜ್ಯಗಳಲ್ಲೆ ಅಲ್ಪಾವಧಿಗೆ ಸರ್ಕಾರ ನಡೆಸಿದ್ದರೂ ಎಡಪಕ್ಷಗಳ ಸಿದ್ಧಾಂತ ಮತ್ತು ಆದರ್ಶಗಳು ನಮಗೆ ಪಂಜಾಗಬೇಕಿದೆ. ಸದ್ಯದಲ್ಲಿ ಮೋದಿಯವರ ವರ್ತನೆ ನಮ್ಮಲ್ಲಿ ಭರವಸೆ ಮೂಡಿಸುವಂತಿದ್ದರೂ ನಾವು ಜಾಗರೂಕತೆಯಿಂದ ವರ್ತಿಸಬೇಕಿದೆ. ಮೋದಿಯವರ ಆಯ್ಕೆಗಿಂತಲೂ ಅವರಿಂದಾಗಿ ಹುಟ್ಟಿಕೊಂಡ ಆತಂಕಗಳು ನಮ್ಮ ದೇಶದ ಮೂಲಭೂತ ನೆಲೆಯಲ್ಲಿ, ಇತಿಹಾಸದ ಬೇರುಗಳಲ್ಲಿ ಅಡಕವಾಗಿರುವ ತಪ್ಪುಗಳನ್ನು ನಮಗೆ ಮನಗಾಣುವಂತೆ ಮಾಡಿವೆ. ಈ ಹಂತದಲ್ಲಿ ನಾವು ಮೋದಿ ಪ್ರಧಾನಿಯಾದುದಕ್ಕೆ ಕಂಗೆಡಬೇಕಿಲ್ಲ. ಮತ್ತು ಮೊನ್ನೆಯ ಅವರ ಭಾಷಣ ಕೇಳಿ ವಿಜೃಂಭಿಸಬೇಕಿಲ್ಲ. ಪದೇ ಪದೇ ಅವರು 125 ಕೋಟಿ ಜನರೆಂದು ಸಂಬೋಧಿಸಿದ್ದನ್ನು ಮುಸ್ಲಿಮರ ಪರವಾಗಿಯೂ ಅವರಿಗೆ ಕಾಳಜಿಯಿದೆಯೆಂದು ಸಮಾಧಾನ ಪಟ್ಟುಕೊಳ್ಳಬೇಕಿಲ್ಲ. ಖಂಡಿತವಾಗಿಯೂ ಮೋದಿಯವರು ಮುಸ್ಲಿಮರ ಮತ್ತೊಂದು ಮಾರಣಹೋಮಕ್ಕೆ ಎಡೆ ಮಾಡಿಕೊಡುವುದಿಲ್ಲವೆನ್ನುವ ಖಚಿತವಾದ ನಂಬಿಕೆ ನಮ್ಮೆಲ್ಲರಲ್ಲೂ ಮೂಡಿದೆ. ಆದರೆ, ಒಬ್ಬ ವ್ಯಕ್ತಿ, ಕೇವಲ ಒಬ್ಬ ವ್ಯಕ್ತಿ, ಆತ ಪ್ರಧಾನಮಂತ್ರಿಯೇ ಆದರೂ, ಮುಸ್ಲಿಮರ ವಿರುದ್ಧ ದುಷ್ಟತನದಿಂದ ವರ್ತಿಸದಿರಲೆಂದು ನಾವು ಬಯಸುವುದೇ ದೇಶ ಹಳಿ ತಪ್ಪಿರುವುದನ್ನು ಸೂಚಿಸಿದಂತಲ್ಲವೆ? ಅದು ಪ್ರಜಾತಂತ್ರ ತತ್ವಕ್ಕೆ ಮಸಿ ಬಳಿದಂತಲ್ಲವೆ? ಧರ್ಮವನ್ನು ಮನೆ ಬಾಗಿಲುಗಳ ಒಳಗಿಟ್ಟು ಬೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ಜನಾಂಗಗಳೂ ಸಮಾನ ಘನತೆಯ, ಸಮಾನ ನಿರ್ಭೀತಿಯ ಭಾರತೀಯರಂತೆ ವರ್ತಿಸುವ ವಾತಾವರಣವನ್ನು ರೂಪಿಸಬೇಕಿದೆ. ತಪ್ಪಿರುವ ನಮ್ಮ ದೇಶದ ಹಳಿಯನ್ನು ಮತ್ತೆ ಸರಿದಾರಿಗೆ ಸರಿಸಬೇಕಿರುವುದು ನಮ್ಮ ಮುಂದಿರುವ ಈ ಕ್ಷಣದ ಬೃಹತ್ ಸವಾಲು.

= ಅಗ್ನಿ ಶ್ರೀಧರ್
ಹಿರಿಯ ಪತ್ರಕರ್ತರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement