ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವಿದೇಶದ ಆರ್ಥಿಕತೆಯಲ್ಲಿ ನಮ್ಮ ಕನಸುಗಳ ಪೋಷಣೆ ಇನ್ನೆಷ್ಟು ದಿನ?

Mainashree
Updated On : 22 May 2014, 10:08 am

ಪ್ರಪಂಚದ ಯಾವ ದೇಶವೂ ವ್ಯಾಪಾರದಲ್ಲಿ ಸ್ವತಂತ್ರವಾಗಿರಲು ಸಾಧ್ಯವಿಲ್ಲ. ಪ್ರತಿಯೊಂದು ದೇಶವೂ ಸಹ ಮತ್ತೊಂದು ದೇಶವನ್ನು ಅವಲಂಬಿಸಬೇಕಾಗುತ್ತದೆ. ಯಾವ ಸರ್ಕಾರವೂ ಬರೀ ಸಾಲದ ಮೇಲೆ ದೇಶ ನಡೆಸಲು ಸಾಧ್ಯವಿಲ್ಲ.  ಬೇರೆ ದೇಶದ ಸಹಾಯ ಬೇಕಾಗುತ್ತದೆ. ಇದಕ್ಕೆ ಭಾರತವೂ ಹೊರತಲ್ಲ. 1990-91ರ ಸಮಯದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದಾಗ ಹುಟ್ಟಿಕೊಂಡ ನೀತಿ ಒಂದು ಕ್ರಾಂತಿ ಎಂದರೂ ತಪ್ಪಾಗಲಾರದು. ವಿದೇಶಿ ನೇರ ಬಂಡವಾಳ ಅಂದಿನ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರು ಜಾರಿಗೆ ತಂದ ಈ ನೀತಿ  24 ವರ್ಷಗಳಾದರೂ ಚಾಲ್ತಿಯಲ್ಲಿದ್ದು ವಿವಿಧ ರೂಪ ಪಡೆದುಕೊಂಡಿದೆ.
    1990-91ರವರೆಗೂ ಭಾರತದ ಪ್ರಮುಖ ಆದಾಯ ಕೃಷಿಯಿಂದ ಬರುತ್ತಿತ್ತು. ಆದರೆ ಈ ನೀತಿ ಜಾರಿಗೆ ಬಂದಾಗಿನಿಂದ ಭಾರತವು ಕೃಷಿಯೇತರ ಚಟುವಟಿಕೆಗಳಾದ ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳಿಂದಲೂ ಸಹ ಹೆಚ್ಚು ಆದಾಯ ಬರುವಂತಾಯಿತು.
    ಇದಲ್ಲದೆ ವಿದೇಶಿ ತಂತ್ರಜ್ಞಾನಗಳು ಭಾರತಕ್ಕೆ ಬರಲು ಶುರುವಾದವು. ಇದರಿಂದ, ಭಾರತದ ಕೈಗಾರಿಕೆಗಳಿಗೆ ಬಹಳ ಸಹಾಯವಾಗುವಂತಾಯಿತು.
    ಕೆಲವು ಆಯ್ದ ಕ್ಷೇತ್ರಗಳಾದ ಎಲೆಕ್ಟ್ರಾನಿಕ್ಸ್ ಗೂಡ್ಸ್ ವಿಭಾಗದಲ್ಲಿ ವಸ್ತುಗಳು ಒಬ್ಬ ಸಾಮಾನ್ಯ ಮನುಷ್ಯನಿಗೆ ಕೈಗೆಟಕುವಷ್ಟು ದರದಲ್ಲಿ ಸಿಗುವಂತಾದವು. ಉದಾಹರಣೆಗೆ ಕಂಪ್ಯೂಟರ್, ಮೊಬೈಲ್ ಇತ್ಯಾದಿ. ಇದರ ಜೊತೆಗೆ ಸೇವಾ ಕ್ಷೇತ್ರಗಳಿಗೂ ಎಲ್ಲಿಲ್ಲದ ಅವಕಾಶಗಳು ಸಿಗತೊಡಗಿದವು. ಉದಾ. 1994ರಲ್ಲಿ ಮೊದಲ ಬಾರಿಗೆ ಸೇವಾ ತೆರಿಗೆ ಜಾರಿಗೆ ಬಂದಾಗ ಕೇವಲ ಬೆರಳೆಣಿಕೆಯಷ್ಟು ಸೇವೆಗಳಿದ್ದವು. ಆದರೆ ಈಗ ನೂರಾರು ರೀತಿಯ ವಿವಿಧ ರೀತಿಯ ಸೇವೆಗಳು ಜಾರಿಯಲ್ಲಿವೆ. ಇದಲ್ಲದೆ ಭಾರತ ಸರ್ಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿರುವುದು ಈ ಸೇವಾ ತೆರಿಗೆಯಿಂದಲೇ ಅಂದರೂ ತಪ್ಪಾಗಲಾರದು.
    ಈ ನೀತಿಯಿಂದ ಭಾರತದ ನಿರುದ್ಯೋಗ ಸಮಸ್ಯೆಯೂ ಕಡಿಮೆಯಾಗತೊಡಗಿತು. ಹಿಂದಿನ ಕಾಲದ ಸಂಪ್ರದಾಯದಂತೆ ಕೇವಲ ಕೃಷಿ ಹಾಗೂ ಸರ್ಕಾರಿ ಕೆಲಸಗಳನ್ನು ಅವಲಂಬಿಸಿದ್ದ ಜನ ವಿದೇಶಿ ಕಂಪನಿಗಳ ಬಳಿ ಕೆಲಸ ಮಾಡುವಂತಾಯಿತು. ಉದಾ: ತುಂಬಾ ಜನರು ಇತ್ತೀಚಿನ ಕೆಲವು ವರ್ಷಗಳಲ್ಲಿ ಕಾಲ್‌ಸೆಂಟರ್ ಹಾಗೂ ಬಿಪಿಓಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವುದು.
    ಈ 24 ವರ್ಷಗಳಲ್ಲಿ ಅತಿ ಹೆಚ್ಚು ಬಂಡವಾಳ ಬಂದಿರುವ ಕ್ಷೇತ್ರಗಳೆಂದರೆ ಸೇವಾ ಕ್ಷೇತ್ರ. ಕಂಪ್ಯೂಟರ್ ಸಾಫ್ಟವೇರ್, ಟೆಲಿಕಮ್ಯೂನಿಕೇಷನ್ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರ. ಈ ಕ್ಷೇತ್ರಗಳಿಂದ ನಮಗೆ ಒಳ್ಳೆಯದಾಗಿವೆ ಹಾಗೂ ಕೆಟ್ಟದ್ದೂ ಆಗಿದೆ. ಉದಾ. ಈ ಹಿಂದೆ ಒಂದು ಮೊಬೈಲ್ ಕರೆ ಮಾಡಬೇಕಾದರೆ ಸರಿಸುಮಾರು 5-10 ರೂ. ಒಂದು ನಿಮಿಷಕ್ಕೆ ಖರ್ಚಾಗುತ್ತಿತ್ತು. ಆದರೆ ಈಗ ಕೇವಲ 30-50 ಪೈಸೆಗಳಲ್ಲಿ ಒಂದು ನಿಮಿಷ ಮಾತಾಡಬಹುದು. ಆದರೆ ಅದೇ ರಿಯಲ್ ಎಸ್ಟೇಟ್‌ನಲ್ಲಿ ಕಟ್ಟಡದ ಬೆಲೆಗಳು, ಕಟ್ಟಡ ಸಾಮಗ್ರಿಗಳ ಬೆಲೆಗಳು ಗಗನಕ್ಕೇರಿವೆ.
    ಭಾರತದಲ್ಲಿ ವಿದೇಶಿ ನೇರ ಬಂಡವಾಳವು ಹೆಚ್ಚು ಬಂದಿರುವ ರಾಜ್ಯಗಳೆಂದರೆ ದೆಹಲಿ, ಹರಿಯಾಣ ಹಾಗೂ ಮಹಾರಾಷ್ಟ್ರ.  ಈ ಮೂರು ರಾಜ್ಯಗಳಲ್ಲಿ ನಾವು ಅತಿ ಹೆಚ್ಚು ವಿದೇಶಿ ಕಂಪನಿಗಳನ್ನು ಕಾಣಬಹುದು. ಅತಿ ಹೆಚ್ಚು ಬಂಡವಾಳ ಹೂಡಿರುವ ರಾಷ್ಟ್ರಗಳೆಂದರೆ ಅಮೇರಿಕ, ಜರ್ಮನಿ, ಬ್ರಿಟನ್ ಹಾಗೂ ಜಪಾನ್. ಈ ರಾಷ್ಟ್ರಗಳಲ್ಲಿ ಕಾರ್ಮಿಕ ಖರ್ಚು ಹೆಚ್ಚು. ಆದ್ದರಿಂದಲೇ ಇವು ಭಾರತದಲ್ಲಿ ಹೆಚ್ಚು ಬಂಡವಾಳ ಹೂಡ ಬಯಸುತ್ತವೆ. ಇಲ್ಲಿ ವ್ಯಾಪಾರ ವಹಿವಾಟು ನಡೆಸಿ ಬಂದ ಲಾಭವನ್ನು ತಮ್ಮ ದೇಶಗಳಿಗೆ ತೆಗೆದುಕೊಂಡು ಹೋಗುತ್ತವೆ. ಇದರಿಂದಾಗಿ ಆ ದೇಶಗಳೇ ಹೆಚ್ಚಾಗಿ ಅಭಿವೃದ್ಧಿ ಕಂಡಿವೆ.
= ವಿದೇಶಿ ನೇರ ಬಂಡವಾಳದಲ್ಲಿ ಭಾರತ ಸರ್ಕಾರ ಸಡಿಲ ಮಾಡಿದ್ದರಿಂದ ಅದರ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರಲಾರಂಭಿಸಿತು. ಇದನ್ನೇ ಬಂಡವಾಳ ಮಾಡಿಕೊಂಡ ಸರ್ಕಾರಗಳು ವಿದೇಶಿ ಕಂಪನಿಗಳಿಂದ ಹೆಚ್ಚಿನ ತೆರಿಗೆ ವಸೂಲಿ ಕಾರ್ಯದಲ್ಲಿ ತೊಡಗಿದವು. ವೊಡಾಫೋನ್ ಪ್ರಕರಣದಲ್ಲಿ ಕೇಂದ್ರ ಸರ್ಕಾರವು, ಸುಪ್ರೀಂಕೋರ್ಟಿನ ವಿರುದ್ಧವೇ ಹೋಗಿ ಆದಾಯ ತೆರಿಗೆ ಕಾಯ್ದೆಯನ್ನು 1961ರಿಂದ ತಿದ್ದುಪಡಿ ಮಾಡಿತು. ಇದರಿಂದಾಗಿ ಈ ಕಂಪನಿಯು ಸುಮಾರು 12,000 ಕೋಟಿ ತೆರಿಗೆಯನ್ನು ಪಾವತಿಸುವಂತಾಗಿತ್ತು.
= 1991ರ ನಂತರ ಬಂದ ಪ್ರತಿಯೊಂದು ಸರ್ಕಾರವೂ ಭಾರತದ ಪ್ರಜೆಗಳಿಗೆ ತಮ್ಮ ಪ್ರಣಾಳಿಕೆಗಳಲ್ಲಿ ಬಾಯಿಗೆ ಬಂದಂತೆ ಯೋಜನೆಗಳನ್ನು ಅನುಷ್ಠಾನ ತರುತ್ತೇವೆಂದು ಘೋಷಿಸತೊಡಗಿದವು. ಇಷ್ಟೆಲ್ಲಾ ಮಾಡಿದ್ದು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ. ಆ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರಕ್ಕೆ ಬೇಕಾದ ಹಣದ ಆವಶ್ಯಕತೆಯಿದ್ದಾಗ ವಿದೇಶಿ ನೇರ ಬಂಡವಾಳ ನೀತಿಯನ್ನು ಸಡಿಲಗೊಳಿಸುವುದು ಮತ್ತು ತೆರಿಗೆ ಸಂಗ್ರಹಿಸುವುದು. ಆ ಕಂಪನಿಗಳು ಸರ್ಕಾರ ಹಾಕಿದ ತೆರಿಗೆಗಳನ್ನು ಭಾರತದ ಪ್ರಜೆಗಳ ಮೇಲೆ ಹಾಕತೊಡಗಿದವು.  ಇದರಿಂದ ಬೆಲೆ ಏರಿಕೆಯ ಬಿಸಿಯು ಒಬ್ಬ ಸಾಮಾನ್ಯ ಪ್ರಜೆಯ ಮೇಲೆ ಬೀಳುವಂತಾಯಿತು. ಸಂಗ್ರಹಿಸಿದ್ದ ತೆರಿಗೆ ಹಣದಲ್ಲಿ ಭಾರತದ ಅಭಿವೃದ್ಧಿ ಅಷ್ಟೇನೂ ಆಗಲಿಲ್ಲ. ವಿದೇಶಿ ನೇರ ಬಂಡವಾಳದಲ್ಲಿನ ಅನಾನುಕೂಲಗಳ ಬಗ್ಗೆ ನಾವು ತಿಳಿದುಕೊಳ್ಳಲೇಬೇಕು. ಇವುಗಳಲ್ಲಿ ಕೆಲವೆಂದರೆ.
1.    ಭಾರತದಲ್ಲಿ ಸಣ್ಣ ಸಣ್ಣ ಹೂಡಿಕೆದಾರರು ದೊಡ್ಡ ವಿದೇಶಿ ಕಂಪನಿಗಳ ವಿರುದ್ಧ ಸ್ಪರ್ಧಿಸಲು ಆಗುವುದಿಲ್ಲ.
    ಇದರಿಂದ ಅವರು ತಮ್ಮ ವ್ಯವಹಾರಗಳನ್ನು ಮುಚ್ಚಬೇಕಾಗುತ್ತದೆ.
2.    ನಮ್ಮ ದೇಶದ ಸಂಪನ್ಮೂಲಗಳು ಬೇರೆಯವರ ಪಾಲಾಗುತ್ತವೆ ಹಾಗೂ ಇದರಿಂದ ವಿದೇಶಿಗರು ಲಾಭ ಮಾಡುತ್ತಾರೆ.
3.    ಹೆಚ್ಚು ವಿದೇಶಿ ನೇರ ಬಂಡವಾಳವನ್ನು ಭಾರತಕ್ಕೆ ಬಿಟ್ಟರೆ ನಾವೆಲ್ಲರೂ ವಿದೇಶಿ ಉತ್ಪನ್ನಗಳನ್ನು ಹೆಚ್ಚಾಗಿ ಅವಲಂಬಿಸಬೇಕಾಗುತ್ತದೆ. ಇದರಿಂದ ನಮ್ಮ ದೇಶವು ಆ ದೇಶಗಳು ಹೇಳಿದಂತೆ ಕೇಳಬೇಕಾದ ಪರಿಸ್ಥಿತಿ ಬಂದರೂ ಬರಬಹುದು.
4.    ಹೆಚ್ಚು ವಿದೇಶಿ ಕಂಪನಿಗಳು ಜನರಿಗೆ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿವೆ. ಇದಕ್ಕೆ ಕಾರಣ ಭಾರತದಲ್ಲಿ ಸಂಬಳ, ಇತ್ಯಾದಿ ಕಮ್ಮಿ ಎಂಬುದು. ಉದಾಹರಣೆಗೆ ಬಿಪಿಓ, ಕಾಲ್ ಸೆಂಟರ್‌ಗಳು ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಆದ ತಕ್ಷಣವೇ ಉದ್ಯೋಗಾವಕಾಶ ಕಲ್ಪಿಸುತ್ತವೆ. ಇದರಿಂದ ಇಂದಿನ ಯುವಜನಾಂಗ ಅತಿ ಸಣ್ಣ ವಯಸ್ಸನಲ್ಲಿಯೇ ಸಿಗುವ ಈ ನೌಕರಿಯಿಂದ ಬರುವ ಹಣದಲ್ಲಿ ಮೋಜು, ಮಸ್ತಿ ಮಾಡಿ ಬದುಕುತ್ತಾರೆ. ಈ ರೀತಿಯಿಂದ ಹೆಚ್ಚಿನ ವಿದ್ಯಾಭ್ಯಾಸದ ಮೊರೆ ಹೋಗುವುದೇ ಇಲ್ಲ. ಹೀಗಾಗಿ ಅವರೂ ಸಹ ಬೇರೆ ದೇಶಗಳ ಕಂಪನಿಗಳ ಮೇಲೆ ಅವಲಂಬಿತರಾಗಿ ಜೀವನ ನಡೆಸುತ್ತಿದ್ದಾರೆ.
    ಈಗಾಗಲೇ ತಿಳಿದಿರುವಂತೆ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಕಾಣಿಸಿದ್ದು ಆ ದೇಶದ ಅಧ್ಯಕ್ಷ ಗದ್ದುಗೆ ಯಾರೇ ಏರಬೇಕಾದರೂ ಮೊದಲು ಮಾಡ ಹೊರಟಿರುವ ಕೆಲಸವೇ ಬಿಪಿಓ (ಹೊರಗುತ್ತಿಗೆ)ಯನ್ನು ನಿಷೇಧಿಸುವುದು. ಈ ವಿಚಾರವಾಗಿ ಬರಾಕ್ ಒಬಾಮ ಸಹ ಚಿಂತನೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಆ ದೇಶವು ಈ ರೀತಿಯ ಕ್ರಮಕೈಗೊಂಡು ಹೊರಗುತ್ತಿಗೆ ಹಾಗೂ ವಿದೇಶಿ ಬಂಡವಾಳಕ್ಕೆ ಕಡಿವಾಣ ಹಾಕಿದ್ದೇ ಆದಲ್ಲಿ ಭಾರತಕ್ಕೆ ಮತ್ತಷ್ಟು ನಿರುದ್ಯೋಗ ಸಮಸ್ಯೆ ಕಾಡುವುದರಲ್ಲಿ ಸಂಶಯವಿಲ್ಲ.
    ಈ ರೀತಿ 24 ವರ್ಷಗಳು ಕಳೆದಿವೆ. ಮೊದ ಮೊದಲು ಭಾರತದ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ತಂದ ಈ ನೀತಿಯು ರಾಜಕೀಯ ಪಕ್ಷಗಳ ಸ್ವಾರ್ಥಕ್ಕಾಗಿ ವಿವಿಧ ರೀತಿಯ ಆಯಾಮಗಳನ್ನು ತೆಗೆದುಕೊಂಡು ಬಂದಿದೆ. ಇದರಿಂದ ಲಾಭ ನಷ್ಟ ಎರಡೂ ಆಗಿವೆ. ಆದರೆ ಇನ್ನು ಮುಂದೆ ಇದನ್ನೇ ಮುಂದುವರೆಸಿದರೆ ಹೆಚ್ಚು ನಷ್ಟಗಳು ಎದುರಾಗುವ ಸಾಧ್ಯತೆ ಕಂಡುಬರುತ್ತಿದೆ. ಆದ್ದರಿಂದ ಸರ್ಕಾರವು ಹೊಸ ನೀತಿಯೊಂದನ್ನು ಜಾರಿಗೆ ತರಬೇಕಾದ ಆವಶ್ಯಕತೆಯಿದ್ದು ಇಲ್ಲವಾದಲ್ಲಿ ಈಗಿನ ನೀತಿಯ ತಿದ್ದುಪಡಿ ಆವಶ್ಯಕತೆ ಇದೆ.
    ಈ ನಿಟ್ಟಿನಲ್ಲಿ ಕೆಲವೊಂದು ಅಂಶಗಳನ್ನು ಸರ್ಕಾರವು ಗಮನದಲ್ಲಿಡಬೇಕು. ಅವುಗಳೆಂದರೆ-
1.    ವಿದೇಶಿ ನೇರ ಬಂಡವಾಳವನ್ನು ಕೇವಲ ಭಾರತದ ದುರ್ಬಲ ವಲಯದಲ್ಲಿ ಮಾತ್ರ ಮಾಡಲು ಅವಕಾಶ ನೀಡಬೇಕು. ಉದಾ- ವಿಮಾನ ತಂತ್ರಜ್ಞಾನ, ಆಟೋಮೊಬೈಲ್ಸ್.
2.    ಹೆಚ್ಚು ಹೆಚ್ಚು ಸಂಶೋಧನೆ ಹಾಗೂ ಅನ್ವೇಷಣೆಗಳನ್ನು ಉತ್ತೇಜಿಸಬೇಕು. ಇದರಿಂದ ನಮ್ಮ ಬೇರೆ ದೇಶದ ತಂತ್ರಜ್ಞಾನದ ಮೇಲಿನ ಅವಲಂಬನೆಯು ಕಡಿಮೆಯಾಗುತ್ತದೆ.
3.    ಪ್ರತಿಯೊಂದು ರಾಜ್ಯದ ಶಕ್ತಿಗಳನ್ನು ಗುರ್ತಿಸಿ ಆ ರಾಜ್ಯದಲ್ಲಿ ಅದಕ್ಕೆ ಅನುಗುಣವಾಗಿ ಕೈಗಾರಿಕೆಗಳನ್ನು ಉತ್ತೇಜಿಸಬೇಕು.
    ಉದಾ- ಗೋವಾ ಹಾಗೂ ಕಾಶ್ಮೀರದ ಶಕ್ತಿ ಪ್ರವಾಸಿ ತಾಣಗಳು. ಹೆಚ್ಚಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಂತಹದ್ದು. ಇದೇ ರೀತಿ ಕರ್ನಾಟಕ ಹಾಗೂ ಕೇರಳದಲ್ಲಿ ಗಿಡಮೂಲಿಕೆಗಳು ಯಥೇಚ್ಛವಾಗಿದ್ದು ಇಲ್ಲಿ ಔಷಧೀಯ ಉತ್ಪನ್ನಗಳ ಕೈಗಾರಿಕೆಗಳಿಗೆ ಉತ್ತೇಜನ ನೀಡುವಂಥದ್ದು. ಇದರಿಂದಾಗಿ ವಿದೇಶಿ ಕಂಪನಿಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
4.    ಯುವಕರನ್ನು ಹೆಚ್ಚಾಗಿ ಉದ್ಯಮಶೀಲತೆ ಕಕ್ಷೆಗೆ ಒಲವು ತೋರಿಸುವಂತೆ  ಮಾಡಬೇಕು. ಈ ನಿಟ್ಟಿನಲ್ಲಿ ಒಂದು ಹೆಚ್ಚಿನ ಖಾತೆಯನ್ನೇ ಕೇಂದ್ರ ಸರಕಾರ ತೆರೆದು ಹೆಚ್ಚಿನ ಒತ್ತು ನೀಡಿದರೆ ಸೂಕ್ತ. ಐಐಎಂ, ಐಐಟಿಗಳಲ್ಲಿ ವಿದ್ಯಾರ್ಥಿ ದಿನಗಳಿಂದಲೇ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಅನಿವಾರ್ಯ. ಸಾಧ್ಯವಾದಲ್ಲಿ ಹೆಚ್ಚಿನ ಐಐಎಂ, ಐಐಟಿ ಶಾಖೆಗಳನ್ನು ತೆರೆಯಬಹುದು.
5.    ಭಾರತದ ಕೃಷಿ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಕೃಷಿಯನ್ನು ಉತ್ತೇಜನಗೊಳಿಸಬೇಕು. ಇದರಿಂದಾಗಿ ಬೇರೆ ದೇಶಗಳು ನಮ್ಮನ್ನು ಅವಲಂಬಿಸುವಂತಾಗುತ್ತದೆ. ತಂತ್ರಜ್ಞಾನವಿಲ್ಲದೆ ಬದುಕಬಹುದು ಆದರೆ ಊಟವಿಲ್ಲದೆ ಬದುಕಲಾಗುವುದಿಲ್ಲ.
    ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡರೂ ಸಹ ಭಾರತೀಯರು ತಮ್ಮಲ್ಲಿ ಉಳಿತಾಯ ಮಾಡಿದ ಹಣವನ್ನು ವ್ಯವಹಾರಕ್ಕೆ ಬಳಸದೇ ಬ್ಯಾಂಕಿನಲ್ಲಿ ಸಿಗುವ ಬಡ್ಡಿ ಹಣಕ್ಕಾಗಿ ಜಮಾ ಮಾಡುತ್ತಾರೆ. ಈ ರೀತಿಯ ಮನಸ್ಥಿತಿಯನ್ನು ಮೊದಲು ಬದಲಾವಣೆ ಮಾಡುವ ನಿಟ್ಟಿನಲ್ಲಿ ಕೆಲಸ ಸಾಗಬೇಕು. ಇಲ್ಲವಾದಲ್ಲಿ ಎಷ್ಟೇ ತಂತ್ರಜ್ಞಾನ ಅಭಿವೃದ್ಧಿಪಡಿಸಿದರೂ ಅದರ ಲಾಭ ಪಡೆಯಲು ಬೇಕಾದ ಬಂಡವಾಳ ಹಾಕಲು ಯಾರೂ ಇಲ್ಲದಂತಾಗುತ್ತದೆ. ಈ ವಿಚಾರದಲ್ಲೇ ವಿದೇಶಿ ಬಂಡವಾಳಶಾಹಿಗಳು ಮುಂದಿರುವುದು ಹಾಗೂ ನಾವುಗಳು ಅವರ ಮೇಲೆ ಅವಲಂಬಿತರಾಗುತ್ತಾ ಇರುವುದು.

-ಮೋಹನ್‌ಕುಮಾರ್ ಬಿ.ಎನ್.
ಲೆಕ್ಕಪರಿಶೋಧಕರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement