ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮುಸಲ್ಮಾನರೆಡೆಗಿನ ಮೋದಿ ಹೆಜ್ಜೆ ಹೇಗಿರಬೇಕು?

2014ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ, ಮೇ 16ರ ಸಂಜೆ...

Mainashree
Updated On : 23 May 2014, 9:31 am

ಭಾರತದ ಕೆಲವು ಪ್ರಮುಖ ರಾಜ್ಯಗಳ ಮುಸ್ಲಿಂ ಮತದಾರರು ಈ ಬಾರಿ ಮೋಸಹೋದ ಭಾವವನ್ನು ಅನುಭವಿಸುತ್ತಿದ್ದಾರೆ. ಅದೂ ಬಿಜೆಪಿ ಅಥವಾ ಮೋದಿಯಿಂದಲ್ಲ ಬದಲಾಗಿ ಕಾಂಗ್ರೆಸ್‌ನಿಂದ (ಇನ್ನು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದಿಂದ). ಮುಸ್ಲಿಂ ಮತದಾರರಲ್ಲಿನ ಈ ಅಸಮಾಧಾನಕ್ಕೆ ಎರಡು ಕಾರಣಗಳಿವೆ...

2014ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ, ಮೇ 16ರ ಸಂಜೆ ಅಹಮದಾಬಾದ್‌ನಲ್ಲಿ ಮಾಡಿದ ತಮ್ಮ ಪ್ರಮುಖ ಭಾಷಣದಲ್ಲಿ ಮೋದಿಯವರು, ತಮ್ಮ ಟ್ರೇಡ್ ಮಾರ್ಕ್ ಆದ ತೀಕ್ಷ್ಣತೆ, ತಮಾಷೆ, ಪ್ಯಾಶನ್ ಮತ್ತು ಭಾವೋದ್ವೇಗವನ್ನು ಮಿಶ್ರಣ ಮಾಡಿ ಮಾತನಾಡಿದರು. ತಮ್ಮ ಸರ್ಕಾರದ ಪಾತ್ರ ಹೇಗಿರಲಿದೆ, ಹೇಗೆ ಅದು ತಮಗೆ ಮತ 'ನೀಡಿದವರು' ಮತ್ತು 'ನೀಡದವರ' ನಡುವೆ ಭೇದ ಮಾಡುವುದಿಲ್ಲ ಹಾಗೂ ಹೇಗೆ ಅದರ ಮೇಲೆ ಪ್ರತಿಯೊಬ್ಬ ಭಾರತೀಯನನ್ನೂ ಜೊತೆಗೊಯ್ಯುವ ಜವಾಬ್ದಾರಿ ಇದೆ ಎನ್ನುವುದನ್ನು ವಿವರಿಸಿದರು.   
ಈ ಭಾಷಣದ ನಂತರ ಕೆಲವು ವಿಶ್ಲೇಷಕರು, "ಮೋದಿ, ಚುನಾವಣಾ ಪ್ರಚಾರದ ಅಬ್ಬರದ ನಿಂದೆಯನ್ನು ಕೊನೆಗೊಳಿಸಿ ರಾಜಕೀಯ ವಿರೋಧಿಗಳನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ" ಎಂದರು. ಮೋದಿ, ಎಲ್ಲರನ್ನೂ ಒಳಗೊಂಡ ಆಡಳಿತದ ಬಗ್ಗೆ ಮಾತನಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಅವರ ಭಾಷಣದಲ್ಲಿ ಮುಸಲ್ಮಾನರಿಗೆ ಭರವಸೆ ಕೊಡುವ ಸಂದೇಶವಿರುವುದು ಕೆಲವರಿಗೆ ಕಾಣಿಸಿತು.
ಯಾವ ಚುನಾವಣೆಯಲ್ಲಿ ಮುಸಲ್ಮಾನರ ಮತದಾನ ಅಷ್ಟೊಂದು ಮುಖ್ಯ ಅಥವಾ ಪ್ರಸ್ತುತವಾಗಿರಲಿಲ್ಲವೋ, ಆ ಚುನಾವಣೆಯ ನಂತರ ಆ ಸಮುದಾಯ ಎಲ್ಲಿ ನಿಲ್ಲುತ್ತದೆ ಎನ್ನುವುದೇ ಈಗಿನ ಪ್ರಶ್ನೆ. ಪ್ರತಿ ಆರು ಭಾರತೀಯರಲ್ಲಿ ಒಬ್ಬ ಮುಸಲ್ಮಾನನಿದ್ದಾನೆ. ನಮ್ಮ ದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವದು. ಅವರ ಮೇಲೆ ಪರಿಣಾಮ ಬೀರುವ ಸಂಗತಿಗಳೆಲ್ಲ ಭಾರತದ ಮೇಲೆ ಪರಿಣಾಮ ಬೀರುತ್ತವೆ. ಅಂತೆಯೇ ಭಾರತದ ಮೇಲೆ ಪರಿಣಾಮ ಬೀರುವ ಸಂಗತಿಗಳು... ಅವರ ಮೇಲೆ.
ಪ್ರಧಾನಮಂತ್ರಿಯಾಗಿ ಮೋದಿ ಎಲ್ಲ ಭಾರತೀಯರನ್ನು ಪ್ರತಿನಿಧಿಸುತ್ತಾರೆ; ಮುಸಲ್ಮಾನರನ್ನೂ ಒಳಗೊಂಡು. ಅದರಲ್ಲೂ ಪ್ರಧಾನವಾಗಿ ಮೋದಿ ಮತ್ತು ಆ ಸಮುದಾಯದ ನಡುವಿನ ಅಗಾಧ ಅಂತರವನ್ನು ಪರಿಗಣಿಸಿದಾಗ (ಕೆಲವು ರಾಜಕೀಯ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಮಾಧ್ಯಮಗಳ ಎಡಬಿಡದ ಆಕ್ರಮಣಕಾರಿ ಪ್ರಚಾರ ಹುಟ್ಟು ಹಾಕಿರುವ ಅಂತರ), ಮುಸಲ್ಮಾನರನ್ನು ನೇರವಾಗಿ ಅಥವಾ ಪರೋಕ್ಷವಾಗಿ ತಲುಪುವ ಕೆಲಸವನ್ನು ಮೋದಿ ಮಾಡುವುದು ಸಮಂಜಸವೇ.
ಹಾಗಂತ, ಮೋದಿ ಬೃಹದಾಕಾರವಾಗಿ ಮುಸಲ್ಮಾನರತ್ತ ತೆರಳಬೇಕು ಎಂದು ಹೇಳುತ್ತಿಲ್ಲ. ಅಲ್ಲದೆ ಅವರೂ ಕೂಡ ಭಾರತದ ರಾಜಕೀಯ ವರ್ಗ ಮತ್ತು ಭಾರತೀಯ ಮುಸಲ್ಮಾನರ ನಡುವಿನ ಸಾಮಾಜಿಕ ಒಪ್ಪಂದವನ್ನು ತಿದ್ದಿ, ಅದಕ್ಕೆ ಸೂಕ್ತ, ಅರ್ಥಪೂರ್ಣ ಮತ್ತು ಪ್ರಯೋಜನಕಾರಿ ರೂಪವನ್ನು ಕೊಡುವ ಪ್ರಾಮಾಣಿಕ ಭರವಸೆಯೊಂದನ್ನು ಮುಸಲ್ಮಾನರ ಎದುರಿಗಿಡುತ್ತಿದ್ದಾರೆ. ಓಲೈಕೆ ಮತ್ತು ಹುಸಿ ಬೆದರಿಕೆಗಳನ್ನು ಹಬ್ಬಿಸುವ ಕೆಲಸ ತಾವು ಮತ್ತು ತಮ್ಮ ಸರ್ಕಾರ ಮಾಡುವುದಿಲ್ಲ ಎನ್ನುವ ವಿಶ್ವಾಸವನ್ನು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ಭಾರತೀಯ ಮುಸಲ್ಮಾನರನ್ನು ಸಮಾನ ನಾಗರಿಕರಂತೆ(ಅದಕ್ಕಿಂತ ಹೆಚ್ಚಲ್ಲ, ಕಡಿಮೆಯಲ್ಲ) ನೋಡುವುದಾಗಿ ಅವರು ಹೇಳುತ್ತಿದ್ದಾರೆ.  
ಇದನ್ನು ಅರ್ಥಮಾಡಿಕೊಳ್ಳಲು 2009ರ ಚುನಾವಣಾ ಹಿನ್ನೆಲೆಯನ್ನು ತುಸು ನೋಡಬೇಕಾಗುತ್ತದೆ. 2009ರಲ್ಲಿ ಕಾಂಗ್ರೆಸ್, ಮುಸಲ್ಮಾನರು ಗಣನೀಯ ಸಂಖ್ಯೆಯಲ್ಲಿರುವ ಸುಮಾರು 5 ರಾಜ್ಯಗಳಲ್ಲಿ ಆ ಸಮುದಾಯದ ಭಾರೀ ಬೆಂಬಲ ಪಡೆದು ಅಥವಾ ಮತದಾರರ ಶೇಕಡಾವಾರು ಪ್ರಮಾಣದಿಂದ ಭಾರೀ ಗೆಲುವು ಸಾಧಿಸಿತ್ತು. ಆ ರಾಜ್ಯಗಳೆಂದರೆ ಆಂಧ್ರಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ(ಆಗ ತೃಣಮೂಲ ಕಾಂಗ್ರೆಸ್‌ನೊಂದಿಗೆ ಮೈತ್ರಿಯಿತ್ತು), ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ.
2014ರಲ್ಲಿ ಕಾಂಗ್ರೆಸ್ ಈ ರಾಜ್ಯಗಳಲ್ಲಿ ದಯನೀಯ ಫಲಿತಾಂಶವನ್ನು ಕಂಡಿದೆ. ಆಂಧ್ರಪ್ರದೇಶದ ತೆಲಂಗಾಣ ಭಾಗದಲ್ಲಿ ಮುಸಲ್ಮಾನರ ಮತಗಳು ತೆಲಂಗಾಣ ರಾಷ್ಟ್ರ ಸಮಿತಿಗೆ ಹೋಗಿವೆ. ಪಶ್ಚಿಮ ಬಂಗಾಳದಲ್ಲಿ, ಆ ಪಕ್ಷ ಮಾಲ್ದಾ ಮತ್ತು ಮುರ್ಶಿದಾಬಾದ್ ಎಂಬ ಮುಸ್ಲಿಂ ಪ್ರಾಬಲ್ಯವಿರುವ ಎರಡು ಜಿಲ್ಲೆಗಳಲ್ಲಿ ಗೆದ್ದಿದೆ, ಆದರೆ ಉಳಿದೆಡೆಯಲ್ಲಿ ಮುಸಲ್ಮಾನರು ತೃಣಮೂಲ ಕಾಂಗ್ರೆಸ್‌ನ ಹಿಂದೆಯೇ ಹೋಗಿದ್ದಾರೆ.
ಅಸ್ಸಾಂನಲ್ಲಿ, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಸಲ್ಮಾನರ ಬೆಂಬಲದಿಂದ ಮೂರು ಸ್ಥಾನಗಳಲ್ಲಿ ಗೆದ್ದು, ಕಾಂಗ್ರೆಸ್‌ನೊಂದಿಗೆ ಎರಡನೆಯ ಸ್ಥಾನವನ್ನು ಹಂಚಿಕೊಂಡಿದೆ. ಉತ್ತರಪ್ರದೇಶದಲ್ಲಂತೂ ಕಾಂಗ್ರೆಸ್ ಅನ್ನು ಹೀನಾಯವಾಗಿ ಬಲಿಕೊಡಲಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ, ಬಿಜೆಪಿ ಮತ್ತು ಶಿವಸೇನೆಯ ಜೋಡಿ 48ರಲ್ಲಿ 42 ಸ್ಥಾನಗಳನ್ನು ಗೆದ್ದರೆ, ಕೈಗೆ ದಕ್ಕಿದ್ದು ಕೇವಲ ಎರಡು ಸ್ಥಾನಗಳು.  
ಈ ಅಂಕಿ ಅಂಶಗಳು ಏನನ್ನು ಹೇಳುತ್ತಿವೆ? ಏನು ಹೇಳುತ್ತಿವೆಯೆಂದರೆ, ಒಂದೋ ಮುಸ್ಲಿಂ ಮತದಾರರು ಕಾಂಗ್ರೆಸ್‌ನ ಕೈಬಿಟ್ಟಿದ್ದಾರೆ ಅಥವಾ ಬೇರೆ ಸಮುದಾಯದ ಮತದಾರರು ಅನ್ಯ ಪಕ್ಷಗಳತ್ತ ಹಾರಿಹೋಗಿದ್ದರೂ ಮುಸಲ್ಮಾನರು ಮಾತ್ರ ಕಾಂಗ್ರೆಸ್‌ನೊಂದಿಗೆ ಉಳಿದಿದ್ದಾರೆ. ಉತ್ತರಪ್ರದೇಶದ ಫಲಿತಾಂಶವನ್ನು ತಥಾಕಥಿತ 'ಕೋಮುವಾದಿ ವಾತಾವರಣ' ಎಂಬ ಹಿನ್ನೆಲೆಯಲ್ಲಿ ನೋಡುತ್ತಾ, ಮುಝಫ್ಫರ್ ನಗರ ಗಲಭೆಗಳು ರಾಜ್ಯಾದ್ಯಂತ ಹಿಂದು-ಮುಸ್ಲಿಂ ದ್ವೇಷಕ್ಕೆ ಕಾರಣವಾಯಿತು ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಒಂದು ಕ್ಷಣಕ್ಕೆ ಇದನ್ನು ನಿಜವೆಂದು ಒಪ್ಪಿಕೊಂಡರೂ, ಮಹಾರಾಷ್ಟ್ರ ಅಥವಾ ತೆಲಂಗಾಣದ ಫಲಿತಾಂಶಕ್ಕೆ ಏನು ಉತ್ತರ ಕೊಡಬೇಕು?
ವಿಷಯವೇನೆಂದರೆ, ಭಾರತದ ಕೆಲವು ಪ್ರಮುಖ ರಾಜ್ಯಗಳ ಮುಸ್ಲಿಂ ಮತದಾರರು ಈ ಬಾರಿ ಮೋಸಕ್ಕೊಳಗಾದ ಭಾವವನ್ನು ಅನುಭವಿಸುತ್ತಿದ್ದಾರೆ. ಅದೂ ಬಿಜೆಪಿ ಅಥವಾ ಮೋದಿಯಿಂದಲ್ಲ ಬದಲಾಗಿ ಕಾಂಗ್ರೆಸ್‌ನಿಂದ(ಇನ್ನು ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದಿಂದ). ಮುಸ್ಲಿಂ ಮತದಾರ ಎರಡು ಪ್ರಮುಖ ಕಾರಣಗಳಿಂದಾಗಿ ಬೇಸರಗೊಂಡಿದ್ದ.
1) ಯುಪಿಎ ಸರ್ಕಾರ ತನ್ನಿಂದ ಪ್ರತಿಯೊಬ್ಬ ಭಾರತೀಯನೂ ನಿರೀಕ್ಷಿಸಿದ್ದ ಉತ್ತಮ ಆಡಳಿತವನ್ನು ಒದಗಿಸಲು ವಿಫಲವಾಗಿದ್ದು ಮತ್ತು ಸಾರ್ವಜನಿಕ ಸೇವೆಯನ್ನು ಒದಗಿಸಲು ಕಾಂಗ್ರೆಸ್ ಸೋತದ್ದು. ಈ ಸಿಟ್ಟು ಮುಸಲ್ಮಾನರು ಮತ್ತು ಮುಸ್ಲೀಮೇತರರಲ್ಲಿ ಸಮಾನವಾಗೇ ಭುಸುಗುಡುತ್ತಿತ್ತು.
2)ಇನ್ನು ಆ ಸಮುದಾಯದಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದ ಎರಡನೆಯ ಕಾರಣ ಧರ್ಮಕ್ಕೆ ಸಂಬಂಧಪಟ್ಟಿದ್ದು. ಕಾಂಗ್ರೆಸ್ ಪಕ್ಷ ನಿರ್ದಿಷ್ಟವಾಗಿ ಮುಸಲ್ಮಾನರಿಗೆ ಅನೇಕ ಭರವಸೆಗಳನ್ನು ನೀಡಿತ್ತು ಮತ್ತು ಅವರ ನೋವನ್ನು ಶಮನಗೊಳಿಸುವ ಬಗ್ಗೆ ಮಾತನಾಡಿತ್ತು. ಆದರೆ ಕುಂದುಕೊರತೆಗಳಿಗೆ ಮೂಲವನ್ನು ಹುಡುಕುವ ಅಥವಾ ಅದಕ್ಕೆ ಪರಿಹಾರ ಸೂಚಿಸುವ ಕೆಲಸವನ್ನಂತೂ ಅದು ಮಾಡಲಿಲ್ಲ. ಇನ್ನೊಂದರ್ಥದಲ್ಲಿ ಹೇಳಬೇಕೆಂದರೆ, ಕಾಂಗ್ರೆಸ್ ಮತ್ತು ಇತರ ಸೋಕಾಲ್ಡ್ ಸೆಕ್ಯುಲರ್ ಪಕ್ಷಗಳು ಮುಸ್ಲಿಂ ಪ್ರತ್ಯೇಕತೆ(ಪ್ರತ್ಯೇಕವಾಗಿಡುವ) ಮತ್ತು ರಾಜಕೀಯ ವಿಶೇಷತೆಗಳಿಂದ ಕೂಡಿದ ಭಾರತವನ್ನು ಬೆಳೆಸಿದವು ಮತ್ತು ಅಂಥದ್ದೇ ಚಿತ್ರವನ್ನು ಬಿಂಬಿಸುತ್ತಾ ಹೋದವು.
ಮೋದಿಯವರ ಮುಂದಿರುವ ಸವಾಲೆಂದರೆ, ಈ ಎರಡನೆಯ ಗಿಮಿಕ್ಕುಗಳನ್ನು ಆಶ್ರಯಿಸದೇ ಮೊದಲನೆಯ ಅಂಶಕ್ಕೆ ಗಮನ ಕೊಡಲು ಪ್ರಯತ್ನ ಮಾಡುವುದು. 'ಒಂದು ಕೈಯಲ್ಲಿ ಕುರಾನ್ ಮತ್ತೊಂದು ಕೈಯಲ್ಲಿ ಲ್ಯಾಪ್‌ಟಾಪ್ ಹಿಡಿದಿರುವ" ಮುಸ್ಲಿಂ ಬಾಲಕ-ಬಾಲಕಿಯರನ್ನು ನೋಡಲು ಆಶಿಸುತ್ತಿರುವುದಾಗಿ ಮೋದಿಯವರು ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು. ಆ ಮಾತನ್ನು ನಿಜ ಮಾಡಲು ಪ್ರಯತ್ನಿಸಬೇಕು. ಇದನ್ನು ಸಾಧ್ಯವಾಗಿಸಲು ಅವರು, ಇಮಾಮ್‌ಗಳಿಗೆ ವಿಶೇಷ ಅವಕಾಶಗಳನ್ನು ಅಥವಾ ಅಲ್ಪಸಂಖ್ಯಾತರಿಗಾಗಿಯೇ ನಿರ್ದಿಷ್ಟ ಸ್ಕಾಲರ್‌ಶಿಪ್‌ಗಳನ್ನು ತರುವ ಕೆಲಸಕ್ಕೆ ಕೈ ಹಾಕಬಾರದು, ಬದಲಾಗಿ, ಮುಸ್ಲಿಂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸುವ ಮತ್ತು ಕ್ಲಾಸ್ ರೂಮುಗಳಲ್ಲಿ ಅವರ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ, ಸಮಸ್ಯೆ ಬಗೆಹರಿಯುವ ಬದಲು ಉಲ್ಬಣಿಸುತ್ತಾ ಸಾಗುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ಮುಸಲ್ಮಾನರು ಸಾಮಾನ್ಯ ನಾಗರಿಕರೆಂದೇ ಭಾವಿಸಿ ಮೋದಿ ಅವರತ್ತ ಸಾಗಬೇಕಿದೆ(ಭಾರತದಲ್ಲಿನ ಸಾಂಸ್ಕೃತಿಕವಾಗಿ ಭಿನ್ನವಾಗಿರುವ, ಇತರ ಅನೇಕ ಗುಂಪುಗಳು ಮತ್ತು ಸಮುದಾಯಗಳಂತೆ), ಆದರೆ ಕಾನೂನಬದ್ಧವಾಗಿ ಮತ್ತು ರಾಜಕೀಯವಾಗಿಯೂ ಸಮಾನರು ಎಂಬ ಧೋರಣೆಯೊಂದಿಗೆ. ಇದೆಲ್ಲ ಕೇಳಿಸಿಕೊಳ್ಳಲು ಕ್ಲೀಷೆಯೆಂದೆನಿಸಬಹುದು. ಆದರೆ ಸತ್ಯವೇನೆಂದರೆ, ಸ್ವಾತಂತ್ರ್ಯಾನಂತರ ಯಾವ ಸರ್ಕಾರಗಳೂ ಕೂಡ- ಚುನಾವಣಾ ಲೆಕ್ಕಾಚಾರದಿಂದಲೋ ಅಥವಾ ಹೆಜ್ಜೆ ತಪ್ಪಿದ ಔದಾರ್ಯದಿಂದಲೋ ತಿಳಿಯದು- ಈ ಕೆಲಸವನ್ನಂತೂ ಮಾಡಿಲ್ಲ.  
ಮೋದಿ ಮುಸಲ್ಮಾನರ ಮತಗಳಿಲ್ಲದೆಯೇ ರಾಷ್ಟ್ರೀಯ ಚುನಾವಣೆಯನ್ನು ಗೆದ್ದಿದ್ದಾರೆ ಮತ್ತು ತಮ್ಮ ಪಕ್ಷಕ್ಕೆ ಬಹುಮತವನ್ನು ಗಳಿಸಿಕೊಟ್ಟಿದ್ದಾರೆ. ಇತ್ತ ಮುಸಲ್ಮಾನರು ಉದ್ದೇಶಪೂರ್ವಕವಾಗಿಯೋ, ತಪ್ಪಾಗಿ ಅರ್ಥೈಸಿಕೊಂಡೋ, ಒಟ್ಟಾರೆ, ಮೋದಿಯಿಂದ ದೂರ ಉಳಿದುಬಿಟ್ಟರು.
ಈ ಅಂತರವನ್ನು ಕಡಿಮೆಗೊಳಿಸಲು ಸೇತುವೆ ನಿರ್ಮಿಸುವ ಕೆಲಸ ಅವಸರದಲ್ಲಿ ಆಗುವಂಥದ್ದಲ್ಲ. ಒಬ್ಬ ಬುದ್ಧಿವಂತ ರಾಜಕಾರಣಿಯಾಗಿರುವ ಮೋದಿ 2019ರ ವೇಳೆಗೆ ಸುಮಾರು 20 ಪ್ರತಿಶತ ಮುಸ್ಲಿಂ ಮತಗಳ ಗುರಿ ಹೊಂದಬಹುದು. ಆದರೆ ಆ ಗುರಿ ತಲುಪಬೇಕೆಂದರೆ, ಬೆಳೆಯುತ್ತಿರುವ ಬಿಜೆಪಿಯಡಿ ಮುಸಲ್ಮಾನರಿಗೆ ಜಾಗಕೊಡುವ ಭರವಸೆಯನ್ನು ಅವರು ನೀಡಬೇಕಾಗುತ್ತದೆ-ಸಮಾನ ನಾಗರಿಕರೆಂದೇ ಹೊರತು, ಮತದಾನದ ದಿನಕ್ಕೆ ಉಪಯೋಗಕ್ಕೆ ಬರುವ ಶೋ ಪೀಸ್‌ಗಳಾಗಿಯಲ್ಲ.

- ಅಶೋಕ್ ಮಲಿಕ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement